Solar Eclipse 2022: ಇಂದು 2022ರ ಮೊದಲ ಸೂರ್ಯ ಗ್ರಹಣ; ಎಲ್ಲೆಲ್ಲಿ ಗೋಚರವಾಗಲಿದೆ?
Surya Grahan 2022: ಭಾಗಶಃ ಸೂರ್ಯಗ್ರಹಣವೆಂದರೆ, ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಆವರಿಸುವುದಿಲ್ಲ. ಯಾರೋ ಕಚ್ಚಿ ಒಂದು ತುಂಡನ್ನು ತೆಗೆದ ಹಾಗೆ ಕಾಣುವ ಅರ್ಧಚಂದ್ರಾಕಾರದ ಆಕಾರ ಕಂಡುಬರುತ್ತದೆ. ಇಂದು ನಡೆಯುವ ಸೂರ್ಯಗ್ರಹಣ ಈ ವರ್ಷದ ಮೊದಲ ಸೂರ್ಯಗ್ರಹಣವಾಗಿದೆ.
ಇಂದು (ಏ. 30) 2022ರ ಮೊದಲ ಸೂರ್ಯಗ್ರಹಣ (Surya Grahan) ಸಂಭವಿಸಲಿದೆ. ಈ ವರ್ಷ ಎರಡು ಸೂರ್ಯಗ್ರಹಣಗಳು ಸಂಭವಿಸಲಿದ್ದು, ಇದು ಮೊದಲನೆಯದಾಗಿದೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆಯಾದ ನಾಸಾ (NASA) ಸೂರ್ಯಗ್ರಹಣದ ಕುರಿತು ಕೆಲವು ಕುತೂಹಲಕಾರಿ ವಿವರಗಳನ್ನು ಒಳಗೊಂಡ ಅಧಿಸೂಚನೆಯನ್ನು ಪ್ರಕಟಿಸಿದೆ. ಏಪ್ರಿಲ್ 30 ರಂದು ನಡೆಯಲಿರುವ 2022ರ ಮೊದಲ ಸೂರ್ಯಗ್ರಹಣವು ಭಾಗಶಃ ಸೂರ್ಯಗ್ರಹಣವಾಗಿದೆ. ಇದನ್ನು ದಕ್ಷಿಣ ಅಮೆರಿಕಾ, ಅಂಟಾರ್ಕ್ಟಿಕಾ, ದಕ್ಷಿಣ ಮತ್ತು ಪೆಸಿಫಿಕ್ ಸಾಗರಗಳು ಸೇರಿದಂತೆ ಹಲವು ಪ್ರದೇಶಗಳಲ್ಲಿ ವೀಕ್ಷಿಸಬಹುದಾಗಿದೆ. ಏಪ್ರಿಲ್ 30ರ ಸಂಜೆ ಭಾರತದಲ್ಲಿ ಸೂರ್ಯ ಮುಳುಗುತ್ತಿದ್ದಂತೆ, ಚಿಲಿ, ಅರ್ಜೆಂಟೀನಾ, ಉರುಗ್ವೆಯ ಹೆಚ್ಚಿನ ಭಾಗಗಳು, ಪಶ್ಚಿಮ ಪರಾಗ್ವೆ, ನೈಋತ್ಯ ಬೊಲಿವಿಯಾ, ಆಗ್ನೇಯ ಪೆರು ಮತ್ತು ಸಣ್ಣ ಪ್ರದೇಶಗಳಲ್ಲಿ ಸ್ಪಷ್ಟವಾದ ಆಕಾಶವನ್ನು ಹೊಂದಿರುವವರಿಗೆ ಭಾಗಶಃ ಸೂರ್ಯ ಗ್ರಹಣ ಗೋಚರವಾಗಲಿದೆ.
ಭಾಗಶಃ ಸೂರ್ಯಗ್ರಹಣವೆಂದರೆ, ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಆವರಿಸುವುದಿಲ್ಲ. ಯಾರೋ ಕಚ್ಚಿ ಒಂದು ತುಂಡನ್ನು ತೆಗೆದ ಹಾಗೆ ಕಾಣುವ ಅರ್ಧಚಂದ್ರಾಕಾರದ ಆಕಾರ ಕಂಡುಬರುತ್ತದೆ.
ಭಾಗಶಃ ಸೂರ್ಯ ಗ್ರಹಣದ ಸಮಯ:
ಭಾರತೀಯ ಕಾಲಮಾನದ ಪ್ರಕಾರ, ಸೂರ್ಯಗ್ರಹಣವು ಏಪ್ರಿಲ್ 30ರಂದು ರಾತ್ರಿ 12:15ಕ್ಕೆ ಪ್ರಾರಂಭವಾಗುತ್ತದೆ, ಮೇ 1ರಂದು ಬೆಳಿಗ್ಗೆ 4:07ಕ್ಕೆ ಕೊನೆಗೊಳ್ಳುತ್ತದೆ.
ಗ್ರಹಣವನ್ನು ಭಾರತದಲ್ಲಿ ವೀಕ್ಷಿಸಬಹುದೇ?
ಏಪ್ರಿಲ್ 30ರಂದು ಸೂರ್ಯಗ್ರಹಣವನ್ನು ಭಾರತದಲ್ಲಿ ನೀವು ನೋಡಲು ಸಾಧ್ಯವಿಲ್ಲ. ಏಕೆಂದರೆ ಈ ಗ್ರಹಣದ ಸಮಯದಲ್ಲಿ ಭಾರತದಲ್ಲಿ ರಾತ್ರಿಯಾಗಿರುತ್ತದೆ. ಭೂಮಿಯ ಮತ್ತೊಂದು ಭಾಗದಲ್ಲಿ ಈ ವೇಳೆ ಹಗಲು ವೇಳೆಯಾಗಿರುತ್ತದೆ. ಆ ದೇಶಗಳಲ್ಲಿ ಸೂರ್ಯಗ್ರಹಣ ಗೋಚರವಾಗುತ್ತದೆ. ಭಾರತದಲ್ಲಿ ಗ್ರಹಣ ಗೋಚರವಾಗದ ಕಾರಣ, ಇದನ್ನು ಆಚರಿಸಲಾಗುವುದಿಲ್ಲ.
ಭಾಗಶಃ ಸೌರ ಗ್ರಹಣವು ಎಲ್ಲಿ ಗೋಚರಿಸುತ್ತದೆ?
ಚಿಲಿ, ಅರ್ಜೆಂಟೀನಾ, ಉರುಗ್ವೆಯ ಹೆಚ್ಚಿನ ಭಾಗಗಳು, ಪಶ್ಚಿಮ ಪರಾಗ್ವೆ, ನೈಋತ್ಯ ಬೊಲಿವಿಯಾ, ಆಗ್ನೇಯ ಪೆರು ಮತ್ತು ನೈಋತ್ಯ ಬ್ರೆಜಿಲ್‌ನಲ್ಲಿ ಈ ಭಾಗಶಃ ಸೂರ್ಯಗ್ರಹಣ ಗೋಚರಿಸುತ್ತದೆ. ಇದು ಅಂಟಾರ್ಕ್ಟಿಕಾದ ವಾಯುವ್ಯ ಕರಾವಳಿಯ ಭಾಗಗಳಲ್ಲಿ, ಫಾಕ್ಲ್ಯಾಂಡ್ ದ್ವೀಪಗಳು ಸೇರಿದಂತೆ ದಕ್ಷಿಣ ಅಮೆರಿಕಾದ ಆಗ್ನೇಯ ಕರಾವಳಿಯ ಅಟ್ಲಾಂಟಿಕ್ ಸಾಗರದಲ್ಲಿ ಮತ್ತು ದಕ್ಷಿಣ ಪೆಸಿಫಿಕ್ ಮಹಾಸಾಗರ ಮತ್ತು ದಕ್ಷಿಣ ಮಹಾಸಾಗರದ ಹೆಚ್ಚಿನ ಭಾಗಗಳಲ್ಲಿ ಕಾಣಿಸಿಕೊಳ್ಳುತ್ತದೆ.
ಇದನ್ನೂ ಓದಿ: Solar Eclipse 2022: ಸೂರ್ಯಗ್ರಹಣದ ಸಂದರ್ಭದಲ್ಲಿ ಏನು ಮಾಡಬೇಕು? ಏನು ಮಾಡಬಾರದು?
Solar Eclipse 2022: ಏ. 30ರಂದು ಈ ವರ್ಷದ ಮೊದಲ ಸೂರ್ಯಗ್ರಹಣ; ಈ ಸ್ಥಳಗಳಲ್ಲಿ ಭಾಗಶಃ ಸೂರ್ಯಗ್ರಹಣ ಗೋಚರ