Father’s Day 2022: ನಿಂಬಿ ಹುಳಿ, ನಾಲ್ಕಾಣೆ ಮತ್ತು ವಿದುರನ ಮಾತು

Father’s Day 2022: ನಿಂಬಿ ಹುಳಿ, ನಾಲ್ಕಾಣೆ ಮತ್ತು ವಿದುರನ ಮಾತು
ನರಸಿಂಹಮೂರ್ತಿ ಪ್ಯಾಟಿ

Childhood : ‘ಏನ್ ರಾಯರ, ಇವತ್ತ ಚಿತ್ತ-ಬಕ್ಕ ಆಡಾಕ ಬಂದ್ ಬಿಟ್ಟೀರಿ?’ ಕುಹಕದಿಂದ ಕಣ್ ಹೊಡೆದ. ‘ಅದೆಲ್ಲಾ ಯಾಕ್ ಬೇಕೊ ನಿನಗ’ ಅನ್ನುತ್ತಾ ‘ಚಿತ್ತ’ ಅಂದೆ. ಕುಕ್ಕರುಗಾಲಿನ ಹನುಮ ಕೈ ಎತ್ತಿದ. ಅಲ್ಲಿ ‘ಬಕ್ಕ’ ಬಿದ್ದಿತ್ತು. ನನ್ನ ನಾಲ್ಕಾಣೆ ಹನುಮನ ಜೇಬು ಸೇರಿತ್ತು.

TV9kannada Web Team

| Edited By: ಶ್ರೀದೇವಿ ಕಳಸದ | Shridevi Kalasad

Jun 20, 2022 | 4:10 PM

Father’s Day: ‘ನಿನ್ ಕೈಗೆ ಏನಾಗ್ಯಾದೋ ನೀಚ.. ಅಷ್ಟ್ ಸಣ್ ಕೂಸ್ನಾ ಹಂಗ್ಯಾಕ ಹೊಡೀತೀಯೋ, ನಿನ್ ಕೈ ಸೇದಿ ಹೋಗಾ…’ ಅಮ್ಮ ಬೈಯುತ್ತಿದ್ದರೂ ನಾನು ಸಿಟ್ಟನ್ನು ಮಗುವಿನ ಮೇಲೆ ತೋರಿಸುತ್ತಲೇ ಇದ್ದೆ. ಸಿಟ್ಟು ಅನ್ನೋದೇ ಹಾಗೆ. ಅದು ಎಲ್ಲವನ್ನೂ ಸುಟ್ಟು ಹಾಕುತ್ತದೆ. ನಾನು ಎಷ್ಟೋ ಬಾರಿ ಇದೇ ಸಿಟ್ಟಿನಿಂದ ಸಾಕಷ್ಟು ಕಳೆದುಕೊಂಡಿದ್ದೇನೆ. ಅಂಥ ಸಿಟ್ಟಿಗೆ ಮೈಮೇಲೆ ಬಾಸುಂಡೆ ಕಾಣುವಂತೆ ಬಡಿಸಿಕೊಂಡಿದ್ದು ನನ್ನ ಮಗ. ಆಗ ಅವನ ವಯಸ್ಸು ನಾಲ್ಕು ವರ್ಷ. ‘ಇಡೀ ಊರು ಮುದ್ದು ಮಾಡೋ ಕೂಸನ್ನ ಹೊಡೀಲಿಕ್ಕೆ ನಿಂಗ ಅದೆಂಗರ ಮನಸ್ಸು ಬರ್ತಾದೋ?’ ಅಮ್ಮ ಕೂಗುತ್ತಿದ್ದುದು ನನ್ನ ಕಿವಿಗೆ ಬಿದ್ದರೂ ಮನಸ್ಸಿಗೆ ತಾಟುತ್ತಿರಲಿಲ್ಲ. ಅಷ್ಟಕ್ಕೂ ನಾನು ಮಗುವನ್ನು ಹೊಡೆಯಲು ಕಾರಣವೂ ಇಲ್ಲದಿಲ್ಲ. ಮಾಡಿದ್ದು ತಪ್ಪೆನಿಸಿದರೂ ಪದೇ ಪದೇ ತಪ್ಪನ್ನ ಸಮರ್ಥಿಸಿಕೊಳ್ಳೋ ಪ್ರಯತ್ನವನ್ನು ಮನಸ್ಸು ಮಾಡುತ್ತಲೇ ಇತ್ತು. ಬಹುಶಃ ಇದೇ ಬದುಕಿನ ಅವಿವೇಕತನವೋ ಏನೋ? ನರಸಿಂಹಮೂರ್ತಿ ಪ್ಯಾಟಿ, ಟಿವಿ9 ವಿಶೇಷ ಪ್ರತಿನಿಧಿ, ಧಾರವಾಡ (Narasimhamurty Pyati)

ಅವತ್ತು ಕೆಲಸದ ನಿಮಿತ್ತ ಮಿತ್ರರೊಬ್ಬರ ಅಂಗಡಿಗೆ ಹೋಗಿದ್ದೆ. ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಮಗನನ್ನು ಕರೆದೊಯ್ಯುವಂತೆ ರಶ್ಮಿ ಪದೇ ಪದೇ ಹೇಳಿದ್ದರಿಂದ, ಅವನನ್ನು ಕರೆದೊಯ್ದೆ. ಒಂದರ್ಧ ಗಂಟೆ ಅಂಗಡಿಯ ಮಿತ್ರನೊಂದಿಗೆ ಹರಟಿ, ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದೆ. ಮನೆಗೆ ಬಂದ ಕೂಡಲೇ ಬೈಕ್‍ನ ಬ್ಯಾಗ್‍ನ್ನು ಒಂದು ಬಾರಿ ಚೆಕ್ ಮಾಡೋ ರೂಢಿ. ಅವತ್ತು ಚೆಕ್ ಮಾಡಿದಾಗ ಅದರ ತುಂಬೆಲ್ಲಾ ರ್ಯಾಪರ್ ಕಂಡು ಬಂದಿದ್ದವು. ಅವುಗಳನ್ನು ಬ್ಯಾಗ್‍ನಿಂದ ಹೊರತೆಗೆಯುತ್ತಿದ್ದಂತೆಯೇ ಮಗ ಖುಷಿಯಿಂದ ಕುಣಿದಾಡಿದ್ದ. ಅವುಗಳನ್ನು ಬ್ಯಾಗ್‍ನಲ್ಲಿ ಹಾಕಿದ್ದು ಇವನೇ ಅಂತಾ ಊಹಿಸೋದು ನನಗೆ ತಡವಾಗಲಿಲ್ಲ. ‘ಅವನ್ನೆಲ್ಲಾ ಏಕೆ ತಂದೆ?’ ಪ್ರಶ್ನಿಸಿದೆ. ಅವನು ತನ್ನದೇ ಆದ ಭಾಷೆಯಲ್ಲಿ ಏನೇನೋ ಹೇಳಲು ಯತ್ನಿಸಿದನಾದರೂ ಸಾಧ್ಯವಾಗಲಿಲ್ಲ. ನನ್ನ ಸಿಟ್ಟನ್ನು ಅನೇಕ ಬಾರಿ ನೋಡಿದ್ದ ಅವನಿಗೆ ಉತ್ತರ ನೀಡೋದು ಕಷ್ಟವಾಗಿತ್ತು. ಸಿಟ್ಟು ನೆತ್ತಿಗೇರಿತು. ಕೈಯಲ್ಲಿದ್ದ ರ್ಯಾಪರ್‍ನಿಂದ ರಪಾ ರಪಾ ಹೊಡೆಯಲು ಶುರು ಮಾಡಿದ್ದೆ. ಮನೆಯೊಳಗೆ ಕೂತಿದ್ದ ಅಮ್ಮನಿಗೆ ಮಗುವಿನ ಚೀರಾಟ ಕೇಳಿಸಿ, ಹೊರಗೆ ಓಡಿ ಬಂದಿದ್ದಳು. ಏಟಿನ ರಭಸ ಅದೆಷ್ಟಿತ್ತೆಂದರೆ, ಮಗುವಿನ ತೊಡೆ ಮತ್ತು ಬೆನ್ನ ಮೇಲೆ ಬಾಸುಂಡೆಗಳು ಊದಿಕೊಂಡಿದ್ದವು. ಮೊಮ್ಮಗನನ್ನು ತನ್ನ ತೋಳಿನಲ್ಲಿ ಬರಸೆಳೆದು ಬಿಗಿದಪ್ಪಿಕೊಂಡ ಅಮ್ಮ, ಕಣ್ತುಂಬಾ ನೀರು ತಂದಿದ್ದಳು.

ಅಷ್ಟಕ್ಕೂ ಆ ಮಗು ಮಾಡಿದ ತಪ್ಪಾದರೂ ಏನು? ಅಂತಾ ಕೂಗಾಡತೊಡಗಿದಳು. ನಾನು ಅವನ ‘ಕಳ್ಳತನ’ವನ್ನು ವಿವರಿಸಿದ್ದೆ. ಅಂಗಡಿಯಲ್ಲಿ ಮಾತನಾಡುತ್ತಾ ಕೂತಾಗ, ಅವನಿಗೆ ಕುತೂಹಲವೆನ್ನಿಸಿದ್ದ ಬಣ್ಣ ಬಣ್ಣದ ರ್ಯಾಪರ್‍ಗಳನ್ನು ತೆಗೆದುಕೊಂಡು ಒಂದೊಂದಾಗಿ ಬೈಕ್‍ನ ಬ್ಯಾಗ್‍ನಲ್ಲಿಟ್ಟಿದ್ದ. ಮುಂಚೆಯಿಂದಲೂ ಕಾರ್ಟೂನ್ ಚಾನೆಲ್‍ಗಳನ್ನು ನೋಡುತ್ತಾ ಬೆಳೆದ ಅವನಿಗೆ ಫೈಟಿಂಗ್ ಅಂದರೆ ಭಾರೀ ಖುಷಿ. ಕೈಯಲ್ಲಿ ಕಟ್ಟಿಗೆಯ ತುಂಡನ್ನೋ, ಪೈಪಿನ ತುಂಡನ್ನೋ ಹಿಡಿದುಕೊಂಡು ಯುದ್ಧವನ್ನು ತಾನೊಬ್ಬನೇ ಮಾಡೋದೂ ಕೂಡ ಅವನಿಗೆ ಇಷ್ಟವಾದ ಆಟ. ಕಟ್ಟಿಗೆಯ ಥರದ ಯಾವುದೇ ವಸ್ತು ಕಂಡರೂ ಅವುಗಳನ್ನು ತೆಗೆದುಕೊಂಡು ಬರೋದು ಅವನಿಗೆ ಇಷ್ಟ. ಹೀಗಾಗಿ ರ್ಯಾಪರ್‍ಗಳು ಛೋಟಾ ಭೀಮ್‍ನ ಖಡ್ಗದಂತೆ ಕಂಡಿದ್ದರಿಂದ ಅವನು ‘ಕಳ್ಳತನ’ ಮಾಡಿದ್ದ.

ನಾನು ಅಷ್ಟಕ್ಕೇ ಬಿಡಲಿಲ್ಲ. ಎಲ್ಲ ರ್ಯಾಪರ್‍ಗಳನ್ನು ಅವನ ಕೈಯಿಂದಲೇ ಮತ್ತೆ ಬೈಕ್‍ನ ಬ್ಯಾಗ್‍ಗೆ ತುಂಬಿಸಿ, ಅವನನ್ನು ಮುಂದೆ ಕೂಡಿಸಿಕೊಂಡು, ಅಂಗಡಿಯತ್ತ ಹೋದೆ. ಅದಾಗಲೇ ಅಂಗಡಿಯನ್ನು ಮುಚ್ಚುತ್ತಿದ್ದ ಮಿತ್ರ, ‘ಮತ್ತೇನಾದರೂ ಬೇಕಿತ್ತಾ ಸಾರ್?’ ಅಂದ. ‘ಇಲ್ಲ, ಒಂದು ವಸ್ತು ಹೆಚ್ಚಿಗೆ ಬಂದಿತ್ತು, ಮರಳಿಸಲು ಬಂದಿದ್ದೆ’ ಅಂತಾ ಉತ್ತರಿಸಿದೆ. ರ್ಯಾಪರ್ ಮರಳಿಸುವಂತೆ ಮಗನಿಗೆ ಸೂಚಿಸಿದೆ. ಒಂದು ಬಾರಿ ತೊಡೆಯ ಮೇಲಿನ ಬಾಸುಂಡೆಯನ್ನು ಮುಟ್ಟಿಕೊಳ್ಳುತ್ತಾ, ಮತ್ತೊಂದು ಕೈಯಿಂದ ಕಣ್ಣನ್ನು ಒರೆಸಿಕೊಳ್ಳುತ್ತಾ ನಿಂತಿದ್ದ ಅವನನ್ನು ಮತ್ತೊಮ್ಮೆ ಗದರಿದೆ. ಭಯಗೊಂಡು ಬ್ಯಾಗ್‍ನಲ್ಲಿದ್ದ ಎಲ್ಲ ರ್ಯಾಪರ್‍ಗಳನ್ನು ತೆಗೆದು ಅಂಗಡಿಯಲ್ಲಿಟ್ಟ. ಅಷ್ಟೊತ್ತಿಗೆ ನಡೆದಿರಬಹುದಾದ ಘಟನೆ ಮಿತ್ರನಿಗೆ ಗೊತ್ತಾಗಿತ್ತು. ಕೂಡಲೇ, ‘ಅದೇನು ಸಾರ್, ಕೂಸು. ಅದಕ್ಕೆ ಇಷ್ಟೊಂದು ದೊಡ್ಡ ಶಿಕ್ಷೆಯೇ?’ ಅನ್ನುತ್ತಾ ಅವನ್ನು ಮರಳಿ ತೆಗೆದುಕೊಂಡು ಹೋಗುವಂತೆ ಹೇಳಿದ. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನಾನು, ‘ನಿಮಗೂ ಇದಕ್ಕೂ ಸಂಬಂಧವೇ ಇಲ್ಲ, ನೀವು ಸುಮ್ಮನಿರಿ’ ಅಂತಾ ಗದರಿದೆ. ನನ್ನ ಸಿಟ್ಟಿನ ವರಸೆ ನೋಡಿದ ಅವರು ಹಣೆ ಹಣೆ ಜಜ್ಜಿಕೊಂಡು ಸುಮ್ಮನಾದರು. ಕೊನೆಗೂ ಮಗನ ಕೈಯಿಂದ ಅಂಗಡಿಯವರಿಗೆ ‘ಸ್ಸಾರಿ’ ಕೇಳಿಸಿ, ಅವನನ್ನು ಶಿಕ್ಷಿಸೋದರ ಜೊತೆಗೆ ನಾನು ಸಮಾಧಾನ ಪಟ್ಟಿದ್ದೆ.

ಇದನ್ನೂ ಓದಿ : New Book : ಅಚ್ಚಿಗೂ ಮೊದಲು : ‘ಕೃಷ್ಣಾಚಾರ್ ಆ್ಯಟ್ ಕಿಷ್ಕಿಂದಾ ಬಾರ್‘ ನರಸಿಂಹಮೂರ್ತಿ ಪ್ಯಾಟಿಯವರ ಪ್ರಬಂಧಗಳು ಸದ್ಯದಲ್ಲೇ ನಿಮ್ಮ ಓದಿಗೆ

ಮನೆಗೆ ಬರುತ್ತಲೇ ಅವನಮ್ಮ ಮತ್ತು ನಮ್ಮಮ್ಮನ ಅಳು ಕಣ್ಣಿಗೆ ಬಿದ್ದಿತ್ತು. ಮಗು ಓಡುತ್ತಲೇ ತಾಯಿಯನ್ನು ಅಪ್ಪಿ ಅತ್ತಿತ್ತು. ಅದ್ಯಾಕೋ ಅವತ್ತು ಊಟ ಮಾಡೋ ಮನಸ್ಸಾಗದೇ ಹಾಗೆಯೇ ಮಲಗಿದ್ದೆ. ರಾತ್ರಿಯಿಡೀ ಮಗನ ‘ಕಳ್ಳತನ’ ಹಾಗೂ ನಾನು ನೀಡಿದ ಶಿಕ್ಷೆಯದ್ದೇ ಕನವರಿಕೆ. ಬೆಳಗಿನವರೆಗೂ ನಿದ್ದೆ ಹತ್ತಲೇ ಇಲ್ಲ. ಬೆಳಗಿನ ಜಾವ ನಿದ್ದೆ ಹತ್ತಿತಾದರೂ ಇದೇ ರೀತಿ ನಾನು ಸಣ್ಣವನಿದ್ದಾಗ ‘ಕಳ್ಳತನ’ ಮಾಡಿದಾಗ ಅಪ್ಪ ನೀಡಿದ್ದ ಶಿಕ್ಷೆಯ ನೆನಪಾಗಿ ಎಚ್ಚರವಾಯಿತು. ಮೈ ಬೆವೆತು ಹೋಗಿತ್ತು.

ನಾನಾಗ ಮೂರನೇ ತರಗತಿಯಲ್ಲಿ ಓದುತ್ತಿದ್ದೆ. ಶನಿವಾರ ಬಂದರೆ ಸಾಕು, ಶಾಲೆಯಿಂದ ಬಂದವನೇ ಊಟ ಮಾಡಿ, ಗೆಳೆಯರೊಂದಿಗೆ ಹೊರ ಬಿದ್ದರೆ ಮತ್ತೆ ಮನೆ ಸೇರೋದು ರಾತ್ರಿ ಹೊತ್ತಿಗೆ. ಇಂಥದ್ದೇ ಒಂದು ಶನಿವಾರ. ಮಧ್ಯಾಹ್ನದ ಹೊತ್ತು. ನಮ್ಮೂರಿನ ಮಧ್ಯಭಾಗದಲ್ಲಿರೋ ಪಾನ್‍ಶಾಪ್‍ವೊಂದರ ಬಳಿ ನಾವು ಮೂವರು ಮಿತ್ರರು ಹೋದೆವು. ಮೂವರ ಪೈಕಿ ರಾಜಾ ಅನ್ನೋ ಗೆಳೆಯನ ಮಾವನ ಅಂಗಡಿ ಅದಾಗಿತ್ತು. ಎಲ್ಲರೂ ಮಾತಾಡುತ್ತಾ ಅಂಗಡಿ ಬಳಿ ನಿಂತಿದ್ದೆವು. ಅಂಗಡಿ ಮಾಲೀಕ ಮಾಂತೇಶ ಒಂದೇ ನಿಮಿಷ ಅಂಗಡಿ ನೋಡಿಕೊಳ್ಳಿ ಅಂತಾ ಹೊರ ಹೋದ. ಅಷ್ಟೊತ್ತಿಗೆ ರಾಜಾ ಅಂಗಡಿಯಲ್ಲಿನ ನಿಂಬಿ ಹುಳಿ ಪೆಪ್ಪರ್‍ಮೆಂಟ್ ಚೀಲಕ್ಕೆ ತೂತು ಹಾಕಿದ್ದ. ತನಗೆ ಬೇಕಾದಷ್ಟು ನಿಂಬಿಹುಳಿ ತೆಗೆದುಕೊಂಡು ಕಿಸೆಗೆ ಸೇರಿಸಿದ್ದ. ಅದೇ ರೀತಿ ಈರನೂ ಮಾಡಿದ. ನನಗೇಕೋ ಹಿಂಜರಿಕೆ ಉಂಟಾಯಿತು. ಹಾಗಂತ ನಾನು ನಿಂಬಿಹುಳಿಯ ರುಚಿಯನ್ನು ತಪ್ಪಿಸಿಕೊಳ್ಳಲು ಬಯಸಲಿಲ್ಲ. ಅವರಷ್ಟಲ್ಲದಿದ್ದರೂ ನನಗೆ ಸಾಕಾಗುವಷ್ಟು ನಿಂಬಿ ಹುಳಿ ಪೆಪ್ಪರ್‍ಮೆಂಟ್ ತೆಗೆದುಕೊಂಡು ಕಿಸೆಗೆ ಸೇರಿಸಿದೆ. ಅಷ್ಟೊತ್ತಿಗೆ ಮಾಂತೇಶ ಮರಳಿ ಬಂದ. ಏನೂ ಆಗಿಯೇ ಇಲ್ಲ ಅನ್ನುವಂತೆ ಅಲ್ಲಿಂದ ನಿಧಾನವಾಗಿ ನಾವು ಜಾಗ ಖಾಲಿ ಮಾಡಿದೆವು.

ಸಂಜೆ ಹೊತ್ತಿಗೆ ಮನೆ ಸೇರಿವಷ್ಟರಲ್ಲಿ ನನ್ನ ಕಿಸೆಯಲ್ಲಿ ಮೂರು ನಿಂಬಿ ಹುಳಿ ಉಳಿದಿದ್ದವು. ಅವುಗಳನ್ನು ಅಕ್ಕ, ಅಣ್ಣನಿಗೆ ನೀಡಿದೆ. ಅವರು ಏನೊಂದೂ ಕೇಳದೇ ತಿಂದರು. ಬಳಿಕ ಅವರಿಗೆ ಅದರ ಮೂಲದ ಬಗ್ಗೆ ಪ್ರಶ್ನೆ ಕಾಡಿತ್ತು. ಏಕೆಂದರೆ ನಾನು ಅವರಿಗೆ ಕೊಡುವಷ್ಟು ಉದಾರವಾಗಿದ್ದೇನೆ ಅಂದರೆ, ನಾನು ಸಾಕಷ್ಟು ತಿಂದ ಮೇಲಷ್ಟೇ ಅನ್ನೋದು ಅವರಿಗೆ ಗೊತ್ತಾಗಿತ್ತು. ಆ ದಿನಗಳಲ್ಲಿ ಒಂದು ನಿಂಬಿ ಹುಳಿಗೆ ಐದು ಪೈಸೆ. ಹೀಗಾಗಿ ಅವರ ಅನುಮಾನ ಮತ್ತಷ್ಟು ಹೆಚ್ಚಿತು. ಪದೇ ಪದೇ ಅವರು ನಿಂಬಿ ಹುಳಿಯ ಮೂಲವನ್ನು ಪ್ರಶ್ನಿಸಿದರು. ನಾನು ಹಾಗೂ ನನ್ನ ಗೆಳೆಯರು ಹೇಗೆಲ್ಲಾ ನಿಂಬಿ ಹುಳಿಯನ್ನು ಮಾಂತೇಶನ ಅಂಗಡಿಯಿಂದ ಕದ್ದೆವು ಅನ್ನೋದನ್ನ ಹೆಮ್ಮೆಯಿಂದ ಹೇಳಿದ್ದೆ. ಅದನ್ನು ವಿವರಿಸುವಾಗ ನನಗೇನೋ ಖುಷಿ. ಅದನ್ನು ಕೇಳುತ್ತಿದ್ದ ಅಕ್ಕ-ಅಣ್ಣನಿಗೆ ಸಿಟ್ಟು ಬಂದಿತ್ತು. ಅದನ್ನು ಗಮನಿಸಿದರೂ ನನ್ನ ಸಾಹಸದ ಮುಂದೆ ಅವರ ಸಿಟ್ಟೇನು ಮಾಡೀತು ಅಂತಾ ಹೊರಗೆ ಓಡಿ ಹೋದೆ.

ಇದನ್ನೂ ಓದಿ : Reporter‘s Diary : ‘ಪುಸ್ತಕಗಳ ಮಧ್ಯೆ ಸಿಕ್ಕ ಆ ಸ್ಟ್ಯಾಂಪ್​ಸೈಝ್ ಫೋಟೋ ಸಂದೀಪನದ್ದೇ ಆಗಿರಲಿ’

ಮರುದಿನ ಬೆಳಿಗ್ಗೆ ಎಂದಿನಂತೆಯೇ ಎದ್ದು ಎಲ್ಲರೂ ಚಹಾ ಕುಡಿದೆವು. ಆಗ ಬೆಳಿಗ್ಗೆ ಒಮ್ಮೆಯೇ ಚಹಾ ಮಾಡೋ ರೂಢಿಯಿತ್ತು. ಏಕೆಂದರೆ ಮನೆಯಲ್ಲಿರೋ ಎಲ್ಲರಿಗೂ ಪ್ರತ್ಯೇಕವಾಗಿ ಚಹಾ ಮಾಡುವಷ್ಟು ಆರ್ಥಿಕ ಶಕ್ತಿ ಇರಲಿಲ್ಲ. ಅಪ್ಪ ಪ್ರೈಮರಿ ಸ್ಕೂಲ್ ಮೇಷ್ಟ್ರು. ಬರೋ ಸಂಬಳದಲ್ಲಿಯೇ ನಾಲ್ಕು ಜನ ಮಕ್ಕಳನ್ನು ಸಾಕಬೇಕು. ಅವರ ಬಟ್ಟೆ, ಪುಸ್ತಕ ಹಾಗೂ ಇನ್ನಿತರ ಖರ್ಚುಗಳನ್ನು ನೀಗಿಸಬೇಕಿತ್ತು. ಹೀಗಾಗಿ ಮುಂಜಾನೆಯೊಮ್ಮೆ ಸಂಜೆಗೊಮ್ಮೆ ಚಹಾ ಮಾಡಲಾಗುತ್ತಿತ್ತು. ಅಂತೆಯೇ ಎಲ್ಲರೂ ಸೇರಿ ಒಮ್ಮೆಲೇ ಚಹಾ ಕುಡಿಯೋದೂ ಕೂಡ ರೂಢಿಯಾಗಿತ್ತು. ಚಹಾ ಸೇವನೆಯ ಬಳಿಕ ಅಪ್ಪ ತನ್ನ ಕಿಸೆಯಲ್ಲಿನ ನಾಲ್ಕಾಣೆ ತೆಗೆದುಕೊಂಡು ಬರುವಂತೆ ಸೂಚಿಸಿದರು. ಅಂಗಡಿಗೆ ಹೋಗಿ ಏನನ್ನೋ ತರಲು ಅವರು ಹೇಳಬಹುದು ಅಂತಾ ನಾನಂದುಕೊಂಡಿದ್ದೆ. ಆದರೆ ನನ್ನ ಊಹೆ ತಪ್ಪಾಗಿತ್ತು. ನನ್ನೊಡನೆ ಬಾ ಅನ್ನುವಂತೆ ನೋಡಿ, ಹೊರಗೆ ಹೊರಟರು. ಅವರು ಮುಂದೆ ಮುಂದೆ, ನಾನು ಹಿಂಬಾಲಿಸಿದೆ. ಊರಿನ ಮುಖ್ಯ ರಸ್ತೆಗೆ ಬರೋ ಹೊತ್ತಿಗೆ ನನಗೆ ವಿಷಯದ ಅರಿವಾಗಿತ್ತು. ಕಣ್ಣು ತುಂಬಿ ಬಂದಿತ್ತು. ಮನೆಯಲ್ಲಿ ನಡೆದಿರಬಹುದಾದ ಘಟನೆಯನ್ನು ಊಹಿಸಿಕೊಂಡೆ. ನಾನು ತಂದಿದ್ದ ನಿಂಬಿ ಹುಳಿ ಬಗ್ಗೆ ಅಪ್ಪನಿಗೆ ಅಕ್ಕ-ಅಣ್ಣ ದೂರು ನೀಡಿದ್ದರು. ಅದರ ಪರಿಣಾಮವೇ ಇದು ಅನ್ನೋದು ಗೊತ್ತಾಗಿ ಹೋಗಿತ್ತು.

ನಾವು ಮಾಂತೇಶನ ಅಂಗಡಿಗೆ ಹೋಗೋ ಹೊತ್ತಿಗಾಗಲೇ ಬೆಳಿಗ್ಗೆ ಎಂಟರ ಸಮಯ. ಅಷ್ಟೊತ್ತಿಗಾಗಲೇ ಅಂಗಡಿ ಮುಂದೆ ಹತ್ತಾರು ಜನರು ನಿಂತಿದ್ದರು. ಅದರಲ್ಲಿ ಹೆಚ್ಚಿನವರು ಶಿಕ್ಷಕರೇ ಆಗಿದ್ದರು. ಅವತ್ತು ರವಿವಾರ ಬೇರೆ. ಊರಿನ ಬಹುತೇಕ ಶಿಕ್ಷಕರು ರಜೆ ಅನ್ನೋ ಕಾರಣಕ್ಕೆ ಬೆಳಿಗ್ಗೆಯೇ ಬಂದು ಅಂಗಡಿ ಮುಂದೆ ನಿಂತು ಹರಟುತ್ತಿದ್ದರು. ಅವರನ್ನು ನೋಡುತ್ತಲೇ ನನ್ನ ಕಾಲುಗಳು ಥರ ಥರ ನಡುಗಿದವು. ನಿಂಬಿ ಹುಳಿ ರಾದ್ಧಾಂತ ಅವರಿಗೂ ಗೊತ್ತಾದರೆ ಗತಿ ಏನು? ಚಿಂತೆ ಹೆಚ್ಚಾಯಿತು. ಅಲ್ಲಿದ್ದ ಒಂದಿಬ್ಬರ ಮಕ್ಕಳು ನನ್ನ ಗೆಳೆಯರೇ ಆಗಿದ್ದರು. ಆ ವಿಷಯವನ್ನು ಮನೆಗೆ ಹೋಗಿ ಹೇಳಿ, ಅವರ ಮಕ್ಕಳು ನಾಳೆ ಶಾಲೆಯಲ್ಲಿ ನನಗೆ ಕಳ್ಳ ಅಂದರೆ ಹೇಗೆ ಅನ್ನೋದನ್ನು ನೆನೆದು ನಾನು ಅಳಲು ಶುರು ಮಾಡಿದ್ದೆ. ಆದರೆ ಇದ್ಯಾವುದರ ಪರಿಯೇ ಇಲ್ಲದಂತೆ ಅಪ್ಪ ಸೀದಾ ಹೋಗಿ ಮಾಂತೇಶನ ಅಂಗಡಿ ಮುಂದೆ ನಿಂತರು. ಮಾಂತೇಶ ಎಂದಿನಂತೆ ಅಪ್ಪನನ್ನು ನೋಡಿ ನಕ್ಕ. ಅದಕ್ಕೆ ಪ್ರತಿಕ್ರಿಯಿಸದ ಅಪ್ಪ, ನನ್ನ ಕಡೆ ನೋಡಿ, ಹಣವನ್ನು ನೀಡುವಂತೆ ಕಣ್ಣಲ್ಲೇ ಹೇಳಿದ್ದ.

ಕೈಯಲ್ಲಿ ಬಿಗಿಯಾಗಿ ಹಿಡಿದಿದ್ದ ನಾಲ್ಕಾಣೆಯನ್ನು ಪೆಪ್ಪರ್‍ಮೆಂಟ್ ಡಬ್ಬಿಯ ಮುಚ್ಚಳದ ಮೇಲಿಟ್ಟೆ. ಏನು ಬೇಕು? ಅನ್ನುವಂತೆ ಮಾಂತೇಶ ನನ್ನನ್ನ ನೋಡಿದ. ಆ ಕ್ಷಣಕ್ಕೆ ಕಣ್ಣೀರು ಧಾರಾಕಾರವಾಗಿ ಸುರಿಯತೊಡಗಿತ್ತು. ಆದರೆ ಇದೆಲ್ಲ ಮಾಂತೇಶನಿಗೆ ಹೇಗೆ ಅರ್ಥವಾಗಬೇಕು? ಅಪ್ಪ ಘಟನೆಯನ್ನು ವಿವರಿಸುವಂತೆ ನನಗೇ ಸೂಚಿಸಿದ್ದರು. ಅಷ್ಟೊತ್ತಿಗೆ ನಾನು ಊಹಿಸಿದಂತೆಯೇ ಆಯಿತು. ಎಲ್ಲ ಮೇಷ್ಟ್ರು ನನ್ನ ಕಡೆಗೆ ನೋಡಿ, ಏನು ಅಂತಾ ತಮ್ಮ ತಮ್ಮಲ್ಲೇ ಮಾತನಾಡತೊಡಗಿದರು. ಕೂಡಲೇ ಅಪ್ಪ ನಡೆದದ್ದನ್ನು ಹೇಳು ಅಂತ ಕಣ್ಣಲ್ಲೇ ಸನ್ನೆ ಮೂಲಕ ಆದೇಶಿಸಿದ್ದರು. ನಾನು ಅಳುವಿನ ಮಧ್ಯದಲ್ಲೇ ತಡವರಿಸುತ್ತಾ ನಡೆದಿದ್ದನ್ನೆಲ್ಲ ವಿವರಿಸಿದೆ. ಅದನ್ನು ಕೇಳುತ್ತಲೇ ಮಾಂತೇಶ ಜೋರಾಗಿ ನಗುತ್ತಾ, ‘ಇಷ್ಟೇ ಏನೋ ಶಾಣ್ಯಾ, ಸಾಕ್ ಹೋಗು’ ಅನ್ನುವಂತೆ ನಾಲ್ಕಾಣೆ ಕೈಯಲ್ಲಿಟ್ಟು ನನ್ನನ್ನು ಅಂಗಡಿಯಿಂದ ದಬ್ಬಿದ. ಆದರೆ ಅಪ್ಪ ಬಿಡಬೇಕಲ್ಲ? ಅಪ್ಪನ ಕಡೆಗೆ ನೋಡಿದೆ. ಆತನ ನಿರ್ಧಾರವೇನಿತ್ತು ಅನ್ನೋದು ಮತ್ತೊಮ್ಮೆ ಸ್ಪಷ್ಟವಾಯಿತು. ನಾಲ್ಕಾಣೆಯನ್ನು ಡಬ್ಬಿಯ ಮುಚ್ಚಳದ ಮೇಲಿಟ್ಟು, ‘ತಪ್ಪಾತು’ ಅಂತಾ ಹೇಳಿ, ಕಣ್ಣೊರೆಸುತ್ತಾ ಓಡಿದ್ದೆ. ಈ ಸಂದರ್ಭದಲ್ಲಿ ಮಾಂತೇಶ ಸೇರಿದಂತೆ ಅಲ್ಲಿದ್ದವರೆಲ್ಲಾ ಅಪ್ಪನನ್ನು ಬೈಯ್ಯುತ್ತಿದ್ದರು. ಅದು ನನಗೆ ಕೇಳಿಸುತ್ತಿತ್ತು. ಆದರೆ ನಿಂತು ಅದನ್ನು ಕೇಳಿಸಿಕೊಳ್ಳುವಷ್ಟು ಧೈರ್ಯ ಬರಲಿಲ್ಲ್ಲ. ಅದೇ ಕೊನೆ, ಯಾವತ್ತೂ ನನ್ನದಲ್ಲದ ವಸ್ತುವನ್ನಾಗಲೀ, ಹಣವನ್ನಾಗಲೀ ಮುಟ್ಟಲಿಲ್ಲ ಅಂತಾ ಹೇಳಲು ಇವತ್ತು ನನಗೆ ಹೆಮ್ಮೆಯೆನಿಸುತ್ತದೆ.

ಎರಡೂ ಘಟನೆಗಳನ್ನು ನೆನೆದಾಗ ನನ್ನ ಮೇಲೆಯೇ ನನಗೆ ಒಮ್ಮೊಮ್ಮೆ ಅಸಹ್ಯ ಹುಟ್ಟುತ್ತದೆ. ನಮಗೆ ಗೊತ್ತಿಲ್ಲದೇ ಮಾಡಿದ ತಪ್ಪು ತಪ್ಪಲ್ಲಾ ಅನ್ನುತ್ತಿದ್ದ ಅಮ್ಮನ ಮಾತು ನೆನಪಿಗೆ ಬರುತ್ತದೆ. ಅವತ್ತು ನಾನು ನನ್ನ ಮಗನಿಗೆ ಮಾಡಿದ ಹಾಗೆಯೇ ಅಪ್ಪನೂ ನನಗೆ ಮಾಡಬಹುದಿತ್ತಿಲ್ಲವೇ? ಆದರೆ ಆತ ಹಾಗೆ ಮಾಡದೇ ಇದ್ದದ್ದೇ ಇವತ್ತು ನನ್ನ ಬಗ್ಗೆ ನಾನೇ ಹೆಮ್ಮೆಪಡುವಂತೆ ಮಾಡಿದೆ. ಈ ಸಂದರ್ಭದಲ್ಲಿ ಮತ್ತೊಂದು ವಿಷಯವನ್ನೂ ನಾನಿಲ್ಲಿ ಹೇಳಲೇಬೇಕಾಗಿದೆ.

ಇದನ್ನೂ ಓದಿ : Father’s Day 2021: ನೀನಂದ್ರೆ ನನಗೆ ಅಚ್ಚು ಮೆಚ್ಚಪ್ಪಾ.. ಈ ಬಾರಿ ಅಪ್ಪನಿಗಾಗಿ ಕೊಡುವ ಉಡುಗೊರೆ ವಿಶೇಷವಾಗಿರಲಿ

ಅದಾಗಲೇ ಹೇಳಿದಂತೆ ನಮ್ಮದು ಕನ್ನಡ ಶಾಲೆ ಮಾಸ್ತರ್ ಮನೆ. ಕನ್ನಡ ಸಿನಿಮಾದಲ್ಲಿನ ಅಶ್ವಥ್ ಮನೆ ಥರಾ ಬಡತನ ಇರದಿದ್ದರೂ ಬೇಕಾದ್ದನ್ನು ಕೂಡಲೇ ಪಡೆಯುವಷ್ಟು ಸ್ಥಿತಿವಂತಿಕೆ ಇರಲಿಲ್ಲ. ಮನೆಯಲ್ಲಿ ಐದ್ಹತ್ತು ಪೈಸೆ ಕೇಳಲೂ ನಮಗೆ ಸಂಕೋಚ. ನಮ್ಮ ಕುಟುಂಬಕ್ಕಿದ್ದ ಆದಾಯವೆಂದರೆ ಅಪ್ಪನ ಸಂಬಳ ಅಷ್ಟೇ. ಅದೂ ಹಳ್ಳಿಯಲ್ಲಿ ಮೇಷ್ಟ್ರಾಗಿದ್ದರಿಂದ ತಿಂಗಳು ಕಳೆದ ಎಷ್ಟೋ ದಿನಗಳ ಬಳಿಕ ಪಗಾರ ಬರುತ್ತಿತ್ತು. ಸಂಬಳ ಬಂದ ದಿನ ಈಶಪ್ಪನ ಚಹಾದಂಗಡಿಯ ಮಂಡಾಳು, ಮಿರ್ಚಿ ತರಿಸಿ ಅಪ್ಪ ಎಲ್ಲರನ್ನೂ ಖುಷಿಪಡಿಸುತ್ತಿದ್ದ. ಇನ್ನು ತಿಂಗಳ ಕೊನೆಯ ವಾರವಂತೂ ಮನೆಯಲ್ಲಿ ಏನಾದರೂ ಕೇಳಲು ನಮಗೆ ಹಿಂಜರಿಕೆ. ಮನೆಯ ಬಹುತೇಕ ವ್ಯವಹಾರಗಳನ್ನು ಅಮ್ಮ ನಿರ್ವಹಿಸುತ್ತಿದ್ದಳು. ಆಕೆಯದ್ದು ಚೊಕ್ಕ ಸಂಸಾರದ ಗುಟ್ಟು. ಇಂಥ ವೇಳೆಯಲ್ಲಿ ಒಂದು ದಿನ ನಾನು ನಿಂಬಿ ಹುಳಿ ಪೆಪ್ಪರ್‍ಮೆಂಟ್ ತಿನ್ನಲು ನಾಲ್ಕಾಣೆ ಕೊಡುವಂತೆ ದುಂಬಾಲು ಬಿದ್ದೆ. ಮೊದಲೇ ತಿಂಗಳ ಕೊನೆ. ಅಂಥದ್ದರಲ್ಲಿ ನಾಲ್ಕಾಣೆಯನ್ನು ಅಮ್ಮ ಅದೆಲ್ಲಿಂದ ತರಬೇಕು? ಎರಡು ಗಂಟೆ ಕಿರಿಕಿರಿ ಮಾಡಿದ್ದಕ್ಕೆ ಎಲ್ಲೆಲ್ಲೋ ಹುಡುಕಾಡಿ ಸ್ಟೀಲ್ ಡಬ್ಬಿಯ ಕೆಳಭಾಗದಲ್ಲಿಟ್ಟಿದ್ದ ನಾಲ್ಕಾಣೆಯನ್ನು ತೆಗೆದುಕೊಟ್ಟಳು.

ಸಂಜೆ ಏಳರ ಸಮಯ. ನಾಲ್ಕಾಣೆ ತೆಗೆದುಕೊಂಡು ಮನೆಯಿಂದ ಹೊರಬಿದ್ದೆ. ಎಲ್ಲಾದರೂ ಕಳೆದು ಹೋದರೆ ಹೇಗೆ ಅನ್ನೋ ಆತಂಕದಿಂದ ಅದನ್ನು ಮತ್ತೆ ಮತ್ತೆ ಮುಟ್ಟಿ ನೋಡಿಕೊಳ್ಳುತ್ತಿದ್ದೆ. ಅಂಗಡಿಗೆ ಹೋಗುವ ದಾರಿಯ ಮಧ್ಯೆ ಕೆಲ ಹುಡುಗರ ಗುಂಪು ಕಣ್ಣಿಗೆ ಬಿತ್ತು. ಅದು ದೀಪಾವಳಿ ಸಮಯ. ಅಲ್ಲಿ ಚಿತ್ತ-ಬಕ್ಕ ಆಡುತ್ತಿದ್ದಾರೆ ಅನ್ನೋದು ಅರ್ಥವಾಯಿತು. ಈಗಿನ ಕಾನ್ವೆಂಟ್ ಮಕ್ಕಳು ಹೆಡ್ ಅಂಡ್ ಟೇಲ್ ಅನ್ನೋ ಹಾಗೆ ಅದಕ್ಕೆ ನಾವು ಚಿತ್ತ-ಬಕ್ಕ ಅನ್ನುತ್ತಿದ್ದೆವು. ನನ್ನದೇ ವಯಸ್ಸಿನ ಅನೇಕರು ಐದು, ಹತ್ತು, ಇಪ್ಪತ್ತು ಪೈಸೆ, ನಾಲ್ಕಾಣೆ, ಎಂಟಾಣೆ ನಾಣ್ಯಗಳನ್ನು ಹಿಡಿದು ಆಟದಲ್ಲಿ ಮಗ್ನರಾಗಿದ್ದರು. ನಾನು ಹೋಗಿ ಗುಂಪೊಂದರ ಬಳಿ ನಿಂತೆ. ಅದರಲ್ಲಿ ಕುಕ್ಕರುಗಾಲಿನಲ್ಲಿ ಕೂತಿದ್ದ ಕುಂಟ ಹನುಮ ಎಲ್ಲರ ದುಡ್ಡನ್ನು ದೋಚುತ್ತಿದ್ದ. ನನಗೂ ಹನುಮನಂತೆಯೇ ಗೆಲ್ಲೋ ಆಸೆ ಬಂತು.

ನಾಲ್ಕಾಣೆಯನ್ನು ಕಟ್ಟಿ, ಗೆದ್ದರೆ? ಎಂಟಾಣೆಯಾಗುತ್ತೆ. ಮತ್ತೆ ಅದನ್ನೇ ಕಟ್ಟಿದರೆ? ಬರೋಬ್ಬರಿ ಒಂದು ರೂಪಾಯಿ. ಅದರಲ್ಲಿ ಎಷ್ಟು ನಿಂಬಿ ಹುಳಿ ಬರಬಹುದು ಅಂತಾ ಲೆಕ್ಕ ಹಾಕಿ, ಗುಂಪಿನ ಮೇಲಿನಿಂದ ನಾಲ್ಕಾಣೆ ಎಸೆದೆ. ಅದುವರೆಗೂ ಕೈಯಲ್ಲಿ ಗಟ್ಟಿಯಾಗಿ ಹಿಡಿದಿದ್ದರಿಂದ ನಾಣ್ಯ ನೀರೊಡೆದಿತ್ತು. ಹಸಿಯಾಗಿದ್ದ ಅದನ್ನು ಎಸೆಯುತ್ತಿದ್ದಂತೆ ಮಣ್ಣು ಹತ್ತಿತು. ಅದನ್ನ ಎಡಗೈಯಿಂದ ಒರೆಸಿದ ಹನುಮ ವಿಕಾರವಾಗಿ ನಕ್ಕ. ‘ಏನ್ ರಾಯರ, ಇವತ್ತ ಚಿತ್ತ-ಬಕ್ಕ ಆಡಾಕ ಬಂದ್ ಬಿಟ್ಟೀರಿ?’ ಕುಹಕದಿಂದ ಕಣ್ ಹೊಡೆದ. ‘ಅದೆಲ್ಲಾ ಯಾಕ್ ಬೇಕೊ ನಿನಗ’ ಅನ್ನುತ್ತಾ ‘ಚಿತ್ತ’ ಅಂದೆ. ಕುಕ್ಕರುಗಾಲಿನ ಹನುಮ ಕೈ ಎತ್ತಿದ. ಅಲ್ಲಿ ‘ಬಕ್ಕ’ ಬಿದ್ದಿತ್ತು. ನನ್ನ ನಾಲ್ಕಾಣೆ ಹನುಮನ ಜೇಬು ಸೇರಿತ್ತು. ಒಂದು ಕ್ಷಣ ಕಣ್ಣಿಗೆ ಮಂಜು ಆವರಿಸಿದಂತಾಯಿತು. ಕುಂಟ ಹನುಮ ‘ರಾಯರ ರೊಕ್ಕ ಪುಂಗಿ ಆತು, ರಾಯರ್ರೇ ಮನೀಗೆ ಹೋಗಿ ಗಂಟಿ ಬಾರಸ್ರೀ’ ಅಂತಾ ಹೆಬ್ಬೆರಳು ಮೇಲೆ ಮಾಡಿದ್ದ ಮುಷ್ಠಿಯಿಂದ ಕೈ ಅಲ್ಲಾಡಿಸಿ ಹಲ್ಲು ಕಿರಿದ. ನಾಲ್ಕಾಣೆ ಹೋಗಿದ್ದಕ್ಕೋ ಅಥವಾ ಅವನು ನಕ್ಕಿದ್ದಕ್ಕೋ ಗೊತ್ತಿಲ್ಲ, ಕಣ್ಣಲ್ಲಿ ನೀರು ಬಂತು. ಮನೆಯಲ್ಲಿ ಕಾಡಿ, ಬೇಡಿ ತಂದಿದ್ದ ನಾಲ್ಕಾಣೆ ಹನುಮನ ಪಾಲಾಗಿತ್ತು. ನಮ್ಮನೆಗೆ ಹೋಗಿ ಹನುಮ ನನ್ನ ನಾಲ್ಕಾಣೆ ಕಿತ್ಕೊಂಡ ಅಂತ ಹೇಳಿ, ಅದನ್ನ ಮರಳಿ ಪಡೆಯಬೇಕೆಂದು ಮನಸ್ಸಾಯಿತು. ಮನೆಯತ್ತ ಓಡಿದೆ. ಹೊರಗೆ ಕಟ್ಟೆಯ ಮೇಲೆ ಕೂತಿದ್ದ ಅಮ್ಮ, ‘ಏನಪ್ಪಾ ನಿಂಬಿ ಹುಳಿ ತಿಂದು ಬಂದ್ಯಾ? ತೃಪ್ತಿ ಆತಾ?’ ಅಂದಳು. ಆಕೆಯ ಮುಂದೆ ಮತ್ತೇನೂ ಮಾತಾಡಲು ಹೊಳೆಯಲಿಲ್ಲ. ಅದು ಕೇಳಿಸಿದರೂ ಕೇಳದಂತೆ ಒಳಗೆ ಓಡಿ ಹೋದೆ. ಅವತ್ತೇ ಕೊನೆ. ನಾನು ಯಾವತ್ತೂ ಇಂಥ ಜೂಜಿನಲ್ಲಿ ಇದುವರೆಗೂ ಒಂದು ಪೈಸೆಯನ್ನೂ ಹಚ್ಚಿಲ್ಲ.

ಇದನ್ನ ಓದಿ : Father‘s Day 2021: ತಂದೆ ನೆನೆದು ಭಾವುಕರಾದ ಸಚಿನ್; ವಿಶೇಷ ದಿನದಂದು ಕ್ರಿಕೆಟ್ ದೇವರು ಹಂಚಿಕೊಂಡ್ರು ಭಾವನಾತ್ಮಕ ವಿಡಿಯೋ 

ಅದಾಗಿ ವರ್ಷಗಳೇ ಉರುಳಿವೆ. ನನ್ನ ಅನೇಕ ಮಿತ್ರರು ರಾತ್ರಿಯಿಡೀ ಕೂತು ರಮ್ಮಿ, ಅಂದರ್-ಬಾಹರ್ ಆಡುತ್ತಾರೆ. ದೀಪಾವಳಿ ಬಂದರಂತೂ ಲಕ್ಷಾಂತರ ರೂಪಾಯಿ ಪಣಕ್ಕಿಡುತ್ತಾರೆ. ಎಷ್ಟೋ ಬಾರಿ ಲಕ್ಷ ಲಕ್ಷ ಗೆದ್ದಿದ್ದನ್ನೂ ನೋಡಿದ್ದೇನೆ. ಆ ವೇಳೆ ಆಡಲು ಬರುವಂತೆ ಒತ್ತಾಯಿಸಿದಾಗ, ನನ್ನ ಬಳಿ ನಾನೇ ದುಡಿದಿರೋ ಹಣವಿದ್ದರೂ, ಅದು ಅಪ್ಪ-ಅಮ್ಮನ ಹಣದಂತೆ ಭಾಸವಾಗುತ್ತದೆ. ಅಮ್ಮ ‘ನಿಂಬಿ ಹುಳಿ ತಿಂದೇನೋ?’ ಅಂದಂತಾಗಿ ಅಲ್ಲಿಂದ ಎದ್ದು ಮನೆಗೆ ಬಂದು ಬಿಡುತ್ತೇನೆ. ಆಗ ಜೂಜಿಗಿಂತ ದೊಡ್ಡ ಚಟವಿಲ್ಲ ಅನ್ನೋ ವಿದುರನ ಮಾತು ನೆನಪಿಗೆ ಬರುತ್ತೆ.

ಇದನ್ನೂ ಓದಿ

Follow us on

Related Stories

Most Read Stories

Click on your DTH Provider to Add TV9 Kannada