Book Release: ಅಚ್ಚಿಗೂ ಮೊದಲು; ಶ್ರದ್ಧಾಳು, ತನ್ಮಯಿ, ಹಟಮಾರಿ, ಪ್ರತಿಭಾವಂತ, ನಿಸ್ವಾರ್ಥಿ ಚನ್ನಕೇಶವ

|

Updated on: Mar 26, 2022 | 1:58 PM

Theater Personality : ‘ನಮ್ಮ ಕುಟುಂಬದ ಸದಸ್ಯರಂತಿದ್ದ ಚನ್ನಕೇಶವ ಎಷ್ಟು ಆಪ್ತರಾಗಿದ್ದರೆಂದರೆ ಯಾವ ಕೆಲಸಕ್ಕೆ ಕೈಹಾಕುವುದಿದ್ದರೂ ನಾನು ಅವರನ್ನೊಮ್ಮೆ ಕೇಳುತ್ತಿದ್ದೆ. ಅವರ ಪ್ರಾಮಾಣಿಕತೆ, ನೈತಿಕ ಎಚ್ಚರ ಅತಿ ಅಪರೂಪದ್ದು.’ ವಿವೇಕ ಶಾನಭಾಗ

Book Release: ಅಚ್ಚಿಗೂ ಮೊದಲು; ಶ್ರದ್ಧಾಳು, ತನ್ಮಯಿ, ಹಟಮಾರಿ, ಪ್ರತಿಭಾವಂತ, ನಿಸ್ವಾರ್ಥಿ ಚನ್ನಕೇಶವ
ರಂಗಕರ್ಮಿ ಚನ್ನಕೇಶವ
Follow us on

Creative Writing : ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ. ಟಿವಿ9 ಕನ್ನಡ ಡಿಜಿಟಲ್​ – ‘ಅಚ್ಚಿಗೂ ಮೊದಲು’ ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ನಮಗೆ ಕಳುಹಿಸಿ. ಇ- ಮೇಲ್ tv9kannadadigital@gmail.com

ಕೃತಿ: ರಂಗಪುರಾಣ 
ಲೇಖಕರು : ಚನ್ನಕೇಶವ 
ಪುಟ: 168 
ಬೆಲೆ: ರೂ. 220
ಪ್ರಕಾಶನ: ಥಿಯೇಟರ್ ತತ್ಕಾಲ ಬುಕ್ಸ್, ಬೆಂಗಳೂರು 

ಕಳೆದ ವರ್ಷ ನಮ್ಮನ್ನಗಲಿದ ಪ್ರತಿಭಾವಂತ ರಂಗಕರ್ಮಿ ಚನ್ನಕೇಶವ ಅವರ ‘ರಂಗಪುರಾಣ’, ‘ತೂಗುತೊಟ್ಟಿಲು ಮತ್ತು ಇತರೇ ನಾಟಕಗಳು’, ‘ಅಕಾಕಿ ಕೋಟು ಮತ್ತು ಇತರೇ ನಾಟಕಗಳು’, ‘ಲೋಕೋತ್ತಮೆ ಮತ್ತು ಕಾಲಯಾತ್ರೆ’ ಕೃತಿಗಳು ಇದೇ 27ರಂದು ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಸುಚಿತ್ರಾ ಆವರಣದಲ್ಲಿ ಬಿಡುಗಡೆಯಾಗಲಿವೆ. ಈ ಸಂದರ್ಭದಲ್ಲಿ ಕಥೆಗಾರ ವಿವೇಕ ಶಾನಭಾಗ ಅವರ ಆಪ್ತಬರಹ ನಿಮ್ಮ ಓದಿಗೆ.  

ಚನ್ನಕೇಶವ ತುಂಬಾ ಬಳಸುತ್ತಿದ್ದ ಶಬ್ದ ಕಮ್ಯೂನಿಟಿ. ಯಾವ ವಿಷಯದ ಮೇಲಿನ ಮಾತುಕತೆಯಾದರೂ ಹೇಗಾದರೂ ಮಾಡಿ ಅದನ್ನು ಕಮ್ಯೂನಿಟಿಗೆ ತಳಕು ಹಾಕುತ್ತಿದ್ದರು. ಅವರ ಕಮ್ಯೂನಿಟಿಯ ಅರ್ಥವಿಸ್ತಾರ ಬಹು ದೊಡ್ಡದು ಮತ್ತು ಅದನ್ನು ಸಂದರ್ಭಕ್ಕೆ ತಕ್ಕಂತೆ ಅರ್ಥಮಾಡಿಕೊಳ್ಳಬೇಕಿತ್ತು. ಯಾಕೆಂದರೆ ಅವರು ಏಕಕಾಲಕ್ಕೆ ಹಲವು ಕಮ್ಯೂನಿಟಿಗಳಲ್ಲಿ ಸಕ್ರಿಯವಾಗಿದ್ದರು. ಕಲೆಯ ವಿಷಯಕ್ಕೆ ಬಂದರೆ ಅವರ ಚಿತ್ರಕಲಾ ಪರಿಷತ್ತಿನ ನಂಟಿರುವ ಕಮ್ಯೂನಿಟಿ, ನೀನಾಸಮ್ ವಿದ್ಯಾರ್ಥಿಗಳ ಕಮ್ಯೂನಿಟಿ, ರಂಗಭೂಮಿಯ ಕಮ್ಯೂನಿಟಿ, ಲೋಕಚರಿತದ ಕಮ್ಯೂನಿಟಿ, ಮಕ್ಕಳ ಬೇಸಿಗೆ ಶಿಬಿರದ ಮೂಲಕ ರಾಜ್ಯದಾದ್ಯಂತ ಹರಡಿದ್ದ ಕಮ್ಯೂನಿಟಿ, ಅದೇ ರೀತಿ ಚಿತ್ರರಂಗ, ಸಾಹಿತ್ಯ, ಗೊಂಬೆಯಾಟ ಹೀಗೆ ಹಲವು ಕಮ್ಯೂನಿಟಿಗಳ ಭಾಗವಾಗಿದ್ದ ಚನ್ನಕೇಶವ ಸದಾ ಎಲ್ಲರನ್ನೂ ಒಳಗೊಳ್ಳಬೇಕೆಂಬ ತುಡಿತವಿದ್ದವರು. ಅದು ಯೋಚಿಸಿ ತಳೆದ ನಿಲುವಲ್ಲ, ಅವರಿದ್ದದ್ದೇ ಹಾಗೆ. ಆದ್ದರಿಂದ ಅವರೊಬ್ಬರು ಇದ್ದರೆ ಸಾವಿರ ಜನ ಜೊತೆಗಿದ್ದ ಹಾಗೆ. ದೋಷವೆನ್ನುವಷ್ಟರ ಮಟ್ಟಿಗೆ ಅವರದು ನಿಸ್ವಾರ್ಥ ಸ್ವಭಾವ. ಯಾವಾಗಲೂ, ತನ್ನದಕ್ಕಿಂತ ಇತರರ ಕಷ್ಟಗಳು ಹೆಚ್ಚಿನದೆಂದು ಭಾವಿಸುತ್ತಿದ್ದವರು.

ನಿತ್ಯ ಬೆಳಿಗ್ಗೆ ನಿಗದಿಯಾದ ಸಮಯಕ್ಕೆ ಕಚೇರಿಗೆ ಹೋಗುವ ಯಾವ ಕೆಲಸವನ್ನೂ ಮಾಡಬಾರದೆಂಬುದು, ಯಾರ ಕೈಕೆಳಗೂ ಕೆಲಸ ಮಾಡಬಾರದೆಂಬುದು ಅವರ ನಿಲುವಾಗಿತ್ತು. ಹದಿನೈದು ವರ್ಷಗಳ ಹಿಂದೆ, ಕನ್ನಡದ ಪ್ರಸಿದ್ಧ ಪತ್ರಿಕೆಯಿಂದ ಕೆಲಸಕ್ಕಾಗಿ ಬಂದ ಆಹ್ವಾನವನ್ನು ಅವರು ಸ್ವೀಕರಿಸಲಿಲ್ಲ. ಅದೇ ಸಮಯದಲ್ಲಿ, ಬಹುರಾಷ್ಟ್ರೀಯ  ಕಂಪನಿಯ ವಿನ್ಯಾಸಕಾರನ ಹುದ್ದೆಯನ್ನೂ ನಿರಾಕರಿಸಿದರು. ಅದಕ್ಕೂ ಮೊದಲು ಸುಬ್ಬಣ್ಣ ಅವರನ್ನು ನೀನಾಸಂ ಶಿಕ್ಷಣ ಕೇಂದ್ರಕ್ಕೆ ಶಿಕ್ಷಕರಾಗಿ ಆಹ್ವಾನಿಸಿದ್ದರು. ಯಾವುದೇ ಬಗೆಯ ಸಮಯದ ಕಟ್ಟುಪಾಡು ತನ್ನ ಸೃಜನಶೀಲತೆಯನ್ನು ಕುಂಠಿತಗೊಳಿಸುತ್ತದೆಂದು ನಂಬಿದ್ದ ಚನ್ನಕೇಶವ ಯಾವ ನೌಕರಿಯನ್ನೂ ಬಯಸಲಿಲ್ಲ. ‘ಬೆಳಿಗ್ಗೆ ಎದ್ದು ಏನೋ ಓದಬೇಕೆನಿಸಿದರೆ ಅಥವಾ ವಿನ್ಯಾಸಕ್ಕೆ ಸಂಬಂಧಪಟ್ಟ ಕಲ್ಪನೆಯನ್ನು ವಿಸ್ತರಿಸುವ ಆಸೆಯಾದರೆ ಅದನ್ನು ಮಾಡಬೇಕೇ ಹೊರತು ಅದಕ್ಕಾಗಿ ಇನ್ನೊಬ್ಬರನ್ನು ರಜೆ ಕೇಳುವ ಪರಿಸ್ಥಿತಿಯಲ್ಲಿ ನಾನಿರಬಾರದು’ ಅನ್ನುತ್ತಿದ್ದರು. ಶಿವರಾಮ ಕಾರಂತರು ಅವರ ಆದರ್ಶ. ಕಾರಂತರ ಬಗ್ಗೆ ಒಂದು ವಿಶೇಷ ಪುಸ್ತಕ ತರುವ ಯೋಚನೆಯನ್ನು ಎಷ್ಟೊಂದು ಬಾರಿ ನನ್ನ ಜೊತೆ ಚರ್ಚಿಸಿದ್ದರು. ಅದು ಅವರು ಮಾತ್ರ ತರಬಹುದಾಗಿದ್ದ ಪುಸ್ತಕ.

ಜೀವನದಲ್ಲಿ ಎದುರಿಸಬೇಕಾಗಿ ಬಂದ ಕಷ್ಟಕೋಟಲೆ ಮತ್ತು ಸವಾಲುಗಳನ್ನು ಗಮನಿಸಿದರೆ ಅವರ ಜೀವಮಾನದ ಸಾಧನೆಯನ್ನು ಅದ್ಭುತ ಎಂದಲ್ಲದೇ ಬೇರೆ ರೀತಿಯಲ್ಲಿ ವರ್ಣಿಸಲಾಗದು. ತಾನು ಏನನ್ನಾದರೂ ಕಲಿಯಬಲ್ಲೆನೆಂಬ ಆತ್ಮವಿಶ್ವಾಸವಿದ್ದ ಚನ್ನಕೇಶವ Self made ಎಂಬುದಕ್ಕೆ ಅತ್ಯುತ್ತಮ ಉದಾಹರಣೆ. ಹತ್ತನೇ ಕ್ಲಾಸಿನ ನಂತರ ಮನೆ ಬಿಟ್ಟು ಬೆಂಗಳೂರಿಗೆ ಬಂದು ಗೀತಾ ಬುಕ್‌ಹೌಸಿನಲ್ಲಿ ಪ್ಯಾಕಿಂಗ್ ಕೆಲಸಕ್ಕಿದ್ದರು. ಎಡೆಬಿಡದ ಕೆಲಸದ ನಡುವೆ ಕೈಗೆ ಸಿಕ್ಕಿದ್ದನ್ನೆಲ್ಲ ಓದಿದರು. ಸಂಬಳ ಯಾವುದಕ್ಕೂ ಸಾಲುತ್ತಿರಲಿಲ್ಲ. ಸಾಹಿತ್ಯದ ಸಭೆಗಳಿಗೆ ಹೋಗುವುದನ್ನು ಮಾತ್ರ ತಪ್ಪಿಸುತ್ತಿರಲಿಲ್ಲ. ಎಲ್ಲ ಕಡೆ ನಡೆದೇ ಹೋಗುವುದು. ಸಾಹಿತಿಗಳ ಚಿತ್ರ ಬರೆದು ಅದರ ಮೇಲೆ ಅವರ ಹಸ್ತಾಕ್ಷರ ಪಡೆಯುತ್ತಿದ್ದರು. ಇಂಥ ನೂರಾರು ಚಿತ್ರಗಳ ಸಂಗ್ರಹವು ಮುಂದೊಮ್ಮೆ ಕಳೆದುಹೋದ ಬಗ್ಗೆ ಬೇಸರಪಟ್ಟಿದ್ದರು.

ಚನ್ನಕೇಶವರ ಕೃತಿ

ಇದನ್ನೂ ಓದಿ : ಚನ್ನಕೇಶವರನ್ನು ನೆನಪಿಸಿಕೊಂಡ ಪತ್ನಿ ಗಿರಿಜಾ ಸಿದ್ದಿ ಭಾಗ 1 : ‘ಅಂದರ್ ಮಂಚೋಕೋಂಬೋ ಟಿಣಿಂಗ್ ಮಿಣಿಂಗ್ ಟಿಷ್ಯಾ!’ 

ಚಿತ್ರಕಲಾ ಪರಿಷತ್ತಿನಲ್ಲಿ ಓದಬೇಕೆಂಬ ಆಸೆಯಿದ್ದುದರಿಂದ ಪರಿಷತ್ತಿನ ಎದುರು ನಿತ್ಯ ವಿನಾಕಾರಣ ಓಡಾಡುತ್ತಿದ್ದುದನ್ನು ಕಣ್ಣಿಗೆ ಕಟ್ಟುವಂತೆ ನನಗೆ ವಿವರಿಸಿದ್ದರು. ಖರ್ಚು ಸರಿದೂಗಿಸಲು ಹಲವಾರು ಕೆಲಸ ಮಾಡಬೇಕಾದ ಅನಿವಾರ್ಯತೆಯಿತ್ತು. ಮೂರು ವರ್ಷ ವಾಚ್ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡಿದರು. ‘ಬಹಳ ನೋವು ತಂದ ಈ ಕಾಲವನ್ನು ಮರೆಯಲು ಯತ್ನಿಸುತ್ತಿದ್ದೇನೆ. ಹಾಗಾಗಿ ವಾಚು ರಿಪೇರಿ ಮಾಡಬಾರದೆಂದು ನಿರ್ಧರಿಸಿದ್ದೇನೆ’ ಅಂದಿದ್ದರು. ಅವರಿಗಿದ್ದ ಈ ನೈಪುಣ್ಯತೆಯನ್ನು ಯಾರಲ್ಲಿಯೂ ಹೇಳಿಕೊಳ್ಳುತ್ತಿರಲಿಲ್ಲ.

ನೀನಾಸಂ ನಟನಾಗಿ, ನಿರ್ದೇಶಕರಾಗಿ ನನಗವರ ಪರಿಚಯವಿದ್ದರೂ ನಾವು ಹತ್ತಿರವಾಗಿದ್ದು ‘ದೇಶ ಕಾಲ’ ಆರಂಭವಾದಾಗಲೇ. ಪತ್ರಿಕೆ ಆರಂಭಿಸುವಾಗ ಒಬ್ಬ ವಿನ್ಯಾಸಕಾರರನ್ನು ಹುಡುಕುತ್ತಿದ್ದೆ. ಕೆ.ವಿ.ಅಕ್ಷರ ಒಮ್ಮೆ ನನಗೆ ಫೋನ್ ಮಾಡಿ ‘ಒಬ್ಬರನ್ನು ನಿಮ್ಮ ಬಳಿ ಕಳಿಸುತ್ತೇನೆ. ನಿಮಗೂ ಅವರಿಗೂ ಸರಿಹೋಗತ್ತೆ’ ಎಂದರು. ಹಾಗೆ ನನ್ನನ್ನು ಭೇಟಿಯಾದವರು ಚನ್ನಕೇಶವ.

ಜೊತೆಯಾಗಿ ಕೆಲಸ ಆರಂಭಿಸಿದಂತೆ ನನಗೆ ಅವರ ಅಪೂರ್ವ ಪ್ರತಿಭೆಯ ಪರಿಚಯವಾಗತೊಡಗಿತು. ಅವರ ತೀಕ್ಷ್ಣಮತಿತ್ವ, ಕನ್ನಡ ಭಾಷಾಜ್ಞಾನ, ಸೂಕ್ಷ್ಮಜ್ಞತೆ, ಸಾಹಿತ್ಯದ ವಿಶಾಲವಾದ ಓದು ಪತ್ರಿಕೆಗೆ ಇನ್ನಿಲ್ಲದ ಶಕ್ತಿ ಕೊಟ್ಟಿತು. ಅವರ ವಿನ್ಯಾಸದಲ್ಲಿ ಪತ್ರಿಕೆಯ ಪುಟಗಳು ಕಂಗೊಳಿಸತೊಡಗಿದವು. ಹೊಸತನ್ನು ಮಾಡಬೇಕೆನ್ನುವ ಅವರ ತುಡಿತ ಪತ್ರಿಕೆಯ ಬ್ರೋಶರ್‌ನಿಂದಲೇ ಶುರುವಾಯಿತು. ಅದನ್ನು ಹಳೆಯ ಆಫ್‌ಸೆಟ್ ಪ್ರೆಸ್ಸಿನಲ್ಲಿ ಮುದ್ರಿಸಬೇಕೆಂದು ಗಾಂಧಿನಗರದಲ್ಲಿ ಒಂದು ಸಣ್ಣ ಪ್ರೆಸ್ಸನ್ನು ಹುಡುಕಿದರು. ಪತ್ರಿಕೆಗಾಗಿ ರಾವ್‌ಬೈಲ್ ಅವರನ್ನು ಭೇಟಿಯಾಗಿ, ಅವರ ರೇಖಾಚಿತ್ರಗಳನ್ನು ತರಲು ಧಾರವಾಡಕ್ಕೆ ಹೋದೆವು. ಅಲ್ಲಿ ರಜನಿ ಮತ್ತು ಪ್ರಕಾಶ ಗರೂಡರ ಮನೆಗೆ ಕರೆದುಕೊಂಡು ಹೋದರು. ಅವರೇ ‘ದೇಶ ಕಾಲ’ದ ಮೊಟ್ಟಮೊದಲ ಚಂದಾದಾರರು.

ಪತ್ರಿಕೆಗಾಗಿ ಚನ್ನಕೇಶವ ಮಾಡದ ಕೆಲಸವಿಲ್ಲ. ಅವರಿಲ್ಲದೇ ‘ದೇಶ ಕಾಲ’ ಪತ್ರಿಕೆಯನ್ನು ನಡೆಸುವುದು ಸಾಧ್ಯವಾಗುತ್ತಿರಲಿಲ್ಲ. ತಾವು ಮಾಡುವ ಕೆಲಸ ಪರಿಪೂರ್ಣವಾಗಿರಬೇಕೆಂಬ ಹಂಬಲ ಅವರನ್ನು ಇತರರಿಂದ ಪ್ರತ್ಯೇಕಿಸುವ ಮುಖ್ಯವಾದ ಗುಣವೆಂದು ನನಗೆ ಅನಿಸಿದೆ. ಅದನ್ನು ಸಾಧಿಸಲು ಎಷ್ಟು ಸಮಯವನ್ನಾದರೂ ವ್ಯಯಿಸುತ್ತಿದ್ದರು. ಜೊತೆಗೆ ಅಗಾಧ ತನ್ಮಯತೆ ಮತ್ತು ಹಟಮಾರಿತನ. ಕೆಲಸಕ್ಕೆ ಕೂತರೆ ಸುಲಭಕ್ಕೆ ಏಳುವವರಲ್ಲ. ‘ದೇಶ ಕಾಲ’ದ ಸಂಚಿಕೆ ಮುದ್ರಣಕ್ಕೆ ಹೋಗುವ ಮುನ್ನ ಮೂರು ನಾಲ್ಕು ದಿನ ನಮ್ಮ ಮನೆಯಲ್ಲೇ ಅವರ ವಾಸ. ಆಗೆಲ್ಲ ಅವರನ್ನು ಊಟ ತಿಂಡಿಗೆ ಎಬ್ಬಿಸುವುದು ಸುಲಭವಾಗಿರಲಿಲ್ಲ.

ಕಲಾಭಿರುಚಿಯಲ್ಲಿ, ಚಿಂತನೆಯಲ್ಲಿ ಮತ್ತು ಒಟ್ಟೂ ಧೋರಣೆಯಲ್ಲಿ ಚನ್ನಕೇಶವ ಬಹಳ ಆಧುನಿಕರಾಗಿದ್ದರು. ಅವರ ವಿನ್ಯಾಸಗಳಲ್ಲಿ ಇದು ಸ್ಪಷ್ಟವಾಗಿ ವ್ಯಕ್ತವಾಗಿದೆ. ಜೊತೆಗೇ ಜೀವನಾನುಭವದಿಂದ ಬಂದ ಪಾರಂಪರಿಕ ತಿಳವಳಿಕೆಯನ್ನು ಸದಾ ಹಿನ್ನೆಲೆಯಲ್ಲಿ ಇಟ್ಟುಕೊಂಡಿರುತ್ತಿದ್ದರು. ಹೊಸ ತಂತ್ರಜ್ಞಾನವನ್ನು ಕಲಿಯುವುದಕ್ಕಾಗಲೀ ಬಳಸುವುದಕ್ಕಾಗಲೀ ಅವರಿಗೆ ಎಂದೂ ಹಿಂಜರಿಕೆಯಿರಲಿಲ್ಲ. ಯಾವುದೇ ವಿಷಯವನ್ನು ಅದರ ತಳಮಟ್ಟ ಶೋಧಿಸಿ ಅರಿಯುವುದು ಅವರ ಸ್ವಭಾವವಾಗಿತ್ತು. ಅವರು ಎಡಿನ್‌ಬರಾ ಫೆಸ್ಟಿವಲ್‌ ಸೇರಿದಂತೆ ಮೂರು ಬಾರಿ ವಿದೇಶ ಪ್ರವಾಸ ಮಾಡಿದ್ದರು. ಪ್ರತೀ ಸಲವೂ ಅಲ್ಲಿಂದ ಕಲಿತು ಬಂದಿದ್ದರ ಬಗ್ಗೆ ಅವರಿಗೆ ಸ್ಪಷ್ಟತೆಯಿತ್ತು. ಇಂಥ ಅಪರೂಪದ ಎಚ್ಚರ ಕಾಣುವುದು ಕಲಿಯುವ ಹಸಿವೆ ಇರುವವರಲ್ಲಿ ಮಾತ್ರ.

ಚನ್ನಕೇಶವರ ಕೃತಿ

ಇದನ್ನೂ ಓದಿ : ಚನ್ನಕೇಶವರನ್ನು ನೆನಪಿಸಿಕೊಂಡ ಪತ್ನಿ ಗಿರಿಜಾ ಸಿದ್ದಿ ಭಾಗ 2 : Kannada New Movie : ‘ಮ್ಯೂಸಿಯಂನಲ್ಲಿಟ್ಟ ವಸ್ತುವಿನಂತೆ ಅವರೆಲ್ಲ ನನ್ನನ್ನು ನೋಡುತ್ತಿದ್ದರು’

‘ದೇಶ ಕಾಲ’ ಲಕ್ಷ್ಮೀ ಮುದ್ರಣಾಯಲದಲ್ಲಿ ಮುದ್ರಣವಾಗುತ್ತಿದ್ದ ಕಾಲದಲ್ಲಿ ಈಗ ಸ್ವಾನ್ ಪ್ರಿಂಟರ್ಸ್​ ನಡೆಸುವ ಕೃಷ್ಣಮೂರ್ತಿಯವರು ಅಲ್ಲಿದ್ದರು. ಮುಖಪುಟ ಮುದ್ರಣದ ವೇಳೆಯಲ್ಲಿ ತಮಗೆ ಬೇಕಾದ ಫಲಿತಾಂಶ ಬರುವವರೆಗೂ ಚನ್ನಕೇಶವ ಎಲ್ಲರನ್ನೂ ಎಷ್ಟು ಸತಾಯಿಸುತ್ತಿದ್ದರೆಂದರೆ ಒಂದು ಮುಖಪುಟ ಮುಗಿಸಲು ಅರ್ಧ ದಿನ ಬೇಕಾಗುತ್ತಿತ್ತು. ಅವರು ಬಣ್ಣಗಳನ್ನು ಸಂಯೋಜಿಸುತ್ತ ಮುದ್ರಣದ ಫಲಿತಾಂಶ ಪರೀಕ್ಷಿಸುವುದನ್ನು ಅಲ್ಲಿಯ ಸಿಬ್ಬಂದಿ ಯಂತ್ರದ ಸುತ್ತ ನಿಂತು ಕೌತುಕದಿಂದ ನೋಡುತ್ತಿದ್ದರು. ಕ್ಷಣಾರ್ಧದಲ್ಲಿ ಸಾವಿರಾರು ಪ್ರತಿ ಮುದ್ರಿಸುವ ಯಂತ್ರವನ್ನು ಒಂದು ಮುಖಪುಟಕ್ಕಾಗಿ ಹೀಗೆ ಅರ್ಧ ದಿನ ಬಿಟ್ಟುಕೊಡುವುದು ಸುಲಭವಾಗಿರಲಿಲ್ಲ. ಜೊತೆಗೆ ಇವರು ಬಂದರೆಂದರೆ ಇತರರ ಸಮಯವೂ ಹಾಳು. ಗುಣಮಟ್ಟದ ಬಗ್ಗೆ ಮತ್ತು ಹೊಸ ಪ್ರಯೋಗಗಳ ಬಗ್ಗೆ ಕೃಷ್ಣಮೂರ್ತಿಯವರಿಗೂ ತೀವ್ರವಾದ ಒಲವಿದ್ದುದರಿಂದ ಮಾತ್ರ ಇದು ಸಾಧ್ಯವಾಯಿತು. ಕ್ರಮೇಣ ಚನ್ನಕೇಶವ ಕೃಷ್ಣಮೂರ್ತಿಯವರಿಗೂ ಮುದ್ರಣಾಲಯದ ಸಿಬ್ಬಂದಿಗೂ ಆಪ್ತರಾದರು. ಅಲ್ಲಿದ್ದವರೆಲ್ಲ ಮುಂದಿನ ಸಂಚಿಕೆಯಲ್ಲಿ ಯಾವ ಹೊಸ ಪ್ರಯೋಗ ಮಾಡುತ್ತಾರೋ ಎಂದು ಕಾಯುವಂತಾಯಿತು. ‘ದೇಶ ಕಾಲ’ದ ವಿಶೇಷ ಸಂಚಿಕೆಯು ಚನ್ನಕೇಶವರ ಉನ್ನತ ಮಟ್ಟದ ಸೃಜನಶೀಲತೆಗೆ ಉದಾಹರಣೆ. ಕಡಿಮೆ ಖರ್ಚಿನಲ್ಲಿ ಅತಿ ಹೆಚ್ಚಿನ ಪರಿಣಾಮ ಸಾಧಿಸಬೇಕೆಂಬ ಅವರ ಉದ್ದೇಶವು ಅಲ್ಲಿ ಸಾರ್ಥಕವಾಗಿದೆ.

ಅವರು ಉತ್ಕಟವಾಗಿ ತೊಡಗಿಸಿಕೊಳ್ಳುತ್ತಿದ್ದ ಚಟುವಟಿಕೆಯೆಂದರೆ ಮಕ್ಕಳ ಬೇಸಿಗೆ ಶಿಬಿರಗಳು. ಅದಕ್ಕಾಗಿ ಅವರು ವ್ಯಯಿಸಿದ ಸಮಯ, ಹಣ ಲೆಕ್ಕವಿಲ್ಲದಷ್ಟು. ಅದರಲ್ಲೂ ಮಂಚಿಕೇರಿಯಂಥ ಹಳ್ಳಿಗಳಲ್ಲಿ ಶಿಬಿರ ಏರ್ಪಡಿಸಲು ಬಹಳ ಶ್ರಮವಹಿಸಿದರು. ಅವರ ಇನ್ನೊಂದು ಕನಸು ಲೋಕಚರಿತ. ಹೊಸ ತಲೆಮಾರಿನ ತರುಣ ತರುಣಿಯರನ್ನು ಒಟ್ಟಾಗಿಸಿ ಹೊಸ ಬಳಗವನ್ನು ಕಟ್ಟುವ ಕನಸು. ಕೋವಿಡ್ ಬರುವವರೆಗೂ ಒಮ್ಮೆಯೂ ತಪ್ಪದೇ ಐದು ವರ್ಷಗಳ ಕಾಲ ಪ್ರತಿ ತಿಂಗಳ ಎರಡನೆಯ ಭಾನುವಾರ ಲೋಕಚರಿತದ ಕೂಟ ನಡೆಯುತ್ತಿತ್ತು.

ರಂಗಭೂಮಿಯ ಅವರ ಸಾಧನೆಗಳ ವಿವರಗಳಿಗೆ ನಾನು ಹೋಗುವುದಿಲ್ಲ. ನನ್ನ ಕಂತು ಎಂಬ ಕತೆಯನ್ನಾಧರಿಸಿ ಅವರೇ ರಚಿಸಿದ ನಾಟಕವನ್ನು ಮೂರು ಬೇರೆಬೇರೆ ತಂಡಗಳಿಗೆ ಬೇರೆಬೇರೆ ಕಾಲದಲ್ಲಿ ಮಾಡಿಸಿದರು. ಅವರ ರಂಗವಿನ್ಯಾಸ, ಸಂಯೋಜನೆಗಳಲ್ಲಿ ಅವರ ಕಲ್ಪನಾಶಕ್ತಿಯಲ್ಲಿದ್ದ ಆಧುನಿಕತೆ ಸ್ಪಷ್ಟವಾಗಿ ಕಾಣುತ್ತಿತ್ತು.

ನೆನೆಯುತ್ತ ಹೋದರೆ ನೂರಾರು ನೆನಪುಗಳಿವೆ. ಅಡಿಗೆ ಮಾಡುವುದರಲ್ಲಿ, ಬ್ರೆಡ್ ತಯಾರಿಸುವುದರಲ್ಲಿ ಅವರಿಗೆ ಬಹಳ ಆಸಕ್ತಿಯಿತ್ತು. ನೀನಾಸಂ ಶಿಬಿರಗಳ ಟೀ ಬಿಡುವಿನಲ್ಲಿ ಅವರು ಹುಟ್ಟುಹಾಕಿದ ಎಲ್ಲರ ಮೈಚಳಿ ಬಿಡಿಸುವ ಸಮೂಹನೃತ್ಯವನ್ನು ಮತ್ತು ಅದು ಮೂಡಿಸಿದ ಭಾತೃತ್ವದ ಭಾವನೆಯನ್ನು ಮರೆಯಲು ಸಾಧ್ಯವಿಲ್ಲ.

ನಮ್ಮ ಕುಟುಂಬದ ಸದಸ್ಯರಂತಿದ್ದ ಚನ್ನಕೇಶವ ಎಷ್ಟು ಆಪ್ತರಾಗಿದ್ದರೆಂದರೆ ಯಾವ ಕೆಲಸಕ್ಕೆ ಕೈಹಾಕುವುದಿದ್ದರೂ ನಾನು ಅವರನ್ನೊಮ್ಮೆ ಕೇಳುತ್ತಿದ್ದೆ. ಅವರ ಪ್ರಾಮಾಣಿಕತೆ, ನೈತಿಕ ಎಚ್ಚರ ಅತಿ ಅಪರೂಪದ್ದು. ನಮ್ಮ ನಡುವಿದ್ದ ಪರಸ್ಪರ ವಿಶ್ವಾಸ, ಗೌರವ, ಪ್ರೀತಿ ಮತ್ತು ಸ್ನೇಹವನ್ನು ಶಬ್ದಗಳಲ್ಲಿಡಲು ಆಗುವುದಿಲ್ಲ. ಅವರನ್ನು ಕಳೆದುಕೊಂಡ ನೋವು ಮತ್ತು ದುಃಖ ಎಂದಿಗೂ ಶಮನವಾಗುವಂಥದ್ದಲ್ಲ.

(ಈ ಕೃತಿಗಳ ಖರೀದಿಗೆ ಸಂಪರ್ಕಿಸಿ : 6366345796, ಋತುಮಾನ )

ಇದನ್ನೂ ಓದಿ : Obituary : ಕನ್ನಡ ರಂಗಭೂಮಿಯ ಕ್ರಿಯಾಶೀಲ ನಿರ್ದೇಶಕ ಜಿ. ಚನ್ನಕೇಶವ ಇನ್ನಿಲ್ಲ

Published On - 12:53 pm, Sat, 26 March 22