ವಿಶ್ವ ಬೈಸಿಕಲ್ ದಿನ
Image Credit source: vecteezy
ಸೈಕಲ್ (Bicycle) ಕೈಗೆಟಕುವ, ಆರೋಗ್ಯದಾಯಕ ಹಾಗೂ ಪರಿಸರ ಸ್ನೇಹಿ ಸಾರಿಗೆ ವಿಧಾನವಾಗಿದ್ದು, ಹಿಂದೆಲ್ಲಾ ಜನ ಓಡಾಟಕ್ಕೆ ಸೈಕಲ್‌ಗಳನ್ನೇ ಬಳಸುತ್ತಿದ್ದರು. ಆದರೆ ಇಂದಿನ ಈ ಆಧುನಿಕ ಜಗತ್ತಿನಲ್ಲಿ ಸೈಕಲ್ ಬಳಕೆ ತೀರಾ ಕಡಿಮೆಯಾಗಿದೆ. ಪ್ರತಿಷ್ಠೆಯ ದೃಷ್ಟಿಯಿಂದ ಹಾಗೂ ಸಮಯ ಉಳಿಸಲು ಜನರು ಸೈಕಲ್ ಬಳಸುವುದನ್ನು ಬಿಟ್ಟು ಸ್ಕೂಟರ್, ಬೈಕ್ ಮತ್ತು ಕಾರುಗಳನ್ನು ಬಳಸಲು ಪ್ರಾರಂಭಿಸಿದ್ದಾರೆ. ಹೀಗೆ ವಾಹನಗಳ ಬಳಕೆ ಹೆಚ್ಚಾದಂತೆ ಪರಿಸರ ಕೂಡ ಮಾಲಿನ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆಗಾಗಿ ಸೈಕಲ್ ಸವಾರಿ ಮಾಡಲು ಜನರನ್ನು ಪ್ರೋತ್ಸಾಹಿಸಲು, ಸೈಕ್ಲಿಂಗ್‌ನ ಆರೋಗ್ಯ ಪ್ರಯೋಜನಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಪ್ರತಿವರ್ಷ ಜೂನ್ 3 ರಂದು ವಿಶ್ವ ಬೈಸಿಕಲ್ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.
ವಿಶ್ವ ಬೈಸಿಕಲ್ ದಿನದ ಇತಿಹಾಸವೇನು?
ದ್ವಿಚಕ್ರ ವಾಹನ ಹಾಗೂ ಕಾರುಗಳ ಬಳಕೆಯಿಂದಾಗಿ, ಸೈಕಲ್‌ಗಳ ಬಳಕೆ ವೇಗವಾಗಿ ಕಡಿಮೆಯಾಗಲು ಪ್ರಾರಂಭಿಸಿತು. ಅಂತಹ ಪರಿಸ್ಥಿತಿಯಲ್ಲಿ, ಬೈಸಿಕಲ್ ಬಗ್ಗೆ ಜನರಿಗೆ ಅರಿವು ಮೂಡಿಸಲು, ಅಮೆರಿಕದ ಪ್ರಾಧ್ಯಾಪಕರೊಬ್ಬರು ವಿಶ್ವ ಬೈಸಿಕಲ್ ದಿನವನ್ನು ಆಚರಿಸುವ ಪರಿಕಲ್ಪನೆಯನ್ನು ಮುಂದಿಟ್ಟರು. ಅಮೆರಿಕದ ಮಾಂಟ್ಗೊಮೆರಿ ಕಾಲೇಜಿನ ಪ್ರಾಧ್ಯಾಪಕ ಲೆಸ್ಜೆಕ್ ಸಿಬಿಲ್ಸ್ ಅವರು ಒಂದು ಅರ್ಜಿಯನ್ನು ಸಲ್ಲಿಸುವ ಮೂಲಕ ವಿಶ್ವ ಬೈಸಿಕಲ್ ದಿನವನ್ನು ಆಚರಿಸಲು ಪ್ರಸ್ತಾಪಿಸಿದ್ದರು. ನಂತರ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ಈ ದಿನದ ಆಚರಣೆಗೆ ಗ್ರೀನ್ ಸಿಗ್ನಲ್ ನೀಡಿತು. ಬಳಿಕ ಜೂನ್ 3, 2018 ರಂದು ಮೊದಲ ಬಾರಿಗೆ ವಿಶ್ವ ಸೈಕಲ್ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ವಿಶ್ವ ಬೈಸಿಕಲ್ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ವಿಶ್ವ ಬೈಸಿಕಲ್ ದಿನದ ಮಹತ್ವವೇನು?
- ಸೈಕಲ್‌ನ ಆರೋಗ್ಯ ಪ್ರಯೋಜನಗಳು ಹಾಗೂ ಸೈಕಲ್ ಬಳಕೆಯಿಂದ ಪರಿಸರಕ್ಕಾಗುವ ಲಾಭಗಳ ಬಗ್ಗೆ ತಿಳಿಸಲೆಂದೇ ಜಗತ್ತಿನಾದ್ಯಂತ ವಿಶ್ವ ಬೈಸಿಕಲ್ ದಿನವನ್ನು ಆಚರಿಸಲಾಗುತ್ತದೆ.
- ಉತ್ತಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಜನರು ಹೆಚ್ಚು ಹೆಚ್ಚು ಸೈಕಲ್ ಬಳಸಲು ಪ್ರೋತ್ಸಾಹಿಸುವುದು ವಿಶ್ವ ಬೈಸಿಕಲ್ ದಿನದ ಉದ್ದೇಶವಾಗಿದೆ.
- ಸೈಕ್ಲಿಂಗ್ ಆರೋಗ್ಯಕರ, ಸುಸ್ಥಿರ ಮತ್ತು ಕೈಗೆಟುಕುವ ಸಾರಿಗೆ ವಿಧಾನವಾಗಿದೆ. ಇದು ದೈಹಿಕ ಸದೃಢತೆಯನ್ನು ಸುಧಾರಿಸುತ್ತದೆ, ವಾಯು ಮಾಲಿನ್ಯ ಮತ್ತು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ. ಸೈಕ್ಲಿಂಗ್‌ನ ಈ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.
ಇದನ್ನೂ ಓದಿ: ಪೋಷಕರೇ ಮಕ್ಕಳ ಪಾಲಿನ ನಿಜವಾದ ಸೂಪರ್ ಹೀರೋ
ಸೈಕ್ಲಿಂಗ್‌ನ ಆರೋಗ್ಯ ಪ್ರಯೋಜನಗಳೇನು?
- ಸೈಕ್ಲಿಂಗ್ ಹೃದಯ ಮತ್ತು ಶ್ವಾಸಕೋಶಗಳನ್ನು ಬಲಪಡಿಸುತ್ತದೆ ಮತ್ತು ಹೃದ್ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
- ಸೈಕ್ಲಿಂಗ್ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಸೈಕ್ಲಿಂಗ್ ಕ್ಯಾಲೊರಿಗಳನ್ನು ಸುಡಲು ಉತ್ತಮ ಮಾರ್ಗವಾಗಿದೆ.
- ಸೈಕ್ಲಿಂಗ್ ಎಂಡಾರ್ಫಿನ್ ಎಂಬ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ, ಇದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
- ಸೈಕ್ಲಿಂಗ್ ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಇದು ನಿಮ್ಮ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ.
- ಸೈಕ್ಲಿಂಗ್ ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲದೆ ಮಾನಸಿಕ ಆರೋಗ್ಯಕ್ಕೂ ಪ್ರಯೋಜನಕಾರಿ. ಇದು ಉತ್ತಮ ವ್ಯಾಯಾಮವಾಗಿದ್ದು, ಇದು ಹೃದಯ, ರಕ್ತನಾಳಗಳು ಮತ್ತು ಶ್ವಾಸಕೋಶಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.
- ಇದು ದೇಹದ ಸ್ನಾಯುಗಳನ್ನು ಆರೋಗ್ಯಕರ ಮತ್ತು ಬಲಶಾಲಿಯನ್ನಾಗಿ ಮಾಡುತ್ತದೆ. ಸೈಕ್ಲಿಂಗ್ ರೋಗನಿರೋಧಕ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ