Column: ವೈಶಾಲಿಯಾನ: ನಾನು-ನೀನೆಂಬ ವ್ಯತ್ಯಾಸ ಗೌಣ, ಇಲ್ಲಿ ಭೇದ-ಭಾವಕ್ಕಿಲ್ಲ ಆಸ್ಪದ
ಎಲ್ಲಾ ಬಣ್ಣಗಳೂ ಒಂದರೊಳಗೊಂದು ಲೀನವಾಗಿ ಒಂದೇ ಬಣ್ಣವಾಗಿದೆ. ಬಣ್ಣಗಳ ಸೃಷ್ಟಿತರ್ಕನಾದ ಶ್ರೀರಂಗನೇ ಈ ರಂಗಿನಲ್ಲಿ ಶೋಭಿಸುತ್ತಿದ್ದಾನೆ. ಪಂಢರಿರಾಯನಲ್ಲಿ ನೆಟ್ಟ ದೃಷ್ಟಿಗೆ, ನಾನು - ನೀನು ಎರಡರ ನಡುವಿನ ವ್ಯತ್ಯಾಸ ಗೌಣವಾಗಿದೆ.
ಎಲ್ಲಾ ಬಣ್ಣಗಳೂ ಒಂದರೊಳಗೊಂದು ಲೀನವಾಗಿ ಒಂದೇ ಬಣ್ಣವಾಗಿದೆ. ಬಣ್ಣಗಳ ಸೃಷ್ಟಿತರ್ಕನಾದ ಶ್ರೀರಂಗನೇ ಈ ರಂಗಿನಲ್ಲಿ ಶೋಭಿಸುತ್ತಿದ್ದಾನೆ. ಪಂಢರಿರಾಯನಲ್ಲಿ ನೆಟ್ಟ ದೃಷ್ಟಿಗೆ, ನಾನು – ನೀನು ಎರಡರ ನಡುವಿನ ವ್ಯತ್ಯಾಸ ಗೌಣವಾಗಿದೆ. ಇಲ್ಲಿ ಭೇದ-ಭಾವಕ್ಕೆ ಆಸ್ಪದವಿಲ್ಲ. ಕ್ರೋಧ- ಕಾಮನೆಗಳು ಮಾಯವಾಗಿವೆ. ಸಶರೀರಿಯಾಗಿದ್ದರೂ, ನಿರಾಕಾರ ಸ್ಥಿತಿಯಿದು.
ನಿನ್ನನ್ನು ಧ್ಯಾನಸ್ಥ ಸ್ಥಿತಿಯಲ್ಲಿ ನೋಡುವ ಚೋಕ್ಯಾನ ಮಹಾರಳಿಗೆ ( ಚೋಕಾ ಮೇಳ ದಲಿತ ಜಾತಿಗೆ ಸೇರಿದವನು , ಹಾಗಾಗಿ ಮಹಾರನಾದ ಅವನ ಪತ್ನಿ ‘ಮಹಾರಿ’) ವೀಕ್ಷಣೆ ಮತ್ತು ವೀಕ್ಷಿಸಲ್ಪಡುವ ವಸ್ತುವಿನ ಮಧ್ಯೆಯಿರುವ ಅಂತರವೇ ಗೋಚರಿಸುವುದಿಲ್ಲ.”
ಭಕ್ತಿಯ ಪರಾಕಾಷ್ಠೆಯನ್ನು ಧ್ವನಿಸುವ ಈ ಸುಂದರ ಮರಾಠಿ ಅಭಂಗವನ್ನು ಕನ್ನಡಕ್ಕೆ ಅನುವಾದಿಸಲು ಪ್ರಯತ್ನಿಸಿದ್ದೇನೆ. ನನ್ನ ಗುರುಗಳಾದ ಗಾನಸರಸ್ವತಿ ಪಂಡಿತಾ ಕಿಶೋರಿ ಅಮೋನ್‍ಕರ್‍ರವರು ‘ಅವಘಾ ರಂಗ್ ಏಕ ಝಾಲಾ, ರಂಗಿ ರಂಗಲಾ ಶ್ರೀರಂಗ / ಮೀ ತೂ ಪಣ ಕೇಲೇ ವಾಯ ಪಾಹತಾ ಪಂಢರೀಚರಾಯ . . . ಪಾಹತೇ, ಪಾಹಣೇ, ಕೇಲೇ ದೂರಿ , ಮ್ಹಣೇ ಚೋಕ್ಯಾಚೀ ಮಹಾರಿ’ ಎಂಬ ಈ ಅಭಂಗವನ್ನು ಅದ್ಭುತವಾಗಿ , ರೋಮಾಂಚನಗೊಳಿಸುವಂತೆ ಹಾಡಿದ್ದಾರೆ.
ಇತ್ತೀಚೆಗಷ್ಟೇ ಚೌಡಯ್ಯ ಸ್ಮಾರಕ ಭವನದಲ್ಲಿ ‘ಪಂಚಮ್ ನಿಷಾದ್’ ವತಿಯಿಂದ ಶ್ರೀ ಶಶಿ ವ್ಯಾಸ್‍ರವರು ಆಯೋಜಿಸಿದ್ದ ‘ಬೋಲಾವಾ ವಿಠಲ’ ಅಭಂಗವಾಣಿಯ ಸಂಗೀತೋತ್ಸವದಲ್ಲಿ ಶ್ರೀಮತಿ ದೇವಕಿ ಪಂಡಿತ್‍ರವರ ‘ಅವಘಾ ರಂಗ್ ಏಕ ಝಾಲಾ’ ಅಭಂಗದ ಹಾಡುಗಾರಿಕೆಯನ್ನು ಮೈಮರೆತು ಆಲಿಸುತ್ತ , ತನ್ನ ನಾಮಾಂಕಿತವನ್ನೂ ಬಳಸದೆ , ತನ್ನ ನಾಮಧೇಯವನ್ನು ‘ಚೋಕ್ಯಾಚೀ ಮಹಾರಿ’ ಎಂದು ನಮೂದಿಸುವ ಈ ಹೆಣ್ಣು ಮಗಳ ಕುರಿತು ಯೋಚಿಸತೊಡಗಿದೆ. ಆಕೆ ದಲಿತ ಸಂತ ಚೋಕಾ ಮೇಳನ ಪತ್ನಿ ಸಂತ ಸೋಯರಾ ಬಾಯಿ.
14 ನೇ ಶತಮಾನದ ಈ ಮಹಾರ್ ದಂಪತಿಗಳು ‘ವರ್ಕರಿ’ ಸಂಪ್ರದಾಯದ ಸಂತರಲ್ಲಿ ಅಗ್ರಪಂಕ್ತಿಯಲ್ಲಿದ್ದವರು. ತನ್ನ ಪತಿ ಚೋಕಾ ಮೇಳನ ಶಿಷ್ಯೆಯಾದ ಸೋಯರಾಬಾಯಿ ಅನೇಕ ಅಭಂಗಗಳನ್ನು ರಚಿಸಿದ್ದರೂ , ಇಂದು ನಮಗೆ ಆಕೆಯ ಅಭಂಗಗಳಲ್ಲಿ ಬೆರಳೆಣಿಕೆಯಷ್ಟೇ ಲಭ್ಯ. ತನ್ನ ಅಭಂಗಗಳಲ್ಲಿ ಆಕೆ ಅಸ್ಪೃಶ್ಯರ ದೈನ್ಯಾವಸ್ಥೆಯ ಬಗ್ಗೆ ವಿವರಿಸುತ್ತ, ವಿಠೋಬನನ್ನು ತರಾಟೆಗೆ ತೆಗೆದುಕೊಳ್ಳುತ್ತಾಳೆ.
ಮನುಷ್ಯ ದೇಹದಲ್ಲಿ ಮಲಿನತೆಯ ಅಂಶ ಅಗಾಧವಾಗಿರುವಾಗ , ಯಾರು ತಾನೇ ಪವಿತ್ರರಾಗಿರಲು ಸಾಧ್ಯ? ಇನ್ನು ಮೇಲು-ಕೀಳು ಜಾತಿಗಳೆಂಬ ಭ್ರಮೆ ಏಕೆ? ದೇಹದ ಮಲಿನತೆಯಿಂದ ಆತ್ಮ ಹೇಗೆ ಅಪವಿತ್ರವಾಗಲು ಶಕ್ಯವಿದೆ? ಎಂಬಂಥಾ ಮಾರ್ಮಿಕ ಪ್ರಶ್ನೆಗಳನ್ನು ಮಂಡಿಸುತ್ತಾಳೆ.
ಪತಿಯೊಡನೆ ಪಂಢರಪುರಕ್ಕೆ ಪ್ರತಿ ವರ್ಷವೂ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದ ಸೋಯರಾಬಾಯಿ, ಬ್ರಾಹ್ಮಣರ ಕರ್ಮಠ ಕಂದಾಚಾರದ ರೀತಿ- ನೀತಿಗಳು , ಅಸ್ಪೃಶ್ಯತೆ ಅಮಾನವೀಯ ಆಚರಣೆಗಳ ಬಗ್ಗೆ ಅತ್ಯಂತ ದಿಟ್ಟವಾಗಿ , ಧೀಮಂತಿಕೆಯಿಂದ ತನ್ನ ನಿಲುವುಗಳನ್ನು ಸ್ಪಷ್ಟಪಡಿಸುತ್ತಾಳೆ. ಆಕೆಯ ಪತಿ ಚೋಕಾ ಮೇಳನ ಅಭಂಗಗಳೂ ತುಂಬಾ ಜನಪ್ರಿಯವಾಗಿದ್ದು , ‘ಅಬೀರ ಗುಲಾಲ ಉಧಳಿತ ರಂಗ’ ಹಾಗೂ ‘ಜೋಹಾರ್ ಮಾಯಿ ಬಾಪ ಜೋಹಾರ್’ ಬಲು ಹೃದಯಸ್ಪರ್ಶಿಯಾದ ಅಭಂಗಗಳಾಗಿವೆ.
ತನ್ನ ತಂದೆ- ತಾಯಿಯರನ್ನು ವಿಠಲನಲ್ಲಿ ಕಾಣುವ ಭಕ್ತ ಚೋಕಾ ಮೇಳ ‘ಅಸ್ಪೃಶ್ಯ ಮಹಾರನಾದ ನಾನು ನಿನ್ನನ್ನು ನೋಡಲು ಬಂದಿರುವೆ ತಂದೆ ವಿಠಲ , ನಿನ್ನ ಪ್ರೀತಿಗಾಗಿ ಹಸಿದಿರುವೆ, ನಿನ್ನ ಭಕ್ತರ ಎಂಜಲನ್ನು ಸ್ವೀಕರಿಸಲು, ಮಹಾರನಾದ ನಾನು ಬುಟ್ಟಿಯನ್ನು ಹೊತ್ತು ತಂದಿದ್ದೇನೆ’ ಎನ್ನುವ ಸಾಲುಗಳಂತೂ ನಮ್ಮನ್ನು ಗದ್ಗದಿತರಾಗಿ ಮಾಡುತ್ತವೆ. ಅತ್ಯಂತ ವಿಷಾದಕರ ಸಂಗತಿಯೆಂದರೆ ಮಹಾಭಕ್ತ ಚೋಕಾ ಮೇಳ ಹಾಗೂ ಆತನ ಪತ್ನಿ ಸೋಯರಾಬಾಯಿಗೆ ಪಂಢರಾಪುರದ ವಿಠಲನ ದೇಗುಲಕ್ಕೆ ಪ್ರವೇಶ ನಿಷಿದ್ಧವಾಗಿತ್ತು.
ಆದರೂ ಎದೆಗುಂದದೆ ಈ ದಂಪತಿಗಳು ಯಾತ್ರೆಯನ್ನು ಕೈಗೊಳ್ಳುತ್ತಿದ್ದರು. ಗೋಡೆಯನ್ನು ಕಟ್ಟುವಾಗ ಅದು ಕುಸಿದು, ಅದರ ಅಡಿಯಲ್ಲಿ ಸಿಲುಕಿ ಬಿದ್ದು ಅಸುನೀಗಿದ ಚೋಕಾ ಮೇಳನ ಸಮಾಧಿಯನ್ನು ಪಂಢರಪುರದ ವಿಠೋಬನ ದೇವಸ್ಥಾನದ ಮುಂದೆಯೇ ನಿರ್ಮಿಸಲಾಗಿದ್ದು . ಅಲ್ಲಿಗೆ ಭೇಟಿ ನೀಡಿದ್ದ ಬಾಬಾಸಾಹೇಬ್ ಅಂಬೇಡ್ಕರ್‍ರವರಿಗೂ ದೇಗುಲದೊಳಗೆ ಮಹಾರರೆಂಬ ನೆಪವೊಡ್ಡಿ ಪ್ರವೇಶಕ್ಕೆ ಅನುಮತಿಯನ್ನು ನಿರಾಕರಿಸಿದ್ದು ನಮ್ಮ ದೇಶದ ಘೋರ ದುರಂತಗಳಲ್ಲೊಂದು.
ಭಾರತ ಉಪಖಂಡದ ಉದ್ದಗಲಕ್ಕೂ , ಎಲ್ಲಾ ಪ್ರಾಂತ್ಯಗಳ ನಡುವೆಯೂ ಸುವರ್ಣ ಸೇತುವೆಯಾಗಿ , ತಿಲಕ ಪ್ರಾಯವಾದ ಒಂದು ಗಾಢವಾದ ಸಂವೇದನೆಯಲ್ಲಿ ಎಲ್ಲ ಸಮುದಾಯಗಳನ್ನೂ ಬೆಸೆಯಬಲ್ಲ ಸಂಗೀತ ಪ್ರಕಾರ ಯಾವುದಾದರೂ ಇದ್ದರೆ ಅದು ‘ಭಕ್ತಿ ಸಂಗೀತ’ ಎಂದು ನಿಸ್ಸಂದೇಹವಾಗಿ ಹೇಳಬಹುದೇನೋ ! ಇತ್ತೀಚೆಗಷ್ಟೇ ಪಂಢರಪುರಕ್ಕೆ ಯಾತ್ರೆ ಹೋಗುವ ವರ್ಕರಿ ಭಕ್ತರ ಆಷಾಢ ಏಕಾದಶಿಯ ಸಂಭ್ರಮ ಕಳೆಗಟ್ಟಿ, ಕೋವಿಡ್ ಪಿಡುಗಿನ ನಂತರದ ಮೊದಲ ಯಾತ್ರೆ ಯಶಸ್ವಿಯಾಗಿ ಮುಗಿದಿದ್ದರಿಂದ , ಆ ಸಂದರ್ಭದಲ್ಲಿಯೇ ಏರ್ಪಾಡಾಗಿದ್ದ ‘ಬೋಲಾವಾ ವಿಠಲ’ ಅಭಂಗವಾಣಿ ಸಂಗೀತೋತ್ಸವದ ಬಗ್ಗೆ ನನ್ನ ಗಮನ ಹರಿದಿತ್ತು. ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತವಾಗಿದ್ದ ಅಭಂಗವಾಣಿಯ ಕಾರ್ಯಕ್ರಮ ಇಂದು ಇಡೀ ಭಾರತದಾದ್ಯಂತ ಜನಪ್ರಿಯಗೊಂಡಿರುವುದು ಬಹಳ ಕೌತುಕಮಯ ಸಂಗತಿಯಾಗಿದೆ.
ಮೊದಲಿಗೆ ಅಭಂಗವಾಣಿಯನ್ನು ಜನಪ್ರಿಯಗೊಳಿಸಿದ ಖ್ಯಾತಿ ಭಾರತ ರತ್ನ ಪಂಡಿತ್ ಭೀಮ್ ಸೇನ್ ಜೋಷಿಯವರಿಗೆ ಸಲ್ಲಬೇಕು. ಸುಮಾರು ಹದಿಮೂರನೆ ಶತಮಾನದಿಂದ ಹತ್ತೊಂಭತ್ತನೆ ಶತಮಾನದವರೆಗೆ ಪಂಢರಪುರದ ವಿಠಲನನ್ನು ಕುರಿತಾಗಿ ರಚಿಸಿದ, ಸಾಮಾಜಿಕ ಕಳಕಳಿಯಿಂದಲೂ ಕೂಡಿದ ಭಾವಪೂರ್ಣ ಭಕ್ತಿಗೀತೆಗಳೇ ‘ಅಭಂಗ’ಗಳು.
ಅಭಂಗದೊಡನೆ ನಮಗೆ ಸಂತ ಜ್ಞಾನೇಶ್ವರ, ಸಂತ ನಾಮದೇವ, ಸಂತ ಏಕನಾಥ, ಸಂತ ತುಕಾರಾಮ, ಸಂತ ಗೋರಾ ಕಂಬಾರ, ಸಂತ ಚೋಕಾಮೇಳ, ಮೊದಲಾದ ಅಭಂಗಕಾರರ ಹೆಸರು ಕೇಳಿಬರುವುದಲ್ಲದೇ, ಕೆಲವು ಅಭಂಗಕಾರ್ತಿಯರ ಹೆಸರುಗಳೂ ಕಂಡುಬರುತ್ತವೆ. ಅವರಲ್ಲಿ ಗಮನಾರ್ಹರಾದವರು ಸಂತರಾಗಿ ಖ್ಯಾತನಾಮರಾದ ಜ್ಞಾನೇಶ್ವರನ ತಂಗಿ ಮುಕ್ತಾಬಾಯಿ, ಚೋಕ ಮೇಳನ ಪತ್ನಿ ಸೊರಯಾಬಾಯಿ, ಚೋಕ ಮೇಳನ ಸಹೋದರಿ ನಿರ್ಮಲ, ಜನಾಬಾಯಿ, ಬಹಿನಾ ಬಾಯಿ ಮುಂತಾದವರು.
ಅಭಂಗಗಳು ಸಾಮಾನ್ಯವಾಗಿ ಸರಳ ರಗಳೆಗಳ ಶೈಲಿಯಲ್ಲಿರುತ್ತಿದ್ದವು. ವರ್ಕರಿ ಸಂಪ್ರದಾಯವು ಭಕ್ತಿ ಪಂಥೀಯ ಆಂದೋಲನಗಳಲ್ಲಿ ಪ್ರಮುಖವಾದದ್ದು. ವರ್ಕರಿ ಸಂಪ್ರದಾಯ ಜಾತಿ, ಧರ್ಮ, ಆಚಾರ, ಮಡಿ-ಮೈಲಿಗೆ , ಬ್ರಾಹ್ಮಣಿಕೆಯ ಢಂಬಾಚಾರಗಳನ್ನು ಮೀರಿದ ಉನ್ನತ ಆದರ್ಶವನ್ನು , ಸಮತಾವಾದವನ್ನೂ ಪ್ರತಿಪಾದಿಸುವ ಆಚರಣೆಯಾಗಿ ಬೆಳೆಯಿತು. ವರ್ಕರಿಗಳ ಕೇಂದ್ರ ಬಿಂದು ಪಂಢರಪುರದ ವಿಠಲ ದೀನದಲಿತರ ಬಂಧು. ಈ ಆಧ್ಯಾತ್ಮಿಕ ಕ್ರಾಂತಿ ಪಥದಲ್ಲಿ ಮೇಲು – ಕೀಳು ಎಂಬ ತಾರತಮ್ಯವಿಲ್ಲದೇ ಅನೇಕ ಸಂತರು ಗುರುತಿಸಲ್ಪಡುತ್ತಾರೆ.
ತಮ್ಮ ಇಪ್ಪತ್ತನೆಯ ವಯಸ್ಸಿಗೆ ಸಜೀವ ಸಮಾಧಿ ಪ್ರವೇಶ ಮಾಡಿದ ಸಂತ ಜ್ಞಾನೇಶ್ವರರು ಬ್ರಾಹ್ಮಣರಾದರೆ , ಸಂತ ತುಕಾರಾಮ, ಸಂತ ಚೋಕಾಮೇಳರು ಕೆಳ ಜಾತಿಗೆ ಸೇರಿದವರು. ‘ಭಕ್ತಿ’ ಯ ಪರಿಕಲ್ಪನೆಗೇ ಕಾಯಕಲ್ಪ ನೀಡಿ ಮರು ವ್ಯಾಖ್ಯಾನ ಮಾಡಿದ ಮಹಾ ಚೇತನರು. ನಾಮದೇವ ದರ್ಜಿ. ಹೀಗೆ ಹಲವಾರು ಪಂಗಡಗಳಿಂದ ಬಂದವರಾದ ಈ ಸಂತರ ಪೈಕಿ ಯಾರೂ ಯಜಮಾನಿಕೆಯ ದುರಹಂಕಾರವನ್ನು ಪ್ರದರ್ಶಿಸಲಿಲ್ಲ.
ವಿಠಲನನ್ನು ‘ಮಾವುಲೀ’ (ತಾಯಿ) ಎಂದು ಕರೆಯುವ ಈ ಸಂಪ್ರದಾಯ ಲಿಂಗ ಸಮಾನತೆಯನ್ನೂ ಪ್ರತಿಪಾದಿಸಿತು. ಹಲವಾರು ಅಭಂಗಕಾರ್ತಿಯರ ರಚನೆಗಳಲ್ಲಿ ಅಲ್ಲಲ್ಲಿ ಇಣುಕುವ ಸ್ತ್ರೀವಾದಿ ಸಂವೇದನೆಯನ್ನೂ ನಾವು ಸ್ಪಷ್ಟವಾಗಿ ಗಮನಿಸಬಹುದು. ‘ವೇದ – ಪುರಾಣಗಳು ಮಹಿಳೆಯರ ಉದ್ಧಾರ ಸಾಧ್ಯವಿಲ್ಲ ಎನ್ನುತ್ತವೆ. ನಾನು ಸ್ತ್ರೀಯಾಗಿ ಜನಿಸಿದ್ದೇನೆ, ಆದ್ದರಿಂದ ನಾನು ಹೇಗೆ ಸತ್ಯದ ಅನ್ವೇಷಣೆಯಲ್ಲಿ ತೊಡಗಲಿ ? ವೇದ- ಪುರಾಣಗಳು ಮಹಿಳೆಯರು ಮೂರ್ಖರು, ಮರುಳು ಮಾಡುವವರು, ಕಪಟಿಗಳು , ಮೋಕ್ಷದ ಪಥದಲ್ಲಿ ಸ್ತ್ರೀಸಂಗ ವಿನಾಶಕಾರಿ ಎಂದು ಸಾರುತ್ತವೆ , ಆದರೆ ಬಹಿನಾ ಹೇಳುತ್ತಾಳೆ : ಸ್ತ್ರೀಯ ಸಹವಾಸವೇ ಇಷ್ಟು ಹಾನಿಕಾರಕವಾಗಿದ್ದರೆ , ಸ್ತ್ರೀ ಶರೀರಿಯಾದ ನಾನು ಸತ್ಯ ದರ್ಶನಾಕಾಂಕ್ಷಿಯಾಗುವುದಾದರೂ ಹೇಗೆ?’ – ಎಂದು ನುಡಿಯುವ ಬಹಿನಾಬಾಯಿಯ ಹರಿತವಾದ ವ್ಯಂಗ್ಯ ಭರಿತ ಅಭಂಗಗಳು ಆಕೆಯ ಕ್ರಾಂತಿಕಾರಿ ಮನೋಭಾವ, ದಿಟ್ಟತನ, ಪಟ್ಟು ಸಡಿಲಿಸದೇ ತನ್ನ ಆಧ್ಯಾತ್ಮಿಕ ಮಾರ್ಗವನ್ನು ಅನುಸರಿಸುವ ಆಕೆಯ ಛಲವನ್ನು ಬಿಂಬಿಸುತ್ತವೆ. ಹನ್ನೊಂದು ವರ್ಷದ ಬಾಲಕಿ ಬಹಿನಾಬಾಯಿ ತನ್ನ ಗಂಡನ ಕೋಪ, ಬೈಗುಳ, ಹೊಡೆತಗಳ ಬಗ್ಗೆಯೂ ಬರೆಯುತ್ತಾಳೆ.
‘ನಾನು ಈ ಪ್ರಪಂಚದಲ್ಲಿ ಸ್ತ್ರೀಯಾಗಿ ಜನಿಸಿದ್ದಕ್ಕಾಗಿ ದುಃಖಿಸುವುದಿಲ್ಲ. ಅನೇಕ ಸಂತರು ಪರಿ ಪರಿಯಾಗಿ ಬೆಂದು ಬಸವಳಿದಿದ್ದಾರೆ’ ಎನ್ನುವ ಮತ್ತೊಬ್ಬ ಅಭಂಗಕಾರ್ತಿ ಜನಾಬಾಯಿ ಎಳೆಯ ವಯಸ್ಸಿನಲ್ಲಿ ಇನ್ನೂ ಏಳು ವರ್ಷದ ಬಾಲಕಿಯಾಗಿದ್ದಾಗಲೇ ವರ್ಕರಿ ಸಂತ ಕವಿ ನಾಮದೇವನ ತಂದೆ ದಾಮ ಶೆಟ್ಟಿಯ ಪರಿವಾರಕ್ಕೆ ಪರಿಚಾರಿಕೆಯಾಗಿ ಬಂದು ಸೇರಿದ್ದಳು.
ಜನಾಬಾಯಿಯ ಮನಮಿಡಿಯುವ ಅಭಂಗಗಳಲ್ಲಿ ಪಂಢರಾಪುರದ ವಿಠಲ ಅವಳ ಸ್ನೇಹಿತನಾಗಿ , ಸಹಚರನಾಗಿ ಬರುತ್ತಾನೆ. ಎಡೆಬಿಡದ ಪ್ರಯಾಸಕರ ಮನೆಗೆಲಸಗಳಲ್ಲಿ ಆಕೆಗೆ ನೆರವಾಗುತ್ತಾನೆ. ಸ್ನಾನಕ್ಕೆ ನೀರು ಕಾಯಿಸುವುದು, ಬಿಸಿ ನೀರನ್ನು ತರುವುದು, ಅಂಗಳದಲ್ಲಿ ಉದುರಿದ ಎಲೆಗಳನ್ನು ಗುಡಿಸುವುದು, ಪಾತ್ರೆಗಳನ್ನು ತಿಕ್ಕಿ ತೊಳೆಯುವುದು, ಬಾವಿ ನೀರನ್ನು ಸೇದುವುದು, ಅವಳ ತಲೆಯನ್ನು ಹೇನುಗಳು ಕಚ್ಚುತ್ತಿರುವಾಗ, ತಲೆ ಬಾಚಿ ಹೇನು ತೆಗೆಯಲೂ ವಿಠಲ ನೆರವಾಗುವ ದೃಶ್ಯಗಳು ಆಕೆಯ ಅಭಂಗಗಳಲ್ಲಿ ಹೇರಳವಾಗಿವೆ.
ಇನ್ನು ಕೆಲವು ಅಭಂಗಗಳಲ್ಲಿ ಜನಾಬಾಯಿ ತನ್ನನ್ನು ಊರೂರು ಅಲೆಯುವ ಅಲೆಮಾರಿ ಹಾಡುಗಾರ್ತಿಯಾಗಿ ಪರಿಚಯಿಸಿಕೊಳ್ಳುತ್ತಾಳೆ.. ಅಂತಹ ಮಹಿಳೆಯರನ್ನು ಶೀಲಗೆಟ್ಟವರೆಂದು ನಿಂದಿಸಲಾಗುತ್ತದೆ. ಆದರೆ ಜನಾಬಾಯಿ ಅವರನ್ನು ಗೃಹಿಣಿಯರ ನಿಯಮ-ಕಟ್ಟಳೆಗಳನ್ನು ಮೀರಿ ಹೋಗುವ ಸ್ವಾತಂತ್ರ್ಯವಿರುವ ದಿಟ್ಟ ಮಹಿಳೆಯರೆಂದು ವರ್ಣಿಸುತ್ತಾಳೆ. ನಿನ್ನ ಎಲ್ಲ ಮಾನ – ಮರ್ಯಾದೆಗಳನ್ನು ಕಳಚಿಟ್ಟು , ಸಂತೆಯಲ್ಲಿ ನಿನ್ನನ್ನೇ ಮಾರಾಟಕ್ಕಿಡುವೆಯಾದರೆ ನೀನು ದೇವರನ್ನು ಸೇರುವ ಆಕಾಂಕ್ಷೆಯನ್ನಿಟ್ಟುಕೊಳ್ಳಬಹುದು , ಕೈಯಲ್ಲಿ ತಾಳವನ್ನು ಹಿಡಿದು, ನನ್ನ ಹೆಗಲ ಮೇಲೆ ತಂಬೂರಿಯನ್ನು ಹೊತ್ತು, ನಾನು ಅಲೆಯುತ್ತೇನೆ, ನನ್ನನ್ನು ತಡೆಯುವವರಾರು? ನನ್ನ ಸೀರೆಯ ಸೆರಗು ಜಾರುತ್ತದೆ (ಅಬ್ಬಾ ! ಅದೊಂದು ಪ್ರಮಾದ ಅಲ್ಲವೇ?) ಆದರೂ ನಾನು ಕಿಕ್ಕಿರಿದ ಜನಸಂದಣಿಯಿರುವ ಮಾರುಕಟ್ಟೆಯ ಜಾಗವನ್ನು ಯಾವ ಅಳುಕಿಲ್ಲದೇ ಪ್ರವೇಶಿಸುತ್ತೇನೆ. ಜನಿ ಹೇಳುತ್ತಾಳೆ : ಪ್ರಭು ನಿನ್ನ ನಿವಾಸವನ್ನು ತಲುಪಲು ನಾನು ವೇಶ್ಯೆಯಾಗಬೇಕಾಯಿತು.
ಎಂಬ ಅಭಂಗ, ತನ್ನ ಇಷ್ಟ ದೈವವಾದ ಶಿವನನ್ನೇ ‘ನಿರ್ಲಜ್ಜೇಶ್ವರ’ನೆಂದು ಸಂಬೋಧಿಸುವ ವಚನಕಾರ್ತಿ ಸೂಳೆ ಸಂಕವ್ವನ ವಚನಗಳನ್ನು ನೆನಪಿಸುತ್ತದೆ. 14 ನೇ ಶತಮಾನದವಳಾದ ಜನಾಬಾಯಿಯ ಮತ್ತೊಂದು ಮನಮುಟ್ಟುವ ಅಭಂಗದಲ್ಲಿ ‘ಹೂವ ತರುವರ ಮನಗೆ ಹುಲ್ಲ ತರುವ , ಅವ್ವ ಲಕುಮಿಯ ರಮಣ ಇವಗಿಲ್ಲ ಗರುವ’ ಎನ್ನುವ ಭಾವ ಇಣುಕುತ್ತದೆ.
ಇಲ್ಲಿ ಕಟ್ಟಿ ಕೊಡುವ ಆಪ್ತ ಚಿತ್ರಣದಲ್ಲಿ ಗೆಳೆಯ ವಿಠಲ, ಜನಿ ಕಸ ಗುಡಿಸುತ್ತಿದ್ದಾಗ ಅವಳನ್ನು ಹಿಂಬಾಲಿಸುತ್ತ , ಕಸವನ್ನು ಆಯ್ದು , ತನ್ನ ತಲೆಯ ಮೇಲೆತ್ತಿಕೊಂಡು ಹೋಗಿ, ಹೊರಗೆ ಬಿಸಾಡಿ ಹಿಂದಿರುಗುತ್ತಾನೆ. ಭಕ್ತೆಯ ಭಕ್ತಿಗೆ ಕರಗಿದ ವಿಠಲ ಮುಸುರೆ ಕೆಲಸವನ್ನೂ ಮಾಡುತ್ತಾನೆ ! ‘ಜನಿ ಹೇಳುತ್ತಾಳೆ : ವಿಠೋಬ, ನಿನ್ನ ಋಣವನ್ನು ನಾನು ಹೇಗೆ ತೀರಿಸಲಿ?’ – ಈ ಅಭಂಗಗಳಲ್ಲಿ ಕಂಡುಬರುವ ‘ಸಹಚರ’ನಾಗಿರುವ, ಸಹಾಯದ ಹಸ್ತ ಚಾಚುವ , ದಿನನಿತ್ಯದ ಸವಾಲುಗಳಿಗೆ ಹೆಗಲು ಕೊಡುವ ವಿಠೋಬನ ಕಲ್ಪನೆ ಬಹಳ ಹೃದಯ ಸ್ಪರ್ಶಿಯಾಗಿದ್ದು , ನಮ್ಮ ಮನಸ್ಸನ್ನು ಕಲಕುತ್ತದೆ.
ವರ್ಕರಿ ಸಂಪ್ರದಾಯದ ಮತ್ತೊಬ್ಬ ಮಹಾನ್ ಸಂತರಾದ ಜ್ಞಾನೇಶ್ವರರ ತಂಗಿ, ಮುಕ್ತಾಬಾಯಿಯ ಅಭಂಗಗಳೂ ಗಾಢವಾದ ಭಾವತೀವ್ರತೆಯಿಂದ ನಮ್ಮ ಮನಸ್ಸನ್ನು ಸೆಳೆಯುತ್ತವೆ. ಬ್ರಾಹ್ಮಣ ಸಮುದಾಯದಿಂದ ಬಹಿಷ್ಕತರಾಗಿ, ನೊಂದು, ತಮ್ಮ ತಂದೆ- ತಾಯಿಯರು ಆತ್ಮಹತ್ಯೆ ಮಾಡಿಕೊಂಡ ಬಳಿಕ, ಅವರ ನಾಲ್ವರು ಮಕ್ಕಳಾದ ಜ್ಞಾನೇಶ್ವರ, ನಿವೃತ್ತಿ, ಸೋಪಾನ ಮತ್ತು ಮುಕ್ತಾಬಾಯಿ ಅನೇಕ ಸವಾಲುಗಳನ್ನು ಎದುರಿಸುತ್ತಾರೆ.
ಜನರ ವ್ಯಂಗ್ಯದ ಚುಚ್ಚು ಮಾತುಗಳಿಗೆ ನೊಂದು, ಕೋಣೆಯ ಚಿಲಕ ಹಾಕಿ ಒಳಗೆ ಕೂತ ಅಣ್ಣನನ್ನು ಆರ್ತಳಾಗಿ ಬಾಗಿಲು ತೆಗೆಯಬೇಕೆಂದು ಅಂಗಲಾಚುವ ‘ತಾಟಿ ಉಗಡಾ ಜ್ಞಾನೇಶ್ವರ’ ಎಂಬ ಮುಕ್ತಾಬಾಯಿಯ ಅಭಂಗ ಒಂದು ಅಮೋಘ ಕೃತಿ. ನಿರ್ಮಲ ಮನಸ್ಸಿನ ಸನ್ಯಾಸಿ, ಜನರ ತಪ್ಪುಗಳನ್ನು ಮನ್ನಿಸುತ್ತಾನೆ.
ಪ್ರಪಂಚದಲ್ಲಿ ಕೋಪಾಗ್ನಿ ಪ್ರಜ್ವಲಿಸುತ್ತಿದ್ದಾಗ, ಋಷಿಯಾದವನು ನೀರಿನಂತೆ ತಣ್ಣಗಿರಬೇಕು. ಜನರು ಮಾತುಗಳ ಆಯುಧದಿಂದ ತನ್ನನ್ನು ಚುಚ್ಚಿ ನೋಯಿಸಿದಾಗ , ಜ್ಞಾನಿಯಾದವನು ಅವುಗಳನ್ನು ಬುದ್ಧಿವಾದದ ಮಾತುಗಳೆಂದು ಸ್ವೀಕರಿಸಬೇಕು. ಇಡೀ ಬ್ರಹ್ಮಾಂಡವೇ ಒಂದು ಅರಿವೆಯಿದ್ದಂತೆ , ಅದನ್ನು ‘ಬ್ರಹ್ಮ’ನೆಂಬ ಒಂದೇ ದಾರದಿಂದಲೇ ನೇಯಲಾಗಿದೆ. ಆದ್ದರಿಂದ ಸಮಾಧಾನದಿಂದ ‘ನನಗೆ ಬಾಗಿಲು ತೆರೆ’ಯೆಂದು ಅಣ್ಣನನ್ನು ಬೇಡುವ ಅಭಂಗ ಕರುಳು ಹಿಂಡುವಂತಿದೆ.
ಪಂಢರಪುರಕ್ಕೆ ಯಾತ್ರೆ ಹೋಗುವ ಸಂದರ್ಭದಲ್ಲಿ ಭಜನೆ ಮಾಡುತ್ತ , ‘ಜ್ಞಾನೋಬ , ಮಾವುಲೀ , ತುಕಾರಾಂ’ ಎಂದು ಗಜರ್‍ಅನ್ನು ಜಪಿಸುತ್ತ, ದಾರಿ ಸವೆಸುವ ಭಕ್ತರಿಗೆ ಕಲ್ಲು ಮುಳ್ಳುಗಳ ಅರಿವಾಗುವುದಿಲ್ಲ. ಸಂತ ಏಕನಾಥರ ಸುಂದರ ಅಭಂಗ ‘ಮಾಝೆ ಮಾಹೇರ ಪಂಢರಿ’ ತವರಿಗೆ ಹೋಗುವ ಹೆಣ್ಣಿನ ರೂಪಕವನ್ನು ಅಪ್ಯಾಯಮಾನವಾಗಿ ಬಳಸಿಕೊಂಡಿದೆ.
ಇಲ್ಲಿ ಹೆಣ್ಣೊಬ್ಬಳು ತಾನು ತನ್ನ ತೌರು ಮನೆಯಾದ ಪಂಢರಪುರಕ್ಕೆ , ತನ್ನ ತಂದೆ ತಾಯಿಯರಾದ ವಿಠಲ, ರುಕುಮಾಯಿಯನ್ನು ಭೇಟಿಯಾಗಲು ಹೊರಟಿದ್ದಾಳೆ. ಅವಳ ಬಂಧುವೆಂದರೆ ಭಕ್ತ ಪುಂಡಲೀಕ. ತನ್ನ ಪ್ರೀತಿಯ ಸಹೋದರಿಯಾದ ಚಂದ್ರಭಾಗಳ ನೀರಲ್ಲಿ ಮಿಂದೆದ್ದರೆ ಸರ್ವ ಪಾಪಗಳೂ ಪರಿಹಾರವಾಗುತ್ತವೆ.
ತಾನು ಜನಾರ್ಧನನಿಗೆ ಮಾತ್ರ ಶರಣಾಗತಳಾಗಿರುವೆ’ ಎನ್ನುವ ಹೆಣ್ಣಿನ ರೂಪಕದಿಂದ, ಪಂಢರಪುರಕ್ಕೆ ಕೈಗೊಳ್ಳುವ ಯಾತ್ರೆಯನ್ನು ಈ ಜನಪ್ರಿಯ ಅಭಂಗದಲ್ಲಿ ವರ್ಣಿಸಲಾಗಿದೆ. ಸ್ತ್ರೀಸಂವೇದನೆಯ ಮಧುರ ಭಕ್ತಿ, ಲಿಂಗ ಸಮಾನತೆಗಳಿಗೆ ಪ್ರಾಶಸ್ತ್ಯ ನೀಡಿದ ವರ್ಕರಿ ಸಂತರ ಅಭಂಗಗಳು ತೆರೆದಿಡುವ ಚಿತ್ರಣ ನಿಜಕ್ಕೂ ಅವಿಸ್ಮರಣೀಯ.
Published On - 2:54 pm, Sat, 23 July 22