
ಬೌದ್ಧಿಕ ಆಸ್ತಿ (Intellectual Property) ಎಂಬುದು ಮಾನವನ ಬುದ್ಧಿಶಕ್ತಿ (Intellectual Ability) ಹಾಗೂ ಸೃಜನಶೀಲತೆಯ ಅಮೂರ್ತ ಸೃಷ್ಟಿಯನ್ನು ಒಳಗೊಂಡಿರುವ ಆಸ್ತಿಯ ಒಂದು ವರ್ಗವಾಗಿದೆ. ಇದು ಆವಿಷ್ಕಾರ, ಸಾಹಿತ್ಯ ಮತ್ತು ಕಲಾತ್ಮಕ ಕೆಲಸ, ವಿನ್ಯಾಸಗಳು ಮತ್ತು ಚಿಹ್ನೆಗಳು, ಬರಹಗಳು ಮತ್ತು ಚಿತ್ರಗಳಂತಹ ವ್ಯಕ್ತಿಯ ಬುದ್ಧಿವಂತಿಕೆಯ ಸೃಷ್ಟಿಯಾಗಿದೆ. ಕೃತಿಸ್ವಾಮ್ಯ, ಪೇಟೆಂಟ್, ಟ್ರೇಡ್‌ಮಾರ್ಕ್‌ಗಳು, ಕೈಗಾರಿಕಾ ವಿನ್ಯಾಸಗಳು, ಭೌಗೋಳಿಕ ಸೂಚನೆಗಳು, ವ್ಯಾಪಾರ ರಹಸ್ಯಗಳು ವಿವಿಧ ಬೌದ್ಧಿಕ ಆಸ್ತಿಗಳಾಗಿದ್ದು, ಈ ಆಸ್ತಿ ಬೆಲೆ ಕಟ್ಟಲಾಗದಷ್ಟು ಅಮೂಲ್ಯವಾಗಿದ್ದು, ಇದನ್ನು ರಚಿಸಿದ ಸೃಜನಾತ್ಮಕ ವ್ಯಕ್ತಿಯೇ ಇದಕ್ಕೆ ವಾರಸುದಾರನಾಗಿರುವ ಕಾರಣ ಆ ವ್ಯಕ್ತಿಯ ಅನುಮತಿಯಿಲ್ಲದೆ ಆತನ ವಿಚಾರವನ್ನು ಬಳಕೆ ಮಾಡುವಂತಿಲ್ಲ. ಒಬ್ಬ ವ್ಯಕ್ತಿಯ ಈ ಅಮೂಲ್ಯವಾದ ಬೌದ್ಧಿಕ ಆಸ್ತಿಯ ಹಕ್ಕಿನ ಬಗ್ಗೆ ಹಾಗೂ ಬೌದ್ಧಿಕ ಆಸ್ತಿಯ ಮಹತ್ವದ ಬಗ್ಗೆ ಅರಿವು ಮೂಡಿಸಲು ಏಪ್ರಿಲ್ 26 ರಂದು ವಿಶ್ವ ಬೌದ್ಧಿಕ ಆಸ್ತಿಯ ದಿನವನ್ನು (World Intellectual Property Day) ಆಚರಿಸಲಾಗುತ್ತದೆ.
ಪೇಟೆಂಟ್‌ಗಳು, ಹಕ್ಕುಸ್ವಾಮ್ಯಗಳು, ಟ್ರೇಡ್‌ಮಾರ್ಕ್‌ಗಳು ಮತ್ತು ವಿನ್ಯಾಸಗಳು, ಕೃತಿಸ್ವಾಮ್ಯ ಇವೆಲ್ಲವೂ ಬೌದ್ಧಿಕ ಆಸ್ತಿಗಳಾಗಿವೆ. ಲೇಖಕ ಕಥೆಗಾರ, ವಿಜ್ಞಾನಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತಮ್ಮ ಬುದ್ಧಿ ಶಕ್ತಿ ಹಾಗೂ ಸೃಜನಶೀಲತೆಯಿಂದ ಹೊರ ತರುವ ಕಥೆ, ಸಂಗೀತ, ಪುಸ್ತಕ, ವಿನ್ಯಾಸಗಳನ್ನು ಬೇರೆ ಯಾರು ಕದಿಯದಂತೆ ಈ ಅಮೂಲ್ಯ ಬೌದ್ಧಿಕ ಆಸ್ತಿಯ ಹಕ್ಕುಗಳನ್ನು ರಕ್ಷಿಸಲು ಹಾಗೂ ಸೃಷ್ಟಿಕರ್ತರು, ಸಂಶೋಧಕರು, ಉದ್ಯಮಿಗಳ ಆಲೋಚನೆಗಳು ಮತ್ತು ಅವರು ನೀಡಿದ ಕೊಡುಗೆಗಳನ್ನು ಗೌರವಿಸಲು ವಿಶ್ವ ಬೌದ್ಧಿಕ ಆಸ್ತಿಯ ದಿನವನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ: ನಾನು ತಿಂಗಳಿಗೆ 1 ಲಕ್ಷ ರೂ. ಸೇವ್ ಮಾಡ್ತೇನೆ; ತನ್ನ ಮಾಸಿಕ ಖರ್ಚು-ವೆಚ್ಚದ ವಿವರ ಹಂಚಿಕೊಂಡ ಬೆಂಗಳೂರಿನ ಮಹಿಳೆ
ವಿಶ್ವ ಬೌದ್ಧಿಕ ಆಸ್ತಿ ದಿನವನ್ನು ಪ್ರತಿ ವರ್ಷ ಏಪ್ರಿಲ್ 26 ರಂದು ಆಚರಿಸಲಾಗುತ್ತದೆ. ಈ ದಿನದ ಆಚರಣೆಯನ್ನು ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ (WIPO) 2000 ರಲ್ಲಿ ಪ್ರಾರಂಭಿಸಿತು. ಈ ದಿನ 1970 ರಲ್ಲಿ ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ (WIPO) ಯನ್ನು ಸ್ಥಾಪಿಸುವ ಸಮಾವೇಶವು ಜಾರಿಗೆ ಬಂದ ದಿನದ ಸ್ಮರಣಾರ್ಥವಾಗಿದೆ. ನಾವೀನ್ಯತೆ ಮತ್ತು ಸೃಜನಶೀಲತೆಯನ್ನು ಉತ್ತೇಜಿಸುವಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳ (ಪೇಟೆಂಟ್‌ಗಳು, ಹಕ್ಕುಸ್ವಾಮ್ಯಗಳು, ಟ್ರೇಡ್‌ಮಾರ್ಕ್‌ಗಳು ಮತ್ತು ವಿನ್ಯಾಸಗಳು) ಪ್ರಮುಖ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಇಟ್ಟುಕೊಂಡು ಈ ದಿನದ ಆಚರಣೆಯನ್ನು ಪ್ರಾರಂಭಿಸಲಾಯಿತು. ಅಂದಿನಿಂದ ಪ್ರತಿವರ್ಷ ಏಪ್ರಿಲ್ 26 ರಂದು ಈ ವಿಶೇಷ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ವಿಶ್ವ ಬೌದ್ಧಿಕ ಆಸ್ತಿ ದಿನವನ್ನು ಆಚರಿಸುವ ಮೂಲ ಉದ್ದೇಶವೇ ಬೌದ್ಧಿಕ ಆಸ್ತಿಯ ಹಕ್ಕು, ನಾವೀನ್ಯತೆ ಮತ್ತು ಸೃಜನಶೀಲತೆಯನ್ನು ಉತ್ತೇಜಿಸುವಲ್ಲಿ ಬೌದ್ಧಿಕ ಆಸ್ತಿಯ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಬೌದ್ಧಿಕ ಆಸ್ತಿಗಳಿಗೆ ಅಂತರಾಷ್ಟ್ರೀಯ ಮಾನ್ಯತೆ ತಂದುಕೊಡುವುದಾಗಿದೆ. ಅಲ್ಲದೆ ಇದು ಸೃಜನಶೀಲತೆ ಮತ್ತು ನಾವೀನ್ಯತೆಯನ್ನು ಪ್ರೋತ್ಸಾಹಿಸುತ್ತದೆ, ಇದು ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. ಅಲ್ಲದೆ ಈ ಈ ದಿನದಂದು ಪ್ರಪಂಚದಾದ್ಯಂತ ವಿಚಾರ ಸಂಕಿರಣಗಳು, ಪ್ರದರ್ಶನಗಳು ಮತ್ತು ಸ್ಪರ್ಧೆಗಳು ಮುಂತಾದ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ