
ಪ್ರಕೃತಿ ಸಕಲ ಜೀವ ರಾಶಿಗಳನ್ನು ತನ್ನ ಮಡಿಲಲ್ಲಿ ಹೊತ್ತು ಸಲಹುತ್ತಿದೆ. ಆದರೆ ಇಂದು ಮನುಷ್ಯನ ಸ್ವಾರ್ಥಕ್ಕೆ ಪ್ರಕೃತಿಯ ಮಡಿಲು ಬರಿದಾಗುತ್ತಿದೆ. ಹೌದು ಅಭಿವೃದ್ಧಿ, ನಗರೀಕರಣ ಅಂತೆಲ್ಲಾ ಮನುಷ್ಯನ ಸ್ವಾರ್ಥಕ್ಕೆ ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ, ಅದೆಷ್ಟೋ ಜೀವ ಸಂಕುಲಗಳು, ಮರಗಿಡಗಳ ಪ್ರಬೇಧಗಳು ಅಳಿವಿನಂಚಿಗೆ ತಲುಪಿವೆ. ಅರಣ್ಯ ನಾಶ, ಮಾಲಿನ್ಯಗಳ ಕಾರಣದಿಂದಾಗಿ ಪರಿಸರ ಮಾಲಿನ್ಯವಾಗುತ್ತಿದೆ. ಹೀಗಾಗಿ ಭವಿಷ್ಯದ ದೃಷ್ಟಿಯಿಂದ ಹಾಗೂ ಪರಿಸರವನ್ನು ಉಳಿಸಬೇಕು ಗಿಡ-ಮರಗಳನ್ನು ಬೆಳೆಸಬೇಕು ಎಂಬ ಉದ್ದೇಶದಿಂದ ಪ್ರತಿ ವರ್ಷ ಜೂನ್ 05 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ.
1972 ರಲ್ಲಿ ಈ ದಿನದಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಸ್ಟಾಕ್‌ಹೋಮ್ ಸಮ್ಮೇಳನ ಎಂದು ಕರೆಯಲ್ಪಡುವ ಪರಿಸರ ಸಂರಕ್ಷಣೆಯ ಕುರಿತಾದ ಮೊದಲ ಜಾಗತಿಕ ಶೃಂಗಸಭೆಯನ್ನು ಆಯೋಜಿಸಿದ್ದರಿಂದ ಜೂನ್ 5 ರಂದು ವಿಶ್ವ ಪರಿಸರ ದಿನವೆಂದು ಆಯ್ಕೆ ಮಾಡಲಾಯಿತು. ಅನೇಕ ದೇಶಗಳು ಈ ಸಮ್ಮೇಳನದಲ್ಲಿ ಭಾಗವಹಿಸಿ ಪರಿಸರ ಎದುರಿಸುತ್ತಿರುವ ಸವಾಲುಗಳನ್ನು ಚರ್ಚಿಸಿದವು. ಇದರ ನಂತರ, ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP) ಅನ್ನು ಸ್ಥಾಪಿಸಲಾಯಿತು ಮತ್ತು ಜೂನ್ 5 ಅನ್ನು ವಿಶ್ವ ಪರಿಸರ ದಿನವೆಂದು ಘೋಷಿಸಲಾಯಿತು.
ವಿಶ್ವ ಪರಿಸರ ದಿನವನ್ನು ಪ್ರತಿ ವರ್ಷ ಜಾಗತಿಕ ಮಟ್ಟದಲ್ಲಿ ಆಚರಿಸಲಾಗುತ್ತದೆ. ಇದನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 1972 ರಲ್ಲಿ ಪ್ರಾರಂಭಿಸಿತು. 1972 ರಲ್ಲಿ, ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ಮಾನವ ಪರಿಸರದ ಕುರಿತಾದ ಸ್ಟಾಕ್‌ಹೋಮ್ ಸಮ್ಮೇಳನವನ್ನು ಆಯೋಜಿಸಲಾಯಿತು. ಈ ಸಮ್ಮೇಳನದಲ್ಲಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಜೂನ್ 5 ಅನ್ನು ವಿಶ್ವ ಪರಿಸರ ದಿನವನ್ನಾಗಿ ಆಚರಿಸಲು ಘೋಷಿಸಿತು. ಈ ದಿನವನ್ನು ಮೊದಲ ಬಾರಿಗೆ 1973 ರಲ್ಲಿ ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಈ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಇಂದಿನ ಜಗತ್ತಿನಲ್ಲಿ, ಹೆಚ್ಚುತ್ತಿರುವ ಮಾಲಿನ್ಯ, ಪ್ಲಾಸ್ಟಿಕ್ ಬಳಕೆ, ಅರಣ್ಯನಾಶ ಮತ್ತು ಜಾಗತಿಕ ತಾಪಮಾನ ಏರಿಕೆಯಂತಹ ಸಮಸ್ಯೆಗಳು ವೇಗವಾಗಿ ಹೆಚ್ಚುತ್ತಿವೆ. ಈ ನಿಟ್ಟಿನಲ್ಲಿ ಪರಿಸರವನ್ನು ರಕ್ಷಿಸುವುದು ಎಷ್ಟು ಮುಖ್ಯವೆಂದು ತಿಳಿಸಲು ಈ ದಿನವನ್ನು ಆಚರಿಸುವುದು ಬಹಳ ಮುಖ್ಯವಾಗಿದೆ. ಈ ವಿಶೇಷ ದಿನದಂದು, ಪ್ರಪಂಚದಾದ್ಯಂತದ ಜನರು ಒಗ್ಗೂಡಿ ಪರಿಸರವನ್ನು ರಕ್ಷಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತಾರೆ. ಗಿಡಗಳನ್ನು ನೆಡುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ.
ಇದನ್ನೂ ಓದಿ: ಪರಿಸರ, ಆರೋಗ್ಯ ಎರಡಕ್ಕೂ ಪ್ರಯೋಜನಕಾರಿ ಸೈಕಲ್ ಸವಾರಿ; ವಿಶ್ವ ಬೈಸಿಕಲ್ ದಿನದ ಮಹತ್ವ ತಿಳಿಯಿರಿ
ಪ್ರತಿ ವರ್ಷವೂ ಒಂದು ನಿರ್ದಿಷ್ಟ ಥೀಮ್ ಇಟ್ಟುಕೊಂಡು ಪರಿಸರ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ಥೀಮ್ “ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗಳಿಸುವುದು” (Ending Plastic Pollution).
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ