Kidney Donor Required : ‘ಒಂದು ಕಿಡ್ನಿ ಸಾಕು ನನ್ನ ಹುಟ್ಟನ್ನು ಸಾರ್ಥಕಗೊಳಿಸಿ ತೋರಿಸುತ್ತೇನೆ’

Confidence : ‘ಎಲ್ಲರೂ ಒಂದು ದಿನ ಸಾಯುತ್ತಾರೆ. ನಾನು ಕೂಡ ಸಾಯುತ್ತೇನೆ, ಆದರೆ ಭಯ ಪಟ್ಟುಕೊಂಡು ಯಾಕೆ ಮೊದಲೇ ಸಾಯಬೇಕು? ಬದುಕಿರುವಷ್ಟು ದಿನ ಹೋರಾಡೋಣ ಎನ್ನುವ ಧೈರ್ಯವನ್ನು ತಂದುಕೊಂಡೆ. ನನಗೀಗ 29 ವರ್ಷ.’ ಫೋಟೋ ಫ್ರೇಮ್ ವರ್ಕರ್ ವೀರ

Kidney Donor Required : ‘ಒಂದು ಕಿಡ್ನಿ ಸಾಕು ನನ್ನ ಹುಟ್ಟನ್ನು ಸಾರ್ಥಕಗೊಳಿಸಿ ತೋರಿಸುತ್ತೇನೆ’
ತನ್ನ ಅಂಗಡಿಯೊಂದಿಗೆ ವೀರ

Kidney Donor Required : ನನ್ನ ಮಗಳು ಮಾಡಿದ ಪೇಂಟಿಂಗ್​ಗಳನ್ನೆತ್ತಿಕೊಂಡು ಅಮೃತಹಳ್ಳಿಯಲ್ಲಿರುವ ಫ್ರೇಮ್ ಅಂಗಡಿಯೊಂದಕ್ಕೆ ಹೋಗುತ್ತಿರುತ್ತೇನೆ. ಆದರೆ ಕೊರೊನಾದಿಂದಾಗಿ ಅತ್ತ ಸುಳಿಯದೆ ಎರಡು ವರ್ಷಗಳೇ ಕಳೆದಿದ್ದವು. ಮೊನ್ನೆ ಫ್ರೇಮ್ ಹಾಕಿಸಲೆಂದು ಹೋದಾಗ ಅಂಗಡಿಯ ಸ್ವರೂಪವೇನೋ ಅದೇ ಇತ್ತು. ಆದರೆ ಅಂಗಡಿಯವರು ಬದಲಾಗಿದ್ದಾರಾ ಎನ್ನುವ ಅನುಮಾನ ಬಂದಿತು. ಹಾಗೇ ಮಾತನಾಡಿಸುತ್ತಾ ಹೋದಾಗ ಇಲ್ಲ ಇಲ್ಲ ಒಳಗಿರುವವರು ಅವರೇ ಎಂದು ತಿಳಿದರೂ ಯಾಕೋ ಸಮಾಧಾನವೆನ್ನಿಸಲಿಲ್ಲ. ಅವರೊಂದಿಗೆ ಮಾತನಾಡುತ್ತಾ ಹೋದೆ. ತನ್ನ ಎರಡೂ ಕಿಡ್ನಿ ವೈಫಲ್ಯವಾದರೂ ಬದುಕುವ ಭರವಸೆ ಕಳೆದುಕೊಳ್ಳದೆ ಪ್ರತಿನಿತ್ಯ ಬದುಕಿಗಾಗಿ ಹೋರಾಡುತ್ತಿರುವ ವೀರ ಮನಸ್ಸಿನಿಂದ ಅವರೇ ಆಗಿದ್ದರು. ಆದರೆ, ಚಿಕಿತ್ಸೆಯಿಂದಾಗಿ ದೇಹ ಜರ್ಜರಿತವಾಗಿ ಗುರುತು ಸಿಗಲಾರದಂತಾಗಿದ್ದರು. ‘ಎಲ್ಲರೂ ಒಂದು ದಿನ ಸಾಯುತ್ತಾರೆ. ನಾನು ಕೂಡ ಸಾಯುತ್ತೇನೆ, ಆದರೆ ಭಯ ಪಟ್ಟುಕೊಂಡು ಯಾಕೆ ಮೊದಲೇ ಸಾಯಬೇಕು? ಬದುಕಿರುವಷ್ಟು ದಿನ ಹೋರಾಡೋಣ ಎನ್ನುವ ಧೈರ್ಯವನ್ನು ತಂದುಕೊಂಡೆ’ ಎಂದ ವೀರನಿಗೆ 29 ವರ್ಷ. ಮುಂದಿನದು ಅವರ ಮಾತಿನಲ್ಲೇ ಓದಿಕೊಳ್ಳಿ.
ಜ್ಯೋತಿ ಎಸ್. 

ನಾವು ಮೂಲತಃ ತಮಿಳುನಾಡಿನ ತಿರುಣಾಮಲೈನವರು. ಆದರೆ, ಹುಟ್ಟಿ ಬೆಳೆದದ್ದು ಬೆಂಗಳೂರಿನ ದೊಮ್ಮಲೂರಿನಲ್ಲಿ. ರಾಮನಾಥನಗರದಲ್ಲಿ ಅಪ್ಪ ಕೆಲಸ ಮಾಡುತ್ತಿದ್ದುದರಿಂದ ಅಲ್ಲೇ ಶೆಡ್ ಹಾಕಿಕೊಂಡು ವಾಸಮಾಡತೊಡಗಿದೆವು. ನನಗೆ ಅಣ್ಣ ಮತ್ತು ತಂಗಿ ಇದ್ದಾರೆ. ಅಮ್ಮ ಕನ್ನಡದವರು. ಅಪ್ಪ ತಮಿಳು. ಅಪ್ಪನ ಸಂಬಂಧಿಕರೆಲ್ಲ ಕನ್ನಡದವಳನ್ನು ಮದುವೆ ಮಾಡಿಕೊಂಡಿದ್ದೀಯ ಅಂತ ಜಗಳ ಮಾಡಲು ಅಪ್ಪನನ್ನು ಆಗಾಗ ಪ್ರೆರೇಪಿಸುತ್ತಿದ್ದರು. ಒಂದು ದಿನ ಜಗಳ ವಿಕೋಪಕ್ಕೆ ಹೋಯಿತು. ಅಪ್ಪನಿಗೆ ಹೆದರಿದ ಅಮ್ಮ ಮೂರು ಜನ ಮಕ್ಕಳನ್ನು ಕರೆದುಕೊಂಡು ಚಿಕ್ಕಮ್ಮನ ಮನೆಗೆ ಬಂದರು. ಸ್ವಲ್ಪ ದಿನ ಅವರ ಮನೆಯಲ್ಲಿ ಇದ್ದೆವು. ನಂತರದಲ್ಲಿ ‘ಇಲ್ಲೇ ಇದ್ದರೆ ನಿಮಗೆ ಊಟ ಹಾಕಲು ನಮಗೆ ಆಗಲ್ಲ, ಇನ್ನು ನೀವು ಹೋಗಬಹುದು’ ಎಂಬ ಸೂಚನೆ ಸಿಗುತ್ತಿದ್ದಂತೆ ಅಮ್ಮ ಅಲ್ಲಿಂದ ನಮ್ಮನ್ನು ಕರೆದುಕೊಂಡು ಅಮೃತಹಳ್ಳಿಯ ಲಕ್ಷ್ಮೀ ನಾರಾಯಣ ದೇವಸ್ಥಾನದ ಹತ್ತಿರ ಬಂದರು. ದಿಕ್ಕು ತೋಚದೆ ಅಮ್ಮ ನಮ್ಮನ್ನೆಲ್ಲ ದೇವಸ್ಥಾನದಲ್ಲಿಯೇ ಎರಡು ದಿನ ಮಲಗಿಸಿ ಕಾಲ ಕಳೆದರು.

ಆಮೇಲೆ 500 ರೂ. ಅಡ್ವಾನ್ಸ್ ಕೊಟ್ಟು ಚಿಕ್ಕದೊಂದು ಮನೆ ಬಾಡಿಗೆಗೆ ತೆಗೆದುಕೊಂಡರು. ಅಮ್ಮ, ಅಣ್ಣ, ನಾನು, ಎಲ್ಲರೂ ಏನೇ ಕೆಲಸ ಸಿಕ್ಕಿದರೂ ಮಾಡುತ್ತಿದ್ದೆವು. ಅಷ್ಟುಹೊತ್ತಿಗೆ ಅಪ್ಪನಿಗೆ ತಲೆ ಕೆಡಿಸಿ, ಅವರ ಸಂಬಂಧಿಕರು ಇನ್ನೊಂದು ಮದುವೆ ಮಾಡಿದ್ದರು. ಅಣ್ಣ 5ನೇ ತರಗತಿವರೆಗೆ, ನಾನು ಎರಡನೇ ತರಗತಿಯವರೆಗೆ ಓದಿದ್ದೆವು. ತಂಗಿಯನ್ನು 10ನೇ ತರಗತಿಯವರೆಗೂ ಓದಿಸಿದ್ದೇವೆ. ನಮ್ಮ ಪಾಲಿಗೆ ಶಾಲೆಯ ಬಾಗಿಲು ಅಲ್ಲಿಗೆ ಮುಚ್ಚಿತ್ತು. ಕಾಂಪೌಂಡ್ ಕ್ಲೀನ್ ಮಾಡುವುದು, ಟ್ಯಾಂಕ್ ತೊಳೆಯುವುದು, ಹೋಟೆಲ್​ನಲ್ಲಿ ಟೇಬಲ್ ಕ್ಲೀನ್ ಮಾಡುವುದು, ಪಾತ್ರೆ ತೊಳೆಯುವುದು… ಮಾಡಿದ ಕೆಲಸಕ್ಕೆ ಪ್ರತಿಯಾಗಿ ಅವರು ಕೊಡುತ್ತಿದ್ದ ಹತ್ತೋ, ಇಪ್ಪತ್ತೋ ರೂಪಾಯಿಗಳನ್ನು ಕೂಡಿಸಿ ಅಮ್ಮನಿಗೆ ತಂದು ಕೊಡುತ್ತಿದ್ದೆವು. ಅಮ್ಮನೂ ಕೆಲಸಕ್ಕೆ ಹೋಗಿ ಬಂದ ಹಣದಿಂದ ಸಂಸಾರ ತೂಗಿಸಿಕೊಂಡು ಹೋಗುತ್ತಿದ್ದರು.

‘ನಮಗೆ ನಮ್ಮ ಅಮ್ಮನೇ ಎಲ್ಲ’ ಸಿಕ್ಕಸಿಕ್ಕ ಎಲ್ಲಾ ಕೆಲಸಗಳನ್ನು ಮಾಡಿಕೊಂಡು ಹೇಗೋ ಬೆಳೆದು 16 ವರ್ಷದವನಾಗುವ ಹೊತ್ತಿಗೆ ಗಾರೆ ಕೆಲಸ, ಪೈಂಟ್ ಕೆಲಸ, ಸೆಂಟ್ರಿಂಗ್ ಹಾಕುವ ಕೆಲಸಗಳನ್ನು ಕಲಿತಿದ್ದೆ. ಆಗ ಅಲ್ಲಿದ್ದ ಮೇಸ್ತ್ರಿ ಒಬ್ಬರು ನೀನು ಸೆಂಟ್ರಿಂಗ್ ಕೆಲಸ ಚೆನ್ನಾಗಿ ಮಾಡುತ್ತೀಯ. ಆದರೆ, ಇನ್ನೂ ಚಿಕ್ಕ ಹುಡುಗ. ಇದಕ್ಕಿಂತ ಒಳ್ಳೆಯ ಕೆಲಸಕ್ಕೆ ನಿನಗೆ ಸೇರಿಸುತ್ತೇನೆ ಎಂದು ಮಾರ್ಕೆಟ್​ನಲ್ಲಿಯ ಫೋಟೋ ಫ್ರೇಮ್ ಅಂಗಡಿಗೆ ಕೆಲಸಕ್ಕೆ ಸೇರಿಸಿದರು. ಸಂಬಳ ಕಡಿಮೆ ಜವಾಬ್ದಾರಿ ಹೆಚ್ಚು ಇದ್ದಿದ್ದರಿಂದ ಎಲ್ಲವನ್ನು ನಿಭಾಯಿಸಲು ಅಸಾಧ್ಯವಾದಾಗ ಮನೆಯಲ್ಲೇ ಫೋಟೋ ಫ್ರೇಮ್ ಹಾಕಿಕೊಡೋದು, ಹಳೆ ಫ್ರೇಮ್ ಹಾಳಾಗಿದ್ರೆ ರಿಪೇರಿ ಮಾಡೋದು, ಲೈಟಿಂಗ್ ಹಾಕಿಕೊಡುವುದು… ಹೀಗೆ ನಾನಿದ್ದ ಸುತ್ತಮುತ್ತಲಿನ ಪ್ರದೇಶದಲ್ಲಿ ಯಾರಾದರೂ ಫ್ರೇಮ್ ಕೇಳಿದರೆ, ಪೀಸ್ ವರ್ಕ್ ಇತ್ಯಾದಿ ಮಾಡಿ ಕೊಡಲು ಆರಂಭಿಸಿದೆ.

Photo frame worker veer who lost his kidneys a story by Jyothi S

ಕಿಡ್ನಿ ವೈಫಲ್ಯಕ್ಕೂ ಮೊದಲು ಮತ್ತು ಚಿಕಿತ್ಸೆ ಪಡೆಯುತ್ತಿರುವ ಸಂದರ್ಭ

ನಂತರ ನನ್ನ ಹತ್ತಿರ ಇದ್ದ ಹಣವನ್ನೆಲ್ಲ ಒಟ್ಟುಗೂಡಿಸಿ ಅಮೃತಹಳ್ಳಿ ಮುಖ್ಯ ರಸ್ತೆಯಲ್ಲಿ 5 ಅಡಿಗೆ 20 ಅಡಿ ಅಳತೆಯ ಚಿಕ್ಕದಾದ ಫೋಟೋ ಫ್ರೇಮ್ ಅಂಗಡಿ 25,000 ರೂ. ಅಡ್ವಾನ್ಸ್ ಕೊಟ್ಟು , ತಿಂಗಳಿಗೆ 5,000 ರೂ. ಬಾಡಿಗೆ ಮಾತಾಡಿ ಹೊಸದಾಗಿ ಅಂಗಡಿ ತೆರೆದೆ. ಯಾರಾದರೂ ಆರ್ಡರ್ ಕೊಟ್ಟರೆ ಅವರ ಹತ್ತಿರ ಮುಂಗಡ ಹಣವಾಗಿ ಅಡ್ವಾನ್ಸ್ ತೆಗೆದುಕೊಂಡು ಅದನ್ನೇ ಬಂಡವಾಳವನ್ನಾಗಿಸಿಕೊಂಡು ಕೆಲಸ ಪ್ರಾರಂಭಿಸಿದೆ. ದಿನ ಕಳೆದಂತೆ ವ್ಯಾಪಾರದಲ್ಲಿ ಸ್ವಲ್ಪಮಟ್ಟಿನ ಚೇತರಿಕೆ ಕಂಡುಬಂತು.

ಅಪ್ಪ ಆಗೊಮ್ಮೆ, ಈಗೊಮ್ಮೆ ದೂರದಿಂದ ಬಂದು ನಮ್ಮನ್ನು ನೋಡಿಕೊಂಡು ಹೋಗುತ್ತಿದ್ದರು. ಅಪ್ಪನಿಗೆ ಉಸಿರಾಟದ ತೊಂದರೆ ಇತ್ತು. ಶೆಡ್​ನಲ್ಲಿ ಒಬ್ಬರೇ ಇರುತ್ತಿದ್ದರು. ಅಷ್ಟುಹೊತ್ತಿಗೆ ಎರಡನೇ ಮದುವೆಯಾಗಿದ್ದ ಆ ಕುಟುಂಬವೂ ದೂರವಾಗಿತ್ತು. ಅಪ್ಪ ನಮ್ಮೊಂದಿಗೇ ಇನ್ನಾದರೂ ಒಳ್ಳೆಯ ರೀತಿಯಲ್ಲಿ ಬದುಕಬೇಕು ಎನ್ನುವ ಹೊತ್ತಿಗೆ ವಿಧಿಯಾಟ ಬೇರೆಯೇ ಆಗಿತ್ತು. 2018ರಲ್ಲಿ ಅಪ್ಪ ಸುಬ್ರಮಣಿ, ತೀವ್ರ ಅನಾರೋಗ್ಯದಿಂದಾಗಿ ಹಾಸ್ಪಿಟಲ್​ಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯೆಯೇ ನನ್ನ ಮಡಿಲಲ್ಲಿ ಉಸಿರು ಚೆಲ್ಲಿದರು. ಆ ಸಂದರ್ಭ ನನ್ನ ಜೀವನದಲ್ಲಿ ಎಂದಿಗೂ ಮರೆಯಲಾಗದ ಘಟನೆಯಾಗಿ ಇಂದಿಗೂ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. ಅಪ್ಪನ ಸಾವು ನನ್ನ ತೀವ್ರವಾದ ಖಿನ್ನತೆಗೆ ಒಳಪಡಿಸಿತು. ಅಪ್ಪ ಇದ್ದಾಗ ಎದುರುಗಡೆ ನಿಂತು, ಮುಖಕೊಟ್ಟು ಸರಿಯಾಗಿ ಮಾತನಾಡುತ್ತಿರಲಿಲ್ಲ. ತುಂಬ ವರಟಾಗಿ ನಡೆದುಕೊಳ್ಳುತ್ತಿದ್ದೆ. ಮಾತನಾಡಬೇಕು ಇರೋ… ನಿಂತುಕೊಳ್ಳೋ ಎಂದರೂ ಕೆಲಸ ಇದೆ ಎಂದು ಕುಂಟುನೆವ ಹೇಳಿ ಹೊರಟುಬಿಡುತ್ತಿದ್ದೆ. ಈಗ ಅವರ ಹತ್ತಿರ ಮಾತನಾಡಬೇಕು ಅಂತ ತುಂಬ ಅನ್ನಿಸತ್ತೆ, ಆದರೆ ಅಪ್ಪ ಈಗ ದೂರದ ಬಿಂಬವಾಗಿದ್ದಾರೆ.

ಸುಮಾರು 25 ವರ್ಷಗಳ ಹಿಂದೆ ಅಮ್ಮ ನಮ್ಮನ್ನೆಲ್ಲ ಕರೆದುಕೊಂಡು ಬಂದು ಉಳಿದುಕೊಳ್ಳಲು ಎಲ್ಲೂ ಜಾಗವಿಲ್ಲದೆ ಎರಡು ದಿನ ಯಾವ ದೇವಸ್ಥಾನದಲ್ಲಿ ಮಲಗಿಸಿದ್ದರೋ… ಅದೇ ದೇವಸ್ಥಾನದ ಛತ್ರದಲ್ಲಿ
ಅಪ್ಪ ತೀರಿಕೊಂಡ ಒಂದು ವರ್ಷಕ್ಕೆ ತಂಗಿಗೆ ಒಳ್ಳೆ ಸಂಬಂಧ ನೋಡಿ ಮದುವೆ ಮಾಡಿದೆವು. ತಂಗಿಯ ಮದುವೆಗೆ ಸ್ವಲ್ಪ ಸಾಲ ಮಾಡಿದ್ದರಿಂದ ಹಗಲು ರಾತ್ರಿ ಅಂಗಡಿಯಲ್ಲಿ ಕಷ್ಟಪಡಬೇಕಾಗಿ ಬಂತು. ಕಷ್ಟಪಟ್ಟು ದುಡಿದು ಎಲ್ಲಾ ಸಾಲವನ್ನು ತೀರಿಸಿದೆ. ಆಗ ಒಂದು ದಿನ ಇದ್ದಕ್ಕಿದ್ದಂತೆ ಎರಡೂ ಕಣ್ಣುಗಳು ಕೆಂಪಾಗಲು ಶುರುವಾದವು. ಕಣ್ಣಿನ ಡಾಕ್ಟರ್ ಹತ್ತಿರ ಹೋಗಿ ತೋರಿಸಿದಾಗ, ನಿನ್ನ ದೇಹದ ಯಾವುದಾದರೂ ಭಾಗಕ್ಕೆ ಸಮಸ್ಯೆ ಆಗಿರತ್ತೆ ಮೊದಲು ಚೆಕ್ ಮಾಡಿಸಿಕೊ ಎಂದರು. ರಿಪೋರ್ಟ್ ತಂದಾಗ ನಿನಗೆ ಕಿಡ್ನಿ ಪ್ರಾಬ್ಲಮ್ ಇದೆ ಅಂದರು. ಸಿಡಿಲು ಬಡಿದಂತಾಯಿತು. ಆ ಸಮಯದಲ್ಲಿ ಮನೆಯಿಂದ ಯಾರನ್ನೂ ಡಾಕ್ಟರ್ ಹತ್ತಿರ ಕರೆದುಕೊಂಡು ಹೋಗಿರಲಿಲ್ಲ. ನನ್ನ ಸ್ನೇಹಿತನ ಜೊತೆಗೆ ಹೋಗಿದ್ದೆ. ನನ್ನ ಅಮ್ಮ ನನ್ನ ಮೇಲೆ ಜೀವ ಇಟ್ಟುಕೊಂಡವಳು. ಅವಳಿಗೆ ಈ ವಿಚಾರ ಗೊತ್ತಾಗಬಾರದು ಅಂತ 6 ತಿಂಗಳು ನಿಭಾಯಿಸಿದೆ.

jyothi s amrutha bhaskar

ಮಗಳು ಅಮೃತಾ ಮಾಡಿದ ಈ ಪೇಂಟಿಂಗ್​ ಪ್ರದರ್ಶಿಸುತ್ತಿರುವ ಲೇಖಕಿ ಜ್ಯೋತಿಗೆ ವೀರನ ದಾರುಣ ಕಥೆ ಕೇಳುತ್ತೇನೆಂಬ ಅರಿವಿರಲಿಲ್ಲ. 

ಒಮ್ಮೆ ಒಮ್ಮೆ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡು ಉಸಿರಾಟದ ಸಮಸ್ಯೆಯಾದಾಗ ಅಮ್ಮನಿಗೆ ತಿಳಿದು ತುಂಬ ಸಂಕಟವನ್ನು ಅನುಭವಿಸಿದರು. ಡಯಾಲಿಸಿಸ್ ಮಾಡಿಸಬೇಕು ಬೇರೆ ದಾರಿ ಇಲ್ಲ ಅಂತ ಗೊತ್ತಾದಾಗ ಹೆಬ್ಬಾಳದಲ್ಲಿರುವ ಬ್ಯಾಪ್ಟಿಸ್ಟ್ ಹಾಸ್ಪಿಟಲ್​ಗೆ ಹೋದೆವು. ಈಗ ಎರಡು ವರ್ಷದಿಂದ ವಾರಕ್ಕೊಮ್ಮೆ ಏನೇ ಆದರೂ ಹಣ ಇದ್ದರೂ, ಇಲ್ಲದಿದ್ದರೂ ಹೊಂದಿಸಿಕೊಂಡು ಡಯಾಲಿಸಿಸ್ ಮಾಡಿಸುತ್ತಿದ್ದೇನೆ. ಒಂದು ಸಲಕ್ಕೆ 4000 ರೂ. ಹಣ ಬೇಕಾಗುತ್ತದೆ. ಒಂದು ಕಿಡ್ನಿ ಹಾಕಿಸಿದರೆ ಎಲ್ಲರಂತೆ ಬದುಕಬಹುದು ಎಂಬ ಭರವಸೆಯನ್ನು ಡಾಕ್ಟರ್ ಕೊಟ್ಟಿದ್ದಾರೆ. ಹತ್ತು ಲಕ್ಷ ಖರ್ಚು ಆಗಬಹುದು, ‘ಕನಸಿನಲ್ಲೂ ಇಷ್ಟು ದೊಡ್ಡ ಮೊತ್ತದ ಹಣವನ್ನು ಕಲ್ಪಿಸಿಕೊಳ್ಳಲೂ ಆಗದ ನನಗೆ ಮುಂದೇನು!?’ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ರಿಜಿಸ್ಟ್ರೇಷನ್ ಮಾಡಿಸಿದ್ದೇನೆ ಯಾರಾದರೂ ದಾನಿಗಳಿಂದ ಕಿಡ್ನಿ ದೊರೆತು ಚಿಕಿತ್ಸೆ ಯಶಸ್ವಿಯಾದರೆ ಮರುಜನ್ಮವಿದ್ದಂತೆ.

ಸಹಾಯ ಮಾಡಲು ಇಚ್ಛಿಸುವವರು ಸಂಪರ್ಕಿಸಿ : 9113634970
tv9kannadadigital@gmail.com

ಇದನ್ನೂ ಓದಿ : Blind Singers : ‘ಕನ್ನಡದ ಚಾನೆಲ್​ಗಳೇ, ಇವರುಗಳ ಧ್ವನಿ ನಿಮ್ಮ ರಿಯಾಲಿಟಿ ಷೋ ತನಕ ತಲುಪಬಲ್ಲುದೆ?’

Click on your DTH Provider to Add TV9 Kannada