ಇಂದಿನ ಕಾಲಘಟ್ಟದಲ್ಲಿ ಖಿನ್ನತೆ, ಆತಂಕ ಮತ್ತು ಒತ್ತಡ ಮುಂತಾದ ಮಾನಸಿಕ ಆರೋಗ್ಯ (Mental Health) ಸಂಬಂಧಿ ಸಮಸ್ಯೆಗಳು ಗಣನೀಯವಾಗಿ ಹೆಚ್ಚುತ್ತಿವೆ. ಮಾನಸಿಕ ಅಸ್ವಸ್ಥತೆಗಳು ಗಂಭೀರ ಆರೋಗ್ಯ ಸಮಸ್ಯೆಗಳಾಗಿದ್ದು, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆದುಕೊಳ್ಳದಿದ್ದರೆ, ಇದು ನಮ್ಮ ಆರೋಗ್ಯದ ಮೇಲೆ ನಕರಾತ್ಮಕ ಪರಿಣಾಮವನ್ನು ಬೀರಬಹುದು. ಅನೇಕ ಜನರು ಖಿನ್ನತೆ ಮತ್ತು ಒತ್ತಡವನ್ನು ಆರೋಗ್ಯ ಸಂಬಂಧಿ ಸಮಸ್ಯೆಗಳೆಂದು ಪರಿಗಣಿಸುವುದಿಲ್ಲ ಹಾಗೂ ಅದನ್ನು ನಿರ್ಲಕ್ಷಿಸುತ್ತಾರೆ. ಆದರೆ ಈ ಸಮಸ್ಯೆಗಳು ಭವಿಷ್ಯದಲ್ಲಿ ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು. ಇಂದು ಬದಲಾಗುತ್ತಿರುವ ಜೀವನಶೈಲಿಯ ನಡುವೆ ಮಾನಸಿಕ ಆರೋಗ್ಯ ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ. ಇದರಿಂದಾಗಿ ಪ್ರತಿ ವರ್ಷ ನೂರಾರು ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಮಾನಸಿಕ ಆರೋಗ್ಯದ ಮಹತ್ವವನ್ನು ಜನರಿಗೆ ತಿಳಿಸಲು ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಶಿಕ್ಷಣ ಮತ್ತು ಜಾಗೃತಿಯನ್ನು ಮೂಡಿಸಲು ಪ್ರತಿವರ್ಷ ಅಕ್ಟೋಬರ್ 10 ರಂದು ಜಾಗತಿಕ ಮಟ್ಟದಲ್ಲಿ ಮಾನಸಿಕ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಆಚರಣೆ ಯಾವಾಗ ಪ್ರಾರಂಭವಾಯಿತು, ಅದರ ಪ್ರಾಮುಖ್ಯತೆ ಏನು ಎಂಬುದನ್ನು ನೋಡೋಣ.
ವರ್ಲ್ಡ್ ಫೆಡರೇಶನ್ ಫಾರ್ ಮೆಂಟಲ್ ಹೆಲ್ತ್ (WFMH) ಸಂಸ್ಥೆಯ ಉಪಕ್ರಮದ ಮೇರೆಗೆ ಅಕ್ಟೋಬರ್ 10, 1992 ರಲ್ಲಿ ವಿಶ್ವಸಂಸ್ಥೆಯು ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸಲು ಪ್ರಾರಂಭಿಸಿತು. ಜಾಗತಿಕವಾಗಿ ಈ ದಿನವನ್ನು ಆಚರಿಸುವ ಮುಖ್ಯ ಉದ್ದೇಶವು ಮಾನಸಿಕ ಆರೋಗ್ಯವನ್ನು ಉತ್ತೇಜಿಸುವುದು ಮತ್ತು ಮಾನಸಿಕ ಆರೋಗ್ಯ ಸಂಬಂಧಿತ ವಿಷಯಗಳ ಬಗ್ಗೆ ಸಾರ್ವಜನಿಕರಿಗೆ ಶಿಕ್ಷಣ ನೀಡುವುದಾಗಿದೆ.
ಇದನ್ನೂ ಓದಿ: ಮಾನಸಿಕ ಆರೋಗ್ಯ ವಿಮೆ ಮಾಡಿಸುತ್ತೀರಾ? ಈ ವಿಷಯಗಳು ನಿಮಗೆ ತಿಳಿದಿರಲಿ
ಅನೇಕ ಜನರು ಖಿನ್ನತೆ ಮತ್ತು ಒತ್ತಡವನ್ನು ಸಣ್ಣ ಸಮಸ್ಯೆ ಎಂದು ಪರಿಗಣಿಸಿ ನಿರ್ಲಕ್ಷಿಸುತ್ತಾರೆ, ಆದರೆ ಇದು ತುಂಬಾ ಗಂಭೀರ ಆರೋಗ್ಯ ಸಮಸ್ಯೆಯಾಗಿದ್ದು, ಇದರಿಂದಾಗಿ ಪ್ರತಿ ವರ್ಷ ನೂರಾರು ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಉತ್ತಮ ಮಾನಸಿಕ ಆರೋಗ್ಯದ ಪ್ರಾಮುಖ್ಯತೆ ಮತ್ತು ಮಾನಸಿಕ ಆರೋಗ್ಯವನ್ನು ರಕ್ಷಿಸುವ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಉತ್ತಮ ಕಾಳಜಿ ವಹಿಸುವ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವುದು ವಿಶ್ವ ಮಾನಸಿಕ ಆರೋಗ್ಯ ದಿನದ ಆಚರಣೆಯ ಮುಖ್ಯ ಉದ್ದೇಶವಾಗಿದೆ. ಈ ವಿಶೇಷ ದಿನದ ಸಂದರ್ಭದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಜನರಿಗೆ ಶಿಕ್ಷಣ ನೀಡಲು ಮತ್ತು ಈ ಸಮಸ್ಯೆಗಳನ್ನು ನಿರ್ವಹಿಸುವ ಮತ್ತು ತಡೆಗಟ್ಟುವ ವಿವಿಧ ವಿಧಾನಗಳ ಕುರಿತು ಸೆಮಿನಾರ್, ಕಾರ್ಯಗಾರಗಳು, ಕಾರ್ಯಕ್ರಮಗಳು ಮತ್ತು ಸಮ್ಮೇಳನಗಳಂತಹ ವಿವಿಧ ಚಟುವಟಟಿಕೆಗಳನ್ನು ಜಾಗತಿಕವಾಗಿ ನಡೆಸಲಾಗುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ