AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

National Flag Day 2026: ತ್ರಿವರ್ಣ ಧ್ವಜ ಭಾರತದ ಹೆಮ್ಮೆಯ ಸಂಕೇತ

ಭಾರತದ ರಾಷ್ಟ್ರೀಯ ಧ್ವಜವಾದ ತ್ರಿವರ್ಣ ಧ್ವಜವು ದೇಶದ ಸ್ವಾತಂತ್ರ್ಯ, ಏಕತೆ, ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಹೆಮ್ಮೆಯ ಸಂಕೇತವಾಗಿದೆ. ಭಾರತವು ಈ ತ್ರಿವರ್ಣ ಧ್ವಜವನ್ನು ಅಳವಡಿಸಿಕೊಂಡ ದಿನವನ್ನು ಗೌರವಿಸುವ ಸಲುವಾಗಿ ಪ್ರತಿವರ್ಷ ಜುಲೈ 22 ರಂದು ರಾಷ್ಟ್ರೀಯ ಧ್ವಜ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನವು ಭಾರತದ ಏಕತೆ, ಸಮಗ್ರತೆ ಮತ್ತು ಸಾರ್ವಭೌಮತ್ವದ ಸಂಕೇತವನ್ನು ಗೌರವಿಸುವ ಮಹತ್ವವನ್ನು ಹೊಂದಿದೆ.

National Flag Day 2026: ತ್ರಿವರ್ಣ ಧ್ವಜ ಭಾರತದ ಹೆಮ್ಮೆಯ ಸಂಕೇತ
ರಾಷ್ಟ್ರೀಯ ಧ್ವಜ ದಿನImage Credit source: Getty Images
ಮಾಲಾಶ್ರೀ ಅಂಚನ್​
|

Updated on:Jul 21, 2026 | 9:50 PM

Share

ತ್ರಿವರ್ಣ ಧ್ವಜವು (National Flag) ಕೇವಲ ಧ್ವಜವಲ್ಲ, ಅದು ಭಾರತದ ಸ್ವಾತಂತ್ರ್ಯ, ಏಕತೆ, ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಶೌರ್ಯ, ತ್ಯಾಗದ ಅಮರ ಸಂಕೇತವಾಗಿದೆ. ತ್ರಿವರ್ಣ ಧ್ವಜವನ್ನು ನೋಡಿದಾಗ ಪ್ರತಿಯೊಬ್ಬರ ಭಾರತೀಯರಲ್ಲೂ ದೇಶಭಕ್ತಿಯ ಭಾವನೆ ಜಾಗೃತಗೊಳ್ಳುತ್ತದೆ. ಭಾರತ ಮಾತೆಯನ್ನು ಸ್ವತಂತ್ರಗೊಳಿಸಲು ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಹೋರಾಟ ಮತ್ತು ಬಲಿದಾನವನ್ನು ಇದು ನೆನಪಿಸುತ್ತದೆ. ತ್ರಿವರ್ಣ ಧ್ವಜವು ಆಕಾಶದೆತ್ತರ ಹಾರಿದಾಗಲೆಲ್ಲಾ, ಇದು ಭಾರತದ ಏಕತೆ, ಸಮಗ್ರತೆ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ರಕ್ಷಿಸುವುದು ಅತ್ಯುನ್ನತವಾದುದು ಎಂಬ ಸಂದೇಶವನ್ನು ರವಾನಿಸುತ್ತದೆ. ತ್ರಿವರ್ಣ ಧ್ವಜದ ಈ ಮಹತ್ವ ಮತ್ತು ಭಾರತವು ಈ ತ್ರಿವರ್ಣ ಧ್ವಜವನ್ನು ಅಳವಡಿಸಿಕೊಂಡ ದಿನವನ್ನು ಗೌರವಿಸುವ ಸಲುವಾಗಿ ಪ್ರತಿವರ್ಷ ಜುಲೈ 22 ರಂದು ರಾಷ್ಟ್ರೀಯ ಧ್ವಜ ದಿನವನ್ನು ಆಚರಿಸಲಾಗುತ್ತದೆ.

ರಾಷ್ಟ್ರೀಯ ಧ್ವಜ ದಿನದ ಇತಿಹಾಸವೇನು?

ಆಗಸ್ಟ್ 15, 1947 ರಂದು ಬ್ರಿಟಿಷ್ ಆಳ್ವಿಕೆಯಿಂದ ದೇಶ ಸ್ವಾತಂತ್ರ್ಯ ಪಡೆಯುವ ಕೆಲವೇ ದಿನಗಳ ಮೊದಲು, ಸಂವಿಧಾನ ಸಭೆಯು ಜುಲೈ 22, 1947 ರಂದು ಅಧೀಕೃತವಾಗಿ ತ್ರಿವರ್ಣ ಧ್ವಜವನ್ನು ಭಾರತದ ರಾಷ್ಟ್ರೀಯ ಧ್ವಜವಾಗಿ ಅಂಗೀಕರಿಸಿತು. ಭಾರತದ ರಾಷ್ಟ್ರೀಯ ಧ್ವಜವನ್ನು ಅಳವಡಿಸಿಕೊಂಡದ್ದನ್ನು ಸ್ಮರಿಸುವ ಸಲುವಾಗಿ ನಮ್ಮ ದೇಶದಲ್ಲಿ ಪ್ರತಿವರ್ಷ ಜುಲೈ  22 ರಂದು ರಾಷ್ಟ್ರೀಯ ಧ್ವಜ ದಿನವನ್ನು ಆಚರಿಸಲಾಗುತ್ತದೆ. ಮಾಹಿತಿಗಳ ಪ್ರಕಾರ, ಭಾರತದ ಏಕತೆ, ಸಮಗ್ರತೆ ಮತ್ತು ಸಾರ್ವಭೌಮತ್ವದ ಸಂಕೇತವನ್ನು ಗೌರವಿಸುವ ಈ ದಿನವು ಹೆಚ್ಚಿನ  ಮಹತ್ವವನ್ನು ಹೊಂದಿದೆ.

ರಾಷ್ಟ್ರೀಯ ಧ್ವಜ ದಿನದ ಮಹತ್ವವೇನು?

  • ರಾಷ್ಟ್ರೀಯ ಧ್ವಜ ದಿನವು ಕೇವಲ ಧ್ವಜವನ್ನು ಗೌರವಿಸುವ ದಿನವಲ್ಲ, ಇದು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಮೌಲ್ಯಗಳು ಮತ್ತು ತ್ಯಾಗಗಳನ್ನು ನಾವೆಲ್ಲರೂ ಸ್ಮರಿಸಲು ಒಂದು ಅವಕಾಶವಾಗಿ ಕಾರ್ಯನಿರ್ವಹಿಸುತ್ತದೆ.
  • ರಾಷ್ಟ್ರೀಯ ಧ್ವಜ ದಿನವು ದೇಶದ ಶ್ರೀಮಂತ ಪರಂಪರೆ, ವೈವಿಧ್ಯಮಯ ಸಂಸ್ಕೃತಿ ಹಾಗೂ ನಮ್ಮ ದೇಶ ಪ್ರಗತಿ ಮತ್ತು ಏಕತೆಯ ಕಡೆಗೆ ನಡೆಯುತ್ತಿರುವ ಪ್ರಯಾಣವನ್ನು ಪ್ರತಿನಿಧಿಸುತ್ತದೆ.
  • ರಾಷ್ಟ್ರೀಯ ಧ್ವಜ ದಿನವು ಕೇವಲ ಒಂದು ಐತಿಹಾಸಿಕ ಘಟನೆಯ ಸ್ಮರಣೆಯಲ್ಲ, ಬದಲಾಗಿ ಪ್ರತಿಯೊಬ್ಬ ಭಾರತೀಯನಿಗೂ ನಮ್ಮ ರಾಷ್ಟ್ರೀಯ ಧ್ವಜದ ಮಹತ್ವ ಮತ್ತು ಗೌರವದ ಬಗ್ಗೆ ಅರಿವು ಮೂಡಿಸುವ ಸಂದರ್ಭವಾಗಿದೆ.
  • ಹೊಸ ಪೀಳಿಗೆಗಳಿಗೆ ತ್ರಿವರ್ಣ ಧ್ವಜದ ಇತಿಹಾಸ ಮತ್ತು ಪರಂಪರೆಯನ್ನು ಪರಿಚಯಿಸುವುದು, ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಯ ಚೈತನ್ಯವನ್ನು ಬಲಪಡಿಸುವುದು, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಗಳನ್ನು ಸ್ಮರಿಸುವುದು, ಸಂವಿಧಾನ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳಿಗೆ ಗೌರವವನ್ನು ಬೆಳೆಸುವುದು ಮತ್ತು ದೇಶಭಕ್ತಿ ಮತ್ತು ನಾಗರಿಕ ಕರ್ತವ್ಯದ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ.

ಇದನ್ನೂ ಓದಿ: ಅಂತಾರಾಷ್ಟ್ರೀಯ ಚೆಸ್ ದಿನದ ಇತಿಹಾಸ, ಮಹತ್ವ ತಿಳಿಯಿರಿ

ತ್ರಿವರ್ಣ ಧ್ವಜದ ವಿನ್ಯಾಸ ಮತ್ತು ಅದರ ಬಣ್ಣಗಳ ಮಹತ್ವ:

” ತಿರಂಗ ” ಎಂದು ಕರೆಯಲ್ಪಡುವ ಭಾರತ ರಾಷ್ಟ್ರ ಧ್ವಜವು ಸಮಾನ ಅಗಲದ ಮೂರು ಅಡ್ಡ ಪಟ್ಟೆಗಳನ್ನು ಹೊಂದಿದೆ. ಬಿಳಿ ಪಟ್ಟಿಯ ಮಧ್ಯದಲ್ಲಿ 24 ಕಡ್ಡಿಗಳನ್ನು ಹೊಂದಿರುವ ಕಡು ನೀಲಿ ಅಶೋಕ ಚಕ್ರವಿದೆ. ಮತ್ತು ಈ ತ್ರಿವರ್ಣ ಧ್ವಜವು  2:3 ಅನುಪಾತದಲ್ಲಿವೆ. ಈ ವಿನ್ಯಾಸವು ಆಳವಾದ ಸಂಕೇತಗಳನ್ನು ಹೊಂದಿದ್ದು, ಭಾರತೀಯ ರಾಷ್ಟ್ರದ ಮೌಲ್ಯಗಳು ಮತ್ತು ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ. ತ್ರಿವರ್ಣ ಧ್ವಜದಲ್ಲಿರುವ ಕೇಸರಿ ಬಣ್ಣವು ಧೈರ್ಯ, ತ್ಯಾಗ ಮತ್ತು ರಾಷ್ಟ್ರದ ಮೇಲಿನ ಭಕ್ತಿಯನ್ನು ಸಂಕೇತಿಸುತ್ತದೆ. ಬಿಳಿ ಬಣ್ಣವು  ಶಾಂತಿ, ಸತ್ಯವನ್ನು ಸಂಕೇತಿಸುತ್ತದೆ, ಮತ್ತು ಹಸಿರು ಬಣ್ಣವು ಸಮೃದ್ಧಿ, ಅಭಿವೃದ್ಧಿ ಮತ್ತು ಶುಭದ ಸಂಕೇತವಾಗಿದೆ. ಇನ್ನೂ ತ್ರಿವರ್ಣ ಧ್ವಜದ ಮಧ್ಯದಲ್ಲಿರುವ ಅಶೋಕ ಚಕ್ರವು ಧೈರ್ಯ, ತಾಳ್ಮೆ, ಸ್ವಯಂ ತ್ಯಾಗ, ಸತ್ಯತೆ, ಸದಾಚಾರ, ಪ್ರೀತಿ, ಆಧ್ಯಾತ್ಮಿಕ ಜ್ಞಾನ, ನೈತಿಕತೆ, ಕಲ್ಯಾಣ, ಉದ್ಯಮ, ಸಮೃದ್ಧಿ ಮತ್ತು ನಂಬಿಕೆಯಂತಹ ತತ್ವಗಳನ್ನು ಪ್ರತಿನಿಧಿಸುತ್ತವೆ. ಅಲ್ಲದೆ ಅಶ್ರೋಕ ಚಕ್ರದ ಕಡ್ಡಿಗಳು ದಿನದ ಇಪ್ಪತ್ತನಾಲ್ಕು ಗಂಟೆಗಳನ್ನು ಪ್ರತಿನಿಧಿಸುವುದರಿಂದ ಇದನ್ನು ಸಮಯದ ಚಕ್ರ ಎಂದೂ ಸಹ ಕರೆಯಲಾಗುತ್ತದೆ.

ತ್ರಿವರ್ಣ ಧ್ವಜವನ್ನು ಹಾರಿಸುವಾಗ, ಇಳಿಸುವಾಗ ಪಾಲಿಸಬೇಕಾದ ನಿಯಮಗಳೇನು?

  • ಧ್ವಜವನ್ನು ಯಾವಾಗಲೂ ಗೌರವಯುತವಾಗಿ ಹಾರಿಸಬೇಕು ಮತ್ತು ಘನತೆಯಿಂದ ನಿಧಾನವಾಗಿ ಕೆಳಗಿಳಿಸಬೇಕು. ಕೆಳಗಿಳಿಸಿದ ನಂತರ ಅದನ್ನು ಮಡಚಿ ಸುರಕ್ಷಿತ ಸ್ಥಳದಲ್ಲಿಡಬೇಕು.
  •  ತ್ರಿವರ್ಣ ಧ್ವಜವನ್ನು ಎಂದಿಗೂ ತಲೆ ಕೆಳಗಾಗಿ ಪ್ರದರ್ಶಿಸಬಾರದು. ಮೇಲಿನ ಫಲಕದ ಬಣ್ಣವು ಕೇಸರಿ, ಮಧ್ಯ ಬಿಳಿ ಮತ್ತು ಕೆಳಗಿನ ಫಲಕವು ಹಸಿರು ಬಣ್ಣದ್ದಾಗಿರಬೇಕು.
  • ಹಾನಿಗೊಳಗಾದ ಅಥವಾ ಸ್ವಚ್ಛವಾಗಿರದ ಧ್ವಜವನ್ನು ಎಂದಿಗೂ ಪ್ರದರ್ಶಿಸಬಾರದು. ನೀವು ಹಾರಿಸುವ ರಾಷ್ಟ್ರ ಧ್ವಜ ಪರಿಪೂರ್ಣ ಸ್ಥಿತಿಯಲ್ಲಿ ಇರಬೇಕು.
  • ಧ್ವಜ ಸಂಹಿತೆಯ ಪ್ರಕಾರ, ಕೈಯಿಂದ ನೇಯ್ದ, ಯಂತ್ರದಿಂದ ತಯಾರಿಸಿದ ಹತ್ತಿ, ಪಾಲಿಯೆಸ್ಟರ್, ಉಣ್ಣೆ ಅಥವಾ ರೇಷ್ಮೆ ಖಾದಿ ಬಂಟಿಂಗ್‌ನಿಂದ ತಯಾರಿಸಿದ ರಾಷ್ಟ್ರ ಧ್ವಜಗಳನ್ನು ಹಾರಿಸಬಹುದು.
  • ಧ್ವಜದ ಗಾತ್ರ ಏನೇ ಇರಲಿ ಧ್ವಜ ಸಂಹಿತೆಯ ಪ್ರಕಾರ ತ್ರಿವರ್ಣ ಧ್ವಜ 3:2 ಅನುಪಾತದಲ್ಲಿರಬೇಕು. ಮತ್ತು ಧ್ವಜದ ಮಧ್ಯ ಭಾಗವು 24 ಸಮಾನ ಅಂತರದ ಗೆರೆಗಳೊಂದಿಗೆ ಕಡು ನೀಲಿ ಬಣ್ಣದಲ್ಲಿನ ಅಶೋಕ ಚಕ್ರವನ್ನು ಹೊಂದಿರಬೇಕು.
  • ಒಂದು ವೇಳೆ ತ್ರಿವರ್ಣ ಧ್ವಜ ಹಾನಿಗೊಳಗಾದರೆ ಅದನ್ನು ಕಸದ ಬುಟ್ಟಿ ಅಥವಾ ಇನ್ನಾವುದೇ ಸ್ಥಳದಲ್ಲಿ ಎಸೆಯಬಾರದು ಬದಲಿಗೆ ಗೌರವಯುತವಾಗಿ ಸುಡಬೇಕು ಅಥವಾ ಹೂಳಬೇಕು. ಸುಟ್ಟ ನಂತರ ಆ ಬೂದಿಯನ್ನು ನದಿ ನೀರಿನಲ್ಲಿ ಬಿಡಬೇಕು.
  • ಧ್ವಜವನ್ನು ಸಾರ್ವಜನಿಕವಾಗಿ ಉದ್ದೇಶಪೂರ್ವಕವಾಗಿ ಹರಿದು ಹಾಕಬಾರದು, ಸುಡಬಾರದು ಅಥವಾ ವಿರೂಪಗೊಳಿಸಬಾರದು, ಏಕೆಂದರೆ ಇದು ಅಪರಾಧವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:49 pm, Tue, 21 July 26

Follow Us