ಹಾದಿಯೇ ತೋರಿದ ಹಾದಿ: ಸೃಷ್ಟಿಯಲ್ಲಿ ಗಂಡಿಗೆಷ್ಟು ಅವಕಾಶವಿದೆಯೋ ಹೆಣ್ಣಿಗೂ ಅಷ್ಟೇ ಇದೆ

|

Updated on: Jun 02, 2022 | 12:02 PM

Woman Empowerment : ‘ತವರಿಲ್ಲ. ಎರಡೆರಡು ಬಾರಿ ಸಾಂಸಾರಿಕ ಜೀವನ ಒಡೆದುಹೋಗಿದೆ. ಜೊತೆ ನಿಲ್ಲದೆ ಸುತ್ತಲಿದ್ದವರೆಲ್ಲ ಹಂಗಿಸುತ್ತಲೇ ಇರುತ್ತಾರೆ. ಇರಲಿ, ಮಣ್ಣಿನಂತೆಯೇ ನಾನು. ಮಣ್ಣಿಗೆ ಮತ್ತು ಹೆಣ್ಣಿಗೆ ಮಾತ್ರ ಏನೆಲ್ಲವನ್ನೂ ಸಹಿಸಿಕೊಳ್ಳುವ ಶಕ್ತಿ ಇರುವುದು‘ ನೀಲಿ ಲೋಹಿತ್.

ಹಾದಿಯೇ ತೋರಿದ ಹಾದಿ: ಸೃಷ್ಟಿಯಲ್ಲಿ ಗಂಡಿಗೆಷ್ಟು ಅವಕಾಶವಿದೆಯೋ ಹೆಣ್ಣಿಗೂ ಅಷ್ಟೇ ಇದೆ
ಟೆರಾಕೋಟ ಆಭರಣ ವಿನ್ಯಾಸಕಿ ನೀಲಿ ಲೋಹಿತ್
Follow us on

ಹಾದಿಯೇ ತೋರಿದ ಹಾದಿ | Haadiye Torida Haadi : ಟೆರಾಕೋಟ ಆಭರಣ ವಿನ್ಯಾಸಕಿ ನೀಲಿ ಲೋಹಿತ್, ಮೂಲತಃ ಮೈಸೂರಿನವರು. ಮಣ್ಣಿನಿಂದಲೇ ಬದುಕು ಕಟ್ಟಿಕೊಂಡ ಕಲೆಗಾರ್ತಿ. ‘ನನಗೆ ಬದುಕು ಎರಡು ಸಲ ಸಿಕ್ಕಿದ್ದು. ಮೊದಲರ್ಧ ಮಂಜುಳ ಆಗಿ. ಅದು ನನ್ನ ಬದುಕಿನ ಕೆಟ್ಟ ಭಾಗ. ಅಪ್ಪ ಅಮ್ಮ ಇದ್ದಾರೆ ಹೆಸರಿಗೆ ಅಷ್ಟೆ. ಅವರಿಗೆ ಇಬ್ಬರೂ ಹೆಣ್ಣುಮಕ್ಕಳು ಎಂಬ ನಿರಾಸೆ. ಅಪ್ಪನಿಗೆ ಗಂಡುಮಕ್ಕಳ ಹುಚ್ಚು. ಅವರು ಜೈವಿಕವಾಗಿ ನನಗೆ ಜನ್ಮ ಕೊಟ್ಟಿದ್ದಾರೆ. ನನಗೆ ಅಪ್ಪಅಮ್ಮನಾಗಿ ಬದುಕು ಕೊಟ್ಟದ್ದು ನನ್ನ ತಾತ ಗಾರೆ ಸುಬ್ಬಣ್ಣ, ಅಜ್ಜಿ ವೆಂಕಟಮ್ಮ. ಮೈಸೂರಿನ ಕೆ. ಜಿ. ಕೊಪ್ಪಲ್​ನಲ್ಲಿ ವಾಸವಾಗಿದ್ದರು. ನನಗೆ ಬುದ್ಧಿ ಬಂದಾಗಿನಿಂದಲೂ ಬೆಳೆದದ್ದು ಅಜ್ಜಿ ತಾತನ ಆಶ್ರಯದಲ್ಲೇ. ನಾನು ತುಂಬಾ ಪ್ರೀತಿ ಮಾಡುವುದು ನನ್ನ ಅಜ್ಜಿ ತಾತನನ್ನೇ. ನನ್ನಾಸೆಗಳಿಗೆ ಅಷ್ಟೇ ಒತ್ತಾಸೆಯಾಗಿ ನಿಂತು ಅಷ್ಟೇ ಪ್ರೀತಿ ಕೊಟ್ಟು ಬೆಳೆಸಿದರು’ ಎನ್ನುವ ನೀಲಿ ಅವರ ಹಾದಿ ಹೇಗೆ ಸಾಗಿಬಂದಿತು ಎನ್ನುವುದನ್ನು ಅವರ ಮಾತಿನಲ್ಲೇ ಓದಿ.
ಜ್ಯೋತಿ ಎಸ್, ಸಿಟಿಝೆನ್ ಜರ್ನಲಿಸ್ಟ್ (Jyothi S)

(ಹಾದಿ 21)

ತಾತನದ್ದು ಒಂದು ಪುಟ್ಟ ಪೆಟ್ಟಿ ಅಂಗಡಿ ಇತ್ತು. ಅವಿಭಕ್ತ ಕುಟುಂಬ. ಸ್ವಾಭಿಮಾನದ ಬದುಕನ್ನು ಅಜ್ಜಿ ಆಗಲೇ ಕಲಿಸಿದ್ದರು. ನೀನು ಎಷ್ಟು ಕೆಲಸ ಮಾಡುತ್ತೀಯ ನೀನು ಅಷ್ಟೇ ತಿನ್ನಬೇಕು ಅಂತ ಹೇಳಿದ್ರು. ನಾನು ಇಷ್ಟು ಕೆಲಸ ಮಾಡಿದ್ದೇನೆ ನಾನು ಇಷ್ಟು ತಿನ್ನಬಹುದು ಅಂತ ನಿನಗೆ ಅನ್ನಿಸಬೇಕು. ಏನೂ ಮಾಡದೆ ಇರಬೇಡ. ಅದು ನನಗೆ ಅಭ್ಯಾಸವಾಗಿ ಬಿಟ್ಟಿತ್ತು. ಶಾಲೆಗೆ ಹೋಗುವ ಮುನ್ನ ಇಂತಿಷ್ಟು ಕೆಲಸ ಅಂತ ಮಾಡಿ ಹೋಗುತ್ತಿದ್ದೆ. ಶಾಲೆಯಿಂದ ಬಂದು ಉಳಿದ ಕೆಲಸವನ್ನು ಮಾಡುತ್ತಿದ್ದೆ. ತಂದೆ ತಾಯಿ ಆಶ್ರಯದಲ್ಲಿ ಇಲ್ಲದೆ ಬೇರೆ ಕಡೆ ಬದುಕುವ ಮಕ್ಕಳಿಗೆ ಎಲ್ಲವೂ ಕೈ ತುಂಬ, ಹೊಟ್ಟೆ ತುಂಬ ಸಿಗತ್ತೆ ಅಂತ ಹೇಳೋದಕ್ಕೆ ಕಷ್ಟ. ಹೀಗೆ ಬೆಳೆಯುತ್ತ ಬಂದೆ. ಋತುಮತಿಯಾದ ನಂತರ ಅಜ್ಜಿ ತಾತ ಇಬ್ಬರನ್ನ ಬಿಟ್ಟು ಎಲ್ಲರಿಗೂ ನನ್ನ ಮದುವೆ ಮಾಡಿ ಕಳುಹಿಸಬೇಕು ಎನ್ನುವುದಷ್ಟೇ ಇತ್ತು. ಓದಿಸಿದ್ರೆ ಓದಿರುವ ಗಂಡನ್ನೇ ತರಬೇಕು. ಇವರಪ್ಪ ಏನು ದೊಡ್ಡ ಸರ್ಕಾರಿ ನೌಕರನೇ ಎಂದು ಹೀಯಾಳಿಸುತ್ತಿದ್ದರು. ನಾನು ಚೆನ್ನಾಗಿ ಓದುತ್ತಿದ್ದೆ. ಹಾಗಾಗಿ ಓದಲು ಹಠ ಮಾಡುತ್ತಿದ್ದೆ. ಹತ್ತನೇ ತರಗತಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣ ಆಗಿದ್ದು ತಾತನಿಗೆ ತುಂಬ ಖುಷಿ ಕೊಟ್ಟಿತ್ತು. ಹಾಗಾಗಿ ಮೂರು ಬೀದಿ ತುಂಬ ಸಿಹಿ ಹಂಚಿದ್ರು.

ಇದನ್ನೂ ಓದಿ
ಹಾದಿಯೇ ತೋರಿದ ಹಾದಿ: ಹಸನಾಪುರದ ದುಂಡಮ್ಮಜ್ಜಿಯ ಬದುಕು ಹಸನಾಗಿರುವುದು ಹೀಗೆ
ಹಾದಿಯೇ ತೋರಿದ ಹಾದಿ: ನೀರಿನಾಳಕ್ಕಿಳಿದು ಶವತೆಗೆವ ಬಾಬಾ ಅಣ್ಣು ಸಿದ್ದಿ ಸಾಹಸಗಾಥೆ
Woman: ಹಾದಿಯೇ ತೋರಿದ ಹಾದಿ; ಕುರಗೋಡಿನ ನಾಗವೇಣಿ ಬೆಂಗಳೂರಿಗೆ ಬಂದಿದ್ದು ಹೀಗೆ
ಹಾದಿಯೇ ತೋರಿದ ಹಾದಿ: ‘ನಮ್ಮದು ಆಂಧ್ರಪ್ರದೇಶವಾದರೂ ನಾವು ಕಥೆ ಹೇಳುವುದು ಕನ್ನಡದಲ್ಲಿಯೇ’

ಆಗಿನ ಕಾಲದಲ್ಲಿ ಹಾಡು, ನೃತ್ಯ ಕಲಿಯುತ್ತೇನೆ ಎಂದರೆ ಮಹಾ ಅಪರಾಧ. ನನ್ನ ಓದು, ಬದುಕು ಎಲ್ಲವೂ ಹೋರಾಟದ ಪ್ರತಿಫಲವೇ ಆಗಿತ್ತು. ನಾನು ಊಟ ತಿಂಡಿ ಬಿಟ್ಟು ಕೂತಾಗ ಅಜ್ಜಿ ತಾತನ ಸಹಾಯದಿಂದ ಕಾಲೇಜು ಸೇರಿದ್ದು. ಮನೆಯಲ್ಲಿ ಯಾರೂ ಹೆಚ್ಚು ಓದಿದವರಿಲ್ಲ. ಹಾಗಾಗಿ ಓದಿನ ಮಹತ್ವ ಅವರಿಗ್ಯಾರಿಗೂ ತಿಳಿದಿರಲಿಲ್ಲ. ಹೆಣ್ಣುಮಕ್ಕಳು ಅಂದ್ರೆ ಬೇಗ ಮದುವೆ ಮಕ್ಕಳು ಮಾಡಿಕೊಂಡು ಮನೆಗೆಲಸ ನೋಡ್ಕೊಂಡ್ ಹೋಗೋದು ಅವಳ ಕಥೆ. ಯಾರೂ ಹೆಚ್ಚು ಆಪ್ತರಾದವರು ಇಲ್ಲದ್ದರಿಂದ ನನ್ನ ಪ್ರತೀ ಗೆಲುವನ್ನು ಸಂಭ್ರಮಿಸುತ್ತಿದ್ದವರು ನನ್ನಜ್ಜಿ, ತಾತ. ಕೊನೆಗೂ ಪದವಿ ಮುಗಿಸಿದೆ. ಪಿಜಿ ಮಾಡುವ ಹೊತ್ತಿಗೆ ಅಜ್ಜಿಗೆ ಬೋನ್ ಕ್ಯಾನ್ಸರ್ ಬಂದಿತು. ಕಷ್ಟಪಟ್ಟು ಸಾಕಿದ್ದಾರೆ ನಿನ್ನ ಮದುವೆಯನ್ನಾದರೂ ನೋಡಲಿ ಅಂತ ಎಲ್ಲರೂ ಮದುವೆಗೆ ಒತ್ತಾಯ ಮಾಡಿದರು. ಆಗಲೂ ಅಜ್ಜಿಗೆ ನನ್ನ ಓದು ಮುಖ್ಯವಾಗಿತ್ತು. ಕೊನೆಗೆ ತೀರಿಕೊಂಡರು. ಅದಾದ ಆರು ತಿಂಗಳಿಗೆ ಮತ್ತೊಬ್ಬ ಮಾವ ತೀರಿಕೊಂಡರು. ಅವರು ನಮ್ಮನ್ನು ತುಂಬ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು.

ಇದನ್ನೂ ಓದಿ : Lockdown Stories : ಚಲನಾಮೃತ ; ನೆಂಟರು ಒಂದು ದಿನಕ್ಕೋ ಇಲ್ಲವೆ ಹನ್ನೊಂದನೇ ದಿನಕ್ಕೋ ಉಳಿದಂತೆ ನಮಗೆ ನಾವೇ!

ಆಗ ಒಂದು ವರ್ಷದೊಳಗೆ ನೀನು ಮದುವೆಯಾಗಲಿಲ್ಲ ಎಂದರೆ ಅಜ್ಜಿಗೆ ಮೋಕ್ಷ ಸಿಗುವುದಿಲ್ಲ ಅಂತೆಲ್ಲ ಹೇಳಿ ಕೊನೆಗೂ ನನ್ನ ಮದುವೆಗೆ ಒಪ್ಪಿಸಿದರು. ಹುಡುಗನ ಕೆಲಸ, ಮನೆ ಏನೂ ಗೊತ್ತಿಲ್ಲ. ಸ್ವಲ್ಪ ವಿಚಾರಿಸಿ ಮದುವೆ ಮಾಡೋಣ ಎನ್ನುವ ಸಾಮಾನ್ಯ ಪ್ರಜ್ಞೆ ಕೂಡ ಇಲ್ಲದೇ ಒಂದು ಮನೆ ಕೊಡುತ್ತೇವೆಂದು ಮದುವೆ ಮಾಡಿದರು. ಆದರೆ ಮನೆ ಕೊಟ್ಟಿಲ್ಲ ಅಂತ ಒಂಭತ್ತು ವರ್ಷಗಳ ಸಾಂಸಾರಿಕ ಜೀವನ ನರಕವಾಯ್ತು. ಮೂರು ಗರ್ಭಪಾತಗಳ ನಂತರ ಒಂದು ಹೆಣ್ಣು ಮಗು ಹುಟ್ಟಿತು. ಸಾಲ ಹೆಚ್ಚಾಗಿ ಬದುಕುವುದು ಕಷ್ಟವಾಯ್ತು. ಕೊನೆಗೆ ಅವರೇ ಡೈವೋರ್ಸ್ ಕೊಟ್ಟರು.

ಶಶಿಕಾಂತ್ ಎಂಬುವರ ಸಂಪಾದಕತ್ವದಲ್ಲಿ ‘ಕಾವೇರಿ ಸಂಗಮ’ ಎಂಬ ಸ್ಥಳೀಯ ಪತ್ರಿಕೆಗೆ ಅಂಕಣಗಳನ್ನು ಬರೆಯುತ್ತಿದ್ದೆ. ನನ್ನ ಬರವಣಿಗೆ ಮುಖಾಂತರ ನನ್ನ ಮೆಚ್ಚಿಕೊಂಡ ಲೋಹಿತ್ ಎಂಬುವವರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು. ಆಗ ನಾನು ಇರುವ ಸಂಪೂರ್ಣ ಸತ್ಯವನ್ನು ಹೇಳಿದ್ದೆ. ಏಕೆಂದರೆ ನಾನು ವಿಧವೆ ಅಲ್ಲ ವಿಚ್ಛೇದಿತೆ ಎಂದು. ಯಾರಾದರೂ ವಿಧವೆಯೊಂದಿಗೆ ಮುಂದಿನ ಬದುಕನ್ನು ಕಳೆಯಬೇಕು ಎಂಬ ಕನಸು ಅವರದಾಗಿತ್ತು. ತುಂಬ ಮಾತುಕತೆಯ ನಂತರ ಸ್ನೇಹ ಪ್ರೇಮವಾಗಿ ಕಾನೂನು ಪ್ರಕಾರ ನಾವು ಮದುವೆಯಾದೆವು. ಮದುವೆಗೂ ಮೊದಲೇ ಅವರು, ತಮಗಿದ್ದ ಬೊಜ್ಜಿನ ತೊಂದರೆ, ಥೈರಾಯಿಡ್, ಅಸ್ತಮಾ, ಹೃದಯದ ತೊಂದರೆಗಳ ಬಗ್ಗೆ ಹೇಳಿಕೊಂಡಿದ್ದರು. ಓದುವ ಸಲುವಾಗಿ ಹದಿನೈದು ವರ್ಷ ಮನೆಯಿಂದ ಹೊರಗಿದ್ದು ಸಂಪೂರ್ಣ ಆರೋಗ್ಯ ಹಾಳುಮಾಡಿಕೊಂಡಿದ್ದರು. ಅದಕ್ಕೆ ಹೇಳುತ್ತಿದ್ದರು ನಾನು ನಿನಗೆ ಬದುಕು ಕೊಟ್ಟಿಲ್ಲ, ನೀನು ನನಗೆ ಬದುಕನ್ನು ಕೊಟ್ಟಿರುವುದು ಎಂದು.

ಆಭರಣ ತಯಾರಿಕೆಯಲ್ಲಿ ನೀಲಿ

ಹಳೆಯ ಯಾವ ನೆನಪೂ ಕಾಡದಂತೆ ನನಗೆ ನೀಲಿ ಎನ್ನುವ ಹೆಸರಿಟ್ಟರು. ಬದುಕಲ್ಲಿ ಎಲ್ಲವನ್ನು ಮೀರಿ ಪ್ರೀತಿ ಅನ್ನೋದು ಬೇಕು. ಅವರು ನನ್ನ ತುಂಬ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಆದರೆ ವಿಧಿಲಿಖಿತ ಬೇರೆಯೇ ಆಗಿತ್ತು. ನನ್ನ ಗಂಡ ಕೋವಿಡ್​ನಿಂದಾಗಿ 2021ರ ಏಪ್ರಿಲ್​ನಲ್ಲಿ ತೀರಿಕೊಂಡರು. ಎರಡನೇ ದಿನಕ್ಕೆ ಮಣ್ಣಿನೊಂದಿಗಿನ ನನ್ನ ಕೆಲಸವನ್ನು ಪ್ರಾರಂಭ ಮಾಡಿದೆ. ಕಾರಣ ವಾಸ್ತವ ಕೆಟ್ಟದಾಗಿತ್ತು. ಮನೆ ಬಾಡಿಗೆ, ಆಸ್ಪತ್ರೆಗಾಗಿ ಮಾಡಿದ ಸಾಲ, ಮಗಳ ಓದು. ನನ್ನ ಗಂಡನ ಬದುಕು ಮುಗಿದು ಹೋದ ಸಂದರ್ಭ ನನ್ನ ಬದುಕು ಪ್ರಾರಂಭವಾಗುವುದಕ್ಕೆ ಕಾರಣವಾಗಿ ಅದು ನನ್ನ ತುಂಬ ಗಟ್ಟಿಗೊಳಿಸಿತು. ನನ್ನ ಗಂಡ ತೀರಿಕೊಂಡಾಗ ಅಂಗಲಾಚಿದರೂ ನನ್ನ ಜೊತೆಗೆ ಯಾರೂ ನಿಲ್ಲಲಿಲ್ಲ. ಈಗ ನನ್ನೊಂದಿಗೆ ನಿಂತುಕೊಳ್ಳದೆ ಇರುವವರು ನನ್ನ ಬದುಕಿಗೆ ಹೆಗಲಾಗಿ ನಿಲ್ಲುತ್ತಾರೆ ಎನ್ನುವ ಯಾವ ಭರವಸೆಯೂ ಇರಲಿಲ್ಲ. ಆ ಕ್ಷಣದಲ್ಲಿ ನನ್ನನ್ನು ನಡೆಸಿಕೊಂಡ ರೀತಿ ಸರಿ ಇರಲಿಲ್ಲ.

ಇದನ್ನೂ ಓದಿ : Agriculture: ಹಾದಿಯೇ ತೋರಿದ ಹಾದಿ;ಈ 300 ಭತ್ತದ ತಳಿಗಳು ನನ್ನವಲ್ಲ, ಇಡೀ ರೈತ ಸಮುದಾಯದ್ದು

ನೀಲಿ ಲೋಹಿತ್

ಆಗ ನಿರ್ಧಾರ ಮಾಡಿದೆ. ಯಾರೂ ಸಹ ಆಗಲ್ಲ. ನಾನು ದುಡಿದು ಸಂಪಾದಿಸಿದರೆ ನನ್ನ ನೆರಳಿನಲ್ಲಿ ಇರಲು ಯಾರಾದರೂ ಬರುತ್ತಾರೆಯೇ ಹೊರತು ನನಗೆ ನೆರಳಾಗಿ ನಿಲ್ಲುವವರು ಯಾರೂ ಇಲ್ಲ ಎನ್ನುವುದು ಮಾನವರಿಕೆಯಾಯಿತು. ಒಂದಷ್ಟು ಹೊಸ ಹೊಸ ಡಿಸೈನ್ಸ್ ಮಾಡಲು ಪ್ರಾರಂಭ ಮಾಡಿದೆ. ಒಂದು ತಿಂಗಳು ಮುಗಿಯುವ ಹೊತ್ತಿಗೆ ಮಾರ್ಕೆಟಿಂಗ್ ಶುರು ಮಾಡಿದೆ. ನಾನು ಮಾಡುವ ಮಣ್ಣಿನ ಆಭರಣಗಳನ್ನು ನಾನೆ ಹಾಕಿಕೊಂಡು ಫೋಟೋ ಶೂಟ್ ಮಾಡುತ್ತೇನೆ. ಅದನ್ನು ಇನ್ಸ್ಟಾಗ್ರಾಮ್, ಫೇಸ್ಬುಕ್, ವಾಟ್ಸಪ್ ಸ್ಟೇಟಸಿನಲ್ಲಿ ಪೋಸ್ಟ್ ಮಾಡುತ್ತೇನೆ. ತುಂಬ ಕಷ್ಟ ಆಗುತ್ತಿತ್ತು. ಚೆನ್ನಾಗಿ ರೆಡಿ ಆಗಿ ವಿಡಿಯೋ ಮಾಡಬೇಕಿತ್ತು. ನಾನು ಮತ್ತೆ ಆಭರಣ ಹಾಕಿಕೊಳ್ಳಬೇಕು. ವಿಡಿಯೋ ಮಾಡಬೇಕು ಅಂತ ಕ್ಯಾಮೆರಾ ಮುಂದೆ ನಿಂತು ಎಷ್ಟು ಪ್ರಾಮಾಣಿಕವಾಗಿ ಮಾಡಲು ಸಾಧ್ಯವೋ ಅಷ್ಟು ಮಾಡಿಬಿಡುತ್ತಿದ್ದೆ. ನಂತರ ಚೆನ್ನಾಗಿ ಅತ್ತು ಬಿಡುತ್ತಿದ್ದೆ. ಕ್ಯಾಮೆರಾ ನಮ್ಮ ಹೊರಗನ್ನು ಚೆನ್ನಾಗಿ ತೋರಿಸತ್ತೆ ನಮ್ಮ ಒಳಗಿನ ನೋವನ್ನು ಮರೆಮಾಚತ್ತೆ. ನನಗೆ ಯಾರು ಸಹಾಯ ಮಾಡದೇ ಇದ್ದರೂ ಕ್ಯಾಮೆರಾ ಸಹಾಯಕ್ಕೆ ಬರುತ್ತಿತ್ತು.

ಈಗಲೂ ನನ್ನ ನೋಡಿದವರು ನನ್ನ ಬಗ್ಗೆ ತುಂಬಾ ಮಾತಾಡಿದ್ದಿದೆ. ಇದು ನನ್ನ ಬದುಕು ಯಾರು ಏನೆಂದರೂ ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಅವರಿಗೆ ನನ್ನ ಬರವಣಿಗೆಯ ಮುಖಾಂತರ ಉತ್ತರ ಕೊಡುತ್ತೇನೆ. ಹೆಣ್ಣಿಗೆ ಶೋಷಣೆ ತಪ್ಪಿಲ್ಲ. ಓದಲು ಅವಕಾಶವಿದೆ. ಆದರೆ ಬದುಕಲು ಅವಕಾಶವಿಲ್ಲ. ಆದರೆ ಯಾರಿಗೇ ಆದರೂ ಒಂದು ಹಂತದ ನಂತರ ಸಂಗಾತಿ ಬೇಕು. ಇದನ್ನು ಸಮಾಜ ಮುಕ್ತವಾಗಿ ಸ್ವೀಕರಿಸುವುದಿಲ್ಲ. ಹೆಣ್ಣು ಮತ್ತೆ ಅಸಹಾಯಕ. ಗಂಡ ಸತ್ತು ಸುಮಾರು ದಿನಗಳ ನಂತರ ಊಟಕ್ಕೆ ಕರೆದು, ಗಟ್ಟಿಗಿತ್ತಿ ಬಿಡು ನೀ ಹೊಟ್ಟೆತುಂಬ ತಿನ್ನುತ್ತೀಯಲ್ಲ ಎಂದು ಹಂಗಿಸುವವರೂ ಇದ್ಧಾರೆ. ನೀನಾಗಿರುವುದಕ್ಕೆ ಬದುಕಿದ್ದೀಯ ಅಂತ ವ್ಯಂಗ್ಯವಾಡುವವರೂ ಇದ್ದಾರೆ.

ನೀವು ಒಂಟಿಯಾಗಿರಿ ಅಥವಾ ಜೋಡಿಯಾಗಿರಿ ನಿಮ್ಮದು ಅಂತ ಬದುಕಿದೆ. ಅದಕ್ಕೆ ಮೋಸ ಮಾಡಿಕೊಳ್ಳಬೇಡಿ. ತಿನ್ನಬೇಕಾ ತಿನ್ನಿ. ದುಡಿದು ಸ್ವಾವಲಂಬಿಯಾಗಿ ಬದುಕಿ. ಬದುಕಿನ ಹಾದಿಯಲ್ಲಿ ಯಾರ್ ಮುಂದೆ ಸಾಯ್ತಾರೆ? ಯಾರ್ ಹಿಂದೆ ಸಾಯ್ತಾರೆ ಯಾರಿಗೂ ಗೊತ್ತಿರಲ್ಲ. ದುಡಿಯಬೇಕು. ಪ್ರಪಂಚ ಎನ್ನುವುದು ಗಂಡಿಗೆಷ್ಟಿದೆಯೋ ಹೆಣ್ಣಿಗೂ ಅಷ್ಟೇ ಇದೆ. ಹಾಗೆಯೇ ಅವಕಾಶಗಳೂ ಕೂಡ ಸೃಷ್ಟಿಯಲ್ಲಿ ಗಂಡಿಗೆಷ್ಟಿದೆಯೋ ಹೆಣ್ಣಿಗೂ ಅಷ್ಟೇ ಇದೆ. ಹೆಣ್ಣಿಗೆ ಮಾತ್ರ ವಿಧವೆ, ಗಂಡ ಬಿಟ್ಟವಳು, ಹೀಗೆ ಹಲವಾರು ಹೆಸರುಗಳು ಆದರೆ ಗಂಡಿಗಿಲ್ಲ. ವಿಶೇಷವಾಗಿ ಹೆಣ್ಣು ತುಂಬ ವೇಗವಾಗಿ ನಡೆಯಬಲ್ಲಳು. ಗಂಡಿಗೆ ಹೋಲಿಸಿದರೆ ಆಕೆ ಹೊರಗಡೆ ಕೆಲಸ ಮಾಡಿ, ಮನೆಯನ್ನು ನಿಭಾಯಿಸಿಕೊಂಡು ಜೊತೆಗೆ ಇನ್ನೇನಾದರೂ ಸಾಧನೆ ಮಾಡಬಲ್ಲ ಶಕ್ತಿ ಅವಳಲ್ಲಿದೆ. ಆದುದರಿಂದ ಅವಳನ್ನು ಕಟ್ಟಿಹಾಕಲು ಈ ತರಹದ ಕುತಂತ್ರಗಳನ್ನು ಮಾಡುತ್ತಾರೆ.

ಗಂಡನಿಗೆ ಹೆಂಡತಿ ಸತ್ತಿದ್ದಾಳೆ. ಹೆಣ್ಣಿಗೆ ಗಂಡ ಸತ್ತಿದ್ದಾನೆ ಎಂದುಕೊಳ್ಳಿ. ಆಗ ಹೆಣ್ಣನ್ನು ಒಂದು ಕೋಣೆಯಲ್ಲಿ ಕೂರಿಸುತ್ತಾರೆ. ಹನ್ನೊಂದು ದಿನ ಎಲ್ಲಿಯೂ ಹೊರಗಡೆ ಕಳಿಸುವುದಿಲ್ಲ. ಅದೇ ಗಂಡಸಿಗೆ ಅವನ ಸ್ನೇಹಿತರು ಮೈಂಡ್ ಫ್ರೆಷ್ ಆಗಲು ಹೊರಗೆ ಕರೆದುಕೊಂಡು ಹೋಗಬಹುದು. ಅಂದರೆ ಹೊರಗೆ ಹೋಗಿಬಂದಮೇಲೆ ತಲೆ ಒಳಗಿರುವುದು ಪ್ರಶಾಂತವಾಗುತ್ತದೆ ಎಂಬರ್ಥ ನಮ್ಮ ಸಮಾಜಕ್ಕೆ ಚೆನ್ನಾಗಿ ಗೊತ್ತಿದೆ ಅಂತ ತಾನೆ? ನಂತರ ಹೆಣ್ಣು ಮನೆಯಲ್ಲಿ ಇರಬೇಕಾ? ಗಂಡನ ಮನೆಯಲ್ಲಿ ಇರಬೇಕಾ? ಇನ್ನೂ ಒಂದಷ್ಟು ಜನರು ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಅಂತ ದೂರ ಇಡುತ್ತಾರೆ. ಮತ್ತೂ ಕೆಲವರು ಅವಳ ಹಿಂದೆ ಮದುವೆಯಾಗುವ ಹೆಣ್ಣು ಮಕ್ಕಳಿದ್ದಾರೆ ಎಂಬ ಕಾರಣ ಹೇಳಿ ಕರೆದುಕೊಂಡು ಹೋಗುವುದಿಲ್ಲ. ಅನುಕೂಲಸ್ಥ ತಂದೆ ತಾಯಿಯಾದರೆ ನಮ್ಮ ಮಗಳು ನಮಗೆ ಭಾರವಲ್ಲ ಎಂದು ಕರೆದುಕೊಂಡು ಹೋಗುತ್ತಾರೆ. ಒಟ್ಟಾರೆ ಅವಳಿಗೆ ಆಯ್ಕೆಯೇ ಇಲ್ಲ. ಅಲ್ಲಿ ಕೂಡ ಅವಳನ್ನು ಸಮಾಜ ಕೂಡಿಹಾಕುತ್ತದೆ. ಅವಳ ಆಯ್ಕೆ ಎನ್ನುವುದನ್ನು ಸದಾ ಅನುಮಾನದಿಂದಲೇ ಕಾಣುತ್ತದೆ ನಮ್ಮ ಸಮಾಜ. ಇರಲಿ.

ಇದನ್ನೂ ಓದಿ : ಹಾದಿಯೇ ತೋರಿದ ಹಾದಿ: ‘ಮಾತುಬಾರದ ನನ್ನವ್ವ ಕಿವಿಯೋಲೆ ಅಡವಿಟ್ಟು ನನ್ನ ಓದಿಸಿದಳು’

 

2019 ರಿಂದ ‘ನೀಲಿ ಕಲಾ ಕ್ರಿಯೇಷನ್ಸ್’ ಹೆಸರಿನಲ್ಲಿ ಬೇಸಿಗೆ ಶಿಬಿರಗಳನ್ನು ಮಾಡುತ್ತಿದ್ದೆ. ಈಗ ಜನವರಿ, 26,  ರಲ್ಲಿ ನೀಲಿ ಕಲಾ ಫೌಂಡೇಶನ್​ ನೋಂದಾಯಿಸಿದ್ದೇನೆ. ನನ್ನ ಕನಸುಗಳು ತುಂಬ ಇವೆ. ಹೆಣ್ಣು ಮಕ್ಕಳಿಗೆ ಜಾಗ ಕೊಡುವುದಕ್ಕಿಂತ ಅವರಿಗೆ ದುಡಿಯುವುದನ್ನು ಕಲಿಸಿದರೆ, ಅವರು ಮತ್ತೆ ನಾಲ್ಕು ಜನರು ಹೆಣ್ಣು ಮಕ್ಕಳಿಗೆ ದುಡಿಯುವ ದಾರಿಯನ್ನು ಕಲಿಸಿರುತ್ತಾರೆ. ನಾನು ಫ್ಯಾಷನ್ ಡಿಸೈನಿಂಗ್, ಟೈಲರಿಂಗ್ ಕಲಿತಿದ್ದೇನೆ, ಬ್ಯೂಟಿಷಿಯನ್  ಕೋರ್ಸ್ ಮಾಡಿದ್ದೇನೆ. ಅದಾಗಿಯೂ ಹದಿನಾರು ವಿವಿಧ ಹ್ಯಾಂಡ್ ಮೇಡ್ ಕರಕುಶಲ ಕಲೆಗಳನ್ನು ಕಲಿತಿದ್ದೇನೆ. ಸ್ವಂತ ಉದ್ಯೋಗ ಏನೆಲ್ಲಾ ಮಾಡಲು ಸಾಧ್ಯವೋ ಮಾಡುತ್ತೇನೆ. ಮಣ್ಣಿನ ಆಭರಣಗಳನ್ನು ಮಾಡುವುದು ಒಂದು ರೀತಿಯ ಸವಾಲಿನ ಕೆಲಸ. ತುಂಬ ಸೂಕ್ಷ್ಮವಾಗಿ ಎಚ್ಚರಿಕೆಯಿಂದ ಮಾಡಬೇಕು, ಎಲ್ಲಕ್ಕಿಂತ ಹೆಚ್ಚಾಗಿ ತಾಳ್ಮೆ ಇರಬೇಕು.

ಬದುಕು ಎಂದರೆ ಏರು – ಪೇರುಗಳು. ದಿನವೂ ಮಧ್ಯಾಹ್ನ ಹನ್ನೆರಡರಿಂದ ಮಣ್ಣಿನ ಜೊತೆಗಿನ ನನ್ನ ಕೆಲಸ ಪ್ರಾರಂಭವಾಗುತ್ತದೆ. ಹಗಲಿನಲ್ಲಿ ಪ್ಯಾಕಿಂಗ್, ವಿಚಾರಣೆ, ಆಭರಣಗಳನ್ನು ಮಾಡೋದು ಇದೇ ಆಗುತ್ತದೆ. ಅದೆಲ್ಲ ಮುಗಿಸಿಕೊಂಡು ಮಾರ್ಕೆಟಿಂಗ್ ಗಾಗಿ ವಿಡಿಯೋ ಮಾಡಲು ರಾತ್ರಿ ಹತ್ತು ಗಂಟೆ ಆಗಿರುತ್ತದೆ. ಯಾರಿಗೂ ತೊಂದರೆ ಕೊಡುವುದು ಬೇಡ ಅಂತ ಟ್ರೈಪೋಡ್​ ಇಟ್ಟುಕೊಂಡು ನಾನೇ ಶೂಟ್ ಮಾಡಿಕೊಂಡು ರಾತ್ರಿ ಹನ್ನೆರಡು ಗಂಟೆಗೆ ಪೋಸ್ಟ್ ಮಾಡುತ್ತೇನೆ. ಗಂಡನ ನೆನಪಾಗುತ್ತಾನೆ, ಅತ್ತು ಗಟ್ಟಿಯಾಗುತ್ತೇನೆ. ಈತನಕ ಟೆರಾಕೋಟ ಆಭರಣ ಆನ್ಲೈನ್ ತರಗತಿಗಳು ಹತ್ತು ಬ್ಯಾಚ್​ ಮುಗಿದಿವೆ. ನಮ್ಮ ರಾಜ್ಯ, ಹೊರರಾಜ್ಯ, ಹೊರದೇಶದಿಂದಲೂ ಕಲಿಯುವವರಿದ್ದಾರೆ. ಗ್ರಾಹಕರೂ ಇದ್ದಾರೆ.

ಮಣ್ಣಿನ ಆಭರಣ ಕಲಿಕೆಗಾಗಿ ಸಂಪರ್ಕಿಸಿ  7676960671

ಪ್ರತಿಕ್ರಿಯೆಗಾಗಿ : tv9kannadadigital@gmail.com

Published On - 11:59 am, Thu, 2 June 22