Creative Writing : ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.
ಟಿವಿ9 ಕನ್ನಡ ಡಿಜಿಟಲ್ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್ ನಂಬರ್ ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com
ಕಳೆದ ನಾಲ್ಕು ದಶಕಗಳಿಂದ ಕತೆಗಳನ್ನು ಬರೆಯುತ್ತಿರುವ ಜೋಗಿಯವರ ಹೊಸ ಕತೆಗಳನ್ನು ಓದುವಾಗ ದಣಿವೇ ಆಗದಂತೆ ಓದಿಸಿಕೊಳ್ಳುವ ಅವರ ಸಾಲುಗಳಿಗಿರುವ ವೇಗ, ಹೊಸ ಹೊಳಹುಗಳನ್ನು ನೀಡುವ ಹೊಸ ಕಾಲದ ರೂಪಕಗಳನ್ನ ನೋಡಿದಾಗ ಬೆರಗಾಗುತ್ತದೆ. ಅವರು ಮೈ ಪೊರೆ ಕಳಚಿಕೊಂಡು ಬದುಕನ್ನ ಮತ್ತಷ್ಟು ತೀವ್ರವಾಗಿ ಧ್ಯಾನಿಸಿ ಈ ಕತೆಗಳನ್ನ ಬರೆದಂತಿದೆ. ಅವರ ಎಲ್ಲಾ ಕತೆಗಳಿಗೂ ಒಂದು ಲಯವಿರುತ್ತದೆ ಮತ್ತೂ ಆ ಲಯದಲ್ಲೇ ನಾವದನ್ನ ಓದಿಕೊಳ್ಳಬೇಕು ಅಂತ ಅವರು ಬಯಸುತ್ತಾರೆ ಅನಿಸುತ್ತದೆ. ಹೆಣ್ಣಿನ ಅಂತರಾಳ, ಮುದುಕರ ಕೊನೆಗಾಲದ ಹುಮ್ಮಸ್ಸು, ಕವಿಗಳ ಲಂಪಟತೆ, ದಾಂಪತ್ಯಕ್ಕೂ ಸಾಂಗತ್ಯಕ್ಕೂ ಇರುವ ವ್ಯತ್ಯಾಸ ಹೀಗೆ ಜೋಗಿಯವರ ಕತೆಗಳನ್ನು ಓದಿ ಮುಗಿಸಿದ ಮೇಲೆ ಅವರ ಮನಸ್ಸಲ್ಲಿರುವ ಅಸಂಖ್ಯ ಕೋಣೆಗಳಲ್ಲಿ ಒಂದು ಕೋಣೆಗಾದರೂ ಹೋಗಿ ಅಲ್ಲಿರುವ ನಿಟ್ಟುಸಿರು ಮೌನವನ್ನು ಹತ್ತಿರದಿಂದ ಕೇಳಿಸಿಕೊಂಡ ಸಂತೋಷ ನಮ್ಮದಾಗುತ್ತದೆ. ಅವರು ಹೀಗೆ ಮತ್ತಷ್ಟು ಕತೆಗಳನ್ನು ಬರೆದು ಮತ್ತಷ್ಟು ಕೋಣೆಗಳಿಗೆ ನುಗ್ಗುವುದಕ್ಕೆ ನಮಗೆ ಅವಕಾಶ ಕೊಡುತ್ತಿರಲಿ.
ಸಚಿನ್ ತೀರ್ಥಹಳ್ಳಿ, ಲೇಖಕ
*
ನಾನು ಯಾರನ್ನೂ ಒಪ್ಪುವುದಿಲ್ಲ. ಸಂವಾದವೇ ನನ್ನ ಶಕ್ತಿ. ನನ್ನ ಹತ್ತಿರ ಬಂದವರನ್ನು ದಂಡಿಸುತ್ತೇನೆ. ಅವರಿಗೆ ಕಟುವಾದ ಶಿಕ್ಷೆಗಳನ್ನು ಕೊಡುತ್ತೇನೆ. ವಿಶ್ವವಿದ್ಯಾಲಯದಂತೆ ವರ್ತಿಸುತ್ತೇನೆ. ಅವರು ನಿದ್ದೆಗೆಡುವಂತೆ ಮಾಡುತ್ತೇನೆ. ಕಾಲೊತ್ತಿಸಿಕೊಳ್ಳುತ್ತೇನೆ. ನನ್ನ ಚಡ್ಡಿ ತೊಳೆಸುತ್ತೇನೆ. ಶಿಷ್ಯತ್ವವೆಂದರೆ ಅದೇ. ಗುರುವಿನ ಕೊಳೆತ ಬೆರಳನ್ನು ತಿನ್ನುವುದಕ್ಕೂ ಶಿಷ್ಯನು ಹೇಸಬಾರದು. ಹೀಗೆ ವಿಧವಿಧವಾಗಿ ಅವರನ್ನು ಪರೀಕ್ಷೆ ಮಾಡಿ ಅವರು ನಂಬಿಕೆಗೆ ಅರ್ಹರು ಮತ್ತು ಅರ್ಹರಲ್ಲ ಎಂದು ಗೊತ್ತಾದ ನಂತರವೂ ಅವರು ಎಲ್ಲಿಡಬೇಕೋ ಅಲ್ಲಿಡುತ್ತೇನೆ. ಡ್ರೈವರನನ್ನು ನನ್ನ ಜೊತೆಗೇ ಕೂರಿಸಿಕೊಂಡು ಊಟ ಮಾಡಬಾರದು ಎಂಬುದು ಲೋಹಿಯಾವಾದಿಯಾದ ನನ್ನ ನಿಲುವು. ಈ ವಾದಗಳೆಲ್ಲ ಬಹಳ ನಾಜೂಕಾಗಿ ನಿಭಾಯಿಸಬೇಕಾದ ಅಂಶಗಳು. ಸ್ತ್ರೀಸ್ವಾತಂತ್ರ್ಯವನ್ನು ಮನೆಯೊಳಗೆ ಜಾರಿಗೆ ತಂದರೆ ಏನಾಗುತ್ತದೆ ಅಂತ ನನ್ನ ಮೊದಲನೇ ಮದುವೆ ಮುರಿದು ಬಿದ್ದಾಗ ಗೊತ್ತಾಯಿತು. ಅದರ ಮತ್ತೊಂದು ಮುಖ ಎರಡನೆಯ ಮದುವೆ ಭಸ್ಮವಾದಾಗ ತಿಳಿಯಿತು. ಹೆಂಡತಿಯೆಂಬುವಳು ಇರಬೇಕು, ವಯಸ್ಸಾಗುತ್ತಾ ಆಗುತ್ತಾ ಅವಳ ಅಗತ್ಯ ಹೆಚ್ಚಾಗುತ್ತದೆ. ಹರೆಯದ ಪ್ರೇಯಸಿಯರು ನನ್ನ ಕವಿತೆಗಳ ಘಾಟನ್ನು ತಾಳಿಕೊಳ್ಳಬಲ್ಲರು, ಹೂಸಿನ ಕಟುವಾಸನೆಯನ್ನಲ್ಲ. ದೈವಿಕವಾದ ಪ್ರೇಮಕ್ಕೂ ದೈಹಿಕವಾದ ದೌರ್ಬಲ್ಯಗಳಿರುತ್ತವೆ. ಕವಿಯ ದೌರ್ಭಾಗ್ಯಗಳಲ್ಲಿ ಅದೂ ಒಂದು.
ನನ್ನ ಕಣ್ಣು ಕೊಂಚ ಮಂಜಾಗಿದೆ. ಎದ್ದು ನಿಲ್ಲುವಾದ ಎದೆ ಬುಸುಗುಡುತ್ತದೆ. ಕೆಮ್ಮು ಹೊಕ್ಕಳಿನಿಂದ ಹೊರಟು ಗಂಟಲು ತಲುಪುವ ಮುನ್ನವೇ ಉಸಿರು ಕಳಕೊಂಡು ಅಸುನೀಗುತ್ತದೆ. ನನ್ನ ಭೀಮಕಾಯವನ್ನು ಇಳಿಸಿಕೊಳ್ಳಬೇಕು ಎಂದು ರಾಷ್ಟ್ರೀಯ ಆರೋಗ್ಯ ವಿಶ್ವವಿದ್ಯಾಲಯದ ಮಾಜಿ ಪ್ರೊಫೆಸರ್ ಹೇಳುತ್ತಿರುತ್ತಾರೆ. ಅವರ ಬಗ್ಗೆ ನನ್ನ ಸಂತಾಪಗಳು. ಮತ್ತೊಬ್ಬರ ಮಾತು ನಮ್ಮ ಆರೋಗ್ಯವನ್ನು ಎಂದೂ ತಿದ್ದಲಾರದು. ಆದರೆ ಅಂಥವರ ಮಾತುಗಳನ್ನು ನಾವು ತಳ್ಳಿಹಾಕಬಾರದು. ಪರಸ್ಪರ ಗೌರವ ಇಟ್ಟುಕೊಂಡಾಗಲೇ ನಾವು ಮನುಷ್ಯರು ಅನ್ನಿಸಿಕೊಳ್ಳುವುದು. ಮಾಜಿ ಪ್ರೊಫೆಸರ್ ಸಾಹೇಬರ ಎರಡನೆಯ ಮಡದಿ ಕೆಥರೀನ್ ಸೊಗಸಾಗಿ ಇಟಾಲಿಯನ್ ಶೈಲಿಯ ಅಡುಗೆ ಮಾಡುತ್ತಾರೆ. ನಾವಿಬ್ಬರೂ ಇಟಾಲಿಯನ್ ಲೇಖಕರ ಕುರಿತು ಚರ್ಚಿಸುತ್ತೇವೆ. ಮದುವೆ ಬೋರಿಂಗು ಅಂತ ಹೇಳಿದ ದಾರಿಯೋ ಫೋ ನಾಟಕಗಳನ್ನು ವೈನ್ ಕುಡಿಯುತ್ತಾ ಚರ್ಚೆ ಮಾಡುತ್ತೇವೆ. ನಮ್ಮ ಮಾತುಗಳಲ್ಲಿ ಕಿಂಚಿತ್ತೂ ಆಸಕ್ತಿ ಇಲ್ಲದ ಪ್ರೊಫೆಸರ್ ಸ್ವಲ್ಪ ಹೊತ್ತಿಗೆಲ್ಲ ಕುಳಿತಲ್ಲೇ ನಿದ್ದೆ ಹೋಗುತ್ತಾರೆ. ದೆಹಲಿಯ ಹೊರಭಾಗದ ರಸ್ತೆಗಳಲ್ಲಿ ಕೆಥರೀನ್ ಭವ್ಯವಾಗಿ ಹೆಜ್ಜೆ ಹಾಕುವುದನ್ನು ನೋಡಿಯೇ ನಾನು ಕೆಲವು ಕವಿತೆಗಳನ್ನು ಬರೆದು ಅವಳಿಗೆ ಅದನ್ನು ಅರ್ಪಿಸಿದ್ದೇನೆ. ಕೆಥರೀನ್ ಸುಖವಾಗಿದ್ದಾಳೆ. ಕೆಲವು ಮದುವೆಗಳನ್ನು ಸುಸ್ಥಿತಿಯಲ್ಲಿ ಇಡುವುದಕ್ಕೆ ಮದುವೆ ಏಕತಾನತೆ ಅಂತ ಹೇಳಿದ ದಾರಿಯೋ ಫ್ಲೋ ಬೇಕಾಗುತ್ತದೆ.
ಜೋಗಿಯವರ ಕೃತಿಗಳು
ಎಷ್ಟೋ ಸಲ ನಾನು ಹೀಗಿರುವುದು ಸರಿಯೇ ಅಂತ ಯೋಚಿಸುತ್ತೇನೆ. ಕವಿ ತನ್ನನ್ನು ತನ್ನ ಇಂದ್ರಿಯಗಳಿಗೆ ಒಪ್ಪಿಸಿಕೊಳ್ಳಬೇಕೋ ಬುದ್ಧಿಗೋ ಎಂಬ ಕುರಿತು ನನ್ನ ಅಂತರಂಗದಲ್ಲಿ ನಡೆಯುವ ತುಮುಲವನ್ನು ನಾನಿನ್ನೂ ದಾಖಲಿಸಿಲ್ಲ. ಕೆಲವನ್ನು ನಾಟಕಕಾರ ಒಳಗೇ ಇಟ್ಟುಕೊಳ್ಳಬೇಕು. ಹೇಳುವುದು ಸುಲಭ, ಹೇಳಿದ ಮೇಲೆ ಹೇಳಿದ್ದು ನಮ್ಮದಾಗಿ ಉಳಿಯುವುದಿಲ್ಲ. ಈ ಇಬ್ಬಂದಿತನವನ್ನು ನಾನು ಅನುಭವಿಸಿದ್ದೇನೆ. ನಾನು ಅವಳನ್ನು ಪ್ರೀತಿಸುತ್ತೇನೆ ಎಂದು ಹೇಳಿದ ತಕ್ಷಣ ನಾನು ಅವಳನ್ನು ಪ್ರೀತಿಸುತ್ತೇನೆ ಎನ್ನುವುದು ಕೇವಲ ಹೇಳಿಕೆಯಾಗಿ ಉಳಿಯುತ್ತದೆ. ಹೇಳಿಕೆಗಳು ಎಂದೂ ಜೀವತಳೆದ ಸಂಪಿಗೆ ಮರಗಳಂತೆ ಕಂಗೊಳಿಸಲಾರವು. ನಾನು ಕಣ್ಣುಗಳಲ್ಲಿ ದೃಷ್ಟಿ ನೆಡುತ್ತೇನೆ. ತಕ್ಷಣ ಕಂಗಾಲಾಗುತ್ತೇನೆ. ನನ್ನ ತಾಯಿಬೇರು ಘಾಸಿಗೊಂಡದ್ದು ನನ್ನೆದುರು ಕುಳಿತವಳು ಪರಿಪೂರ್ಣ ಸ್ತ್ರೀಯಾಗಿದ್ದರೆ ಅವಳಿಗೆ ಗೊತ್ತಾಗಿಬಿಡುತ್ತದೆ. ಕವಿತೆಗೆ ತನ್ನ ಸಾಮರ್ಥ್ಯ ಮತ್ತು ಮಿತಿ ವಿಮರ್ಶಕನ ಹಂಗಿಲ್ಲದೆಯೇ ಹೊಳೆದುಬಿಡುವ ಹಾಗೆ.
ನನ್ನ ಇತ್ತೀಚಿನ ಕವಿತಾ ಸಂಕಲನ ಕೊರೋನಾ ಸಂಕಟದ ನಡುವೆಯೇ ಬಿಡುಗಡೆಯಾಯಿತು. ಮನುಷ್ಯನಿಗೆ ಬೇಕಾದ ಒಂಟಿತನವನ್ನು ಪ್ರಕೃತಿ ಕರುಣಿಸಿದ್ದನ್ನು ಮನುಷ್ಯನ ಸಾವು ಹೇಗಿರಬೇಕು ಎಂದು ಪ್ರಕೃತಿಯೇ ಸೂಚಿಸಿದ್ದನ್ನು ನಾನು ಸೂಚ್ಯವಾಗಿ ಹೇಳಿದ್ದೆ. ಒಬ್ಬರು ಇನ್ನೊಬ್ಬರನ್ನು ಮುಟ್ಟಲಾರದ ಸ್ಥಿತಿಯೇ ಸಾವು. ನನ್ನ ಬದುಕೇ ಆಕ್ರಂದನ. ನಾನು ಬರೆದುದೆಲ್ಲ ಆ ಆಕ್ರಂದನದ ಮೇಲಿನ ಟಿಪ್ಪಣಿ ಮಾತ್ರ ಎಂದು ಹೇಳಿದ ನಿಕೋಸ್ ಕಝಾಂತಝಾಕಿಸ್ ಸಾಲುಗಳನ್ನು ನಾನು ಅಳವಡಿಸಿಕೊಂಡೆ. ಅವನು ದೇವರನ್ನು ಎಷ್ಟು ಚೆನ್ನಾಗಿ ಕಂಡ: ‘ಬಾದಾಮಿ ಮರದ ಮುಂದೆ ನಿಂತು ಪ್ರಾರ್ಥಿಸಿದೆ; ಹೇ ಮರವೇ, ದೇವರ ಕುರಿತು ಹೇಳು. ಮರ ಹೂಬಿಟ್ಟಿತು.’ ನಾನೊಂದು ಮುಂಜಾನೆ ಅವಳ ಮುಂದೆಯೂ ಪ್ರೇಮದ ಕುರಿತು ಮಾತಾಡು ಅಂದೆ. ಅವಳು ಮರುಳುತನದಿಂದ ನಕ್ಕಳು. ಮನುಷ್ಯನಿಗೆ ಒಂಚೂರು ಹುಚ್ಚುಹಿಡಿದಾಗಲೇ ಅವನಿಗೆ ಬಿಡುಗಡೆ. ಇಲ್ಲದ ಹೋದರೆ ಅವನು ಈ ಜಗತ್ತಿನ ಶ್ರೀಮಂತರ ಹಾಗೆ ಗುಲಾಮನಾಗುತ್ತಾನೆ.
ನನಗೆ ನಿರಾಮಯಳ ಪರಿಚಯ ಆದದ್ದೂ ಹಾಗೆಯೇ. ಅವಳಿಗೆ ಕಾವ್ಯದ ಹುಚ್ಚು. ಗೋಪಾಲಕೃಷ್ಣ ಅಡಿಗರನ್ನು ಹಗಲೂ ರಾತ್ರಿ ಓದುತ್ತಿದ್ದಳು. ಆ ಕುರಿತು ನನಗೆ ಮತ್ಸರವೇನೂ ಇರಲಿಲ್ಲ. ಅವಳೆಷ್ಟೇ ಓದಿದರೂ ಅಡಿಗರನ್ನು ಅರ್ಥಮಾಡಿಕೊಳ್ಳುವುದು ಅವಳಿಗೆ ಸಾಧ್ಯವೇ ಇಲ್ಲ ಅನ್ನುವ ಖಾತ್ರಿಯಿತ್ತು. ನಾನು ಅಡಿಗರ ಕವಿತೆಗಳನ್ನು ನಿರರ್ಗಳವಾಗಿ ಹೇಳುತ್ತಾ ಅವಳ ಅರಿವನ್ನು ವಿಸ್ತರಿಸುತ್ತಿದ್ದೆ. ಅವರ ರೂಪಕದಂಥ ಸಾಲುಗಳನ್ನು ನನ್ನ ವಾಚಾಮಗೋಚರ ಮಾತುಗಳಿಂದ ಬೆಳಗುತ್ತಿದ್ದೆ. ನಿರಾಮಯ ಮಂತ್ರಮುಗ್ಧಳಾಗಿ ನನ್ನ ಮಾತುಗಳಲ್ಲಿ ಅಡಿಗರನ್ನು ಆರಾಧಿಸುತ್ತಿದ್ದಳು. ಒಂದು ದಿನ ಅವಳನ್ನು ಹತ್ತಿರ ಕೂರಿಸಿಕೊಂಡು ಅಡಿಗರು ಬರೆದ ಈ ಸಾಲುಗಳನ್ನು ಪಿಸುಗುಟ್ಟಿದೆ:
ಏಕವರ್ಣದವರ್ಣನೀಯ ಶಾಂತಿಯ ತಂತಿ
ಮೀಟುತಿರೆ ಅಲ್ಲಲ್ಲಿ ಹಸಿರು ಬೆರಳು
ದೇವಲೋಕದ ಪಕ್ಷಿ ಬಂದು ಕೊಂಕಲು ಕೊರಳು
ಅರಳುವುದು ಮಂದಾರಗೀತದುರುಳು
ನಾರದರ ತುಂಬುರರ ತಂಬೂರಿದನಿ ತುಳುಕಿ
ತುಂಬುತಿದೆ ಹಿಮಗಿರಿಯ ಹಳ್ಳಕೊಳ್ಳ
ಅಶ್ವತ್ಥವೃಕ್ಷಗಳ ಛಾಯೆ ಚಾವಡಿಯಲ್ಲಿ
ಕುಳಿತು ತಲೆದೂಗುತಿದೆ ಯೋಗವೆಲ್ಲ
ಅವಳು ನಖಶಿಖಾಂತ ಕಂಪಿಸಿ ರೋಮಾಂಚಿತೆಯಾಗಿ ನನ್ನನ್ನು ಬಿಗಿಯಾಗಿ ತಬ್ಬಿಕೊಂಡಳು. ಒಂದು ಕವಿತೆಗೆ ಹೇಗೆ ದೈವತ್ವ ಪ್ರಾಪ್ತವಾಗುತ್ತದೆ ಎಂದು ನಾನು ಯೋಚಿಸುತ್ತಾ ಅವಳ ಅಪ್ಪುಗೆಯನ್ನು ಅವಳಿಗೆ ಅಡಿಗರ ಮೇಲಿರುವ ಆರಾಧನಾಭಾವ ಎಂದು ಸ್ವೀಕರಿಸಿದೆ. ಆ ಕ್ಷಣ ನನಗೆ ಅವಳ ಮೇಲೆ ಸಿಟ್ಟು ಬರಲಿಲ್ಲ. ಅವಳು ಅಡಿಗರ ಕವಿತೆಯನ್ನು ಮೆಚ್ಚಿದಳು, ನನ್ನ ಕವಿತೆಯನ್ನು ಇಷ್ಟಪಡಲಿಲ್ಲ ಎನ್ನುವ ಮತ್ಸರ ಕೂಡ ಹುಟ್ಟಲಿಲ್ಲ. ಕವಿ ವಿಶ್ವಾತ್ಮಕ ಆಗುವುದು ಹೀಗೆ. ಒಳ್ಳೆಯ ಕವಿತೆ ನಮ್ಮ ಎಲ್ಲ ಬಿಗುಮಾನ, ಹಮ್ಮುಬಿಮ್ಮುಗಳನ್ನು, ಅಂತರವನ್ನು, ಅಹಂಕಾರವನ್ನು ಕಿತ್ತೆಸೆದು ಬೆತ್ತಲಾಗಿಸಲಿ ಎಂದು ಒಮ್ಮೆ ಬರೆದಿದ್ದೆ. ತಥಾಸ್ತು.
ಜೋಗಿಯವರ ಕೃತಿಗಳುಕವಿಗೆ ಮರುಹುಟ್ಟು ಅನಿವಾರ್ಯ. ನನ್ನ ಇಪ್ಪತ್ತೆರಡು ಕವಿತೆಗಳ ಸಂಕಲನವನ್ನು ನಾನು ನಿರಾಮಯಳಿಗೆ ಅರ್ಪಿಸಿದೆ. ಅವಳು ದಿನದ ಹೆಚ್ಚಿನ ಸಮಯವನ್ನು ನನ್ನ ವಿಶಾಲವಾದ ಮನೆಯ ಲೈಬ್ರರಿಯಲ್ಲಿ ಕಳೆಯತೊಡಗಿದಳು. ಅಡಿಗರ ಕವಿತೆಗಳನ್ನು ಓದುತ್ತಿದ್ದಳು. ಕ್ರಮೇಣ ಅಡಿಗರ ಕ್ಲಿಷ್ಟಕರ ಕವಿತೆಗಳನ್ನೂ ಅವಳು ಗ್ರಹಿಸತೊಡಗಿದಳು. ನನ್ನ ಅನಿಸಿಕೆಯನ್ನು ಸುಳ್ಳು ಮಾಡಿದಳು. ನನಗೂ ಅರ್ಥವಾಗದೇ ಉಳಿದ ಎಷ್ಟೋ ಕವಿತೆಗಳ ಕೀಲಿಕೈ ಅವಳಿಗೆ ಸಿಕ್ಕಿ, ಅದನ್ನವಳು ನನಗೂ ದಾಟಿಸಿ, ನನ್ನ ತನುಮನದಲ್ಲಿ ಅಡಿಗರ ಕವಿತೆ ಮತ್ತೆ ಮಾರ್ದನಿಸುವಂತೆ ಮಾಡಿದಳು.
ಈ ಪುಸ್ತಕದ ಖರೀದಿಗೆ ಸಂಪರ್ಕಿಸಿ : ಅಂಕಿತ ಪುಸ್ತಕ
*
ಪರಿಚಯ : ಜೋಗಿ (ಗಿರೀಶ್ ರಾವ್ ಹತ್ವಾರ್) ಇವರು ಹುಟ್ಟಿದ್ದು 1965 ನವೆಂಬರ್ 16. ಮೂಲತಃ ಸೂರತ್ಕಲ್ ಸಮೀಪದ ಹೊಸಬೆಟ್ಟು ಊರಿನವರಾದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಹಾಯ್ ಬೆಂಗಳೂರು ವಾರಪತ್ರಿಕೆಯಲ್ಲಿ ‘ರವಿ ಕಾಣದ್ದು’, ‘ಜಾನಕಿ ಕಾಲಂ’ ಅಂಕಣ ಬರಹಗಳ ಮೂಲಕ ಓದುಗರಿಗೆ ಪರಿಚಯವಾದ ಇವರು ಸದ್ಯ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಪುರವಣಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ನದಿಯ ನೆನಪಿನ ಹಂಗು, ಯಾಮಿನಿ, ಚಿಟ್ಟೆ ಹೆಜ್ಜೆ ಜಾಡು, ಹಿಟ್ ವಿಕೆಟ್, ಊರ್ಮಿಳಾ, ಮಾಯಾಕಿನ್ನರಿ, ಗುರುವಾಯನಕೆರೆ, ದೇವರ ಹುಚ್ಚು, ಚಿಕ್ಕಪ್ಪ, ಚೈತ್ರ ವೈಶಾಖ ವಸಂತ, ಎಲ್ಲಾನು ಮಾಡುವುದು ಹೊಟ್ಟೆಗಾಗಿ, ವಿರಹದ ಸಂಕ್ಷಿಪ್ತ ಪದಕೋಶ, ಬೆಂಗಳೂರು, ಬಿ ಕ್ಯಾಪಿಟಲ್, ಸೀಳುನಾಲಿಗೆ, ಜೋಗಿ ಕತೆಗಳು, ಕಾಡು ಹಾದಿಯ ಕತೆಗಳು, ರಾಯಭಾಗದ ರಹಸ್ಯ ರಾತ್ರಿ, ಜರಾಸಂಧ, ಸೂಫಿ ಕತೆಗಳು, ಕಥಾ ಸಮಯ, ಫೇಸ್ ಬುಕ್ ಡಾಟ್ ಕಾಮ್-ಮಾನಸಜೋಶಿ, ನಾಳೆ ಬಾ, ಅಶ್ವಥ್ಥಾಮನ್, ಎಲ್ (ಕಾದಂಬರಿ), ಆಸ್ಕ್ ಮಿಸ್ಟರ್, ಜೋಗಿ ಕಾಲಂ, ನೋಟ್ ಬುಕ್, ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ.
Published On - 1:47 pm, Sun, 5 December 21