Hiccups : ಏನೇ ಮಾಡಿದ್ರೂ ಬಿಕ್ಕಳಿಕೆ ನಿಲ್ತಾ ಇಲ್ವಾ? ತಕ್ಷಣವೇ ಹೀಗೆ ಮಾಡಿ
ಹೆಚ್ಚಿನವರಿಗೆ ಊಟ ಮಾಡುವಾಗ ಬಿಕ್ಕಳಿಕೆಯಂತಹ ಸಮಸ್ಯೆಯೂ ಕಾಣಿಸಿಕೊಳ್ಳುತ್ತದೆ. ಎಷ್ಟು ನೀರು ಕುಡಿದರೂ ಕೂಡ ಬಿಕ್ಕಳಿಕೆ ಮಾತ್ರ ನಿಲ್ಲುವುದೇ ಇಲ್ಲ. ಈ ವೇಳೆಯಲ್ಲಿ ಊಟ ಮಾಡುವುದಕ್ಕಾಗಲಿ, ಮಾತನಾಡುವುದಕ್ಕಾಗಲಿ ಆಗುವುದೇ ಇಲ್ಲ. ಒಂದು ವೇಳೆ ನಿಮಗೆ ಈ ರೀತಿ ಪದೇ ಪದೇ ಬಿಕ್ಕಳಿಕೆ ಬರುತ್ತಿದ್ದರೆ ಆ ಕೂಡಲೇ ಹೀಗೆ ಮಾಡಿ, ಬಿಕ್ಕಳಿಕೆಯೂ ತಕ್ಷಣ ನಿಲ್ಲುತ್ತೆ.
ಬಿಕ್ಕಳಿಕೆ ಯಾವಾಗ ಬರುತ್ತದೆ ಹೇಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವರಿಗೆ ತಕ್ಷಣ ನಿಲ್ಲುತ್ತದೆ, ಆದರೆ ಇನ್ನೂ ಕೆಲವರಿಗೆ ಎಷ್ಟೇ ನೀರು ಕುಡಿದ್ರೂ ಬಿಕ್ಕಳಿಕೆ ನಿಲ್ಲುವುದೇ ಇಲ್ಲ. ಈ ವೇಳೆಯಲ್ಲಿ ಯಾರಾದರೂ ನಿನ್ನನ್ನು ನೆನಪಿಸಿಕೊಳ್ಳುತ್ತಿರಬಹುದು ಎಂದು ಹೇಳುವುದನ್ನು ಕೇಳಿರಬಹುದು. ಆದರೆ, ಹೆಚ್ಚು ಮಸಾಲೆಯುಕ್ತ ಆಹಾರದ ಸೇವನೆ, ಆಲ್ಕೋಹಾಲ್, ಸೋಡಾದಂತಹ ಕಾರ್ಬೊನೇಟೆಡ್ ಪಾನೀಯಗಳ ಸೇವನೆ, ತುಂಬಾ ಬಿಸಿಯಾದ ಅಥವಾ ತುಂಬಾ ತಣ್ಣನೆಯ ಆಹಾರ ಪದಾರ್ಥಗಳು ತಿನ್ನುವುದು ಈ ಬಿಕ್ಕಳಿಕೆಯಂತಹ ಸಮಸ್ಯೆಗೆ ಕಾರಣವಾಗಿದೆ. ಹೀಗಾಗಿ ಈ ಕೆಲವು ಮನೆಮದ್ದಿನ ಜೊತೆಗೆ ಈ ಟ್ರಿಕ್ಸ್ ಗಳನ್ನು ಪಾಲಿಸಿದರೆ ಬಿಕ್ಕಳಿಕೆಯನ್ನು ತಕ್ಷಣವೇ ನಿಲ್ಲಿಸಬಹುದು.
- ಬಿಕ್ಕಳಿಕೆ ಬಂದ ಕೂಡಲೇ ತಣ್ಣೀರು ಅಥವಾ ಬಿಸಿ ನೀರು ಕುಡಿಯಿರಿ. ಇದು ತಕ್ಷಣವೇ ಬಿಕ್ಕಳಿಕೆಯಂತಹ ಸಮಸ್ಯೆಯೂ ದೂರವಾಗಿಸುತ್ತದೆ.
- ಬಿಕ್ಕಳಿಕೆ ಬಂದ ತಕ್ಷಣವೇ ಹಿಂಬದಿಯಿಂದ ಕುತ್ತಿಗೆಯ ಪ್ರದೇಶವನ್ನು ನಿಧಾನವಾಗಿ ಮಸಾಜ್ ಮಾಡುವುದು ಪರಿಣಾಮಕಾರಿಯಾಗಿದೆ.
- ಬಿಕ್ಕಳಿಕೆ ಬಂದಾಗ ಕೆಲವು ಕ್ಷಣ ಉಸಿರು ಬಿಗಿ ಹಿಡಿದುಕೊಳ್ಳಬೇಕು. ಈ ವಿಧಾನವೂ ಬಿಕ್ಕಳಿಕೆ ನಿಲ್ಲಲು ಸಹಾಯ ಮಾಡುತ್ತದೆ.
- ವ್ಯಕ್ತಿಯ ಗಮನವನ್ನು ಬೇರೆಡೆ ಸೆಳೆಯುವುದರಿಂದ ಬಿಕ್ಕಳಿಕೆ ಸಮಸ್ಯೆಯೂ ಕ್ಷಣಾರ್ಧದಲ್ಲಿ ನಿಲ್ಲಿಸಬಹುದು.
- ಕೈಗಳಿಂದ ನಿಮ್ಮ ಮೂಗನ್ನು ಮುಚ್ಚಿಕೊಳ್ಳಿ. ಹೀಗೆ ಮಾಡಿದ್ರೆ ಶ್ವಾಸಕೋಶದಲ್ಲಿರುವ ಕಾರ್ಬನ್ ಡೈ ಆಕ್ಸೈಡ್ ಹೊರ ಹೋಗಿ, ಬಿಕ್ಕಳಿಕೆ ನಿಲ್ಲುತ್ತದೆ.
- ಹೆಬ್ಬೆರಳಿನಿಂದ ಕೈಯ ಅಂಗೈಯನ್ನು ಮಸಾಜ್ ಮಾಡುವುದು ಕೂಡ ಬಿಕ್ಕಳಿಕೆ ನಿಲ್ಲಿಸಲು ಸಹಾಯ ಮಾಡುತ್ತದೆ.
- ನೀರು ಕುಡಿದ ಬಳಿಕವೂ ಬಿಕ್ಕಳಿಕೆ ನಿಲ್ಲದಿದ್ದರೆ, ನಾಲಗೆಯನ್ನು ಹೊರ ಹಾಕಿ ಸ್ಪಲ್ಪ ಹೊತ್ತು ಹಾಗೆಯೇ ಇರಿ. ಇದು ಗಂಟಲಿನ ಸ್ನಾಯುಗಳಲ್ಲಿ ಒತ್ತಡ ಕಡಿಮೆ ಮಾಡುತ್ತದೆ. ಇದರಿಂದ ಬಿಕ್ಕಳಿಕೆ ನಿಲ್ಲುತ್ತದೆ.
- ಒಂದು ಚಮಚ ಸಕ್ಕರೆ ತೆಗೆದುಕೊಂಡು ಅದನ್ನು ಚೆನ್ನಾಗಿ ಜಗಿದು ಅರ್ಧ ಲೋಟ ನೀರು ಕುಡಿಯಿರಿ. ಬಿಕ್ಕಳಿಕೆ ತಟ್ಟನೆ ನಿಂತುಹೋಗುತ್ತದೆ.
- ಬಿಕ್ಕಳಿಕೆ ಬಂದಾಗ ದಿಢೀರನೆ ಎದ್ದು ಕುಳಿತು ಮೊಣಕಾಲುಗಳನ್ನು ಎದೆಯವರೆಗೆ ತನ್ನಿ. ಇದು ಶ್ವಾಸಕೋಶವನ್ನು ಕುಗ್ಗಿಸುವ ಮೂಲಕ ಸ್ನಾಯುವಿನ ಒತ್ತಡವನ್ನು ನಿವಾರಿಸುತ್ತದೆ, ಹೀಗಾಗಿ ಬಿಕ್ಕಳಿಕೆಯೂ ನಿಲ್ಲುತ್ತದೆ.
- ಮನೆಯಲ್ಲಿ ಪೇಪರ್ ಬ್ಯಾಗ್ ಇದ್ದರೆ ಅದರಲ್ಲಿ ಹತ್ತು ಬಾರಿ ಉಸಿರು ಎಳೆದು ಬಿಟ್ಟರೂ ಬಿಕ್ಕಳಿಕೆಯೂ ನಿಲ್ಲುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ