ದಿನಾಲೂ ಬೆಳಗ್ಗೆ ಒಂದೇ ಬಗೆಯ ತಿಂಡಿ ತಿಂದು ಬೋರ್ ಆಗಿರುತ್ತದೆ. ಕೆಲವರು ವಿಭಿನ್ನವಾಗಿ ಏನನ್ನಾದರೂ ಮಾಡಲು ಪ್ರಯತ್ನಿಸುತ್ತಾರೆ. ಪಲಾವ್, ಚಿತ್ರಾನ್ನದಂತಹ ರೈಸ್ ಐಟಂಗಳನ್ನು ಮನೆಯ ಸದಸ್ಯರು ಇಷ್ಟ ಪಡುತ್ತಿದ್ದರೆ ಸ್ಪೆಷಲ್ ಆಗಿ ಜೀರಾ ರೈಸ್ ಮಾಡಬಹುದು. ಉತ್ತರ ಭಾರತದ ಫೇಮಸ್ ಖಾದ್ಯವಾಗಿರುವ ಈ ಜೀರಾ ರೈಸ್ ರೆಸಿಪಿಯನ್ನು ಹೆಚ್ಚು ಖರ್ಚುಯಿಲ್ಲದೇ ಮಾಡಬಹುದಾಗಿದೆ. ಮನೆಯಲ್ಲಿರುವ ಈ ಕೆಲವು ಸಾಮಗ್ರಿಗಳಿಂದ ಆರೋಗ್ಯಕರ ಹಾಗೂ ರುಚಿಕರ ಜೀರಾ ರೈಸ್ ಮಾಡಿ ಮನೆ ಮಂದಿಯೆಲ್ಲಾ ಸವಿಯಬಹುದು.
* ಅಕ್ಕಿ- 1ಕಪ್
* ತುಪ್ಪ- 1/2 ಕಪ್
* ಪಲಾವ್ ಎಲೆ
* ಚಕ್ಕೆ
* ಲವಂಗ
* ಜೀರಿಗೆ- 4 ಚಮಚ
* ಹಸಿಮೆಣಸಿನಕಾಯಿ- 2
* ಕೊತ್ತಂಬರಿ ಸೊಪ್ಪು
* ರುಚಿಗೆ ತಕ್ಕಷ್ಟು ಉಪ್ಪು
* ಅಕ್ಕಿಯನ್ನು ಚೆನ್ನಾಗಿ ತೊಳೆದು ಇಪ್ಪತ್ತು ನಿಮಿಷಗಳ ಕಾಲ ನೆನೆಸಿಟ್ಟುಕೊಳ್ಳಿ.
* ಬಾಣಲೆಗೆ ತುಪ್ಪ ಹಾಕಿ ಬಿಸಿಯಾಗುತ್ತಿದ್ದಂತೆ ಪಲಾವ್ ಎಲೆ, ಚಕ್ಕೆ, ಲವಂಗ, ಜೀರಿಗೆ, ಕತ್ತರಿಸಿಟ್ಟ ಹಸಿಮೆಣಸಿನಕಾಯಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
* ಆ ಬಳಿಕ ಈಗಾಗಲೇ ನೆನೆಸಿಟ್ಟ ಅಕ್ಕಿಯನ್ನು ಹಾಕಿ ಸ್ವಲ್ಪ ಸಣ್ಣ ಉರಿಯಲ್ಲಿ ಫ್ರೈ ಮಾಡಿಕೊಳ್ಳಿ.
* ಅಕ್ಕಿ ಬೇಯಲು ಬೇಕಾಗುವಷ್ಟು ನೀರು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಒಮ್ಮೆ ಕೈಯಾಡಿಸಿ. ಆ ಬಳಿಕ ಕೊತ್ತಂಬರಿ ಸೇರಿಸಿ ಬೇಯಿಸಿಕೊಂಡರೆ ರುಚಿಯಾದ ಜೀರಾ ರೈಸ್ ಸವಿಯಲು ಸಿದ್ಧ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ