
ಅಂಕಿಅಂಶಗಳನ್ನು (Statistics) ಆಧುನಿಕ ಆಡಳಿತ ಮತ್ತು ಅರ್ಥಶಾಸ್ತ್ರದ ಬೆನ್ನೆಲುಬು ಅಂತಾನೇ ಹೇಳಬಹುದು. ಇದು ನಮ್ಮ ದಿನನಿತ್ಯ ವ್ಯವಹಾರಗಳಲ್ಲಿ ಮುಖ್ಯ ಪಾತ್ರವನ್ನು ವಹಿಸುವಂತೆ ಸಾಮಾಜಿಕ ಮತ್ತು ಆರ್ಥಿಕ ಯೋಜನೆ, ನೀತಿ ನಿರೂಪಣೆಗೆ ಅಂಕಿಅಂಶಗಳು ನಿರ್ಣಾಯಕವಾಗಿವೆ. ಸರಿಯಾದ ಅಂಕಿಅಂಶ ಅಥವಾ ಸ್ಟಾಟಿಸ್ಟಿಕ್ ಇಲ್ಲದೆ ಯಾವುದೇ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ. ಸಾಮಾಜಿಕ-ಆರ್ಥಿಕ ಪ್ರಗತಿಗಳನ್ನು ಮೇಲ್ವಿಚಾರಣೆ ಮಾಡಲು, ಸಾಕ್ಷ್ಯ ಆಧಾರಿತ ನೀತಿಗಳನ್ನು ಅನುಷ್ಠಾನಗೊಳಿಸಲು ಮತ್ತು ಜಾಗತಿಕ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ನಿಖರವಾದ, ಸಮಯೋಚಿತ ಅಂಕಿಅಂಶಗಳು ಅತ್ಯಗತ್ಯ. ಹೌದು ಗುಣಮಟ್ಟದ ಅಂಕಿಅಂಶಗಳಿಲ್ಲದೆ ಶಿಕ್ಷಣ, ಆರೋಗ್ಯ, ಹವಮಾನ ಬದಲಾವಣೆ ಮತ್ತು ಆರ್ಥಿಕ ಬೆಳವಣಿಗೆಯಂತಹ ಪ್ರಮುಖ ಕ್ಷೇತ್ರಗಳಲ್ಲಿನ ಪ್ರಗತಿಯನ್ನು ಅಳೆಯಲು ಕಷ್ಟಸಾಧ್ಯವಾಗುತ್ತದೆ. ಹಾಗಾಗಿ ಸಮಾಜವನ್ನು ರೂಪಿಸುವಲ್ಲಿ, ಯೋಜನೆಗಳನ್ನು ಯಶಸ್ವಿಗೊಳಿಸುವಲ್ಲಿ ಮತ್ತು ಜೀವನವನ್ನು ಸುಧಾರಿಸುವಲ್ಲಿ ಅಂಕಿಅಂಶಗಳು ತುಂಬಾನೇ ಮುಖ್ಯ ಪಾತ್ರವನ್ನು ವಹಿಸುತ್ತವೆ. ಅಂಕಿಅಂಶಗಳ ಈ ಮಹತ್ವವನ್ನು ಸಾರಲು ಪ್ರತಿವರ್ಷ ಜೂನ್ 29 ರಂದು ಭಾರತದಲ್ಲಿ ರಾಷ್ಟ್ರೀಯ ಅಂಕಿಅಂಶ ದಿನವನ್ನು ಆಚರಿಸಲಾಗುತ್ತದೆ.
ವಾಸ್ತವವಾಗಿ, ಜೂನ್ 29 ರಂದು ಅಂಕಿಅಂಶಗಳಿಗೆ ಮಹತ್ವದ ಕೊಡುಗೆ ನೀಡಿದ ಹೆಸರಾಂತ ಸಂಖ್ಯಾಶಾಸ್ತ್ರಜ್ಞ ದಿವಂಗತ ಪ್ರಶಾಂತ ಚಂದ್ರ ಮಹಾಲನೋಬಿಸ್ ಅವರ ಜನ್ಮ ಜಯಂತಿಯಾಗಿದೆ. ಸಂಖ್ಯಾಶಾಸ್ತ್ರಕ್ಕೆ ಪ್ರಶಾಂತ ಚಂದ್ರ ಮಹಲನೋಬಿಸ್ ಅವರು ನೀಡಿದ ಕೊಡುಗೆಯನ್ನು ಗೌರವಿಸುವ ಉದ್ದೇಶದಿಂದ 2007 ರಲ್ಲಿ ಭಾರತವು ಸರ್ಕಾರವು ಅವರ ಜನ್ಮ ಜಯಂತಿಯನ್ನು ರಾಷ್ಟ್ರೀಯ ಅಂಕಿ-ಅಂಶ ದಿನವೆಂದು ಫೋಷಿಸಲು ನಿರ್ಧಾರ ಮಾಡಿತು. ಜೂನ್ 29, 2007 ರಂದು ಮೊದಲ ಬಾರಿ ರಾಷ್ಟ್ರೀಯ ಅಂಕಿ-ಅಂಶ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿ ವರ್ಷವು ರಾಷ್ಟ್ರೀಯ ಅಂಕಿಅಂಶ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಪ್ರೊಫೆಸರ್ ಪ್ರಶಾಂತ ಚಂದ್ರ ಮಹಾಲನೋಬಿಸ್ ಅವರನ್ನು ಭಾರತದ ಆಧುನಿಕ ಅಂಕಿಅಂಶಗಳ ಪಿತಾಮಹ ಎಂದು ಕರೆಯಲಾಗುತ್ತದೆ. ಪ್ರೊಫೆಸರ್ ಪ್ರಶಾಂತ ಚಂದ್ರ ಮಹಾಲನೋಬಿಸ್ ಅವರು ಜೂನ್ 29, 1893 ರಂದು ಕೋಲ್ಕತ್ತಾದಲ್ಲಿ ಜನಿಸಿದರು. ಅವರು ಭಾರತೀಯ ಸಂಖ್ಯಾಶಾಸ್ತ್ರೀಯ ಸಂಸ್ಥೆಯನ್ನು ಸ್ಥಾಪಿಸಿದ ಪ್ರಸಿದ್ಧ ಭಾರತೀಯ ಗಣಿತಜ್ಞ ಮತ್ತು ಸಂಖ್ಯಾಶಾಸ್ತ್ರಜ್ಞರಾಗಿದ್ದಾರೆ. ಅವರು ಮಹಾಲನೋಬಿಸ್ ದೂರ, ಮಾದರಿ ಸಮೀಕ್ಷೆಗಳು ಮತ್ತು ಆರ್ಥಿಕ ಯೋಜನೆಗಾಗಿ ಸಂಖ್ಯಾಶಾಸ್ತ್ರೀಯ ವಿಧಾನಗಳ ಅಭಿವೃದ್ಧಿ ಸೇರಿದಂತೆ ಅಂಕಿಅಂಶಗಳಿಗೆ ಹಲವಾರು ಪ್ರಮುಖ ಕೊಡುಗೆಗಳನ್ನು ನೀಡಿದ್ದಾರೆ. ಸ್ವಾತಂತ್ರ್ಯಾನಂತರದ ಯುಗದಲ್ಲಿ ಇವರು ಆರ್ಥಿಕ ಯೋಜನೆ ಮತ್ತು ಸಂಖ್ಯಾಶಾಸ್ತ್ರೀಯ ಅಭಿವೃದ್ಧಿ ಕ್ಷೇತ್ರಗಳಿಗೆ ಗಮನಾರ್ಹ ಕೊಡುಗೆಗಳನ್ನು ನೀಡಿದರು. ಅವರ ಕೊಡುಗೆಗಳನ್ನು ಗುರುತಿಸಿ, ಭಾರತ ಸರ್ಕಾರವು ಅವರ ಜನ್ಮ ದಿನವಾದ ಜೂನ್ 29 ಅನ್ನು ಅಂಕಿಅಂಶ ದಿನವೆಂದು ಘೋಷಿಸಿತು.
ಇದನ್ನೂ ಓದಿ: ಜುಲೈ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ರಾಷ್ಟ್ರೀಯ-ಅಂತಾರಾಷ್ಟ್ರೀಯ ದಿನಾಚರಣೆಗಳಿವು
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ