Improve Memory: ನೆನಪಿನ ಶಕ್ತಿ ಹೆಚ್ಚಿಸಲು ಈ ಆರೋಗ್ಯಕರ ಆಹಾರ, ಜೀವನಶೈಲಿ ಕ್ರಮ ಉತ್ತಮ

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 20, 2023 | 2:40 PM

ಸಾಮಾನ್ಯವಾಗಿ ಜನರು ದೈಹಿಕ ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಾರೆ. ಆದರೆ ಮಾನಸಿಕ ಆರೋಗ್ಯದ ಬಗ್ಗೆ ನಿರ್ಲಕ್ಷಿಸುತ್ತಾರೆ. ನಮ್ಮ ನೆನಪಿನ ಶಕ್ತಿಗಾಗಿ ಆರೋಗ್ಯಕರ ಮೆದುಳನ್ನು ಹೊಂದಿರುವುದು ಅತ್ಯಗತ್ಯ. ಹಾಗಾಗಿ ನಿಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗುವ ಕೆಲವು ಆರೋಗ್ಯಕರ ಆಹಾರಗಳು ಮತ್ತು ಜೀವನ ಶೈಲಿ ಅಭ್ಯಾಸಗಳ ಕುರಿತ ಮಾಹಿತಿ ಇಲ್ಲಿವೆ.

Improve Memory: ನೆನಪಿನ ಶಕ್ತಿ ಹೆಚ್ಚಿಸಲು ಈ ಆರೋಗ್ಯಕರ ಆಹಾರ, ಜೀವನಶೈಲಿ ಕ್ರಮ ಉತ್ತಮ
ಸಾಂದರ್ಭಿಕ ಚಿತ್ರ
Follow us on

ಬಿಡುವಿಲ್ಲದ ಜೀವನಶೈಲಿ ಮತ್ತು ಬಹುಕಾರ್ಯವು ನಮ್ಮ ಸ್ಮರಣಾ ಶಕ್ತಿಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇದರಿಂದಾಗಿ ಹೆಚ್ಚಿನ ಜನರು ಪ್ರತಿದಿನ ಒಂದಲ್ಲಾ ಒಂದು ವಿಷಯವನ್ನು ಮರೆತುಬಿಡುತ್ತಾರೆ. ಮೆದುಳು ನಮ್ಮ ದೇಹದ ಬಹುಮುಖ್ಯ ಅಂಗ. ನಮ್ಮ ಮೆದುಳು ಎಲ್ಲಾ ಸಮಯದಲ್ಲೂ ಸಕ್ರಿಯವಾಗಿರುತ್ತದೆ. ಮತ್ತು ಅದರ ಕಾರ್ಯವನ್ನು ಉತ್ತಮವಾಗಿ ಇರಿಸಿಕೊಳ್ಳಲು, ನಾವು ನಮ್ಮ ಜೀವನಶೈಲಿ ಮತು ಆಹಾರಕ್ರಮದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಇದರಿಂದಾಗಿ ಸ್ಮರಣೆ ಮತ್ತು ನಮ್ಮ ಮಾನಸಿಕ ಸ್ಥಿತಿಯನ್ನು ಬಲಪಡಿಸಹುದು. ನಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗುವ ಕೆಲವು ಆರೋಗ್ಯಕರ ಆಹಾರಗಳು ಮತ್ತು ಜೀವನ ಶೈಲಿ ಅಭ್ಯಾಸಗಳು ಇಲ್ಲಿವೆ.

ನೆನಪಿನ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗುವ ಆಹಾರಗಳು ಮತ್ತು ಜೀವನಶೈಲಿ ಅಭ್ಯಾಸಗಳೆಂದರೆ:

1. ನಿಮ್ಮ ಆಹಾರ ಕ್ರಮದಲ್ಲಿ ಮೆದುಳಿನ ಕ್ಷಮತೆಯನ್ನು ಸುಧಾರಿಸುವ ಆಹಾರಗಳನ್ನು ಸೇರಿಸಿ:

ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಗಳಿಂದ ಸಮೃದ್ಧವಾಗಿರುವ ಆಹಾರಗಳು ನಿಮ್ಮ ನೆನಪಿನ ಶಕ್ತಿಯನ್ನು ಸುಧಾರಿಸಲು ಸಹಕಾರಿ. ನಿಮ್ಮ ಆಹಾರದಲ್ಲಿ ಒಣ ಹಣ್ಣುಗಳು, ಹಣ್ಣುಗಳು, ಮೀನು, ಎಲೆಕೋಸು, ಬ್ರೋಕೊಲಿ, ಹೂಕೋಸು, ಹಸಿರು ಎಲೆ ತರಕಾರಿಗಳು, ಡಾರ್ಕ್ ಚಾಕೋಲೇಟ್ ನಂತಹ ಮೆದುಳಿನ ಕಾರ್ಯವನ್ನು ಉತ್ತೇಜಿಸುವ ಆಹಾರಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ. ಈ ಪೌಷ್ಟಿಕಾಂಶಯುಕ್ತ ಆಹಾರಗಳು ಮೆದುಳಿಗೆ ಅಗತ್ಯವಾದ ಜೀವಸತ್ವಗಳು, ಖನಿಜಗಳು ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳನ್ನು ಒದಗಿಸುತ್ತದೆ. ಇದು ಮೆದುಳಿನ ಅಭಿವೃದ್ಧಿಗೆ ಸಹಕಾರಿ. ಅಲ್ಲದೆ ಒಂದು ಲೋಟ ರೆಡ್ ವೈನ್ ಕೂಡ ನಿಮ್ಮ ಜ್ಞಾಪಕಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.

2. ಸಾಕಷ್ಟು ನಿದ್ರೆ ಮಾಡಿ:

ಮನಸ್ಸು ಹಾಗೂ ಮೆದುಳನ್ನು ಚುರುಕುಗೊಳಿಸಲು, ಅದಕ್ಕೂ ವಿಶ್ರಾಂತಿ ನೀಡಬೇಕಾಗುತ್ತದೆ. ನೀವು ಸಾಕಷ್ಟು ಪ್ರಮಾಣದ ನಿದ್ರೆ ಮಾಡದಿದ್ದರೆ, ನೀವು ನಿಮ್ಮ ಸ್ಮರಣಾ ಶಕ್ತಿಯನ್ನು ಕಳೆದುಕೊಳ್ಳುತ್ತೀರಿ ಮತ್ತು ಪ್ರತಿಯೊಂದು ವಿಷಯವನ್ನು ಮರೆಯಲು ಪ್ರಾರಂಭಿಸುತ್ತೀರಿ. ಆದ್ದರಿಂದ ಪ್ರತಿದಿನ 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡುವ ಮೂಲಕ ನಿಮ್ಮ ಮನಸ್ಸಿಗೆ ವಿಶ್ರಾಂತಿ ನೀಡುವ ಮೂಲಕ ಮೆದುಳನ್ನು ಚುರುಕುಗೊಳಿಸಬಹುದು.

3. ಮೆದುಳನ್ನು ಬಲಪಡಿಸುವ ವ್ಯಾಯಾಮ ಮಾಡಿ:

ಮೆದುಳಿಗೆ ಸವಾಲು ಹಾಕುವ ಆಟವನ್ನು ಮೂಲಕ ನಿಮ್ಮ ಮನಸ್ಸನ್ನು ಚುರುಕುಗೊಳಿಸಬಹುದು. ಸುಡೊಕು, ಒಗಟುಗಳಂತಹ ಮೆದುಳನ್ನು ಚುರುಕುಗೊಳಿಸುವ ಆಟಗಳನ್ನು ಆಡಿ. ಇಂತಹ ಆಟಗಳನ್ನು ನಿಯಮಿತವಾಗಿ ಆಡುವುದರಿಂದ ನಿಮ್ಮ ಮನಸ್ಸನ್ನು ಚುರುಕಾಗಿಡಲು ಮತ್ತು ಸ್ಮರಣೆಯನ್ನು ಹೆಚ್ಚಿಸಲು ಸಾಧ್ಯ. ಅಲ್ಲದೆ ಪುಸ್ತಕಗಳನ್ನು ಓದುವ ಮೂಲಕ ಕೂಡಾ ನೆನಪಿನ ಶಕ್ತಿಯನ್ನು ಬಲಪಡಿಸಬಹುದು.

4. ಧ್ಯಾನವನ್ನು ಅಭ್ಯಾಸ ಮಾಡಿ:

ಧ್ಯಾನ ಮತ್ತು ಸಾವಧಾನತೆಯು ನಿಮಗೆ ಆತಂಕ ಮತ್ತು ಮರೆವಿನ ಸಮಸ್ಯೆಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಯೋಗ, ಉಸಿರಾಟದ ವ್ಯಾಯಾಮ ಮತ್ತು ಧ್ಯಾನವು ಏಕಾಗ್ರತೆಯನ್ನು ಸುಧಾರಿಸುತ್ತದೆ, ಒತ್ತಡವನ್ನು ನಿವಾರಿಸಿ ಸ್ಮರಣಾ ಶಕ್ತಿಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಮಕ್ಕಳಲ್ಲಿ ನೆನಪಿನ ಶಕ್ತಿ ಹೆಚ್ಚಿಸಲು ಈ ಕೆಲವು ಸಲಹೆಗಳನ್ನು ಪಾಲಿಸಿ

5. ನಿಯಮಿತವಾಗಿ ವ್ಯಾಯಾಮ ಮಾಡಿ:

ವ್ಯಾಯಾಮವು ನಿಮ್ಮ ಹೃದಯ ಬಡಿತವನ್ನು ಹೆಚ್ಚಿಸುತ್ತದೆ. ಇದು ನಿಮ್ಮ ಮೆದುಳಿಗೆ ರಕ್ತವನ್ನು ಹರಿಯುವಂತೆ ಮಾಡುತ್ತದೆ, ಇದರಿಂದಾಗಿ ನಿಮ್ಮ ಸ್ಮರಣಾ ಶಕ್ತಿಯು ಚುರುಕಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಓಟ, ಈಜು, ಸೈಕ್ಲಿಂಗ್ ಹೀಗೆ ಕನಿಷ್ಟ 30 ನಿಮಿಷಗಳ ಕಾಲ ಯಾವುದೇ ವ್ಯಾಯಾಮಗಳನ್ನು ಮಾಡುವ ಮೂಲಕ ನೆನಪಿನ ಶಕ್ತಿಯನ್ನು ಬಲಪಡಿಸಬಹುದು.

6. ಸಾಮಾಜಿಕ ಜೀವನದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ:

ಸಾಕಷ್ಟು ಸಮಯಗಳ ಕಾಲ ಮೊಬೈಲ್, ಲ್ಯಾಪ್ಟ್ಯಾಪ್ ಮುಂದೆ ಸಮಯ ಕಳೆಯುವ ಬದಲು ಬಿಡುವಿನ ಸಮಯದಲ್ಲಿ ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ನೆರೆಹೊರೆಯವರ ಜೊತೆ ಸೇರಿ ಸಮಯವನ್ನು ಕಳೆಯಿರಿ. ಇದು ಬಂಧವನ್ನು ಬಲಪಡಿಸುವುದು ಮಾತ್ರವಲ್ಲದೆ ನಿಮ್ಮ ನೆನಪಿನ ಶಕ್ತಿಯನ್ನು ಬಲಪಡಿಸಲು ಸಹಕಾರಿ.

7. ಆಹಾರದಲ್ಲಿ ಕಡಿಮೆ ಸಕ್ಕರೆ ಬಳಸಿ:

ನಮ್ಮ ಆಹಾರ ಕ್ರಮವು ನಮ್ಮ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಆಹಾರದಲ್ಲಿ ಹೆಚ್ಚು ಸಕ್ಕರೆ ಸೇವಿಸುವವರ ಜ್ಞಾಪಕ ಶಕ್ತಿ ಕುಂಠಿತವಾಗುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ. ಆದ್ದರಿಂದ ಉತ್ತಮ ಸ್ಮರಣೆಗಾಗಿ ನೀವು ಸಕ್ಕರೆಯ ಬಳಕೆಯನ್ನು ನಿಯಂತ್ರಿಸುವುದು ಮುಖ್ಯವಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ