
ಅಡುಗೆ ಮಾಡುವಾಗ ಕೆಲಸ ಇನ್ನಷ್ಟು ಸುಲಭವಾಗಲಿ ಎಂದು ಕೆಲವೊಂದು ವಸ್ತುಗಳನ್ನು ಕೈಗೆಟಕುವಂತೆ ಗ್ಯಾಸ್ ಸ್ಟೌವ್ (gas stove) ಪಕ್ಕವೇ ಇಟ್ಟುಬಿಡುತ್ತೇವೆ. ಈ ರೀತಿ ಕೆಲವು ವಸ್ತುಗಳನ್ನು ಗ್ಯಾಸ್ ಸ್ಟೌವ್ ಪಕ್ಕ ಇಡಲೇಬಾರದಂತೆ, ಏಕೆಂದರೆ ಒಂದು ಸಣ್ಣ ನಿರ್ಲಕ್ಷ್ಯ ಕೂಡ ದೊಡ್ಡ ಅಪಾಯವನ್ನು ಉಂಟು ಮಾಡಬಹುದು. ಹೌದು ಗ್ಯಾಸ್ ಸ್ಟೌವ್ ಪಕ್ಕದಲ್ಲಿ ಈ ಕೆಲವೊಂದು ವಸ್ತುಗಳನ್ನಿಟ್ಟರೆ ಅವುಗಳಿಗೆ ಬಹುಬೇಗನೆ ಬೆಂಕಿಗೆ ತಗಲುತ್ತವೆ, ಅಲ್ಲದೆ ಆ ವಸ್ತುಗಳ ಗುಣಮಟ್ಟವೂ ಹಾಳಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ತಿಳಿದೋ ತಿಳಿಯದೆಯೋ ಗ್ಯಾಸ್ ಸ್ಟೌವ್ ಪಕ್ಕದಲ್ಲಿ ಈ ಕೆಲವೊಂದು ವಸ್ತುಗಳನ್ನು ಇಟ್ಟಿದ್ದರೆ ಅವುಗಳನ್ನು ತಕ್ಷಣವೇ ತೆಗೆದು ಬಿಡಿ. ಆ ವಸ್ತುಗಳು ಯಾವುವು ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಅಡುಗೆಮನೆ ಬಟ್ಟೆಗಳು: ಕೆಲವೊಮ್ಮೆ, ಅಡುಗೆಮನೆಯಲ್ಲಿ ಅಡುಗೆ ಮಾಡುವಾಗ, ನಾವು ನಮ್ಮ ಕೈಗಳನ್ನು ಒರೆಸಲು ಅಥವಾ ಬಿಸಿ ಪಾತ್ರೆಗಳನ್ನು ಹಿಡಿಯಲು ಬಟ್ಟೆಗಳನ್ನು ಬಳಸುತ್ತೇವೆ. ಹೆಚ್ಚಿನವರು ಈ ಬಟ್ಟೆಗಳನ್ನು ಗ್ಯಾಸ್ ಸ್ಟೌವ್ ಪಕ್ಕದಲ್ಲಿಯೇ ಇಟ್ಟುಬಿಡುತ್ತಾರೆ. ಅಡುಗೆ ಮಾಡುವಾಗ ಆತುರದಲ್ಲಿ, ಈ ಬಟ್ಟೆಗಳು ಆಕಸ್ಮಿಕವಾಗಿ ಜ್ವಾಲೆಗಳು ಅಥವಾ ಬಿಸಿ ಪಾತ್ರೆಗಳೊಂದಿಗೆ ಸಂಪರ್ಕಕ್ಕೆ ಬಂದರೆ ಅವುಗಳಿಗೆ ಕ್ಷಣಾರ್ಧದಲ್ಲಿ ಬೆಂಕಿ ಹೊತ್ತಿಕೊಳ್ಳಬಹುದು. ಆದ್ದರಿಂದ ನ್ಯಾಪ್ಕಿನ್ ಅಥವಾ ಅಡುಗೆ ಬಟ್ಟೆಗಳನ್ನು ಗ್ಯಾಸ್ ಸ್ಟೌವ್ ಪಕ್ಕ ಇಡಬೇಡಿ.
ಅಡುಗೆ ಎಣ್ಣೆ ಬಾಟಲಿಗಳು: ಅಡುಗೆಗೆ ಎಣ್ಣೆ ಅತ್ಯಗತ್ಯ. ಅಡುಗೆ ಕೆಲಸ ಆದಷ್ಟು ಸುಲಭವಾಗಿ ಆಗಲಿ ಎಂದು ಬಹುತೇಕ ಎಲ್ಲರೂ ಈ ಎಣ್ಣೆ ಬಾಟಲಿಗಳನ್ನು ಗ್ಯಾಸ್ ಸ್ಟೌವ್ ಪಕ್ಕದಲ್ಲಿಯೇ ಇಟ್ಟುಬಿಡುತ್ತಾರೆ. ಒಲೆಯ ಬಳಿ ಇಟ್ಟ ಎಣ್ಣೆ ಬಾಟಲಿಗಳು ಬೇಗನೆ ಬಿಸಿಯಾಗುತ್ತವೆ. ಅದರಲ್ಲೂ ಅವು ಪ್ಲಾಸ್ಟಿಕ್ ಆಗಿದ್ದರೆ, ಅವು ಕರಗಿ ಎಣ್ಣೆ ಸೋರಿಕೆಯಾಗುವ ಅಪಾಯವಿದೆ. ಇದಲ್ಲದೆ, ಬೆಂಕಿ ಜ್ವಾಲೆಗೆ ಎಣ್ಣೆ ತಾಕಿದರೆ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆ ಇರುತ್ತದೆ.
ಪೇಪರ್ ಮತ್ತು ಶಾಪಿಂಗ್ ಬ್ಯಾಗ್‌ಗಳು: ಅನೇಕರು ಅಂಗಡಿಯಿಂದ ವಸ್ತುಗಳನ್ನು ತಂದ ಬಳಿಕ ಆ ವಸ್ತುಗಳ ಪೇಪರ್ ಮತ್ತು ಪ್ಲಾಸ್ಟಿಕ್ ಕವರ್‌ಗಳಲ್ಲೂ ಅಡುಗೆ ಮನೆಯಲ್ಲೇ ಇಟ್ಟುಬಿಡುತ್ತಾರೆ. ಕೆಲವು ಮನೆಗಳಲ್ಲಿ ಗ್ಯಾಸ್ ಒಲೆ ಪಕ್ಕವೇ ಪೇಪರ್, ಬ್ಯಾಗ್‌ಗಳನ್ನು ಇಟ್ಟುಬಿಡುತ್ತಾರೆ. ಈ ವಸ್ತುಗಳಿಗೆ ಸುಲಭವಾಗಿ ಬೆಂಕಿ ತಾಕುವ ಕಾರಣ ಅವುಗಳನ್ನು ಗ್ಯಾಸ್ ಒಲೆಯಿಂದ ಸಾಧ್ಯವಾದಷ್ಟು ದೂರವಿಡಿ.
ಬೆಂಕಿಕಡ್ಡಿಗಳು ಮತ್ತು ಲೈಟರ್‌ಗಳು: ಗ್ಯಾಸ್ ಹೊತ್ತಿಸಲು ಒಲೆಯ ಬಳಿ ಬೆಂಕಿಕಡ್ಡಿಗಳು ಮತ್ತು ಲೈಟರ್‌ಗಳನ್ನು ಇಡುವುದು ಸಾಮಾನ್ಯ. ಆದರೆ ಈ ರೀತಿ ಮಾಡುವುದು ಸರಿಯಲ್ಲ. ಏಕೆಂದರೆ ಶಾಖದ ನೇರ ಸಂಪರ್ಕವು ಲೈಟರ್‌ಗೆ ಹಾನಿಯಾಗಬಹುದು ಆದ್ದರಿಂದ ಈ ವಸ್ತುಗಳನ್ನು ಸುರಕ್ಷಿತ ಸ್ಥಳದಲ್ಲಿ ಇಡಬೇಕು.
ಇದನ್ನೂ ಓದಿ: ಅಡುಗೆ ಮಾಡುವಾಗ ಎಲ್ಪಿಜಿ ಉಳಿಸಬೇಕಾ? ಹೀಗೆ ಮಾಡಿದರೆ 15 ದಿನ ಹೆಚ್ಚು ಗ್ಯಾಸ್ ಬಳಸಬಹುದು!
ಮರದ ಚಮಚಗಳು ಮತ್ತು ಚಾಪ್ ಬೋರ್ಡ್‌ಗಳು: ಮರದ ಚಮಚಗಳು ಮತ್ತು ಚಾಪ್ ಬೋರ್ಡ್‌ಗಳು ಅಡುಗೆಮನೆಯಲ್ಲಿ ತುಂಬಾ ಉಪಯುಕ್ತವಾಗಿರುವ ವಸ್ತುಗಳು, ಆದ್ದರಿಂದ ಹೆಚ್ಚಿನವರು ಅವುಗಳನ್ನು ಗ್ಯಾಸ್ ಒಲೆಯ ಪಕ್ಕದಲ್ಲಿಯೇ ಇಟ್ಟುಬಿಡುತ್ತಾರೆ. ಈ ರೀತಿ ಬಿಸಿ ಬರ್ನರ್ ಬಳಿ ಮರದ ವಸ್ತುಗಳನ್ನು ಇಟ್ಟರೆ ಅವು ಕಪ್ಪಾಗಬಹುದು, ಬಿರುಕು ಬಿಡಬಹುದು ಅಥವಾ ಅವುಗಳಿಗೆ ಬೆಂಕಿ ಹಿಡಿದುಕೊಳ್ಳಬಹುದು.
ಉಪ್ಪು, ಸಕ್ಕರೆ ಮತ್ತು ಮಸಾಲೆ ಜಾಡಿಗಳು: ಅಡುಗೆ ಮಾಡುವಾಗ ಸುಲಭವಾಗಿ ಲಭ್ಯವಾಗುವಂತೆ ಅನೇಕ ಜನರು ಉಪ್ಪು, ಮೆಣಸು, ಅರಿಶಿನ ಮತ್ತು ಗರಂ ಮಸಾಲೆ ಸೇರಿಂದ ಅಡುಗೆಗೆ ಉಪಯುಕ್ತವಾದ ಬಹುತೇಕ ಎಲ್ಲಾ ವಸ್ತುಗಳನ್ನು ಒಲೆಯ ಪಕ್ಕದಲ್ಲಿಯೇ ಇಟ್ಟುಬಿಡುತ್ತಾರೆ. ಗ್ಯಾಸ್ ಒಲೆಯ ತೀವ್ರವಾದ ಶಾಖ ಮತ್ತು ಅನಿಲದಿಂದ ಬರುವ ಉಗಿಯ ತೇವಾಂಶವು ಮಸಾಲೆ ಡಬ್ಬಿಗಳ ಒಳಗೆ ಸುಲಭವಾಗಿ ಪ್ರವೇಶಿಸುತ್ತದೆ. ಪರಿಣಾಮವಾಗಿ, ದುಬಾರಿ ಮಸಾಲೆಗಳು ಬೇಗನೆ ಹಾಳಾಗುತ್ತವೆ, ಅವುಗಳ ಪರಿಮಳವೂ ಹೋಗಿಬಿಡುತ್ತದೆ.
ಪ್ಲಾಸ್ಟಿಕ್ ವಸ್ತುಗಳು: ಅಡುಗೆ ಮನೆಯಲ್ಲಿ ನೀವು ಬಳಸುವಂತಹ ಪ್ಲಾಸ್ಟಿಕ್ ವಸ್ತುಗಳನ್ನು ಯಾವುದೇ ಕಾರಣಕ್ಕೂ ಗ್ಯಾಸ್ ಒಲೆ ಪಕ್ಕದಲ್ಲಿ ಇಡಬೇಡಿ. ಇದರಿಂದ ಆ ವಸ್ತಗಳು ಬೇಗನೆ ಹಾಳಾಗುತ್ತವೆ.ಗ್ಯಾಸ್ ಸ್ಟೌವ್ ಸುತ್ತಲಿನ ಪ್ರದೇಶವನ್ನು ಯಾವಾಗಲೂ ಒಣಗಿರುವಂತೆ ನೋಡಿಕೊಳ್ಳಿ ಮತ್ತು ಸ್ವಚ್ಛವಾಗಿಡಿ. ಸ್ಟೌವ್ ಬಳಿ ಅನಗತ್ಯ ಪ್ಲಾಸ್ಟಿಕ್ ಮತ್ತು ಕಾಗದದ ವಸ್ತುಗಳನ್ನು ಸಂಗ್ರಹಿಸುವುದನ್ನು ತಪ್ಪಿಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ