Ganesh Chaturthi: ಕೇವಲ ಕುಟುಂಬದ ಆಚರಣೆಯಾಗಿದ್ದ ಗಣೇಶ ಚತುರ್ಥಿ ಸಾರ್ವಜನಿಕ ಗಣೇಶೋತ್ಸವವಾಗಿದ್ದು ಹೇಗೆ?
ಕುಟುಂಬದ ಆಚರಣೆಯಾಗಿ ಬ್ರಾಹ್ಮಣರು ಮತ್ತು ಮೇಲ್ಜಾತಿಯವರು ಆಚರಿಸುತ್ತಿದ್ದ ಗಣೇಶ ಚತುರ್ಥಿ ಹಬ್ಬವನ್ನು ಲೋಕಮಾನ್ಯ ಬಾಲಗಂಗಾಧರ ತಿಲಕರು ಸಾರ್ವಜನಿಕ ಉತ್ಸವವನ್ನಾಗಿ ಮಾಡಿದರು. 1890ರ ದಶಕದ ಸ್ವಾತಂತ್ರ್ಯ ಹೋರಾಟದಲ್ಲಿ ಜನರನ್ನು ಒಗ್ಗೂಡಿಸಲು ಧಾರ್ಮಿಕ ಮಾರ್ಗವನ್ನು ಆರಿಸಿಕೊಂಡ ತಿಲಕರು, 1894ರಲ್ಲಿ ಪುಣೆಯಲ್ಲಿ ಮೊದಲ ಸಾರ್ವಜನಿಕ ಗಣೇಶೋತ್ಸವವನ್ನು ಆರಂಭಿಸಿದರು. ಜಾತಿ-ಧರ್ಮಗಳ ಬೇಧವಿಲ್ಲದೆ ಎಲ್ಲರಿಗೂ ಈ ಹಬ್ಬದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿದರು.

ದೇಶದೆಲ್ಲೆಡೆ ಗಣೇಶ ಚತುರ್ಥಿ ಸಂಭ್ರಮದಿಂದ ನಡೆಯುತ್ತಿದೆ. ಪ್ರತಿವರ್ಷ ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿಯಂದು ಬರುವ ಈ ಶುಭ ದಿನದಂದು ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಮೋದಕ, ಕಡುಬು ಮೊದಲಾದ ಸಿಹಿ ತಿಂಡಿಗಳನ್ನು ನೈವೇದ್ಯ ಮಾಡಿ, ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಆದರೆ ಈ ಹಿಂದೆ ಕೇವಲ ಕುಟುಂಬದ ಆಚರಣೆಯಾಗಿದ್ದ ಗಣೇಶ ಚತುರ್ಥಿ ಹಬ್ಬ ಸಾರ್ವಜನಿಕ ಗಣೇಶೋತ್ಸವವಾಗಿ ಆರಂಭವಾಗಿದ್ದು ಹೇಗೆ, ಇದು ಹಿಂದಿನ ರೂವಾರಿ ಯಾರು? ಎಂಬುದು ಸಾಕಷ್ಟು ಜನರಿಗೆ ತಿಳಿದಿಲ್ಲ. ಇದರ ಬಗೆಗಿನ ಇಂಟರೆಸ್ಟಿಂಗ್ ಸಂಗತಿಯನ್ನು ಇಲ್ಲಿ ತಿಳಿದುಕೊಳ್ಳಿ.
ಮೇಲ್ಜಾತಿಯವರಿಗೆ ಮಾತ್ರ ಮೀಸಲಾಗಿದ್ದ ಗಣೇಶ ಹಬ್ಬ:
1893 ರ ಮೊದಲು, ಈ ಗಣೇಶ ಚತುರ್ಥಿ ಹಬ್ಬವು ಕೇವಲ ಕುಟುಂಬದ ಆಚರಣೆಯಾಗಿತ್ತು. ಇದನ್ನು ಹೆಚ್ಚಾಗಿ ಖಾಸಗಿಯಾಗಿ, ಮುಖ್ಯವಾಗಿ ಬ್ರಾಹ್ಮಣರು ಮತ್ತು ಮೇಲ್ಜಾತಿಯವರು ಆಚರಿಸುತ್ತಿದ್ದರು. ಕೇವಲ ಶ್ರೀಮಂತರ ಮನೆಯಲ್ಲಿ ಖಾಸಗಿಯಾಗಿ ನಡೆಯುತ್ತಿದ್ದ ಈ ಹಬ್ಬವನ್ನು ಲೋಕಮಾನ್ಯ ಬಾಲಗಂಗಾಧರ ತಿಲಕರು ಜನರಲ್ಲಿನ ಸ್ವಾತಂತ್ರ್ಯದ ಕಿಚ್ಚನ್ನು ಹೊರಗೆಡವುವ ಸಾಧನವಾಗಿ ಬಳಸಿಕೊಂಡರು. ಹೌದು 1890 ರ ದಶಕದಲ್ಲಿ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ, ತಿಲಕರು ಸಾಮಾನ್ಯ ಜನರನ್ನು ಹೇಗೆ ಒಗ್ಗೂಡಿಸುವುದು ಎಂಬುದರ ಕುರಿತು ಯೋಚಿಸುತ್ತಿದ್ದರು. ಇದಕ್ಕಾಗಿ ಅವರು ಧಾರ್ಮಿಕ ಮಾರ್ಗವನ್ನು ಆರಿಸಿಕೊಂಡರು.
ಇದನ್ನೂ ಓದಿ: ಗಣೇಶನನ್ನು ಪೂಜಿಸುವಾಗ ಈ ಶಕ್ತಿಶಾಲಿ ಮಂತ್ರಗಳನ್ನು ಪಠಿಸಿ
ಗಣೇಶ ಚತುರ್ಥಿಯನ್ನು ಒಂದು ದೊಡ್ಡ ಸಮುದಾಯ ಉತ್ಸವವನ್ನಾಗಿ ತಿಲಕರು ಪರಿವರ್ತಿಸಿದರು. ತಮ್ಮ ಕೇಸರಿ ಪತ್ರಿಕೆಯಲ್ಲಿ ಸಾರ್ವಜನಿಕ ಗಣೇಶೋತ್ಸವದ ಪರಿಕಲ್ಪನೆ ಕುರಿತು ಬರೆದಿದ್ದ ತಿಲಕರು, 1894ರಲ್ಲಿ ಪುಣೆಯ ಕೇಸರಿ ವಾಡದಲ್ಲಿ ಪ್ರಪ್ರಥಮ ಸಾರ್ವಜನಿಕ ಗಣೇಶೋತ್ಸವವನ್ನು ಆರಂಭಿಸಿದರು. ಯಾವುದೇ ಜಾತಿ ಧರ್ಮದ ಬೇಧವಿಲ್ಲದೇ ಕೆಳಜಾತಿಯ ವ್ಯಕ್ತಿಯೂ ಕೂಡ ಗಣೇಶನ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಮಾಡಿದರು. ಗಣೇಶೋತ್ಸವವನ್ನು ಸಾರ್ವಜನಿಕವಾಗಿ ಆಚರಿಸುವ ಕೀರ್ತಿ ಬಾಲಗಂಗಾಧರ ತಿಲಕರಿಗೆ ಸಲ್ಲುತ್ತದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




