Gujje Kadle Sukka: ತುಳುನಾಡಿನ ಸ್ಪೆಷಲ್ ಗುಜ್ಜೆ ಕಡ್ಲೆ ಸುಕ್ಕ; ಹಲಸಿನ ಕಾಯಿ ಸಿಕ್ರೆ ಈ ಖಾದ್ಯ ಮಾಡಲು ಮರೆಯದಿರಿ
ಹಲಸಿನ ಕಾಯಿ, ಮಾವಿನ ಕಾಯಿ ಸೀಸನ್ ಈಗಾಗ್ಲೇ ಶುರುವಾಗಿದೆ. ಹಳ್ಳಿ ಕಡೆ ಎಲ್ಲಿ ನೋಡಿದ್ರೂ ಹಲಸಿನಕಾಯಿ, ಮಾವಿನ ಕಾಯಿಗಳೇ ಕಾಣ ಸಿಗುತ್ತಿರುತ್ತವೆ. ಈ ಸೀಸನ್‌ನಲ್ಲಿ ಜನ ಹೆಚ್ಚಾಗಿ ಮಾವಿನಕಾಯಿ ಉಪ್ಪಿನ ಕಾಯಿ, ಮಾವಿನಕಾಯಿ ಚಟ್ನಿ, ಹಲಸಿಕಾಯಿ ಪದಾರ್ಥ, ಹಲಸಿಕಾಯಿ ಕಬಾಬ್ ಹೀಗೆ ಹಲವಾರು ಬಗೆಯ ಖಾದ್ಯಗಳನ್ನು ಮಾಡುತ್ತಿರುತ್ತಾರೆ. ನೀವು ಕೂಡಾ ಇದೆಲ್ಲವನ್ನು ಟ್ರೈ ಮಾಡಿರ್ಬೋದು ಅಲ್ವಾ. ಈಗೇನಾದರೂ ನಿಮಗೆ ಎಳೆ ಹಲಸಿನ ಕಾಯಿ ಸಿಕ್ಕರೆ ಮಂಗಳೂರು ಸ್ಟೈಲ್ ಗುಜ್ಜೆ ಕಡ್ಲೆ ಸುಕ್ಕ ರೆಸಿಪಿಯನ್ನು ಒಮ್ಮೆ ಟ್ರೈ ಮಾಡಿ ನೋಡಿ.

ಹಲಸು (Jackfruit) ಅಂದ್ರೆ ಹೆಚ್ಚಿನವರಿಗೆ ಸಖತ್ ಇಷ್ಟ. ಹಣ್ಣಾದ ಹಲಸು ತಿನ್ನೋಕೆ ಎಷ್ಟು ರುಚಿಕರವೋ ಹಾಗೆಯೇ ಹಲಸಿನ ಕಾಯಿ (Raw Jackfruit) ಅಥವಾ ಗುಜ್ಜೆಯಿಂದ ತಯಾರಿಸುವ ಹಪ್ಪಳ, ಕಡುಬು, ಹೋಳಿಗೆ, ಪೋಡಿ, ಕಬಾಬ್, ಪಲ್ಯ, ಗೊಜ್ಜು, ಬಿರಿಯಾನಿ ಸೇರಿದಂತೆ ಇತ್ಯಾದಿ ಖಾದ್ಯಗಳು ಕೂಡ ಅಷ್ಟೇ ರುಚಿಕರವಾಗಿರುತ್ತದೆ. ಜೊತೆಗೆ ಹಲಸಿನ ಹಣ್ಣಿನಿಂದಲೂ ಐಸ್‌ಕ್ರೀಮ್, ಹೋಳಿಗೆ, ಶ್ಯಾವಿಗೆ ಸೇರಿದಂತೆ ಒಂದಷ್ಟು ಸಿಹಿ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಇವೆಲ್ಲವೂ ತುಂಬಾನೇ ರುಚಿಕರವಾಗಿರುತ್ತದೆ. ಇನ್ನೂ ತುಳುನಾಡಿನ (Tulunadu) ಕಡೆ ಹಲಸಿನಕಾಯಿಯಿಂದ ತಯಾರಿಸುವ ಗುಜ್ಜೆ ಕಡ್ಲೆ ಸುಕ್ಕ (gujje kadle sukka) ಖಾದ್ಯ ಸಖತ್ ಫೇಮಸ್. ಊಟದ ಜೊತೆ ಸವಿಯಲು ಗುಜ್ಜೆ ಕಡ್ಲೆ ಸುಕ್ಕ ಬೆಸ್ಟ್ ಕಾಂಬಿನೇಷನ್ ಅಂತಾನೇ ಹೇಳ್ಬೋದು. ನಿಮಗೆ ಏನಾದ್ರೂ ಈ ಬಾರಿ ಎಳೆ ಹಲಸಿನ ಕಾಯಿ ಸಿಕ್ರೆ ಈ ಸಖತ್ ಟೀಸ್ಟಿಯಾಗಿರುವ ಗುಜ್ಜೆ ಕಡ್ಲೆ ಸುಕ್ಕ ಮಾಡಲು ಮರೆಯದಿರಿ. ಹಾಗಿದ್ರೆ ಮೊದಲು ಈ ಸ್ಪೆಷಲ್ ರೆಸಿಪಿಯನ್ನು ಹೇಗೆ ಮಾಡೋದು ಎಂದು ನೋಡೋಣ.
ಗುಜ್ಜೆ ಕಡ್ಲೆ ಸುಕ್ಕ ಮಾಡಲು ಬೇಕಾಗಿರುವ ಪದಾರ್ಥಗಳು:
3 ಕಪ್ ಸಣ್ಣಗೆ ಕಟ್ ಮಾಡಿದ ಗುಜ್ಜೆ ಅಥವಾ ಎಳೆ ಹಲಸು , ಒಂದು ಕಪ್ ನೆನೆಸಿಟ್ಟ ಕಪ್ಪು ಕಡಲೆಕಾಯಿ, 1 ಈರುಳ್ಳಿ, 6 ಬ್ಯಾಡಗಿ ಮೆಣಸಿನ ಕಾಯಿ, 3 ಗುಂಟೂರು ಮೆಣಸಿನಕಾಯಿ, ¼ ಟೀಸ್ಪೂನ್ ಜೀರಿಗೆ , ಕೊತ್ತಂಬರಿ, ಸ್ವಲ್ಪ ಮೆಂತ್ಯೆ, 3 ಬೆಳ್ಳುಳ್ಳಿ (ಸಿಪ್ಪೆ ಸಹಿತ), 1 ಟೀಸ್ಪೂನ್ ಅರಿಶಿನ ಪುಡಿ, ಸ್ವಲ್ಪ ಹುಣಸೆ, 3/4 ಕಪ್ ತಾಜಾ ತುರಿದ ತೆಂಗಿನಕಾಯಿ, ಸ್ವಲ್ಪ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು 2 ಚಮಚ ಎಣ್ಣೆ ಅಥವಾ ತುಪ್ಪ, 1 ಟೀಸ್ಪೂನ್ ಸಾಸಿವೆ, 1 ಟೀಸ್ಪೂನ್ ಉದ್ದಿನ ಬೇಳೆ, 3 ಜಜ್ಜಿದ ಬೆಳ್ಳುಳ್ಳಿ, 5 ರಿಂದ 6 ಕರಿಬೇವು ಎಲೆ
ಇದನ್ನೂ ಓದಿ: ಈ ಬೇಸಿಗೆಯಲ್ಲಿ ಟಿಫಿನ್ ಪ್ಯಾಕ್ ಮಾಡುವಾಗ ಈ ವಿಷಯ ನೆನಪಿರಲಿ, ಖಂಡಿತ ನಿಮ್ಮ ಊಟ ಹಾಳಾಗುವುದಿಲ್ಲ.
ಗುಜ್ಜೆ ಕಡ್ಲೆ ಸುಕ್ಕ ಮಾಡುವ ವಿಧಾನ:
- ಕಪ್ಪು ಕಡಲೆಯನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಹೀಗೆ ನೆನೆಸಿಟ್ಟ ಕಪ್ಪು ಕಡಲೆಕಾಳನ್ನು ಚೆನ್ನಾಗಿ ತೊಳೆದು ಕುಕ್ಕರ್‌ಗೆ ಹಾಕಿ ಕಡಲೆ ಮುಳುಗುವಷ್ಟು ನೀರು ಮತ್ತು ಸ್ವಲ್ಪ ಉಪ್ಪು ಹಾಕಿ ನಾಲ್ಕರಿಂದ ಐದು ಸೀಟಿ ಬರುವವರೆಗೆ ಬೇಯಿಸಿ. ಕುಕ್ಕರ್ ಬದಲು ಬೇರೆ ಪಾತ್ರೆಯಲ್ಲಿಯೂ ಕಡಲೆಕಾಯಿ ಬೇಯಿಸಿಟ್ಟುಕೊಳ್ಳಬಹುದು.
- ಬೇಯಿಸಿದ ಕಪ್ಪು ಕಡಲೆಯೊಂದಿಗೆ ಕತ್ತರಿಸಿದ ಹಸಿ ಹಲಸಿನ ಹಣ್ಣನ್ನು ಕುಕ್ಕರ್‌ಗೆ ಹಾಕಿ, ಒಂದು ಕತ್ತರಿಸಿದ ಈರುಳ್ಳಿ ಸೇರಿಸಿ. ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಿ, ಅದು ಒಣಗಿದಂತೆ ಕಂಡುಬಂದರೆ. ಮುಚ್ಚಿ 2 ಸೀಟಿ ಬರುವವರೆಗೆ ಬೇಯಿಸಿ.
- ಕಡಲೆ ಬೆಂದ ಬಳಿಕ ಅದಕ್ಕೆ ಸಣ್ಣ ತುಂಡುಗಳಾಗಿ ಕಟ್ ಮಾಡಿದಂತಹ ಹಲಸಿನ ಕಾಯಿ ಮತ್ತು ಬೆಲ್ಲ ಸೇರಿಸಿ ಹಲಸು ಮೃದುವಾಗುವವರೆಗೆ ಬೇಯಲು ಬಿಡಿ.
- ಈಗ ಹುರಿದಿಟ್ಟ ಮೆಣಸಿಕಾಯಿ, ಹುರಿದ ಕೊತ್ತಂಬರಿ ಬೀಜ, ಜೀರಿಗೆ, ಮೆಂತ್ಯ, ಅರಶಿನಪುಡಿ, ಈರುಳ್ಳಿ, ಹುಣಸೆ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ, ಬಳಿಕ ಅದಕ್ಕೆ ಸ್ವಲ್ಪ ತೆಂಗಿನ ತುರಿಯನ್ನು ಸೇರಿಸಿ ನುಣ್ಣಗೆ ರುಬ್ಬಿಟ್ಟುಕೊಳ್ಳಿ.
- ಈಗ ಒಂದು ಪ್ಯಾನ್‌ಗೆ ಸ್ವಲ್ಪ ತೆಂಗಿನ ಎಣ್ಣೆ ಹಾಕಿ ಅದು ಕಾದ ಬಳಿಕ ಅದಕ್ಕೆ ಸ್ವಲ್ಪ ಸಾಸಿವೆ, ಜಜ್ಜಿದ ಬೆಳ್ಳುಳ್ಳಿ, ಉದ್ದಿನ ಬೇಳೆ, ಕರಿ ಬೇವು ಹಾಕಿ ಹುರಿದುಕೊಳ್ಳಿ. ನಂತರ ಇದಕ್ಕೆ ರುಬ್ಬಿಟ್ಟ ಮಸಾಲೆ ಪದಾರ್ಥವನ್ನು ಸೇರಿಸಿ ಹಸಿ ವಾಸನೆ ಹೋಗುವವರೆಗೆ ಒಂದೆರಡು ನಿಮಿಷ ಹುರಿಯಿರಿ.
- ಆ ಬಳಿಕ ಆ ಪಾತ್ರೆಗೆ ಬೇಯಿಸಿದ ಕಡಲೆ ಮತ್ತು ಹಸಿ ಹಲಸಿನ ಕಾಯಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ. ಬಳಿಕ ಮೊದಲೇ ಹುರಿದಿಟ್ಟ ತೆಂಗಿನ ಕಾಯಿ ತುರಿಯನ್ನು ಸೇರಿಸಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿದರೆ ಕಡ್ಲೆ ಸುಕ್ಕ ಸವಿಯಲು ರೆಡಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ