ಬಾಳೆಹಣ್ಣಿನ ಸಿಪ್ಪೆಯನ್ನು ಎಸೆಯೋ ಬದಲು ಈ ರೀತಿಯಾಗಿ ಪಾತ್ರೆ ಕ್ಲೀನ್ ಮಾಡಲು ಉಪಯೋಗಿಸಿ
ನಾವು ಬಾಳೆಹಣ್ಣನ್ನು ತಿಂದು ಅದರ ಸಿಪ್ಪೆಯನ್ನು ನೇರವಾಗಿ ಕಸದ ಬುಟ್ಟಿಗೆ ಎಸೆದು ಬಿಡುತ್ತೇವೆ. ಆದರೆ ಈ ಸಿಪ್ಪೆಯಿಂದಲೂ ಅನೇಕ ಉಪಯೋಗಗಳಿದ್ದು, ಇದು ಮನೆ ಕೆಲಸಗಳನ್ನು ಸುಲಭಗೊಳಿಸಲು ತುಂಬಾನೇ ಸಹಕಾರಿ. ಪಾತ್ರೆಯನ್ನು ಸ್ವಚ್ಛಗೊಳಿಸುವುದರಿಂದ ಹಿಡಿದು ಗಿಡಗಳಿಗೆ ಗೊಬ್ಬರದವರೆಗೆ ಬಾಳೆಹಣ್ಣಿನ ಸಿಪ್ಪೆಯನ್ನು ಹೇಗೆಲ್ಲಾ ಉಪಯೋಗಿಸಬಹುದು ಎಂಬುದನ್ನು ತಿಳಿಯಿರಿ.

ಅಡುಗೆ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ, ಅಡುಗೆಗೆ ಬಳಸುವ ಪಾತ್ರೆಗಳನ್ನು ಕ್ಲೀನ್ ಆಗಿ ಇಟ್ಟುಕೊಳ್ಳುವುದು ಸಹ ಮುಖ್ಯವಾಗಿದೆ. ಪ್ರತಿದಿನ ಅಡುಗೆ ಮಾಡುವ ಕಾರಣ ಎಷ್ಟೇ ಕ್ಲೀನ್ ಮಾಡಿದ್ರೂ ಸಹ ಕೆಲವೊಂದು ಪಾತ್ರೆಗಳಲ್ಲಿ ಜಿಡ್ಡು, ಮೊಂಡು ಕಲೆ, ಕಪ್ಪು ಪದರ ಹಾಗೆಯೇ ಉಳಿದು ಬಿಡುತ್ತವೆ. ಇದರಿಂದ ಪಾತ್ರೆಯ ಸೌಂದರ್ಯವೇ ಹಾಳಾಗುತ್ತದೆ ಎಂಬ ಕಾರಣಕ್ಕೆ ಈ ಕಲೆಗಳನ್ನು ತೆಗೆದು ಹಾಕಲು ಹಲವು ಸರ್ಕಸ್‌ಗಳನ್ನು ಮಾಡುತ್ತಾರೆ. ಇದರ ಬದಲು ಬಾಳೆಹಣ್ಣಿನ ಸಿಪ್ಪೆಯನ್ನು (banana peels) ಬಳಸಿ ಬಲು ಸುಲಭವಾಗಿ ಪಾತ್ರೆಗಳ ಮೇಲೆ ಅಂಟಿರುವ ಕಲೆಗಳನ್ನು ತೆಗೆದುಹಾಬಹುದು. ಬಾಳೆ ಹಣ್ಣಿನ ಸಿಪ್ಪೆ ಬಳಸಿ ಯಾವುದೇ ಖರ್ಚಿಲ್ಲದೆ ಸುಲಭವಾಗಿ ಪಾತ್ರೆಗಳಲ್ಲಿ ಅಂಟಿರುವ ಮೊಂಡುತನದ ಕಲೆಗಳನ್ನು ಹೇಗೆ ತೊಡೆದುಹಾಕುವುದು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯಿರಿ.
ಪಾತ್ರೆಗಳಲ್ಲಿ ಅಂಟಿರುವ ಕೊಳೆಯನ್ನು ಸ್ವಚ್ಛಗೊಳಿಸಲು ಸಹಕಾರಿ ಬಾಳೆಹಣ್ಣಿನ ಸಿಪ್ಪೆ:
ಬಾಳೆಹಣ್ಣಿನ ಸಿಪ್ಪೆಯ ಒಳಗಿನ ಬಿಳಿ ಭಾಗವು ಪೊಟ್ಯಾಸಿಯಮ್ ಮತ್ತು ಕೆಲವು ನೈಸರ್ಗಿಕ ಎಣ್ಣೆಗಳಿಂದ ಸಮೃದ್ಧವಾಗಿದ್ದು, ಇದು ಪಾತ್ರೆಗಳಲ್ಲಿನ ಕೊಳೆಯನ್ನು ತೆಗೆದುಹಾಕಲು ಸಹಕಾರಿ. ನಿಮ್ಮ ಸ್ಟೀಲ್ ಅಥವಾ ನಾನ್-ಸ್ಟಿಕ್ ಪಾತ್ರೆಗಳಲ್ಲಿ ಸುಟ್ಟ, ಮೊಂಡುತನದ ಕಲೆಗಳಿದ್ದರೆ, ಅದನ್ನು ತೆಗೆದು ಹಾಕಲು, ಬಾಳೆಹಣ್ಣಿನ ಸಿಪ್ಪೆಯ ಒಳಭಾಗವನ್ನು ಪಾತ್ರೆಯ ಮೇಲೆ ಉಜ್ಜಿ 10 ರಿಂದ 15 ನಿಮಿಷಗಳ ಕಾಲ ಬಿಡಿ. ನಂತರ ಅದನ್ನು ಸೌಮ್ಯವಾದ ಸ್ಕ್ರಬ್ಬರ್‌ನಿಂದ ಸ್ವಚ್ಛಗೊಳಿಸಿ. ಇದಲ್ಲದೆ ಬಾಳೆಹಣ್ಣಿನ ಸಿಪ್ಪೆಯ ಮೇಲೆ ಸ್ವಲ್ಪ ಟೂತ್‌ಪೇಸ್ಟ್ ಹಚ್ಚಿ ಪಾತ್ರೆಯ ಮೇಲೆ ಸ್ಕ್ರಬ್ ಮಾಡಬಹುದು.
ಬಾಳೆಹಣ್ಣಿನ ಸಿಪ್ಪೆಯ ಇತರೆ ಉಪಯೋಗಗಳು:
ಸಸ್ಯಗಳಿಗೆ ನೈಸರ್ಗಿಕ ಗೊಬ್ಬರ: ಬಾಳೆಹಣ್ಣಿನ ಸಿಪ್ಪೆಗಳು ಪೊಟ್ಯಾಸಿಯಮ್, ರಂಜಕ ಮತ್ತು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿವೆ. ಸಿಪ್ಪೆಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಮಣ್ಣಿನಲ್ಲಿ ಹೂತುಹಾಕಿ, ಅಥವಾ ನೀರಿನಲ್ಲಿ ಕುದಿಸಿ ನಂತರ ಈ ನೀರನ್ನು ಗಿಡಗಳಿಗೆ ಹಾಕಿ. ಇದು ನಿಮ್ಮ ಸಸ್ಯಗಳನ್ನು ಹಸಿರಾಗಿಡಲು ಸಹಾಯ ಮಾಡುತ್ತದೆ.
ಶೂಗಳು, ಚರ್ಮದ ವಸ್ತುಗಳಿಗೆ ಹೊಳಪು ನೀಡುತ್ತದೆ: ಚರ್ಮದ ಶೂಗಳು, ಪರ್ಸ್‌ಗಳು ಅಥವಾ ಬೆಲ್ಟ್‌ಗಳು ಕಾಲಾನಂತರದಲ್ಲಿ ಹೊಳಪನ್ನು ಕಳೆದುಕೊಳ್ಳಬಹುದು. ಹಾಗಿರುವಾಗ ಬಾಳೆಹಣ್ಣಿನ ಸಿಪ್ಪೆಯ ಒಳಭಾಗವನ್ನು ನಿಮ್ಮ ಶೂಗಳ ಮೇಲೆ ಉಜ್ಜಿ ನಂತರ ಒಣ ಬಟ್ಟೆಯಿಂದ ಪಾಲಿಶ್ ಮಾಡಿ. ಇದು ಚರ್ಮದ ವಸ್ತುಗಳಿಗೆ ನೈಸರ್ಗಿಕ ಹೊಳಪನ್ನು ತಂದು ಕೊಡುತ್ತದೆ.
ಇದನ್ನೂ ಓದಿ: ಅಕ್ಕಿ ತೊಳೆದ ನೀರನ್ನು ವೇಸ್ಟ್ ಎಂದು ಚೆಲ್ಲಬೇಡಿ, ಅದನ್ನು ಈ ರೀತಿಯಾಗಿ ಉಪಯೋಗಿಸಿ
ಚರ್ಮದ ಆರೈಕೆಗೆ ಸಹಕಾರಿ: ಬಾಳೆಹಣ್ಣಿನ ಸಿಪ್ಪೆಯಲ್ಲಿರುವ ಉತ್ಕರ್ಷಣ ನಿರೋಧಕಗಳು ಚರ್ಮವನ್ನು ಪೋಷಿಸುತ್ತದೆ. ಸಿಪ್ಪೆಯ ಒಳಭಾಗವನ್ನು ಮೊಡವೆ ಅಥವಾ ಒಣ ಚರ್ಮದ ಮೇಲೆ ನಿಧಾನವಾಗಿ ಉಜ್ಜಿ 10 ನಿಮಿಷಗಳ ನಂತರ ತೊಳೆಯಿರಿ. ಇದರ ನಿಯಮಿತ ಬಳಕೆಯು ಚರ್ಮವನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ.
ಬೆಳ್ಳಿ ಮತ್ತು ಉಕ್ಕಿನ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು: ಬೆಳ್ಳಿ ಪಾತ್ರೆಗಳು ಮಸುಕಾಗಿದ್ದರೆ ಅಥವಾ ಉಕ್ಕಿನ ಪಾತ್ರೆಗಳು ಹೊಳಪು ಕಳೆದುಕೊಂಡಿದ್ದರೆ, ಬಾಳೆಹಣ್ಣಿನ ಸಿಪ್ಪೆಯನ್ನು ಪೇಸ್ಟ್ ಮಾಡಿ ಪಾತ್ರೆಗಳಿಗೆ ಉಜ್ಜಿ ನಂತರ ನೀರಿನಿಂದ ತೊಳೆಯಿರಿ, ಇದು ಮರಳಿ ಹೊಳಪನ್ನು ನೀಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




