ಹೊಸ ಚಪ್ಪಲಿ ಧರಿಸಿ ಕಾಲಲ್ಲಿ ಗಾಯವಾಗಿದ್ಯಾ? ಮನೆಯಲ್ಲೇ ಈ ರೀತಿ ಗುಣಪಡಿಸಿ
ಕೆಲವೊಮ್ಮೆ ಹೊಸ ಚಪ್ಪಲಿ ಅಥವಾ ಶೂ ಖರೀದಿ ಮಾಡಿ ಹಾಕಿದ ಒಂದೆರಡು ದಿನಗಳಲ್ಲಿ ಕಾಲಿನ ಬೆರಳುಗಳ ಮೇಲೆ, ಕಾಲಿನಲ್ಲಿ ಗಾಯಗಳಾಗುತ್ತದೆ. ಹೌದು ಖರೀದಿ ಮಾಡಿರುವ ಶೂ ಅಥವಾ ಪಾದರಕ್ಷೆಗಳು ಸರಿ ಹೊಂದಲಿಲ್ಲ ಎಂದಾದರೆ ಈ ರೀತಿ ಗುಳ್ಳೆಗಳನ್ನು ಕಾಣಿಸಿಕೊಳ್ಳುತ್ತವೆ. ವಿಪರೀತ ಉರಿ ಅಥವಾ ನೋವನ್ನುಂಟು ಮಾಡುತ್ತದೆ. ಕಡಿಮೆ ಆಗುತ್ತೆ ಎಂದು ಕಡೆಗಣಿಸದೇ, ಮನೆಯಲ್ಲೇ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು. ಈ ಕುರಿತಾದ ಕೆಲವು ಸಲಹೆಗಳು ಇಲ್ಲಿವೆ.

ಈಗೇನಿದ್ರೂ ಮಾರ್ಡನ್ ಯುಗ, ಹೀಗಾಗಿ ಎಲ್ಲರನ್ನು ನಮ್ಮತ್ತ ತಿರುಗಿ ನೋಡಬೇಕೆಂದರೆ ಸ್ವಲ್ಪವಾದ್ರೂ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಬೇಕಾಗುತ್ತದೆ. ದುಬಾರಿ ಬೆಲೆಯ ಸ್ಟೈಲಿಶ್ ಚಪ್ಪಲಿ ಧರಿಸುವುದೆಂದರೆ ಎಲ್ಲರಿಗೂ ಇಷ್ಟನೇ. ಅದಲ್ಲದೇ, ಡ್ರೆಸ್ ಗೆ ತಕ್ಕಂತೆ ಜನರು ವಿವಿಧ ರೀತಿಯ ಚಪ್ಪಲಿಗಳನ್ನು ಧರಿಸುತ್ತಾರೆ. ನೋಡಲು ಚಂದ ಕಾಣುವ ಎಲ್ಲಾ ಶೂ ಹಾಗೂ ಚಪ್ಪಲಿ ನಿಮ್ಮ ಪಾದಕ್ಕೆ ಸರಿಹೊಂದುತ್ತೆ ಎಂದು ಹೇಳಲು ಆಗದು. ಒಂದು ವೇಳೆ ಖರೀದಿ ಮಾಡಿರುವ ಶೂ ಅಥವಾ ಚಪ್ಪಲಿಯ ಸೈಜ್ ನಲ್ಲಿ ಸ್ವಲ್ಪ ವ್ಯತ್ಯಾಸವಾದ್ರೂ ಪಾದಗಳ ಮೇಲೆ ಗುಳ್ಳೆಗಳುಳು ಏಳಲು ಕಾರಣವಾಗುತ್ತದೆ. ಹೀಗಾಗಿ ಕಂಫರ್ಟ್ ಆಗಿರುವ ಪಾದರಕ್ಷೆಗಳನ್ನು ಧರಿಸುವುದು ಬಹಳ ಮುಖ್ಯ. ಒಂದು ವೇಳೆ ಚಪ್ಪಲಿ ಧರಿಸಿ ಗುಳ್ಳೆಗಳು ಅಥವಾ ಗಾಯಗಳಾದಾಗ ಈ ರೀತಿ ಮನೆಯಲ್ಲೇ ಇದನ್ನು ಗುಣಪಡಿಸಬಹುದು.
- ಮುಲಾಮು ಹಚ್ಚಿ : ಶೂ ಅಥವಾ ಕಡಿತಗಳಾದಾಗ ಸೋಂಕಿತ ಪ್ರದೇಶವನ್ನು ತೆರೆದಿಟ್ಟುಕೊಳ್ಳುವುದು ಹೆಚ್ಚು ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳಿಗೆ ಸಂತಾನೋತ್ಪತ್ತಿ ಮಾಡಲು ಅನುಕೂಲವಾಗುತ್ತದೆ. ಹೀಗಾಗಿ ಈ ಗಾಯ ಅಥವಾ ಗುಳ್ಳೆಗಳ ಮೇಲೆ ದಿನಕ್ಕೆ ಎರಡು ಬಾರಿ ಮುಲಾಮುವನ್ನು ಅನ್ವಯಿಸಿ.
- ಐಸ್ ಕ್ಯೂಬ್‌ಗಳು : ಹೊಸ ಚಪ್ಪಲಿ ಧರಿಸಿ ಗಾಯವಾಗಿದ್ದರೆ ಐಸ್ ಕ್ಯೂಬ್ ಗಳನ್ನು ಪರಿಹಾರಕ್ಕಾಗಿ ಬಳಸಿಕೊಳ್ಳಬಹುದು. ಕೆಲವು ಐಸ್ ತುಂಡುಗಳನ್ನು ಒಂದು ಕ್ಲೀನ್ ಬಟ್ಟೆಯಲ್ಲಿ ಕಟ್ಟಿಕೊಂಡು ಶೂ ಕಚ್ಚಿದ ಜಾಗದಲ್ಲಿ ಸ್ವಲ್ಪ ಸಮಯದವರೆಗೆ ಇಟ್ಟುಕೊಳ್ಳಿ. ಹೀಗೆ ಮಾಡಿದ್ರೆ ಈ ಐಸ್ ಕ್ಯೂಬ್ ಶೂ ಕಡಿತವನ್ನು ಶಮನಗೊಳಿಸುತ್ತದೆ.
- ಆಲೋವೆರಾ ಜೆಲ್ : ಶೂ ಅಥವಾ ಚಪ್ಪಲಿ ಕಡಿತದಿಂದ ಗಾಯಗಳಾಗಿದ್ದರೆ ಅದನ್ನು ಶಮನಗೊಳಿಸಲು ಆಲೋವೆರಾ ಜೆಲ್ ಬಳಸುವುದು ಪರಿಣಾಮಕಾರಿಯಾಗಿದೆ. ಗಾಯಗಳ ಮೇಲೆ ಆಲೋವೆರಾ ಜೆಲ್ ಹಚ್ಚಿ ಹದಿನೈದು ನಿಮಿಷಗಳ ಕಾಲ ಹಾಗೆಯೇ ಬಿಡಿ. ಆ ಬಳಿಕ ತಣ್ಣೀರಿನಿಂದ ತೊಳೆಯಿರಿ. ಹೀಗೆ ಮಾಡಿದ್ರೆ ಗಾಯವು ಬೇಗನೆ ಮಾಗುತ್ತದೆ.
- ಆಲಿವ್ ಎಣ್ಣೆ : ಶೂ ಕಡಿತದಿಂದ ಗಾಯಗಳಾಗಿದ್ದರೆ ಆಲಿವ್ ಎಣ್ಣೆಯನ್ನು ಬಳಸುವುದು ಉತ್ತಮ. ಆಲಿವ್ ಎಣ್ಣೆಗೆ ಒಂದೆರಡು ಹನಿ ಬಾದಾಮಿ ಎಣ್ಣೆ ಬೆರೆಸಿ ಗಾಯ ಅಥವಾ ಗುಳ್ಳೆಗೆ ಹಚ್ಚಿದರೆ ಪರಿಣಾಮಕಾರಿಯಾಗಿದೆ.
- ಟೂತ್ಪೇಸ್ಟ್ ಬಳಸಿ : ಹಲ್ಲುಜ್ಜುವ ಟೂತ್ ಪೇಸ್ಟ್ ಸುಟ್ಟಗಾಯಗಳ ಮೇಲೆ ಬಳಸಲಾಗುತ್ತದೆ. ಒಂದು ವೇಳೆ ಹೊಸ ಚಪ್ಪಲಿ ಧರಿಸಿ ಗಾಯಗಳಾಗಿದ್ರೆ ಇದನ್ನು ಬಳಸಬಹುದು. ಇದರಲ್ಲಿರುವ ಅಡುಗೆ ಸೋಡಾ, ಮೆಂಥಾಲ್, ಪೆರಾಕ್ಸೈಡ್ ಅಂಶಗಳು ಗಾಯಗಳನ್ನು ಗುಣಪಡಿಸುತ್ತದೆ. ಹೀಗಾಗಿ ಚಪ್ಪಲಿ ಕಚ್ಚಿ ಗಾಯವಾಗಿದ್ರೆ ಟೂತ್ ಪೇಸ್ಟ್ ಹಚ್ಚಲು ಮರೆಯದಿರಿ.
- ಶೂಗಳು ಅಥವಾ ಚಪ್ಪಲಿ ಹಿಂಭಾಗದಲ್ಲಿ ಹತ್ತಿ ಇಡಿ : ಹೆಚ್ಚಿನವರಿಗೆ ಶೂ ಧರಿಸಿದರೆ ಹಿಂಬದಿಯಲ್ಲಿ ಗಾಯಗಳಾಗಬಹುದು. ಈ ರೀತಿ ಆಗದಂತೆ ತಡೆಯಲು ಬೂಟುಗಳು ಅಥವಾ ಮುಚ್ಚಿದ ಚಪ್ಪಲಿಯ ಹಿಂಭಾಗದಲ್ಲಿ ಹತ್ತಿಯನ್ನು ಇಡಿ. ಹೀಗೆ ಮಾಡಿದ್ರೆ ಹೊಸ ಶೂ ಅಥವಾ ಚಪ್ಪಲಿಯಿಂದ ಗಾಯಗಳಾಗದಂತೆ ತಡೆಯಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




