ಆಧುನಿಕ ಶಕುಂತಲಾ ಕಥನ: ಮೂಷಕ ತಜ್ಞೆಯಾಗುವ ಕನಸು ಸಾಕಾರಗೊಳಿಸಿಕೊಳ್ಳುವ ಹಾದಿ ಸುಗಮವಾಗಿರಲಿಲ್ಲ

ಪದವೀಧರಳಾಗುವರೆಗೆ ನಾನು ಬಹಳ ಮುಗ್ಧಳಾಗಿದ್ದೆ, ಪಿಯುಸಿ ನಂತರ ವೈದ್ಯಳಾಗುವ ನನ್ನ ಕನಸು ನನಸಾಗದೆ ನನ್ನ ಶಿಕ್ಷಣವು ಕೊನೆಗೊಳ್ಳುತ್ತಿದೆ ಎಂಬ ದುಃಖವನ್ನು ಹೊರತುಪಡಿಸಿ ನನ್ನ ಭವಿಷ್ಯದ ಬಗ್ಗೆ ನನಗೆ ಸ್ಪಷ್ಟವಾದ ಚಿತ್ರವಿರಲಿಲ್ಲ.

ಆಧುನಿಕ ಶಕುಂತಲಾ ಕಥನ: ಮೂಷಕ ತಜ್ಞೆಯಾಗುವ ಕನಸು ಸಾಕಾರಗೊಳಿಸಿಕೊಳ್ಳುವ ಹಾದಿ ಸುಗಮವಾಗಿರಲಿಲ್ಲ
Adhunika Shakuntala Kathana
Follow us
TV9 Web
| Updated By: ನಯನಾ ರಾಜೀವ್

Updated on:Jul 24, 2022 | 10:40 AM

ಆಧುನಿಕ ಶಕುಂತಲಾ ಕಥನ | Adhunika Shakuntala Kathana 

ಅಂಕಣ 10 ಪದವೀಧರಳಾಗುವರೆಗೆ ನಾನು ಬಹಳ ಮುಗ್ಧಳಾಗಿದ್ದೆ, ಪಿಯುಸಿ ನಂತರ ವೈದ್ಯಳಾಗುವ ನನ್ನ ಕನಸು ನನಸಾಗದೆ ನನ್ನ ಶಿಕ್ಷಣವು ಕೊನೆಗೊಳ್ಳುತ್ತಿದೆ ಎಂಬ ದುಃಖವನ್ನು ಹೊರತುಪಡಿಸಿ ನನ್ನ ಭವಿಷ್ಯದ ಬಗ್ಗೆ ನನಗೆ ಸ್ಪಷ್ಟವಾದ ಚಿತ್ರವಿರಲಿಲ್ಲ. ನಾನು ಎಂಎಸ್ಸಿ ಮಾಡಲು ನಿರ್ಧರಿಸಿದಾಗ ನ್ಯಾಯಕ್ಕಾಗಿ, ನನ್ನ ಹಕ್ಕುಗಳಿಗಾಗಿ ಅತ್ಯಂತ ಅನೀರೀಕ್ಷಿತ ರೀತಿಯಲ್ಲಿ ನನ್ನ ಹೋರಾಟಗಳು 1967 ರಲ್ಲಿ ಆರಂಭವಾದವು. ಈ ಹೋರಾಟ ನನ್ನ ವೃತ್ತಿಜೀವನ ಮತ್ತು ವೈಯಕ್ತಿಕ ಜೀವನದಲ್ಲಿ ಪ್ರಮುಖ ಭಾಗವಾಗಿ ಮುಂದುವರೆಯಿತು.

ನಾನು ಬಿ.ಎಸ್ಸಿ.ಯಲ್ಲಿ ಉನ್ನತ ಎರಡನೇ ದರ್ಜೆಯನ್ನು ಪಡೆದಿದ್ದೆ, ಅದು ಎಂ.ಎಸ್ಸಿ ಮತ್ತು MBBS ಎರಡಕ್ಕೂ ಸಾಕಾಗಿತ್ತು. B. Sc. ಪದವಿಯ ನಂತರ ನನ್ನ ಅನೇಕ ಸಹಪಾಠಿಗಳು ವೈದ್ಯಕೀಯ ಮಾಡಲು ಹೋದರು. ಆದರೆ ಆರು ಮಕ್ಕಳಲ್ಲಿ ಹಿರಿಯಳಾದ, ಒಬ್ಬ ನಿಷ್ಠ ಸರಕಾರಿ ಅಧಿಕಾರಿಯ ಮಗಳಾದ ನನ್ನ ಮೇಲೆ ನನ್ನದೇ ಜವಾಬ್ದಾರಿಗಳಿದ್ದವು. ಐದು ವರ್ಷ ಎಂಬಿಬಿಎಸ್ ಮತ್ತು ಒಂದು ವರ್ಷದ house surgency ಅಂದರೆ ದುಬಾರಿ ವೆಚ್ಚ.

ಎರಡನೆಯದಾಗಿ, ಮಕ್ಕಳಲ್ಲಿ ಹಿರಿಯಳಾಗಿದ್ದ ನಾನು ಕುಟುಂಬದ ಹಣಕಾಸಿನ ಹೊರೆ ಸ್ವಲ್ಪ ವರ್ಷಗಳ ಮಟ್ಟಿಗಾದರೂ ಹೊರಬೇಕಾಗುವುದು ನನ್ನ ಕರ್ತವ್ಯ ಎಂದು ನಾನು ಭಾವಿಸಿದ್ದೆ. ಪದವೀದರಾಳಾದನಂತರ ಹತಾಶಳಾಗಿ, ಅನಿಶ್ಚಿತವಾಗಿ ಮನೆಯಲ್ಲಿ ಕುಳಿತಿದ್ದೆ ಕೆಜಿಎಫ್‌ನಲ್ಲಿರುವ ನನ್ನ ಅಜ್ಜಿ ನನ್ನ ಕಷ್ಟವನ್ನು ಅರಿತು ನಾನು ಎಂಎಸ್ಸಿ ಓದಬೇಕೆಂದು ಒತ್ತಾಯಿಸಿ, ಶುಲ್ಕ, ಬಟ್ಟೆ ಇತ್ಯಾದಿ ವ್ಯವಸ್ಥೆಗಳನ್ನು ಮಾಡಿದರು.

ಸುರಂಗದ ಕೊನೆಯಲ್ಲಿ ಒಂದು ಬೆಳಕಿನ ಕಿರಣ ಕಾಣಿಸಿತು. ಈಗ ನಾನು ಪಿಜಿ ಕೋರ್ಸ್ ಮಾಡುವ ನನ್ನ ಆಕಾಂಕ್ಷೆಯ ಬಗ್ಗೆ ನನ್ನ ತಂದೆಗೆ ಮನವರಿಕೆ ಮಾಡಬೇಕಾಗಿತ್ತು. ನನ್ನ ಸ್ನಾತಕೋತ್ತರ ಅಧ್ಯಯನವನ್ನು ರಾಷ್ಟ್ರೀಯ ವಿದ್ಯಾ ಸಾಲದ ವಿದ್ಯಾರ್ಥಿವೇತನದ (National loan scholarship) ಸಹಾಯದೊಂದಿಗೆ ಓದುವುವದಾಗಿಯೂ ಮತ್ತು ಎರಡು ವರ್ಷಗಳ ನಂತರ ಉಪನ್ಯಾಸಕಳಾಗಿ ಸಂಪಾದಿಸಲು ಪ್ರಾರಂಭಿಸುತ್ತೇನೆ ಎಂದು ನಾನು ತಂದೆಯವರನ್ನ ಒಪ್ಪಿಸಿದೆ..

ಕಣ್ಣು ತುಂಬಾ ಕನಸು, ಮನಸಿನ ತುಂಬಾ ಆಸೆಗಳನ್ನ ಹೊತ್ತು ನಾನು ಸೆಂಟ್ರಲ್ ಕಾಲೇಜಿಗೆ ಹೋದೆ, ಆಗ ಹೊಸದಾಗಿ ಸ್ಥಾಪಿಸಲಾದ (1964) ಬೆಂಗಳೂರು ವಿಶ್ವವಿದ್ಯಾನಿ ಲಯದ ಕ್ಯಾಂಪಸ್ ಸೆಂಟ್ರಲ್ ಕಾಲೇಜಿನಲ್ಲಿತ್ತು ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರಗಳ ಎರಡೂ ಪಿಜಿ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಿದೆ. ಸೆಂಟ್ರಲ್ ಕಾಲೇಜು ಸಾಮಾನ್ಯ ಸಂಸ್ಥೆಯಾಗಿರಲಿಲ್ಲ. ಆದು ಬೆಂಗಳೂರಿನಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲೇ ವಿಜ್ಞಾನ ಶಿಕ್ಷಣದ ಪ್ರತಿಷ್ಠಿತ ಕೇಂದ್ರವಾಗಿತ್ತು.

1964 ರಲ್ಲಿ, ಬೆಂಗಳೂರು ವಿಶ್ವವಿದ್ಯಾನಿಲಯ ಸ್ಥಾಪಿತವಾದಾಗ ಸೆಂಟ್ರಲ್ ಕಾಲೇಜು ಹೊಸ ವಿಶ್ವವಿದ್ಯಾನಿ ಲಯದ ಕೇಂದ್ರ ಕ್ಯಾಂಪಸ್ ಆಯಿತು. ಕಾಲೇಜಿನ ಪ್ರತಿಷ್ಟಿತ ವಿದ್ಯಾರ್ಥಿಗಳಲ್ಲಿ ಭೌತಶಾಸ್ತ್ರಜ್ಞರಾದ ಎಚ್.ಜೆ.ಭಾಭಾ, ಜಾನ್ ಕುಕ್, ಎಂ.ಟಿ.ನಾರಾಯಣ ಅಯ್ಯಂಗಾರ್, ಜಾನ್ ಗುತ್ರೀ ಟೈಟ್, ಸಿ.ಎನ್ .ನಾರಾಯಣರಾವ್, CNR ರಾವ್, ಚಂದ್ರಶೇಖರ ವೆಂಕಟ ರಾಮನ್, ಲೇಖಕ ಮಾಸ್ತಿ ವೆಂಕಟೇಶ ಅಯ್ಯಂಗಾರ್, ರಾಜಕಾರಣಿ ಸಿ.ರಾಜಗೋಪಾಲಾಚಾರಿ ಮುಂತಾದವರಿದ್ದರು. ಇವರೆಲ್ಲ ಸೆಂಟ್ರಲ್ ಕಾಲೇಜು ಅತ್ಯುತ್ತಮವಾದ ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡಿಕೊಳ್ಳಲು, ಮಾದರಿ ಉನ್ನತ ಶಿಕ್ಷಣವೆಂದು ದೊಡ್ಡ ಖ್ಯಾತಿ ಗಳಿಸಲು ಕಾರಣರಾಗಿದ್ದರು.

ನಾನು ಸಸ್ಯ ಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ಎರಡರ M, Sc ಗೂ ಅರ್ಜಿ ಸಲ್ಲಿಸಿದೆ. ನಂತರ ಸೀಟು ಹಂಚಿಕೆ ಘೋಷಣೆಗಾಗಿ ಕಾಯುವ ಆತಂಕದ ಹಂತ ಬಂದಿತ್ತು. ಮೊದಲ ಪಟ್ಟಿಯನ್ನು ಪ್ರಕಟಿಸಲಾಯಿತು. ಸೂಚನಾ ಫಲಕದಲ್ಲಿ ನನ್ನ ಹೆಸರು ಕಾಣಲಿಲ್ಲ. ಮೊದಲ ಪಟ್ಟಿಯಲ್ಲಿ ಪಿಜಿ ಸೀಟು ಪಡೆಯುವಲ್ಲಿ ಯಶಸ್ವಿಯಾದ ಅನೇಕ ವಿದ್ಯಾರ್ಥಿಗಳು ವೈದ್ಯಕೀಯ ಸೀಟುಗಳ ಘೋಷಣೆಗಾಗಿ ಕಾಯುತ್ತಿದ್ದರು.

ಒಮ್ಮೆ MBBS ನಲ್ಲಿ ಸೀಟು ದೊರಕಿದ ನಂತರ ತಮ್ಮ ಪಿಜಿ ಸೀಟುಗಳನ್ನು ಬಿಟ್ಟುಕೊಡುತ್ತಾರೆ ಎಂದು ನನಗೆ ಗೊತ್ತಾಯಿತು. ಹೀಗೆ ಖಾಲಿಯಾದ ಸೀಟುಗಳನ್ನು ಭರ್ತಿ ಮಾಡಲು ಎರಡನೇ ಪಟ್ಟಿ ಇರುತ್ತದೆ. ಅಂದುಕೊಂಡಂತೆ ವೈದ್ಯಕೀಯ ಆಕಾಂಕ್ಷಿಗಳು ಪಿಜಿ ಕೋರ್ಸ್‌ಗಳಿಂದ ಹಿಂದೆ ಸರಿದ ನಂತರ ಕೆಲವು M. Sc. ಸೀಟುಗಳು ಖಾಲಿಯಾದವು.

ಎರಡನೇ ಪಟ್ಟಿಯನ್ನು ಸೂಚನಾ ಫಲಕದಲ್ಲಿ ಹಾಕಲಾಯಿತು. ನಡುಗುತ್ತಿದ್ದ ಹೃದಯದಿಂದ ನಾನು ಎರಡನೇ ಪಟ್ಟಿಯನ್ನು ಪರಿಶೀಲಿಸಿದೆ. ಅಲ್ಲೂ ನನ್ನ ಹೆಸರು ಕಾಣದ ಕಾರಣ ನನ್ನ ಕನಸುಗಳು ಭಗ್ನಗೊಂಡವು. ಆಗ ನಾನೊಂದು ವಿಚಿತ್ರವಾದ ವಿಷಯವನ್ನು ಗಮನಿಸಿದೆ. ಪ್ರಾಣಿಶಾಸ್ತ್ರ ವಿಭಾಗದ ಸೂಚನಾ ಫಲಕವನ್ನು ನೋಡಿ ಬರುವಾಗ ನನ್ನ ಇಬ್ಬರು ಸಹಪಾಠಿಗಳು, ಬಿ.ಎಸ್ಸಿ. ಯಲ್ಲಿ ನನಗಿಂತ ಕಡಿಮೆ ಅಂಕಗಳನ್ನು ಹೊಂದಿದ್ದವರು ಎಂ.ಎಸ್ಸಿಯ ತರಗತಿಯಿಂದ ಸಂತೋಷದಿಂದ ಹೊರಬಂದರು.

ಇದು ಎರಡು ಕಾರಣಗಳಿಗಾಗಿ ನನ್ನನ್ನು ದುಃಖಕ್ಕಿಡು ಮಾಡಿತು.ಒಂದು ಎಂಎಸ್ಸಿಗೆ ಆಯ್ಕೆಯಾಗುವಲ್ಲಿ ನನಗಿಂತ ಕಡಿಮೆ ಅಂಕ ಗಳಿಸಿದ್ದ ನನ್ನ ಇಬ್ಬರು ಸಹಪಾಠಿಗಳಿಗೆ ಸೀಟು ದೊರಕ್ಕಿತ್ತು. ಎರಡನೆಯದಾಗಿ ನನ್ನ ಅಜ್ಜಿಯಿಂದ ಖಚಿತವಾದ ಆರ್ಥಿಕ ಸಹಾಯ ಸಿಕ್ಕಿದ್ದರೂ, ಉನ್ನತ ವ್ಯಾಸಂಗಕ್ಕಾಗಿ ನನ್ನ ತಂದೆಯನ್ನು ಒಪ್ಪಿಸಿದ್ದರೂ ಸೀಟು ಸಿಗದ ನಿರಾಶೆ ನನ್ನನ್ನು ಕ್ಷಣ ಮಾತ್ರ ದಿಕ್ಕು ತೋಚದಂತೆ ಮಾಡಿತು.

ಇದು ಅತ್ಯಂತ ನಿರಾಶಾಧಾಯಕವಾಗಿತ್ತು. ಉನ್ನತ ಶಿಕ್ಷಣದ ನನ್ನ ಕನಸು ಭಗ್ನವಾದಂತೆ ಕಂಡಿತು. M.Sc.ಸೀಟ್ ಪಡೆಯಲು ನನ್ನ ವೈಫಲ್ಯದ ಬಗ್ಗೆ ನಾನು ನನ್ನ ಪೋಷಕರಿಗೆ ಹೇಳಲಿಲ್ಲ. ಒಂದು ಇಡೀ ದಿನ ಯೋಚಿಸಿದ ನಂತರ, ಅನ್ಯಾಯದ ವಿರುದ್ಧ ಹೋರಾಡಬೇಕೆಂದು ನಿರ್ಧರಿಸಿದೆ. ಆದರೆ ಹೋರಾಡುವುದು ಹೇಗೆ? ನನಗೆ ನನ್ನ ತಂದೆಯನ್ನು ಕೇಳಲಾಗಲಿಲ್ಲ. ಬಿ.ಎಸ್ಸಿಯಲ್ಲಿನ ನನ್ನ ಗೆಳತಿಯರು ಪದವಿ ಮುಗಿಸಿದ ಖುಷಿಯಲ್ಲಿದ್ದರು.

ಮುಂದಿನ ಶಿಕ್ಷಣದ ಬಗ್ಗೆ ಅವರ್ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಯಾವುದೇ ಹಿರಿಯರ ಮಾರ್ಗದರ್ಶನ ಪಡೆಯಲು ನನಗೆ ತಿಳಿದಿರಲಿಲ್ಲ. ಅದು ನ್ಯಾಯ ಮತ್ತು ಮೌಲ್ಯಗಳ ದಿನಗಳಾಗಿದ್ದು ನನ್ನ ಅದೃಷ್ಟ. ಕುರುಡು ಧೈರ್ಯದಿಂದ ಮೊದಲು ಸಸ್ಯಶಾಸ್ತ್ರ ವಿಭಾಗದ ಮುಖಸ್ತ ಪ್ರೊ.ನಾಗರಾಜ್ ಅವರನ್ನು ನಾನು ಭೇಟಿ ಮಾಡಿದೆ.

ಅಲ್ಲಿಯವರೆಗೂ ಮಹಾರಾಣಿ ಕಾಲೇಜಿನಲ್ಲಿ ಕಳೆದ ನಾಲ್ಕು ವರ್ಷಗಳ ಕಾಲದಲ್ಲಿ ನಾನು ಪ್ರಾಂಶುಪಾಲರ ಬಳಿ ಮಾತೇ ಆಡಿರಲಿಲ್ಲ. ಯಾವ ಉನ್ನತ ಅಧಿಕಾರಿಯನ್ನೂ ಯಾವುದೇ ವಿಷಯಕ್ಕೂ ಭೇಟಿಯಾಗಿರಲಿಲ್ಲ. ನಾನು ಒಳ್ಳೆ ಅಂಕ ಪಡೆದಿದ್ದರೂ ಸಸ್ಯ ಶಾಸ್ತ್ರದ M. Sc ಯ ಎಲ್ಲಾ ಸೀಟುಗಳು ಭರ್ತಿಯಾಗಿದ್ದ ಕಾರಣ ಈಗೇನೂ ಮಾಡಲಾಗುವುದಿಲ್ಲ ಎಂದು ಪ್ರೊ.ನಾಗರಾಜ್ ಕಡ್ಡಿ ಮುರಿದಂತೆ ಹೇಳಿದರು.

ನಾನು ಪ್ರಾಣಿಶಾಸ್ತ್ರ ವಿಭಾಗಕ್ಕೆ ಬಂದು ವಿಭಾಗ ಮುಖ್ಯಸ್ಥ, ಪ್ರೊ.ಪಂಪಾಪತಿ ರಾವ್ ಅವರನ್ನು ಭೇಟಿಯಾದೆ. ನನಗೆ ಆಗಿರುವ ಅನ್ಯಾಯದ ಕಥೆಯನ್ನು ಮತ್ತೆ ಮತ್ತೆ ಹೇಳಿಕೊಂಡು, ಅರ್ಹತೆಯ ಆಧಾರದ ಮೇಲೆ ಎಂ.ಎಸ್ಸಿಗೆ ಪ್ರವೇಶ ನೀಡುವಂತೆ ಮನವಿ ಮಾಡಿದೆ. ವಿಶ್ವವಿದ್ಯಾನಿಲಯದ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ.ಪಂಪಾಪತಿ ರಾವ್ ಅಂತರ ರಾಷ್ಟ್ರೀಯ ಮಟ್ಟದ ಸಂಶೋಧನಾ ಸಾಧನೆಗಳನ್ನು ಹೊಂದಿದ್ದರು.

ಪ್ರಾಧ್ಯಾಪಕರ ಯಾವುದೇ ಅಹಂ ಇಲ್ಲದ, ತುಂಬಾ ಆಹ್ಲಾದಕರ ಮತ್ತು ಸೌಹಾರ್ದಯುತ ವ್ಯಕ್ತಿಯಾಗಿದ್ದ ರು. ಇದು ನಾನು ಪಿಜಿ ಸೀಟ್‌ನಿಂದ ಹೇಗೆ ವಂಚಿತ ಳಾ ಗಿದ್ದೆ ಎಂಬುದನ್ನು ವಿವರಿಸಲು ನನಗೆ ಸಾಕಷ್ಟು ಧೈರ್ಯ ನೀಡಿತು.

ಭಾಷೆಯ ಮೇಲೆ ನನ್ನ ಹಿಡಿತ ಸಾಕಷ್ಟು ಚೆನ್ನಾಗಿದ್ದರೂ ಅಲ್ಲಿಯವರೆಗೆ ನಾನು ಯಾರೊಂದಿಗೂ ಆರಾಮವಾಗಿ ಇಂಗ್ಲಿಷ್‌ನಲ್ಲಿ ಮಾತನಾಡಿರಲಿಲ್ಲ, ಅವರು ನನ್ನ ದೂರನ್ನು ತಾಳ್ಮೆಯಿಂದ, ಸಹಾನುಭೂತಿಯಿಂದ ಆಲಿಸಿದರು, ಆದರೆ ಪ್ರವೇಶದ ಕೊನೆಯ ದಿನಾಂಕ ಮುಗಿದಿದ್ದರಿಂದ ಅವರು ಅಸಹಾಯಕರೆಂದೂ ಈಗ ಏನೂ ಮಾಡಲು ಸಾಧ್ಯವಿಲ್ಲೆವೆಂದರು. ಆದರೆ ನಾನು ಉಪಕುಲಪತಿಯವರನ್ನು ಭೇಟಿ ಮಾಡಿದರೆ ಅವರು ಈ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಸಲಹೆ ನೀಡೀದರು.

ನನ್ನ ಕೋಪ, ಹತಾಶೆ ಮತ್ತು ಅಸಹಾಯಕತೆಯಲ್ಲಿ ನನಗೆ VC ಯವರನ್ನು ನೋಡದೆ ಬೇರೆ ದಾರಿಯೇ ಇರಲಿಲ್ಲ. ರ. ಪ್ರೊ. ವಿ.ಕೆ.ಗೋಕಾಕರು ಬೆಂಗಳೂರು ವಿಶ್ವವಿದ್ಯಾಲಯದ ಮೊದಲ ಉಪಕುಲಪತಿಯಾಗಿದ್ದರು. ಅವರು ಕನ್ನಡ ಸಾಹಿತ್ಯದ ಪ್ರಸಿದ್ಧ ಸೃಜನಶೀಲ ಮೇರು ಬರಹಗಾರರಲ್ಲದೆ ಉತ್ತರ ಕರ್ನಾಟಕದ ಪ್ರಮುಖ ಶಿಕ್ಷಣ ಸಂಸ್ಥೆಗಳ ಸಮರ್ಥ ಆಡಳಿತಗಾರೆಂಬ ಖ್ಯಾತಿಯೂ ಅವರದ್ದಾಗಿತ್ತು.

ಎಂಎಸ್ಸಿಗೆ ಸೇರುವ ಕೊನೆಯ ಪ್ರಯತ್ನವಾಗಿ ನಾನು ನ್ಯಾಯಕ್ಕಾಗಿ ಅವರನ್ನು ಸಂಪರ್ಕಿ ಸಲು ನಿರ್ಧಾರಿಸಿದೆ. ಆ ಮಧ್ಯಾಹ್ನ ನಾನು ಅವರನ್ನು ನೋಡಲು ಸೆಂಟ್ರಲ್ ಕಾಲೇಜಿನ ಗಣಿತ ವಿಭಾಗದ ಅವರ ಕಚೇರಿಗೆ ಹೋದೆ. ವಿಸಿಯನ್ನು ನೋಡಲು, ಸಭೆಗಳು ಮತ್ತು ಇತರ ಸಂದರ್ಶಕರು ಇದ್ದುದರಿಂದ ಅವರ ಕಚೇರಿಯ ಬಾಗಿಲು ಕಾಯುತ್ತಿದ್ದ ಅಟೆಂಡರ್ ನನಗೆ ಅವರನ್ನು ನೋಡಲು ತಕ್ಷಣ ಒಳಬಿಡಲಿಲ್ಲ ಅಂತಿಮವಾಗಿ, ಸಂಜೆ 6 ಗಂಟೆ ಸುಮಾರಿಗೆ ವಿಸಿ ತಮ್ಮ ಪಿಎಸ್ ಜೊತೆಗೆ ಚೇಂಬರ್‌ನಿಂದ ಹೊರಬಂದರು.

ಕಾರಿಡಾರ್‌ನಲ್ಲಿ ನಿಂತು ನನ್ನ ಸಮಸ್ಯೆಯನ್ನು ವಿವರಿಸಿದೆ ಹಾಗೂ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರು VC ಅವರನ್ನು ನೋಡಲು ಸಲಹೆ ನೀಡಿದ್ದನ್ನು ಹೇಳಿದೆ. ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬ, ಅನ್ಯಾಯಕ್ಕೊಳ ಗಾದ ವಿದ್ಯಾರ್ಥಿನಿ ಯೊಬ್ಬಳ ನೊವನ್ನು ಅರ್ಥಮಾಡಿಕೊಂಡು ತಕ್ಷಣ ಸರಿಪಡಿಸುವ ಕ್ರಮಗಳನ್ನು ಕೈಗೊಳ್ಳುವುದನ್ನು ನಾನು ಇದುವರೆಗೂ ನೋಡಿರಲಿಲ್ಲ. ಅವರು ತಾಳ್ಮೆಯಿಂದ ನನ್ನ ಮಾತುಗಳನ್ನು ಕೇಳಿ,. ನನಗೆ ಅನ್ಯಾಯವಾಗಿದೆ ಎಂದು ಮನವರಿಕೆಯಾದ ನಂತರ, ವಿಷಯವನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದರು.

ಡಾ.ಗೋಕಾಕ್ ತಮ್ಮ ಪಿಎಸ್ ಕಡೆಗೆ ತಿರುಗಿ, ಮಾರನೇ ದಿನ ಪ್ರಾಣಿಶಾಸ್ತ್ರದ ಹೆಚ್.ಓ.ಡಿ ಜೊತೆ ಮಾತನಾಡಲು ನೆನಪಿಸುವಂತೆ ಹೇಳಿ, ಮರುದಿನ ಪ್ರಾಣಿಶಾಸ್ತ್ರ.ಮುಖ್ಯಸ್ಥರನ್ನು ಭೆಟ್ಟಿಯಾಗಲು ನನಗೆ ಹೇಳಿದರು.. ಮರುದಿನ. ನಾನು ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರನ್ನು ಭೇಟಿಯಾದಾಗ ಅವರು ಎಂದಿನಂತೆ ಮುಗುಳ್ನಗದೆ ಗಡಿಯಾರ ಗೋಪುರದ ಕಟ್ಟಡದಲ್ಲಿರುವ ಸೆಂಟ್ರಲ್ ಕಾಲೇಜಿನ ಕೇಂದ್ರ ಕಚೇರಿಗೆ ಮಾರನೇ ಬೆಳಿಗ್ಗೆ 10-30 ಗಂಟೆಯ ನಂತರ ಬರಲು ಹೇಳಿದರು.

ಮನಸ್ಸಿನಲ್ಲೇ ಪ್ರಾರ್ಥಿಸುತ್ತಾ ನಾನು ಆತಂಕದಿಂದ ಅಲ್ಲಿಗೆ ಹೋದೆ. ಸ್ವಲ್ಪ ಸಮಯದ ನಂತರ ನನ್ನನ್ನು ಸೆಂಟ್ರಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಷಡಕ್ಷರ ಸ್ವಾಮಿಯವರ ಕೋಣೆಗೆ ಕರೆಸಲಾಯಿತು, ಒಬ್ಬ ನಿಷ್ಠುರ ಮತ್ತು ಕಟ್ಟುನಿಟ್ಟಾದ ಶಿಕ್ಷಣತಜ್ಞರಾದ ಅವರು ಸೆಂಟ್ರಲ್ ಕಾಲೇಜನ್ನು ಅತಿ ಶಿಸ್ತಿನ ಆಡಳಿತದೊಂದಿಗೆ ನಡೆಸುತ್ತಿದ್ದರು.

ಹಳೆಯ ಬ್ರಿಟಿಷರ ಕಾಲದ ಶಿಕ್ಷಣ ಸಂಸ್ಥೆಗಳ ವಿಶಿಷ್ಟವಾದ,ಅತಿ ಎತ್ತರದ ಸೀಲಿಂಗ್‌ನ, ಹೆದರಿಸುವಂತಿದ್ದ ಪ್ರಾಂಶುಪಾಲರ ವಿಶಾಲವಾದ ಕೊಠಡಿಯನ್ನು ಪ್ರವೇಶಿಸುವಾಗಿನ ನನ್ನ ಪರಿಸ್ಥಿತಿ ದೇವರೊಬ್ಬರಿಗೆ ಮಾತ್ರ ಗೊತ್ತಿತ್ತು ಅಂತ ಕಾಣುತ್ತೆ.ಕೋಣೆಯ ಮಧ್ಯದಲ್ಲಿ ಪ್ರಾಂಶುಪಾಲರು, ಅವರ ಪಕ್ಕದ ಕುರ್ಚಿಯಲ್ಲಿ ಪ್ರೊ. ರಾವ್ ಕುಳಿತಿದ್ದರು. ಪ್ರಾಂಶುಪಾಲರು ನನ್ನನ್ನು ಅಳೆಯುವ ಹಾಗೆ ಕೆಲವು ಸೆಕೆಂಡುಗಳ ಕಾಲ ನೋಡಿದರು.

ಮಹಾರಾಣಿ ಕಾಲೇಜಿನ ಸಾದಾರಣ ಹುಡುಗಿಯೊಬ್ಬಳು, ಯಾವ ಶಿಫಾರಸ್ಸು ಇಲ್ಲದೆ ಬೆಂಗಳೂರು ವಿಶ್ವವಿದ್ಯಾನಿಲಯದ ಸೀಟು ಹಂಚಿಕೆಯಲ್ಲಿ ನಡೆದ ಅನ್ಯಾಯ ದ ವಿರುದ್ಧ ಏಕಾಯೆಕಿ ಹೋರಾಡುತಿದ್ದದ್ದು ಆವರಿಗೆ ಆಶ್ಚರ್ಯ ವಾಗಿರಬೇಕು. ನಾನು ಹೆದರಿದ್ದೆನಾ ? ಈಗ ನೆನೆಸಿಕೊಂಡರೆ ನಾನೇ ನನ್ನ ಧೈರ್ಯಕ್ಕೆ ಆಶ್ಚರ್ಯ ಪಡುತ್ತೇನೆ. ಅವರು ಕೇಳಿದರು. “ನೀನಾ ಶಕುಂತಲಾ?” ನಾನು ಹೌದು ಎಂದೆ. ನೀನು M.Sc ಪ್ರಾಣಿಶಾಸ್ತ್ರದ ಆಕಾಂಕ್ಷಿಯಾ? ನಾನು ಮತ್ತೇ ಹೌದು ಹೇಳಿದೆ . ಆಶ್ಚರ್ಯವೆಂದರೆ ನಾನು ತುಂಬಾ ಶಾಂತವಾಗಿದ್ದೆ, ನನ್ನ ಧ್ವನಿ ಸ್ಥಿರವಾಗಿತ್ತು. ಆ ಕ್ಷಣದಲ್ಲಿ ನಾನು ಆಶಾವಾದಿಯೂ ಆಗಿರಲಿಲ್ಲ, ನಿರಾಶಾವಾದಿಯೂ ಆಗಿರಲಿಲ್ಲ. ಎಲ್ಲೋ ನಡೆಯುತ್ತಿದ್ದ ನಾಟಕದ ಒಂದು ಭಾಗದಂತೆ ನನಗೆ ಭಾಸವಾಗುತ್ತಿತ್ತು. ಅದು ನನ್ನ ಭವಿಷ್ಯವನ್ನು ನಿರ್ಧರಿಸುವ ಕ್ಷಣ ಎಂಬ ಅಂಶದಿಂದ ಸಂಪೂರ್ಣವಾಗಿ ನಾನು ಬೇರ್ಪಟ್ಟಿದ್ದೆ.. ಅವರು ಹೇಳಿದರು.

“ಕಚೇರಿಗೆ ಹೋಗಿ, ಪ್ರವೇಶ ಶುಲ್ಕ ಪಾವತಿಸಿ, ತರಗತಿಗಳಿಗೆ ಹಾಜರಾಗಲು ಪ್ರಾರಂಭಿಸು “. ಅದೊಂದು ಅಪೂರ್ವ ಸಂತೋಷದ ಕ್ಷಣ, ನಾನೊಂದು ದೊಡ್ಡ ನೈತಿಕ ಗೆಲುವನ್ನು ಸಾದಿಸಿದ್ದೆ, ಕುಟುಂಬದ ಯಾವುದೇ ಮಾರ್ಗದರ್ಶನವಿಲ್ಲದೆ, ಯಾವುದೇ ಶಿಫಾರಿಸಲ್ಲದೆ ನಾನೊಬ್ಬಳೇ ಹೋರಾಟ ಮಾಡಿ ಗೆದ್ದಿದ್ದೆ.ನನ್ನ ಪ್ರಕರಣವನ್ನು ಸರಿಯಾದ ದೃಷ್ಟಿಕೋನದಲ್ಲಿ ನೋಡಿದ, ಎಂಎಸ್ಸಿಗಾಗಿ ನನ್ನ ಹೋರಾಟವನ್ನು ಅರ್ಥಮಾಡಿಕೊಂಡ ಆ ಮೂವರಿಗೂ ಇಂದಿಗೂ ನಾನು ಆಭಾರಿಯಾಗಿದ್ದೇನೆ.

ನನಗೆ ಸಲ್ಲಬೇಕಾದ ಸೀಟ ನ್ನು ಕೊಟ್ಟು ನನಗೆ ನ್ಯಾಯ ನೀಡಿದ ಪೂಜೆನೀಯರು ಅವರು. ನನಗೆ ಎಂಎಸ್ಸಿಯಲ್ಲಿ ಆ ಸೀಟು ಕೊಡದಿದ್ದರೆ ಇಂದು ನಾನು ಯಾವುದೊ ರಾಜ್ಯ ಅಥವಾ ಕೇಂದ್ರ ಸರ್ಕಾರಿ ನೌಕರಿಯಲ್ಲಿರುತ್ತಿದ್ದೆ ಸಹಜವಾಗಿ ನನ್ನ ಕಠಿಣ ಪರಿಶ್ರಮದಿಂದ ಹೆಚ್ಚಿನ ಸಂಬಳ ಮತ್ತು ಹೆಚ್ಚಿನ ಅಧಿಕಾರವುಳ್ಳ ಹುದ್ದೆಯಲ್ಲಿರುತ್ತಿದ್ದೆ. ಆದರೆ ಈ ಅನುಕರಣೀಯ ಶಿಕ್ಷಣತಜ್ಞರ ನ್ಯಾಯದ ಮರುಸ್ಥಾಪನೆಯಿಂದಾಗಿ ನಾನು ಇಂದು ಶಿಕ್ಷಣತಜ್ಞಳಾಗಿ, ಪ್ರಖ್ಯಾತ ವಿಜ್ಞಾನಿಯಾಗಿ ರಲು ಸಾಧ್ಯವಾಯಿತು.

Published On - 9:57 am, Sun, 24 July 22

ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು