Life Lesson : ಈ ಸಂದರ್ಭದಲ್ಲಿ ನೀವು ಅಪ್ಪಿತಪ್ಪಿಯೂ ಮಾತನಾಡಲೇಬೇಡಿ, ಇದ್ರಿಂದ ತೊಂದರೆಯೇ ಹೆಚ್ಚು
ಕೆಲವರೂ ಹಿಂದೆ ಮುಂದೆ ಯೋಚಿಸುವುದನ್ನು ಬಿಟ್ಟು ಮಾತನಾಡುತ್ತಾರೆ. ಈ ಮಾತುಗಳು ಕೆಲವರಿಗೆ ನೋವನ್ನು ಉಂಟು ಮಾಡುತ್ತದೆ. ತನಗನಿಸಿದ್ದನ್ನು ನೇರವಾಗಿ ಹೇಳುವುದು ಹಾಗೂ ತಮ್ಮ ಭಾವನೆಯನ್ನು ವ್ಯಕ್ತಪಡಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಈ ಕೆಲವು ಸಂದರ್ಭದಲ್ಲಿ ಮಾತಿಗಿಂತ ಮೌನ ವಹಿಸುವುದೇ ಮುಖ್ಯ. ಇಂತಹ ಸಂದರ್ಭಗಳು ನಿಮಗೂ ಎದುರಾದರೆ ಈ ಸಮಯದಲ್ಲಿ ಆದಷ್ಟು ಮೌನವಾಗಿರುವುದನ್ನು ಕಲಿಯಿರಿ.
ಮಾತು ಬೆಳ್ಳಿ ಮೌನ ಬಂಗಾರ, ಈ ಮಾತು ಕೆಲವೊಂದು ಸಂದರ್ಭದಲ್ಲಿ ನಿಜವೆನಿಸುತ್ತದೆ. ಮಾತು ಮತ್ತು ಮೌನ ಎರಡೂ ಮನುಷ್ಯನಿಗೆ ಅತ್ಯಅಗತ್ಯವಾಗಿದೆ. ಆದರೆ ಅಗತ್ಯವಿದ್ದಾಗ ಮಾತ್ರ ಮಾತನಾಡುವುದು. ಅಗತ್ಯ ಇಲ್ಲದೆ ಇರುವಾಗ ಮೌನವನ್ನು ವಹಿಸುವುದು ತಿಳಿದಿರಬೇಕು. ಅದರಲ್ಲಿಯು ಕೆಲವು ಸಂದರ್ಭದಲ್ಲಿ ಮಾತಿಗಿಂತ ಮೌನವು ಹಿತಕರವಾಗಿರುತ್ತದೆ.
* ಎಲ್ಲರೂ ಕೂಡ ಎಲ್ಲವನ್ನು ಬಲ್ಲವರು ಆಗಿರುವುದಿಲ್ಲ. ಯಾರಾದರೂ ಗಂಭೀರ ವಿಷಯದ ಬಗ್ಗೆ ಮಾತನಾಡುತ್ತಿರುವಾಗ ಅದನ್ನು ಕೇಳುವ ತಾಳ್ಮೆಯಿರಬೇಕು. ಆ ವಿಷಯದ ಬಗ್ಗೆ ತಿಳಿದಿಲ್ಲದೇ ಇರುವಾಗ ಆ ಬಗ್ಗೆ ಮಾತನಾಡಬೇಡಿ. ಮೌನದಿಂದಲೇ ಅವರ ಮಾತುಗಳನ್ನು ಆಲಿಸಿ.
* ಕೋಪದಲ್ಲಿರುವಾಗ ಮೌನ ವಹಿಸುವುದೇ ಲೇಸು. ಕೆಲವೊಮ್ಮೆ ಕೋಪದಲ್ಲಿ ಒಬ್ಬ ವ್ಯಕ್ತಿಯು ತಾನು ಹೇಳಬಾರದ ವಿಷಯಗಳನ್ನು ಹೇಳುತ್ತಾನೆ. ಅದಲ್ಲದೇ, ಎದುರಿಗಿರುವ ವ್ಯಕ್ತಿಗೆ ನೋಯಿಸುವ ಸಾಧ್ಯತೆಯೇ ಹೆಚ್ಚಿರುತ್ತದೆ. ಈ ಸಮಯದಲ್ಲಿ ಮಾತಿಗಿಂತ ಮೌನವೇ ಒಳ್ಳೆಯದು.
* ದುಃಖದ ಸಮಯದಲ್ಲಿ ಮೌನ ವಹಿಸುವುದು ಬಹಳನೇ ಮುಖ್ಯ. ಯಾರೊಬ್ಬರ ನೋವಿಗೆ ನೀವು ಸ್ಪಂದಿಸುವಾಗ ಹೆಚ್ಚು ಮಾತನಾಡಬೇಡಿ. ಮೌನವಾಗಿ ಉಳಿಯುವ ಮೂಲಕ ನಿಮ್ಮ ನೋವನ್ನು ವ್ಯಕ್ತಪಡಿಸಬಹುದು. ಅಥವಾ ನಿಮ್ಮ ಮುಖದ ಬದಲಾವಣೆಗಳು ಎದುರಿಗೆ ವ್ಯಕ್ತಿಗೆ ಸಾಂತ್ವನವಾಗಬಹುದು.
* ಜೀವನದಲ್ಲಿ ಪ್ರಮುಖವಾದ ವಿಚಾರಗಳಲ್ಲಿ ನಿರ್ಧಾರವನ್ನು ತೆಗೆದುಕೊಳ್ಳುವಾಗ ಹೆಚ್ಚು ಮಾತನಾಡಬೇಡಿ. ಈ ವೇಳೆ ಒಬ್ಬರೇ ಕುಳಿತು ಮೌನವಾಗಿ ಯೋಚಿಸಿ ನಿರ್ಧಾರ ತೆಗೆದುಕೊಂಡರೆ ಹೆಚ್ಚು ಪರಿಣಾಮಕಾರಿಯಾಗುತ್ತದೆ.
ಇದನ್ನೂ ಓದಿ: ಕೆಲಸ ಮಾಡಿ ಸುಸ್ತಾಗಿದ್ದರೆ ದೇಹಕ್ಕೆ ಎನರ್ಜಿ ಕೊಡುತ್ತೆ ಈ ಆಹಾರ! ಒಮ್ಮೆ ಸೇವಿಸಿ ನೋಡಿ
* ಸುಳ್ಳು ಹೇಳುವ ಸಂದರ್ಭ ಅಥವಾ ಸಮಯ ಎದುರಾದಾಗ ಸುಳ್ಳು ಹೇಳುವ ಬದಲು ಮೌನ ವಹಿಸುವುದನ್ನು ಕಲಿಯಿರಿ. ಕೆಲವೊಮ್ಮೆ ಒಂದು ಸುಳ್ಳನ್ನು ಮುಚ್ಚಿಹಾಕಲು ಮತ್ತೊಂದು ಸುಳ್ಳು ಹೇಳಬೇಕಾಗುತ್ತದೆ. ಸುಳ್ಳಿನಿಂದ ಪರಿಸ್ಥಿತಿಯನ್ನು ಹದಗೆಟ್ಟು ಸಂಬಂಧವು ಹಾಳಾಗಬಹುದು. ಹೀಗಾಗಿ ಮೌನದಿಂದಲೇ ಆ ಸಂದರ್ಭವನ್ನು ತಿಳಿಯಾಗಿಸುವುದು ಒಳ್ಳೆಯ ಮಾರ್ಗವಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: