ಮದುವೆ ಯಾವಾಗ ಎಂದು ಸಂಬಂಧಿಕರು ಕಾಡುತ್ತಿದ್ದರೆ ನಿಮ್ಮ ಉತ್ತರ ಹೀಗಿರಲಿ
ಪ್ರತಿಯೊಬ್ಬರ ಜೀವನದಲ್ಲಿ ಮದುವೆ, ಸಂಸಾರ ಹಾಗೂ ಮಕ್ಕಳು ಎಲ್ಲವೂ ಸರಿಯಾದ ಸಮಯಕ್ಕೆ ಆದರೇನೇ ಚಂದ. ಇತ್ತೀಚೆಗಿನ ದಿನಗಳಲ್ಲಿ ಶಿಕ್ಷಣ, ಉದ್ಯೋಗ, ಲೈಫ್ ಸೆಟಲ್ ಆಗಬೇಕೆನ್ನುವ ಗುರಿಯ ನಡುವೆ ಮದುವೆಯನ್ನು ಮುಂದೂಡುತ್ತಿರುವವರೇ ಹೆಚ್ಚು. ಆದರೆ, ವಯಸ್ಸು 25 ದಾಟುತ್ತಿದ್ದಂತೆ ಹೆಣ್ಣು ಮಕ್ಕಳಿಗೆ ಮದುವೆ ವಿಚಾರದಲ್ಲಿ ಮಾನಸಿಕ ಒತ್ತಡಗಳು ಶುರುವಾಗುತ್ತದೆ. ಹೆತ್ತ ತಂದೆ ತಾಯಿಯರು ತಮ್ಮ ಮಕ್ಕಳ ಮದುವೆಯ ಬಗ್ಗೆ ಗಂಭೀರವಾಗಿ ಯೋಚಿಸದೆ ಇದ್ದರೂ ಕೂಡ ಸಂಬಂಧಿಕರೂ ಯಾವಾಗ ಮದುವೆ ಎನ್ನುವ ಪ್ರಶ್ನೆಯನ್ನು ಕೇಳುತ್ತಲೇ ಇರುತ್ತಾರೆ. ನಿಮಗೂ ಇಂತಹ ಸಂದರ್ಭಗಳು ಎದುರಾದರೆ ಆ ಕ್ಷಣವನ್ನು ಉತ್ತಮವಾಗಿ ನಿಭಾಯಿಸುವ ಜಾಣ್ಮೆಯು ತಿಳಿದಿರಲಿ.
ಮದುವೆ ಎನ್ನುವುದು ಎಲ್ಲರ ಜೀವನದ ಪ್ರಮುಖ ಘಟ್ಟ. ಕೆಲವರು ಬೇಗ ಮದುವೆ ಮಾಡಿಕೊಂಡು ಸಾಂಸಾರಿಕ ಜೀವನಕ್ಕೆ ಕಾಲಿಟ್ಟರೆ, ಇನ್ನು ಕೆಲವರು ವಯಸ್ಸು ಆದರೂ ಮದುವೆಯ ಬಗ್ಗೆ ಯೋಚನೆ ಮಾಡುವುದೇ ಇಲ್ಲ. ಈ ಮದುವೆಯ ವಿಷಯಕ್ಕೆ ಬಂದಾಗ ಹೆತ್ತ ತಂದೆ ತಾಯಂದಿರ ಬಾಯಿಯನ್ನು ಹೇಗೂಮುಚ್ಚಿಸಬಹುದು. ಆದರೆ ಸಂಬಂಧಿಕರೂ ಮಾತ್ರ ಎಲ್ಲಿ ಸಿಕ್ಕಿದರೂ ಕೇಳುವ ಪ್ರಶ್ನೆಯೊಂದೇ ಅದುವೇ ಯಾವಾಗ ಮದುವೆ. ಈ ರೀತಿಯ ಪ್ರಶ್ನೆಗಳು ಎದುರಾದರೆ ಯಾರಿಗಾದರೂ ಪಿತ್ತ ನೆತ್ತಿಗೇರುವುದು ಸಹಜ. ನಮ್ಮ ಮದುವೆಯ ಬಗ್ಗೆ ನಮಗೇನೇ ಯೋಚನೆಯಿಲ್ಲ, ಇವರಿಗೆ ಯಾಕೆ ಅಷ್ಟೊಂದು ಯೋಚನೆ ಎಂದು ಒಳಗೊಳಗೇ ಬೈದುಕೊಳ್ಳುವವರೇ ಹೆಚ್ಚು.
- ಸಂಬಂಧಿಕರಿಂದ ಪದೇ ಪದೇ ಮದುವೆ ಯಾವಾಗ ಎನ್ನುವ ಪ್ರಶ್ನೆಗಳು ಎದುರಾದರೆ ಅಂತಹವರನ್ನು ನಿರ್ಲಕ್ಷಿಸುವುದನ್ನು ಕಲಿಯಿರಿ. ಕೆಲವೊಮ್ಮೆ ಎಷ್ಟೇ ನಿರ್ಲಕ್ಷ ಮಾಡಿದರೂ ಬೇಗ ಮದುವೆಯಾಗುವಂತೆ ಬೋಧನೆ ಮಾಡಲು ಶುರು ಮಾಡುತ್ತಾರೆ. ನಿಮ್ಮ ಸಂಬಂಧಿಕರ ವರ್ತನೆಗಳು ಹೀಗೆ ಇದ್ದರೆ ಹೆಚ್ಚು ಚಿಂತಿಸಬೇಡಿ. ನಿಮಗೆ ನಿಮ್ಮ ಜೀವನದ ಗುರಿ ಗೊತ್ತಿದ್ದರೆ ಸಾಕು, ಈ ಸಂಬಂಧಿಕರ ಮಾತಿಗೆ ಕಿವಿಗೊಡಬೇಡಿ.
- ನೀವು ಕನಸಿನ ಹುಡುಗ ಅಥವಾ ಹುಡುಗಿ ಹೇಗಿರಬೇಕು ಎನ್ನುವುದನ್ನು ಸಂಬಂಧಿಕರ ಮುಂದೆ ಹೇಳಿಕೊಳ್ಳಿ. ನಿಮಗೆ ಯಾರದರೂ ತಿಳಿದಿದ್ದರೆ ಹೇಳಿ ಎಂದು ಬಿಡಿ. ಇದು ನಮ್ಮಿಂದ ಆಗುವ ಕೆಲಸವಲ್ಲ ಎಂದು ಮನಸ್ಸಿನಲ್ಲಿಯೇ ಅಂದುಕೊಂಡು ನಿಮ್ಮಲ್ಲಿ ಮದುವೆಯ ಬಗ್ಗೆ ಕೇಳುವುದನ್ನು ನಿಲ್ಲಿಸಿ ಬಿಡುತ್ತಾರೆ.
- ನಿಮ್ಮ ಜೀವನದ ಬಹುಮುಖ್ಯ ಭಾಗವಾದ ಮದುವೆಯು ನಿಮ್ಮದೇ ಸ್ವಂತ ನಿರ್ಧಾರ ಹಾಗೂ ಅಭಿಪ್ರಾಯವಾಗಿರುತ್ತದೆ. ಹೀಗಾಗಿ ನಿಮ್ಮ ಜೀವನದ ಬೇಕು ಬೇಡಗಳ ಬಗ್ಗೆ ನಿಮಗೆ ಸ್ಪಷ್ಟವಾಗಿ ಗೊತ್ತಿರುವುದರಿಂದ ಆ ಬಗ್ಗೆ ಸಂಬಂಧಿಕರಿಗೆ ನೇರವಾಗಿ ಹೇಳಿಬಿಡುವುದು ಒಳಿತು.
- ನಿಮ್ಮ ಜೀವನದ ಮಹತ್ವಕಾರಿ ವಿಷಯಗಳ ಬಗ್ಗೆ ಸಂಬಂಧಿಕರಿಗೆ ಮಾತನಾಡಲು ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡಬೇಡಿ. ಆದರೆ ನಿಮ್ಮ ಜೀವನದ ತೀರಾ ವೈಯುಕ್ತಿಕ ವಿಚಾರಗಳ ಬಗ್ಗೆ ಮಾತನಾಡಲು ಹಕ್ಕಿಲ್ಲ ಎನ್ನುವುದನ್ನು ಅವರಿಗೆ ತಿಳಿ ಹೇಳಿ.
- ನನ್ನ ಮದುವೆಗೆ ಖರ್ಚು ಮಾಡಲು ನಿಮ್ಮ ಬಳಿ ಹಣವಿದೆಯೇ, ಹಾಗಾದರೇ ಮುಂದಿನ ವಾರವೇ ಒಂದೊಳ್ಳೆ ಹುಡುಗ ಅಥವಾ ಹುಡುಗಿ ತೋರಿಸಿ, ಮದುವೆಯಾಗುವೆ ಎಂದು ಬಿಡಿ. ಹೀಗೆಂದರೆ ಸಂಬಂಧಿಕರು ಇನ್ನೇಂದಿಗೂ ನಿಮ್ಮ ಮದುವೆಯ ಬಗ್ಗೆ ಮಾತನಾಡುವುದೇ ಇಲ್ಲ.
- ಕೆಲವೊಮ್ಮೆ ಸಂಬಂಧಿಕರಿಗೆ ನಮ್ಮ ಮದುವೆಯನ್ನು ನೋಡುವ ಆತುರ ಎಂಬಂತೆ ಮಾತನಾಡುತ್ತಾರೆ. ಮದುವೆ ಬೇಡ ಎಂದು ಮುಂದಕ್ಕೆ ಹಾಕುವುದರಿಂದ ನಿಮ್ಮ ನಡವಳಿಕೆಗಳ ಬಗ್ಗೆ ಇಲ್ಲಸಲ್ಲದ ಮಾತುಗಳು ಕೇಳಿಬರುತ್ತವೆ. ಅಂತಹ ಮಾತುಗಳು ಕೇಳಿ ಬಂದರೆ ಖಾರವಾಗಿಯಾದರೂ ಸರಿಯೇ ನೇರವಾಗಿ ನನ್ನ ನಡವಳಿಕೆಯ ಬಗ್ಗೆ ಮಾತನಾಡುವ ಹಕ್ಕು ನಿಮಗಿಲ್ಲ ಎಂದು ಹೇಳಿ ಬಿಡುವುದು ಒಳ್ಳೆಯದು. ಇದರಿಂದ ಸಂಬಂಧವು ಹಾಳಾದರೂ ತೊಂದರೆಯಿಲ್ಲ ನಿಮ್ಮ ಮನಸ್ಥಿತಿಯನ್ನು ಹಾಳು ಮಾಡುವ ವ್ಯಕ್ತಿಗಳು ನಿಮ್ಮಿಂದ ದೂರ ಉಳಿದರೆ ನಿಮಗೂ ಒಳ್ಳೆಯದು.
Published On - 11:57 am, Tue, 2 April 24