ಹಿಂದೆಲ್ಲ ಹಸುಗೂಸನ್ನು ಆಸ್ಪತ್ರೆಗೆ ಚೆಕಪ್ಗೆಂದು ಕರೆದುಕೊಂಡು ಹೋಗುವ ಪದ್ಧತಿಯೆಲ್ಲ ಇರಲಿಲ್ಲ. ಮಗುವಿಗೆ ಏನೇ ಸಮಸ್ಯೆಯಾದರೂ ಅದಕ್ಕೆ ಮನೆಯಲ್ಲೇ ಮದ್ದ ಇರುತ್ತಿತ್ತು. ಮಗುವಿಗೆ ಬಜೆ, ನಂಜಿನಕಾಯಿ, ಜ್ಯೇಷ್ಟಮದ್ದು, ಜೇನುತುಪ್ಪ ಹೀಗೆ ಮನೆ ಔಷಧಿಗಳನ್ನು ನೆಕ್ಕಿಸುವ ಸಂಪ್ರದಾಯವಿತ್ತು. ಆದರೀಗ, ವೈದ್ಯರು ಮಗುವಿಗೆ 6 ತಿಂಗಳವರೆಗೂ ತಾಯಿಯ ಎದೆಹಾಲು ಬಿಟ್ಟರೆ ಬೇರಾವುದನ್ನೂ ಕೊಡಲೇಬಾರದು, ನೀರು ಸಹ ಕುಡಿಸಬಾರದು ಎಂದು ಹೇಳುತ್ತಾರೆ. ಅಷ್ಟಾದರೂ ಹಲವರು ತಮ್ಮ ಹಳೆಯ ಪದ್ಧತಿಯಂತೆ ಮಗುವಿಗೆ ಗಿಡಮೂಲಿಕೆಗಳು, ಮನೆಮದ್ದುಗಳನ್ನು ನೀಡುತ್ತಾರೆ. ಇಷ್ಟೆಲ್ಲ ಪೀಠಿಕೆ ಯಾಕೆಂದರೆ, ಕೆಲವು ದಿನಗಳ ಹಿಂದೆ ಬಾಲಿವುಡ್ ನಟಿ ಸೋನಂ ಕಪೂರ್ ತನ್ನ ಮಗುವಿನ ನಾಮಕರಣದ ಸಂದರ್ಭದಲ್ಲಿ ಪುರೋಹಿತರು ಮಗುವಿಗೆ ಜೇನುತುಪ್ಪ ನೆಕ್ಕಿಸಲು ಹೇಳಿದರೂ ನಾನು ಅವರೊಂದಿಗೆ ವಾದ ಮಾಡಿದೆ. ಮಗುವಿಗೆ ಜೇನುತುಪ್ಪ ನೆಕ್ಕಿಸಲು ನಾನು ಬಿಡಲಿಲ್ಲ ಎಂದು ಹೇಳಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು.
ಸೋನಂ ಕಪೂರ್ ಅವರ ಈ ವರ್ತನೆಯನ್ನು ಅನೇಕರು ಖಂಡಿಸಿದ್ದರು. ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಪದ್ಧತಿಯನ್ನು ನಿರಾಕರಿಸುವ ಮೂಲಕ ಸೋನಂ ಕಪೂರ್ ಉದ್ಧಟತನ ತೋರಿದ್ದಾರೆ. ಗೂಗಲ್ ಪೇರೆಂಟಿಂಗ್ಗೆ ಇದು ಒಂದು ಉದಾಹರಣೆ. ಗೂಗಲ್ ನೋಡಿಕೊಂಡು ಸೋನಂ ಕಪೂರ್ ಮಗುವಿಗೆ ಜೇನುತುಪ್ಪ ನೀಡಲು ನಿರಾಕರಿಸಿದ್ದಾರೆ. ಜೇನುತುಪ್ಪ ನೈಸರ್ಗಿಕ ಪದಾರ್ಥವಾಗಿದ್ದು, ಇದರಿಂದ ಮಗುವಿಗೆ ಯಾವ ತೊಂದರೆಯೂ ಇಲ್ಲ. ಹೀಗಾಗಿ ತಲೆಮಾರುಗಳಿಂದ ಈ ಸಂಪ್ರದಾಯ ಚಾಲ್ತಿಯಲ್ಲಿದೆ ಎಂಬೆಲ್ಲ ಆರೋಪಗಳು, ಚರ್ಚೆಗಳು ನಡೆದಿತ್ತು.
ಇದನ್ನೂ ಓದಿ: Breastfeeding: ಮಗುವಿಗೆ 6 ತಿಂಗಳ ನಂತರ ಎದೆಹಾಲು ಕುಡಿಸುವುದನ್ನು ನಿಲ್ಲಿಸಬೇಡಿ; ಇಲ್ಲಿದೆ ಕಾರಣ
ಹಿಂದಿನ ಕಾಲದಲ್ಲಿ ಯಾವ ಪದ್ಧತಿ ಇತ್ತೋ ಅದು ಬೇರೆ ವಿಚಾರ. ಆದರೆ, ತನ್ನ ಮಗುವಿಗೆ ಏನು ಕೊಡಬೇಕು, ಯಾವುದು ಒಳ್ಳೆಯದು ಎಂದು ನಿರ್ಧರಿಸುವ ಸಂಪೂರ್ಣ ಹಕ್ಕು ತಾಯಿಗೆ ಇರುತ್ತದೆ. ಸೋನಂ ಕಪೂರ್ ತನ್ನ ಮಗ ವಾಯುಗೆ ಅನ್ನಪ್ರಾಶನ ಮಾಡುವಾಗ ಜೇನುತುಪ್ಪ ನೀಡಲು ನಿರಾಕರಿಸಿದ್ದು ಆಕೆಯ ನಿರ್ಧಾರ. ಮಗುವಿಗೆ ಮೊದಲ ಆಹಾರವಾಗಿ ಜೇನುತುಪ್ಪವನ್ನು ನೀಡುವ, ಬಜೆ ನೆಕ್ಕಿಸುವ ಪದ್ಧತಿ ಬಹಳ ಹಿಂದಿನಿಂದಲೂ ಇದೆ. ಆದರೆ, ಈ ಪದ್ಧತಿಯಿಂದ ಮಗುವಿಗೆ ತೊಂದರೆಯಾಗುವ ಸಾಧ್ಯತೆಯೂ ಇರುತ್ತದೆ ಎಂಬುದು ಹಲವರಿಗೆ ತಿಳಿದಿಲ್ಲ.
“had an argument with Pandit ji for feeding Honey to newly born child because i don’t believe in these traditions”, like seriously ??? Wokeism at its peak!! pic.twitter.com/fBbQ7TVGVL
— Moana (@ladynationalist) September 27, 2023
ಮಗುವಿಗೆ ಜೇನುತುಪ್ಪ ನೀಡದಿರುವ ಬಗ್ಗೆ ಸೋನಂ ಕಪೂರ್ ತೆಗೆದುಕೊಂಡ ನಿರ್ಧಾರದ ಬಗ್ಗೆ ವೈದ್ಯರು ಮತ್ತು ಮಕ್ಕಳ ಡಯಟಿಷಿಯನ್ಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಗುವಿಗೆ 1 ವರ್ಷವಾಗುವ ಮೊದಲು ಆ ಶಿಶುಗಳಿಗೆ ಜೇನುತುಪ್ಪವನ್ನು ನೀಡುವುದರಿಂದ ಬೊಟುಲಿಸಮ್ ಎಂಬ ಆರೋಗ್ಯ ಸಮಸ್ಯೆ ಬರುವ ಸಾಧ್ಯತೆ ಇರುತ್ತದೆ. ಹೀಗಾಗಿ, ಮಗುವಿಗೆ 12 ತಿಂಗಳು ತುಂಬುವ ಮೊದಲು ಜೇನುತುಪ್ಪ ನೀಡುವುದು ಒಳ್ಳೆಯದಲ್ಲ ಎಂದು ಮಕ್ಕಳ ವೈದ್ಯರು ಹೇಳಿದ್ದಾರೆ.
ಇದನ್ನೂ ಓದಿ: ಒಟ್ಟಾರೆ ಆರೋಗ್ಯಕ್ಕೆ ಜೇನುತುಪ್ಪ ಎಷ್ಟು ಪ್ರಯೋಜನಕಾರಿ ಗೊತ್ತಾ?
ಇತ್ತೀಚೆಗೆ ತನ್ನ ಮಗು ವಾಯು ಬಗ್ಗೆ ಮಾತನಾಡಿದ್ದ ಸೋನಂ ಕಪೂರ್, ನಾನು ನನ್ನ ಮಗುವಿಗೆ ಜೇನುತುಪ್ಪ ನೀಡಲು ಒಪ್ಪಲಿಲ್ಲ. ಈ ಬಗ್ಗೆ ಪುರೋಹಿತರ ಬಳಿ ವಾದವನ್ನೂ ಮಾಡಿದ್ದೆ. ನಾನು ಮಗುವಿಗೆ ಮೊದಲ ಆಹಾರವಾಗಿ ಸೇಬು ಹಣ್ಣಿನ ಪ್ಯೂರಿ ಅಥವಾ ಪೇಸ್ಟ್ ಅನ್ನು ನೀಡುತ್ತಿದ್ದೇನೆ. ನಮ್ಮ ಸಂಸ್ಕೃತಿಯಲ್ಲಿ ನಾವು ಮಾಡುವ ಕೆಲವು ಹಳೆಯ ಪದ್ಧತಿಗಳಿವೆ. ಆಗಿನಿಂದಲೂ ಅದನ್ನು ತಾಯಂದಿರು ಮಾಡಿಕೊಂಡು ಬಂದಿದ್ದಾರೆ. ಅದರಿಂದ ಅವರ ಮಕ್ಕಳಾದ ನಮಗೆ ಯಾವುದೇ ತೊಂದರೆ ಆಗದಿರಬಹುದು. ಆದರೆ, ನನ್ನ ಮಗುವಿಗೆ ಅದನ್ನು ಮಾಡಲು ನಾನು ತಯಾರಿಲ್ಲ. ನಾವು ಮಾಡುವ ಪದ್ಧತಿಯಿಂದ ಏನು ಸಮಸ್ಯೆ ಆಗಬಹುದು ಎಂದು ತಿಳಿದ ಮೇಲೂ ಅದನ್ನು ಅನುಸರಿಸುವುದು ಸರಿಯಲ್ಲ. ಹೀಗಾಗಿ, ನನ್ನ ಮಗನ ಆರೋಗ್ಯದ ವಿಚಾರದಲ್ಲಿ ಪದ್ಧತಿಯ ಕಾರಣಕ್ಕಾಗಿ ನಾನು ರಾಜಿಯಾಗಲು ಸಿದ್ಧಳಿರಲಿಲ್ಲ ಎಂದು ಹೇಳಿರುವ ವಿಡಿಯೋ ವೈರಲ್ ಆಗಿತ್ತು.
ಇದಕ್ಕೆ ಅನೇಕರು ಟೀಕಿಸಿದ್ದರು. ನಾವೆಲ್ಲರೂ ನಮ್ಮ ಮಕ್ಕಳಿಗೆ ಜೇನುತುಪ್ಪ ನೀಡಿದ್ದೆವು. ನಮ್ಮ ಮಕ್ಕಳು ಜೀವಂತವಾಗಿ, ಆರಾಮಾಗಿಲ್ಲವೇ? ಸೋನಂ ಕಪೂರ್ ಸಂಪ್ರದಾಯವನ್ನು ಧಿಕ್ಕರಿಸಿದ್ದಾರೆ ಎಂದೆಲ್ಲ ಕಮೆಂಟ್ಗಳನ್ನು ಮಾಡಿದ್ದರು. ಸೋನಂ ಅವರಂತಹ ಜನರು ಸಾಂಪ್ರದಾಯಿಕ ಮಾರ್ಗವನ್ನು ಅನುಸರಿಸಲು ಹಿಂಜರಿಯುತ್ತಾರೆ. ಏಕೆಂದರೆ ಅವರ ಕಾನ್ವೆಂಟ್ ಶಾಲೆಗಳಲ್ಲಿ ಅವರಿಗೆ ಕಲಿಸುವ ನಮ್ಮ ಎಲ್ಲಾ ಸಾಂಪ್ರದಾಯಿಕ ಸಂಸ್ಕೃತಿಗಳು ವಿಜ್ಞಾನಕ್ಕೆ ವಿರುದ್ಧವಾಗಿವೆ ಎಂದು ಹೇಳಿಕೊಡಲಾಗಿರುತ್ತದೆ. ಅದನ್ನೇ ನಂಬಿಕೊಂಡು ಅವರು ಸಂಪ್ರದಾಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಸೋನಂ ಅವರಂತಹ ಜನರು ತಮ್ಮ ಹೆತ್ತವರು ಮತ್ತು ಅಜ್ಜಿಯರನ್ನು ವಿಜ್ಞಾನದ ಬಗ್ಗೆ ಏನೂ ತಿಳಿದಿಲ್ಲದ ಅನಾಗರಿಕರು ಎಂದು ಪರಿಗಣಿಸುತ್ತಾರೆ ಎಂದು ಕೆಲವರು ಟ್ವೀಟ್ ಮಾಡಿ ಹಂಗಿಸಿದ್ದರು.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:38 pm, Sat, 30 September 23