Garbhageete: ಮಗುವಿಗೆ ಶಿಕ್ಷಣ ನೀಡುವುದರ ಜತೆಗೆ ಪೋಷಕರು ಕೂಡ ಶಿಕ್ಷಿತರಾಗಬೇಕು: ಕಮಲಾ ಭಾರದ್ವಾಜ್
ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಬೇಕು, ವಿದ್ಯಾವಂತರನ್ನಾಗಿ ಮಾಡಬೇಕು, ಸಮಾಜದಲ್ಲಿ ಒಳ್ಳೆಯ ಹೆಸರು ಮಾಡಬೇಕು ಎಂಬುದು ಎಲ್ಲಾ ಪೋಷಕರ ಕನಸಾಗಿದೆ.
ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಬೇಕು, ವಿದ್ಯಾವಂತರನ್ನಾಗಿ ಮಾಡಬೇಕು, ಸಮಾಜದಲ್ಲಿ ಒಳ್ಳೆಯ ಹೆಸರು ಮಾಡಬೇಕು ಎಂಬುದು ಎಲ್ಲಾ ಪೋಷಕರ ಕನಸಾಗಿದೆ. ನಾನು ನನ್ನ ಮಕ್ಕಳನ್ನು ಸರಿಯಾದ ರೀತಿಯಲ್ಲಿ ಬೆಳೆಸುತ್ತಿದ್ದೇನೆಯೇ ಇಲ್ಲವೇ ಎಂಬುದು ಸಾಕಷ್ಟು ಪೋಷಕರನ್ನು ಕಾಡುವ ಪ್ರಶ್ನೆಯಾಗಿದೆ ಈ ಕುರಿತು ಯೋಗ ತಜ್ಞೆ ಕಮಲಾ ಭಾರದ್ವಾಜ್ ನೀಡಿರುವ ಮಾಹಿತಿ ಇಲ್ಲಿದೆ.
ಮಗುವಿಗೆ ಅಗತ್ಯವಾದ ಶಿಕ್ಷಣ, ಆಹಾರ, ಆಟಿಕೆಗಳು ಸೇರಿದಂತೆ ಎಲ್ಲಾ ಪ್ರಮುಖ ಬೇಡಿಕೆಗಳನ್ನು ನೀವು ಈಡೇರಿಸಿದ್ದೀರಿ ಅದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಇಷ್ಟೇ ಸಾಕೇ ಎಂಬುದು ಪ್ರಶ್ನೆಯಾಗಿದೆ.
ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವುದರ ಜತೆಗೆ ನೀವು ಕೂಡ ಶಿಕ್ಷಿತರಾಗಬೇಕು. ಅದರ ಜತೆಗೆ ನಿಜವಾದ ಕರ್ತವ್ಯವೇನೆಂಬುದನ್ನು ಅರಿಯಬೇಕು. ಮಗುವಿನ ನಿಜವಾದ ಶಿಕ್ಷಣ ಎಂದರೆ ಏನು, ಪೋಷಕರ ಕರ್ತವ್ಯವೇನು, ಮಗುವಿಗೆ ಶಿಕ್ಷಣ ನೀಡುವುದರ ಅರ್ಥವೇನು ಎಂಬುದು ಮನದಟ್ಟಾಗಬೇಕು.
ಮಕ್ಕಳಿಗೆ ಜೀವ ಕೊಟ್ಟಾಗ ಪೋಷಕರಿಗೆ ಮಕ್ಕಳ ನಿಜವಾದ ಶಿಕ್ಷಣವೇನು, ಯಾವುದಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಬೇಕು ಎಂಬುದರ ಕುರಿತು ಕಡಿಮೆ ಆಲೋಚನೆ ಮಾಡುತ್ತಾರೆ.
ಕೆಲವು ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಆಹಾರ ಹಾಗೂ ಅವರ ಬೇಡಿಕೆಗಳನ್ನು ಪೂರೈಸಿದರೆ ಉತ್ತಮ ಪೋಷಕರಾಗುತ್ತೇವೆ ಎಂದುಕೊಂಡಿರುತ್ತಾರೆ.
ಬಳಿಕ ಮಗು ಶಾಲೆಗೆ ಹೋಗಲು ಆರಂಭಿಸುತ್ತದೆ, ಆಗ ಪೋಷಕರು ತಮ್ಮ ಜವಾಬ್ದಾರಿಯನ್ನು ಶಿಕ್ಷಕರ ಕೈಗೆ ವರ್ಗಾಯಿಸುತ್ತಾರೆ, ಹಾಗೆಯೇ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಇನ್ನುಮುಂದೆ ಶಿಕ್ಷಕರದ್ದು ಎಂದುಕೊಳ್ಳುತ್ತಾರೆ.
ಆದರೆ ಪೋಷಕರ ಕರ್ತವ್ಯ ಅಷ್ಟೆಕ್ಕೆ ಮುಗಿಯುವುದಿಲ್ಲ, ಕೆಲವು ಪೋಷಕರು ಮಾತ್ರ ಮಕ್ಕಳ ಜೀವನದುದ್ದಕ್ಕೂ ತಾವು ನೀಡಬೇಕಾದ ತಿಳಿವಳಿಕೆಯನ್ನು ನೀಡುತ್ತಲೇ ಇರುತ್ತಾರೆ. ಮಕ್ಕಳಿಗೆ ದೊಡ್ಡವರಿಗೆ ಗೌರವ ಕೊಡುವುದು ಹೇಗೆ, ವಿಧೇಯತೆ, ನೇರವಾಗಿ ಮಾತನಾಡುವುದು, ಸತ್ಯವನ್ನೇ ಹೇಳುವುದು, ಕೋಪವಿಲ್ಲದೆ ಮಾತನಾಡುವುದು, ಶಾಂತ ಸ್ವಭಾವ, ನಿಸ್ವಾರ್ಥ ಭಾವನೆ ಇವೆಲ್ಲವನ್ನೂ ಹೇಳಿಕೊಡಬೇಕು.
ನೀವು ನಿಮ್ಮ ಮಕ್ಕಳ ಎದುರು ಜಗಳವಾಡುವುದು, ಕೆಟ್ಟ ಶಬ್ದಗಳನ್ನು ಬಳಸಿ ಮಾತನಾಡುವುದು, ಕೋಪ ಇವೆಲ್ಲವೂ ಪರಿಣಾಮ ಬೀರುತ್ತದೆ. ಕೇವಲ ನಿಮ್ಮ ಮಕ್ಕಳು ಮಾತ್ರವಲ್ಲ ಆ ವಯಸ್ಸಿನವು ಯಾರೇ ಇರಲಿ ನಿಮ್ಮ ನಡವಳಿಕೆ ಚೆನ್ನಾಗಿರಬೇಕು.
ಮಕ್ಕಳು ಏನೇ ಪ್ರಶ್ನೆಗಳನ್ನು ಕೇಳಲಿ ಅದಕ್ಕೆ ಸಿಲ್ಲಿಯಾಗಿ ಉತ್ತರಿಸುವುದು, ಹಾಸ್ಯಭರಿತವಾಗಿ ಮಾತನಾಡುವುದು ಅದೆಲ್ಲವನ್ನೂ ತಪ್ಪಿಸಿ, ಏಕೆಂದರೆ ಮಕ್ಕಳು ಮುಗ್ಧರಾಗಿರುತ್ತಾರೆ ನಿಮಗೆ ಉತ್ತರ ಗೊತ್ತಿದ್ದರೆ ತಿಳಿಸಿ, ಇಲ್ಲವಾದಲ್ಲಿ ಪ್ರಾಮಾಣಿಕವಾಗಿ ಗೊತ್ತಿಲ್ಲ ಎಂದು ಒಪ್ಪಿಕೊಳ್ಳಿ.
ಮಕ್ಕಳಿಗೆ 12-14ನೇ ವಯಸ್ಸಿನಲ್ಲಿ ಹೇಳಿದ್ದನ್ನು ಕೇಳಿ ತಿಳಿದುಕೊಳ್ಳುವ ಸಾಮರ್ಥ್ಯವಿರುತ್ತದೆ. ಆಗ ಮಕ್ಕಳಿಗೆ ಸರಿ ತಪ್ಪಿನ ಕುರಿತು ಅರ್ಥ ಮಾಡಿಸುವುದು ಸುಲಭ.
ಮಾಹಿತಿ: ಕಮಲಾ ಭಾರಧ್ವಾಜ್ ಪ್ರಸಿದ್ಧ ಯೋಗ ತಜ್ಞರಾಗಿದ್ದು, ಸತ್ಯವೆನ್ನುವ ಯೋಗ ಕೇಂದ್ರವನ್ನು ಮುನ್ನಡೆಸುತ್ತಿದ್ದಾರೆ. ಯೋಗದಲ್ಲಿ ಎಂಎಸ್ಸಿ ಮಾಡಿದ್ದು, ಹಾಗೆಯೇ ಯೋಗದಲ್ಲಿಯೇ ಪಿಜಿ ಡಿಪ್ಲೊಮಾ ಓದಿದ್ದಾರೆ. ಅವರು ಜೈನ್ ಕಾಲೇಜಿನಲ್ಲಿ ಎಂಬಿಎ ಪೂರೈಸಿದ್ದಾರೆ.