ಪ್ರೀತಿ ಎಂಬ ಪದ ಆಯಾ ಕಾಲಕ್ಕೆ ತಕ್ಕಂತೆ, ಆಯಾ ವ್ಯಕ್ತಿಗಳ ಕ್ಯಾರೆಕ್ಟರ್ಗೆ ತಕ್ಕಂತೆ ಹೊಸ ಹೊಸ ಅರ್ಥವನ್ನು ಪಡೆದುಕೊಳ್ಳುತ್ತಿರುತ್ತದೆ. ಲವ್ ಮ್ಯಾರೇಜ್ ಈಗಿನ ಕಾಲದಲ್ಲಿ ಬಹಳ ಸಾಮಾನ್ಯವಾಗಿಬಿಟ್ಟಿದೆ. ಆದರೆ, ಟಿಕ್ಟಾಕ್ನಲ್ಲಿ ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋವೊಂದು ಮದುವೆಯ ಬಗ್ಗೆ ಮತ್ತು ಸಂಬಂಧದ ಬಗ್ಗೆ ತೀವ್ರ ಚರ್ಚೆ ಹುಟ್ಟುಹಾಕಿದೆ. ಟಿಕ್ಟಾಕರ್ ಒಬ್ಬರು ಗಂಡಸರು ಪ್ರೀತಿಸಿದವಳನ್ನು ಮದುವೆಯಾಗುವುದಿಲ್ಲ, ತಾವು ಮದುವೆಯಾಗಬೇಕು ಎಂದುಕೊಂಡಾಗ ತಮ್ಮ ಜೊತೆ ಯಾವ ಮಹಿಳೆ ಇರುತ್ತಾರೋ ಅವರನ್ನೇ ಮದುವೆಯಾಗುತ್ತಾರೆ. ಅವರು ತಾವು ಪ್ರೀತಿ ಮಾಡಿದವಳನ್ನೇ ಮದುವೆಯಾಗುತ್ತಾರೆಂದೇನೂ ಇಲ್ಲ ಎಂದು ಹೇಳಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಒಂದು ರೀತಿಯ ಬಿರುಗಾಳಿಯನ್ನೇ ಎಬ್ಬಿಸಿದೆ. ಅದರಲ್ಲೂ ವಿವಾಹದ ಜೊತೆ ಸಾಂಪ್ರದಾಯಿಕ ಪರಂಪರೆಯನ್ನು ಹೊಂದಿರುವ ಭಾರತೀಯರು ಟಿಕ್ಟಾಕರ್ನ ಈ ಹೇಳಿಕೆಯನ್ನು ಟೀಕಿಸಿದ್ದಾರೆ.
ಇತ್ತೀಚೆಗೆ ವೈರಲ್ ಆಗಿದ್ದ ಟಿಕ್ಟಾಕ್ ಒಂದರಲ್ಲಿ ಟಿಕ್ಟಾಕರ್ ಟೆ ಎಂಬುವವರು ಪುರುಷರು ತಾನು ಬಹಳ ಪ್ರೀತಿ ಮಾಡುವವಳನ್ನು ಮದುವೆಯಾಗುತ್ತಾರೆ ಎಂದು ಹೇಳಲಾಗದು. ಆತ ಮದುವೆಯಾಗಬೇಕೆಂದು ಮನಸು ಮಾಡಿದಾಗ ಆತನ ಜೊತೆ ಯಾರು ಡೇಟ್ ಮಾಡುತ್ತಿರುತ್ತಾಳೋ ಆಕೆಯನ್ನೇ ಮದುವೆಯಾಗುತ್ತಾರೆ ಎಂದಿದ್ದರು. ಪುರುಷರು ಮದುವೆಯಾಗಬೇಕೆಂದು ಮಾನಸಿಕವಾಗಿ ಸಿದ್ಧರಾದಾಗ ಅವರಿಗೆ ಅವರು ಪ್ರೀತಿಸಿದ ಯುವತಿ ಸಿಗದೇ ಹೋಗಬಹುದು. ಆಗ ಸಿಕ್ಕಿದ ಮಹಿಳೆಯನ್ನೇ ಮದುವೆಯಾಗಬೇಕಾಗುತ್ತದೆ ಎಂದು ಹೇಳಿದ್ದರು.
ಆದರೆ, ಅವರ ಈ ಥಿಯರಿ ಬಹಳಷ್ಟು ಜನರಿಗೆ ಇಷ್ಟವಾಗಿಲ್ಲ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳು ಶುರುವಾಗಿವೆ. ಕೆಲವರು ಟಿಕ್ಟಾಕರ್ ಪರವಾಗಿದ್ದರೆ ಇನ್ನು ಹಲವರು ಆತನ ಥಿಯರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗಾದರೆ, ಭಾರತದಲ್ಲಿ ಮದುವೆಯ ಪರಿಕಲ್ಪನೆ ಯಾವ ಮಟ್ಟಿಗೆ ಬದಲಾಗಿದೆ ಎಂಬ ಬಗ್ಗೆ ನೋಡೋಣ.
ಇದನ್ನೂ ಓದಿ: Breastfeeding: ಮಗುವಿಗೆ 6 ತಿಂಗಳ ನಂತರ ಎದೆಹಾಲು ಕುಡಿಸುವುದನ್ನು ನಿಲ್ಲಿಸಬೇಡಿ; ಇಲ್ಲಿದೆ ಕಾರಣ
ರೋಹನ್ ಎಂಬ ಬೆಂಗಳೂರಿನ 32 ವರ್ಷದ ಸಾಫ್ಟ್ವೇರ್ ಡೆವಲಪರ್ ಟಿಕ್ಟಾಕರ್ ಟೇ ಅವರ ಮಾತನ್ನು ಒಪ್ಪಿಕೊಂಡಿದ್ದಾರೆ. ನನ್ನ 20ನೇ ವರ್ಷದಲ್ಲಿ ನಾನು ಪ್ರೀತಿಸಿದ್ದ ಯುವತಿಯೇ ನನ್ನ ಸೋಲ್ಮೇಟ್ ಎಂದುಕೊಂಡಿದ್ದೆ. ಆದರೆ, ನಮ್ಮ ಕೆರಿಯರ್ ಬಗ್ಗೆ ನಾವಿಬ್ಬರೂ ಗಮನಹರಿಸುತ್ತಿದ್ದಂತೆ ನಮ್ಮ ಸಂಬಂಧದಲ್ಲೂ ಬಿರುಕು ಮೂಡಲಾರಂಭಿಸಿತು. ಬಳಿಕ ನಾನು ನನ್ನ 30ನೇ ವರ್ಷದಲ್ಲಿ ನಾನು ಬೇರೆ ಯುವತಿಯನ್ನು ಭೇಟಿಯಾಗಿ, ಆಕೆಯನ್ನೇ ಮದುವೆಯಾದೆ ಎಂದಿದ್ದಾರೆ.
ದೆಹಲಿಯ 29 ವರ್ಷದ ಶಿಕ್ಷಕಿ ಸೀಮಾ ಟಿಕ್ಟಾಕ್ನ ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಾವುದೇ ಒಂದು ಮದುವೆಗೆ ಪ್ರೀತಿಯೇ ಅಡಿಗಲ್ಲು. ನನ್ನ ಗಂಡನೂ ನನ್ನನ್ನು ಪ್ರೀತಿ ಮಾಡಿಯೇ ಮದುವೆಯಾದದ್ದು. ಅವರು ಪರಿಸ್ಥಿತಿಗೆ ಸಿಲುಕಿ ನನ್ನನ್ನು ಮದುವೆಯಾಗಿಲ್ಲ. ನಿಜವಾದ ಪ್ರೀತಿ ಗಂಡ-ಹೆಣ್ಣು ಇಬ್ಬರನ್ನೂ ಒಟ್ಟಿಗೇ ಬೆಳೆಯಲು ಮತ್ತು ಸಾಧನೆ ಮಾಡಲು ಪ್ರೇರೇಪಿಸುತ್ತದೆ. ನಾವು ಮದುವೆಗೆ ಮಾನಸಿಕವಾಗಿ ಸಿದ್ಧರಾಗುವವರೆಗೂ ನಮ್ಮನ್ನು ಕಾಯುವಂತೆ ಮಾಡುತ್ತದೆ ಎಂದಿದ್ದಾರೆ.
ಮುಂಬೈನ ಉದ್ಯಮಿ 36 ವರ್ಷದ ಅಮಿತ್ ಟಿಕ್ಟಾಕರ್ ಟೇ ಹೇಳಿಕೆಗೆ ಸಮ್ಮತಿ ಸೂಚಿಸಿದ್ದಾರೆ. 20 ವರ್ಷದ ಆಸುಪಾಸಿನಲ್ಲಿದ್ದಾಗ ನಾನು ಒಬ್ಬಳನ್ನು ಬಹಳ ಗಾಢವಾಗಿ ಪ್ರೀತಿಸಿದ್ದೆ. ಆದರೆ, ಆಗ ಮದುವೆಯೆಂಬ ಕಮಿಟ್ಮೆಂಟ್ಗೆ ನಾನು ಸಿದ್ಧನಿರಲಿಲ್ಲ. ಈಗ ನಾನು ನನಗೆ ಹೊಂದುವ ಯುವತಿಯನ್ನು ಮದುವೆಯಾಗಿದ್ದೇನೆ. ಮದುವೆಗೆ ಭಾವನಾತ್ಮಕ ಮತ್ತು ಆರ್ಥಿಕವಾಗಿ ಸಿದ್ಧರಾಗಬೇಕಾದುದು ಬಹಳ ಮುಖ್ಯ. ಇಲ್ಲವಾದರೆ ಆ ಜವಾಬ್ದಾರಿಯನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಗಟ್ಟಿಮುಟ್ಟಾದ ಹಲ್ಲುಗಳು ನಿಮ್ಮದಾಗಲು 5 ಸಲಹೆಗಳು ಇಲ್ಲಿವೆ
ಆದರೆ, ಕೊಲ್ಕತ್ತಾದ 34 ವರ್ಷದ ಅನನ್ಯಾ ಇದಕ್ಕೆ ವಿರುದ್ಧವಾಗಿ ಅಭಿಪ್ರಾಯ ಸೂಚಿಸಿದ್ದಾರೆ. ನಾನು ಮತ್ತು ನನ್ನ ಗಂಡ ಮದುವೆಯಾಗಿ 7 ವರ್ಷಗಳಾದವು. ಮದುವೆಯಾದ ಮೇಲೆ ನಾವು ಆರ್ಥಿಕವಾಗಿ ಗಟ್ಟಿಯಾದೆವು. ಮದುವೆಯಾಗಲು ಸರಿಯಾದ ಸಮಯಕ್ಕಾಗಿ ನಾವು ಕಾಯಲಿಲ್ಲ. ಪ್ರೀತಿಸಿದ ಕಾರಣಕ್ಕೆ ಮದುವೆಯಾಗಿ ಎಲ್ಲ ಸವಾಲುಗಳನ್ನೂ ಒಟ್ಟಿಗೇ ಎದುರಿಸುತ್ತಿದ್ದೇವೆ. ಮದುವೆಯಾದ ಆರಂಭದಲ್ಲಿ ಹಣಕಾಸಿನ ವಿಚಾರದಲ್ಲಿ ಬಹಳ ಕಷ್ಟವಿತ್ತು. ಆದರೆ, ನಮ್ಮ ಪ್ರೀತಿ ಆ ಎಲ್ಲ ಕಷ್ಟಗಳಿಂದ ನಮ್ಮನ್ನು ಗೆಲ್ಲಿಸಿತು. ಇಬ್ಬರ ನಡುವೆ ಪ್ರೀತಿ ಮತ್ತು ಹೊಂದಾಣಿಕೆ ಇದ್ದರೆ ಮದುವೆ ಮದುವೆ ಯಶಸ್ಸು ಕಾಣುತ್ತದೆ. ಅದಕ್ಕೆ ಸರಿಯಾದ ಪರಿಸ್ಥಿತಿ ಬರಲಿ ಎಂದು ಕಾಯಬೇಕಾಗಿಲ್ಲ ಎಂದಿದ್ದಾರೆ.
ಒಟ್ಟಾರೆ, ಮದುವೆಯಾಗಲು ಪ್ರೀತಿಗಿಂತಲೂ ಆರ್ಥಿಕವಾಗಿ ಸ್ವತಂತ್ರವಾಗಿರಬೇಕು, ಮಾನಸಿಕವಾಗಿ ಸಿದ್ಧರಿರಬೇಕು ಎಂಬುದು ಒಂದು ಥಿಯರಿಯಾದರೆ, ಪ್ರೀತಿಯೇ ನಮ್ಮನ್ನು ಗುರಿಯತ್ತ ಸಾಗಿಸುತ್ತದೆ, ಹೀಗಾಗಿ ಪ್ರೀತಿಸಿದವರನ್ನೇ ಮದುವೆಯಾಗಬೇಕು ಎಂಬುದು ಇನ್ನೊಂದು ಥಿಯರಿ. ಹೀಗೆ ಒಬ್ಬೊಬ್ಬರ ಅಭಿಪ್ರಾಯ ಒಂದೊಂದು ರೀತಿಯಲ್ಲಿದೆ. ಈ ಬಗ್ಗೆ ಚರ್ಚೆ ಇನ್ನೂ ಸೋಷಿಯಲ್ ಮೀಡಿಯಾದಲ್ಲಿ ಮುಂದುವರೆದಿದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ