ಋತುಚಕ್ರದ ಸಮಯವು ನೋವಿನಿಂದ ಕೂಡಿರುತ್ತದೆ. ಮುಟ್ಟಿನ ಸಮಯದಲ್ಲಿ ಮಹಿಳೆಯರು ಹೊಟ್ಟೆ, ಬೆನ್ನು ನೋವು ಮತ್ತು ಕಾಲುಗಳ ಸೆಳೆತಗಳಂತಹ ನೋವನ್ನು ಅನುಭವಿಸುತ್ತಾರೆ. ಇಷ್ಟು ಮಾತ್ರವಲ್ಲದೆ ಈ ಸಮಯದಲ್ಲಿ ಮೂಡ್ ಸ್ವಿಂಗ್ ಸಮಸ್ಯೆಯೂ ಕಾಣಿಸಿಕೊಳ್ಳುತ್ತದೆ. ಈ ಮನಸ್ಥಿತಿಯ ಬದಲಾವಣೆಯ ಸಮಸ್ಯೆಗಳಿಂದ ಮಹಿಳೆಯರು ಕಿರಿಕಿರಿ, ಕೋಪ ಮತ್ತು ಗೊಂದಲವನ್ನು ಅನುಭವಿಸುತ್ತಾರೆ. ಮುಟ್ಟಿನ ಸಮಯದಲ್ಲಿ ಮೂಡ್ ಸ್ವಿಂಗ್ಸ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ಎಲ್ಲರಿಗೂ ತಿಳಿದಿದೆ, ಆದರೆ ಈ ಸಮಸ್ಯೆ ಏಕೆ ಕಾಣಿಸಿಕೊಳ್ಳುತ್ತದೆ ಎಂದು ನಿಮಗೆ ತಿಳಿದಿದೆಯೇ?
ಋತುಚಕ್ರದ ಸಮಯದಲ್ಲಿ ಮಹಿಳೆಯರು ತುಂಬಾ ಕಿರಿಕಿರಿ ಮತ್ತು ಕೋಪಗೊಳ್ಳುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಅವರು ಕೋಪಗೊಳ್ಳುತ್ತಾರೆ ಮತ್ತು ಸಣ್ಣ ವಿಷಯಗಳಿಗೆ ಅಳುತ್ತಾರೆ. ಕೆಲವೊಮೆ ಸಣ್ಣ ವಿಚಾರಕ್ಕೂ ಅತಿಯಾಗಿ ಪ್ರತಿಕ್ರಿಯಿಸುತ್ತಾರೆ. ವಾಸ್ತವವಾಗಿ ಮುಟ್ಟಿನ ಸಮಯದಲ್ಲಿ ಮಹಿಳೆಯರಲ್ಲಿ ಹಾರ್ಮೋನುಗಳ ಬದಲಾವಣೆಗಳು ಕಂಡುಬರುತ್ತವೆ. ಇದರಿಂದಾಗಿ ಅವರ ಮನಸ್ಥಿತಿ ಬದಲಾಗುತ್ತದೆ. ಗರ್ಭಾಶಯದ ಸಂಕೋಚನವನ್ನು ಉಂಟುಮಾಡುವ ಹೊಟ್ಟೆಯಲ್ಲಿಯ ತೀವ್ರವಾದ ನೋವಿಗೆ ಪ್ರೋಸ್ಟಗ್ಲಾಂಡಿನ್ ಎಂಬ ಹಾರ್ಮೋನು ಕಾರಣಾಗಿದೆ. ಈ ಕಾರಣದಿಂದಾಗಿ ನೀವು ಮುಟ್ಟಿನ ಸಮಯದಲ್ಲಿ ತೀವ್ರವಾದ ನೋವನ್ನು ಅನುಭವಿಸುತ್ತೀರಿ.
ಇದನ್ನೂ ಓದಿ:ಮುಟ್ಟಿನ ಸಮಯದ ನೋವು ನಿವಾರಣೆಗೆ ಸಹಾಯ ಮಾಡುತ್ತದೆ ಈ 5 ಪಾನೀಯಗಳು
• ಋತುಚಕ್ರದ ನೋವು ಮತ್ತು ಮನಸ್ಥಿತಿಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಲು ನೀವು ಫೈಬರ್ ಭರಿತ ಆಹಾರವನ್ನು ಸೇವಿಸಬೇಕು. ಏಕೆಂದರೆ ಇದು ನಿಮಗೆ ತಾಜಾತನವನ್ನು ನೀಡುತ್ತದೆ ಮತ್ತು ನಿಮ್ಮೊಳಗೆ ಶಕ್ತಿಯನ್ನು ತುಂಬುತ್ತದೆ. ಮಾತ್ರವಲ್ಲದೆ ಪ್ರೋಟೀನ್, ವಿಟಮಿನ್ ಬಿ, ಕಬ್ಬಿಣ ಮತ್ತು ಫೋಲಿಕ್ ಆಮ್ಲದಂತಹ ಅಗತ್ಯ ಪೋಷಕಾಂಶಗಳಿರುವ ಆಹಾರವನ್ನು ಸೇವಿಸಿ. ಜೊತೆಗೆ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯಿರಿ. ಮಹಿಳೆಯರು ಹೀಗೆ ಮಾಡುವುದರಿಂದ ಲಾಭ ಪಡೆಯಬಹುದು.
• ಪಿರಿಯಡ್ಸ್ ಸಮಯದಲ್ಲಿ ಮನಸ್ಥಿತಿಯನ್ನು ಸರಿಯಾಗಿ ಇರಿಸಿಕೊಳ್ಳಲು ಬಯಸಿದರೆ ಅರಶಿನ ಚಹಾವೂ ನಿಮಗೆ ಬಹಳಷ್ಟು ಸಹಾಯ ಮಾಡುತ್ತದೆ. ಅರಶಿನ ಚಹಾವು ಮುಟ್ಟಿನ ನೋವಿನಿಂದ ಪರಿಹಾರ ನೀಡುತ್ತದೆ.
• ಪಿರಿಯಡ್ಸ್ ಸಮಯದಲ್ಲಿ ಸಾಕಷ್ಟು ನಿದ್ದೆ ಮಾಡುವ ಮೂಲಕವೂ ಮಹಿಳೆಯರು ಮನಸ್ಥಿತಿಯನ್ನು ಸರಿಯಾಗಿ ಇಟ್ಟುಕೊಳ್ಳಬಹುದು. ಸಾಕಷ್ಟು ನಿದ್ರೆ ಮಾಡುವುದರಿಂದ ದೇಹದ ಒತ್ತಡವೂ ಕಡಿಮೆಯಾಗುತ್ತದೆ. ಅದರೊಂದಿಗೆ ಸಂತೋಷದ ಹಾರ್ಮೋನುಗಳು ಹೆಚ್ಚಾಗಲೂ ಪ್ರಾರಂಭಿಸಿಸುತ್ತದೆ.
• ಮನಸ್ಥಿತಿಯನ್ನು ಸಂತೋಷವಾಗಿಡಲು ಮೊದಲು ಒತ್ತಡವನ್ನು ತೆಗೆದುಹಾಕುವುದು ಅವಶ್ಯಕ. ಒತ್ತಡದ ಕಾರಣದಿಂದಾಗಿ ಮನಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಿಮಗೆ ಸಂತೋಷವನ್ನು ನೀಡುವ ಕೆಲಸವನ್ನು ಮಾಡಿ. ಉದಾಹರಣೆಗೆ ಪೈಂಟಿಂಗ್, ಚಿತ್ರ ಬಿಡಿಸುವುದು ಅಡುಗೆ ಮಾಡುವುದು ಇತ್ಯಾದಿ ನಿಮ್ಮ ಹವ್ಯಾಸಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ.
• ಮುಟ್ಟಿನ ಸಮಯದಲ್ಲಿ ಧ್ಯಾನ ಮತ್ತು ಲಘು ಯೋಗವನ್ನು ಅಭ್ಯಾಸ ಮಾಡಿದರೆ ಅದು ಭಾವನಾತ್ಮಕ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಭಾವನೆಗಳನ್ನು ಸಮತೋಲನಗೊಳಿಸುವುದರಿಂದ ಮಹಿಳೆಯರ ಮನಸ್ಥಿತಿಯು ಉತ್ತಮವಾಗಿರುತ್ತದೆ.
• ವ್ಯಾಯಾಮವು ಸಂತೋಷದ ಹಾರ್ಮೋನುಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಪಿರಿಯಡ್ಸ್ ಸಮಯದಲ್ಲಿ ಮೂಡ್ ಸ್ವಿಂಗ್ ಕಡಿಮೆಯಾಗುತ್ತದೆ.
• ಮುಟ್ಟಿನ ಸಮಯದಲ್ಲಿ ಭಾವನಾತ್ಮಕ ಬೆಂಬಲ ಬಹಳ ಮುಖ್ಯ. ಇದರಿಂದ ಮಹಿಳೆಯರಲ್ಲಿ ಕಿರಿಕಿರಿಯನ್ನು ಕಡಿಮೆ ಮಾಡಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ