No Begging : ‘ಹತ್ತುರೂಪಾಯಿ ಕೊಟ್ಟು ಇನ್ನೂ ಎಲ್ಲಿ ಕಳಿಸುತ್ತೀರಿ? ಅದೇ ಹತ್ತು ರೂಪಾಯಿಗೆ ದಿನವೊಂದಕ್ಕೆ ಸಾವಿರ ಬೀಡಾ ಕಟ್ಟುತ್ತಿದ್ದೆ’

Self Respect : ‘ಆ ಪ್ರಯಾಣಿಕ, ಭಿಕ್ಷುಕನೂ ಕಾಲಿಲ್ಲದವನೂ ಆದ ನೀನು ಅದೆಷ್ಟು ಮಾತನಾಡುತ್ತೀಯಾ? ಎಂದು ಸಿಟ್ಟಿಗೆದ್ದ. ಆಗ ಕಂಡಕ್ಟರ್ ಹತ್ತಿರ, ‘ಸರ್, ಇನ್ನೊಂದು ಟಿಕೆಟ್​ಗೆ ಹಣ ಎಷ್ಟು? ಅವರಿಗೆ ನನ್ನ ಪಕ್ಕದಲ್ಲಿ ಕುಳಿತುಕೊಳ್ಳಲು ಅವಮಾನವಾದರೆ ನಾನೇ ಬೇರೆ ಸೀಟ್​ಗೆ ಹೋಗುತ್ತೇನೆ. ನಿಮಗೇನು ಸೀಟ್ ಭರ್ತಿಯಾಗಬೇಕು. ಅವರಿಗೆ ನಾನು ಪಕ್ಕದಲ್ಲಿ ಕೂರಬಾರದು ಅಲ್ಲವೆ? ಎಂದೆ.’ ಶೇಖ್ ಖಾಜಾ ಮೋದಿನ್

No Begging : ‘ಹತ್ತುರೂಪಾಯಿ ಕೊಟ್ಟು ಇನ್ನೂ ಎಲ್ಲಿ ಕಳಿಸುತ್ತೀರಿ? ಅದೇ ಹತ್ತು ರೂಪಾಯಿಗೆ ದಿನವೊಂದಕ್ಕೆ ಸಾವಿರ ಬೀಡಾ ಕಟ್ಟುತ್ತಿದ್ದೆ’
ಸ್ವಾವಲಂಬಿಯಾಗುವ ಕನಸಿನೊಂದಿಗೆ ಶೇಕ್ ಖಾಜಾ ಮೋದಿನ್
Follow us
|

Updated on: Nov 30, 2021 | 2:15 PM

No Begging : ಬೆಂಗಳೂರಿನ ಮುನಿರೆಡ್ಡಿಪಾಳ್ಯದಲ್ಲಿ ಬೆಳಗಿನ ಹೊತ್ತು, ಆರ್. ಟಿ. ನಗರದಲ್ಲಿ ಮಧ್ಯಾಹ್ನದ ಹೊತ್ತು ಭಿಕ್ಷಾಟನೆ ಮಾಡುವ ಶೇಖ್ ಖಾಜಾ ಮೋದಿನ್ ಪೋಲಿಯೋದಿಂದಾಗಿ ಬಾಲ್ಯದಲ್ಲಿಯೇ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡರು. ದುಡಿಯುವ ಮನಸ್ಸಿದ್ದರೂ ಕೆಲಸ ಕೊಡುವ ಮನಸ್ಸುಗಳಿಲ್ಲದೆ ಈಗಲೂ ಭಿಕ್ಷಾಟನೆಯಿಂದಲೇ ಅನಿವಾರ್ಯವಾಗಿ ಜೀವನ ನಡೆಸುತ್ತಿದ್ದಾರೆ. ದುಡಿದು ತಿನ್ನಬೇಕು ಎನ್ನುವ ಸಮಾಜವೇ ತನ್ನನ್ನು ಹೀಗೆ ನಡೆಸಿಕೊಳ್ಳುತ್ತಿರುವುದರ ಬಗ್ಗೆ ಅತೀವ ಬೇಸರವಿದೆ. ವಯಸ್ಸು ನಲವತ್ತೆರಡಾದರೂ ಸ್ವಂತ ಪಾನ್​ ಅಂಗಡಿಯೊಂದನ್ನು ತೆರೆದು ಸ್ವಾವಲಂಬಿಯಾಗುವ ಕನಸಿಗಾಗಿ ಹಣವನ್ನು ಕೂಡಿಡುತ್ತಿದ್ದಾರೆ.’ ಜ್ಯೋತಿ ಎಸ್. ಲೇಖಕಿ

ಊಟ ಕೊಡುತ್ತಿದ್ದರು, ಹತ್ತೋ ಇಪ್ಪತ್ತೋ ದುಡ್ಡು ಕೊಡುತ್ತಿದ್ದರು. ಆದರೆ, ಯಾರೂ ಕೆಲಸ ಕೊಡುತ್ತಿರಲಿಲ್ಲ ಎನ್ನುತ್ತಾರೆ ಆಂಧ್ರಪ್ರದೇಶದ ಕಡಪದವರಾದ ಮೋದಿನ್. ಪೋಲಿಯೋದಿಂದಾಗಿ ತನ್ನ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದಾರೆ. ತಂದೆ ಶೇಖ್ ಖಾದರ್ ಹುಸ್ಸೇನ್ ಲಾರಿ ಡ್ರೈವರ್ ಆಗಿದ್ದರು. ಅಪಘಾತವೊಂದರಲ್ಲಿ ತೀರಿದರು. ‘ತಂದೆಯ ನಂತರ ಎಲ್ಲ ಜವಾಬ್ದಾರಿಯನ್ನು ತಾಯಿಯೇ ನೋಡಿಕೊಳ್ಳುತ್ತಿದ್ದರು. ಕೆಲವು ದಿನಗಳಲ್ಲಿಯೇ ತಾಯಿ ಶೇಖ್ ಮೆಹರುನ್ನೀಸಾ ಕೂಡ ರಕ್ತದೊತ್ತಡದಿಂದ ತೀರಿಕೊಂಡರು. ನನಗೆ ಇಬ್ಬರು ತಂಗಿಯರು. ಚಿಕ್ಕವರಿರುವಾಗಲೇ ಅನಾಥರಾದೆವು. 8ನೇ ತರಗತಿಯಲ್ಲಿ ಓದುತ್ತಿದ್ದೆ. ತಂಗಿಯರ ಜವಾಬ್ದಾರಿ, ಮನೆ ನಿರ್ವಹಣೆ ಸಲುವಾಗಿ ಶಾಲೆ ಬಿಡುವುದು ಅನಿವಾರ್ಯವಾಯಿತು.’

ಶಾಲೆ ಬಿಟ್ಟು ಕೆಲಸ ಹುಡುಕುತ್ತಾ ಕಡಪದ ಬೀಡಾ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿದೆ. ಬೆಳಗಿನ ಜಾವ 6ರಿಂದ ರಾತ್ರಿ 11ರತನಕ ಕೆಲಸ. ಒಂದು ದಿನಕ್ಕೆ ಸುಮಾರು ಒಂದು ಸಾವಿರ ಬೀಡಾ ಕಟ್ಟುತ್ತಿದ್ದೆ. ಇಷ್ಟೆಲ್ಲಾ ಜೀತ ಮಾಡಿದರೂ ಅವರು ಕೊಡುತ್ತಿದ್ದ ಕೂಲಿ ದಿನಕ್ಕೆ 10 ರೂ. ತಿಂಡಿಯೂ ಇಲ್ಲ ಊಟವನ್ನೂ ಕೊಡುತ್ತಿದ್ದಿಲ್ಲ. ಆಗ ರಿಕ್ಷಾ ಸೌಲಭ್ಯ ಕೂಡ ಇರಲಿಲ್ಲ. ಮಧ್ಯಾಹ್ನದ ಹೊತ್ತಿಗೆ ಮೂರು ಚಕ್ರದ Tvs Cycle ನಲ್ಲಿ ಹೋಗಿ ಒಂದು ರೂಪಾಯಿ ಕೊಟ್ಟು ದೋಸೆ ತಿಂದು ಬರುತ್ತಿದ್ದೆ. ರಾತ್ರಿ ಮನೆಯಲ್ಲಿ ಉಟ ಮಾಡುತ್ತಿದ್ದೆ. ಸುಮಾರು ವರ್ಷಗಳ ನಂತರವೂ ಅವರು ಕೂಲಿ ಹೆಚ್ಚು ಮಾಡಲೇ ಇಲ್ಲ.  ಮನೆಯ ನಿರ್ವಹಣೆ ಇಬ್ಬರು ತಂಗಿಯರ ಜವಾಬ್ದಾರಿ ನನ್ನ ಮೇಲೆ ಇದ್ದುದರಿಂದ ಅಲ್ಲಿ ಕೆಲಸ ಬಿಡಲು ತೀರ್ಮಾನ ಮಾಡಿದೆ.

ತೆಲುಗು, ಹಿಂದಿ, ಉರ್ದು, ಕನ್ನಡ ಭಾಷೆಗಳನ್ನು ಸರಾಗವಾಗಿ ಮಾತನಾಡಲು ಕಲಿತಿದ್ದೇನೆ. ಅಲ್ಲಿ ಕೆಲಸ ಬಿಟ್ಟ ನಂತರ ಬೇರೆ ಕೆಲಸ ಹುಡುಕಿಕೊಂಡು ಅಜ್ಮೀರ್, ಹೈದರಾಬಾದ್, ರಾಜಸ್ಥಾನ್, ಗೋವಾ ಎಲ್ಲಾ ಕಡೆ ಸುತ್ತಾಡಿದೆ. ಒಬ್ಬರು, ಅಯ್ಯೋ ಕಾಲಿಲ್ಲ! ನಿಮಗೆ ಯಾರು ಕೆಲಸ ಕೊಡುತ್ತಾರೆ ಹೋಗಿ ಅಂತ ಹೇಳಿ ಹತ್ತು ರೂಪಾಯಿ ಕೊಟ್ಟು ಮುಂದೆ ಹೋಗಿ ಅಂತಿದ್ರು. ಎಷ್ಟು ಕಡೆ ಕೆಲಸ ಕೇಳಿದರೂ ಇದೇ ಉತ್ತರ ಮರುಕಳಿಸುತ್ತಿತ್ತು. ಅಲ್ಲಿಂದ ಮುಂದೆ ಕಳಿಸಿಬಿಡುತ್ತಿದ್ದರು.

ದಿನ ಕಳೆದಂತೆ ಖರ್ಚು ಹೆಚ್ಚಾಯಿತು. ತಂಗಿಯರು ಬೆಳೆದುನಿಂತರು. ಒಳ್ಳೆಯ ಕಡೆ ಸಂಬಂಧ ನೋಡಿ ಮದುವೆ ಮಾಡಲು ಹಣ ಸಂಪಾದನೆ ಮಾಡಬೇಕೆಂದು ನಿರ್ಧರಿಸಿ ಬೆಂಗಳೂರಿನ ಬಸ್ ಹತ್ತಿ ಸಿಟಿ ಮಾರ್ಕೆಟ್ಟಿಗೆ ಬಂದಿಳಿದೆ. ಆಗಲೂ ಅಷ್ಟೇ. ಕೆಲಸ ಕೇಳಲು ಹೋದಲ್ಲೆಲ್ಲ ಕಾಲಿಲ್ಲ, ನೀನೇನು ಕೆಲಸ ಮಾಡುತ್ತೀಯ ಅಂತ ಹತ್ತೋ, ಇಪ್ಪತ್ತೋ ಕೊಟ್ಟು ಮುಂದೆ ಹೋಗು ಎನ್ನುತ್ತಿದ್ದರು. ನನಗೆ ಸುಮ್ಮನೆ ಹಣ ಬೇಡ, ಕೆಲಸ ಕೊಡಿ ಮಾಡುತ್ತೇನೆ ಎಂದರೂ ಯಾರೂ ಕೊಡದಾದಾಗ ಭೀಕ್ಷಾಟನೆಯೇ ಬದುಕಿಗೆ ದಾರಿಯಾಯಿತು.

No begging want be self reliant says Shaik Khaja Modin writer jyothi s penned his story

ಮೋದಿನ್

ಬೆಂಗಳೂರಿನ ಮುನಿರೆಡ್ಡಿಪಾಳ್ಯದಲ್ಲಿ ಬೆಳಗಿನ ಹೊತ್ತು, ಆರ್. ಟಿ. ನಗರದಲ್ಲಿ ಮಧ್ಯಾಹ್ನದ ಹೊತ್ತು ಭಿಕ್ಷಾಟನೆ ಮಾಡುತ್ತೇನೆ. ಸಮೀಪದ ಪಾರ್ಕ್ ಹತ್ತಿರ ಶೌಚಾಲಯ ಇದೆ. ಅಲ್ಲಿ ಸ್ನಾನ, ನಿತ್ಯಕರ್ಮಗಳನ್ನು ಮುಗಿಸಿಕೊಳ್ಳುತ್ತೇನೆ. ಯಾರಾದರೂ ತಿಂಡಿ, ಊಟ ಏನಾದರೂ ಕೊಟ್ಟರೆ ಮಾಡುತ್ತೇನೆ. ಇಲ್ಲವಾದಲ್ಲಿ ಹೋಟೆಲ್​ನಲ್ಲಿ ಇಡ್ಲಿಯೋ, ಉಪ್ಪಿಟ್ಟೋ ತಿನ್ನುತ್ತೇನೆ. ತಿಂದನಂತರ ಯಥಾಪ್ರಕಾರ ನನ್ನ ಭಿಕ್ಷಾಟನೆಯ ಸ್ಥಳಕ್ಕೆ ತಲುಪುತ್ತೇನೆ. ಮಳೆ ಬಂದರೆ ದೊಡ್ಡ ಛತ್ರಿಯೇ ಆಸರೆ. ನಿದ್ರೆಗೆ ಹೊಲೆದಿಟ್ಟುಕೊಂಡ ಅಕ್ಕಿಮೂಟೆಯ ಖಾಲಿಚೀಲಗಳೇ ಹಾಸಿಗೆ.

ದಿನಂಪ್ರತಿ ಹೀಗೆ ಭಿಕ್ಷಾಟನೆಯಿಂದ ಸಂಪಾದನೆಯಾದ ಹಣವನ್ನೆಲ್ಲ ನನ್ನ ಖರ್ಚು ಕಳೆದು ಉಳಿಸಿ ಸ್ವಲ್ಪಸ್ವಲ್ಪ ಹಣವನ್ನು ಕೂಡಿಟ್ಟು ಒಳ್ಳೆಯ ಕಡೆ ಸಂಬಂಧ ನೋಡಿ ನನ್ನ ಇಬ್ಬರೂ ತಂಗಿಯಂದಿರ ಮದುವೆ ಮಾಡಿದ್ದೇನೆ. ಈಗ ಅವರಿಬ್ಬರೂ ಗಂಡನಮನೆಯಲ್ಲಿ ಮಕ್ಕಳ ಜೊತೆಗೆ ಸುಖವಾಗಿದ್ದಾರೆ. ನಾನು ಅವರನ್ನೆಲ್ಲ ನೋಡಬೇಕು ಅನ್ನಿಸಿದಾಗ ಒಂದು ವಾರ ಹೋಗಿ ಅವರೊಡಗೂಡಿ ಸಂತೋಷದಿಂದ ಇದ್ದು ಬರುತ್ತೇನೆ.

ನನಗೀಗ 42 ವರ್ಷಗಳು. ಒಮ್ಮೆ ಭಿಕ್ಷುಕಿಯೊಬ್ಬಳಿಗೆ ಹೇಳಿದೆ. ನೀನು ಎಲ್ಲೂ ಭಿಕ್ಷೆಗೆ ಹೋಗಬೇಡ, ಮನೆಯಲ್ಲಿ ಆರಾಮವಾಗಿರು. ಇದ್ದುದರಲ್ಲಿಯೇ ನಾನು ನಿನ್ನನ್ನು ಸುಖವಾಗಿ ನೋಡಿಕೊಳ್ಳುತ್ತೇನೆ. ನೆಮ್ಮದಿಯ ಬದುಕು ಕಟ್ಟಿಕೊಳ್ಳೋಣ. ನನ್ನ ಮದುವೆ ಮಾಡಿಕೊಳ್ಳುತ್ತೀಯ ಎಂದು ಕೇಳಿದೆ. ಆಗ ಆ ಹೆಂಗಸು ನಿನಗೆ ಕಾಲೇ ಇಲ್ಲ. ಮದುವೆ ಯಾಕೆ ಬೇಕು ಅಂತ ಹೊರಟು ಹೋದರು. ಕಾಲಿಲ್ಲ ಅಂತ ಕೆಲಸವೇ ಕೊಡುವುದಿಲ್ಲ. ಇನ್ನು ನನ್ನನ್ನು ಯಾರು ಮದುವೆ ಮಾಡಿಕೊಳ್ಳುತ್ತಾರೆ?

ಒಮ್ಮೆ ಅಮರಾವತಿಗೆ ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಪ್ರಯಾಣಿಕರೊಬ್ಬರು ನನ್ನ ಪಕ್ಕದಲ್ಲಿ ಕುಳಿತುಕೊಳ್ಳಲು ಸಿಡಿಮಿಡಿ ಮಾಡಿದರು. ಇಂತಹ ಭಿಕ್ಷುಕರಿಗೆಲ್ಲ ಬಸ್​ನಲ್ಲಿ ಯಾಕೆ ಸೀಟ್ ಕೊಡುತ್ತೀರಿ ಎಂದು. ಅಲ್ಲಿಯವರೆಗೂ ಸಹನೆಯಿಂದ ಇದ್ದ ನನಗೂ ಕೋಪ ಶುರುವಾಯಿತು. ನಾನೂ ಮನುಷ್ಯನೇ, ನಿಮ್ಮ ಹಾಗೆ ನಾನೂ ಐನೂರು ರೂಪಾಯಿ ಕೊಟ್ಟು ಬಸ್ ಹತ್ತಿದ್ದೇನೆ ಎಂದೆ. ಆಗ ಆ ಪ್ರಯಾಣಿಕ, ಭಿಕ್ಷೆ ಬೇಡುವವನು, ಕಾಲಿಲ್ಲದವನೂ ಆದ ನೀನು ಅದೆಷ್ಟು ಮಾತನಾಡುತ್ತೀಯಾ? ಎಂದು ಸಿಟ್ಟಿಗೆದ್ದ. ಆಗ ನಾನು ಕಂಡಕ್ಟರ್ ಹತ್ತಿರ, ‘ಸರ್, ಇನ್ನೊಂದು ಟಿಕೆಟ್ ಹಣ ಎಷ್ಟು? ಅವರಿಗೆ ನನ್ನ ಪಕ್ಕದಲ್ಲಿ ಕುಳಿತುಕೊಳ್ಳಲು ಮುಜುಗರ, ಅವಮಾನವಾದರೆ ನಾನೇ ಬೇರೆ ಸೀಟ್​ಗೆ ಹೋಗುತ್ತೇನೆ. ಆರಾಮಾಗಿ ಮಲಗಿಕೊಂಡೇ ಹೋಗುತ್ತೇನೆ. ನಿಮಗೇನು ಸೀಟ್ ಭರ್ತಿಯಾಗಬೇಕು. ಅವರಿಗೆ ನಾನು ಪಕ್ಕದಲ್ಲಿ ಕೂರಬಾರದು ಅಲ್ಲವೆ? ಎಂದೆ.

ಒಂದಷ್ಟು ಹಣ ಕೂಡಿಟ್ಟ ಮೇಲೆ ನಾನು ಇನ್ನಾದರೂ ಭಿಕ್ಷಾಟನೆ ನಿಲ್ಲಿಸಲೇಬೇಕು. ನನ್ನ ಹುಟ್ಟೂರಾದ ಕಡಪದಲ್ಲಿ ನನ್ನದೇ ಆದ ಸ್ವಂತ ಬೀಡಾ ಅಂಗಡಿಯೊಂದನ್ನು ತೆರೆದು ಸ್ವಾವಲಂಬಿಯಾಗಲೇಬೇಕು.

No begging want be self reliant says Shaik Khaja Modin writer jyothi s penned his story

ಜ್ಯೋತಿ ಎಸ್.

ಜ್ಯೋತಿ ಎಸ್. ಅವರ ಈ ಬರಹವನ್ನೂ ಓದಿ : Kidney Donor Required : ‘ಒಂದು ಕಿಡ್ನಿ ಸಾಕು ನನ್ನ ಹುಟ್ಟನ್ನು ಸಾರ್ಥಕಗೊಳಿಸಿ ತೋರಿಸುತ್ತೇನೆ’