Kum. Veerabhadrappa Birthday : ಅಚ್ಚಿಗೂ ಮೊದಲು ; ‘ಎಲ್ಲೋ ಜೋಗಪ್ಪ ನಿನ್ನರಮನೆ‘ ಹೊಸ ಕಾದಂಬರಿಯೊಂದಿಗೆ ಕುಂವೀ ಬಂದರು ದಾರಿಬಿಡಿ

|

Updated on: Oct 01, 2021 | 9:59 AM

Kannada Novel : ‘ಅದಕ್ಕೆ ಉತ್ಸಾಹ ಅನ್ನುವುದೊ, ಅವಸರ ಅನ್ನುವುದೊ, ಅವೆರಡರ ಸಮ್ಮಿಶ್ರಣ ಅನ್ನುವುದೊ! ಇದಕ್ಕೆ ನಿದರ್ಶನ ಅಂದರೆ ಶ್ರೀಯುತರು ಪ್ರಹರಿ ಗೋಡೆ ದಾಟಿ ಅಧಿಕೃತ ನಿವಾಸದ ಮುಖ್ಯದ್ವಾರ ಸಮೀಪಿಸಿದರು. ಅದೆ ತಾನೆ ಮಾಳವಿಕಾ ಎದುರು ಆಗಮಿಸಿದರು. ಆಕೆ ಇಲ್ಲಿಂದ ಅಲ್ಲಿವರೆಗೆ ಮುಸ್ತಾಬು ಆಗಿದ್ದರು. ತನ್ನ ಪತಿ ತನ್ನ ಸೌಂದರ್ಯನ ಶ್ಲಾಘಿಸದೆ ಇನ್ನಾರು ಶ್ಲಾಘಿಸಬೇಕು.’

Kum. Veerabhadrappa Birthday : ಅಚ್ಚಿಗೂ ಮೊದಲು ; ‘ಎಲ್ಲೋ ಜೋಗಪ್ಪ ನಿನ್ನರಮನೆ‘ ಹೊಸ ಕಾದಂಬರಿಯೊಂದಿಗೆ ಕುಂವೀ ಬಂದರು ದಾರಿಬಿಡಿ
ಹಿರಿಯ ಕಥೆಗಾರ ಕುಂ. ವೀರಭದ್ರಪ್ಪ
Follow us on

New Book : ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com

ಕೃತಿ : ಎಲ್ಲೋ ಜೋಗಪ್ಪ ನಿನ್ನರಮನೆ (ಕಾದಂಬರಿ)
ಲೇಖಕರು : ಕುಂ. ವೀರಭದ್ರಪ್ಪ
ಪುಟ: 465
ಬೆಲೆ : ರೂ. 500
ಮುಖಪುಟ ವಿನ್ಯಾಸ : ಕರಿಯಪ್ಪ ಹಂಚಿನಮನಿ, ಹಾವೇರಿ
ಪ್ರಕಾಶನ : ತನು ಮನ ಪ್ರಕಾಶನ, ಮೈಸೂರು

ಹೆಸರಾಂತ ಕಥೆಗಾರ ಕುಂ. ವೀರಭದ್ರಪ್ಪ ಭಾಷೆಯ ವೈಶಿಷ್ಟ್ಯದಿಂದಲೇ ಕನ್ನಡ ಕಾದಂಬರಿ ಲೋಕದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದವರು. ಇವರ ಕಥೆ, ಕಾದಂಬರಿಗಳು ಸಿನೆಮಾಗಳಾಗಿ ರಾಷ್ಟ್ರಮಟ್ಟದ ಪ್ರಶಸ್ತಿಯನ್ನೂ ಪಡೆದುಕೊಂಡವು. ಇವರ ಹೊಸ ಕಾದಂಬರಿ ಎಲ್ಲೋ ಜೋಗಪ್ಪ ನಿನ್ನರಮನೆ ಇದೇ ತಿಂಗಳ 29ರಂದು ಬಿಡುಗಡೆಯಾಗಲಿದೆ. ಆಯ್ದ ಭಾಗ ನಿಮ್ಮ ಓದಿಗೆ.

*

ನಿಜ ಹೇಳುವುದಾದರೆ ಅದರ ಆರಂಭದ ಮೂಲ ಇದ್ದದ್ದು ಇಟಲಿಯಲ್ಲಿ! ದಿನಕ್ಕೊಮ್ಮೆಯಾದರು ವಾಲುಗೋಪುರದ ನೆರಳಲ್ಲಿ ಐದಾರು ನಿಮಿಷ ವಿಶ್ರಮಿಸುವುದನ್ನು ರೂಢಿಯಾಗಿಸಿಕೊಂಡಿರುವ ಲುಕಾಸ್ ಐವೇ (ಅಲ್ಲಲ್ಲಿ ನಡೆದ ಅಂತಾರಾಷ್ಟ್ರೀಯ ಒಲಂಪಿಕ್ಕುಗಳಲ್ಲಿ ಐದಕ್ಕು ಅಧಿಕ ಈವೆಂಟುಗಳಲ್ಲಿ ಗೋಲ್ಡ್ ಮೆಡಲ್ ಪಡೆದಿರುವ ಮತ್ತು ಸದ್ಯಕ ಒಲಂಪಿಕ್ ಛೇರ್ಮನ್ನು ಆಗಿರುವ) ಅದರ ರೂವಾರಿ. ಶತಮಾನೋತ್ಸವದ ಕಾರಣಕ್ಕೆ ಅವಕಾಶ ಕೊಡಿ ಅಂದುದಕ್ಕೆ ಅವರು ಕೊಟ್ಟಿದ್ದರು. ನಿಜ ಹೇಳುವುದಾದರೆ ನಡೆಯಬೇಕಿದ್ದ ಕಿಲಿಮಂಜಾರೊ ತಪ್ಪಲಲ್ಲಿ ಹಿಮಪಾತ ಹೆಚ್ಚುವ ಮುನ್ಸೂಚನೆ ಇದ್ದದರಿಂದ ಅವರು ಅಲ್ಲಿಂದ ಅದನ್ನು ಇಲ್ಲಿಗೆ ಶಿಫ್ಟು ಮಾಡಿದ್ದರು. ವಿಜಯ ದುಂದುಭಿ ಕ್ರೀಡೋತ್ಸವದ ಪೂರ್ವಸಿದ್ದತೆ ನಡೆದಿರುವುದೆ! ನಡೆದಿದ್ದರೆ ಎಲ್ಲಿಯವರೆಗೆ ಬಂದಿರುವುದು! ಷೆಡ್ಯೂಲಂತೆ ನಡೆಯುವುದೊ! ಮುಂದೂಡಲ್ಪಡುವುದೊ! ಮುಂದೂಡುವುದಕ್ಕೆ ಆಯಾ ಈವೆಂಟಿನ ಪ್ರಾಯೋಜಕರ ಸಮ್ಮತಿ ಇರುವುದೆ! ಅದರಲ್ಲಿ ಇಂಥ ಸಂದಿಗ್ಧ ಅಪೂರ್ಣ ವಾಕ್ಯಗಳು ಐವತ್ತೆರಡು ಇದ್ದವು.

ಒಂದೆ ಉಸಿರಲ್ಲಿ ಓದುವುದು ನಿರ್ಧಾರಕ್ಕೆ ಬರುವುದು ಸಾಧ್ಯವಿರಲಿಲ್ಲ. ಅದರಲ್ಲಿದ್ದ ಇನ್ನೊಂದು ವಾಕ್ಯ ತಮ್ಮ ಎದೆ ಬಡಿತವನ್ನು ಹೆಚ್ಚಿಸಿತು, ಅದೆಂದರೆ ಲುಕಾಸ್ ನೇತೃತ್ವದ ಟೀಮು ಪರಿಶೀಲನಾರ್ಥ ಮುಂದಿನ ವಾರ ಆಗಮಿಸುವುದು ಎಂದು ಇತ್ತು. ಅವರು ಹಾಗೇನಾರ ಬಂದು ನೋಡಿದಲ್ಲಿ, ಇನ್ನು ಮೂಲಸೌಕರ್ಯಗಳು ಪೂರ್ಣಗೊಂಡಿಲ್ಲವೆಂದು ತಕರಾರು ತೆಗೆದಲ್ಲಿ, ತೆಗೆದು ಕ್ರೀಡೋತ್ಸವವನ್ನು ರದ್ದುಪಡಿಸಿದಲ್ಲಿ, ರದ್ದುಪಡಿಸಿ ಗ್ವಾಟೆಮಾಲ ದೇಶಕ್ಕೆ ಒಪ್ಪಿಸಿದಲ್ಲಿ! ಓ ಮೈ ಗಾಡ್! ಈಗಾಗಲೆ ರಾಜ್ಯ ಮತ್ತು ರಾಷ್ಟ್ರ ಸರ್ಕಾರಗಳು ಅದಕ್ಕೆಂದೆ ವ್ಯಯಿಸಿರುವುದು ಕೆಲವು ಸಹಸ್ರ ಕೋಟಿಗಳು! ಪ್ರಾಯೋಜಕರ, ಆಡ್ ಕಂಪನಿಗಳ, ರೂಪದರ್ಶಿಗಳ, ಸಾಲ ನೀಡಿರುವ ಬ್ಯಾಂಕುಗಳ, ಆಯಾ ಬ್ಯಾಂಕುಗಳಲ್ಲಿ ಕೆಲಸ ಮಾಡುವ ಅಪಾರ ಸಂಖ್ಯೆಯ ನೌಕರರ ಭವಿಷ್ಯವೇನು! ಇನ್ನು ತಾವು ಸುಮ್ಮನಿರಬಾರದು ಎಂದು ಸಾವಜಿ ನಿರ್ಧರಿಸಿದರು.

ಆ ಕ್ಷಣದಿಂದ ಅವರು ಎಷ್ಟು ಬ್ಯುಜಿ ಆದರೆಂದರೆ ತಮಗೆ ಸ್ವಲ್ಪ ದೂರದಲ್ಲಿದ್ದ, ಮಾತಾಡಿಸಲು ತಮ್ಮ ಕಡೆ ದಾವಿಸಿದ, ಡ್ಯಾಡಿ ಎಂದು ಕೂಗಿದ, ಸ್ವಲ್ಪ ನಿಲ್ಲಿರಿ ಎಂದು ಅಲ್ಲಿಂದ ಸೂಚಿಸಿದ ಮಗಳು ಅನಘಾಳ ಕಡೆ ನೋಡುವ ವ್ಯವಧಾನ ತಮಗೆ ಇರಲಿಲ್ಲ. ಸ್ವಲ್ಪ ಸಾವಕಾಶರಿ ಎಂದು ಅರ್ಜುನ ಸಹ ಕೂಗಿ ಎಚ್ಚರಿಸಿದ್ದು ಪ್ರಯೋಜನಕ್ಕೆ ಬರಲಿಲ್ಲ.

ಅದಕ್ಕೆ ಉತ್ಸಾಹ ಅನ್ನುವುದೊ, ಅವಸರ ಅನ್ನುವುದೊ! ಅವೆರಡರ ಸಮ್ಮಿಶ್ರಣ ಅನ್ನುವುದೊ! ಇದಕ್ಕೆ ನಿದರ್ಶನ ಅಂದರೆ ಶ್ರೀಯುತರು ಪ್ರಹರಿ ಗೋಡೆ ದಾಟಿ ಅಧಿಕೃತ ನಿವಾಸದ ಮುಖ್ಯದ್ವಾರ ಸಮೀಪಿಸಿದರು. ಅದೆ ತಾನೆ ಮಾಳವಿಕಾ ಎದುರು ಆಗಮಿಸಿದರು. ಆಕೆ ಇಲ್ಲಿಂದ ಅಲ್ಲಿವರೆಗೆ ಮುಸ್ತಾಬು ಆಗಿದ್ದರು. ತನ್ನ ಪತಿ ತನ್ನ ಸೌಂದರ್ಯನ ಶ್ಲಾಘಿಸದೆ ಇನ್ನಾರು ಶ್ಲಾಘಿಸಬೇಕು. ದಂಪತಿಗಳ ನಡುವೆ ಪರಸ್ಪರ ಅಪ್ರಿಸಿಯೇಷನ್ ಹೇಳುವುದು ಕೇಳುವುದು ಇತ್ತು, ಅದು ಪ್ರತಿ ಸಲ. ಪ್ರತಿ ಸ್ನಾನೋತ್ತರ ಇವರು ಅವರನ್ನು ಸೂಕ್ತ ವಿಶೇಷಣಗಳಿಂದ ಶ್ಲಾಘಿಸುವುದು ದೈನಂದಿನ ರೂಢಿಯಾಗಿತ್ತು. ಉತ್ಪ್ರೇಕ್ಷಿತ ಉಪಮೆಗಳಿಂದ ಆಕೆನ ಅಲಂಕರಿಸುವುದು ಅಭ್ಯಾಸವಾಗಿತ್ತು. ವಿಶೇಷವೆಂದರೆ ಮ್ಯಾಮ್‍ನ ಆ ದಿವಸದ ಸ್ನಾನ ಹಲವು ವೈಶಿಷ್ಟ್ಯಗಳಿಂದ ಕೂಡಿತ್ತು. ಆಕೆ ಎರಡು ತಾಸುಗಳ ಕಾಲ ಹುತ್ತದ ಮಣ್ಣನ್ನು ತಮ್ಮ ದೇಹಕ್ಕೆ ಲೇಪಿಸಿಕೊಂಡು ಒಂದುವರೆ ತಾಸು ಬಿಸಿಲಲ್ಲಿದ್ದು ದಾಖಲೆ ಸೃಷ್ಠಿಸಿದ್ದರು. ಅಲ್ಲದೆ ಆ ಬೆಳಗಿನ ಬಿಸಿಲು ಎಂದಿನಂತೆ ಇರದೆ ಪ್ರಖರವಿತ್ತು. ಅಂದಿನ ಸ್ನಾನದ ವೈಶಿಷ್ಟ್ಯವೆಂದರೆ ಆಕೆ ನೀರಿಗೆ ಬದಲು ತೆಂಗಿನ ಎಳೆನೀರು ಬಳಸಿದ್ದಳು. ಯುರೋಪಿಯನ್ ಲ್ಯಾಂಡರ್ ಹೆಸರಿನ ಅತಿ ದುಬಾರಿ ಸಾಬೂನನ್ನು ತಮ್ಮ ಒದ್ದೆ ಶರೀರಕ್ಕೆ ಲೇಪಿಸಿಕೊಂಡದ್ದಳು. ಉಲ್ಲೇಖಾರ್ಹ ಸಂಗತಿ ಅಂದರೆ ಆಕೆ ಹೊಕ್ಕುಳಲ್ಲಿ ಹೈದರಾಬಾದ್ ಮುತ್ತನ್ನಿರಿಸಿದ್ದಳು. ಈ ಎಲ್ಲಾ ಕಾರಣಗಳಿಂದ ಅವರು ಫ್ರೆಷ್ ಆಗಿದ್ದರು, ಜೊತೆಗೆ ವಿಶೇಷ ಕಾಂತಿಯಿಂದ ಹೊಳೆಯುತ್ತಿದ್ದರು.

ಕೆಲಸ ಮಾಡುವ ಆಳು ಕಾಳುಗಳು ಅಭಿಮಾನದಿಂದ ನೋಡಿ ತಮ್ಮ ಮೆಚ್ಚುಗೆಗೆ ಪಾತ್ರರಾದರು. ತಾವು ಚೆಲ್ಲಿದ ಮುಗುಳ್ನಗೆಯನ್ನೆ ಮಹಾಪ್ರಸಾದವೆಂದು ಭಾವಿಸಿದರು. ಆದರೆ ಅದೆ ಚಿಕ್ಕ ಕಾಮನ್ ಸೆನ್ಸ್ ತನ್ನ ಗಂಡನಿಗೆ ಇಲ್ಲವಲ್ಲ. ಓಹ್ ಬ್ಯೂಟಿಫುಲ್ ಎಂದು ಉದ್ಗರಿಸುವ ಔದಾರ್ಯ ತನ್ನ ಗಂಡನಲ್ಲಿ ಇಲ್ಲವಲ್ಲ! ಮುಖ ಚಿಕ್ಕದು ಮಾಡಿಕೊಂಡರಲ್ಲದೆ ಕೈಯಲ್ಲಿದ್ದ ಗುಲಾಬಿ ಹೂವಿನ ಪಕಳೆಗಳನ್ನು ಹರಿದೆಸೆದರು. ತನ್ನ ಗಂಡನಿಗೆ ತನ್ನ ಮೇಲೆ ಪ್ರೀತಿ ಇದೆ ಬೆಟ್ಟದಷ್ಟು.  ಆದರೆ ಆತಗೆ ಕೈತುಂಬ ಕೆಲಸ ಕಾರ್ಯಗಳು. ತನಗೆ ತಾನೆ ಸಮಾಧಾನ ಪಟ್ಟುಕೊಂಡಳು.

ಕುಂವೀ ಅವರ ಕೃತಿಗಳು

ಮಾಳವಿಕಾಳ ಊಹೆ ನಿಜ, ಆ ಮಾಹಿತಿ ಹಸ್ತಗತವಾದ ಕ್ಷಣದಿಂದ ಆತ ಉಸಿರಾಟ ಸಹ ಹ್ರಸ್ವಗೊಳಿಸಿದ. ಉಡುಪು ಕುರಿತಂತೆ ಆತಗೆ ಮೋಹವಿತ್ತು, ಶರ್ಟು ಪ್ಯಾಂಟುಗಳಿಗೆ ಸರಿಯಾಗಿ ಬಟನ್ನುಗಳನ್ನು ಹಾಕಿಕೊಳ್ಳುವ ಸಾಮಾನ್ಯ ತಿಳವಳಿಕೆ ಇತ್ತು, ತಲೆಗೂದಲನ ನೀಟಾಗಿ ಬಾಚಿಕೊಳ್ಳುವ ಕನಿಷ್ಟ ಜ್ಞಾನವಿತ್ತು. ಊಟವಾದ ಬಳಿಕ ಕೈಗಳನ್ನು ಸಾಬೂನಿನಿಂದ ತೊಳೆದುಕೊಳ್ಳುವ ಪ್ರಾಥಮಿಕ ತಿಳವಳಿಕೆ ಇತ್ತು. ಎಂಜಲು ಕೈಗಳನ್ನು ನ್ಯಾಪ್‍ಕಿನ್‍ಗೆ ಒರೆಸಿಕೊಳ್ಳುವ ಇರಾದೆ ಇತ್ತು. ಬೂಟ್ ಧರಿಸುವ ಮೊದಲು ಪಾದಗಳನ್ನು ಸಾಕ್ಸ್​ಗಳಲ್ಲಿ ಮರೆಮಾಚುವ ಶಿಸ್ತು ಇತ್ತು. ಆ ಹೈವೆ ಪತ್ರ ತಲುಪಿದ ಬಳಿಕ ಆ ಎಲ್ಲಾ ಪ್ರಾಥಮಿಕ ಶಿಸ್ತು ಏರುಪೇರಾಯಿತು. ತನ್ನ ನಿವಾಸದಿಂದ ಶರ್ಟುಗಳಿಗೆ ಬಟನು ಹಾಕುತ್ತ ಹೊರಬಂದರು. ಸಾಕ್ಸ್ ಇಲ್ಲದೆ ಬೂಟು ಧರಿಸಿದರು. ಕಾರಲ್ಲಿ ಕುಳಿತ ಬಳಿಕ ಕ್ರಾಪು ಒಪ್ಪ ಓರಣ ಮಾಡಲೆಂದು ಬಾಚಣಿಕೆ ಸಲುವಾಗಿ ತಡಕಾಡಿದರು. ತನ್ನ ನಿರೀಕ್ಷೆಯಲ್ಲಿ ಮುಖ್ಯಮಂತ್ರಿಗಳು ಇರುವರು ಎಂದು ತಿಳಿದೆ ಸೀದ ಎಲ್ಲಿಗೆ ಅಲ್ಲಿಗೆ ಹೋದರು.

ರಣವೀಳ್ಯಾ ಹೆಸರಿನ ಮೈದಾನ ಹತ್ತಾರು ಮೈಲು ವಿಸ್ತೀರ್ಣವಿತ್ತು. ಪುವ್ವುಲ ಅರಸರು ಕಾಳಗದ ಕಲಿಗಳೆ ಎಂದು ಹೆಸರಾಗಿದ್ದರು, ಕಾಳಗಗಳಿಗೆ ತಕ್ಕದಾದ ಮನಸ್ಸು ಶರೀರಗಳನ್ನು ಹದ ಮಾಡಿಕೊಳ್ಳುತ್ತಿದ್ದರು. ಕಾಳಗಗಳಿಗೆ ಮೊದಲು, ಕಾಳಗದ ಬಳಿಕ ಆ ಮೈದಾನದಲ್ಲಿ ತಾಂಬೂಲ ವಿನಿಮಯ ನಡೆಸುತ್ತಿದ್ದರು, ಅದರಲ್ಲಿ ಯೋಧರು ಮಾತ್ರವಲ್ಲದೆ ಅವರ ಕುಟುಂಬ ವರ್ಗೀಯರು ಸಾಲಂಕೃತರಾಗಿ ಭಾಗವಹಿಸಿರುತ್ತಿದ್ದರು. ಎಷ್ಟು ಜನ ಶತ್ರು ಪಾಳೆಯದವರನ್ನು ಕೊಂದರು, ಎಷ್ಟು ಜನ ವಿರೋಧಿ ಪಾಳೆಯದ ಸುಂದರ ಮಹಿಳೆಯರನ್ನು ಅಪಹರಿಸಿದರು.  ಶತ್ರು ಸೀಮೆಯ ಮನೆಗಳಲ್ಲಿನ ಸಿರಿಸಂಪತ್ತನ್ನು ಕೊಳ್ಳೆ ಹೊಡೆದರು! ಹೀಗೆ ಮೌಲ್ಯಮಾಪನ ನಡೆಸುತ್ತಿದ್ದರು. ಅಂಥವರಿಗೆ ಬಿರುದುಗಳನ್ನು ನಗದು ಬಹುಮಾನವನ್ನು ತಾಂಬೂಲದೊಂದಿಗೆ ನೀಡಿ ಗೌರವಿಸುತ್ತಿದ್ದರು. ಅಲ್ಲಿ ಆಯಾ ದಿವಸ ವಿಜಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದರು.

ಈ ವಿಜಯ ದುಂದುಭಿ ಹೆಸರಿನ ಕ್ರೀಡೋತ್ಸವಕ್ಕೆ ಅದರದ್ದೆ ಆದ ಇತಿಹಾಸವಿರುವುದು. ಇದನ್ನು ಪ್ರಾರಂಭಿಸಿದ್ದು ರಾಜಾ ಕತ್ಲೆಪ್ಪನಾಯಕ. ಕಪ್ಪಗೆ, ನಿಶಾಚರನಿದ್ದುದರಿಂದ ಆತಗೆ ಆ ಹೆಸರನ್ನು ಪ್ರಜೆಗಳೆ ದಯಪಾಲಿಸಿದ್ದರು. ಶತ್ರುಗಳು ಆತನನ್ನು ‘ಕಪ್ಪು ಚಿರತೆ’ ಎಂದೂ ಕರೆಯುತ್ತಿದ್ದರು, ಗುಂಡುಮುಳುಗಲ್ಲಿ ದೊರೆತ ಶಾಸನದಲ್ಲಿ ಆತನ ಶೌರ್ಯ ಪರಾಕ್ರಮಗಳ ವರ್ಣನೆ ಇದೆ, ಜೊತೆಗೆ ಆತ ಸ್ವತಃ ಕ್ರೀಡಾಕಾರನಿದ್ದ, ನೆರೆಹೊರೆ ಸೀಮೆಗಳಲ್ಲಿನ ಕ್ರೀಡಾಕಾರರನ್ನು ಪ್ರೋತ್ಸಾಹಿಸುತ್ತಿದ್ದ ಎಂಬ ಮಾಹಿತಿ ಇರುವುದು ಅದರಲ್ಲೆ! ಬೇರೆ ಮಾಹಿತಿಗಳಲ್ಲಿ ಆತ ಪ್ರತಿ ವರ್ಷ ವಿಜಯದುಂದುಭಿ ಹೆಸರಿನ ಕ್ರೀಡಾಕೂಟ ಏರ್ಪಡಿಸುತ್ತಿದ್ದನಂತೆ! ತನ್ನ ಆಡಳಿತಾವಧಿಯಲ್ಲಿ ಕುಸ್ತಿ ಕಬಡ್ಡಿ ಹೈಜಂಪ್ ಲಾಂಗ್ ಜಂಪ್ ಓಟಾಟಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಿದ್ದನಂತೆ! ಆತನ ಆಸ್ಥಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಳುಗಳು ಇದ್ದರಂತೆ! ಈ ಕಾರಣಕ್ಕೆ ಆತ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿರುವುದು!

ಸಾವಜಿ ದಾರಿ ನಡುವೆ ಅದೆಲ್ಲ ನೆನೆಸಿಕೊಂಡರು, ಕಾರು ಮೈದಾನ ಪ್ರವೇಶಿಸಿತು. ಬಹುತೇಕ ಹೊರಾಂಗಣ ಕ್ರೀಡೆಗಳ ಸಲುವಾಗಿ ಆ ಮೈದಾನವನ್ನು ಮೀಸಲಿರಿಸಿತ್ತು. ಅಗೊ ಅಲ್ಲಿ ಆ ಕ್ರೀಡೆ, ಇಗೊ ಇಲ್ಲಿ ಈ ಕ್ರೀಡೆ! ಅಗೊ ಅಲ್ಲಿ ಕುಸ್ತಿ ಪಂದ್ಯಾವಳಿ, ಇಗೊ ಇಲ್ಲಿ ಲಾಂಗ್ ಜಂಪ್! ಅಗೊ ಅಲ್ಲಿ ಐ ಜಂಪ್, ಇಗೊ ಇಲ್ಲಿ ಕಬಡ್ಡಿ ಹೆಸರಿನ ಕ್ರೀಡೆ!

ಅಲ್ಲೆಲ್ಲ ಹತ್ತಾರು ಬುಲ್ಡೋಜರುಗಳು ನೆಲ ಸಮ ಮಾಡುತ್ತಿದ್ದವು. ಅಗೊ ಅಲ್ಲಿ, ಇಗೊ ಇಲ್ಲಿ ನೂರಾರು ಜನ ಕೆಲಸ ಮಾಡುತ್ತಿದ್ದರು. ನೋಡುತ್ತ ಕಾರಿನಿಂದ ಇಳಿದರು. ಅವರನ್ನು ಹತ್ತಾರು ಜನ ಸಮೀಪಿಸಿದರು. ಸಾರ್ ಅಗೊ ಅಲ್ಲಿ ಅದು ನಡೆದಿದೆ, ಸಾರ್ ಇಗೊ ಇಲ್ಲಿ ನಡೆದಿದೆ. ಬೆರಳು ಚಾಚಿ ತೋರಿಸುತ್ತ ಮಾಹಿತಿ ನೀಡಿದರು. ವರಿಷ್ಠಾಧಿಕಾರಿ ಆಗಿದ್ದರು ಸಹ ಸಾವಜಿಯವರ ದೇಹದ ನರನಾಡಿಯಲ್ಲಿ ಕ್ರೀಡೋತ್ಸಾಹವಿತ್ತು. ಸಂಪಾದನೆಯ ಒಂದು ಪಾಲನ್ನು ಅವರು ಉದಯೋನ್ಮುಖ ಕ್ರೀಡಾಕಾರರಿಗೆ ವಿನಿಯೋಗಿಸುತ್ತಿದ್ದರು. ಕುಸ್ತಿಪಟುಗಳಿಗೆ ತಾಯಿ ಹೆಸರಲ್ಲಿ, ಓಟಗಾರರಿಗೆ ತಂದೆ ಹೆಸರಲ್ಲಿ, ಗುಂಡೆಸೆತಗಾರರಿಗೆ ಪತ್ನಿ ಹೆಸರಲ್ಲಿ, ಫುಟ್ ಬಾಲ್ ಆಟಗಾರರಿಗೆ ಮಗಳ ಹೆಸರಲ್ಲಿ ನಿಶ್ಚಿತ ಠೇವಣಿ ಇರಿಸಿದ್ದರು. ಹೀಗಾಗಿ ಅವರು ಅರ್ಧ ತಾಸಲ್ಲಿ ಮೈದಾನದಾದ್ಯಂತ ಬಿರುಗಾಳಿಯಂತೆ ಸಂಚರಿಸಿದರು. ಅದು ಯಾಕೆ ವಿಳಂಬ, ಇದು ಯಾಕೆ ವಿಳಂಬ! ಪ್ರಶ್ನಿಸಿದ ಬಳಿಕ ತಲೆಯ ಮುಂಭಾಗವನ್ನು ಕೈಯಿಂದ ಅದುಮಿ ಹಿಡಿದು ಎರಡು ನಿಮಿಷ ಮೌನದಿಂದ ಕುಳಿತರು.

(ಕಾದಂಬರಿಯ ಖರೀದಿಗೆ ಸಂಪರ್ಕಿಸಿ : 9448056562)

ಪರಿಚಯ : ಕತೆಗಾರ ಕುಂ. ವೀರಭದ್ರಪ್ಪನವರು ಬಳ್ಳಾರಿ ಜಿಲ್ಲೆಯ ಕೊಟ್ಟೂರಿನವರು. ನಿವೃತ್ತ ಶಾಲಾ ಶಿಕ್ಷಕರು. ‘ಬೇಲಿ ಮತ್ತು ಹೊಲ’ ಮೊದಲ ಕಿರುಕಾದಂಬರಿ. ನಂತರ ಕಥೆಗಳತ್ತ ಹೊರಳಿದರು. ಕಪ್ಪು, ಆಸ್ತಿ, ಕೊಟ್ರ ಹೈಸ್ಕೂಲಿಗೆ ಸೇರಿದ್ದು, ಯಾಪಿಲ್ಲು, ಶ್ಯಾಮಣ್ಣ, ಕೆಂಡದ ಮಳೆ, ಬೇಟೆ, ಪಕ್ಷಿಗಳು, ಪ್ರತಿಧ್ವನಿ, ದ್ವಾವಲಾಪುರ, ಹನುಮ, ಅರಮನೆ, ಸೋಲೋ, ಬೇಲಿಯ ಹೂಗಳು, ಆರೋಹಣ ಕಾದಂಬರಿಗಳು. ಶಾಮಣ್ಣ, ಯಾಪಿಲ್ಲು ಮತ್ತು ಅರಮನೆ ಕಾದಂಬರಿಗಳನ್ನು ಬರೆದರು. ‘ಬೇಟೆ’ ಕಾದಂಬರಿ ಆಧರಿಸಿದ ಸಿನೆಮಾ ‘ಮನ ಮೆಚ್ಚಿದ ಹುಡುಗಿ’. ‘ಬೇಲಿಯ ಹೂಗಳು’ ಕಾದಂಬರಿದ ಸಿನೆಮಾ ‘ದೊರೆ’. ‘ಕೊಟ್ರೇಶಿ ಕನಸು’, ‘ಕೆಂಡದ ಮಳೆ’ ಅವರ ಕತೆಯಾಧಾರಿತ ಸಿನೆಮಾಗಳು. ಗಿರೀಶ ಕಾಸರವಳ್ಳಿ ನಿರ್ದೇಶನದ ‘ಕೂರ್ಮಾವತಾರ’ಕ್ಕೆ ರಾಷ್ಟ್ರಮಟ್ಟದ ಪ್ರಶಸ್ತಿ ಬಂದಿದೆ. ಚಾಪ್ಲಿನ್, ರಾಹುಲ ಸಾಂಕೃತ್ಯಾಯನ, ಗಾಂಧೀ ಕ್ಲಾಸ್ ವ್ಯಕ್ತಿ ಚಿತ್ರಣಗಳು. ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ರಾಜ್ಯಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವರ್ಧಮಾನ್ ಪ್ರಶಸ್ತಿ, ಲಂಕೇಶ್ ಪ್ರಶಸ್ತಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ನೃಪತುಂಗ ಪ್ರಶಸ್ತಿ ಇವರಿಗೆ ದೊರೆತಿದೆ.

ಇದನ್ನೂ ಓದಿ : New Book : ಅಚ್ಚಿಗೂ ಮೊದಲು : ಮಕ್ಕಳ ಕಾದಂಬರಿ ‘ದಿ ರೈಲ್ವೇ ಚಿಲ್ಡ್ರನ್’ ಬಳ್ಳಾರಿಯಲ್ಲಿ ಇಂದು ಸಂಜೆ ಬಿಡುಗಡೆ

Published On - 2:02 pm, Wed, 18 August 21