Agriculture: ಹಾದಿಯೇ ತೋರಿದ ಹಾದಿ: ‘ಈ 300 ಭತ್ತದ ತಳಿಗಳು ನನ್ನವಲ್ಲ, ಇಡೀ ರೈತ ಸಮುದಾಯದ್ದು’

Woman : ಪುರುಷ ದುಡಿಯುತ್ತಿದ್ದ, ತಿನ್ನುತ್ತಿದ್ದ, ತಂದು ಹಾಕುತ್ತಿದ್ದ. ಬೀಜಗಳ ಸಂರಕ್ಷಣೆ ಆದದ್ದೆಲ್ಲ ಬೀಜ ಮಾತೆಯರಿಂದ. ಇದು ಬೀಜಕ್ಕಾಗತ್ತೆ, ಬಿತ್ತನೆಗಾಗತ್ತೆ ಎಂದು ಬಿತ್ತೋದು, ಬೆಳೆಯೋದು ಎಲ್ಲವೂ ಈ ಸಮಾಜಕ್ಕೆ ತಾಯಿಯಿಂದ ಬಂದ ಬಳುವಳಿ.' ಎಂ. ರೇಚಣ್ಣ

Agriculture: ಹಾದಿಯೇ ತೋರಿದ ಹಾದಿ: 'ಈ 300 ಭತ್ತದ ತಳಿಗಳು ನನ್ನವಲ್ಲ, ಇಡೀ ರೈತ ಸಮುದಾಯದ್ದು'
ಕೃಷಿಕ ಎಂ ರೇಚಣ್ಣ ಪತ್ನಿ ರಾಜೇಶ್ವರಿಯೊಂದಿಗೆ
Follow us
|

Updated on: May 26, 2022 | 9:33 AM

ಹಾದಿಯೇ ತೋರಿದ ಹಾದಿ | Haadiye Torida Haadi : ಎಂ. ರೇಚಣ್ಣ (M. Rechanna) ಅಪರೂಪದ ಬಹುಹವ್ಯಾಸಿ ವ್ಯಕ್ತಿ. ಬೀಜ ಸಂರಕ್ಷಣೆ, ಸಾವಯವ ಕೃಷಿ, ಬರವಣಿಗೆ, ಹಳೆಯ ನಾಣ್ಯಗಳು ಮತ್ತು ಕೃಷಿ ಸಲಕರಣೆಗಳ ಸಂಗ್ರಹದಂತಹ ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವ ಇವರು ಪ್ರಸ್ತುತ ಸಮಾಜದ ಸಂಪನ್ಮೂಲ ವ್ಯಕ್ತಿ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಹೊಸಮಾಲಂಗಿ ಗ್ರಾಮದವರಾದ ಇವರು ರತ್ನಚೂಡಿ, ದೊಡ್ಡ ಭೈರನೆಲ್ಲು, ಕೆಂಪು ರಾಜಭೋಗ, ಗಂಧಸಾಲೆ, ಆನಂದಿ, ಕರಿಯಕ್ಕಶಾಲಿ, ರಾಜಮುಡಿ, ಕಾಗಿಸಾಲೆ, ಬಾಸುಮತಿ, ನಾರಿಕೇಳ, ಸೇಲಂಸಣ್ಣ, ಗಿಣಿಸಾಲ, ಇಂದ್ರಾಣಿ, ಕೆನೆಪುಂಕ, ಷಷ್ಠಿಕಶಾಲಿ, ಬಂಗಾರ ಗೋವಿ, ಕರಿ ಮುಂಡಗ, ಚೌಗುರು ಇತ್ಯಾದಿ ಮುನ್ನೂರು ವಿವಿಧ ಭತ್ತದ ತಳಿಗಳನ್ನು ಸಂರಕ್ಷಣೆ ಮಾಡಿದ್ದಾರೆ. ತಾವು ಸಂಗ್ರಹಣೆ ಮಾಡಿರುವ ‘ಅಷ್ಟೂ ತಳಿಗಳು ನನ್ನದಲ್ಲ, ಇಡೀ ರೈತ ಸಮುದಾಯದ್ದು’ ಎನ್ನುತ್ತಾರೆ. ಮುಂದಿನದನ್ನು ಅವರ ಮಾತಿನಲ್ಲಿಯೇ ಓದಿಕೊಳ್ಳಿ. ಜ್ಯೋತಿ ಎಸ್, ಸಿಟಿಝೆನ್ ಜರ್ನಲಿಸ್ಟ್ (Jyothi S)

(ಹಾದಿ 20)

‘ನಮ್ಮ ಹತ್ತಿರ ಇರುವ ದೇಶೀಯ ಬೀಜಗಳನ್ನು ಬೇರೆ ರೈತರಿಗೆ ವಿತರಣೆ ಮಾಡಿ ಅವರಿಂದ ಪುನಾ ಬೇರೆ ಭತ್ತದ ತಳಿ ಭತ್ತಗಳನ್ನು ನಾವು ಪಡೆಯುವುದು. ಹಾಗೆ ಪಡೆದುಕೊಂಡ ಬೀಜಗಳನ್ನು ಸಂಗ್ರಹ ಮಾಡಿ ಸ್ವಲ್ಪ ಸ್ವಲ್ಪ ಜಾಗದಲ್ಲಿ ಅಂದರೆ ಮೂರು ಅಡಿ, ಐದು ಗುಂಟೆ, ಹತ್ತು ಗುಂಟೆ ಅಷ್ಟರಲ್ಲೇ ಬೆಳೆದು 2014ರ ಹೊತ್ತಿಗೆ ಸುಮಾರು 300 ಭತ್ತದ ತಳಿಗಳನ್ನು ಸಂಗ್ರಹ ಮಾಡಿದ್ದೆವು. ಅಕ್ಕಿಗಾಗಿ ಎರಡು ಎಕರೆಯಲ್ಲಿ ಬೆಳೆದರೆ, ಬೀಜ ಸಂಗ್ರಹಣೆಗೆ ಅಂತ 100 ಗ್ರಾಂ, 50ಗ್ರಾಂ, 10ಗ್ರಾಂ ಬೀಜಗಳನ್ನು ಹಾಕುತ್ತಿದ್ದೆವು. ಬಿತ್ತನೆ ಬೀಜಗಳನ್ನು ಗೊನೆ ಸಮೇತವಾಗಿ ಹಾಗೆ ಎತ್ತಿಡುತ್ತೇವೆ. ಹಾಗೆ ಗೊನೆ ಸಮೇತವಾಗಿ ಎತ್ತಿಟ್ಟ ತೆನೆಗಳಿಂದ ಬಾಗಿಲಿಗೆ ಹಾಕುವ ತೋರಣ, ಕುಚ್ಚು, ಹೃದಯದ ಆಕೃತಿಯಲ್ಲಿ ಗೋಡೆಗೆ ಹಾಕುವ ಅಲಂಕಾರಿಕ ವಿನ್ಯಾಸಗಳನ್ನು ಮಾಡುತ್ತೇವೆ. ಮುಂದಿನ ವರ್ಷ ಅದನ್ನು ಬಿತ್ತನೆಗೂ ಬಳಸಬಹುದು.

ಹಾಳೆಗಳಲ್ಲಿ, ಗಾಜಿನ ಬಾಟಲಿಯಲ್ಲಿ, ಗೋಣಿಚೀಲದಲ್ಲಿ ಭತ್ತವನ್ನು ಶೇಖರಣೆ ಮಾಡಿದರೆ ಹುಳು ಬರುವುದಿಲ್ಲ. ಭತ್ತದ ತಳಿಗಳ ಸಂಗ್ರಹಣೆ ಅಷ್ಟೆ ಅಲ್ಲದೆಯೂ ಔಷಧೀಯ ಸಸ್ಯಗಳಾದ ಹೊರಮುನಿ, ಒಳಮುನಿ, ಆಡು ಸೋಗೆ, ಲಕ್ಕಿ ಸೊಪ್ಪು, ಅಮೃತಬಳ್ಳಿ, ಅಪ್ಪೆಮಿಡಿ, ರಾಯಲ್ ಸ್ಪೆಷಲ್, ಕೇಸರ್ ಬಾದಾಮ್, ಮಲ್ಲಿಕಾ, ಇಮಾಮ್ ಪಸಂದ್, ಮಲಗೋಬ, ಬಾಗೇನಪಲ್ಲಿ ಸೇರಿದಂತೆ ಹನ್ನೆರಡು ತಳಿಯ ಮಾವುಗಳನ್ನು ಬೆಳೆಸಿದ್ದೇವೆ. ಕಪ್ಪು ಸೀಬೆ, ಸಪೋಟ, ನೇರಳೆ, ಬಿದಿರು ಇತ್ಯಾದಿಯಾಗಿ ಹಲವು ಪ್ರಭೇದದ ಕಾಡು ಜಾತಿಯ ಸಸ್ಯಗಳನ್ನು ಎರಡು ಎಕರೆ ಭೂಮಿಯಲ್ಲಿ ಬೆಳೆಸಿದ್ದೇವೆ. ಮೈಸೂರು, ದೆಹಲಿ, ಒರಿಸ್ಸಾ, ಬಿಹಾರ್, ಹೈದರಾಬಾದ್, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಬೀಜಮೇಳದಲ್ಲಿ ನಾನು ನನ್ನ ಇಬ್ಬರು ಮಕ್ಕಳಾದ ಅಭಿಷೇಕ್, ಯೋಗೀಶ್ ಭಾಗವಹಿಸಿದ್ದೇವೆ. ಕೃಷಿ ಪಂಡಿತ, ಕೃಷಿ ರತ್ನ, ಅಂತಾರಾಷ್ಟ್ರೀಯ ಕೃಷಿ ರೈತ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಿಂದ ಹಲವಾರು ಪ್ರಶಸ್ತಿ ಪುರಸ್ಕಾರಗಳು ಬಂದಿವೆ.’

‘ಬೀಜ ಸಂರಕ್ಷಣೆಗೆ ಮೊದಲು ಭತ್ತವನ್ನು ಯಾವುದೇ ಕಾಯಿಲೆ ಬಂದಿರದ, ತೆನೆ ಚೆನ್ನಾಗಿರುವ, ಹುಲ್ಲು ಚೆನ್ನಾಗಿ ಬೆಳೆದಿರುವುದನ್ನು ಗುರುತಿಸಿ ಅದಕ್ಕೆ ಟ್ಯಾಗ್ ಕಟ್ಟುತ್ತೇವೆ. ತೆನೆ ಸಮೇತ ಅದನ್ನು ಸಂಗ್ರಹಿಸಿ ಅದನ್ನು ಬಿತ್ತನೆ ಬೀಜವಾಗಿ ಸಂಗ್ರಹಣೆ ಮಾಡುತ್ತೇವೆ. ಹೀಗೆ ರಾಗಿ, ತರಕಾರಿ ಬೀಜಗಳು, ಹೂವಿನ ಬೀಜಗಳನ್ನು ಸಂಗ್ರಹಣೆ ಮಾಡುತ್ತೇವೆ. ನಮ್ಮ ಭತ್ತಕ್ಕೆ 5000 ವರ್ಷಗಳ ಇತಿಹಾಸವಿದೆ. ಮೊದಲು ಬೀಜದಿಂದಲೇ ಎಲ್ಲವೂ ಉತ್ಪತ್ತಿಯಾಗಿರುವುದು. ಭಗವಂತ ಎಲ್ಲವನ್ನು ಸೃಷ್ಟಿಮಾಡಿ ಆಮೇಲೆ ನಮ್ಮನ್ನು ಸೃಷ್ಟಿ ಮಾಡಿದ ತಿನ್ನೋದಕ್ಕೆ. ಆಗ ಉಡುಗೆ ಇಲ್ಲ. ಕಾಡಿನಲ್ಲಿ ಅಲೆಮಾರಿಗಳಂತೆ ಬದುಕು ಸಾಗಿಸುತ್ತಿದ್ದರು. ಪುರುಷ ದುಡಿಯುತ್ತಿದ್ದ, ತಿನ್ನುತ್ತಿದ್ದ, ತಂದು ಹಾಕುತ್ತಿದ್ದ. ಬೀಜಗಳ ಸಂರಕ್ಷಣೆ ಆದದ್ದೆಲ್ಲ ಬೀಜ ಮಾತೆಯರಿಂದ. ಇದು ಬೀಜಕ್ಕಾಗತ್ತೆ, ಬಿತ್ತನೆಗೆ ಆಗುತ್ತದೆ ಎಂದು ಬಿತ್ತೋದು, ಬೆಳೆಯೋದು ಮಾಡುವುದು ಎಲ್ಲವೂ ಈ ಸಮಾಜಕ್ಕೆ ತಾಯಿಯಿಂದ ಬಂದ ಬಳುವಳಿ.’

ಇದನ್ನೂ ಓದಿ : Siddi Community: ಹಾದಿಯೇ ತೋರಿದ ಹಾದಿ; ಹೊಳೆಹೊಂಡಗಳಲ್ಲಿ ಸ್ನಾನ, ಹಸಿವಾದಾಗ ಮೀನು ಕೆಂಜಿರುವೆ

‘ಎಲ್ಲಾ ಬೀಜಗಳಲ್ಲೂ ಹಿಂದೆ ಅಂಕುರ ಶಕ್ತಿ ಇತ್ತು. ಅಂಕುರ ಎಂದರೆ ಗರ್ಭ ಕಟ್ಟುವುದು. ಬೀಜ ಮೊಳಕೆ ಬರುವ ಶಕ್ತಿ. ಬೀಜ ಭೂಮಿಗೆ ಬಿದ್ದಾಗ ಭೂಮಿಯಲ್ಲಿರುವ ಮಣ್ಣು, ಗಾಳಿ, ಸಾವಯವ ಗೊಬ್ಬರವನ್ನು ಬಳಸಿಕೊಂಡು ಮೊಳಕೆ ಬರುತ್ತದೆ. ಕೆಲವು ಆಹಾರ ಬಳಕೆಗೆ ಉಪಯುಕ್ತವಾಗಿದೆ. ಕೆಲವು ಔಷಧಿಯ ಅಕ್ಕಿಗಳು. ಇನ್ನೂ ಕೆಲವು ಸುವಾಸನೆಯ ಅಕ್ಕಿಗಳು. ಆಹಾರದಲ್ಲಿ ಎರಡು ವಿಧ. ಮೊದಲನೆಯದಾಗಿ ಸೂರ್ಯನಿಂದ ತಯಾರಾಗುವ ಆಹಾರವನ್ನು ನಿರಗ್ನಿ ಆಹಾರ ಎನ್ನುತ್ತಾರೆ. ಈ ನಿರಗ್ನಿ ಆಹಾರ ಮಾನವನಿಗೆ ಭಗವಂತ ಸೃಷ್ಟಿ ಮಾಡಿರುವ ಆಹಾರ. ಯಾವುವೆಂದರೆ ಕ್ಯಾರೆಟ್, ಮೂಲಂಗಿ, ಬೀಟ್ರೂಟ್, ತೆಂಗಿನಕಾಯಿ, ಬೇಳೆ ಕಾಳುಗಳಲ್ಲಿ ಹೆಸರುಕಾಳು ನೆನೆಸಿ ಮೊಳಕೆ ಬರಿಸಿದರೆ ನಿಂಬೆರಸ, ಕಾಯಿತುರಿ ಹಾಕಿ ಹಾಗೆ ತಿನ್ನಬಹುದು. ಸೊಪ್ಪುಗಳು ಪುದೀನ, ಕೊತ್ತಂಬರಿ, ಕರಿಬೇವು. ಇನ್ನು ಹಣ್ಣುಗಳು ಮಾವು, ಸೀಬೆ, ಸಪೋಟ, ಪರಂಗಿ, ದ್ರಾಕ್ಷಿ ಇತ್ಯಾದಿ. ನಾವೆಲ್ಲರೂ ವಾರಕ್ಕೊಮ್ಮೆ ನಿರಗ್ನಿ ಆಹಾರವನ್ನು ಸೇವಿಸಬೇಕು. ಮತ್ತೊಂದು ಅಗ್ನಿ ಆಹಾರ. ನಾವು ಬೇಯಿಸಿ ತಿನ್ನುವ ಆಹಾರವನ್ನು ಅಗ್ನಿ ಆಹಾರ ಎನ್ನುತ್ತೇವೆ.’

‘ನಮ್ಮ ತಂದೆ ತಾಯಿಯ ಎಂಟು ಮಕ್ಕಳಲ್ಲಿ ಆರನೇ ಮಗುವಾಗಿ ಹುಟ್ಟಿದವನು ನಾನು. ನನ್ನ ತಂದೆ ಕೆ. ಮಲ್ಲೆದೇವರು ಸಮಾಜದ ಆಗು ಹೋಗುಗಳ ಬಗ್ಗೆ, ಜೀವನ, ವಚನಗಳ ಬಗ್ಗೆ, ಆತ್ಮ ಸಾಕ್ಷಾತ್ಕಾರದ ಬಗ್ಗೆ ಆಗಾಗ ಮನೆಯಲ್ಲಿ ಚರ್ಚೆ ಮಾಡುತ್ತಿದ್ದರು. ಅದನ್ನೆಲ್ಲ ಕೇಳಿಸಿಕೊಂಡು ಬೆಳೆದೆ. ನನ್ನ ತಂದೆ ನಾಟಕದಲ್ಲಿ ಪಾತ್ರಗಳನ್ನು ಮಾಡುತ್ತಿದ್ದರು ಹಾಡುತ್ತಿದ್ದರು ರಾಜಶೇಖರ ವಿಳಾಸ, ನಿಜಗುಣ ಶಿವಯೋಗಿಗಳ ಗ್ರಂಥಗಳು ಷಡಕ್ಷರಿ ಅವರ ಗ್ರಂಥಗಳು ಬಾಯಿಪಾಠವಾಗಿದ್ದು ಸರಾಗವಾಗಿ ಹೇಳುತ್ತಿದ್ದರು. ಹತ್ತನೇ ತರಗತಿ ಮುಗಿಯುವ ಹೊತ್ತಿಗೆ ತುರ್ತು ಪರಿಸ್ಥಿತಿ ಜಾರಿಯಾಯ್ತು. ಮನೆಯಲ್ಲಿದ್ದ ಕೃಷಿ ಕಾರ್ಮಿಕರು ಹೊರಟು ಹೋದರು. ಆಗ ಕೃಷಿ ಮಾಡಲು ನಾನು ಉಳಿದುಕೊಂಡೆ. ಅವರ ಪ್ರಭಾವದಿಂದ ನಾನು ಒಂದಿಷ್ಟು ಬರವಣಿಗೆ ರೂಢಿಸಿಕೊಂಡೆ.’

Haadiye Torida Haadi Journey of Model Farmer M Rechanna by Jyothi

ಬೀಜದೊಳಗೆ ಬೀಜ ಹುಟ್ಟಿ

‘ನನ್ನ ಮೂವತ್ತನೇ ವಯಸ್ಸಿನಿಂದೀಚೆಗೆ ಬರೆಯಲು ಶುರು ಮಾಡಿದೆ. ಅದಕ್ಕೂ ಮೊದಲು ಬರೆಯುತ್ತಿದ್ದೆ. ನಂತರ ಬಸವಣ್ಣ, ಅಲ್ಲಮಪ್ರಭು ಇವರೆಲ್ಲ ಇಷ್ಟು ಚೆನ್ನಾಗಿ ಬರೆದಿದ್ದಾರೆ ಇದರಲ್ಲಿ ನನ್ನದೇನು ಇಲ್ಲ ಅಂತ ನಾನು ಬರೆದದನ್ನು ಹರಿದು ಬಿಸಾಕುತ್ತಿದ್ದೆ. ಒಮ್ಮೆ ಕನ್ನಡ ಸಾಹಿತ್ಯ ಪರಿಷತ್ತಿನವರು ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರು. ಸಣ್ಣ ಮಕ್ಕಳೆಲ್ಲ ಮೂರು ನಾಲ್ಕು ಸಾಲು ಬರೆದಿರುತ್ತಿದ್ದರು. ಅವರಿಗೆಲ್ಲ ಒಂದು ಸರ್ಟಿಫಿಕೇಟ್ ಕೊಡುವುದನ್ನು ನೋಡಿದೆ. ಆಗ ನನಗನ್ನಿಸಿದ್ದು ಅರೆ ನಾನು ಇಷ್ಟು ಬರೆಯುತ್ತಿದ್ದೇನೆ ಯಾಕೆ ಬರೆದಿಡಬಾರದು ಅಂತ ಅಲ್ಲಿಂದೀಚೆಗೆ ಬರೆದದ್ದನ್ನ ಹರಿಯುವುದನ್ನು ನಿಲ್ಲಿಸಿದೆ. ಬರೆದದ್ದನ್ನೆಲ್ಲ ದಾಖಲು ಮಾಡಲು ಪ್ರಾರಂಭಿಸಿದೆ. ನನ್ನ ಗುರುಗಳು ಕರಿಬಸವಲಿಂಗನವರು. ಹಾಗಾಗಿ ಕರಿಬಸವಲಿಂಗ ಎಂಬ ಅಂಕಿತದಿಂದಲೇ ಸಾವಿರಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದೇನೆ. ಅಲ್ಲಮಪ್ರಭು, ಬಸವಣ್ಣ, ಅಕ್ಕಮಹಾದೇವಿ, ದೇವರದಾಸಿಮಯ್ಯ, ಮುಪ್ಪಿನ ಷಡಕ್ಷರಿ, ಚನ್ನಬಸವ ಎಲ್ಲರ ವಚನಗಳನ್ನು ಅಧ್ಯಯನ ಮಾಡಿದ್ದೇನೆ.’

‘ಪ್ರೊ. ನಂಜುಂಡಸ್ವಾಮಿಯವರು ಮೂರು ತಿಂಗಳಿಗೊಮ್ಮೆ ಬೀಜ ಸಂರಕ್ಷಣೆಯ ಬಗ್ಗೆ ಮಾತನಾಡುತ್ತಿದ್ದರು. ಸೆಮಿನಾರುಗಳನ್ನು ಮಾಡುತ್ತಿದ್ದರು. ಅಧ್ಯಯನ ಶಿಬಿರಗಳಲ್ಲಿ ಬೀಜ ಸ್ವಾತಂತ್ರ್ಯದ ಬಗ್ಗೆ, ರೈತ ಹೋರಾಟಗಳ ಬಗ್ಗೆ ಎಲ್ಲವನ್ನು ಹೇಳಿಕೊಡುತ್ತಿದ್ದರು. ಅಲ್ಲಿಯವರೆಗೂ ನನಗೆ ಅಷ್ಟು ಮಾಹಿತಿ ಗೊತ್ತಿರಲಿಲ್ಲ. ನಂಜುಂಡಸ್ವಾಮಿ ಅವರ ಪ್ರಭಾವದಿಂದ ದೇಶೀಯ ಬೀಜಗಳ ಹುಡುಕಾಟಕ್ಕೆ ನನ್ನ ಹೆಂಡತಿ ರಾಜೇಶ್ವರಿ ಸೇರಿದಂತೆ ನಮ್ಮ ಇಡೀ ಕುಟುಂಬ ತೊಡಗಿಸಿಕೊಂಡೆವು.’

ಇದನ್ನೂ ಓದಿ : Uttara Kannada: ಹಾದಿಯೇ ತೋರಿದ ಹಾದಿ: ಹೆರಿಗೆ ಮಾಡಿಸಿದಾಗ 15 ರೂಪಾಯಿ ಕೊಡಲೂ ಹಿಂದೇಟು ಹಾಕುವವರಿದ್ದಾರೆ

‘ರಾಜಮುಡಿ ಅಕ್ಕಿ ಮೈಸೂರು ಮಹಾರಾಜರ ಮನಗೆದ್ದ ಭತ್ತ. ಅದಕ್ಕೆ ಅದನ್ನು ರಾಜಮುಡಿ ಎನ್ನುತ್ತಾರೆ. ಆಗ ರಾಜರಿಗೆ ಮುಡುಪಾಗಿ ರೈತರು ಬೆಳೆದು ಕೊಡುತ್ತಿದ್ದರು. ಈ ಅಕ್ಕಿಯಲ್ಲಿ ಅನ್ನ ಮಾಡಿ ತಿಂದರೆ ಸಾಮರ್ಥ್ಯ, ಬುದ್ಧಿವಂತಿಕೆ, ಧೈರ್ಯ ಬರುತ್ತದೆ. ಈ ಅಕ್ಕಿಯಲ್ಲಿ ಅನ್ನ ಮಾಡಿದರೆ ಅದರಷ್ಟು ಅಗುಳು ಬೇರಾವ ಅಕ್ಕಿಯಿಂದಲೂ ಆಗುವುದಿಲ್ಲ. ಅದರ ಬಗ್ಗೆ ಸಂಶೋಧನೆ ನಡೆಯುತ್ತಿದೆ. ರಕ್ತಚೂಡಿ ಅಕ್ಕಿಯಿಂದ ಅನ್ನ ಮಾಡಿದರೆ 24 ಗಂಟೆ ಇಟ್ಟರೂ ಹಳಸುವುದಿಲ್ಲ. ನಮ್ಮಲ್ಲಿ ಇತ್ತೀಚೆಗೆ ಆಹಾರ ಸಮತೋಲನ ಇಲ್ಲವಾಗಿದೆ. ಬೀಜ ವೈವಿಧ್ಯತೆ ಇಲ್ಲ. ನಮಗೆ ಏನು ಬೇಕು, ಏನು ಬೇಡ ಗೊತ್ತಿಲ್ಲವಾಗಿದೆ.’

ಹತ್ತನೇ ತರಗತಿಯವರೆಗೆ ಓದಿರುವ ಇವರಿಗೆ ವಚನ ಸಾಹಿತ್ಯದಲ್ಲಿ ಹೆಚ್ಚಿನ ಆಸಕ್ತಿ ಇದ್ದು ಕರಿ ಬಸವಲಿಂಗ ಎಂಬ ಅಂಕಿತನಾಮದಿಂದ ಸಾವಿರಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ ಮತ್ತು ಹಾಡುತ್ತಾರೆ. ಹಾಗೂ ಹಳೆಯ ಕಾಲದ ನಾಣ್ಯಗಳು, ವಿದೇಶಿ ನೋಟುಗಳು, ಅಪರೂಪದ ಕೃಷಿ ಸಲಕರಣೆಗಳನ್ನು ಸಂಗ್ರಹಣೆ ಮಾಡಿದ್ದಾರೆ. ಮುಂದೆ ವಸ್ತು ಸಂಗ್ರಹಾಲಯ ಮಾಡುವ ಮಹದಾಸೆಯನ್ನು ವ್ಯಕ್ತಪಡಿಸುತ್ತಾರೆ. ರೇಚಣ್ಣನವರು ಹೇಳಿದಂತೆ ನಮ್ಮ ಬೇಕು ಬೇಡಗಳ ಬಗ್ಗೆ ತಿಳುವಳಿಕೆ ಕಡಿಮೆಯಾಗಿದೆ. ಫಾಸ್ಟ್ ಫುಡ್, ಜಂಕ್ ಫುಡ್ ಗಳಿಗೆ ಮಾರುಹೋಗಿ ನಮ್ಮ ದೇಹಾರೋಗ್ಯವನ್ನು ನಮಗೇ ಗೊತ್ತಿಲ್ಲದಂತೆ ನಾವೇ ಹಾಳು ಮಾಡಿಕೊಳ್ಳುವಲ್ಲಿ, ಹಣ ಕೊಟ್ಟು ರೋಗ ಕೊಂಡುಕೊಳ್ಳುವಲ್ಲಿ ಮುಂದಾಗಿದ್ದೇವೆ. ಕವಿ, ಅನುವಾದಕ ಕೆ. ನಲ್ಲತಂಬಿಯವರು ಹೇಳುವಂತೆ ‘ನಾವು ಬಣ್ಣಕ್ಕಾಗಿ ರುಚಿ ಕಳೆದುಕೊಂಡವರು’. ಇವತ್ತು ಬಹುತೇಕ ವಿಷವನ್ನು ಬಿತ್ತಿ ವಿಷವನ್ನು ಬೆಳೆದು ವಿಷವನ್ನೇ ತಿನ್ನುತ್ತಿದ್ದೇವೆ. ಸಾವಯವ ಧಾನ್ಯಗಳ ಬಗ್ಗೆ ಅರಿವು ಇಲ್ಲದಾಗಿದೆ. ಸಾವಯವ ಬೆಳೆಗಳು ಸ್ವಚ್ಛ ಆಹಾರ ಪದ್ಧತಿ ಕಾಣಸಿಗುವುದು ವಿರಳವಾಗಿದೆ. ಸ್ವಲ್ಪ ದುಬಾರಿಯಾಗಬಹುದು (ಆಸ್ಪತ್ರೆಯ ಬಿಲ್ಲಿಗಿಂತ ದುಬಾರಿಯೇನಲ್ಲ) ಆದರೆ ಸಾವಯವ ಆಹಾರಗಳನ್ನು ಸಿರಿಧಾನ್ಯಗಳನ್ನು ಬಳಸಬೇಕು. ಉತ್ತಮ ಆಹಾರ ಪದ್ಧತಿಯ ಬಗ್ಗೆ ನಾವು ತಿಳಿದುಕೊಂಡು ನಮ್ಮ ಮುಂದಿನ ತಲೆಮಾರುಗಳಿಗೆ ತಿಳಿಸಿಕೊಡುವುದು ಇಂದಿನ ಪ್ರಮುಖ ಅಗತ್ಯತೆಗಳಲ್ಲೊಂದು. ಸ್ವಚ್ಛ ಆಹಾರ ಸ್ವಸ್ಥ ಆರೋಗ್ಯ ಎಲ್ಲರ ಆದ್ಯತೆಯಾಗಲಿ.

(ಮುಂದಿನ ಹಾದಿ : 2.6.2022)

ಪ್ರತಿಕ್ರಿಯೆಗಾಗಿ : tv9kannadadigital@gmail.com

ತಾಜಾ ಸುದ್ದಿ
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ರಾಹುಲ್ ಎಂದಿಗೂ ಹಿಂದೂ ವಿರೋಧಿಯಲ್ಲ; ಪ್ರಿಯಾಂಕಾ ಗಾಂಧಿ ಸ್ಪಷ್ಟನೆ
ರಾಹುಲ್ ಎಂದಿಗೂ ಹಿಂದೂ ವಿರೋಧಿಯಲ್ಲ; ಪ್ರಿಯಾಂಕಾ ಗಾಂಧಿ ಸ್ಪಷ್ಟನೆ
ಪಕ್ಷದ ಶಿಸ್ತು ಮೀರುವವರಿಗೆ ಶೋಕಾಸ್ ನೋಟೀಸ್ ನೀಡಲಾಗುವುದು: ಡಿಕೆ ಶಿವಕುಮಾರ್
ಪಕ್ಷದ ಶಿಸ್ತು ಮೀರುವವರಿಗೆ ಶೋಕಾಸ್ ನೋಟೀಸ್ ನೀಡಲಾಗುವುದು: ಡಿಕೆ ಶಿವಕುಮಾರ್
ಧೂಮಪಾನ ಕ್ಯಾನ್ಸರ್ ಗೆ ಮೂಲ ಅಂತ ಗೊತ್ತಿದ್ದರೂ ಸಿಗರೇಟು ಸೇದುತ್ತೇವೆ: ಸಿಎಂ
ಧೂಮಪಾನ ಕ್ಯಾನ್ಸರ್ ಗೆ ಮೂಲ ಅಂತ ಗೊತ್ತಿದ್ದರೂ ಸಿಗರೇಟು ಸೇದುತ್ತೇವೆ: ಸಿಎಂ