ಇದು ಹಲಸಿನ ಬೀಜದ ಕಾಫಿ; ತಯಾರಿಸೋದು ಬಲು ಸುಲಭ

ಹಲಸಿನ ಹಣ್ಣು ಮಾತ್ರವಲ್ಲ ಅದರ ಬೀಜವೂ ಆರೋಗ್ಯಕ್ಕೆ ಸಖತ್‌ ಪ್ರಯೋಜನಕಾರಿ. ಆದರೆ ಹಲಸಿನ ಹಣ್ಣು ತಿಂದ ಬಳಿಕ ಹೆಚ್ಚಿನವರು ಅದನ್ನು ಎಸೆದು ಬಿಡುತ್ತಾರೆ. ಇದನ್ನು ಎಸೆಯುವ ಬದಲು ಇದರಿಂದ ರುಚಿಕರ ಕಾಫಿಯನ್ನು ತಯಾರಿಸಬಹುದು. ಹೌದು ಹಲಸಿನ ಬೀಜದಿಂದ ಸಾರು, ಪಲ್ಯ ತಯಾರಿಸುವಂತೆ ಕಾಫಿಯನ್ನು ಸಹ ತಯಾರಿಸಬಹುದು. ಇದರ ಸಂಪೂರ್ಣ ರೆಸಿಪಿ ಇಲ್ಲಿದೆ ಈ ಹಲಸಿನ ಬೀಜದ ಕಾಫಿ ರೆಸಿಪಿಯ ಫುಲ್‌ ಡಿಟೇಲ್ಸ್‌ ಇಲ್ಲಿದೆ.

ಇದು ಹಲಸಿನ ಬೀಜದ ಕಾಫಿ; ತಯಾರಿಸೋದು ಬಲು ಸುಲಭ
ಹಲಸಿನ ಬೀಜದ ಕಾಫಿ
Image Credit source: Pinterest

Updated on: May 24, 2026 | 7:57 PM

ಬೇಸಿಗೆಯಲ್ಲಿ ಹೇರಳವಾಗಿ ಹಲಸಿನ ಹಣ್ಣು ಲಭ್ಯವಿರುತ್ತವೆ. ಸಾಮಾನ್ಯವಾಗಿ ಈ ಹಣ್ಣನ್ನು ತಿಂದ ಬಳಿಕ ಅದರ ಬೀಜವನ್ನು ಎಸೆದು ಬಿಡುತ್ತಾರೆ. ಇವುಗಳಲ್ಲಿಯೂ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ಹೌದು  ಹಲಸಿನ ಬೀಜಗಳು (jackfruit seeds) ಉತ್ಕರ್ಷಣ ನಿರೋಧಕಗಳು, ಪ್ರೋಟೀನ್, ಕಬ್ಬಿಣ ಮತ್ತು ವಿಟಮಿನ್ ಎ ಯಿಂದ ಸಮೃದ್ಧವಾಗಿರುವುದರಿಂದ ರಕ್ತಹೀನತೆಯನ್ನು ತಡೆಗಟ್ಟಲು, ಚರ್ಮ, ಕೂದಲಿನ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತವೆ. ಸಾಮಾನ್ಯವಾಗಿ ಈ ಬೀಜದಿಂದ ಸಾರು, ಪಲ್ಯ, ವಡೆ ಇತ್ಯಾದಿಗಳನ್ನು ತಯಾರಿಸುತ್ತಾರೆ. ಅದೇ ರೀತಿ ಇದರಿಂದ ರುಚಿಕರವಾಗಿರುವ ಕಾಫಿಯನ್ನು ಕೂಡ ತಯಾರಿಸಬಹುದು. ಈ ಹಲಸಿನ ಬೀಜದ ಕಾಫಿ ರೆಸಿಪಿಯ ಫುಲ್‌ ಡಿಟೇಲ್ಸ್‌ ಇಲ್ಲಿದೆ.

ಹಲಸಿನ ಬೀಜದಿಂದಲೂ ತಯಾರಿಸಬಹುದು ಕಾಫಿ:

ಖರ್ಜೂರದ ಬೀಜದಿಂದ ಕಾಫಿಯನ್ನು ತಯಾರಿಸುವಂತೆ ಹಲಸಿನ ಬೀಜದಿಂದಲೂ ರುಚಿಕರ ಕಾಫಿಯನ್ನು ತಯಾರಿಸಬಹುದು. ಈ ಒಂದು ಸ್ಪೆಷಲ್‌ ಕಾಫಿ ರೆಸಿಪಿಯನ್ನು tindipoti_meghana ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದೆ.

ವಿಡಿಯೋ ಇಲ್ಲಿದೆ ನೋಡಿ:‌

ಇದನ್ನೂ ಓದಿ: ಮನೆಯಲ್ಲೇ ಈಸಿಯಾಗಿ ತಯಾರಿಸಬಹುದು ವೈರಲ್‌ ಮೆಲೋಡಿ ಚಾಕೊಲೇಟ್‌; ಇಲ್ಲಿದೆ ರೆಸಿಪಿ

ಹಲಸಿನ ಬೀಜದ ಕಾಫಿ ತಯಾರಿಸೋದು ಹೇಗೆ?

ಮೊದಲಿಗೆ ಹಲಸಿನ ಬೀಜದ ಸಿಪ್ಪೆ ತೆಗೆದು ನಂತರ ಸಣ್ಣದಾಗಿ ತುಂಡರಿಸಿ ಇಟ್ಟುಕೊಳ್ಳಿ. ನಂತರ ಒಂದು ತಳದ ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ಮೊದಲೇ ಕತ್ತರಿಸಿಟ್ಟ ಹಲಸಿನ ಬೀಜವನ್ನು 8 ರಿಂದ 10 ನಿಮಿಷ ಡ್ರೈ ರೋಸ್ಟ್‌ ಮಾಡಿ. ನಂತರ ಇದು ತಣ್ಣಗಾದ ಬಳಿಕ ಮಿಕ್ಸಿಗೆ ಹಾಕಿ ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ನಂತರ ಈ ಪುಡಿಯನ್ನು ಇನ್ನೊಮ್ಮೆ ಡ್ರೈ ರೋಸ್ಟ್‌ ಮಾಡಿಕೊಳ್ಳಿ. ಕಂದು ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ. ನಂತರ ಅದನ್ನು ಇನ್ನೊಂದು ಬಾರಿ ನುಣ್ಣಗೆ ರುಬ್ಬಿಕೊಂಡರೆ ಹಲಸಿನ ಬೀಜದ ಕಾಫಿ ಪೌಡರ್‌ ಸಿದ್ಧ.

ಈ ಹಲಸಿನ ಬೀಜದ ಕಾಫಿಯನ್ನು ತಯಾರಿಸಲು ಮೊದಲು ಒಂದು ಪಾತ್ರೆಯಲ್ಲಿ ಹಾಲನ್ನು ಬಿಸಿ ಮಾಡಲು ಇಟ್ಟುಕೊಳ್ಳಿ. ಅದಕ್ಕೆ ಹಲಸಿನ ಬೀಜದ ಪೌಡರ್‌ ಸ್ವಲ್ಪ ಪೌಡರ್‌ ಹಾಕಿ ಗಂಟು ಕಟ್ಟಿಕೊಳ್ಳದ ಹಾಗೆ ಚೆನ್ನಾಗಿ ಕಲಸಿಕೊಳ್ಳಬೇಕು. ಒಂದು ಕುದಿ ಬಂದರೆ ಸಾಕು, ಇದನ್ನು ಜಾಸ್ತಿ ಬಿಸಿ ಮಾಡಿದರೆ ಗಟ್ಟಿಯಾಗುವ ಸಾಧ್ಯತೆ ಇರುತ್ತದೆ. ಈಗ ಒಂದ ಗ್ಲಾಸ್‌ಗೆ ಸಿಹಿಗೆ ತಕ್ಕಷ್ಟು ಬೆಲ್ಲದ ಪುಡಿ ಹಾಕಿ, ಅದಕ್ಕೆ ಮೊದಲೇ ತಯಾರಿಸಿಟ್ಟ ಕಾಫಿ ಸೇರಿಸಿದರೆ ರುಚಿಕರ ಹಲಸಿನ ಬೀಜದ ಕಾಫಿ ಸವಿಯಲು ಸಿದ್ಧ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us