ಈ ಬೇಸಿಗೆಯಲ್ಲಿ ಸಾಹಸಮಯ ಸ್ಥಳಗಳಿಗೆ ಭೇಟಿ ನೀಡಿ, ಆದರೆ ಅಲ್ಲಿ ಯಾವ ಕೆಲಸ ಮಾಡಬೇಕು ಮತ್ತು ಮಾಡಬಾರದು? ಇಲ್ಲಿದೆ ಮಾಹಿತಿ
ಸಾಹಸ ಕ್ರೀಡೆಗಳನ್ನು ಪ್ರಯತ್ನಿಸಲು ಬೇಸಿಗೆ ಸೂಕ್ತ ಸಮಯ. ಆದರೆ ಸುರಕ್ಷತೆ ಮೊದಲ ಆದ್ಯತೆಯಾಗಿರಬೇಕು. ಕೆಲವು ಭಾರಿ ಮೋಜು ಮಾಡುವ ಬರದಲ್ಲಿ ನಾವು ಸುರಕ್ಷತೆ ಕಡೆಗೆ ಗಮನಹರಿಸುವುದಿಲ್ಲ. ಒಳ್ಳೆಯ ಅನುಭವದ ಜೊತೆಗೆ ಜಾಗೃತಿಯೂ ಮುಖ್ಯ. ಹಾಗಾಗಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಬೇಸಗೆ ಎಂದರೆ ನೆನಪಾಗುವುದು ರಜೆಯ ಮಜಾ. ಎಲ್ಲರೂ ಒಂದೊಂದು ರೀತಿಯಲ್ಲಿ ರಜೆಯನ್ನು ಕಳೆಯಲು ಎಲ್ಲ ಸಿದ್ಧತೆ ಮಾಡಿಕೊಂಡಿರುತ್ತಾರೆ. ಕೆಲವರು ತಮ್ಮ ತಮ್ಮ ಸಂಬಂಧಿಕರ ಮನೆಗೆ ತೆರಳುತ್ತಾರೆ, ಇನ್ನು ಕೆಲವರು ಮನೆಯಲ್ಲಿಯೇ ಇರುತ್ತಾರೆ, ಮತ್ತೆ ಕೆಲವರು ಸಾಹಸ ಭರಿತವಾಗಿ ರಜೆಯನ್ನು ಪ್ರಾರಂಭಿಸಲು ಉಸ್ತುಕರಾಗಿರುತ್ತಾರೆ. ಇಂತಹ ಮನೋರಂಜನೆಗೆ ಇದು ಸೂಕ್ತ ಸಮಯ. ಅಲ್ಲದೆ ಅಡ್ರಿನಾಲಿನ್-ಪಂಪಿಂಗ್ ಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳಬಹುದು. ವೈಟ್ ವಾಟರ್ ರಾಫ್ಟಿಂಗ್ ಮತ್ತು ಬಂಗಿ ಜಂಪಿಂಗ್ ನಿಂದ ಹಿಡಿದು ರಾಕ್ ಕ್ಲೈಂಬಿಂಗ್ ಮತ್ತು ಸ್ಕೈಡೈವಿಂಗ್ ವರೆಗೆ, ಆಯ್ಕೆ ಮಾಡಲು ಸಾಕಷ್ಟು ಸಾಹಸ ಕ್ರೀಡೆಗಳಿವೆ. ಆದರೆ ಈ ಚಟುವಟಿಕೆಗಳು ಎಷ್ಟು ರೋಮಾಂಚನಕಾರಿ ಹಾಗೂ ಉಲ್ಲಾಸಕರವಾಗಿದೆಯೋ ಅಷ್ಟೇ ಅಪಾಯ ಮತ್ತು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ದರೆ ಈ ಕ್ರೀಡೆಗಳು ಸಹ ನಿಮಗೆ ತುಂಬಾ ಅಪಾಯಕಾರಿಯಾಗಬಹುದು. ನೀವು ಸುರಕ್ಷಿತವಾಗಿರಲು ಸಾಹಸ ಕ್ರೀಡೆಗಳನ್ನು ಪ್ರಯತ್ನಿಸುವಾಗ ಕೆಲವು ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳನ್ನು ಅನುಸರಿಸುವುದು ಉತ್ತಮ.
ಈ ಬೇಸಿಗೆಯಲ್ಲಿ ಸಾಹಸ ಕ್ರೀಡೆಗಳನ್ನು ಪ್ರಯತ್ನಿಸಲು ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳ ಬಗ್ಗೆ ಜಂಪಿನ್ ಹೈಟ್ಸ್ನ ಬಿಸಿನೆಸ್ ಡೆವಲಪ್ಮೆಂಟ್ ನಿರ್ದೇಶಕಿ ನಿಹಾರಿಕಾ ನಿಗಮ್ ಅವರು ಎಚ್ಟಿ ಲೈಫ್ಸ್ ಸ್ಟೈಲ್ ನೊಂದಿಗೆ ಹಂಚಿಕೊಂಡಿದ್ದಾರೆ. ಸಾಹಸ ಕ್ರೀಡೆಗಳನ್ನು ಪ್ರಯತ್ನಿಸುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳ ಬಗ್ಗೆ ಇಲ್ಲಿದೆ ಮಾಹಿತಿ
ಮಾಡಬೇಕಾದ ಕೆಲಸಗಳು:
1. ಆಟ ಅಥವಾ ಚಟುವಟಿಕೆಯನ್ನು ಬಗ್ಗೆ ಮುಂಚಿತವಾಗಿ ತಿಳಿದುಕೊಳ್ಳಿ: ಯಾವುದೇ ಸಾಹಸ ಕ್ರೀಡೆಯನ್ನು ಪ್ರಯತ್ನಿಸುವ ಮೊದಲು, ನಿಮ್ಮ ಸಂಶೋಧನೆ ಅಥವಾ ಆ ಚಟುವಟಿಕೆಯ ಬಗ್ಗೆ ನಿಮಗೆ ತಿಳಿದಿರುವುದು ಬಹಳ ಮುಖ್ಯ. ಅವು ಒಳಗೊಂಡಿರುವ ಅಪಾಯಗಳು, ಅದಕ್ಕೆ ಅಗತ್ಯವಿರುವ ಸಲಕರಣೆಗಳು ಮತ್ತು ಬೇಕಾಗಬಹುದಾದ ತರಬೇತಿಯ ಬಗ್ಗೆ ತಿಳಿದುಕೊಳ್ಳಿ. ಚಟುವಟಿಕೆಗೆ ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಿದ್ಧರಿದ್ದೀರಾ ಎಂದು ಮೊದಲು ತಿಳಿದುಕೊಳ್ಳಿ. ನಿಮ್ಮ ಮನಸ್ಸಿಗೆ ತುಂಬಾ ಭಯವಿದ್ದಲ್ಲಿ ನೀವು ಇದರ ಬಗ್ಗೆ ಯೋಚಿಸುವುದು ಒಳ್ಳೆಯದು.
2. ಅಗತ್ಯವಿರುವ ಧಿರಿಸು, ಸುರಕ್ಷತಾ ಸಾಧನ ಬಳಸಿ: ಸಾಹಸ ಕ್ರೀಡೆಗಳಿಗೆ ಬಂದಾಗ ಸರಿಯಾದ ಸುರಕ್ಷತಾ ಸಾಧನ ಬಳಸುವುದು ಅತ್ಯಗತ್ಯ. ನೀವು ಹೆಲ್ಮೆಟ್, ಹಾರ್ನೆಸ್ ಮತ್ತು ಲೈಫ್ ಜಾಕೆಟ್ ಗಳಂತಹ ಸೂಕ್ತ ಸುರಕ್ಷತಾ ಸಾಧನಗಳನ್ನು ಬಳಸುವುದನ್ನು ಮರೆಯಬೇಡಿ. ಅಲ್ಲದೆ, ಚಟುವಟಿಕೆಗೆ ಮತ್ತು ಹವಾಮಾನಕ್ಕೆ ಸೂಕ್ತವಾಗಿರುವ ಉಡುಪನ್ನೇ ಧರಿಸಿ.
3. ವೃತ್ತಿಪರರಿಂದ ತರಬೇತಿ ಪಡೆಯಿರಿ: ಹೆಚ್ಚಿನ ಸಾಹಸ ಕ್ರೀಡೆಗಳಿಗೆ ಸ್ವಲ್ಪ ಮಟ್ಟದ ತರಬೇತಿಯ ಅಗತ್ಯವಿರುತ್ತದೆ. ಕ್ರೀಡೆಯಲ್ಲಿ ಅನುಭವ ಹೊಂದಿರುವ ವೃತ್ತಿಪರರಿಂದ ತರಬೇತಿ ಪಡೆಯುವುದು ಮುಖ್ಯ. ಅವರು ನಿಮಗೆ ಸರಿಯಾದ ರೀತಿಯಲ್ಲಿ ಮತ್ತು ಕೆಲವು ತಂತ್ರಗಳ ಮೂಲಕ ಕಲಿಸಬಹುದು ಹಾಗೂ ಇದರಿಂದ ಅಗತ್ಯ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ನಿಮಗೆ ಸಹಾಯ ಮಾಡಬಹುದು.
4. ನಿಮ್ಮ ಬೋಧಕರು ನೀಡುವ ಮಾಹಿತಿಯನ್ನು ಸರಿಯಾಗಿ ಆಲಿಸಿ: ನಿಮ್ಮನ್ನು ಮುನ್ನಡೆಸಲು ಮತ್ತು ಸುರಕ್ಷಿತವಾಗಿಡಲು ನೀವು ನಿಮ್ಮ ಬೋಧಕರನ್ನು ಅವಲಂಬಿಸಬೇಕಾಗುತ್ತದೆ. ಹಾಗಾಗಿ ಯಾವುದೇ ಪ್ರಶ್ನೆಗಳನ್ನು ಕೇಳಲು ಅಥವಾ ನಿಮಗೆ ಗೊಂದಲವನ್ನು ವ್ಯಕ್ತಪಡಿಸಲು ಹಿಂಜರಿಯಬೇಡಿ.
5. ನೀರಿನಾಂಶ ಹೊಂದಿರಬೇಕು: ನೀವು ಬಿಸಿಲಿನಲ್ಲಿ ಚಟುವಟಿಕೆಗಳನ್ನು ಮಾಡುತ್ತಿರುವಾಗ ಹೆಚ್ಚಾಗಿ ನೀರಿನಾಂಶದಿಂದ ನಿಮ್ಮ ದೇಹ ಇರಬೇಕು. ಚಟುವಟಿಕೆಯ ಮೊದಲು ಮತ್ತು ನಂತರ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ತುಂಬಾ ಅವಶ್ಯಕ. ನೀವು ನಿಮ್ಮೊಂದಿಗೆ ಹೈಡ್ರೇಷನ್ ಪ್ಯಾಕ್ ಅನ್ನು ಸಹ ಒಯ್ಯಬಹುದು.
ಇದನ್ನೂ ಓದಿ: ಯಕೃತ್ತಿನ ಆರೋಗ್ಯಕ್ಕಾಗಿ ಆಹಾರದ ಸಲಹೆಗಳು, ಜೀವನಶೈಲಿಯ ಬದಲಾವಣೆಗಳು ಹೀಗೆ ಮಾಡಿಕೊಳ್ಳಿ
ಮಾಡಬಾರದ ಕೆಲಸಗಳು:
1. ನಿಮ್ಮ ಸಾಮರ್ಥ್ಯವನ್ನು ಮೀರಿದ ಚಟುವಟಿಕೆಯನ್ನು ಪ್ರಯತ್ನಿಸ ಬೇಡಿ: ಸಾಹಸ ಕ್ರೀಡೆಗಳ ವಿಷಯಕ್ಕೆ ಬಂದಾಗ, ನಿಮ್ಮ ಸಾಮರ್ಥ್ಯ ತಿಳಿದುಕೊಳ್ಳುವುದು ಮುಖ್ಯ. ನಿಮಗೆ ಕೌಶಲ ಅಥವಾ ಅನುಭವದ ಕೊರತೆಯಿರುವ ಯಾವುದೇ ಚಟುವಟಿಕೆಯನ್ನಾದರೂ ಪ್ರಯತ್ನಿಸ ಬೇಡಿ. ಇದರಿಂದ ಯಾವುದೇ ರೀತಿಯ ಅನಾಹುತಗಳು, ತೀವ್ರ ಗಾಯಗಳು ಸಂಭವಿಸಬಹುದು.
2. ಸುರಕ್ಷತಾ ಮಾರ್ಗಸೂಚಿಗಳನ್ನು ನಿರ್ಲಕ್ಷಿಸ ಬೇಡಿ: ಸುರಕ್ಷತಾ ಮಾರ್ಗಸೂಚಿಗಳು ಕೊಡುವುದಕ್ಕೆ ಕಾರಣ ಇವೆ. ಅವುಗಳನ್ನು ನಿರ್ಲಕ್ಷಿಸುವುದು ನಿಮ್ಮನ್ನು ಮತ್ತು ನಿಮ್ಮ ಜೊತೆಯಲ್ಲಿರುವವರನ್ನು ಅಪಾಯಕ್ಕೆ ದೂಡಬಹುದು. ಚಟುವಟಿಕೆ ಆರಂಭವಾಗುವ ಮೊದಲು ನೀವು ನಿಮಗೆ ನೀಡಿರುವ ಸುರಕ್ಷತಾ ಮಾರ್ಗಸೂಚಿಗಳನ್ನು ಅರ್ಥಮಾಡಿಕೊಂಡು ಮತ್ತು ಅವುಗಳನ್ನು ನಿಕಟವಾಗಿ ಅನುಸರಿಸಬೇಕು.
3. ಚಟುವಟಿಕೆಯ ಮಾಡುವಾಗ ಅವಸರ ಮಾಡಬಾರದು: ಸಾಹಸ ಕ್ರೀಡೆಗಳಿಗೆ ತಾಳ್ಮೆ ಮತ್ತು ಏಕಾಗ್ರತೆಯ ಅಗತ್ಯವಿದೆ. ಕೆಲಸದ ಮೂಲಕ ಆತುರಪಡುವುದನ್ನು ಅಥವಾ ಅನಗತ್ಯ ಅವಕಾಶಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಪ್ರಕ್ರಿಯೆಯನ್ನು ಆನಂದಿಸಿ ಮತ್ತು ನಿಮ್ಮ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಿ.
4. ಸರಿಯಾದ ಸುರಕ್ಷತಾ ಸಾಧನಗಳಿಲ್ಲದೆ ಪ್ರಯತ್ನಿಸ ಬೇಡಿ: ಸಾಹಸ ಕ್ರೀಡೆಗಳಿಗೆ ಬಂದಾಗ ಸರಿಯಾದ ಸುರಕ್ಷತಾ ಸಾಧನಗಳಿರುವುದು ಅತ್ಯಗತ್ಯ. ಸೂಕ್ತ ಸುರಕ್ಷತಾ ಸಾಧನಗಳಿಲ್ಲದೆ ಚಟುವಟಿಕೆಯನ್ನು ಎಂದಿಗೂ ಪ್ರಯತ್ನಿಸಬೇಡಿ.
5. ಮೋಜು ಮಾಡಿ: ಸಾಹಸ ಕ್ರೀಡೆಗಳು ವಿನೋದ ಮತ್ತು ರೋಮಾಂಚನಕಾರಿಯಾಗಿವೆ. ಆ ಅನುಭವವನ್ನು ಆನಂದಿಸಲು ಮತ್ತು ನಿಮ್ಮ ಸುತ್ತಮುತ್ತಲಿನ ಸೌಂದರ್ಯವನ್ನು ಕಣ್ಣತುಂಬಿಕೊಳ್ಳಿ . ಅವುಗಳಿಂದ ಶಾಶ್ವತ ನೆನಪುಗಳನ್ನು ರಚಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಿ. ಏಕೆಂದರೆ ಕೆಲವರು ಭಯದಿಂದ ಸರಿಯಾಗಿ ಯಾವ ಚಟುವಟಿಕೆಯನ್ನೂ ಆನಂದಿಸುವುದಿಲ್ಲ.
ಸಾಹಸ ಕ್ರೀಡೆಗಳನ್ನು ಪ್ರಯತ್ನಿಸಲು ಬೇಸಿಗೆ ಉತ್ತಮ ಸಮಯ. ಆದರೆ ಅದಕ್ಕೂ ಮೊದಲು ನೀವು ಮಾಡಬೇಕಾದ ಚಟುವಟಿಕೆಗಳ ಬಗ್ಗೆ ಸಂಶೋಧನೆ ಸರಿಯಾಗಿರಲಿ, ಸುರಕ್ಷತಾ ಸಾಧನಗಳನ್ನು ಬಳಸಿ, ವೃತ್ತಿಪರರಿಂದ ತರಬೇತಿ ಪಡೆಯಿರಿ, ನಿಮ್ಮ ಬೋಧಕರ ಮಾತನ್ನು ಆಲಿಸಿ ಮತ್ತು ಹೈಡ್ರೇಟ್ ಆಗಿರಿ. ಅಲ್ಲದೆ, ನಿಮ್ಮ ಸಾಮರ್ಥ್ಯವನ್ನು ಮೀರಿ ಚಟುವಟಿಕೆಯನ್ನು ಪ್ರಯತ್ನಿಸಬೇಡಿ, ಸುರಕ್ಷತಾ ಮಾರ್ಗಸೂಚಿಗಳನ್ನು ನಿರ್ಲಕ್ಷಿಸಬೇಡಿ, ಚಟುವಟಿಕೆ ಮಾಡುವಾಗ ಆತುರಪಡಬೇಡಿ. ಇವೆಲ್ಲದರ ಜೊತೆಗೆ ಮೋಜು ಮಾಡಲು ಮರೆಯದಿರಿ. ಈ ಮೂಲಭೂತ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ, ಈ ಬೇಸಿಗೆ ಋತುವಿನಲ್ಲಿ ನೀವು ಸುರಕ್ಷಿತ ಮತ್ತು ಆನಂದದಾಯಕ ಸಾಹಸ ಕ್ರೀಡಾ ಅನುಭವವನ್ನು ಪಡೆಯಬಹುದು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: