Father’s Day 2021: ನೀನಂದ್ರೆ ನನಗೆ ಅಚ್ಚು ಮೆಚ್ಚಪ್ಪಾ.. ಈ ಬಾರಿ ಅಪ್ಪನಿಗಾಗಿ ಕೊಡುವ ಉಡುಗೊರೆ ವಿಶೇಷವಾಗಿರಲಿ

ಅಪ್ಪಂದಿರ ದಿನ 2021: ಚಿಕ್ಕವರಿದ್ದಾಗ ಆ ಪುಟ್ಟ ಕಿರುಬೆರಳ ಹಿಡಿದು ಹೆಜ್ಜೆ ಇಡಲು ಕಲಿಸಿದ. ತನ್ನ ಹೆಗಲ ಮೇಲೆ ಕೂರಿಸಿಕೊಂಡು ಇಡೀ ಊರನ್ನೇ ತಿರುಗಾಡಿಸಿದ. ಕಷ್ಟ- ನೋವುಗಳನ್ನು ಆತನೊಬ್ಬನೇ ನುಂಗಿ ಪ್ರೀತಿಯನ್ನಷ್ಟೇ ಉಣ ಬಡಿಸಿದ.

Father’s Day 2021: ನೀನಂದ್ರೆ ನನಗೆ ಅಚ್ಚು ಮೆಚ್ಚಪ್ಪಾ.. ಈ ಬಾರಿ ಅಪ್ಪನಿಗಾಗಿ ಕೊಡುವ ಉಡುಗೊರೆ ವಿಶೇಷವಾಗಿರಲಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: shruti hegde

Updated on: Jun 19, 2021 | 9:48 AM

ಮಕ್ಕಳ ಬಾಯಲ್ಲಿ ಹೊರಡುವ ಅಪ್ಪಾ ಎಂಬ ಎರಡಕ್ಷರವನ್ನು ಕೇಳಲು ಅಪ್ಪ ಹಂಬಲಿಸುತ್ತಿರಬಹುದು.. ಹಳ್ಳಿಯಲ್ಲಿ ನಿಮಗಾಗಿ ಮನೆಯ ಕಟ್ಟೆಯ ಮೇಲೆ ಕಾದು ಕುಳಿತಿರಬಹದು.‌. ತೂಗಾಡುವ ಕುರ್ಚಿಯ ಮೇಲೆ ಮೀಸೆತಿರುವುತ್ತಾ ಎಲೆ, ಅಡಿಕೆ ಸುಣ್ಣ ಅಗೆಯುತ್ತಾ, ಹೆಗಲ ಮೇಲೆ ಹೊದ್ದ ಶಾಲು ಸರಿಸಿಕೊಳ್ಳುತ್ತಾ ನಿಮ್ಮ ಬರುವಿಕೆಗೇ ಕಾದಿರಬಹುದು.. ಈ ವರ್ಷ ಅಪ್ಪಂದಿರ ದಿನಾಚರಣೆಯ ಅಂಗವಾಗಿ ಏನಾದರೂ ಉಡುಗೊರೆ ಕೊಡಲು ಯೋಚಿಸಲೇ ಬೇಕಲ್ವೇ? ಅಪ್ಪ ನಿಮ್ಮಿಂದ ಅತಿಯಾಗಿ ಏನನ್ನೂ ಬಯಸುವುದಿಲ್ಲ.. ಗೌರವದಿಂದ ಮಾತನಾಡುತ್ತಾ ಆತನ ಆಕಾಂಕ್ಷೆ ಆಸೆಗೆ ಬೆಲೆಕೊಡಿ ಅಷ್ಟೆ.. ಅಪ್ಪಂದಿರ ದಿನದಂದು ಆತನಿಗಾಗಿಯೇ ಸಮಯ ಮೀಸಲಿಡಿ! ವಯಸ್ಸಿಗೆ ಮೀರಿದ ನೆರಿಗೆ ಕಂಡ ಆ ಚರ್ಮದ ಕೈಗಳ ಹಿಡಿದು ಸಾಂತ್ವನ ಹೇಳಿ.. ಅಪ್ಪನ ಮುಖದಲ್ಲಿನ ಆ ಸಮಾಧಾನದ ನಗು ಜೀವನ ಪೂರ್ತಿ ನಿಮ್ಮನ್ನು ಗೆಲ್ಲಿಸುತ್ತದೆ..‌ ಶಕ್ತಿ ತುಂಬುತ್ತದೆ.. ಮನಸ್ಸಿಗೆ ತೃಪ್ತಿ ಅನಿಸುತ್ತದೆ.. ಅಪ್ಪಾ ಐ ಲವ್ ಯು ಅಪ್ಪಾ ಎಂಬ ಕೂಗು ಸಾಕು ಅಪ್ಪನಿಗೆ ಆನಂದ ತರಿಸಲು.

ಚಿಕ್ಕವರಿದ್ದಾಗ ಆ ಪುಟ್ಟ ಕಿರುಬೆರಳ ಹಿಡಿದು ಹೆಜ್ಜೆ ಇಡಲು ಕಲಿಸಿದ. ತನ್ನ ಹೆಗಲ ಮೇಲೆ ಕೂರಿಸಿಕೊಂಡು ಇಡೀ ಊರನ್ನೇ ತಿರುಗಾಡಿಸಿದ. ಕಷ್ಟ- ನೋವುಗಳನ್ನು ಆತನೊಬ್ಬನೇ ನುಂಗಿ ಪ್ರೀತಿಯನ್ನಷ್ಟೇ ಉಣ ಬಡಿಸಿದ. ಪ್ರತೀ ಹೆಜ್ಜೆ ಇಡುವಾಗಲೂ ಜೊತೆ ಇದ್ದು ಸಂತೈಸಿದ. ನನ್ನಪ್ಪ ಅಂದ್ರೆ ಆಕಾಶ … ಅನ್ನುತ್ತಾ ಅಪ್ಪಂದಿರ ದಿನದ ಶುಭಾಶಯಗಳನ್ನು ತಿಳಿಸಿ. ಈ ವರ್ಷದ ಅಪ್ಪಂದಿರ ದಿನವನ್ನು ಜೂನ್ 20ನೇ ತಾರೀಕಿನಂದು ಆಚರಿಸಲಾಗುತ್ತಿದೆ.

ಈ ದಿನಾಚರಣೆಯ ವಿಶೇಷವಾಗಿ ನಿಮ್ಮನ್ನು ಇಷ್ಟು ವರ್ಷ ಸಾಕಿ ಸಲುಹಿದ ಅಪ್ಪನಿಗಾಗಿ ನಿಮ್ಮ ದಿನವನ್ನು ಮೀಸಲಿಡಿ.‌ ಅಪ್ಪ ಖುಷಿಯಾಗಿರುವಂತೆ ಇಡೀ ದಿನ ನಿಮ್ಮ ಸಮಯವನ್ನು ಅವರಿಗಾಗಿ ಕೊಡಿ. ಅವರು ಮನಬಿಚ್ಚಿ ಮಾತನಾಡಲು ನಿಮ್ಮ ಬರುವಿಕೆಯನ್ನೇ ಕಾಯುತ್ತಿರಬಹುದು. ಕೇಳಿದ್ದೆಲ್ಲಾ ಕೊಡಿಸಿದ ಸಾಹುಕಾರನಿಗೆ ಈ ಬಾರಿಯ ಅಪ್ಪಂದಿರ ದಿನದಂದು ಕೃತಜ್ಞತೆ ಹೇಳಲೇಬೇಕು.

ಹಾಗಂತ ಅಪ್ಪಂದಿರ ದಿನದಂದು ಅಪ್ಪ ನೆನಪಾಗುವುದು ಎಂದು ಅರ್ಥವಲ್ಲ. ವರ್ಷವಿಡಿ ಅವರ ತ್ಯಾಗ ನೆನೆದರು ಕಡಿಮೆಯೇ ಆದರೆ ಈ ದಿನದಂದು ವಿಶೇಷದ್ದೇನೋ ಒಂದು ಮಾಡುವ ಅವಕಾಶ ನಮ್ಮದು ಅಷ್ಟೇ. ಮಾತುಗಳು ಬಾರದಿದ್ದರೂ ಕಡೇ ಪಕ್ಷ ಇಂದು ಅಪ್ಪನಿಗಾಗಿ ಅಪ್ಪ ಐ ಲವ್ ಯು ಅಂದು ಬಿಡಿ ಸಾಕು! ಅದೆಷ್ಟೋ ನೋವುಗಳೆಲ್ಲ ಕರಗಿ ಬರೀ ಪ್ರೀತಿಯಷ್ಟೇ ಚಿಮ್ಮುವಂತೆ ಅಪ್ಪನ ಮನ ಅರಳುತ್ತದೆ. ಮುಖದಲ್ಲಿನ ಆ ನಗುವನ್ನು ನೋಡಿದ ಕ್ಷಣವೇ ಮನಸ್ಸಿಗೆ ತೃಪ್ತಿ ಅನಿಸುತ್ತದೆ.

ಹಗಲೆಲ್ಲಾ ಬೆವರು ಸುರಿಸಿ ದುಡಿದ ಅಪ್ಪ. ಮಕ್ಕಳಿಗೆ ಒಂದು ಹೊತ್ತು ಊಟ ನೀಡಲು ತಾನು ನೀರು ಕುಡಿದು ಜೀವಿಸಿದ. ಎದುರು ನಗುಮುಖವ ಹೊತ್ತು, ಹಿಂದಿನಿಂದ ಕಣ್ಣೀರು ಇಡುತ್ತಾ ಮಕ್ಕಳ ಭವಿಷ್ಯಕ್ಕಾಗಿ ಹಗಲಿರುಳು ದುಡಿದ. ಮಕ್ಕಳಿಗೆ ಮುಳ್ಳು ಚುಚ್ಚದಂತೆ ತಾನು ಬಾಗಿ ಬೆನ್ನಿನ ಮೇಲೆ ಕೂರಿಸಿಕೊಂಡು ಇಡೀ ಜಗತ್ತೇ ತೋರಿಸಿದ. ಪ್ರತಿ ಹಂತದಲ್ಲೂ ತಿದ್ದಿ, ಬುದ್ದಿ ಕಲಿಸಿದ್ದಾರೆ ಅಪ್ಪಾ.. ಐ ಲವ್ ಯು ಅಪ್ಪಾ..

ತಪ್ಪು ಮಾಡಿದಾಗ ಗದರಿದ.‌ ಅತ್ತಾಗ ಬಂದು ಕಣ್ಣು ವರೆಸಿ ಸಂತೈಸಿದ. ಕೋಮಲ ಮನಸಿನ ಸಾಹುಕಾರ‌ ಆತ. ಅಪ್ಪನ ಕೈಹಿಡಿದು ನಡೆದರೆ ಏನನ್ನೂ ಸಾಧಿಸುವೆನೆಂಬ ಧೈರ್ಯ. ಪ್ರತೀ ಹಂತದಲ್ಲಿಯೂ ಸ್ನೇಹಿತನಾಗಿ, ಹಿತೈಷಿಯಾಗಿ ಬೆಳೆಸಿದ. ಅಪ್ಪನ ಆ ಪ್ರೀತಿಯ ಮುಂದೇ ಯಾವುದೂ ಇಲ್ಲ.. ಆತನ ಆಸೆ ಆಕಾಂಕ್ಷೆಗಳನ್ನು ತಿಳಿಯಲು ಅಪ್ಪಂದಿರ ದಿನ ಒಂದೊಳ್ಳೆಯ ಅವಕಾಶ.‌

ಅಪ್ಪಾ ಐ ಲವ್ ಯು ಅಪ್ಪಾ..‌ಚಲನಚಿತ್ರ ಗೀತೆ ಪ್ರಸಿದ್ಧತೆ ಪಡೆದ ಗೀತೆ. ಅಪ್ಪನ ಕುರಿತಾದ ಅರ್ಥಪೂರ್ಣ ಸಾಹಿತ್ಯವನ್ನು ಒಳಗೊಂಡಿದೆ. ಎರಡೇ ಎರಡು ಸಾಲುಗಳನ್ನು ಅಪ್ಪನ ಮುಂದೆ ಹಾಡಿ, ಆಶೀರ್ವಾದ ಪಡೆದುಕೊಳ್ಳಿ.‌ ಅಪ್ಪನಿಗಾಗಿಯೇ ಈ ಹಾಡು ನಿಮ್ಮ ಧ್ವನಿಯ ಮೂಲಕ ಹೊರಡಲಿ. ಆ ಕ್ಷಣದಲ್ಲಿ ಆತನಿಗೆ ಆಗುವಷ್ಟು ಸಂತೋಷ ನಿಮಗೆ ಸಾರ್ಥಕ ಭಾವ ಮೂಡಿಸಲಿ.

ಇದನ್ನೂ ಓದಿ:

Father’s Day 2021 Date: ಅಪ್ಪಂದಿರ ದಿನದ ಮಹತ್ವ ಪ್ರಾಮುಖ್ಯತೆ ಮತ್ತು ಇತಿಹಾಸ ತಿಳಿಯಿರಿ