ಅಡುಗೆ ಮಾಡುವಾಗ ಎಲ್‌ಪಿಜಿ ಉಳಿಸಬೇಕಾ? ಹೀಗೆ ಮಾಡಿದರೆ 15 ದಿನ ಹೆಚ್ಚು ಗ್ಯಾಸ್ ಬಳಸಬಹುದು!
ಇತ್ತೀಚೆಗೆ ಎಲ್‌ಪಿಜಿ ಸಿಲಿಂಡರ್ ಬಿಕ್ಕಟ್ಟು ಶುರುವಾಗಿರುವುದರಿಂದ ಅಡುಗೆ ಮಾಡುವಾಗ ಅಳೆದೂಸುರಿದು ಅಡುಗೆ ಮಾಡಬೇಕಾದ ಅನಿವಾರ್ಯತೆ ಮಹಿಳೆಯರದ್ದು (ಕೆಲವೊಮ್ಮೆ ಪುರುಷರದ್ದೂ ಕೂಡ). ದಿನದಿಂದ ದಿನಕ್ಕೆ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಾಗುತ್ತಿರುವುದರಿಂದ, ಹಾಗೂ ಸಿಲಿಂಡರ್ಗೆ ಬೇಡಿಕೆಯೂ ಹೆಚ್ಚಾಗಿರುವುದರಿಂದ ಅದನ್ನು ಜಾಣ್ಮೆಯಿಂದ ಬಳಸಿ ಉಳಿತಾಯ ಮಾಡುವುದು ಅತ್ಯಗತ್ಯ. ನಿಮ್ಮ ಅಡುಗೆಮನೆಯಲ್ಲಿ ಗ್ಯಾಸ್ ಉಳಿಸಲು ಇಲ್ಲಿವೆ ಕೆಲವು ಸರಳ ಮತ್ತು ಉಪಯುಕ್ತ ಟಿಪ್ಸ್.

ನವದೆಹಲಿ, ಜೂನ್ 2: ಇತ್ತೀಚಿನ ದಿನಗಳಲ್ಲಿ ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್ ಬುಕ್ ಮಾಡಿದರೂ ತಕ್ಷಣ ಸಿಗುತ್ತದೆ ಎಂದು ಹೇಳಲಾಗದಂತಹ ಸ್ಥಿತಿಯಿದೆ. ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಗ್ಯಾಸ್ ಸಿಲಿಂಡರ್ ಬಳಸುತ್ತಾರೆ. ಆದರೆ, ಗ್ಯಾಸ್ ಸಿಲಿಂಡರ್ ಹೆಚ್ಚು ಕಾಲ ಬಾಳಿಕೆ ಬರಬೇಕೆಂದು ನೀವು ಬಯಸಿದರೆ, ನೀವು ಕೆಲವು ಸಲಹೆಗಳನ್ನು ಅನುಸರಿಸಬೇಕು. ಅನೇಕ ಜನರು ಗ್ಯಾಸ್ ಅನ್ನು ವ್ಯರ್ಥ ಮಾಡುತ್ತಾರೆ. ನಿಮ್ಮ ಅಡುಗೆ ಅನಿಲ ಸಿಲಿಂಡರ್ ಬಳಕೆಯನ್ನು ಪರಿಣಾಮಕಾರಿಯಾಗಿ ಹೆಚ್ಚಿಸಲು ಕೆಲವು ಪ್ರಮುಖ ಮಾರ್ಗಗಳಿವೆ. ಈ ಸರಳ ಸಲಹೆಗಳನ್ನು ಅನುಸರಿಸುವ ಮೂಲಕ, ನೀವು ಸಾಮಾನ್ಯವಾಗಿ ಒಂದು ತಿಂಗಳವರೆಗೆ ಬಳಸುವ ಸಿಲಿಂಡರ್ ಅನ್ನು 45 ದಿನಗಳವರೆಗೆ ಬಳಸಬಹುದು. ಅಂದರೆ, ನೀವು 15 ದಿನಗಳ ಕಾಲ ಹೆಚ್ಚು ಗ್ಯಾಸ್ ಬಳಸಬಹುದು.
ಗ್ಯಾಸ್ ಉಳಿಸಲು ಏನು ಮಾಡಬೇಕು?:
ಬೆಂಕಿಯ ಬಣ್ಣ ಗಮನಿಸಿ:
ನೀವು ಮೊದಲು ಒಲೆ ಹಚ್ಚಿದಾಗ, ಜ್ವಾಲೆಯು ಯಾವಾಗಲೂ ನೀಲಿ ಬಣ್ಣದ್ದಾಗಿರಬೇಕು. ಜ್ವಾಲೆಯು ಕೆಂಪು ಅಥವಾ ಹಳದಿ ಬಣ್ಣದಲ್ಲಿದ್ದರೆ ಬರ್ನರ್ ರಂಧ್ರಗಳು ಮುಚ್ಚಿಹೋಗಿವೆ ಎಂದರ್ಥ. ಅಂತಹ ಸಮಯದಲ್ಲಿ ಅನಿಲವನ್ನು ಹೆಚ್ಚು ಬಳಸಲಾಗುತ್ತದೆ. ಇದು ನಿಮ್ಮ ಅಡುಗೆ ಗ್ಯಾಸ್ ಅನ್ನು ಬಹಳಷ್ಟು ವ್ಯರ್ಥ ಮಾಡುತ್ತದೆ. ಅದಕ್ಕಾಗಿಯೇ ನೀವು ಬರ್ನರ್‌ಗಳನ್ನು ತಕ್ಷಣ ಸ್ವಚ್ಛಗೊಳಿಸಬೇಕು.
ಪಾತ್ರೆಯ ಮುಚ್ಚಳ ಮುಚ್ಚಿ:
ಅಡುಗೆ ಮಾಡುವಾಗ ಪಾತ್ರೆಯ ಮೇಲೆ ಮುಚ್ಚಳವನ್ನು ಹಾಕುವುದು ಅತ್ಯಗತ್ಯ ಎಂಬುದನ್ನು ನೆನಪಿಡಿ. ಪಾತ್ರೆಯ ಮೇಲೆ ಮುಚ್ಚಳವನ್ನು ಹಾಕುವುದರಿಂದ, ಉಗಿ ಹೊರಹೋಗುವುದಿಲ್ಲ ಮತ್ತು ಆಹಾರವು ವೇಗವಾಗಿ ಬೇಯುತ್ತದೆ. ಇದು 30% ಅನಿಲವನ್ನು ಉಳಿಸುತ್ತದೆ.
ಇದನ್ನೂ ಓದಿ: ಎಲ್‌ಪಿಜಿ ಕೊರತೆ, ದರ ಏರಿಕೆಗೆ ಸೆಡ್ಡು: ಹೋಟೆಲ್ ಕಸ ನೀಡಿ ಬಯೋಗ್ಯಾಸ್ ಪಡೆಯಲು ಮುಂದಾದ ಬೆಂಗಳೂರಿನ ಹೋಟೆಲ್‌ಗಳು!
ಪಾತ್ರೆ ಒಣಗಿರಲಿ:
ಅಡುಗೆ ಪಾತ್ರೆಗಳನ್ನು ಒಲೆಯ ಮೇಲೆ ಇಡುವ ಮೊದಲು, ಅದು ಒದ್ದೆಯಾಗಿರಬಾರದು. ಅದು ಒಣಗಿರಬೇಕು. ಅದು ಒದ್ದೆಯಾಗಿದ್ದರೆ ಬಿಸಿಯಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಏಕೆಂದರೆ ಅದರಲ್ಲಿರುವ ನೀರು ಆವಿಯಾಗಬೇಕಾಗುತ್ತದೆ. ಆಗ ಅಡುಗೆ ಮಾಡುವ ಅವಕಾಶವಿರುತ್ತದೆ. ಇದು ಅನಿಲವನ್ನು ವ್ಯರ್ಥ ಮಾಡುತ್ತದೆ. ಅದಕ್ಕಾಗಿಯೇ ಅಡುಗೆ ಪಾತ್ರೆಗಳಲ್ಲಿ ಯಾವುದೇ ನೀರಿನ ಹನಿಗಳು ಇರಬಾರದು.
ಅಡುಗೆಗೆ ತಯಾರಿ ಇರಲಿ:
ಗ್ಯಾಸ್ ಸ್ಟವ್ ಆನ್ ಮಾಡುವ ಮುನ್ನವೇ ಅಡುಗೆಗೆ ಬೇಕಾದ ತರಕಾರಿ ಹೆಚ್ಚುವುದು, ಮಸಾಲೆ ಅರೆಯುವುದು, ಬೇಳೆ-ಅಕ್ಕಿ ತೊಳೆಯುವುದನ್ನು ಮುಗಿಸಿಕೊಳ್ಳಿ. ಸ್ಟವ್ ಆನ್ ಮಾಡಿದ ನಂತರ ತರಕಾರಿ ಹುಡುಕುವುದು ಅಥವಾ ಹೆಚ್ಚಲು ಕುಳಿತರೆ ಸಾಕಷ್ಟು ಗ್ಯಾಸ್ ವ್ಯರ್ಥವಾಗುತ್ತದೆ.
ನೆನೆಸಿಟ್ಟು ಅಡುಗೆ ಮಾಡಿ:
ಬೇಳೆ, ಅಕ್ಕಿ ಅಥವಾ ಕಡಲೆ ಬೇಳೆ ಬೇಯಿಸುವ ಮೊದಲು ಕನಿಷ್ಠ ಅರ್ಧ ಗಂಟೆ ನೀರಿನಲ್ಲಿ ನೆನೆಸಿಡಿ. ಇದರಿಂದ ಅವು ಬೇಗ ಬೇಯುತ್ತವೆ. ಅಡುಗೆ ಮಾಡಲು ಸಮಯವೂ ಕಡಿಮೆ ಸಾಕಾಗುತ್ತದೆ ಮತ್ತು ಅನಿಲ ಉಳಿತಾಯವಾಗುತ್ತದೆ.
ಕುಕ್ಕರ್ ಬಳಸಿ:
ಪ್ರೆಶರ್ ಕುಕ್ಕರ್‌ನಲ್ಲಿ ಸಾಧ್ಯವಾದಷ್ಟು ಆಹಾರವನ್ನು ಬೇಯಿಸುವುದು ಉತ್ತಮ. ಇದರಿಂದ ಅಡುಗೆ ಬೇಗ ಆಗುತ್ತದೆ. ಸಾಮಾನ್ಯ ಪಾತ್ರೆಗಳಿಗಿಂತ ಕುಕ್ಕರ್‌ನಲ್ಲಿ ಅಡುಗೆ ವೇಗವಾಗಿ ಆಗುತ್ತದೆ. ಅನಿಲ ಬಳಕೆ ಕಡಿಮೆಯಾಗುತ್ತದೆ. ಇದು ಸಾಮಾನ್ಯ ಪಾತ್ರೆಗಳಿಗಿಂತ ಶೇ. 20ರಷ್ಟು ಗ್ಯಾಸ್ ಮತ್ತು ಸಮಯ ಎರಡನ್ನೂ ಉಳಿಸುತ್ತದೆ. ಸಾಧ್ಯವಾದರೆ ಒಂದೇ ಕುಕ್ಕರ್‌ನಲ್ಲಿ ಕೆಳಗೆ ಅನ್ನ, ಮೇಲೆ ಬೇಳೆ ಅಥವಾ ತರಕಾರಿ ಇಟ್ಟು ‘ಮಲ್ಟಿ-ಟಾಸ್ಕಿಂಗ್’ ಅಡುಗೆ ಮಾಡಿ.
ಇದನ್ನೂ ಓದಿ: ಕಮರ್ಷಿಯಲ್ ಅಡುಗೆ ಅನಿಲವಾಗಿ ಎಥನಾಲ್ ಬಳಕೆ? ಎಲ್‌ಪಿಜಿ ಅವಲಂಬನೆ ತಗ್ಗಿಸಲು ಸರ್ಕಾರದಿಂದ ಹೊಸ ಮಾರ್ಗೋಪಾಯ
ಬರ್ನರ್ ಬಳಕೆ ಬಗ್ಗೆ ಗಮನವಿರಲಿ:
ದೊಡ್ಡ ಬರ್ನರ್ ನಲ್ಲಿ ಸಣ್ಣ ಪಾತ್ರೆ ಇಟ್ಟು ಅಡುಗೆ ಮಾಡಬಾರದು ಎಂಬುದನ್ನು ನೆನಪಿಡಿ. ಜ್ವಾಲೆ ಪಾತ್ರೆಯ ಆಚೆ ಹೋದರೆ ಗ್ಯಾಸ್ ವ್ಯರ್ಥವಾಗುತ್ತದೆ. ಆದ್ದರಿಂದ, ಮಧ್ಯಮ ಉರಿಯಲ್ಲಿ ಅಡುಗೆ ಮಾಡುವ ಅಭ್ಯಾಸ ಮಾಡಿಕೊಳ್ಳಿ. ಈ ಸಲಹೆಗಳನ್ನು ಅನುಸರಿಸುವ ಮೂಲಕ ನೀವು ಗ್ಯಾಸ್ ಬಳಕೆಯನ್ನು ಕಡಿಮೆ ಮಾಡಬಹುದು.
ಸಣ್ಣ ಉರಿಯಲ್ಲಿ ಅಡುಗೆ ಮಾಡಿ:
ನೀರು ಅಥವಾ ಅಡುಗೆ ಕುದಿಯಲು ಆರಂಭಿಸಿದ ತಕ್ಷಣ ಗ್ಯಾಸ್ ಉರಿಯನ್ನು ಸಣ್ಣದಾಗಿಸಿ. ನೀರು ಕುದಿಯಲು ಆರಂಭಿಸಿದ ಮೇಲೆ ಉರಿ ದೊಡ್ಡದಾಗಿದ್ದರೂ ತಾಪಮಾನ ಹೆಚ್ಚಾಗುವುದಿಲ್ಲ, ಕೇವಲ ಗ್ಯಾಸ್ ವ್ಯರ್ಥವಾಗುತ್ತದೆ. ಹೀಗಾಗಿ, ಆ ಸಮಯದಲ್ಲಿ ಸಿಮ್ನಲ್ಲಿಟ್ಟು ಅಡುಗೆ ಮಾಡಿ.
ಫ್ರಿಡ್ಜ್‌ನಲ್ಲಿಟ್ಟ ಪದಾರ್ಥಗಳನ್ನು ನೇರವಾಗಿ ಬಿಸಿ ಮಾಡಬೇಡಿ:
ಫ್ರಿಡ್ಜ್‌ನಲ್ಲಿಟ್ಟ ಹಾಲು, ತರಕಾರಿ ಅಥವಾ ಉಳಿದ ಅಡುಗೆಯನ್ನು ಹೊರಗೆ ತೆಗೆದ ತಕ್ಷಣ ಗ್ಯಾಸ್ ಮೇಲೆ ಇಡಬೇಡಿ. ಅದನ್ನು ಕನಿಷ್ಠ 1-2 ಗಂಟೆಗಳ ಕಾಲ ಹೊರಗಿಟ್ಟು, ಅದು ಕೋಣೆಯ ತಾಪಮಾನಕ್ಕೆ ಬಂದ ನಂತರ ಬಿಸಿ ಮಾಡಿ. ಇದರಿಂದ ಆ ಪದಾರ್ಥಗಳು ಬಿಸಿಯಾಗಲು ಹೆಚ್ಚು ಸಮಯ ಬೇಕಾಗುವುದಿಲ್ಲ.
ಸರಿಯಾದ ಪಾತ್ರೆಗಳ ಆಯ್ಕೆ:
ಅಡುಗೆಗೆ ಬಳಸುವ ಪಾತ್ರೆಯ ತಳಭಾಗವು ಅಗಲವಾಗಿ ಮತ್ತು ಸಮತಟ್ಟಾಗಿರಲಿ. ತುಂಬಾ ದಪ್ಪವಿರುವ ಪಾತ್ರೆಗಳು ಬಿಸಿಯಾಗಲು ಹೆಚ್ಚು ಗ್ಯಾಸ್ ಬೇಕಾಗುತ್ತದೆ. ಹಾಗೆಯೇ ತಳ ಸಣ್ಣಗಿರುವ ಪಾತ್ರೆಗಳಿಂದ ಉsರಿ ಆಚೆ ಹೋಗಿ ಗ್ಯಾಸ್ ವ್ಯರ್ಥವಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




