ಉಣ್ಣೆಯಿಂದ(ಟಿಕ್) ನಾಯಿಗಳಿಗೆ ಹರಡುವ ರೋಗಗಳ ಬಗ್ಗೆ ನಿಮಗೆ ತಿಳಿದಿದೆಯಾ? ರೋಗಲಕ್ಷಣಗಳೇನು? ಇಲ್ಲಿದೆ ಮಾಹಿತಿ
ಉಣ್ಣೆಗಳು ನಾಯಿಗಳಲ್ಲಿ ರಕ್ತಹೀನತೆ ಮತ್ತು ಇತರ ಹಲವಾರು ಪ್ರೋಟೋಜೋವಲ್ ಕಾಯಿಲೆಗಳಿಗೆ ಕಾರಣವಾಗಬಹುದು. ನಾಯಿಗಳಲ್ಲಿ ಉಣ್ಣೆಯಿಂದ ಹರಡುವ ರೋಗಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾ? ಇಲ್ಲಿದೆ ಮಾಹಿತಿ.
ಉಣ್ಣೆಗಳ ಬಗ್ಗೆ ನೀವು ಕೇಳಿರಬಹುದು. ಜೇಡದಂತಹ ಸಣ್ಣ ಪರಾವಲಂಬಿಗಳಾಗಿದ್ದು, ಎಂಟು ಕಾಲುಗಳು ಮತ್ತು ಮೊಟ್ಟೆಯ ಆಕಾರದ ದೇಹವನ್ನು ಹೊಂದಿರುತ್ತವೆ. ಅವು ರಕ್ತದಿಂದ ತುಂಬಿದಾಗ ಸ್ವಲ್ಪ ಹಿಗ್ಗಬಹುದು ಮತ್ತು ಕಪ್ಪಾಗಬಹುದು. ಅವು ಪ್ರಾಣಿಗಳು ಮತ್ತು ಜನರ ಮೇಲೆ ದಾಳಿ ಮಾಡುತ್ತವೆ. ರಕ್ತ ಕುಡಿದು ರೋಗಗಳನ್ನು ನೇರವಾಗಿ ದೇಹಕ್ಕೆ ಹರಡುತ್ತವೆ. ಈ ಉಣ್ಣೆಗಳು ಸಾಕು ಪ್ರಾಣಿಗಳನ್ನು ಸಾಕುವವರಿಗೆ ತಲೆನೋವು ತಂದಿದೆ. ಏಕೆಂದರೆ ಇವು ನಿಮ್ಮ ಮನೆಯ ಸಾಕು ಪ್ರಾಣಿಯ ಮೈ ಮೇಲೆ ಕೂರಬಹುದು. ಕೆಲವೊಮ್ಮೆ ಅದು ಯಾವುದೇ ತೊಂದರೆ ಇಲ್ಲದೆ ಬಿದ್ದು ಹೋಗಬಹುದು. ಆದರೆ ಬೀಳದೆ ಕಚ್ಚಿ ಹಿಡಿದರೆ ರಕ್ತ ಕುಡಿಯುವ ತನಕ ಬಿಡುವುದಿಲ್ಲ. ಬಳಿಕ ಆ ಉಣ್ಣೆಯಿಂದಾಗಿ ಸಾಕಷ್ಟು ಪ್ರಾಣಿಗಳು ಅನಾರೋಗ್ಯಕ್ಕೆ ಒಳಪಡುತ್ತವೆ. ಹೀಗಾಗಿ, ನೀವು ಅವುಗಳನ್ನು ಗುರುತಿಸಿದರೆ, ಅವುಗಳನ್ನು ತೆಗೆದುಹಾಕುವ ಸಾಧನವನ್ನು ಬಳಸಿಕೊಂಡು ಪ್ರಾಣಿಗಳ ದೇಹದಿಂದ ಬೇರ್ಪಡಿಸಬಹುದು. ಬಳಿಕ ನಿಮ್ಮ ಪಶುವೈದ್ಯ ತಜ್ಞರನ್ನು ಸಂಪರ್ಕಿಸಬೇಕು. ಉಣ್ಣೆಗಳು ನಿಮ್ಮ ನಾಯಿಗಳಲ್ಲಿ ರಕ್ತಹೀನತೆ ಮತ್ತು ಇತರ ಹಲವಾರು ಪ್ರೋಟೋಜೋವಲ್ ಕಾಯಿಲೆಗಳಿಗೆ ಕಾರಣವಾಗಬಹುದು. ದುರದೃಷ್ಟವಶಾತ್, ಪ್ರಸ್ತುತ ಅವರಿಗೆ ಚಿಕಿತ್ಸೆ ನೀಡಲು ಯಾವುದೇ ಲಸಿಕೆಗಳು ಲಭ್ಯವಿಲ್ಲ.
ಸೋಂಕಿತ ಟಿಕ್(ಉಣ್ಣೆ) ನಾಯಿ ಅಥವಾ ಯಾವುದೇ ಪ್ರಾಣಿಯ ದೇಹಕ್ಕೆ ಕಚ್ಚಿದಾಗ ರೋಗಕ್ಕೆ ತುತ್ತಾಗಬಹುದು. ನಾಯಿಗಳ ಮೇಲೆ ಪರಿಣಾಮ ಬೀರುವ ಪ್ರಮುಖ ಟಿಕ್-ಹರಡುವ ರೋಗಗಳೆಂದರೆ ಲೈಮ್ ರೋಗ, ಎರ್ಲಿಚಿಯೋಸಿಸ್, ಅನಾಪ್ಲಾಸ್ಮೋಸಿಸ್, ರಾಕಿ ಮೌಂಟೇನ್ ಚುಕ್ಕೆ ಜ್ವರ, ಬೇಬ್ಸಿಯೋಸಿಸ್, ಬಾರ್ಟೊನೆಲ್ಲೋಸಿಸ್ ಮತ್ತು ಹೆಪಟೊಜೋನೋಸಿಸ್. ಇವೆಲ್ಲವೂ ನಾಯಿಗಳಿಗೆ ಗಂಭೀರ ಆರೋಗ್ಯದ ಪರಿಣಾಮಗಳನ್ನು ಉಂಟುಮಾಡಬಹುದು ಮತ್ತು ಅನೇಕವು ಜನರ ಮೇಲೂ ಗಂಭೀರ ಆರೋಗ್ಯದ ಪರಿಣಾಮಗಳನ್ನು ಬೀರಬಹುದು “ಎಂದು ಡ್ರೂಲ್ಸ್ ಪೆಟ್ ಫುಡ್ ಪ್ರೈವೇಟ್ ಲಿಮಿಟೆಡ್ನ ಸಹಾಯಕ ಉತ್ಪನ್ನ ಮತ್ತು ಟೆಕ್ನೋ-ಕಮರ್ಷಿಯಲ್ ಮ್ಯಾನೇಜರ್ ಡಾ.ಪುನೀತ್ (ಎಂವಿಎಸ್ಸಿ, ಅನಿಮಲ್ ನ್ಯೂಟ್ರಿಷನ್) ಈ ಬಗ್ಗೆ ಹೇಳುತ್ತಾರೆ.
ನಾಯಿಗಳು ಟಿಕ್ ಹರಡುವ ರೋಗಗಳಿಗೆ ಹೆಚ್ಚು ಒಳಗಾಗುತ್ತವೆ ಅಲ್ಲದೆ ಪ್ರಸ್ತುತ ಅವುಗಳಿಗೆ ಚಿಕಿತ್ಸೆ ನೀಡಲು ಯಾವುದೇ ಲಸಿಕೆಗಳೂ ಲಭ್ಯವಿಲ್ಲ. ಸಾಕು ಪ್ರಾಣಿಗಳ ಮೇಲೆ ಉಣ್ಣೆ ಕೂರುವುದನ್ನು ಸಂಪೂರ್ಣವಾಗಿ ತಡೆಗಟ್ಟುವುದು ಅಥವಾ ತಪ್ಪಿಸುವುದು ತುಂಬಾ ಕಷ್ಟ. ಆದ್ದರಿಂದ ಟಿಕ್ ಹರಡುವ ಕೆಲವು ರೋಗಗಳು, ಲಕ್ಷಣಗಳು ಮತ್ತು ಅವುಗಳ ತಡೆಗಟ್ಟುವಿಕೆಯನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಉಣ್ಣೆಗಳು ಎಕ್ಟೋಪಾರಸೈಟ್ಗಳಾಗಿವೆ ಅಂದರೆ ಅವು ಪ್ರಾಣಿಗಳ ಚರ್ಮದ ಮೇಲೆ ಅಂದರೆ ದೇಹದ ಹೊರಭಾಗದಲ್ಲಿ ವಾಸಿಸುವ ಕೀಟಗಳಾಗಿವೆ. ಅನೇಕ ಜಾತಿಯ ಉಣ್ಣೆಗಳಿವೆ ಮತ್ತು ವರ್ಷದ ವಿವಿಧ ಸಮಯಗಳಲ್ಲಿ ವಿವಿಧ ಭೌಗೋಳಿಕ ಪ್ರದೇಶಗಳಲ್ಲಿ ಸಕ್ರಿಯವಾಗಿರುತ್ತವೆ. ಉಣ್ಣೆಗಳು ಬದುಕುಳಿಯಲು, ಅವು ಪ್ರಾಣಿಗಳನ್ನು ಕಚ್ಚಿ ರಕ್ತವನ್ನು ಕುಡಿಯಬೇಕು. ಅಲ್ಲದೆ ಇವುಗಳಿಂದ ಬೇರೆ ಬೇರೆ ರೀತಿಯ ಬ್ಯಾಕ್ಟೀರಿಯಾ, ವೈರಸ್ಗಳು ಹರಡಬಹುದು ಅವುಗಳ ಕಡಿತದ ಮೂಲಕ ಸಾಕುಪ್ರಾಣಿಗಳಿಗೆ ಅವು ಹರಡಬಹುದು, ಇದು ವಿವಿಧ ರೋಗಗಳಿಗೆ ಕಾರಣವಾಗುತ್ತದೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ.
ಟಿಕ್ನಿಂದ ಹರಡುವ ಕೆಲವು ರೋಗಗಳು ಮತ್ತು ಅವುಗಳ ರೋಗಲಕ್ಷಣಗಳ ಬಗ್ಗೆ ಇಲ್ಲಿದೆ ಮಾಹಿತಿ:
-ಎರ್ಲಿಚಿಯೋಸಿಸ್ ಎರ್ಲಿಚಿಯೋಸಿಸ್ ಅಥವಾ ಟಿಕ್ ಜ್ವರವು ಪ್ರಪಂಚದಾದ್ಯಂತ ಕಂಡುಬರುವ ಸಾಮಾನ್ಯ ಟಿಕ್ನಿಂದ ಹರಡುವ ರೋಗವಾಗಿದೆ. ಸಾಮಾನ್ಯವಾಗಿ, ಟಿಕ್ ಕಚ್ಚಿದ 1 – 3 ವಾರಗಳ ನಂತರ ಈ ರೋಗದ ಲಕ್ಷಣಗಳು ಪ್ರಾರಂಭವಾಗುತ್ತವೆ. ವರ್ತನೆ ಅಥವಾ ಹಸಿವಿನ ಬದಲಾವಣೆಗಳನ್ನು ಗಮನಿಸುವುದು ಈ ಹಂತದಲ್ಲಿ ಮುಖ್ಯವಾಗಿದೆ. ಪ್ರಮುಖ ರೋಗಲಕ್ಷಣಗಳೆಂದರೆ ಜ್ವರ, ಕಡಿಮೆ ಹಸಿವು ಮತ್ತು ಕಡಿಮೆ ರಕ್ತದ ಪ್ಲೇಟ್ಲೆಟ್ಗಳು (ಪ್ಲೇಟ್ಲೆಟ್ಗಳು ರಕ್ತ ಹೆಪ್ಪುಗಟ್ಟುವಿಕೆಗೆ ಸಹಾಯ ಮಾಡುವ ಜೀವಕೋಶಗಳು), ಹೆಚ್ಚಾಗಿ ಮೂಗಿನ ರಕ್ತಸ್ರಾವ ಅಥವಾ ಜಜ್ಜುಗಾಯ ಅಥವಾ ರಕ್ತಹೀನತೆಯ ಇತರ ರೋಗಲಕ್ಷಣದಿಂದ ಕಂಡುಬರುತ್ತವೆ. -ಬೇಬಿಸಿಯೋಸಿಸ್ ಬೇಬಿಸಿಯೋಸಿಸ್ ಪ್ರಾಥಮಿಕವಾಗಿ ಉಣ್ಣೆಯ ಕಡಿತದಿಂದ ಉಂಟಾಗುವ ಮತ್ತೊಂದು ರೋಗವಾಗಿದೆ. ಇದು ನಾಯಿ ಕಡಿತದಿಂದ ಪ್ರಸರಣ (ತಾಯಿ ನಾಯಿಯಿಂದ ಅದರ ಮಕ್ಕಳಿಗೆ) ಮತ್ತು ಬಹುಶಃ ಕಲುಷಿತ ರಕ್ತದ ಮೂಲಕವೂ ಹರಡಬಹುದು. ಈ ರೋಗಕ್ಕೆ ಸಂಬಂಧಿಸಿದ ಮುಖ್ಯ ಸಮಸ್ಯೆಯೆಂದರೆ ‘ಹಿಮೋಲಿಸಿಸ್’, ಅಂದರೆ ಕೆಂಪು ರಕ್ತ ಕಣಗಳು (ಆರ್ಬಿಸಿ) ಒಡೆಯುವುದು. ಇತರ ರೋಗಲಕ್ಷಣಗಳೆಂದರೆ ಆಲಸ್ಯ, ಮಸುಕಾದ ಒಸಡುಗಳು, ಗಾಢ ಬಣ್ಣದ ಮೂತ್ರ ಮತ್ತು ಕಾಮಾಲೆ.
– ಬಾರ್ಟೊನೆಲ್ಲಾ ಬಾರ್ಟೊನೆಲ್ಲಾ ನಾಯಿಗಳು ಮತ್ತು ಬೆಕ್ಕುಗಳೆರಡರಲ್ಲೂ ಹೊರಹೊಮ್ಮುತ್ತಿರುವ ಪ್ರಮುಖ ಸಾಂಕ್ರಾಮಿಕ ರೋಗವಾಗಿದೆ. ಇದನ್ನು ಬೆಕ್ಕು ಸ್ಕ್ರ್ಯಾಚ್ ಕಾಯಿಲೆ ಎಂದೂ ಕರೆಯಲಾಗುತ್ತದೆ. ಹೆಚ್ಚಿನ ಸೋಂಕುಗಳು ಸಾಮಾನ್ಯವಾಗಿ ಚಿಗಟಗಳಿಂದ ಸೋಂಕಿಗೆ ಒಳಗಾದ ಸಾಕು ಅಥವಾ ಕಾಡು ಬೆಕ್ಕುಗಳಿಂದ ಗೀರುಗಳ ನಂತರ ಸಂಭವಿಸುತ್ತವೆ. ವಾಂತಿ ಮತ್ತು ಅತಿಸಾರ, ಜ್ವರ, ಊದಿಕೊಂಡ ದುಗ್ಧರಸ ಗ್ರಂಥಿಗಳು, ನೋಯುತ್ತಿರುವ ಸ್ನಾಯುಗಳು, ಕೆಮ್ಮು ಮತ್ತು ಉಸಿರಾಟದ ತೊಂದರೆ ಇಲ್ಲಿನ ಪ್ರಮುಖ ಲಕ್ಷಣಗಳಾಗಿವೆ.
-ಅನಾಪ್ಲಾಸ್ಮೋಸಿಸ್ ಅನಾಪ್ಲಾಸ್ಮಾ ಉಣ್ಣೆಗಳಲ್ಲಿರುವ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಸಾಮಾನ್ಯವಾಗಿ ಈ ರೋಗವು ಪ್ರಪಂಚದಾದ್ಯಂತ ಕಂಡುಬರುತ್ತದೆ. ರೋಗಲಕ್ಷಣಗಳಲ್ಲಿ ಜ್ವರ, ಲಿಂಪಿಂಗ್, ಕೀಲು ನೋವು ಮತ್ತು ಕಡಿಮೆ ರಕ್ತದ ಪ್ಲೇಟ್ಲೆಟ್ ಸೇರಿವೆ, ಇದು ರಕ್ತಸ್ರಾವದ ಅಸ್ವಸ್ಥತೆಗೆ ಕಾರಣವಾಗುತ್ತದೆ.
ಈ ಎಲ್ಲಾ ಟಿಕ್ ನಿಂದ ಹರಡುವ ರೋಗಗಳು ಮಾನವರಲ್ಲಿ ಮಲೇರಿಯಾವನ್ನು ಹೋಲುವ ರೋಗಲಕ್ಷಣಗಳನ್ನು ಹೊಂದಿವೆ. ಜ್ವರ, ಕಡಿಮೆ ಹಸಿವು ಮತ್ತು ಕಡಿಮೆ ರಕ್ತದ ಪ್ಲೇಟ್ಲೆಟ್ ಎಣಿಕೆಯಂತಹ ರೋಗಲಕ್ಷಣಗಳು ಮಲೇರಿಯಾವನ್ನು ಹೋಲುತ್ತವೆ ಎಂದು ತಜ್ಞರು ಹೇಳುತ್ತಾರೆ.
ಟಿಕ್-ಹರಡುವ ರೋಗಗಳನ್ನು ತಡೆಗಟ್ಟುವಿಕೆ ಹೇಗೆ?
ಟಿಕ್ನಿಂದ ಹರಡುವ ರೋಗವನ್ನು ತಡೆಗಟ್ಟುವ ಉತ್ತಮ ಮಾರ್ಗವೆಂದರೆ ಮನೆಗಳಲ್ಲಿ ಉಣ್ಣೆ ಪೀಡಿತ ಪ್ರದೇಶಗಳನ್ನು ತಪ್ಪಿಸುವುದು. ಸಾಕಷ್ಟು ಉಣ್ಣೆಗಳನ್ನು ಹೊಂದಿರುವ ಪ್ರದೇಶಗಳಿಗೆ ಕೀಟನಾಶಕ ಸಿಂಪಡನೆ ಮಾಡಬಹುದು . ಉಣ್ಣೆಗಳು ಮನೆ ಹೆಚ್ಚಾಗಿ ಇವು ಅಂಗಳ ಅಥವಾ ಕೊಟ್ಟಿಗೆಯಲ್ಲಿ ವಾಸಿಸಬಹುದು ಮತ್ತು ಈ ಪ್ರದೇಶಗಳಲ್ಲಿ ಕೀಟನಾಶಕ ಸಿಂಪಡನೆ ಯೊಂದಿಗೆ ವೈದ್ಯರ ಬಳಿ ಪ್ರಾಣಿಗಳಿಗೆ ಚಿಕಿತ್ಸೆ ನೀಡುವುದು ಅಷ್ಟೇ ಮುಖ್ಯ.