
ಹಣ್ಣು, ತರಕಾರಿಗಳನ್ನು (vegetables) ಸೇವನೆ ಮಾಡುವ ಮುನ್ನ ಚೆನ್ನಾಗಿ ತೊಳೆಯುವುದು ತುಂಬಾನೇ ಮುಖ್ಯ. ಇಲ್ಲದಿದ್ದರೆ ಅದರಲ್ಲಿರುವ ಸೂಕ್ಷ್ಮಾಣು ಜೀವಿಗಳು, ರಾಸಾಯನಿಕಗಳು ದೇಹವನ್ನು ಸೇರುವ ಸಾಧ್ಯತೆ ಇರುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಅಡುಗೆ ಮಾಡುವ ಮುನ್ನ ತರಕಾರಿಗಳನ್ನು ಶುದ್ಧ ನೀರಿನಿಂದ ತೊಳೆಯುತ್ತಾರೆ. ಇದರಲ್ಲಿ ಕೆಲವರು ಕತ್ತರಿಸುವ ಮುನ್ನ ತರಕಾರಿಗಳನ್ನು ಕ್ಲೀನ್ ಮಾಡಿದರೆ, ಇನ್ನೂ ಕೆಲವರು ತರಕಾರಿಗಳ ಸಿಪ್ಪೆ ತೆಗೆದು, ಅವುಗಳನ್ನು ಚೆನ್ನಾಗಿ ಕತ್ತರಿಸಿದ ಬಳಿಕವೇ ನೀರಿನಲ್ಲಿ ಸ್ವಚ್ಛಗೊಳಿಸುತ್ತಾರೆ. ಇವೆರಡಲ್ಲಿ ಯಾವುದು ಸರಿ, ತರಕಾರಿ ಸ್ವಚ್ಛಗೊಳಿಸುವ ಸರಿಯಾದ ವಿಧಾನ ಯಾವುದು ಎಂಬುದರ ಪೂರ್ಣ ವಿವರವನ್ನು ತಿಳಿದುಕೊಳ್ಳಿ.
ತರಕಾರಿಗಳನ್ನು ಕತ್ತರಿಸುವ ಅಥವಾ ಸಿಪ್ಪೆ ತೆಗೆಯುವ ಮೊದಲು ಅವುಗಳನ್ನು ಚೆನ್ನಾಗಿ ತೊಳೆಯಬೇಕು. ಹಾಗೆ ಮಾಡುವುದರಿಂದ ಕೊಳಕು ಮತ್ತು ಇತರೆ ಸೂಕ್ಷ್ಮಾಣು ಜೀವಿಗಳನ್ನು ತೆಗೆದುಹಾಕಲು ಸಹಾಯವಾಗುತ್ತದೆ. ಅದೇ ಕತ್ತರಿಸಿದ ಬಳಿಕ ತರಕಾರಿಗಳನ್ನು ನೀರಿನಿಂದ ತೊಳೆಯುವುದರಿಂದ ಕೆಲವು ಅಗತ್ಯ ಜೀವಸತ್ವಗಳು ಮತ್ತು ಖನಿಜಗಳು ಕಡಿಮೆಯಾಗಬಹುದು. ಹಾಗಾಗಿ ತರಕಾರಿಗಳನ್ನು ಕತ್ತರಿಸುವ ಅಥವಾ ಸಿಪ್ಪೆ ತೆಗೆಯುವ ಮೊದಲು ಅವುಗಳನ್ನು ತೊಳೆಯುವುದು ಯಾವಾಗಲೂ ಉತ್ತಮ. ತರಕಾರಿಗಳನ್ನು ಮೊದಲು ತೊಳೆಯದೆ ಕತ್ತರಿಸುವುದರಿಂದ ಕೊಳಕು, ಧೂಳು, ಇತರೆ ಮಾಲಿನ್ಯಕಾರಕ ಹಾಗೂ ಬ್ಯಾಕ್ಟೀರಿಯಾಗಳು ಚಾಕುವಿನ ಜೊತೆಗೆ ತರಕಾರಿಯ ಒಳಭಾಗಕ್ಕೆ ವರ್ಗಾಯಿಸಲ್ಪಡುತ್ತದೆ. ಆದ್ದರಿಂದ, ಸಿಪ್ಪೆ ತೆಗೆಯುವ ಆಲೂಗಡ್ಡೆ, ಕ್ಯಾರೆಟ್, ಸೌತೆಕಾಯಿ ಮತ್ತು ಇತರ ಎಲ್ಲಾ ತರಕಾರಿಗಳನ್ನು ಮೊದಲು ನೀರಿನಿಂದ ತೊಳೆಯಬೇಕು. ನಂತರವೇ ಅವುಗಳನ್ನು ಕಟ್ ಮಾಡಬೇಕು. ತರಕಾರಿಗಳನ್ನು ನೀರಿನಿಂದ ತೊಳೆಯುವುದರಿಂದ ಎಲ್ಲಾ ಕೊಳಕು ಮತ್ತು ಬ್ಯಾಕ್ಟೀರಿಯಾಗಳು ನಿವಾರಣೆಯಾಗುತ್ತವೆ.
ತರಕಾರಿಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿದ ನಂತರ ನೀರಿನಿಂದ ತೊಳೆಯುವುದು ಒಳ್ಳೆಯ ಅಭ್ಯಾಸವಲ್ಲ. ಏಕೆಂದರೆ ತರಕಾರಿಗಳ ಕೆಲವು ಜೀವಸತ್ವಗಳು ಮತ್ತು ಖನಿಜಗಳು ನೀರಿನಲ್ಲಿ ಕರಗುತ್ತವೆ. ಇದಲ್ಲದೆ ಚಾಕುವಿನ ಮೂಲಕ ಬ್ಯಾಕ್ಟೀರಿಯಾಗಳು, ಕೊಳಕುಗಳು ತರಕಾರಿಯಲ್ಲಿ ಅಂಟಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಕತ್ತರಿಸುವ ಮುನ್ನವೇ ಎಲ್ಲಾ ತರಕಾರಿಗಳನ್ನು ಶುದ್ಧ ನೀರಿನಿಂದ ತೊಳೆಯಬೇಕು.
ಇದನ್ನೂ ಓದಿ: ಅಡುಗೆಮನೆಯಲ್ಲಿ ಎಂದಿಗೂ ಈ ತಪ್ಪುಗಳನ್ನು ಮಾಡಲು ಹೋಗ್ಬೇಡಿ
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ