Gangubai Hangal‘s Death Anniversary : ‘ಕಲಾವಿದೆಯರು ಧೃತಿಗೆಡಬೇಕಿಲ್ಲ, ಸೋಲಿನ ಪ್ರಜ್ಞೆಯಲ್ಲಿ ಬದುಕಬೇಕಿಲ್ಲ’

|

Updated on: Jul 21, 2021 | 6:47 PM

Art Support : ‘ಬರೀ ವಿರೋಧಿ ನೆಲೆಯಲ್ಲಿ ಮಾತನಾಡಿದರೆ ಏನೂ ಪ್ರಯೋಜನವಿಲ್ಲ; ಈ ಸಮಾಜದಲ್ಲಿ ಪರಂಪರಾಗತ ಆಲೋಚನೆಗಳನ್ನು ಮೀರುವಂಥ ಚೈತನ್ಯ, ಕಲ್ಪನೆ ಹೊಂದಿರುವಂಥ ಗಂಡಸರೂ ಇದ್ದಾರೆ. ಅವರು ಯಾವ ರೀತಿಯ ಸಹಕಾರವನ್ನೂ ಕೊಡಬಲ್ಲರು. ಅಂಥ ಕಡೆಗೆ ಕಲಾವಿದೆಯರು ಗಮನ ಹರಿಸಬೇಕು. ಆಗ ಎಂಥ ಹೊರೆಯನ್ನೂ ದಾಟಿ ಸಾಧನೆಗೆ ತೊಡಗಿಕೊಳ್ಳಲು ಸುಲಭವಾಗುತ್ತದೆ.’ ಡಾ. ಎನ್. ಮನು ಚಕ್ರವರ್ತಿ

Gangubai Hangal‘s Death Anniversary : ‘ಕಲಾವಿದೆಯರು ಧೃತಿಗೆಡಬೇಕಿಲ್ಲ, ಸೋಲಿನ ಪ್ರಜ್ಞೆಯಲ್ಲಿ ಬದುಕಬೇಕಿಲ್ಲ’
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪರಂಪರೆಯ ‘ಧೀಶಕ್ತಿ’
Follow us on

Gangubai Hangal‘s Death Anniversary : ಬೆಂಗಳೂರು ಗಾಯನ ಸಮಾಜದ ವಾರ್ಷಿಕ ಸಮ್ಮೇಳನದ ಅಧ್ಯಕ್ಷರಾಗಿದ್ದ ಗಂಗೂಬಾಯಿಯವರಿಗೆ ಬಿರುದು ನೀಡಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ನಂತರ ಅವರು ಎದ್ದು ನಿಂತು ಹೇಳಿದರು, ‘ಶಿವನ ತಪಸ್ಸು ಮಾಡಿದೆ. ಆದರೆ ಒಂದು ರಾಗವೂ ನನಗೆ ಸಿಗಲಿಲ್ಲವಲ್ಲ. ಯಮನ್, ದರ್ಬಾರಿ ನೂರು ಸಲ ಹಾಡಿರಬಹುದು. ಈವತ್ತಿನ ತನಕವೂ ಹಾಡಲು ಕುಳಿತಾಗ ಒಂದು ರೀತಿಯ ಹುಡುಕಾಟದಲ್ಲೇ ಇರುತ್ತೀನಿ. ಆರೋಹಣ ಅವರೋಹಣ ಗೊತ್ತಾದರೂ ರಾಗದ ಸ್ವರೂಪ ಏನು ಅನ್ನೋದು ಗೊತ್ತಿಲ್ಲ. ಈತನಕ ಒಂದು ರಾಗವನ್ನೂ ನಾನು ಸಿದ್ಧಿ ಪಡಿಸಿಕೊಂಡಿಲ್ಲ. ಆದರೆ, ಹೊಸ ರಾಗಗಳನ್ನು ಕಂಡುಹಿಡಿಯುತ್ತೀವಿ ಎಂದು ಜಂಭ ಕೊಚ್ಚಿಕೊಳ್ಳುತ್ತಾರಲ್ಲ ಕೆಲವರು… ಇದು ನನಗೆ ಅರ್ಥವೇ ಆಗುವುದಿಲ್ಲ’ ಎಂದರು. ಈ ಕಾರ್ಯಕ್ರಮಕ್ಕೆ ಅಂದು ಸಾಕ್ಷಿಯಾಗಿದ್ದ ಸಾಹಿತ್ಯ, ಸಿನೆಮಾ ಮತ್ತು ಸಂಸ್ಕೃತಿಯ ಬಗ್ಗೆ ಅಪಾರ ಜ್ಞಾನವುಳ್ಳ ಹಿರಿಯ ವಿಮರ್ಶಕ ಡಾ. ಎನ್. ಮನು ಚಕ್ರವರ್ತಿ ಅವರು ಈ ಅಪೂರ್ವ ಕ್ಷಣಗಳನ್ನು ನೆನಪಿಸಿಕೊಳ್ಳುತ್ತ ಹೋದಂತೆ ‘ಭಾತೀಯ ಶಾಸ್ತ್ರೀಯ ಸಂಗೀತ ಮತ್ತು ಸ್ತ್ರೀಲೋಕ’ದ ಪುಟ ತುದಿ ಬಿಚ್ಚಿಕೊಂಡಿತು. ಸಂಗೀತವನ್ನು ಕೇಳುವುದಷ್ಟೇ ಅಲ್ಲ ‘ಕಲಾಪರಂಪರೆಯ ವಿಶೇಷ ಕಥನ’ಗಳನ್ನೂ ಆಗಾಗ ಹೀಗೆ ತೆರೆದಿಡುವುದೂ ಮುಖ್ಯ; ಎಲ್ಲ ಕಲೆಗಳಂತೆ ಸಂಗೀತವೂ ಬಹುಮುಖಿ ಕಥನಗಳಿಂದ ಕೂಡಿದೆ. ಅದು ‘ಮುಂದುವರೆಯಬೇಕು’. 

*

ಭಾರತೀಯ ಸಂಗೀತ ಪರಂಪರೆಯಲ್ಲಿ ವಿಶೇಷವಾಗಿ ಗುರುತಿಸಿಕೊಂಡಿರುವ ಕಲಾವಿದೆಯರನ್ನು ಗಮನಿಸಿದರೆ,  ಅವರೆಲ್ಲರೂ ವೈಯಕ್ತಿಕ ಬದುಕಿನ ಕಷ್ಟ, ನೋವು, ದುಃಖಗಳನ್ನು ಮೀರುತ್ತಲೇ ಸಾಧನೆ ಮಾಡಿದವರು. ಮುಗುಬಾಯಿ ಕುರಡೀಕರ್, ಹೀರಾಬಾಯಿ ಬಡೋದೇಕರ್ ಮತ್ತು ‘ಮಹಾಉಗ್ರಸ್ವರೂಪಿ’ ಕೇಸರಬಾಯಿ ಕೇರಕರ್ ಇವರೆಲ್ಲರನ್ನೂ ಗಂಗೂಬಾಯಿಯವರ ಹಿಂದಿನ ಪೀಳಿಗೆಯವರು ಎಂದು ಗುರುತಿಸಬಹುದು. ಹೆಣ್ಣುಮಕ್ಕಳು ಎನ್ನುವ ಕಾರಣಕ್ಕೆ ಇವರುಗಳ ಸಂಗೀತಕ್ಕೆ ಯಾರೂ ಯಾವ ಮುಲಾಜನ್ನೂ ತೋರಿಸಬೇಕಿಲ್ಲ ಎಂಬಂತೆ ಬದುಕಿದವರು. ಗಟ್ಟಿಯಾಗಿ ಸಂಗೀತವನ್ನು ಸ್ವಾತಂತ್ರ್ಯವನ್ನು ಮನೋಧರ್ಮವನ್ನು ರೂಢಿಸಿಕೊಂಡು, ಪುರುಷ ಸಂಗೀತಕ್ಕೆ ಸರಿಸಮನಾಗಿ ಸಾಧನೆ ಮಾಡುವ ಪರಂಪರೆಯನ್ನು ಹುಟ್ಟುಹಾಕಿದವರು.  ಅಭಿವ್ಯಕ್ತಿಯನ್ನೇ ಒಂದು ಪರಿಪೂರ್ಣತೆಯಂತೆ ಪಡೆದುಕೊಂಡವರು. ಹೆಣ್ಣು ಎನ್ನುವ ಕಾರಣಕ್ಕೆ ಯಾರೂ ಯಾವುದಕ್ಕೂ ಮುಲಾಜು ತೋರಿಸಬೇಕಿಲ್ಲ ಎಂಬಂತೆ ಬದುಕಿದ ಕೇಸರಬಾಯಿ ಕೇರಕರ್ ಅವರನ್ನು ‘ಉಗ್ರಸ್ವರೂಪಿ’ ಎನ್ನಲು ಇದೇ ಕಾರಣ. ಇಂಥದೊಂದು ಗಟ್ಟಿಯಾದ ಕಲಾವಿದೆಯರ ಪರಂಪರೆಯನ್ನು ನಮ್ಮ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಹೊಂದಿದೆ. ಹಾಗಾಗಿ ಇಂದಿನ ಕಲಾವಿದೆಯರು ಗಟ್ಟಿಯಾಗಿ ಸಂಗೀತದ ಶಾಸ್ತ್ರವನ್ನು ರೂಢಿಸಿಕೊಳ್ಳಲು ಗಂಡಸಿನ ಸರಿಸಮನಾಗಿ (ಗಂಡಸಿನ ಸರಿಸಮನಾಗಿ ಎಂದು ಅನಿವಾರ್ಯವಾಗಿ ಹೇಳಬೇಕಿದೆ) ತೊಡಗಿಕೊಳ್ಳುವಂತಹ ಶಕ್ತಿ ಬೆಳೆಸಿಕೊಳ್ಳಲೇಬೇಕು.

ಸಮಗ್ರವಾಗಿ ನೋಡಹೊರಟರೆ ಈ ಪೀಳಿಗೆಯ ನಂತರ ಬರುವವರು ಕಿಶೋರಿ ಅಮೋನ್ಕರ್. ಇವರೂ ಅಷ್ಟೇ. ಯಾವ ಮುಲಾಜನ್ನೂ ಕೋರದಂಥ ದಿಟ್ಟ ಕಲಾವಿದೆ. ಇವರಿಗಿಂತ ಮುಂಚಿನ ಪೀಳಿಗೆಗೆ ಸೇರಿದವರು ಗಂಗೂಬಾಯಿ ಹಾನಗಲ್. ನಂತರ ಮಾಲಿನಿ ರಾಜೂರಕರ್, ಅಶ್ವಿನಿ ಭಿಡೆ, ಆರತಿ ಅಂಕಲೀಕರ. ಹಿಂದೂಸ್ತಾನಿ ಸಂಗೀತ ಪರಂಪರೆಯಲ್ಲಿ ಮಹಿಳೆಯರ ಅಸ್ತಿತ್ವ ಎಂದು ನೋಡಿದಾಗ ಇವರುಗಳು ಮುಖ್ಯ ಎನ್ನಿಸುತ್ತಾರೆ. ಅಸ್ತಿತ್ವ ಎಂದು ಬಂದಾಗ ಹಿಂದೂಸ್ತಾನಿ ಮತ್ತು ಕರ್ನಾಟಕಿ ಈ ಎರಡೂ ಶಾಸ್ತ್ರೀಯ ಪ್ರಕಾರಗಳಿಗೂ ಅನ್ವಯಿಸುತ್ತದೆ. ಈ ಹಿನ್ನೆಲೆಯಲ್ಲಿ, ಪುರುಷಪ್ರಧಾನಕೇಂದ್ರಿತ ಸಾಮಾಜಿಕ ವಾತಾವರಣದಲ್ಲಿಯೇ ತಮ್ಮ ಅಸ್ತಿತ್ವವನ್ನು ಯಾವ ಮುಲಾಜನ್ನೂ ಕೋರದೆ ಪಡೆದುಕೊಂಡಂಥ ವಿಶೇಷ ಪರಂಪರೆಗೆ ಗಂಗೂಬಾಯಿ ಕೂಡ ಸೇರುತ್ತಾರೆ.

ನಾವು ಅನೇಕ ಆಶ್ಚರ್ಯ ಹುಟ್ಟಿಸುವಂಥ ವಿಷಯಗಳ ಕಡೆಗೂ ಗಮನ ಹರಿಸಬೇಕು. ಕೇಸರಬಾಯಿ ಕೇರಕರ ಅವರ ಶಿಷ್ಯೆ ಧೋಂಡೂತಾಯಿ ಕುಲಕರ್ಣಿ ಮಹಾರಾಷ್ಟ್ರದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದವರು. ದಬ್ಬಾಳಿಕೆ, ಪಿತೃಪ್ರಾಧಾನ್ಯ ಇವೆಲ್ಲವನ್ನೂ ಯಾವ ಕಾಲಕ್ಕೂ ಅಲ್ಲಗಳೆಯಲಾಗದಂಥ ಸತ್ಯಗಳು. ಆದರೆ, ಅಪವಾದದ ಕಡೆಗೆ ಗಮನ ಕೊಡದೆ ಶಕ್ತಿಯನ್ನು ಪಡೆದುಕೊಳ್ಳುವುದರತ್ತ ಕಲಾವಿದೆಯರು ಗಮನ ಹರಿಸಬೇಕು. ಮಹಾರಾಷ್ಟ್ರದ ಬ್ರಾಹ್ಮಣರು ಕಟ್ಟಾ ಸಂಪ್ರದಾಯವಾದಿಗಳು. ಆದರೆ, ಧೋಂಡೂತಾಯಿಯ ತಂದೆ ಮಗಳಿಗೆ ಹೇಳುತ್ತಾರೆ, ‘ಸಂಗೀತವನ್ನು ತಪಸ್ಸಿನಂತೆ ಸ್ವೀಕರಿಸಬೇಕು. ಮದುವೆಯಾದರೆ ನೀನು ಕುಟುಂಬದ ಸುಳಿಯೊಳಗೆ ಸಿಕ್ಕಿಹಾಕಿಕೊಂಡುಬಿಡುತ್ತೀ ಹಾಗಾಗಿ ಮದುವೆಯಾಗಬೇಡ’. ಆಗ ಧೋಂಡೂತಾಯಿ ತಂದೆಯ ಮಾತಿನಂತೆ ಸಂಗೀತಕ್ಕೆ ತಮ್ಮನ್ನು ಅರ್ಪಿಸಿಕೊಳ್ಳುತ್ತಾರೆ. ಮದುವೆಯಾಗದೆಯೇ ಸಂಗೀತದಲ್ಲಿ ದೊಡ್ಡ ಪ್ರಸಿದ್ಧಿಯನ್ನು ಪಡೆಯುತ್ತಾರೆ.

ನೋವು ಸಂಕಟ ಅವಮಾನ ಶೋಷಣೆ ಎಲ್ಲದಕ್ಕೂ ಮುಖಾಮುಖಿಯಾಗುತ್ತಲೇ ದಿಟ್ಟತೆಯಿಂದ ನಿರ್ಧಾರ ಕೈಗೊಳ್ಳುತ್ತ ತಮ್ಮ ಅಸ್ಮಿತೆ, ಅಸ್ತಿತ್ವ ಕಂಡುಕೊಳ್ಳಲು ಬೇಕಾದಂಥ ಶಕ್ತಿ ಬೆಳೆಸಿಕೊಳ್ಳುವುದು ಆ ಮೂಲಕ ಸಾಧನೆ ಮಾಡುವುದು ಕಲಾವಿದೆಯರಿಗೆ ಮುಖ್ಯ. ಮೇಲೆ ಉಲ್ಲೇಖಿಸಿದ ಕಲಾವಿದೆಯರ ಬದುಕು ಇಂಥ ದಾರಿದೀಪವಾಗುವಂಥ ಕಥನಗಳಿಂದ ಕೂಡಿದೆ. ಹೆಣ್ಣಿನ ಶಕ್ತಿಯನ್ನು, ಸಾಮರ್ಥ್ಯವನ್ನು, ಅಸ್ಮಿತೆಗಾಗಿ ಅಸ್ತಿತ್ವಕ್ಕಾಗಿ ತನ್ನ ಬದುಕನ್ನು ನಿಭಾಯಿಸಿದ ಕಥನಪರಂಪರೆಯನ್ನು ಗುರುತಿಸಬೇಕಿದೆ. ಅದಕ್ಕೇ ಧೋಂಡೂತಾಯಿಯ ಕಥೆ ಹೇಳಿದ್ದು.

ಸುಬ್ಬುಲಕ್ಷ್ಮಿಯವರಂತೆ ಡಿ.ಕೆ.ಪಟ್ಟಮ್ಮಾಳ, ಎಂ.ಎಲ್. ವಸಂತಕುಮಾರಿ ಅವರಿಗೂ ಒತ್ತಡಗಳಿದ್ದವು. ಆದರೂ ಸಂಸಾರವನ್ನು ನಿಭಾಯಿಸಿಕೊಂಡು ಗಟ್ಟೆಯಾಗಿ ನಿಂತರು. ‘ಆಯ್ಕೆ’ ಎನ್ನುವುದು ಹಿಂದೆಯೂ ಕೆಲಸಲ ಹೆಣ್ಣುಮಕ್ಕಳಿಗೆ ಇರಲಿಲ್ಲ ಈಗಲೂ. ಆದರೆ ಇವೆಲ್ಲವನ್ನೂ ದಾಟುವ ಪ್ರಕ್ರಿಯೆಯಂತೂ ಖಂಡಿತ ಇದೆ. ಆ ಪ್ರಕ್ರಿಯೆಯೊಳಗಿನ ಸಾಧನೆಯನ್ನು ಗುರುತಿಸಬೇಕು. ನೋವು ಎನ್ನುವುದು ಬದುಕಿನ ಸತ್ಯ. ಅದನ್ನು ಎದುರು ಹಾಕಿಕೊಂಡು ಮುಖಾಮುಖಿಯಾಗುತ್ತ ಯಾವ ಮುಲಾಜನ್ನೂ ಬೇಡದೆ ತಮ್ಮ ಅಸ್ತಿತ್ವ ಕಟ್ಟಿಕೊಳ್ಳುತ್ತಾರಲ್ಲ ಅಂಥ ಪರಂಪರೆಗೆ ಗಂಗೂಬಾಯಿ ಸೇರುತ್ತಾರೆ. ಇನ್ನಷ್ಟು ಈ ಮಾತನ್ನು ಮುಂದುವರೆಸುವುದಾದರೆ 1980ರ ಮಧ್ಯಭಾಗದಲ್ಲಿ ಬೆಂಗಳೂರು ಗಾಯನ ಸಮಾಜದ ವಾರ್ಷಿಕ ಸಮ್ಮೇಳನದ ಅಧ್ಯಕ್ಷರ ಸ್ಥಾನಕ್ಕೆ ಗಂಗೂಬಾಯಿಯವರನ್ನು ಆಯ್ಕೆ ಮಾಡಲಾಗಿತ್ತು. ಅವರಿಗೆ ಬಿರುದು ಕೊಟ್ಟು ಸನ್ಮಾನಿಸಲಾಯಿತು. ಆ ಸಭೆಯಲ್ಲಿ ನಾನೂ ಹಾಜರಿದ್ದೆ. ಸನ್ಮಾನ ಸ್ವೀಕರಿಸಿದ ನಂತರ ಎದ್ದು ನಿಂತು ಗಂಗೂಬಾಯಿ ಹೇಳಿದರು, ‘ಸಂಗೀತಕ್ಕಾಗಿ ಶಿವನ ತಪಸ್ಸು ಮಾಡಿದೆ. ಆದರೆ ಒಂದು ರಾಗವೂ ನನಗೆ ಸಿಗಲಿಲ್ಲವಲ್ಲ. ಯಮನ್, ದರ್ಬಾರಿ ನೂರು ಸಲ ಹಾಡಿರಬಹುದು. ಈವತ್ತಿನ ತನಕವೂ ಹಾಡಲು ಕುಳಿತಾಗ ಒಂದು ರೀತಿಯ ಹುಡುಕಾಟದಲ್ಲೇ ಇರ್ತೀನಿ.  ಆರೋಹಣ ಅವರೋಹಣ ಗೊತ್ತಾದರೂ ರಾಗದ ಸ್ವರೂಪ ಏನು ಅನ್ನೋದು ಗೊತ್ತಿಲ್ಲ. ಈತನಕ ಒಂದು ರಾಗವನ್ನೂ ನಾನು ಸಿದ್ಧಿ ಪಡಿಸಿಕೊಂಡಿಲ್ಲ. ಆದರೆ, ಹೊಸ ರಾಗಗಳನ್ನು ಕಂಡುಹಿಡಿಯುತ್ತೀವಿ ಎಂದು ಜಂಭ ಕೊಚ್ಚಿಕೊಳ್ಳುತ್ತಾರಲ್ಲ… ಇದು ನನಗೆ ಅರ್ಥವೇ ಆಗುವುದಿಲ್ಲ.’ ಎಂದರು.

ಈ ರೀತಿಯ ಶೋಧನೆ, ಹುಡುಕಾಟದಲ್ಲಿ ಯಾವ ಹೆಣ್ಣೂ ಇಲ್ಲ ಪುರುಷನೂ ಇಲ್ಲ. ಅವತ್ತು ಅವರು ಮೊದಲು ಹಾಡಿದ್ದು ಪಟದೀಪ. ಅದ್ಭುತವಾಗಿ ಹಾಡಿದರು. ಮಂದ್ರದಲ್ಲಿ ವಿಲಂಬಿತ ಲಯದಲ್ಲಿ ಸ್ವರಗಳನ್ನು ಹರಡುತ್ತ. ಈಗಿನವರಂತೆ ತಂತ್ರಗಳನ್ನು ಚಮತ್ಕಾರಗಳನ್ನು ಸೃಷ್ಟಿಸದೆ ಬಲು ಗಂಭೀರವಾಗಿ ಹಾಡಿದರು. ನಾನು ಇಂಥ ‘ಅವತಾರ’ಗಳನ್ನು ಹುಡುಕುತ್ತಿರುತ್ತೇನೆ. ಹಾಗೇ ಅವರ ದರ್ಬಾರಿಯನ್ನು ಕೂಡ ಧ್ವನಿಮುದ್ರಿಸಿಕೊಂಡೆ.  ಅದ್ಭುತವಾಗಿ ರಾಗವನ್ನು ಅರಳಿಸುತ್ತಾ ಹೋಗುವ ರೀತಿ ಇದೆಯಲ್ಲ, ಅದರಲ್ಲಿನ ಹುಡುಕಾಟವಿದೆಯಲ್ಲ ಅದರಲ್ಲಿ ಪ್ರತಿಫಲನಗೊಳ್ಳುವುದು ಕೇವಲ ಕಲೆಯ ಅಸ್ತಿತ್ವ.

ಮಧ್ಯಮವೋ, ಮೇಲ್ಮಧ್ಯಮವೋ, ಕೆಳಮಧ್ಯಮ ವರ್ಗದ ಸಂಸಾರದ ಜಂಜಾಟಗಳೋ. ಈ ಎಲ್ಲ ಜಂಜಾಟಗಳನ್ನೂ ಮೀರುವ ಶಕ್ತಿಯನ್ನು ಸಂಗೀತ ಲೋಕದ ಹೆಣ್ಣಿನ ಪ್ರಪಂಚ ಸಿದ್ಧಿಸಿಕೊಳ್ಳುತ್ತಾ ಹೋಯಿತು. ಸಾಂಪ್ರದಾಯಿಕ ಸಮಾಜದಲ್ಲಿ ಕಷ್ಟಗಳು ಈಗಲೂ ಸರಿದಿಲ್ಲ. ಆದರೆ ಅಂದಿನ ಕಾಲವನ್ನು ಹೋಲಿಸಿದರೆ ಇಂದಿನ ಕಾಲ ಬಹಳ ಅನುಕೂಲವಾಗಿದೆ. ಅಂದು ತಪಸ್ಸಿನಿಂದ ಅವರುಗಳು ತಮ್ಮ ಅಸ್ತಿತ್ವ ಗುರುತಿಸಿಕೊಂಡಿದ್ದಾರೆ. ಜಗತ್ತು ಅದನ್ನು ಗುರುತಿಸುವಂತೆ ತಮ್ಮ ಸಾಧನೆಯ ಹಾದಿಯನ್ನು ರೂಪಿಸಿಕೊಂಡಿದ್ದಾರೆ. ಪ್ರಸ್ತುತ ಪೀಳಿಗೆಯ ಕಲಾವಿದೆಯರಿಗೆ ಈ ರೀತಿಯ ಕಥನಗಳೇ ಸ್ಪೂರ್ತಿ. ಇವು, ನಾವು ಕಾಣದೇ ಇರುವಂಥ ಹೇಳದೇ ಇರುವಂತಹ ಅನೇಕ ಸತ್ಯಗಳನ್ನು ಹೇಳುತ್ತವೆ ಎನ್ನುವುದು ಮುಖ್ಯ ಸಂಗತಿ. ಗಂಗೂಬಾಯಿ ಆ ಥರ ಗಟ್ಟಿಯಾಗಿ ಸಾಗಿದರು. ತಮ್ಮ ತಮ್ಮ ಹುಡುಕಾಟಗಳನ್ನು ಯಾತ್ರೆಯಂತೆ ಕ್ರಮಿಸಿದರು. ಮಗಳು ಕೃಷ್ಣಾ ಕೂಡ ಹಾಗೇ ಸಾಗಿದರು.

ಈ ಹುಡುಕಾಟದ ಪರಂಪರೆಯಲ್ಲಿ ಯಾವ ಗಂಡಸರಿಗೂ ಕಡಿಮೆ ಇರದಂತೆ ಹೊರಟವರ ಪೈಕಿ ಅನ್ನಪೂರ್ಣಾದೇವಿ ಕೂಡ ಪ್ರಮುಖರು. ನಿತ್ಯಾನಂದ ಹಳದೀಪುರ, ಹರಿಪ್ರಸಾದ ಚೌರಾಸಿಯಾ ಅನ್ನಪೂರ್ಣಾದೇವಿಯವರನ್ನು ‘ತಾಯಿ’ ಎಂದೇ ಸಂಬೋಧಿಸುತ್ತಾ ಕಲಿಯುತ್ತಾ ಹೋದವರು. ‘ತಾಯಿ’ ಈ ಪದವನ್ನು ವಿಶೇಷವಾಗಿ ಗುರುತಿಸಬೇಕು. ಇದು ಬೇರೊಂದು ರೀತಿಯ ಐತಿಹಾಸಿಕ ಕಥನ ಕ್ರಮವನ್ನು ಹೇಳುತ್ತದೆ. ಇದರಲ್ಲಿ ಗಂಗೂಬಾಯಿಯವರ ಹೆಸರೂ ಒಳಗೊಳ್ಳಬೇಕೆಂಬ ಅದಮ್ಯ ಆಸೆ ನನಗೆ.

ಇಂಥವರನ್ನೆಲ್ಲ ಯಾರೂ ತಡೆಯಲಾಗದು, ಯಾವ ಅಡೆತಡೆಗಳು ಬಂದರೂ ಯಾವ ಎದುರಾಳಿ ಬಂದರೂ. ಎದುರಾಳಿ ಎಂದರೆ ಅದು ಇತಿಹಾಸದ ಶಕ್ತಿಯ ರೂಪದಲ್ಲಿ ಇರಬಹುದು ಗಂಡಸಿನ ರೂಪದಲ್ಲಿ ಇರಬಹುದು. ಎಲ್ಲ ತಡೆಗೋಡೆಗಳನ್ನೂ ತಳ್ಳಿಹಾಕಿ ದಾಟಿ ಹೋಗುವಂಥ ಅಂತರ್ಗತ ಶಕ್ತಿಯನ್ನು ಇವರುಗಳು ಪಡೆದುಕೊಂಡಿದ್ದರು. ಇಂದು ಈ ರೀತಿಯ ಕಥನಗಳು ನಮಗೆ ಬಹಳ ಮುಖ್ಯ. ಹಾಗೆ ನೋಡಿದರೆ, ಈವತ್ತು ಶಿಕ್ಷಣ, ಆಧುನಿಕತೆ, ತಂತ್ರಜ್ಞಾನ, ಉದ್ಯೋಗದ ಮೂಲಕ ಹೊರ ಪ್ರಪಂಚಕ್ಕೆ ತೆರೆದುಕೊಳ್ಳಲು ಹೆಣ್ಣಿಗೆ ಸಾಕಷ್ಟು ಅವಕಾಶಗಳಿವೆ. ಕೇವಲ ಅಡುಗೆಮನೆಯಲ್ಲೇ ಕುಳಿತುಕೊಳ್ಳಬೇಕು ಎನ್ನುವಂಥ ಪ್ರತಿಮೆಗಳು ಈಗ ನಮಗೆ ಬೇಕಾಗಿಯೇ ಇಲ್ಲ. ಸಾರ್ವಜನಿಕ ಸ್ಥಳಗಳಿಗೆ ಹೋಗಿಬರಲು ಅವಕಾಶಗಳು ಸುಲಭವಾಗಿ ದಕ್ಕುತ್ತಿವೆ. ಹಾಗೆಂದು ಕಷ್ಟಗಳು ಸರಿದಿವೆ ಎಂದಲ್ಲ. ನಿಭಾಯಿಸುವ ಧೈರ್ಯ ಬೇಕು.

ಸಂಸಾರದ ಜೊತೆಗೆ ಎಲ್ಲವನ್ನೂ ಮೈಮೇಲೆ ಹಾಕಿಕೊಂಡು ನಿಭಾಯಿಸಿದವರು ಇವರೆಲ್ಲ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಎಲ್ಲ ಕಷ್ಟಗಳು ಹೆಣ್ಣಿನ ಮೇಲೇ ಅದು ಯಾವ ಧರ್ಮವಾದರೂ ಸರಿ. ಸರಿತಪ್ಪುಗಳನ್ನು ಹೊರಬೇಕಾಗಿರುವುದೂ ಅವರೇ. ಇವೆಲ್ಲವೂ ಐತಿಹಾಸಿಕ ಸತ್ಯಗಳೇ, ಸಮಾಜದ ಸತ್ಯಗಳೇ. ಒಪ್ಪಿಕೊಳ್ಳೋಣ. ಆದರೆ ಇದನ್ನು ಹೇಗೆ ‘ಹತೋಟಿ’ಗೆ ತೆಗೆದುಕೊಂಡರು ಎನ್ನುವುದೂ ಅಷ್ಟೇ ಮುಖ್ಯ. ಬಂದ ಅಡ್ಡಗೋಡೆಗಳನ್ನು ಹೇಗೆ ದಾಟಿದರು ಮತ್ತು ಕಲಾಸಾಧನೆಗೆ ತೆರೆದುಕೊಂಡು ‘ಮುಂದುವರಿಯುತ್ತ’ ಹೋದರು ಎನ್ನುವುದು ಕೂಡ. ಧೋಂಡೂತಾಯಿ ವಿಷಯದಲ್ಲಿ, ಅವರ ತಂದೆ ಮದುವೆ ಬೇಡ ಎಂದು ಹೇಳಿದ್ದರ ಹಿಂದೆ ಸತ್ಯವಿದೆ ಎಂಬುದನ್ನು ಗಮಿಸಬೇಕು.

ದತ್ತಾತ್ರೇಯ ಸದಾಶಿವ ಗರುಡ ಅವರು ಋಷಿಗಳ ಥರ ಬದುಕಿದವರು. ಅವರ ಪ್ರಕಾರ ಗಂಡು ಹೆಣ್ಣು ಎನ್ನುವುದು ಇರಲೇ ಇಲ್ಲ. ಸಂಗೀತಗಾರರು, ಶಿಕ್ಷಕರು ಆಗಿರುವ ಮಡಿವಂತ ಗಂಡಸರನ್ನು ಅವರು ಬಯ್ಯುತ್ತಿದ್ದರು. ‘ಈ ದರಿದ್ರ ಪುರುಷರ ಕೈಯಲ್ಲಿ, ಬ್ರಾಹ್ಮಣರ ಕೈಯಲ್ಲಿ ಸಿಕ್ಕು ಹಾಕಿಕೊಂಡು ಹೆಣ್ಣುಮಕ್ಕಳು ನರಳಿದರು’ ಎಂದು. ಗರುಡರಂಥ ಗಂಡಸರೂ ಇದ್ದರು ಎನ್ನುವುದನ್ನು ನಾವು ಗುರುತಿಸೋಣ. ಬರೀ ವಿರೋಧಿ ನೆಲೆಯಲ್ಲಿ ಮಾತನಾಡಿದರೆ ಏನೂ ಪ್ರಯೋಜನವಿಲ್ಲ. ಅಂದರೆ, ಯಾವುದೇ ರೀತಿಯಲ್ಲಿ ಸಹಕಾರ ಕೊಡುವಂಥ ಗಂಡಸರೂ ಇದ್ದಾರೆ ಈ ಸಮಾಜದಲ್ಲಿ ಎನ್ನುವುದನ್ನು ಮರೆಯಬಾರದು. ಆ ಮೂಲಕ ಶಕ್ತಿ ಪಡೆದುಕೊಳ್ಳಬೇಕು ಹೆಣ್ಣುಮಕ್ಕಳು. ವ್ಯವಸ್ಥೆ  ಬಗ್ಗೆ ಎಷ್ಟೇ ಮಾತನಾಡಿದರೂ, ಗಂಡಸರಲ್ಲಿ ಪರಂಪರಾಗತ ಆಲೋಚನೆಗಳನ್ನು ಮೀರುವಂಥ ಚೈತನ್ಯ, ಕಲ್ಪನೆ ಹೊಂದಿರುವಂಥ ವ್ಯಕ್ತಿಗಳು ನಮ್ಮ ನಡುವೆ ಇಲ್ಲವೆ? ಇಂಥ ಕಡೆಗೆ ಕೂಡ ಗಮನ ಹರಿಸಬೇಕು. ಆಗ ಎಂಥ ಹೊರೆಯನ್ನೂ ದಾಟಿ ಸಾಧನೆಗೆ ತೊಡಗಿಕೊಳ್ಳಲು ಸುಲಭವಾಗುತ್ತದೆ.

ತಂಜಾವೂರು ಭರತನಾಟ್ಯ ಪರಂಪರೆಯ ಕಥನ ಗಮನಿಸಿ. ಈ ಕಲೆ ವೇಶ್ಯೆಯರಿಗೆ ಮಾತ್ರ ಮೀಸಲು ಎನ್ನುವುದನ್ನು ಬಾಲಸರಸ್ವತಿಯವರು ಎದುರಿಸಿಕೊಂಡು ಬರಲಿಲ್ಲವೆ? ದೇವದಾಸಿ ನೆಲೆಯಿಂದ ಬದಂಥವರು ಅವರು. ಹೇಗೆ ಎದ್ದುನಿಂತರು? ಎಂಥ ಅತ್ಯದ್ಭುತವಾದ ಕಲಾವಿದೆ ಆಕೆ. ಹಾಗೆ ನೋಡಲು ಹೋದರೆ, ಸದ್ಯದ ಕೊರೊನಾದ  ಸಂದರ್ಭವನ್ನು ಹೊರತುಪಡಿಸಿದರೆ, ಕಲಾವಿದೆಯರಿಗೆ ಸಾಕಷ್ಟು ಅವಕಾಶಗಳಿವೆ. ಈ ಅವಕಾಶಗಳನ್ನು ಗಟ್ಟಿಯಾಗಿ ಬಳಸಿಕೊಳ್ಳಬೇಕಾದಂಥ, ಇದರಿಂದ ಸ್ಫೂರ್ತಿ ತಂದುಕೊಳ್ಳಲು ಸ್ವಲ್ಪ ಮುಕ್ತ ವಾತಾವರಣವನ್ನು ರೂಢಿಸಿಕೊಂಡ ಕಲಾವಿದೆಯರೂ ನಮ್ಮಲ್ಲಿದ್ದಾರೆ.  70-80 ವರ್ಷಗಳ ಹಿಂದೆ ಇದ್ದ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸ್ಥಿತಿ ಈಗಿಲ್ಲ. ಹಾಗೆಂದು ಎಲ್ಲವೂ ಬದಲಾಗಿಲ್ಲ. ಎಲ್ಲವೂ ಇದ್ದಹಾಗೆಯೂ ಇಲ್ಲ. ಈ ರೀತಿಯ ಸಂಕೀರ್ಣ ಪ್ರಕ್ರಿಯೆಗಳತ್ತ ಗಮನಹರಿಸಬೇಕು. ಏಕಮುಖಿ ಕಥನವನ್ನು ಹೇಳುತ್ತ ಕುಳಿತುಕೊಳ್ಳಬಾರದು. ಬಹುಮುಖಿ ಕಥನಗಳು ಅವತ್ತೂ ಲಭ್ಯವಿದ್ದವು ಆದರೆ ಕಡಿಮೆ ಪ್ರಮಾಣದಲ್ಲಿದ್ದವು. ಈವತ್ತು ಜಾಸ್ತಿಯಾಗಿವೆ. ಹಾಗೆ ನೋಡಿದರೆ, ಡಾ. ಅಶ್ವಿನಿ ಭಿಡೆ ದೇಶಪಾಂಡೆ ಮತ್ತು ಡಾ. ಲಲಿತ್ ಜೆ. ರಾವ್ ವಿಜ್ಞಾನದಲ್ಲಿ ಡಾಕ್ಟರೇಟ್ ಪದವಿ ಪಡೆದುಕೊಂಡರೂ ಸಂಗೀತ ಕ್ಷೇತ್ರಕ್ಕೆ ಅರ್ಪಿಸಿಕೊಂಡರು. ಹಾಗಾಗಿ ಒಂದೇ ಸೂತ್ರದ ಕಥೆಗಳಿರುವುದಿಲ್ಲ ಕಲೆಗೆ. ಬಹುಮುಖಿ ಕಥನಗಳಿರುತ್ತವೆ. ಈ ಕಾಲದ ಹೆಣ್ಣುಮಕ್ಕಳು ಗಟ್ಟಿಯಾಗಿ ನಿಲ್ಲಬೇಕು. ಒಂದು ನೆಲೆಯಲ್ಲಿ ಹೆಚ್ಚು ಸ್ವಾತಂತ್ರ್ಯ ಒದಗಿದೆ. ಧೃತಿಗೆಡಬೇಕಿಲ್ಲ. ಸೋಲಿನ ಪ್ರಜ್ಞೆಯನ್ನಿಟ್ಟುಕೊಂಡು ಬದುಕಬೇಕಿಲ್ಲ.

ಎಲ್ಲ ವಾದಗಳನ್ನೂ ತೊಡೆದು ತಪಸ್ಸಿನಂತೆ ಸಂಗೀತವನ್ನು ಸ್ವೀಕರಿಸಲೇಬೇಕು. ಅದರ ಕಡೆಗೆ ಮಾತ್ರ ಗಮನವಿರಬೇಕು. ಇದಕ್ಕೆ ಬೇಕಾದಂಥ ಗಟ್ಟಿಯಾದ ಶ್ರೀಮಂತ ಪರಂಪರೆ ಹೆಣ್ಣಿನಲೋಕದಲ್ಲಿದೆ. ಇದರಿಂದ ಸ್ಫೂರ್ತಿ ಪಡೆದುಕೊಳ್ಳಬೇಕು.

ವಿಮರ್ಶಕ ಡಾ. ಎನ್. ಮನು ಚಕ್ರವರ್ತಿ

ಪರಿಚಯ : ಸಾಹಿತ್ಯ ಸಂಸ್ಕೃತಿ ಮತ್ತು ಸಿನಿಮಾ ಜಗತ್ತನ್ನು ವಿಶಿಷ್ಟ ಸಂವೇದನೆಯ ಮೂಲಕ ಗ್ರಹಿಸುವ ಅಪರೂಪದ ವಿಮರ್ಶಕರು. ಬೆಂಗಳೂರಿನ ಎನ್.ಎಮ್.ಕೆ.ಆರ್.ವಿ. ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಇವರು ಬರೆದ ಸಮಾಜ-ಸಂಸ್ಕತಿ-ಸಾಹಿತ್ಯ-ಕಲೆಗಳನ್ನು ಕುರಿತು ಬರೆದ ‘ಮಾಧ್ಯಮ-ಮಾರ್ಗ’ ಕನ್ನಡದ ಪ್ರಮುಖ ಕೃತಿಗಳಲ್ಲಿ ಒಂದು. ರಾಷ್ಟ್ರಮಟ್ಟದ ಅತ್ಯುತ್ತಮ ಚಲನಚಿತ್ರ ವಿಮರ್ಶಕರಿಗಾಗಿ ನೀಡುವ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ.

ಇದನ್ನೂ ಓದಿ : Gangubai Hangal‘s Death Anniversary : ‘ಗಂಗವ್ವ’ನೆಂಬ ರಾಗದೊಂದಿಗೆ ಮುಂದುವರೆದ ‘ಅವಳ’ ಆಲಾಪ

Published On - 5:30 pm, Wed, 21 July 21