ಹಾದಿಯೇ ತೋರಿದ ಹಾದಿ: ‘ಮಾತುಬಾರದ ನನ್ನವ್ವ ಕಿವಿಯೋಲೆ ಅಡವಿಟ್ಟು ನನ್ನ ಓದಿಸಿದಳು’

ಹಾದಿಯೇ ತೋರಿದ ಹಾದಿ: ‘ಮಾತುಬಾರದ ನನ್ನವ್ವ ಕಿವಿಯೋಲೆ ಅಡವಿಟ್ಟು ನನ್ನ ಓದಿಸಿದಳು’
ಕಲಾವಿದ ಅಂಕರಾಜು

Artist : ಇಲ್ಲಿಯವರೆಗೆ ಐವತ್ತಕ್ಕೂ ಹೆಚ್ಚು ಡೊಳ್ಳು ಕುಣಿತ, ನಾಲ್ಕನೂರಕ್ಕೂ ಹೆಚ್ಚು ಮೂಕಾಭಿನಯ ಪ್ರದರ್ಶನಗಳನ್ನು ಮಾಡಿದ್ದೇನೆ. ವಿಶ್ವಜ್ಞಾನಿ ಸಾಂಸ್ಕೃತಿಕ ಕಲಾ ಸಂಸ್ಥೆಯನ್ನು ಪ್ರಾರಂಭಿಸಿ ಹಲವಾರು ಜಾನಪದ ಶಿಬಿರ, ರಂಗ ಶಿಬಿರಗಳನ್ನು ಉಚಿತವಾಗಿ ಮಾಡುತ್ತಿದ್ದೇನೆ.

ಶ್ರೀದೇವಿ ಕಳಸದ | Shridevi Kalasad

|

May 19, 2022 | 4:11 PM

ಹಾದಿಯೇ ತೋರಿದ ಹಾದಿ : ಸತತ ಪರಿಶ್ರಮ ಮತ್ತು ದೃಢ ಸಂಕಲ್ಪ ಇದ್ದರೆ ಯಾವುದೂ ಅಸಾಧ್ಯ ಅಲ್ಲ ಎನ್ನುವುದಕ್ಕೆ ಸಾಕ್ಷಿ ಬಹುಮುಖ ಪ್ರತಿಭೆಯ ಅಂಕರಾಜು. 27 ವರ್ಷದ ಇವರು ರಂಗಭೂಮಿ ಮತ್ತು ಜಾನಪದ ಕಲಾವಿದ, ನಿರ್ದೇಶಕ, ಸಂಗೀತ ನಿರ್ದೇಶಕ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಲಾಸಾಧನೆ  ಮಾಡಿದ ಇವರು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹೊಸಮಾಲಂಗಿ ಗ್ರಾಮದವರು. ಎನ್. ನಂಜುಂಡ ಮತ್ತು ರಾಜಮ್ಮ ದಂಪತಿಗಳ ಒಬ್ಬರೇ ಮಗ. ‘ನನ್ನವ್ವನಿಗೆ ಕಿವಿ ಕೇಳಿಸುವುದಿಲ್ಲ. ಮಾತು ಬರುವುದಿಲ್ಲ. ನಾಟಿ ಮಾಡುವುದು, ಕಳೆ ಕೀಳುವುದು, ಕಣ ಮಾಡುವುದು, ಗಾರೆ ಕೆಲಸ ಮಾಡಿ ನನ್ನನ್ನು ಸಾಕಿದ್ದಾಳೆ. ಆ ಸಮಯದಲ್ಲಿ ನನ್ನ ಅಪ್ಪ ಬೇರೆ ಊರುಗಳಿಗೆ ಕಾಫಿ ಎಸ್ಟೇಟ್, ತೋಟದ ಕೆಲಸಕ್ಕೆ ತಿಂಗಳಾನುಗಟ್ಟಲೆ ಹೋಗಿಬಿಡುತ್ತಿದ್ದರು. ನಾನು ಹುಟ್ಟಿದಾಗಲೂ ಅಪ್ಪ ಊರಿನಲ್ಲಿ ಇರಲಿಲ್ಲವಂತೆ. ನನ್ನ ಸಾಕಿ ಬೆಳೆಸಿದ್ದು ನನ್ನವ್ವನೇ. ಇವತ್ತು ನಾನು ಏನೇ ಆಗಿದ್ದರೂ ನನ್ನವ್ವನಿಂದಲೇ’ ಎನ್ನುತ್ತಾರೆ ಅಂಕರಾಜು. ಜ್ಯೋತಿ ಎಸ್, ಸಿಟಿಝೆನ್ ಜರ್ನಲಿಸ್ಟ್ (Jyothi S)

(ಹಾದಿ 19)

‘ನಾನು ಬಾಲ್ಯದಲ್ಲಿ ಬಹಳ ತುಂಟನಾಗಿದ್ದೆ. ಶಾಲೆಗೆ ಹೋಗದೆ ಯಾರಾದರೂ ಕೆಲಸ ಹೇಳಿದ್ರೆ ಆರಾಮವಾಗಿ ಇಷ್ಟಪಟ್ಟು ಮಾಡುತ್ತಿದ್ದೆ. ಆಗೆಲ್ಲಾ ಅಪ್ಪ ಬೇವಿನಮರಕ್ಕೆ ಕಟ್ಟಿ ಹೊಡೆಯುತ್ತಿದ್ದರು. ಎಸ್.ಎಸ್.ಎಲ್.ಸಿ ಗೆ ಬರುವ ತನಕ ಶತದಡ್ಡ ಅಂತ ಅಂದುಕೊಂಡಿದ್ದೆ. ಮತ್ತದು ಸಾಬೀತು ಕೂಡ ಆಗಿತ್ತು. ಯಾವಾಗಲು ಅನುತ್ತೀರ್ಣ ಇಲ್ಲವೇ ಜಸ್ಟ್ ಪಾಸ್ ಆಗಿರುತ್ತಿದ್ದೆ. ಒಂಭತ್ತನೇ ತರಗತಿಗೆ ಹೋದರೂ ಇಂಗ್ಲಿಷ್ ಬರುತ್ತಿರಲಿಲ್ಲ. ಆಗ ಎಸ್.ಎಸ್.ಎಲ್.ಸಿ ಯಲ್ಲಿ ನಮ್ಮ ಸಮುದಾಯದಲ್ಲಿ ಪಾಸ್ ಆದವರೇ ಇಬ್ಬರು. ಅದರಲ್ಲಿ ನಾನು ಒಬ್ಬನಾಗಿದ್ದೆ. ಮೂರು ವಿಷಯಗಳಲ್ಲಿ 30 ಅಂಕಗಳು ಬಂದಿದ್ದವು. ಯಾವುದಾದರು ಒಂದು ವಿಷಯದಲ್ಲಿ ಒಂದು ಅಂಕ ಕಡಿಮೆ ಬಂದಿದ್ದರೂ ನಾನು ಆಗ ಅನುತ್ತೀರ್ಣನಾಗಿರುತ್ತಿದ್ದೆ. ಒಟ್ಟಿನಲ್ಲಿ ಅಂಕರಾಜು ಎಂಬ ನನಗೆ ಅಂಕಗಳೇ ಬರುತ್ತಿರಲಿಲ್ಲ. ಹಾಗೇನಾದರೂ ಅನುತ್ತೀರ್ಣನಾಗಿದ್ದರೆ ನನಗೂ ಕೂಡ ಎಲ್ಲರಂತೆ ಬೆಂಗಳೂರು, ಮೈಸೂರಿನಲ್ಲೋ ಯಾವುದಾದರು ಸಣ್ಣಪುಟ್ಟ ಕೆಲಸ ಮಾಡಿಕೊಂಡು ಬದುಕುವ ಪರಿಸ್ಥಿತಿ ಬಂದೊದಗುತ್ತಿತ್ತು.

ಪಿ.ಯು.ಸಿಗೆ ಕೊಳ್ಳೇಗಾಲದಲ್ಲಿರುವ ವರ್ಮಾ ಕಾಲೇಜಿಗೆ ಸೇರಿಕೊಂಡೆ. ಇಂಗ್ಲಿಷ್ ಬರುವುದಿಲ್ಲ ಅಂತ ಆರ್ಟ್ಸ್ ತಗೊಂಡೆ. ಹೇಗೋ ಓದಬೇಕು ಅಂತ ಅದೇ ಕಾಲೇಜಿನ ಹಾಸ್ಟೆಲ್ಲಿನಲ್ಲಿ ಉಳಿದುಕೊಂಡೆ. ನನಗೆ ಆಗಾಗ ಆರೋಗ್ಯದಲ್ಲಿ ಏರುಪೇರು ಕೂಡ ಉಂಟಾಗುತ್ತಿತ್ತು. ಭೂಗೋಳಶಾಸ್ತ್ರ ಪಾಠ ಮಾಡುತ್ತಿದ್ದ ನಂಜುಂಡಸ್ವಾಮಿ ಮೇಷ್ಟ್ರು ನನ್ನ ಹಿನ್ನೆಲೆಯನ್ನೆಲ್ಲ ವಿಚಾರಿಸಿ ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಔಷಧಿ ಕೊಡಿಸಿದರು. ಆಗಾಗ ಹಣ್ಣುಗಳನ್ನು ತಂದುಕೊಡುತ್ತಿದ್ದರು. ಅಂದಿನಿಂದ ಮೇಷ್ಟ್ರು ಮೇಲೆ ನನಗೆ ಪ್ರೀತಿ ಹುಟ್ಟಿತು ಅವರ ಮೇಲೆ ಗೌರವ ಜಾಸ್ತಿ ಆಯ್ತು. ಅವರು ಮಾಡುವ ಪಾಠವನ್ನು ಶ್ರದ್ಧೆಯಿಂದ ಕೇಳಲು ಆರಂಭ ಮಾಡಿದೆ. ಅವರ ವಿಷಯವನ್ನು ಚೆನ್ನಾಗಿ ಓದಿ 90 ಅಂಕಗಳನ್ನು ತೆಗೆದುಕೊಂಡಿದ್ದೆ. 120 ಜನರಲ್ಲಿ ನಾನೊಬ್ಬನೇ ಅಷ್ಟು ಅಂಕಗಳನ್ನು ತೆಗೆದಿದ್ದೆ. ಮೇಷ್ಟ್ರು ಎಲ್ಲರ ಎದುರು ನನ್ನನ್ನು ಕರೆದು ಇವನ ತರಹ ಓದಬೇಕು ಅಂತ ಹೇಳಿದ್ದರು. ಮೊಟ್ಟಮೊದಲ ಬಾರಿಗೆ ಆ ಸಂದರ್ಭ ನನ್ನ ಬದುಕಿನ ಪಥವನ್ನೇ ಬದಲಾಯಿಸಿತು.

ಪಿಯುಸಿಯಲ್ಲಿ ನಾನೇ ಕಾಲೇಜಿಗೆ ಟಾಪರ್ ಆದೆ. ನಂತರ ಡಿಗ್ರಿ ಓದಲು ಮಹಾರಾಜ ಕಾಲೇಜಿನಲ್ಲಿ ಫೀಸ್ ಕಡಿಮೆ ಇತ್ತು. ರೂ. 2700 ರೂಪಾಯಿ ಕಟ್ಟಲೂ ಹಣವಿರಲಿಲ್ಲ. ಆಗ ನನ್ನವ್ವ ತನ್ನ ಕಿವಿಯೋಲೆಯನ್ನು 3000 ರೂಪಾಯಿಗೆ ಅಡವಿಟ್ಟಿದ್ದಳು. ಅವ್ವ ತನ್ನ ಮೂಕ ಮುಗ್ದ ಸನ್ನೆಯಿಂದ ಒಂದೇ ಮಾತು ಹೇಳಿದ್ಲು, ‘ನೀನು ಚೆನ್ನಾಗಿ ಓದಬೇಕು ಮಗ’ ಅಂತ. ಮೊದಲ ವರ್ಷದ ಬಿ.ಎ. ಪದವಿ ಓದುತ್ತಿರುವಾಗ ವಿದ್ಯಾಭ್ಯಾಸದ ಜೊತೆಗೆ ವಾರಕ್ಕೊಮ್ಮೆ ಮದುವೆ ಛತ್ರಗಳಲ್ಲಿ ಕೆಲಸಗಳನ್ನು ಮಾಡುತ್ತಿದ್ದೆ. ಅವರು 350 ರೂಪಾಯಿ ಸಂಬಳ ಕೊಡುತ್ತಿದ್ದರು. ಹಾಗೆ ರಜಾ ದಿನಗಳಲ್ಲಿ ಗಾರೆ ಕೆಲಸ, ಹೋಟೆಲ್ ನಲ್ಲಿ ಸಪ್ಲೈ ಮಾಡುವ ಕೆಲಸ. ನನ್ನ ವಿದ್ಯಾಭ್ಯಾಸದ ಖರ್ಚು ನೀಗತೊಡಗಿತು.

Haadiye Torida Haadi interview of Artist Ankaraju by Jyothi S

ಅಪ್ಪ ಅಮ್ಮನೊಂದಿಗೆ ಅಂಕರಾಜು

ಇದನ್ನೂ ಓದಿ : ಹಾದಿಯೇ ತೋರಿದ ಹಾದಿ: ನೀರಿನಾಳಕ್ಕಿಳಿದು ಶವತೆಗೆವ ಬಾಬಾ ಅಣ್ಣು ಸಿದ್ದಿ ಸಾಹಸಗಾಥೆ

ನಾಟಕದಲ್ಲಿ ಆಸಕ್ತಿ ಬೆಳೆಯುತ್ತ ಹೋಯಿತು. ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ತೊಡಗಿಸಿಕೊಂಡೆ. ಸ್ಕ್ರಿಪ್ಟ್, ಮೂಕಾಭಿನಯ, ನಾಟಕ, ಡೊಳ್ಳುಕುಣಿತ, ಕಂಸಾಳೆ, ಪೂಜಾ ಕುಣಿತ, ಜಾನಪದ ಗೀತೆ, ಭಾವಗೀತೆ, ಭಕ್ತಿಗೀತೆ ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸಿದೆ. ರಾಜ್ಯ, ಅಂತರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ಪಡೆದುಕೊಂಡೆ. 2016 ರಲ್ಲಿ ಡಾ.ಬಿ. ಆರ್. ಅಂಬೇಡ್ಕರ್ ವಿಶ್ವವಿದ್ಯಾನಿಲಯದಲ್ಲಿ ಒಟ್ಟು ಒಂಭತ್ತು ದೇಶಗಳು ಭಾಗವಹಿಸಿದ್ದವು. ನಮ್ಮ ತಂಡ ಭಾರತವನ್ನು ಪ್ರತಿನಿಧಿಸಿತ್ತು. ಒಂದು ವಾರ ಲಕ್ನೋದಲ್ಲಿ ಇದ್ದು ಡೊಳ್ಳು ಕುಣಿತವನ್ನು ಪ್ರದರ್ಶನ ಮಾಡಿದೆವು. ಇಲ್ಲಿಯವರೆಗೆ ಐವತ್ತಕ್ಕೂ ಹೆಚ್ಚು ಡೊಳ್ಳು ಕುಣಿತ, ನಾಲ್ಕನೂರಕ್ಕೂ ಹೆಚ್ಚು ಮೂಕಾಭಿನಯ ಪ್ರದರ್ಶನಗಳನ್ನು ಮಾಡಿದ್ದೇನೆ.

“ಧ್ವನಿ ಬೆಳಕು” ಕಾರ್ಯಕ್ರಮದ ಮುಖೇನ ‘ಭಾರತ ಭಾಗ್ಯವಿಧಾತ’ ಎಂಬ ನಾಟಕದಲ್ಲಿ ಅಭಿನಯಿಸಿದ್ದೇನೆ. 2013ರಿಂದ ನಿರಂತರವಾಗಿ ಮೈಸೂರಿನ ಹವ್ಯಾಸಿ ಕಲಾ ತಂಡಗಳಲ್ಲಿ ಸಕ್ರಿಯವಾಗಿ ನನ್ನನ್ನು ನಾನು ತೊಡಗಿಸಿಕೊಂಡು ನಾಟಕಗಳನ್ನು ಮಾಡುತ್ತ ಬಂದಿದ್ದೇನೆ. ರಾಕ್ಷಸ, ಊರುಭಂಗ, ಬದುಕಿ ಸತ್ತವರು, ತಾಮ್ರ ಪತ್ರ, ಕಿಸಾ ಗೌತಮಿ, ಅಂಗುಲಿಮಾಲ, ಬೆಲ್ಲದ ದೋಣಿ, ದೇವನಾಂಪ್ರಿಯ, ಅಶೋಕ ಮಹಾ ಪೌರ್ಣಿಮೆ, ಅನ್ನಾವತಾರ, ನನಗ್ಯಾಕೋ ಡೌಟು, ಕೋರ್ಟ್ ಮಾರ್ಷಲ್ ಇನ್ನೂ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದೇನೆ. ಕೋರ್ಟ್ ಮಾರ್ಷಲ್ ನಾಟಕದಲ್ಲಿ ಬಿಕಾಷ್ ರಾಯ್ ಪಾತ್ರವನ್ನು ಮಾಡಿದ್ದೆ. 2019 ರಲ್ಲಿ ಉಡುಪಿ ರಾಜ್ಯ ಮಟ್ಟದ ನಾಟಕದ ಸ್ಪರ್ಧೆಯಲ್ಲಿ ಬೆಸ್ಟ್ ಆಕ್ಟರ್ ಅವಾರ್ಡ್ ಬಂತು. ರಾಜ್ಯ ಯುವರತ್ನ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಸ್ಕ್ರಿಪ್ಟ್, ಮೂಕಾಭಿನಯ, ನಿರ್ದೇಶನ, ಮಾಡುತ್ತ ಬಹುರೂಪಿ ನಾಟಕೋತ್ಸವ, ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಗಳಲ್ಲೂ ಅಭಿನಯಿಸಿದ್ದೇನೆ’.

ಇದನ್ನೂ ಓದಿ : ಹಾದಿಯೇ ತೋರಿದ ಹಾದಿ: ಹಸನಾಪುರದ ದುಂಡಮ್ಮಜ್ಜಿಯ ಬದುಕು ಹಸನಾಗಿರುವುದು ಹೀಗೆ

ಬಿ. ಎ. ಪದವಿ ಮುಗಿದ ನಂತರ ನಾನು ಯಾಕೆ ಇಂಗ್ಲೀಷ್ ಕಲಿಯಬಾರದು ಅಂತ ಎಂ. ಎಸ್ಸಿ ಇನ್ ಲೈಬ್ರರಿ ಸೈನ್ಸ್ ಓದಿದೆ. ಶೇ. 76 ಅಂಕ ಗಳಿಸಿದೆ. ಏಳು ವರ್ಷದ ಅನುಭವ ಇದ್ದರೂ ನಾನು ಯಾವುದೇ ರೀತಿಯ ರಂಗ ಶಿಕ್ಷಣ ಪಡೆದುಕೊಂಡಿರಲಿಲ್ಲ ಎಂಬ ಕೊರಗು ಇತ್ತು. ಆಗ ಮೈಸೂರು ರಂಗಾಯಣ ಸೇರಿದೆ. ನಟನೆಯ ಕೋರ್ಸ್ ಕಲಿಯುತ್ತಲೇ ಅಸಿಸ್ಟೆಂಟ್ ಲೈಬ್ರರಿಯನ್ ಆಗಿ ಕೆಲಸ ಮಾಡುತ್ತಿದ್ದೆ. ‘ಚಂದ್ರಗಿರಿ ತೀರದಲ್ಲಿ’ ಕಾದಂಬರಿಯನ್ನು ರಂಗರೂಪ ಮಾಡಿ ಆ ನಾಟಕದಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದೆ. ಅದಕ್ಕೂ ಮೊದಲು ಅರಿವು, ರಾಕ್ಷಸ ಎಂಬ ನಾಟಕಗಳ ನಿರ್ದೇಶನವನ್ನು ಮಾಡಿದ್ದೆ. 2018ರಲ್ಲಿ ವಿಶ್ವಜ್ಞಾನಿ ಸಾಂಸ್ಕೃತಿಕ ಕಲಾ ಸಂಸ್ಥೆಯನ್ನು ಪ್ರಾರಂಭಿಸಿದ್ದೇನೆ. ಸಂಸ್ಥೆಯ ಮುಖಾಂತರ ಹಲವಾರು ಜಾನಪದ ಶಿಬಿರ, ರಂಗ ಶಿಬಿರಗಳನ್ನು ಉಚಿತವಾಗಿ ಮಾಡುತ್ತಿದ್ದೇನೆ. ಕೆರೆಯ ನೀರನ್ನು ಕೆರೆಗೇ ಚೆಲ್ಲಬೇಕು.

ಪ್ರತಿಕ್ರಿಯೆಗಾಗಿ : tv9kannadadigital@gmail.com

ಇದನ್ನೂ ಓದಿ

Follow us on

Related Stories

Most Read Stories

Click on your DTH Provider to Add TV9 Kannada