Raw Papaya Vs Ripe Papaya
Image Credit source: Pinterest
ಹವಾಮಾನ ಬದಲಾಗುತ್ತಿದ್ದಂತೆ ಚರ್ಮದ ಕಾಳಜಿ (Skin Care) ಯ ಬಗ್ಗೆ ಗಮನ ಹರಿಸುವ ನಾವುಗಳು ಕೂದಲಿನ ಆರೈಕೆ (Hair Care) ಯತ್ತ ಕಾಳಜಿ ವಹಿಸುವುದೇ ಇಲ್ಲ. ಅದಲ್ಲದೇ ಇತ್ತೀಚೆಗಿನ ದಿನಗಳಲ್ಲಿ ತಲೆ ಹೊಟ್ಟು, ಕೂದಲು ಉದುರುವಿಕೆ ಸೇರಿದಂತೆ ಇನ್ನಿತ್ತರ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಕೆಲವರು ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನ (Product) ಗಳನ್ನು ಖರೀದಿಸಿ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಾರೆ. ಆದರೆ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಪಪ್ಪಾಯಿ (Papaya) ಪ್ರಮುಖ ಪಾತ್ರವಹಿಸುತ್ತದೆ. ಆದರೆ ಈ ಕೂದಲಿನ ಆರೈಕೆಯಲ್ಲಿ ಕಚ್ಚಾ ಪಪ್ಪಾಯಿ (Raw Papaya) ಅಥವಾ ಮಾಗಿದ ಪಪ್ಪಾಯಿ (Ripe Papaya) ಈ ಎರಡೂ ವಿಶಿಷ್ಟ ಪ್ರಯೋಜನಗಳನ್ನು ನೀಡುತ್ತವೆಯಾದರೂ ಇದರಲ್ಲಿ ಉತ್ತಮ ಯಾವುದು? ಎನ್ನುವ ಗೊಂದಲ ಸಹಜ. ಹಾಗಾದ್ರೆ ಇದನ್ನು ಆಹಾರದಲ್ಲಿ ಸೇವಿಸುವ ಮುನ್ನ ಕೂದಲಿನ ಆರೈಕೆಯಲ್ಲಿ ಇದರ ಪ್ರಯೋಜನಗಳನ್ನು ತಿಳಿದುಕೊಳ್ಳುವುದು ಉತ್ತಮ.
ಕೂದಲಿನ ಬೆಳವಣಿಗೆಗೆ ಕಚ್ಚಾ ಪಪ್ಪಾಯಿಯ ಪ್ರಯೋಜನಗಳು:
- ಕಚ್ಚಾ ಪಪ್ಪಾಯಿಯಲ್ಲಿ ಪಪೈನ್ ಎಂಬ ಶಕ್ತಿಶಾಲಿ ಕಿಣ್ವವಿದೆ. ಇದು ನೆತ್ತಿಯಿಂದ ಸತ್ತ ಜೀವಕೋಶಗಳನ್ನು ತೆಗೆದುಹಾಕುತ್ತದೆ. ಕೂದಲು ಕಿರುಚೀಲಗಳು ಮುಚ್ಚಿಹೋಗುವುದನ್ನು ತಡೆದು ಆರೋಗ್ಯಕರ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
- ಕಚ್ಚಾ ಪಪ್ಪಾಯಿ ಕಿಣ್ವಗಳಿಂದ ಸಮೃದ್ಧವಾಗಿದ್ದು ಕೂದಲಿನ ಬೆಳವಣಿಗೆಗೆ ಅಡ್ಡಿಯಾಗುವ ಕಲ್ಮಶಗಳು, ಹೆಚ್ಚುವರಿ ಎಣ್ಣೆ ಮತ್ತು ತಲೆಹೊಟ್ಟು ತೆಗೆದುಹಾಕುತ್ತದೆ. ಹೀಗಾಗಿ ಸ್ವಚ್ಛವಾದ, ತಲೆಹೊಟ್ಟು ರಹಿತ ನೆತ್ತಿಯಲ್ಲಿ ಉತ್ತಮ ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ. ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಸಹಕಾರಿಯಾಗಿದೆ.
- ಕಚ್ಚಾ ಪಪ್ಪಾಯಿಯಲ್ಲಿ ವಿಟಮಿನ್ ಎ, ಸಿ ಮತ್ತು ಇ ಹೇರಳವಾಗಿದ್ದು, ಇದು ಕೂದಲಿನ ಕಿರುಚೀಲಗಳನ್ನು ಪೋಷಿಸಿ, ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ವಿಟಮಿನ್ ಎ ಅಂಶವು ಕೂದಲನ್ನು ತೇವಾಂಶದಿಂದ ಇಡುವ ನೈಸರ್ಗಿಕ ಎಣ್ಣೆಯಾದ ಸೆಬಮ್ ಉತ್ಪಾದನೆಯನ್ನು ಹೆಚ್ಚಿಸಿ ಕೂದಲು ಒಣಗುವುದನ್ನು ತಡೆಯುತ್ತದೆ.
ಕಚ್ಚಾ ಅಥವಾ ಕಾಯಿ ಪಪ್ಪಾಯಿ ಹೀಗೆ ಬಳಸಿ:
ಕಾಯಿ ಪಪ್ಪಾಯಿಯನ್ನು ಪೇಸ್ಟ್ ಮಾಡಿ, ಅದನ್ನು ನೆತ್ತಿ ಮತ್ತು ಕೂದಲಿಗೆ ನೇರವಾಗಿ ಹಚ್ಚಿ. ಸರಿಸುಮಾರು 20-30 ನಿಮಿಷಗಳ ಕಾಲ ಹಾಗೆಯೇ ಬಿಡಿ. ಆ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ತೊಳೆದರೆ ಕೂದಲಿನ ಎಲ್ಲಾ ಸಮಸ್ಯೆಗಳು ಕಡಿಮೆ ಮಾಡಿ ಸೊಂಪಾದ ಕೂದಲು ಬೆಳೆಯಲು ಅನುವು ಮಾಡಿಕೊಡುತ್ತದೆ.
ಇದನ್ನೂ ಓದಿ: ರಸಭರಿತ ತಾಜಾ ಕಲ್ಲಂಗಡಿ ಹಣ್ಣು ಖರೀದಿಸುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
ಕೂದಲಿನ ಬೆಳವಣಿಗೆಗೆ ಮಾಗಿದ ಪಪ್ಪಾಯಿಯ ಪ್ರಯೋಜನಗಳು:
- ಮಾಗಿದ ಪಪ್ಪಾಯಿಯಲ್ಲಿ ಉತ್ಕರ್ಷಣ ನಿರೋಧಕಗಳು ಹಾಗೂ ಬೀಟಾ-ಕ್ಯಾರೋಟಿನ್ ಸಮೃದ್ಧವಾಗಿದೆ. ಇದು ಸ್ವತಂತ್ರ ರಾಡಿಕಲ್‌ಗಳಿಂದ ಉಂಟಾಗುವ ಕೂದಲಿಗೆ ಹಾನಿಯನ್ನು ತಡೆಯುತ್ತದೆ. ಹಾಗೂ ಕೂದಲನ್ನು ಮಾಲಿನ್ಯ ಮತ್ತು ಯುವಿ ಕಿರಣಗಳಿಂದ ರಕ್ಷಿಸಿ ಕೂದಲಿನ ಆರೋಗ್ಯವನ್ನು ಕಾಪಾಡಿಕೊಂಡು ಬೆಳವಣಿಗೆಯನ್ನು ಉತ್ತೇಜಿಸುತ್ತವೆ.
- ಮಾಗಿದ ಪಪ್ಪಾಯಿಯಲ್ಲಿ ನೀರಿನಾಂಶ ಅಧಿಕವಾಗಿದ್ದು, ಇದು ಕೂದಲಿನಲ್ಲಿ ತೇವಾಂಶವನ್ನು ಉಳಿಸಿಕೊಳ್ಳುವಂತೆ ಮಾಡಿ ಕೂದಲು ಒಣಗುವುದು ಹಾಗೂ ಸೀಳಾಗುವುದನ್ನು ತಡೆಯುತ್ತದೆ.
- ಹಣ್ಣಾದ ಪಪ್ಪಾಯಿಯಲ್ಲಿ ಹೆಚ್ಚು ನೈಸರ್ಗಿಕ ಸಕ್ಕರೆ ಮತ್ತು ಪ್ರೋಟೀನ್‌ಗಳು ಅಧಿಕವಾಗಿದ್ದು, ಇದು ಕಿರುಚೀಲಗಳನ್ನು ಬಲಪಡಿಸಲು ಮತ್ತು ಕೂದಲು ಉದುರುವಿಕೆಯನ್ನು ತಡೆಯಲು ಸಹಕಾರಿಯಾಗಿದೆ.
ಮಾಗಿದ ಪಪ್ಪಾಯಿಯನ್ನು ಕೂದಲಿಗೆ ಈ ರೀತಿ ಬಳಸಿ:
ಮಾಗಿದ ಪಪ್ಪಾಯಿಯನ್ನು ತುರಿದು ಸ್ವಲ್ಪ ಜೇನುತುಪ್ಪ ಅಥವಾ ಮೊಸರಿನೊಂದಿಗೆ ಬೆರೆಸಿಕೊಳ್ಳಿ. ಈ ಮಿಶ್ರಣವನ್ನು ನೆತ್ತಿ ಮತ್ತು ಕೂದಲಿಗೆ ಹಚ್ಚಿ, 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ತದನಂತರದಲ್ಲಿ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ವಾರಕ್ಕೆ ಎರಡು ಬಾರಿ ಹೀಗೆ ಮಾಡಿದ್ರೆ ಕೂದಲಿಗೆ ಬೇಕಾದ ಫೋಷಕಾಂಶಗಳು ಸಿಗುತ್ತದೆ, ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ