Jackfruit Kadubu: ಹಲಸಿನ ಹಣ್ಣು ಸಿಕ್ರೆ ಹೀಗೊಮ್ಮೆ ಸಾಂಪ್ರದಾಯಿಕ ಶೈಲಿಯ ಕಡುಬು ಮಾಡಲು ಮರೆಯದಿರಿ
ಹಲಸಿನ ಹಣ್ಣಿನ ಸೀಸನ್ ಈಗಾಗ್ಲೇ ಶುರುವಾಗಿಬಿಟ್ಟಿದೆ. ಮಾರುಕಟ್ಟೆಗಳಲ್ಲಂತೂ ಗಜಗಾತ್ರದ ಹಲಸಿನ ಹಣ್ಣುಗಳು ಕಾಣ ಸಿಗುತ್ತಿದ್ದು, ಜನ ಈ ರುಚಿಯಾದ ಹಣ್ಣನ್ನು ಖರೀದಿಸಲು ಮುಗಿ ಬೀಳುತ್ತಿದ್ದಾರೆ. ನಿಮ್ಗೂ ಕೂಡಾ ಹಲಸಿನ ಹಣ್ಣು ಅಂದ್ರೆ ಇಷ್ಟನಾ. ಹಾಗಿದ್ರೆ ಈ ಹಣ್ಣಿನಿಂದ ಸಾಂಪ್ರದಾಯಿಕ ಕಡುಬು ರೆಸಿಪಿ ಮಾಡಿ ಸವಿಯಿರಿ. ತುಂಬಾನೇ ಟೇಸ್ಟಿ ಆಗಿರುವ ಈ ಹಲಸಿನ ಹಣ್ಣಿನ ಕಡುಬು ರೆಸಿಪಿ ಮಾಡೋದು ಹೇಗೆ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಹಲಸಿನ ಹಣ್ಣಿನ (Jackfruit) ಸೀಸನ್ ಶುರುವಾಗಿಬಿಟ್ಟಿದೆ. ತುಂಬಾನೇ ಸಿಹಿಯಾಗಿರುವ ಜೊತೆಗೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಕೂಡಾ ಹೊಂದಿರುವ ಈ ಹಲಸಿನ ಹಣ್ಣು ಅಂದ್ರೆ ಹೆಚ್ಚಿನವರಿಗೆ ಬಲು ಇಷ್ಟ. ಈ ಸಿಹಿಯಾದ ಹಣ್ಣನ್ನು ಜನ ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ಇನ್ನೂ ಕೆಲವರು ಹಲಸಿನ ಹಣ್ಣಿನಿಂದ ವೆರೈಟಿ ರೆಸಿಪಿಗಳನ್ನು (recipe) ಮಾಡಿ ಸವಿತಾರೆ. ಹಲಸಿನ ಕಾಯಿಯಿಂದ ಪಲ್ಯ, ಹಪ್ಪಳ, ಬಿರಿಯಾನಿ ತಯಾರಿಸುವಂತೆ ಹಲಸಿನ ಹಣ್ಣಿನಿಂದ ಪಾಯಸ, ದೋಸೆ, ಕಡುಬು ಸೇರಿದಂತೆ ಬಗೆಬಗೆಯ ತಿನಿಸುಗಳನ್ನು ತಯಾರಿಸಬಹುದು. ನಿಮ್ಗೆ ಏನಾದ್ರೂ ಬರೀ ಈ ಹಣ್ಣನ್ನು ತಿಂದು ಬೋರ್ ಆಗಿದ್ರೆ, ಈ ರೀತಿ ಒಮ್ಮೆ ಹಲಸಿನ ಹಣ್ಣಿನ ಸಾಂಪ್ರದಾಯಿಕ ಕಡುಬು (Jackfruit Kadubu) ರೆಸಿಪಿಯನ್ನು ಮಾಡಿ ಸವಿಯಿರಿ.
ಹಲಸಿನ ಹಣ್ಣಿನ ಕಡುಬು ರೆಸಿಪಿ:
ಈ ಸಾಂಪ್ರದಾಯಿಕ ಹಲಸಿನ ಹಣ್ಣಿನ ಕಡುಬು ರೆಸಿಪಿಯನ್ನು ಫುಡ್ ಕಂಟೆಂಟ್ ಕ್ರಿಯೆಟರ್ ಶರು (Sharuhomebook) ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ತುಂಬಾನೇ ಟೇಸ್ಟಿ ಆಗಿರುವ ಈ ಹಲಸಿನ ಹಣ್ಣಿನ ಕಡುಬು ರೆಸಿಪಿ ಮಾಡೋದು ಹೇಗೆ ಎಂಬುದನ್ನು ನೋಡೋಣ ಬನ್ನಿ.
ವಿಡಿಯೋ ಇಲ್ಲಿದೆ ನೋಡಿ:
View this post on Instagram
ಹಲಸಿನ ಹಣ್ಣಿನ ಕಡುಬು ಮಾಡಲು ಬೇಕಾಗಿರುವ ಪದಾರ್ಥಗಳು:
ತುಪ್ಪ, ಹಲಸಿನ ಹಣ್ಣು, ಬೆಲ್ಲ, ತುರಿದ ತೆಂಗಿನಕಾಯಿ, ಏಲಕ್ಕಿ ಪುಡಿ, ಅಕ್ಕಿ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಹಲಸಿನ ಎಲೆ
ಇದನ್ನೂ ಓದಿ: ಮರಗಳು, ಬೇರುಗಳು ಅಥವಾ ತುಟಿ ನಿಮಗೆ ಮೊದಲು ಕಾಣಿಸಿದ್ದೇನು? ಈ ಚಿತ್ರ ನೋಡಿ ನಿಮ್ಮ ವ್ಯಕ್ತಿತ್ವ ಪರೀಕ್ಷಿಸಿ
ಹಲಸಿನ ಹಣ್ಣಿನ ಕಡುಬು ಮಾಡುವ ವಿಧಾನ:
- ಮೊದಲಿಗೆ ಹಲಸಿನ ಹಣ್ಣಿನ ಬೀಜವನ್ನು ತೆಗೆದಿಟ್ಟು ಹಣ್ಣನ್ನು ಸಣ್ಣದಾಗಿ ಕಟ್ ಮಾಡಿ ಪಕ್ಕಕ್ಕೆ ಇಟ್ಟು ಬಿಡಿ. ಈಗ ಹಲಸಿನ ಎಲೆಯನ್ನು ತೆಗೆದುಕೊಂಡು, ಅದನ್ನು ಚೆನ್ನಾಗಿ ತೊಳೆದು, ಕೋನ್ ಆಕಾರಕ್ಕೆ ಕಟ್ಟಿಟ್ಟು ಬಿಡಿ.
- ಈಗ ಒಂದು ಪಾತ್ರೆಗೆ ಬೆಲ್ಲ ಹಾಗೂ ಸ್ವಲ್ಪ ನೀರು ಹಾಕಿ ಅದನ್ನು ಕರಗಿಸಿ, ನಂತರ ಇನ್ನೊಂದು ಬಾಣಲೆ ತೆಗೆದುಕೊಂಡು ಅದಕ್ಕೆ ತುಪ್ಪ ಹಾಕಿ, ಅದು ಕಾದ ಬಳಿಕ ಮೊದಲೇ ತುಂಡು ಮಾಡಿ ಇಟ್ಟಂತಹ ಹಲಸಿನ ಹಣ್ಣು, ಬೆಲ್ಲದ ಪಾಕ ಹಾಕಿ ಚೆನ್ನಾಗಿ ಕುದಿಯಲು ಬಿಡಿ.
- ಈ ಮಿಶ್ರಣ ಬೆನ್ನಾಗಿ ಕುದಿ ಬಂದ ನಂತರ ಅದಕ್ಕೆ ತುರಿದ ತೆಂಗಿನಕಾಯಿ ಹಾಗೂ ಏಲಕ್ಕಿ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ. ನೀರಿನಾಂಶ ಕರಗುವವರೆಗೆ ಈ ಮಿಶ್ರಣವನ್ನು ಹುರಿದು, ಈ ಸ್ಟಫಿಂಗ್‌ನ ರೆಡಿ ಮಾಡಿ.
- ಈ ಸ್ಟಫಿಂಗ್ ರೆಡಿಯಾದ ಬಳಿಕ ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಅಕ್ಕಿ ಹಿಟ್ಟು, ತುಪ್ಪ, ಉಪ್ಪು, ಬೆಲ್ಲದ ಪಾಕ ಮತ್ತು ನೈಸ್ ಆಗಿ ರುಬ್ಬಿರುವ ಹಲಸಿನ ಹಣ್ಣಿನ ಪೇಸ್ಟ್ ಹಾಕಿ ಕೊನೆಗೆ ಬಿಸಿ ನೀರು ಹಾಕಿ ಈ ಮಿಶ್ರಣವನ್ನು ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
- ಹೀಗೆ ಹಿಟ್ಟು ರೆಡಿಯಾದ ಬಳಿಕ, ಕೈಗೆ ತುಪ್ಪ ಸವರಿ ಸ್ವಲ್ಪ ಸ್ವಲ್ಪ ಹಿಟ್ಟು ತೆಗೆದುಕೊಂಡು, ಮೊದಲೇ ತಯಾರಿಸಿಟ್ಟ ಹಲಸಿನ ಎಲೆಯ ಕೋನ್ ಒಳಗೆ ತೆಳ್ಳಗೆ ಸ್ಪ್ರೆಡ್ ಮಾಡಿ, ನಂತರ ಆ ಹಿಟ್ಟಿನ ಒಳಗೆ ಮೊದಲೇ ತಯಾರಿಸಿಟ್ಟ ಹಲಸಿನ ಹಣ್ಣಿನ ಸ್ಟಫಿಂಗ್ ಹಾಕಿ ಸಂಪೂರ್ಣವಾಗಿ ಮುಚ್ಚಿ, ಇದನ್ನು ಇಡ್ಲಿ ಪಾತ್ರೆಯಲ್ಲಿಟ್ಟು, ಹಬೆಯಲ್ಲಿ 15 ನಿಮಿಷಗಳ ಕಾಲ ಬೇಯಿಸಿಕೊಂಡರೆ ಹಲಸಿನ ಹಣ್ಣಿನ ಕಡುಬು ಸವಿಯಲು ಸಿದ್ಧ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








