
ದಸರಾ (Dasara) ಎಂದ ಕೂಡಲೇ ನಮ್ಮ ಕಣ್ಣೆದುರಿಗೆ ಬರುವುದೇ ಮೈಸೂರು. ಆದರೆ ಕರ್ನಾಟಕದ ಮೈಸೂರಿನಲ್ಲಿ ಮಾತ್ರವಲ್ಲ ಮಂಗಳೂರಿನಲ್ಲಿಯೂ ಮಂಗಳೂರು ದಸರಾ (Mangalore Dasara) ಅದ್ದೂರಿಯಾಗಿ ನಡೆಯುತ್ತದೆ. ಅಂದು ಶಾರದಾ ಮಹೋತ್ಸವವಾಗಿ ಆರಂಭವಾದ ಸಂಭ್ರಮದ ಆಚರಣೆಯೂ ಇಂದು ಮಂಗಳೂರು ದಸರಾವಾಗಿ ಪ್ರಸಿದ್ಧಿ ಪಡೆದಿದೆ. ಈ ವಿಶೇಷ ಸಂದರ್ಭದಲ್ಲಿ ದೀಪಾಂಲಕಾರಗಳಿಂದ ಕಂಗೊಳಿಸುವ ಮಂಗಳೂರನ್ನು ನೋಡಲು ಎರಡು ಕಣ್ಣು ಸಾಲದು. ಆದರೆ ಮೈಸೂರು ದಸರಾಕ್ಕೆ ಹೋಲಿಸಿದ್ರೆ ಮಂಗಳೂರು ದಸರಾ ಸಂಪೂರ್ಣ ಭಿನ್ನವಾಗಿರುತ್ತದೆ. ಅದೇಗೆ ಅಂತೀರಾ? ಈ ಕುರಿತಾದ ಮಾಹಿತಿ ಇಲ್ಲಿದೆ.
ಮಂಗಳೂರು ದಸರಾವು ಮಂಗಳೂರಿನಲ್ಲಿ ಆಚರಿಸಲಾಗುವ ವಿಶಿಷ್ಟ ಹಾಗೂ ಸಂಭ್ರಮದ ಆಚರಣೆ. ಇಲ್ಲಿ ನವರಾತ್ರಿ ಹಬ್ಬವನ್ನು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಹತ್ತು ದಿನಗಳ ಕಾಲ ಸಂಭ್ರಮವು ಮನೆ ಮಾಡುತ್ತದೆ. ಶಾರದಾ ವಿಗ್ರಹವು ಪ್ರಮುಖ ಆಕರ್ಷಣೆಯಲ್ಲಿ ಒಂದು. ಶಾರದಾ ದೇವಿ ವಿಗ್ರಹದೊಂದಿಗೆ ಗಣಪತಿ ಹಾಗೂ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕುಶ್ಮಾಂಡಿನಿ, ಸ್ಕಂದಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ, ಸಿದ್ಧಿದಾತ್ರಿ ನವದುರ್ಗೆಯರನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತದೆ.
ಹೌದು, ಮೈಸೂರು ದಸರಾವು ಪ್ರಮುಖವಾಗಿ ವಿಶ್ವಪ್ರಸಿದ್ಧ ಜಂಬೂಸವಾರಿಗೆ ಪ್ರಮುಖ ಆಕರ್ಷಣೆಯಾಗಿದ್ದರೆ, ಮಂಗಳೂರು ದಸರಾವು ಶಾರದಾ ದೇವಿಯನ್ನು ಪ್ರತಿಷ್ಠಾಪಿಸಿ ಪೂಜಿಸುವುದಕ್ಕೆ ಹೆಸರುವಾಸಿಯಾಗಿದೆ. ಮಂಗಳೂರು ದಸರಾದಲ್ಲಿ ದೊಡ್ಡ ದೊಡ್ಡ ಮಂಟಪಗಳನ್ನು ನಿರ್ಮಿಸಿ, ಅದ್ದೂರಿ ಶೋಭಾಯಾತ್ರೆ, ಅರಮನೆಗಳ ಬದಲಿಗೆ ದೇವಸ್ಥಾನಗಳ ಕೇಂದ್ರಿತ ಆಚರಣೆ, ಹಾಗೂ ಪಾರಂಪರಿಕ ಕಲಾಪ್ರದರ್ಶನಗಳನ್ನು ಕಾಣಬಹುದು. ಇನ್ನು ಮಂಗಳೂರು ದಸರಾದಲ್ಲಿ ಕರಾವಳಿ ಭಾಗದ ಸಾಂಸ್ಕೃತಿಕ ಕುಣಿತವಾದ ಹುಲಿವೇಷ ಆಕರ್ಷಣೀಯ ಕೇಂದ್ರಬಿಂದುವಾಗಿದೆ. ಇಲ್ಲಿ ಹುಲಿವೇಷ ಧರಿಸಿ ನೃತ್ಯ ಮಾಡಲಾಗುತ್ತದೆ.
ಇದನ್ನೂ ಓದಿ:Navaratri 2025: ನವರಾತ್ರಿಯ ಮೊದಲ ದಿನ ದೇವಿಗೆ ನೈವೇದ್ಯವಾಗಿ ಮಖಾನಾ ಪಾಯಸ ಅರ್ಪಿಸಿ, ಸುಲಭ ಪಾಕವಿಧಾನ ಇಲ್ಲಿದೆ
ಮಂಗಳೂರು ದಸರಾವು ತನ್ನ ಭವ್ಯ ಮೆರವಣಿಗೆಯಿಂದಲೇ ಎಲ್ಲರ ಗಮನ ಸೆಳೆಯುತ್ತದೆ. ಇಲ್ಲಿನ ಶಾರದಾ ದೇವಿ ವಿರ್ಸಜನಾ ಮೆರವಣಿಗೆಯನ್ನು ಕಣ್ತುಂಬಿಸಿಕೊಳ್ಳಲು ಜನಸಾಗರವೇ ಸೇರುತ್ತದೆ. ಹೌದು, ವಿಜಯದಶಮಿಯಂದು ಸಂಜೆ ಗೋಕರ್ಣನಾಥೇಶ್ವರ ದೇವಾಲಯದಿಂದ ಆರಂಭವಾಗುವ ಮೆರವಣಿಗೆ ಮರುದಿನ ಮುಂಜಾನೆ ದೇವಸ್ಥಾನದ ಆವರಣದಲ್ಲಿನ ಪುಷ್ಕರಿಣಿ ಕೊಳದಲ್ಲಿ ಪ್ರತಿಷ್ಠಾಪಿಸಲಾದ ವಿಗ್ರಹಗಳ ವಿರ್ಸಜನೆಯೊಂದಿಗೆ ದಸರಾ ಮಹೋತ್ಸವಕ್ಕೆ ತೆರೆ ಬೀಳುತ್ತದೆ. ಈ ಮೆರವಣಿಗೆಯಲ್ಲಿ ನವದುರ್ಗೆಯರು, ಮಹಾಗಣಪತಿ, ಶಾರದಾ ದೇವಿಯ ವಿಗ್ರಹವನ್ನು ನೋಡುವುದೇ ಕಣ್ಣಿಗೆ ಹಬ್ಬ. ಕರಾವಳಿ ಸಾಂಸ್ಕೃ ತಿಕ ವೈಭವಗಳಾದ ಚಂಡೆ, ಜಾನಪದ ನೃತ್ಯಕುಣಿತ, ಯಕ್ಷಗಾನ ವಿವಿಧ ಪಾತ್ರಗಳು, ಹುಲಿವೇಷಗಳು ಇವೆಲ್ಲವನ್ನೂ ಮೆರವಣಿಗೆಯನ್ನು ಇನ್ನಷ್ಟು ಆಕರ್ಷಕವಾಗಿ ಕಂಗೊಳಿಸುವಂತೆ ಮಾಡುತ್ತದೆ. ಮಂಗಳೂರಿನ ದಸರಾದ ಮೆರವಣಿಗೆಯನ್ನು ಕಣ್ಣು ತುಂಬಿಸಿಕೊಳ್ಳಲು ಜನಸ್ತೋಮವೇ ಹರಿದುಬಂದಿರುತ್ತದೆ. ಈ ಎಲ್ಲಾ ಕಾರಣಕ್ಕೆ ಮೈಸೂರು ದಸರಾಕ್ಕಿಂತ ಮಂಗಳೂರು ದಸರಾ ವಿಭಿನ್ನ ಎನ್ನಬಹುದು.
ಇನ್ನಷ್ಟು ಜೀವನಶೈಲಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:11 pm, Mon, 22 September 25