AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Neeraj Chopra: ಒಲಿಂಪಿಕ್ ಹೀರೋ ನೀರಜ್ ಚೋಪ್ರಾಗೆ ಲೆಫ್ಟಿನೆಂಟ್ ಕರ್ನಲ್ ಹುದ್ದೆ

Neeraj Chopra Honored: ಭಾರತದ ಅತ್ಯಂತ ಯಶಸ್ವಿ ಜಾವೆಲಿನ್ ಥ್ರೋ ಆಟಗಾರ ನೀರಜ್ ಚೋಪ್ರಾ ಅವರಿಗೆ ಪ್ರಾದೇಶಿಕ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವ ಹುದ್ದೆಯನ್ನು ನೀಡಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಗೌರವವನ್ನು ನೀಡಿದ್ದು, ಈ ಹುದ್ದೆ ಏಪ್ರಿಲ್ 16, 2025 ರಿಂದ ಜಾರಿಯಲ್ಲಿದೆ. ಇದಕ್ಕೂ ಮುನ್ನ ಅವರು ಭಾರತೀಯ ಸೇನೆಯಲ್ಲಿ ಸುಬೇದಾರ್ ಮೇಜರ್ ಆಗಿದ್ದರು. ಕಪಿಲ್ ದೇವ್, ಎಂ.ಎಸ್. ಧೋನಿ, ಮತ್ತು ಅಭಿನವ್ ಬಿಂದ್ರಾ ಅವರಂತೆ ನೀರಜ್ ಕೂಡ ಈ ಗೌರವಕ್ಕೆ ಪಾತ್ರರಾಗಿದ್ದಾರೆ.

Neeraj Chopra: ಒಲಿಂಪಿಕ್ ಹೀರೋ ನೀರಜ್ ಚೋಪ್ರಾಗೆ ಲೆಫ್ಟಿನೆಂಟ್ ಕರ್ನಲ್ ಹುದ್ದೆ
Neeraj Chopra
ಪೃಥ್ವಿಶಂಕರ
|

Updated on:May 14, 2025 | 9:43 PM

Share

ಭಾರತದ ಅತ್ಯಂತ ಯಶಸ್ವಿ ಕ್ರೀಡಾಪಟು ಮತ್ತು ಮಾಜಿ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ (Neeraj Chopra) ಅವರಿಗೆ ದೊಡ್ಡ ಗೌರವವೊಂದು ಸಂದಿದೆ. ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಅವರಿಗೆ ಪ್ರಾದೇಶಿಕ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ (Lieutenant Colonel) ಗೌರವ ಹುದ್ದೆಯನ್ನು ನೀಡಲಾಗಿದೆ. ರಕ್ಷಣಾ ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೀರಜ್ ಚೋಪ್ರಾ ಅವರಿಗೆ ಈ ಶ್ರೇಣಿಯನ್ನು ನೀಡಿದ್ದಾರೆ. ನೀರಜ್ ಈಗಾಗಲೇ ಭಾರತೀಯ ಸೇನೆಯಲ್ಲಿ ಸುಬೇದಾರ್ ಮೇಜರ್ ಆಗಿ ನೇಮಕಗೊಂಡಿದ್ದಾರೆ. ಇದೀಗ ಅವರಿಗೆ ಲೆಫ್ಟಿನೆಂಟ್ ಕರ್ನಲ್ ಹುದ್ದೆ ನೀಡಲಾಗಿರುವುದರಿಂದ ಅವರು ಸುಬೇದಾರ್ ಮೇಜರ್ ಹುದ್ದೆಗೆ ರಾಜೀನಾಮೆ ನೀಡಬೇಕಾಗುತ್ತದೆ.

ರಕ್ಷಣಾ ಸಚಿವಾಲಯವು ಮೇ 14 ರ ಬುಧವಾರ ಹೊರಡಿಸಿದ ಅಧಿಸೂಚನೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ರಕ್ಷಣಾ ಸಚಿವಾಲಯದ ಈ ಅಧಿಸೂಚನೆಯ ಪ್ರಕಾರ, ರಾಷ್ಟ್ರಪತಿಗಳು ಪ್ರಾದೇಶಿಕ ಸೇನಾ ನಿಯಮಗಳ ಅಡಿಯಲ್ಲಿ ತಮ್ಮ ಅಧಿಕಾರವನ್ನು ಚಲಾಯಿಸಿ, ನೀರಜ್ ಚೋಪ್ರಾ ಅವರಿಗೆ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ನೀಡಿದ್ದಾರೆ. ನೀರಜ್ ಅವರ ಈ ಶ್ರೇಣಿಯು 16 ಏಪ್ರಿಲ್ 2025 ರಿಂದ ಜಾರಿಗೆ ಬಂದಿದೆ ಎಂದು ತಿಳಿಸಿದೆ.

ಸೈನ್ಯದಲ್ಲಿದ್ದಾಗ ಒಲಿಂಪಿಕ್ ಚಾಂಪಿಯನ್

ಭಾರತೀಯ ಸೇನೆಯ ರಜಪೂತ್ ರೈಫಲ್ಸ್‌ನಲ್ಲಿ ಮೊದಲು ಸುಬೇದಾರ್, ಆ ನಂತರ ಸುಬೇದಾರ್ ಮೇಜರ್ ಆಗಿದ್ದ ನೀರಜ್, ಜಾವೆಲಿನ್ ಥ್ರೋನಲ್ಲಿ ಪ್ರಪಂಚದಾದ್ಯಂತ ಸಾಧನೆ ಮಾಡುವ ಮೂಲಕ ದೇಶ ಮತ್ತು ಸೈನ್ಯಕ್ಕೆ ಕೀರ್ತಿ ತಂದಿದ್ದಾರೆ. 2016 ರಲ್ಲಿ ಸೇನೆಯಲ್ಲಿದ್ದಾಗ ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್ ಗೆದ್ದ ನೀರಜ್​ಗೆ ಅದೇ ವರ್ಷ ಸುಬೇದಾರ್ ಹುದ್ದೆಯನ್ನು ನೀಡಲಾಯಿತು. ನಂತರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ, ಅಥ್ಲೆಟಿಕ್ಸ್‌ನಲ್ಲಿ ಒಲಿಂಪಿಕ್ ಚಾಂಪಿಯನ್ ಆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಾದ ನಂತರವೇ ಅವರಿಗೆ ಬಡ್ತಿ ನೀಡಿ ಸುಬೇದಾರ್ ಮೇಜರ್ ಹುದ್ದೆ ನೀಡಲಾಯಿತು. ಆ ಬಳಿಕ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್, ಆ ನಂತರ ಡೈಮಂಡ್ ಲೀಗ್ ಪ್ರಶಸ್ತಿಯನ್ನು ಸಹ ಗೆದ್ದರು. ಕಳೆದ ವರ್ಷ ನಡೆದಿದ್ದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನೀರಜ್ ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

Neeraj Chopra: ನನಗೆ ದೇಶ ಮೊದಲು; ಅರ್ಷದ್ ನದೀಮ್​ಗೆ ಆಹ್ವಾನ ನೀಡಿದ್ದರ ಬಗ್ಗೆ ನೀರಜ್ ಸ್ಪಷ್ಟನೆ

ನೀರಜ್ ಮೊದಲಿಗರಲ್ಲ

ರಾಷ್ಟ್ರಪತಿಗಳು ಪ್ರಾದೇಶಿಕ ಸೇನೆಯಲ್ಲಿ ಕ್ರೀಡಾಪಟುವಿಗೆ ಈ ಶ್ರೇಣಿಯನ್ನು ನೀಡಿ ಗೌರವಿಸುತ್ತಿರುವುದು ಇದೇ ಮೊದಲಲ್ಲ. 1983 ರಲ್ಲಿ ಭಾರತ ಕ್ರಿಕೆಟ್ ತಂಡವನ್ನು ಮೊದಲ ವಿಶ್ವಕಪ್ ಗೆಲುವಿನತ್ತ ಮುನ್ನಡೆಸಿದ್ದ ಮಾಜಿ ನಾಯಕ ಕಪಿಲ್ ದೇವ್ ಅವರನ್ನು ಲೆಫ್ಟಿನೆಂಟ್ ಕರ್ನಲ್ ಆಗಿ ನೇಮಿಸಲಾಯಿತು. ಆ ನಂತರ 2011 ರಲ್ಲಿ, ಎಂಎಸ್ ಧೋನಿ ಮತ್ತು ಅಭಿನವ್ ಬಿಂದ್ರಾ ಕೂಡ ಈ ಗೌರವಕ್ಕೆ ಭಾಜನರಾಗಿದ್ದರು. ಧೋನಿ ನಾಯಕತ್ವದಲ್ಲಿ ಭಾರತ ವಿಶ್ವಕಪ್ ಗೆದ್ದರೆ, ಬಿಂದ್ರಾ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಆಟಗಾರರಾಗಿದ್ದರು. ಹಾಗೆಯೇ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರನ್ನು ಭಾರತೀಯ ವಾಯುಪಡೆಯು ಗೌರವ ಗ್ರೂಪ್ ಕ್ಯಾಪ್ಟನ್ ಆಗಿ ನೇಮಿಸಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:41 pm, Wed, 14 May 25