National Pollution Control Day 2025: ಮಾಲಿನ್ಯದಿಂದ ಹದಗೆಡುತ್ತಿದೆ ಆರೋಗ್ಯ, ಪರಿಸರ
ವಿಶ್ವದ ಅತ್ಯಂತ ಭಯಾನಕ ಕೈಗಾರಿಕಾ ಅಪಘಾತಗಳಲ್ಲಿ ಒಂದಾದ ಭೋಪಾಲ್ ಅನಿಲ ದುರಂತದಲ್ಲಿ ಸಾವನ್ನಪ್ಪಿದ ಮುಗ್ಧ ಜೀವಗಳನ್ನು ಸ್ಮರಿಸುವ ಸಲುವಾಗಿ ಹಾಗೂ ಮಾಲಿನ್ಯದಿಂದ ಮಾನವರ ಆರೋಗ್ಯ ಮತ್ತು ಪರಿಸರದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರತಿವರ್ಷ ಡಿಸೆಂಬರ್ 2 ರಂದು ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನು ಆಚರಿಸಲಾಗುತ್ತದೆ.

ದಿನದಿಂದ ದಿನಕ್ಕೆ ಮಾಲಿನ್ಯ (Pollution) ಹೆಚ್ಚಾಗುತ್ತಲೇ ಹೋಗುತ್ತಿವೆ. ನಗರೀಕರಣ, ಕೈಗಾರಿಕೀಕರಣ, ವಾಹನ ದಟ್ಟಣೆ ಇವೆಲ್ಲದರ ಕಾರಣದಿಂದಾಗಿ ಶಬ್ದ, ವಾಯು, ಜಲ ಮಾಲಿನ್ಯ ವೇಗವಾಗಿ ಹೆಚ್ಚುತ್ತಿದೆ. ಈ ಮಾಲಿನ್ಯ ಪ್ರಕೃತಿಗೆ ಗಂಭೀರ ಅಪಾಯವನ್ನು ಉಂಟುಮಾಡುತ್ತಿದೆ ಜೊತೆಗೆ ನಮ್ಮ ಆರೋಗ್ಯದ ಮೇಲೂ ಋಣಾತ್ಮಕ ಪರಿಣಾಮವನ್ನು ಬೀರುತ್ತಿದೆ. ಮಾಲಿನ್ಯದಿಂದ ಉಂಟಾಗುತ್ತಿರುವ ಇಂತಹ ಎಲ್ಲಾ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು, ಮಾಲಿನ್ಯದಿಂದ ಆರೋಗ್ಯ ಮತ್ತು ಪರಿಸರದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಭಾರತದಲ್ಲಿ ಪ್ರತಿವರ್ಷ ಡಿಸೆಂಬರ್ 2 ರಂದು ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನು ಆಚರಿಸಲಾಗುತ್ತದೆ.
ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನದ ಇತಿಹಾಸವೇನು?
ಪ್ರತಿವರ್ಷ ಡಿಸೆಂಬರ್ 2 ರಂದು ಆಚರಿಸಲಾಗುವ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನದ ಇತಿಹಾಸವು ಭೋಪಾಲ್ ನಗರದಲ್ಲಿ ಸಂಭವಿಸಿದ ಅನಿಲ ದುರಂತಕ್ಕೆ ಸಂಬಂಧಿಸಿದೆ. ವಾಸ್ತವವಾಗಿ ಡಿಸೆಂಬರ್ 2, 1984 ರಂದು ಭೋಪಾಲ್ ನ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್‌ನ (UCIL) ಕೀಟನಾಶಕ ಸ್ಥಾವರದಿಂದ ʼಮೀಥೈಲ್ ಐಸೊಸೈನೇಟ್ʼ ಅನಿಲ ಸೋರಿಕೆಯಿಂದಾಗಿ ಸಾವಿರಾರು ಜನರು ಸಾವನ್ನಪ್ಪಿದರು. ಈ ಭೀಕರ ದುರಂತದಲ್ಲಿ ಸಾವನ್ನಪ್ಪಿದವರ ನೆನಪಿಗಾಗಿ ಭಾರತದಲ್ಲಿ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ: ಗ್ರಾಮೀಣ ಭಾಗದ ಜನರಿಗೆ ಬದುಕು ಕಟ್ಟಿಕೊಟ್ಟ ಹೈನುಗಾರಿಕೆ
ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನದ ಮಹತ್ವವೇನು?
- ಮಾಲಿನ್ಯದ ಕಾರಣದಿಂದಾಗಿ ಸಕಲ ಜೀವರಾಶಿಗಳು ಅನೇಕ ತೊಂದರೆಗಳನ್ನು ಅನುಭವಿಸುತ್ತಿವೆ. ಹಾಗಾಗಿ ಎಲ್ಲಾ ರೀತಿಯ ಮಾಲಿನ್ಯಗಳನ್ನು ತಡೆಗಟ್ಟುವ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನವನ್ನು ಆಚರಿಸುವ ಮುಖ್ಯ ಉದ್ದೇಶವಾಗಿದೆ.
- ಈ ದಿನ ಮಾನವನ ನಿರ್ಲಕ್ಷ್ಯದಿಂದ ಉಂಟಾಗುವ ಕೈಗಾರಿಕ ಮಾಲಿನ್ಯವನ್ನು ತಡೆಗಟ್ಟಲು, ಕೈಗಾರಿಕ ವಿಪತ್ತುಗಳನ್ನು ಹೇಗೆ ನಿರ್ವಹಿಸುವುದು ಮತ್ತು ನಿಯಂತ್ರಿಸುವುದು ಎಂಬುದರ ಕುರಿತು ಸಾರ್ವಜನಿಕರಿಗೆ ಶಿಕ್ಷಣವನ್ನು ನೀಡಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




