
ಈ ಭೂಮಿಯ ನಿಷ್ಠಾವಂತ ಪ್ರಾಣಿಗಳೆಂದರೆ ಅದು ಶ್ವಾನಗಳು (Dogs). ಹಸಿದಾಗ ಒಂದು ತುತ್ತು ಊಟ ಹಾಕಿದವರನ್ನು ಈ ಮೂಕ ಪ್ರಾಣಿಗಳು ತಮ್ಮ ಕೊನೆಯುಸಿರು ಇರುವವರೆಗೂ ನೆನಪಿಟ್ಟುಕೊಳ್ಳುತ್ತವೆ, ಪ್ರೀತಿಯನ್ನು ಧಾರೆಯೆರೆಯುತ್ತವೆ. ಇದಕ್ಕಾಗಿಯೇ ನಾಯಿಗಳನ್ನು ನಿಷ್ಠಾವಂತ ಪ್ರಾಣಿ ಮಾತ್ರವಲ್ಲ ಮನುಷ್ಯನ ಉತ್ತಮ ಸ್ನೇಹಿತ ಅನ್ನೋದು. ಇವುಗಳ ನಿಷ್ಠೆ, ಪ್ರೀತಿಯ ಕಾರಣಕ್ಕೆಯೇ ಹಿಂದಿನಿಂದಲೂ ಮನೆ ಮನೆಗಳಲ್ಲಿ ನಾಯಿಗಳನ್ನು ಸಾಕುತ್ತಾ ಬರಲಾಗುತ್ತಿದೆ. ಆದರೆ ಇಂದು ಸಾಯಿ ಸಾಕುವುದು ಒಂದು ಫ್ಯಾಷನ್ ಆಗಿದ್ದು, ಹೆಚ್ಚಿನವರು ಸ್ಥಳೀಯ ಜಾತಿಯ ನಾಯಿಗಳ ಬದಲು ದುಬಾರಿ ಬೆಲೆಯ ನಾಯಿಗಳನ್ನೇ ಸಾಕುತ್ತಿದ್ದಾರೆ. ಹೀಗಾಗಿ ಸ್ಥಳೀಯ ಜಾತಿಯ ನಾಯಿಗಳನ್ನು ದತ್ತು ಪಡೆದು, ಅವುಗಳಿಗೆ ಉತ್ತಮ ನೆಲೆಯನ್ನು ಕಲ್ಪಿಸಬೇಕೆಂದು ಜನರನ್ನು ಪ್ರೋತ್ಸಾಹಿಸಲು ಹಾಗೂ ನಾಯಿಗಳ ಮೇಲೆ ನಡೆಯುವಂತಹ ದೌರ್ಜನ್ಯಗಳನ್ನು ತಡೆಗಟ್ಟಲು ಪ್ರತಿವರ್ಷ ಆಗಸ್ಟ್ 26 ರಂದು ಅಂತಾರಾಷ್ಟ್ರೀಯ ಶ್ವಾನ ದಿನವನ್ನು (International Dog Day 2025) ಆಚರಿಸಲಾಗುತ್ತದೆ.
ಈ ದಿನವನ್ನು ಮೊದಲು 2004 ರಲ್ಲಿ ಆಚರಿಸಲಾಯಿತು. ಪ್ರಾಣಿ ಕಲ್ಯಾಣ ಕಾರ್ಯಕರ್ತೆ ( ಪೆಟ್ & ಫ್ಯಾಮಿಲಿ ಲೈಫ್ಸ್ಟೈಲ್ ಎಕ್ಸ್ಪರ್ಟ್, ಅನಿಮಲ್ ಅಡ್ವೊಕೇಟ್, ಕನ್ಸರ್ವೆಶನಿಸ್ಟ್, ಡಾಗ್ ಟ್ರೈನರ್) ಮತ್ತು ಲೇಖಕಿ ಕೋಲಿನ್ ಪೈಜ್ ಈ ದಿನದ ಆಚರಣೆಯನ್ನು ಪ್ರಾರಂಭಿಸಿದರು. ಕೋಲಿನ್ ಪೈಜ್ ಅವರ ಕುಟುಂಬವು ಆಗಸ್ಟ್ 26 ರಂದು ಶೆಲ್ಟಿ ಎಂಬ ಹೆಸರಿನ ನಾಯಿಯನ್ನು ದತ್ತು ತೆಗೆದುಕೊಂಡು ಸಾಕಿದರು. ಇದಕ್ಕಾಗಿಯೇ ಆಗಸ್ಟ್ 26 ರಂದು ಶ್ವಾನ ದಿನದ ಆಚರಣೆಯನ್ನು ಪ್ರಾರಂಭಿಸಿದರು. ಈ ವಿಶೇಷ ದಿನದ ಮೂಲಕ, ಅವರು ನಾಯಿಗಳ ದತ್ತು ಸ್ವೀಕಾರ, ಅವುಗಳ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಬಯಸಿದರು. ಅಂದಿನಿಂದ ಪ್ರತಿವರ್ಷ ಈ ದಿನವನ್ನು ಆಚರಿಸುತ್ತಾ ಬರಲಾಗುತ್ತದೆ.
ಅಂತಾರಾಷ್ಟ್ರೀಯ ಶ್ವಾನ ದಿನವನ್ನು ಆರಿಸುವ ಮುಖ್ಯ ಉದ್ದೇಶವೆಂದರೆ ಸ್ಥಳೀಯ ಜಾತಿಯ ಹಾಗೂ ಬೀದಿ ನಾಯಿಗಳನ್ನು ದತ್ತು ತೆಗೆದುಕೊಳ್ಳುವಂತೆ ಜನರನ್ನು ಪ್ರೋತ್ಸಾಹಿಸುವುದು ಮತ್ತು ಆ ನಾಯಿಗಳಿಗೆ ಉತ್ತಮ ಜೀವನವನ್ನು ಕಲ್ಪಿಸುವುದಾಗಿದೆ. ಅಷ್ಟೇ ಅಲ್ಲದೆ ನಾಯಿಗಳು ಅದರಲ್ಲೂ ಬೀದಿ ನಾಯಿಗಳ ಮೇಲೆ ದೌರ್ಜನ್ಯ ಮಾಡದಂತೆ ಜನರಿಗೆ ಜಾಗೃತಿ ಮೂಡಿಸಲಾಗುತ್ತದೆ.
ಇದನ್ನೂ ಓದಿ: ಸೊಳ್ಳೆಗಳ ದಿನವನ್ನು ಆಚರಿಸೋದೇಕೆ ಗೊತ್ತಾ? ಇದರ ಹಿಂದೆಯೂ ಇದೆ ಒಂದು ಕಾರಣ
ಅಂತಾರಾಷ್ಟ್ರೀಯ ಶ್ವಾನ ದಿನದಂದು, ನೀವು ಹತ್ತಿರದ ಶ್ವಾನ ಆಶ್ರಯ ತಾಣಗಳಿಗೆ ಹೋಗಿ ಅವುಗಳಿಗೆ ಆಹಾರ ನೀಡುವ ಮೂಲಕ ಅಥವಾ ಅವುಗಳಿಗೆ ಅಗತ್ಯ ವಸ್ತುಗಳನ್ನು ದಾನ ಮಾಡುವ ಮೂಲಕ ಈ ದಿನವನ್ನು ವಿಶೇಷವಾಗಿ ಆಚರಿಸಬಹುದು. ಅಲ್ಲದೆ ಹೈ-ಫೈ ತಳಿಯ ಶ್ವಾನಗಳನ್ನು ಖರೀದಿಸುವ ಬದಲು ಈ ವಿಶೇಷ ದಿನದಂದು ಬೀದಿ ನಾಯಿಗಳನ್ನು ನೀವು ದತ್ತು ತೆಗೆದುಕೊಳ್ಳಬಹುದು. ಈ ಮೂಲಕ ಅವುಗಳಿಗೆ ಉತ್ತಮ ಬದುಕನ್ನು ನೀವು ಕಲ್ಪಿಸಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ