World Zoonoses Day 2023: ವಿಶ್ವ ಝೂನೋಸಸ್ ದಿನವನ್ನು ಏಕೆ ಆಚರಿಸಲಾಗುತ್ತದೆ? ಈ ದಿನದ ಇತಿಹಾಸ, ಉದ್ದೇಶದ ಬಗ್ಗೆ ತಿಳಿಯಿರಿ

ವಿಶ್ವ ಝೂನೋಸ್ ದಿನವನ್ನು ಪ್ರತಿ ವರ್ಷ ಜುಲೈ 6 ರಂದು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಝುನೋಟಿಕ್ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ ಈ ದಿನದ ಇತಿಹಾಸ, ಉದ್ದೇಶ, ಪ್ರಾಮುಖ್ಯತೆ ಏನು ಎಂಬುದನ್ನು ತಿಳಿಯಿರಿ.

World Zoonoses Day 2023: ವಿಶ್ವ ಝೂನೋಸಸ್ ದಿನವನ್ನು ಏಕೆ ಆಚರಿಸಲಾಗುತ್ತದೆ? ಈ ದಿನದ ಇತಿಹಾಸ, ಉದ್ದೇಶದ ಬಗ್ಗೆ ತಿಳಿಯಿರಿ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 05, 2023 | 12:01 PM

ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಸೋಂಕುಗಳು ಅಥವಾ ಕಾಯಿಲೆಗಳು ಯಾವಾಗಲೂ ಅಪಾಯಕಾರಿಯಾಗಿರುತ್ತವೆ ಕೊರೊನಾ ವೈರಸ್ ಬಂದ ನಂತರ ಈ ಆತಂಕ ಮತ್ತಷ್ಟು ಗಂಭೀರವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಗಂಭೀರ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಜುಲೈ 6 ರಂದು ವಿಶ್ವ ಝೂನೋಸಸ್ ದಿನವನ್ನು ಆಚರಿಸಲಾಗುತ್ತದೆ.

ಝೂನೋಸಸ್ ಎಂದರೇನು?

ಝೂನೋಸಸ್ ಒಂದು ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಅದು ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ಈ ಗಂಭೀರ ಕಾಯಿಲೆಯನ್ನು ಝೂನೋಟಿಕ್ ಕಾಯಿಲೆಗಳು ಎಂದು ಕರೆಯುತ್ತಾರೆ. ಈ ಕಾಯಿಲೆಯು ಮಾನವರ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ. ಅದೇ ಸಮಯದಲ್ಲಿ ಕೆಲವು ಪರಿಸ್ಥಿತಿಗಳಲ್ಲಿ ಸೋಂಕು ಮನುಷ್ಯರಿಂದ ಪ್ರಾಣಿಗಳಿಗೆ ಹರಡಬಹುದು. ಇಂತಹ ಸ್ಥಿತಿಯನ್ನು ರಿವರ್ಸ್ ಝೂನೋಸಸ್ ಎಂದು ಕರೆಯಲಾಗುತ್ತದೆ. ಸೋಂಕಿತ ಪ್ರಾಣಿಯ ರಕ್ತ, ಮೂತ್ರ. ಲೋಳೆ, ಮಲ ಅಥವಾ ದೇಹದ ಇತರ ದ್ರವಗಳೊಂದಿಗೆ ನೇರ ಅಥವಾ ಪರೋಕ್ಷ ಸಂಪರ್ಕದಿಂದ ಝೂನೋಟಿಕ್ ಸೋಂಕುಗಳು ಪ್ರಾಣಿಗಳಿಂದ ಮನುಷ್ಯರಿಗೆ ಹರಡಬಹುದು. ಈ ಕಾಯಿಲೆಗಳು ಬ್ಯಾಕ್ಟೀರಿಯಾ, ವೈರಸ್, ಶಿಲೀಂದ್ರಗಳು ಅಥವಾ ಪರಾವಲಂಬಿಗಳಿಂದ ಉಂಟಾಗಬಹುದು. ಇದು ಕೆಲವೊಮ್ಮೆ ಮನುಷ್ಯರ ಮೇಲೆ ಗಂಭೀರ ಮತ್ತು ಮಾರಣಾಂತಿಕ ಪರಿಣಾಮವನ್ನು ಉಂಟು ಮಾಡುತ್ತದೆ. ಪ್ರಸ್ತುತ 200 ಕ್ಕೂ ಹೆಚ್ಚು ಝುನೋಟಿಕ್ ಕಾಯಿಲೆಗಳಿವೆ. ರೇಬಿಸ್, ಎಬೋಲಾ, ಹಂದಿ ಜ್ವರ, ಫ್ಲೂ, ಹಕ್ಕಿ ಜ್ವರ ಇವೆಲ್ಲವೂ ಝೂನೋಟಿಕ್ ಕಾಯಿಲೆಗೆ ಉದಾಹರಣೆಯಾಗಿವೆ.

ವಿಶ್ವ ಝೂನೋಸೆಸ್ ದಿನವನ್ನು ಯಾವಾಗ ಆಚರಿಸಲಾಗುತ್ತದೆ?

ಪ್ರತಿ ವರ್ಷ ಜುಲೈ 6 ರಂದು, ಮೊದಲನೇ ಝೂನೋಟಿಕ್ ಕಾಯಿಲೆಯ ಲಸಿಕೆಯಾದ ‘ರೇಬಿಸ್ ಲಸಿಕೆಯ’ ಅಭಿವೃದ್ಧಿಯನ್ನು ಗೌರವಿಸಲು ವಿಶ್ವ ಝೂನೋಸಸ್ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಝೂನೋಸಸ್ ದಿನದ ಉದ್ದೇಶ:

ಮಾನವ ಮತ್ತು ಇತರ ಪ್ರಾಣಿಗಳ ಆರೋಗ್ಯದ ಮೇಲೆ ಝೂನೋಟಿಕ್ ಕಾಯಿಲೆಯ ಗಂಭೀರ ಪ್ರಭಾವದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಝೂನೋಸಸ್ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಝೂನೋಟಿಕ್ ಕಾಯಿಲೆಯನ್ನು ಸರಿಯಾದ ಸಮಯದಲ್ಲಿ ಪರಿಣಾಮಕಾರಿಯಾಗಿ ಪತ್ತೆಹಚ್ಚಲು, ನಿಯಂತ್ರಿಸಲು ಮತ್ತು ಚಿಕಿತ್ಸೆ ನೀಡಲು ಜನರಿಗೆ ಅರಿವನ್ನು ಮೂಡಿಸುತ್ತದೆ. ಅಲ್ಲದೆ ಈ ದಿನವು ಜನರು ಮತ್ತು ಪ್ರಾಣಿಗಳ ಮೇಲೆ ಝೂನೋಸಸ್ ಕಾಯಿಲೆಯ ಪ್ರಭಾವವನ್ನು ಕಡಿಮೆ ಮಾಡಲು ಜಾಗೃತಿ ಮೂಡಿಸುವ ಮತ್ತು ಆ ಕಾಯಿಲೆಯನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ಜಾರಿಗೊಳಿಸಿ ಸಾರ್ವಜನಿಕ ಆರೋಗ್ಯವನ್ನು ರಕ್ಷಿಸುವ ಗುರಿಯನ್ನು ಹೊಂದಿದೆ.

ವಿಶ್ವ ಝೂನೋಸಸ್ ದಿನದ ಇತಿಹಾಸ:

ಜುಲೈ 6 ರಂದು ವಿಶ್ವದಾದ್ಯಂತ ಆಚರಿಸಲಾಗುವ ಝೂನೋಸಸ್ ದಿನವು ಬಹಳ ಮಹತ್ವದ್ದಾಗಿದೆ ಏಕೆಂದರೆ ಇದು 1885 ರಲ್ಲಿ ಜೂಯಿಸ್ ಪಾಶ್ಚರ್ ಅವರು ಝೂನೋಟಿಕ್ ಕಾಯಿಲೆಯಾದ ರೇಬಿಸ್ ವಿರುದ್ಧ ಮೊದಲ ಲಸಿಕೆಯನ್ನು ಕಂಡುಹಿಡಿದ ದಿನವನ್ನು ನೆನಪಿಸುತ್ತದೆ. ಝೂನೋಟಿಕ್ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಮತ್ತು ನಿಯಂತ್ರಿಸುವಲ್ಲಿ ಲೂಯಿಸ್ ಪಾಶ್ವರ್ ಅವರು ಕಂಡುಹಿಡಿದಿರುವ ಲಸಿಕೆಯು ಬಹಳ ಪ್ರಮುಖ ಪಾತ್ರವನ್ನು ವಹಿಸಿದೆ. 2007 ರಲ್ಲಿ ಈ ಲಸಿಕೆ ನೂರನೇ ವರ್ಷದ ವಾರ್ಷಿಕೋತ್ಸವದ ದಿನದಂದು ಮೊದಲ ವಿಶ್ವ ಝೂನೋಟಿಕ್ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಝೂನೋಟಿಕ್ ಕಾಯಿಲೆಯ ಹರಡುವಿಕೆಯನ್ನು ತಡೆಗಟ್ಟಲು ಮತ್ತು ಜಾಗೃತಿಯನ್ನು ಮೂಡಿಸಲು ಪ್ರಪಂಚದಾದ್ಯಂತ ಝೂನೋಸಸ್ ದಿನವನ್ನು ಆಚರಿಸಲಾಗುತ್ತಿದೆ.

ಇದನ್ನೂ ಓದಿ:Lifestyle Tips: 8+8+8 ನಿಯಮದ ಬಗ್ಗೆ ನಿಮಗೆ ತಿಳಿದಿದೆಯೇ? ಬದುಕಿನಲ್ಲಿ ಸಮಯದ ಸದುಪಯೋಗ ಪಡಿಸಿಕೊಳ್ಳಲು ಈ ಸರಳ ನಿಯಮ ಪಾಲಿಸಿ

2023 ರ ವಿಶ್ವ ಝೂನೋಸಸ್ ದಿನದ ಥೀಮ್:

ಈ ವರ್ಷ ವಿಶ್ವ ಝೂನೋಸಸ್ ದಿನದ ವಿಷಯವೆಂದರೆ ‘ಒಂದು ಜಗತ್ತು, ಒಂದು ಆರೋಗ್ಯ: ಝೂನೋಸಸ್ ನ್ನು ತಡೆಯಿರಿ, ಅದರ ಹರಡುವಿಕೆಯನ್ನು ನಿಲ್ಲಿಸಿ, ಪ್ರಾಣಿ ಸಂಕುಲವನ್ನು ರಕ್ಷಿಸಿ’ಎಂಬುದಾಗಿದೆ.

ವಿಶ್ವ ಝೂನೋಸಸ್ ದಿನದ ಮಹತ್ವ:

ಝೂನೋಟಿಕ್ ರೋಗಗಳ ಹೆಚ್ಚುತ್ತಿರುವ ಕಾರಣದಿಂದಾಗಿ, ಅದರ ಬಗ್ಗೆ ಜಾಗೃತಿಯನ್ನು ಹೆಚ್ಚಿಸುವುದು ಅಗತ್ಯವಾಗಿದೆ. ಇವು ಸಾಮಾನ್ಯ ಜ್ವರದಿಂದ ಹಿಡಿದು ಎಬೋಲಾ ಮತ್ತು ಕೋವಿಡ್ ನಂತಹ ಸಾಂಕ್ರಾಮಿಕ ರೋಗಗಳನ್ನು ಕೂಡಾ ಉಂಟು ಮಾಡಬಹುದು. ವಿಶ್ವ ಝೂನೋಸಸ್ ದಿನದ ಈ ಸಂದರ್ಭದಲ್ಲಿ, ಈ ರೋಗಗಳ ಕಾರಣಗಳು ಮತ್ತು ಅದನ್ನು ತಡೆಗಟ್ಟುವ ಕ್ರಮಗಳ ಕುರಿತು ಪ್ರಪಂಚದಾದ್ಯಂತ ಹಲವು ಕಾರ್ಯಕ್ರಮಗಳನ್ನು ಸರ್ಕಾರ, ಸಂಘ ಸಂಸ್ಥೆಗಳು ಆಯೋಜಿಸಿವೆ. ಮತ್ತು ಮನುಷ್ಯರು ಹಾಗೂ ಪ್ರಾಣಿಗಳ ಆರೋಗ್ಯವನ್ನು ಉತ್ತಮ ಮತ್ತು ಸುರಕ್ಷಿತವಾಗಿಸಲು ಜಾಗೃತಿಯನ್ನು ಮೂಡಿಸಲಾಗುತ್ತಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: