Awards : ಸರ್ಕಾರಿ ಪ್ರಶಸ್ತಿಗಳಾಗಲೀ ಖಾಸಗಿ ಪ್ರಶಸ್ತಿಗಳಾಗಲಿ ಪಾರದರ್ಶಕತೆಯನ್ನು ನಾವೆಲ್ಲರೂ ಪ್ರಶ್ನಿಸಬೇಕು
Transparency : ‘ಇತ್ತೀಚೆಗೆ ರಾಜ್ಯದಲ್ಲಿ ಕೆಲವು ಖಾಸಗಿ ಟ್ರಸ್ಟ್-ಪ್ರತಿಷ್ಠಾನಗಳಲ್ಲಿ ನಡೆಯುವ ಪ್ರಕ್ರಿಯೆಗಳ ಕುರಿತು ಹೆಚ್ಚಿನ ಅನುಮಾನಗಳು ಹುಟ್ಟಿಕೊಂಡಿವೆ. ಅವು ಪಾರದರ್ಶಕವಾಗಿಲ್ಲ, ಸ್ವಜನಪಕ್ಷಪಾತಿಯಾಗಿವೆ ಎಂಬುದನ್ನು ಎತ್ತಿ ತೋರಿಸುತ್ತಿವೆ. ಇದು ಸಾಂಸ್ಕೃತಿಕ ಲೋಕಕ್ಕೆ ಶೋಭೆ ತರುವ ಕೆಲಸವಲ್ಲ.’ ಸಿ. ಎಸ್. ಭೀಮರಾಯ
Transparency : ಖಾಸಗಿ ಪ್ರತಿಷ್ಠಾನಗಳು ಪ್ರಶಸ್ತಿಗಳನ್ನು ನೀಡುವಾಗ ಪಾರದರ್ಶಕತೆ ಕಾಪಾಡುವುದು ಅಗತ್ಯ ಪ್ರತಿಯೊಬ್ಬ ಕವಿ, ಲೇಖಕ ಮತ್ತು ಕಲಾವಿದರು ಪ್ರಶಸ್ತಿಗಾಗಿ ಹಂಬಲಿಸುವುದು ಸಹಜ. ಆದರೆ ಕೆಲವರು ಪ್ರಶಸ್ತಿಗಾಗಿ ಹಿಡಿಯುವ ಮಾರ್ಗ ತುಂಬಾ ವಿಚಿತ್ರವಾಗಿರುತ್ತದೆ. ಒಂದು ಪ್ರಶಸ್ತಿ ಲಭ್ಯವಾಗುವ ಮುನ್ನ ಯರ‍್ಯಾರು, ಎಲ್ಲೆಲ್ಲಿ, ಏನೇನು ಪ್ರಯತ್ನ ಮಾಡುತ್ತಾರೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕಲೆ, ಸಾಹಿತ್ಯ ಮತ್ತು ಸಂಗೀತಗಳ ಮೂಲಕ ಸಮಾಜದಲ್ಲಿ ಮೌಲ್ಯಗಳನ್ನು ಬಿತ್ತಬೇಕಾದವರೇ ಮೌಲ್ಯಗಳನ್ನು ಗಾಳಿಗೆ ತೂರಿ ಸಾಂಸ್ಕೃತಿಕ ಮತ್ತು ನೈತಿಕ ಜವಾಬ್ದಾರಿಯಿಂದ ನುಣುಚಿಕೊಂಡರೆ ಹೇಗೆ? ಸಿ. ಎಸ್. ಭೀಮರಾಯ, ಉಪನ್ಯಾಸಕ, ವಿಮರ್ಶಕ, ಕಲಬುರ್ಗಿ
*
ಇತ್ತೀಚೆಗೆ ರಾಜ್ಯದಲ್ಲಿ ಕೆಲವು ಖಾಸಗಿ ಟ್ರಸ್ಟ್-ಪ್ರತಿಷ್ಠಾನಗಳಲ್ಲಿ ನಡೆಯುವ ಪ್ರಕ್ರಿಯೆಗಳ ಕುರಿತು ಹೆಚ್ಚಿನ ಅನುಮಾನಗಳು ಹುಟ್ಟಿಕೊಂಡಿವೆ. ಅವು ಪಾರದರ್ಶಕವಾಗಿಲ್ಲ, ಸ್ವಜನಪಕ್ಷಪಾತಿಯಾಗಿವೆ ಎಂಬುದನ್ನು ಎತ್ತಿ ತೋರಿಸುತ್ತಿವೆ. ಇದು ಸಾಂಸ್ಕೃತಿಕ ಲೋಕಕ್ಕೆ ಶೋಭೆ ತರುವ ಕೆಲಸವಲ್ಲ. ಈ ಕುರಿತು ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದೆ. ಕೆಲವು ಖಾಸಗಿ ಟ್ರಸ್ಟ್-ಪ್ರತಿಷ್ಠಾನಗಳು ಪ್ರಶಸ್ತಿಗೆ ಲೇಖಕರಿಂದ ಪುಸ್ತಕಗಳನ್ನು ಆಹ್ವಾನಿಸಿ, ಆಯ್ಕೆ ಪ್ರಕ್ರಿಯೆಯಲ್ಲಿ ಆ ಪುಸ್ತಕಗಳನ್ನು ಓದದೇ ತಮಗೆ ಬೇಕಾದ ಲೇಖಕರನ್ನು ಆಯ್ಕೆಮಾಡಿ ಅವರಿಗೆ ಪ್ರಶಸ್ತಿ ನೀಡುವ ಕೆಟ್ಟ ಸಂಪ್ರದಾಯ ಸೃಷ್ಟಿಸಿವೆ. ಇದು ನಾಚಿಕೆಗೇಡಿನ ವಿಚಾರ. ಸರ್ಕಾರಿ ಪ್ರಶಸ್ತಿಗಳ ಪಾರದರ್ಶಕತೆಯ ಬಗ್ಗೆ ಪ್ರಶ್ನೆ ಮಾಡುವ ನಾವೆಲ್ಲರೂ ಖಾಸಗಿ ಪ್ರತಿಷ್ಠಾನಗಳು ನೀಡುವ ಪ್ರಶಸ್ತಿಗಳ ಪಾರದರ್ಶಕತೆಯನ್ನೂ ಪ್ರಶ್ನಿಸಬೇಕು. ಯಾವುದೇ ಪ್ರಶಸ್ತಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಅಗತ್ಯ.
ಪ್ರಸ್ತುತ ಭಾರತದಲ್ಲಿ ಪದ್ಮಶ್ರೀ, ಪದ್ಮಭೂಷಣ ಸೇರಿದಂತೆ ಜ್ಞಾನಪೀಠ, ಕಬೀರ್ ಸಮ್ಮಾನ್ ಮುಂತಾದ ಮಹತ್ವದ ಪ್ರಶಸ್ತಿಗಳು ಕೂಡ ಕಳಂಕದಿಂದ ಮುಕ್ತವಾಗಿಲ್ಲ. ನಮ್ಮ ಬದುಕಿನ ವಾಸ್ತವಗಳೊಂದಿಗೆ, ರಾಜಕೀಯ ಸುತ್ತುಗಳೊಂದಿಗೆ ತಳಕು ಹಾಕಿಕೊಂಡಿರುವ ಪ್ರಶಸ್ತಿಗಳು ಯಾವಾಗಲೂ ಅರ್ಹ ವ್ಯಕ್ತಿಗಳಿಗೇ ದಕ್ಕುತ್ತವೆ ಎಂಬ ನಿಯಮವಿಲ್ಲ. ರಾಜಕೀಯ ಲಾಭ ಪಡೆಯುವ ಉದ್ದೇಶಗಳಿಂದ ಪ್ರಶಸ್ತಿಗಳು ವಿತರಣೆಯಾಗಬಾರದು.
ಇದನ್ನೂ ಓದಿ : Awards : ‘ಬೇಡೋಜ’ರು ಹೆಚ್ಚಿದಂತೆಲ್ಲಾ ‘ನೀಡೋಜ’ರೂ ಹೆಚ್ಚುತ್ತಿರುವುದು ಗುಟ್ಟಾಗಿಯೇನೂ ಉಳಿದಿಲ್ಲ ಈಗ
ನಿಮ್ಮ ಪ್ರತಿಕ್ರಿಯೆಗಳಿಗೂ ಸ್ವಾಗತ : tv9kannadadigital@gmail.com
Published On - 5:13 pm, Sun, 5 December 21