
ಪ್ರತಿವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯ ದಿನವನ್ನು (Kargil Vijay Diwas) ದೇಶಾದ್ಯಂತ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಭಾರತೀಯರ ಪಾಲಿಗೆ ಇದು ಮರೆಯಲಾಗದ ಹೆಮ್ಮೆಯ ದಿನವಾಗಿದೆ. ಇದು ಕೇವಲ ವಿಜಯದ ದಿನವಲ್ಲ, ಹೆಮ್ಮೆಯ ಯೋಧರ ಶೌರ್ಯ, ಪರಾಕ್ರಮ, ತ್ಯಾಗವನ್ನು ಸ್ಮರಿಸುವ ಸಂದರ್ಭವಾಗಿದೆ. 1999 ಮೇ ತಿಂಗಳಲ್ಲಿ ಆರಂಭವಾಗ ಈ ಕಾರ್ಗಿಲ್ ಯುದ್ಧ ಜುಲೈ ಅಂತ್ಯದ ವರೆಗೆ ಅಂದರೆ ಸುಮಾರು 85 ದಿನಗಳವರೆಗೆ ನಡೆಯಿತು, ಈ ಯುದ್ಧದಲ್ಲಿ ಭಾರತೀಯ ಸೇನೆ ಆಪರೇಶನ್ ವಿಜಯ್ ಕಾರ್ಯಾಚರಣೆಯ ಮೂಲಕ ಪಾಕಿಸ್ತಾನ ಸೇನೆಯನ್ನು ಸದೆ ಬಡಿದು ಅವರು ಆಕ್ರಮಿಸಿಕೊಂಡಿದ್ದ ಜಾಗವನ್ನು ಮತ್ತೆ ವಶಕ್ಕೆ ಪಡೆದುಕೊಂಡಿತು. ಈ ಯುದ್ಧದಲ್ಲಿ ವಿಕ್ರಮ್ ಬಾತ್ರಾ, ಮನೋಜ್ ಕುಮಾರ್ ಪಾಂಡೆ ಸೇರಿದಂತೆ ಅನೇಕ ಕೆಚ್ಚೆದೆಯ ಸೈನಿಕರ ಭಾರತ ಮಾತೆಯ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು. ಅಷ್ಟಕ್ಕೂ ಕಾರ್ಗಿಲ್‌ನಲ್ಲಿ ಯುದ್ಧ ಆರಂಭವಾದದ್ದು ಹೇಗೆ, ಪಾಕ್ ಕ್ರೌರ್ಯದ ವಿರುದ್ಧ ಯುದ್ಧ ಭೂಮಿಯಲ್ಲಿ ಭಾರತೀಯ ಸೈನಿಕ ರೋಚಕ ಹೋರಾಟ ಹೇಗಿತ್ತು ಎಂಬ ಪರಾಕ್ರಮದ ಕಥೆಯನ್ನು ತಿಳಿಯಿರಿ.
1947 ರಲ್ಲಿ ಸ್ವಾತಂತ್ರ್ಯ ಗಳಿಸಿದ ಬಳಿಕ, ದೇಶವು ವಿಭಜನೆಯಾಯಿತು, ಧರ್ಮದ ಆಧಾರದ ಮೇಲೆ ಪಾಕಿಸ್ತಾನವನ್ನು ರಚಿಸಲಾಯಿತು. ಈ ದೇಶ ವಿಭಜನೆಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಕಾಶ್ಮೀರದ ವಿಚಾರದಲ್ಲಿ ಘರ್ಷಣೆ ನಡೆದವು. ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಪಾಕಿಸ್ತಾನ ಪಟ್ಟುಹಿಡಿದ ಪರಿಣಾಮವೇ ಕಾರ್ಗಿಲ್ ಯುದ್ಧ. ಇದು ಭಾರತದ ವಿರುದ್ಧ ತಂತ್ರ ರೂಪಿಸಲು ಪಾಕಿಸ್ತಾನವನ್ನು ಪ್ರೇರೇಪಿಸಿತು. ಭಾರತದ ವಿರುದ್ಧ ಮಿಲಿಟರಿ ಕಾರ್ಯಾಚರಣೆಗೆ ಪಾಕಿಸ್ತಾನ ಸಿದ್ಧವಾಯಿತು. ಆಗಿನ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಪರ್ವೇಜ್ ಮುಷರಫ್, ಜನರಲ್‌ಗಳಾದ ಮೊಹಮ್ಮದ್ ಅಜೀಜ್, ಜಾವೇದ್ ಹಸನ್ ಮತ್ತು ಮಹಮ್ಮದ್ ಅಹ್ಮದ್ ಈ ಕಾರ್ಯಾಚರಣೆಗೆ ಕಾರಣರಾದವರಾಗಿದ್ದಾರೆ. ಪಾಕ್ ಆಪರೇಷನ್ ಬದ್ರ್ ಹೆಸರಿನಲ್ಲಿ ಕಾಶ್ಮೀರವನ್ನು ವಶಪಡಿಸಿಕೊಳ್ಳುವ ಕಾರ್ಯಾಚರಣೆ ನಡೆಸಿತು. ಪಾಕಿಸ್ತಾನದ ಕಾರ್ಯಾಚರಣೆಯ ಬಗ್ಗೆ ತಿಳಿದ ನಂತರ, ಭಾರತ ಆಪರೇಷನ್ ವಿಜಯ್ ಹೆಸರಿನಲ್ಲಿ ಕಾರ್ಯಾಚರಣೆ ಪ್ರಾರಂಭಿಸಿತು.
ಕಾಶ್ಮೀರದ ಕಾರ್ಗಿಲ್ ಪ್ರದೇಶದಲ್ಲಿ ಭಾರತ ಮತ್ತು ಪಾಕಿಸ್ತಾನದ ಲೈನ್ ಆಫ್ ಕಂಟ್ರೋಲ್ ಇದೆ. ಈ ಪ್ರದೇಶದಲ್ಲಿ ಚಳಿಗಾಲದಲ್ಲಿ ತಾಪಮಾನ ಮೈನಸ್ ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುತ್ತದೆ. ಆ ಸಮಯದಲ್ಲಿ ಭಾರತೀಯ ಸೈನಿಕರು ಮತ್ತು ಪಾಕ್ ಸೈನಿಕರು ಅಲ್ಲಿಂದ ಸ್ಥಳಾಂತರಗೊಳ್ಳುತ್ತಾರೆ. ಈ ಸಂದರ್ಭವನ್ನು ಬಳಸಿಕೊಂಡು, 1999 ರಲ್ಲಿ ಮೋಸದಿಂದ ಪಾಕಿಸ್ತಾನಿ ಸೈನಿಕರು ಕಾಶ್ಮೀರಿ ಉಗ್ರಗಾಮಿಗಳ ವೇಷದಲ್ಲಿ ರಹಸ್ಯವಾಗಿ ನಿಯಂತ್ರಣ ರೇಖೆಯನ್ನು (LoC) ದಾಟಿ ಲಡಾಖ್‌ನ ಕಾರ್ಗಿಲ್, ಡ್ರಾಸ್, ಬಟಾಲಿಕ್ ಮತ್ತು ಕಕ್ಸರ್ ವಲಯಗಳಲ್ಲಿನ ಭಾರತೀಯ ಪೋಸ್ಟ್‌ಗಳನ್ನು ವಶಪಡಿಸಿಕೊಂಡರು. ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿ (NH-1A) ಅನ್ನು ಕಡಿತಗೊಳಿಸುವುದು ಮತ್ತು ಭಾರತೀಯ ಸೇನೆಯ ಸರಬರಾಜುಗಳನ್ನು ಅಡ್ಡಿಪಡಿಸುವುದು ಅವರ ಗುರಿಯಾಗಿತ್ತು. ಪಾಕಿಸ್ತಾನಿ ಸೈನಿಕರು ಒಳನುಸುಳಿರುವ ಬಗ್ಗೆ ತಿಳಿಯುತ್ತಿದ್ದಂತೆ ಭಾರತ ಸರ್ಕಾರವು “ಆಪರೇಷನ್ ವಿಜಯ್” ಕಾರ್ಯಾಚರಣೆಯನ್ನು ಪ್ರಾರಂಭಿಸಿತು. 20 ಸಾವಿರ ಸೈನಿಕರನ್ನು ನಿಯೋಜಿಸಿ, ಪಾಕಿಸ್ತಾನಿ ಸೈನಿಕರನ್ನು ತನ್ನ ಭೂಪ್ರದೇಶದಿಂದ ಹೊರಹಾಕುವಲ್ಲಿ ಸೇನೆ ಯಶಸ್ವಿಯಾಯಿತು.
ಇದನ್ನೂ ಓದಿ: ತ್ರಿವರ್ಣ ಧ್ವಜ ಭಾರತದ ಹೆಮ್ಮೆಯ ಸಂಕೇತ
1999 ಮೇ 5 ರಂದು ಅತಿಕ್ರಮಣ ನಡೆದ ಬಗ್ಗೆ ತಿಳಿದ ನಂತರ, ಭಾರತ ಆಪರೇಷನ್ ವಿಜಯ್ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಪಾಕ್ ಸೇನೆ ವಶಪಡಿಸಿಕೊಂಡ ಭಾರತದ ಪ್ರತಿಯೊಂದು ಭೂಪ್ರದೇಶವನ್ನು ಮರಳಿ ಪಡೆಯುವುದು ಒಂದೇ ಭಾರತೀಯ ಸೇನೆಯ ಗುರಿಯಾಗಿತ್ತು. ಸೈನಿಕರು ನಿಯಂತ್ರಣ ರೇಖೆಯನ್ನು ದಾಟದೆ ಅತ್ಯಂತ ಕಷ್ಟಕರ ಪರಿಸ್ಥಿತಿಗಳಲ್ಲಿ ಈ ಯುದ್ಧವನ್ನು ನಡೆಸಿದರು. ರಾತ್ರಿಯ ಕತ್ತಲೆಯಲ್ಲಿ ಸಾವಿರಾರು ಅಡಿ ಹಿಮದಿಂದ ಆವೃತವಾದ ಶಿಖರಗಳನ್ನು ಹತ್ತುವುದು ಮತ್ತು ಶತ್ರುಗಳ ಗುಂಡಿನ ದಾಳಿಯ ನಡುವೆ ಮುನ್ನಡೆಯುವುದು ಈ ಕಾರ್ಯಾಚರಣೆಯ ದೊಡ್ಡ ಸವಾಲಾಗಿತ್ತು. ಈ ಸವಾಲುಗಳನ್ನು ಲೆಕ್ಕಿಸದೆ ಭಾರತೀಯ ಯೋಧರು ಕೆಚ್ಚೆದೆಯಿಂದ ಹೋರಾಟ ನಡೆಸಿದರು.
ಯುದ್ಧದ ಸಮಯದಲ್ಲಿ ಟೋಲೋಲಿಂಗ್, ಟೈಗರ್ ಹಿಲ್ ಮತ್ತು ಪಾಯಿಂಟ್ 4875 ನಿರ್ಣಾಯಕ ಶಿಖರಗಳಾಗಿದ್ದವು. ಭಾರತೀಯ ಸೈನಿಕರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಈ ಶಿಖರಗಳನ್ನು ಮರಳಿ ವಶಪಡಿಸಿಕೊಂಡರು. ಟೈಗರ್ ಹಿಲ್‌ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದರು, ಇದು ಯುದ್ಧದ ಅತ್ಯಂತ ಸ್ಮರಣೀಯ ಕ್ಷಣವಾಯಿತು. ಜುಲೈ 26, 1999 ರ ವೇಳೆಗೆ ಭಾರತೀಯ ಸೇನೆಯು ಕಾರ್ಗಿಲ್‌ನ ಎಲ್ಲಾ ಶಿಖರಗಳನ್ನು ಶತ್ರು ರಾಷ್ಟ್ರದಿಂದ ಮುಷ್ಠಿಯಿಂದ ಮುಕ್ತಗೊಳಿಸಿತು. ಭಾರತಕ್ಕೆ ದೊರೆತ ಈ ಗೆಲುವು ನಮ್ಮ ದೇಶ, ಸೇನೆಯ ಶಕ್ತಿ ಮತ್ತು ಸಂಯಮ ಎರಡನ್ನೂ ಜಗತ್ತಿಗೆ ಪ್ರದರ್ಶಿಸಿತು.
ಮೈನಸ್ ಡಿಗ್ರಿ ತಾಪಮಾನ, ಆಮ್ಲಜನಕದ ಕೊರತೆ, ಹಿಮಾವೃತ ಗಾಳಿ ಇದ್ಯಾವುದನ್ನೂ ಲೆಕ್ಕಿಸದೆ ಕಡಿದಾದ ಪರ್ವತಗಲ್ಲಿಯೂ ಸಹ ನಮ್ಮ ಹೆಮ್ಮೆಯ ಸೈನಿಕರು ಮಾತೃಭೂಮಿಯ ರಕ್ಷಣೆಗಾಗಿ ಹೋರಾಡಿದರು. ಕಾರ್ಗಿಲ್ ಯುದ್ಧದ ಸಮಯದಲ್ಲಿ, ಕ್ಯಾಪ್ಟನ್ ವಿಕ್ರಮ್ ಬಾತ್ರಾ, ಕ್ಯಾಪ್ಟನ್ ಅನುಜ್ ನಯ್ಯರ್, ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್ ಮತ್ತು ರೈಫಲ್‌ಮ್ಯಾನ್ ಸಂಜಯ್ ಕುಮಾರ್ ಸೇರಿದಂತೆ ಅನೇಕ ಸೈನಿಕರು ಗಮನಾರ್ಹ ಧೈರ್ಯವನ್ನು ಪ್ರದರ್ಶಿಸಿದರು. ಈ ಯುದ್ಧದಲ್ಲಿ ಸುಮಾರು 545 ಭಾರತೀಯ ಸೈನಿಕರು ಹುತಾತ್ಮರಾದರು ಮತ್ತು 1,000 ಕ್ಕೂ ಹೆಚ್ಚು ಜನರು ಗಾಯಗೊಂಡರು. ಇವರಲ್ಲಿ, ಅದಮ್ಯ ಧೈರ್ಯವನ್ನು ಪ್ರದರ್ಶಿಸಿದ ನಾಲ್ವರು ಸೈನಿಕರಿಗೆ ಪರಮ ವೀರ ಚಕ್ರ, 10 ಸೈನಿಕರಿಗೆ ಮಹಾವೀರ ಚಕ್ರ ಮತ್ತು 70 ಜನರಿಗೆ ವೀರ ಚಕ್ರಗಳನ್ನು ನೀಡಿ ಗೌರವಿಸಲಾಯಿತು.
ಜುಲೈ 26 ಕೇವಲ ಒಂದು ದಿನವಲ್ಲ, ಅದು ದೇಶಭಕ್ತಿ, ಏಕತೆ ಮತ್ತು ತ್ಯಾಗದ ಸಂಕೇತವಾಗಿದೆ. ದ್ರಾಸ್‌ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕ, ಅಲ್ಲಿ ಹಾರಾಡುತ್ತಿರುವ ತ್ರಿವರ್ಣ ಧ್ವಜ ಮತ್ತು ಹುತಾತ್ಮರ ಹೆಸರುಗಳು ಇಂದಿಗೂ ಪ್ರತಿಯೊಬ್ಬ ಭಾರತೀಯನಿಗೂ ನಮ್ಮ ಸೈನಿಕರು ಭಾರತದ ಸಾರ್ವಭೌಮತ್ವ ಮತ್ತು ಏಕತೆಯನ್ನು ರಕ್ಷಿಸಲು ಎಂತಹ ತ್ಯಾಗಕ್ಕೂ ಸಿದ್ಧರಿದ್ದಾರೆ ಎಂಬ ಸಂದೇಶವನ್ನು ರವಾನಿಸುತ್ತವೆ. ಒಟ್ಟಾರೆಯಾಗಿ ಕಾರ್ಗಿಲ್ ವಿಜಯ ದಿವಸ ದೇಶದ ಸಾರ್ವಭೌಮತ್ವವನ್ನು ರಕ್ಷಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ವೀರ ಯೋಧರನ್ನು ಸ್ಮರಿಸುತ್ತದೆ ಮತ್ತು ರಾಷ್ಟ್ರವನ್ನು ರಕ್ಷಿಸುವಲ್ಲಿ ಯೋಧರ ಶೌರ್ಯ ಮತ್ತು ಸ್ಥೈರ್ಯವನ್ನು ಗೌರವಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ