ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ‘ಶಿಶು’ ಎಂಬ ಮೊದಲ ಕತೆಗೆ ಸ್ಪರ್ಧೆಯೊಂದರಲ್ಲಿ ಬಹುಮಾನ ಗಳಿಸುವ ಮೂಲಕ ಸಾಹಿತ್ಯಲೋಕವನ್ನು ಪ್ರವೇಶಿಸಿದ ಎನ್. ಎಸ್. ಮಾಧವನ್ (N S Madhavan) ಪ್ರಮುಖ ಮಲಯಾಳಂ ಲೇಖಕರಲ್ಲಿ ಒಬ್ಬರು. ಅವರ ‘ಹಿಗುಟಾ’ ಕತೆ ನೂರು ವರ್ಷಗಳ, ಫಲವತ್ತಾದ ಮಲಯಾಳಂ ಸಾಹಿತ್ಯದ ಅತ್ಯುತ್ತಮ ಕತೆಗಳಲ್ಲೊಂದೆಂದು ಪರಿಗಣಿತವಾಗಿದೆ. ನಮ್ಮ ಕಾಲದ, ಈ ನಮ್ಮ ಬದುಕಿನ ಇತಿಹಾಸವು ಅವರ ಕಥಾಸಂಕಲನ ‘ನಿಲವಿಳಿ’ಯಲ್ಲಿ ಪ್ರಖರವಾಗಿ ಕಾಣಬರುತ್ತದೆ. 2003ರಲ್ಲಿ ಪ್ರಕಟವಾದ ‘ಲಂತನ್ ಬತ್ತೇರಿಯಿಲೆ ಲೂತ್ತೀನಿಯಗಳ್’ ಕಾದಂಬರಿಯಲ್ಲಿ ಐವತ್ತರ ದಶಕದ ಕೇರಳದ ಇತಿಹಾಸವನ್ನು ಕಾಣಬಹುದಾಗಿದೆ. ಇವರು ತಮ್ಮ ಓದುಗರನ್ನು ಕೋಚಿನದ ಕತೆಗಳಲ್ಲಿ, ಆ ದ್ವೀಪಗಳ ಬದುಕಿನ ಸೂಕ್ಷ್ಮ ಒಳನೋಟಗಳಲ್ಲಿ ಸುಲಲಿತವಾಗಿ ಕರೆದೊಯ್ಯುತ್ತಾರೆ. ಇಂಥ ಕತೆಗಳ ಮೂಲಕ ಇವರು ಮಾಯಾದೀಪವನ್ನು ಹಿಡಿದ ಮಾಂತ್ರಿಕನಂತೆ ಮಲಯಾಳಂ ಕಥಾಲೋಕದಲ್ಲಿ ಕಂಗೊಳಿಸುತ್ತಾರೆ. ಪ್ರಸ್ತುತ ಕಥೆಯನ್ನು ಅನುವಾದಿಸಿದ ನಾ. ದಾಮೋದರ ಶೆಟ್ಟಿ (Na Damodar Shetty, ಸುಳುವಿನೊಳಗೆ, ಸರದಿ (ಕಾದಂಬರಿ), ಕೆ.ಎನ್. ಟೇಲರ್, ಮುದ್ದಣ ಬದುಕು-ಬರಹ, ನಾರಾಯಣಗುರು, ಪೇಜಾವರ ಸದಾಶಿವರಾಯರು, ಕೆ.ವಿ. ಸುಬ್ಬಣ್ಣ (ವ್ಯಕ್ತಿ ಪರಿಚಯ), ಭತ್ತದ ಕಾಳುಗಳು, ಕರಿಯ ದೇವರ ಹುಡುಕಿ, ಅಶ್ವತ್ಥಾಮ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.
ಕಥೆ : ಕ್ಷೌರಿಕ | ಮಲಯಾಳಂ : ಎನ್.ಎಸ್. ಮಾಧವನ್ | ಕನ್ನಡಕ್ಕೆ : ನಾ ದಾಮೋದರ ಶೆಟ್ಟಿ | ಸೌಜನ್ಯ : ದೇಶಕಾಲ, ಸಾಹಿತ್ಯ ಪತ್ರಿಕೆ
(ಭಾಗ 1)
ಪಾಡಿ, ಇಪ್ಪತ್ತೆರಡು ವಯಸ್ಸಿನ ಪಾರಂಪರಿಕ ಕ್ಷೌರಿಕ. ಕೂದಲು ಕತ್ತರಿಸುವುದಕ್ಕಿಂತ ಗಡ್ಡ ಕೆರೆಯುವುದರಲ್ಲೇ ಹೆಚ್ಚು ಆಸಕ್ತಿ. ಕೂದಲು ಕತ್ತರಿಸುವುದೆಂದರೆ ತೋಟಗಾರಿಕೆ ಇದ್ದ ಹಾಗೆ. ಗರಿಕೆ ಹುಲ್ಲಿನ ಮೈದಾನದಂತೆ ಕೂದಲನ್ನು ಸಮತಟ್ಟುಗೊಳಿಸುವುದು. ಎಡೆಯಲ್ಲೆಲ್ಲಾದರೂ ನರೆತ ಕೂದಲು ಕಂಡಲ್ಲಿ ಕಳೆ ಕೀಳುವಂತೆ ಬುಡದಿಂದ ಕಿತ್ತೊಗೆಯುವುದು. ಸ್ಟೆಪ್ ಕಟ್ಟಿಂಗಾಗಿದ್ದಲ್ಲಿ ಬೆಟ್ಟದ ಇಳಿಜಾರಿನ ಹಾಗೆ ಮೆಟ್ಟಲು ಮೆಟ್ಟಲಾಗಿ ಕತ್ತರಿಸಬೇಕು. ಮಷ್ರೂಂ ಕಟ್ಟಿಂಗ್ – ಹೆಸರೇ ಕೃಷಿ ಮೂಲದ್ದು. ಮುಖ ಕ್ಷೌರ ಮಾಡುವುದು ಪಾಡಿಗೆ ಹೊಸಮಂಜಿನಲ್ಲಿ ಹರಿದಾಡುವ ಹಾಗೆ. ಒಂದೋ ಎರಡೋ ದಿವಸ ಬೆಳೆದ ಗಡ್ಡದ ರೋಮ ಕೆರೆದು ತೆಗೆಯುವಾಗ ಶೇವ್ ಮಾಡಿಸಿಕೊಳ್ಳುವುದಕ್ಕೆ ಕುಳಿತ ವ್ಯಕ್ತಿಯ ಜೀವನದಿಂದ ಅಷ್ಟೂ ದಿವಸಗಳನ್ನು ಕೆರೆದು ಹಾಕಿದಂತೆ ಪಾಡಿಗೆ ಭಾಸವಾಗುತ್ತಿತ್ತು.
ಮುಖಕ್ಕೆ ಪಿಚಕಾರಿಯಿಂದ ನೀರು ಚಿಮುಕಿಸಿ ಗಡ್ಡ ಬೋಳಿಸತೊಡಗುವುದು. ಆಮೇಲೆ ನೊರೆಯ ನವಮಂಜು. ಮೊದಲ ಕೆರೆತವಾದ ಬಳಿಕ ಮುಖದ ಮೇಲೆ ಕೈಯಾಡಿಸುವಾಗ ಅದು ಹೊಳಪಿಸಿದ ಶಿಲೆಯಂತಿರುವುದು. ಬ್ರಶ್ಶಿನಲ್ಲಿ ಉಳಿದ ನೊರೆಯಿಂದ ಇನ್ನೂ ಒಮ್ಮೆ ಗದ್ದಕ್ಕೆ ಲೇಪಿಸುವನು. ಈಗ ಮುಖಕ್ಕೆ ತಾಮ್ರದ ಬಿಂದಿಗೆಯಡಿಯ ತಂಪೂ ಮೃದುತ್ವವೂ. ಬೋಳಿಸುವುದರಲ್ಲೂ ಚರಿತ್ರೆಯುಂಟು; ಹಿಮಯುಗದಿಂದ ಶಿಲಾಯುಗ. ಮುಂದುವರಿದು ಲೋಹಯುಗ.
ಹೊಸ ಮಂಜಿನಲ್ಲಿ ಹರಿಯುವುದು! ಪಾಡಿ ಅದಕ್ಕೆ ಮಂಜನ್ನೇ ನೋಡಿರಲಿಲ್ಲ. ಅವನ ಜೀವನದಲ್ಲಿ ಮಂಜು ಪ್ರವೇಶಿಸಿದ್ದು ಬಣ್ಣಿಯ ಮೂಲಕ. ಪಾಡಿ ಬಣ್ಣಿಯ ಬ್ಲಾಗುಗಳನ್ನು ಓದಿದ್ದ. ತಿಯೋಫಿಲಸ್ ಎಂಬ ಹೆಸರಿನಿಂದ ಬಣ್ಣೆ ಬ್ಲಾಗುಗಳನ್ನು ಬರೆಯುತ್ತಿದ್ದ. ಬಣ್ಣಿಯ ಹೆಸರು ದೇವಪ್ರಿಯ ಬ್ಯಾನರ್ಜಿ ಎಂದಾಗಿತ್ತು. ತಿಯೋಫಿಲಸ್ ಎಂಬ ಕಳ್ಳ ಹೆಸರನ್ನು ಇಂಟರ್‌ನೆಟ್ಟಲ್ಲಿ ಬಳಸುವುದಕ್ಕಿದ್ದ ಕಾರಣವನ್ನು ಪಾಡಿಗೆ ಬಣ್ಣಿ ಹೇಳಿದ್ದ. ತಿಯೋ ಎಂದರೆ ಗ್ರೀಕ್ ಭಾಷೆಯಲ್ಲಿ ದೇವರು. ಫಿಲಸ್ ಎಂದರೆ ಪ್ರಿಯ ಎಂದರ್ಥ. ಆದ್ದರಿಂದ ತಿಯೋಫಿಲಸ್ ಸಮ-ದೇವಪ್ರಿಯ.
ಜನವರಿ 7, 2002 : ಮಂಜಿನ ಬಗ್ಗೆ
ಇಂದು ಮಂಜು ಸುರಿಯಿತು. ನನ್ನ ಕೋಣೆಯ ಸಳಿಗಳಿಲ್ಲದ ಕಿಟಕಿಗಳ ಮೂಲಕ ಕಾಣುವ, ಮುಂಜಾನೆ ಪೆರೇಡೂ ಸಂಜೆಗೆ ಫುಟ್‌ಬಾಲೂ ನಡೆಯುವ ಪೆನ್ಸಿಲ್‌ವೇನಿಯಾದ ಒಂದು ತಾಣದಲ್ಲಿ, ಅಂದರೆ ನಮ್ಮ ಮಿಲಿಟರಿ ಕ್ಯಾಂಪಿನ ಮೈದಾನದ ಮೇಲೆ ಹುಡಿಯಾಗಿ ಆವರಿಸುತ್ತಲೇ ಮಂಜು ಹರಡತೊಡಗಿದ್ದು. ಕಳೆದ ಸೆಪ್ಟೆಂಬರ 12ನೇ ತಾರೀಕು – ಅಂದರೆ 9/11ರ ಮಾರನೆಯ ದಿವಸ – ವರ್ಲ್ಡ್ ಟ್ರೇಡ್ ಸೆಂಟರಿನ ಅವಶೇಷಗಳನ್ನು ನೋಡುವುದಕ್ಕಾಗಿ ಎನ್.ವೈ.ಪಿ. ಡಿಕಾರ್ ಬಹಳ ದೂರದ ನಿರ್ಬಂಧಿತ ದಾರಿಯ ಆಚೆ ಭಾಗದಲ್ಲಿ ನಿಂತಾಗ, ಆಗಲೂ ಅಡಗದ ಮಂಜು ಹುಡಿಯ ರಾಶಿ ಇದಕ್ಕಿಂತ ಅಗಲವೂ ಎತ್ತರವೂ ಇತ್ತು. ಅದಕಾದರೊ ಸಿಮೆಂಟಿನ ದುಃಖದಾಯಕ ಭಸ್ಮದ ಬಣ್ಣವಿತ್ತು. ನನ್ನ ಹತ್ತಿರದಲ್ಲಿ ನಿಂತಿದ್ದ ವ್ಯಕ್ತಿ ಕಟ್ಟಡದಲ್ಲಿ ಸಿಕ್ಕಿ ಬಿದ್ದಿದ್ದ ಸೋದರಿಗೆ ದುಃಖಿಸದೆ, ಸೆಲ್‌ಫೋನಿನ ಮೂಲಕ ‘ಫ್ರೆಂಡ್ಸ್’ನ ಹೊಸ ಎಪಿಸೋಡಿನ ಕತೆ ಹೇಳುತ್ತಿದ್ದುದನ್ನು ನಾನು ಕೇಳಿದೆ. (ಸೆಪ್ಟೆಂಬರ್ 12, 2001ರ ಚಂದ್ರನಲ್ಲಿ ಹೊಂಡ ತೋಡುವುದು ಹೇಗೆ? ಎಂಬ ನನ್ನ ಬ್ಲಾಗನ್ನು ಓದಿರಿ. ಅದರ ಜೊತೆಗೇನೆ, ಡಿ.ಎನ್.ಎ ಟೆಸ್ಟ್ ಮಾಡಿದ ಬಳಿಕ, ನನ್ನ ನೆರೆಮನೆಯವನದ್ದೆಂದು ಪತ್ತೆಯಾದ ಶರೀರ ಭಾಗವೊಂದರ ಕುರಿತು 31, ಅಕ್ಟೋಬರ್ 2001ರ ‘ಒಂದು ಕಿರು ಬೆರಳಿನ ಶವಸಂಸ್ಕಾರ’ ಎಂಬ ಬ್ಲಾಗನ್ನೂ ಓದಿರಿ).
ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ: ಟಿ.ಡಿ. ರಾಜಣ್ಣ ತಗ್ಗಿ ಅನುವಾದಿಸಿದ ಪಾಲಗುಮ್ಮಿ ಪದ್ಮರಾಜು ಅವರ ತೆಲುಗು ಕಥೆ
ಥಟ್ಟನೆ ಮಂಜಿನ ರಾಶಿ ದಟ್ಟವಾಗತೊಡಗಿತು. ಅವುಗಳಲ್ಲಿ ಕೆಲವು, ಪಾಂಡುರೋಗ ಹಿಡಿದ ಚಿಟ್ಟೆಗಳಂತೆ ಹಾರಾಡುವುದನ್ನು ನಾನು ಕಂಡೆ. ಆಕಾಶವು ಭೀಮಾಕಾರದ ಒಂದು ಪಾಪ್‌ಕಾರ್ನ್ ಯಂತ್ರವಾಯಿತು. ಮೈದಾನ ತುಂಬ ಮಂಜು ತುಂಬಿಕೊಂಡಿತು. ಭೂಮಿಯ ಮೇಲೆಲ್ಲ, ಸುಕ್ಕುಗಳಿಂದ ಕೂಡಿದ ಬಿಳಿಯ ಹತ್ತಿಬಟ್ಟೆಯ ಬಿಡಿಸಿದ ಹಾಸಿಗೆ.
ಯುದ್ಧಕ್ಕೆ ಸಿದ್ಧವೆಂದು ಸದ್ದಾಂ ಹೇಳಿದ. ಯು.ಎನ್. ಸಶಸ್ತ್ರ ಕಾವಲುಗಾರರನ್ನು ಚಾರರೆಂದೂ ಸೇತಾನನ ಅನುಚರಪೀಡೆಗಳೆಂದೂ ಆತ ಕರೆದ. ಎಂದಿನಂತೆ ಮಂಜಿನಲ್ಲಿ ಆಡುವುದಕ್ಕೆ ಯಾರೂ ಹೊರಡಲಿಲ್ಲ.
ಎಲ್ಲಾ ಬ್ಯಾರಕ್‌ಗಳ ಎಲ್ಲಾ ಕಿಟಕಿಗಳ ಮೂಲಕವೂ ಒಬ್ಬೊಬ್ಬರು ಮಂಜನ್ನು ನೋಡಿನಿಂತರು. ನಾಳೆ, ಎಲ್ಲರೂ ಕುವೈಟಿಗೆ ಹಾರಬೇಕಾಗಿತ್ತು ಆಗ ನಮ್ಮ ಹತ್ತಿರದ ಮಂಜೊ ?
ತಿಯೋಫಿಲಸ್ 11.05 ಪಿ.ಎಂ.
ಬ್ಲಾಗಿನಲ್ಲಿ ಹೇಳಿರುವ ಫುಟ್‌ಬಾಲ್ ತನಗೆ ಗೊತ್ತಿರುವ ಫುಟ್‌ಬಾಲ್ ಅಲ್ಲ – ಎಂದು ಅರ್ಥಮಾಡಿಕೊಳ್ಳಲು ಪಾಡಿಗೆ ದಿವಸಗಳೇ ಬೇಕಾಯಿತು. ಇಬ್ಬದಿಯೂ ಕಪ್ಪಾದ ಒಂದು ಚೆಂಡಿಗಾಗಿ ದಷ್ಟಪುಷ್ಟರಿಂದ ಕೂಡಿದ ಎರಡು ತಂಡಗಳು ಆಡುವ ಆಟವೇ ಅಮೇರಿಕಾದ ಫುಟ್‌ಬಾಲ್ ಎಂದು ಬಣ್ಣಿ ಪಾಡಿಗೆ ಹೇಳಿಕೊಟ್ಟ. ಅಮೇರಿಕಾದಲ್ಲಿ ಹೆಸರುಗಳಿಗೆ ಪಾವಿತ್ರ್ಯವಿಲ್ಲ. ಫುಟ್‌ಬಾಲ್ ಎಂಬ ಹೆಸರನ್ನು ಅಪಹರಿಸಿದ ಬಳಿಕ ಅವರು ಲೋಕದ ಇತರ ಭಾಗಗಳಲ್ಲಿ ಕಾಲಿನಿಂದ ಆಡುವ ಆಟಕ್ಕೆ ಸಾಕರ್ ಎಂಬುದಾಗಿ ನಾಮಕರಣ ಮಾಡಿದರೆಂದೂ ಬಣ್ಣಿ ಹೇಳಿದ. ಅಮೇರಿಕಾದ ಪೌರನಾಗಿದ್ದ ದೇವಪ್ರಿಯ ಬ್ಯಾನರ್ಜಿಯನ್ನು ನ್ಯೂಯಾರ್ಕಿನ ಕ್ವೀನ್ಸ್ನಲ್ಲಿ ಪ್ರೈಮರಿ ಶಾಲೆಗೆ ಸೇರಿಸಿದ ಕೂಡಲೆ ಅವನನ್ನು ಬಣ್ಣಿ ಮಾಡಿದರು. ಪದ್ಮನಾಭನ್ ಪಾಡಿಯಾಗುವುದಕ್ಕೆ ಒಂದು ವಾರ ಮಾತ್ರ ತಗುಲಿತ್ತು. ಈಗ ಆತ ತನ್ನ ಬಗ್ಗೆ ಆಲೋಚಿಸುವುದು ಕೂಡ ಪಾಡಿಯಾಗಿಯೆ. ಅದಕ್ಕೂ ಮೊದಲು ಅವ ಪಪ್ಪುವಾಗಿದ್ದ.
ತಿರುವಾಂಕುಳಂ ಜಂಕ್ಷನ್‌ನ ರೋಯಲ್ ಹೇರ್ ಕಟ್ಟಿಂಗ್ ಸೆಲೂನಿನ ಯಜಮಾನನಾಗಿದ್ದ ನಾರಾಯಣನ ತಂದೆಯೂ ಅಜ್ಜನೂ ಕ್ಷೌರಿಕರಾಗಿದ್ದರು.
ನಾರಾಯಣನ ತಂದೆ ಕೇಶವನ್ ಮನೆಮನೆಗೆ ಹೋಗಿ ಕ್ಷೌರ ಮಾಡುವುದನ್ನು ನಿಲ್ಲಿಸಿ ಜಂಕ್ಷನ್‌ನ ಸಾಲುಕಟ್ಟೋಣದಲ್ಲಿ ಒಂದು ಕೋಣೆ ಪಡೆದು, ಎತ್ತರದ ಒಂದು ಮರದ ಕುರ್ಚಿಯನ್ನೂ ಗೋಡೆಯಲ್ಲಿ ಕನ್ನಡಿಯನ್ನೂ ಒಂದು ಮೊಳೆಯಲ್ಲಿ ಕತ್ತಿ ಹರಿತಮಾಡಲು ಬಳಸುವ ಚರ್ಮದ ತೂಗು ಪಟ್ಟಿಯನ್ನೂ ಅಣಿಗೊಳಿಸಿ 1940ರಲ್ಲಿ ಬಾರ್ಬರ್ ಅಂಗಡಿ ಪ್ರಾರಂಭಿಸಿದ. ಅಂದು ಹಿಂದೂಗಳ ನಡುವಿನಲ್ಲಿ ಜುಟ್ಟಿನ ವಂಶನಾಶ ಪ್ರಾರಂಭವಾಗಿತ್ತಷ್ಟೆ. ತಿರುವಾಂಕುಳದಲ್ಲಿ ಕ್ರೈಸ್ತರೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದರು. ಯುದ್ಧಕಾಲದಲ್ಲಿ ಬ್ಲೇಡು ಸಿಗದಾದಾಗ ಗಡ್ಡ ಬೋಳಿಸುವುದಕ್ಕೆ ಬರುವವರ ಸಂಖ್ಯೆ ಹೆಚ್ಚಾಯಿತು. ಕೇಶವನ್ ಗತಿಸಿದ ಬಳಿಕ 1960೦ರಲ್ಲಿ ಸ್ಪಾಂಜ್ ತುಂಬಿದ ನಾಲ್ಕು ಕುರ್ಚಿಗಳೊಂದಿಗೆ ನಾರಾಯಣನ್ ರಾಯಲ್ ಹೇರ್ ಕಟ್ಟಿಂಗ್ ಸೆಲೂನ್ ಸ್ಥಾಪನೆ ಮಾಡಿದ. ನಾರಾಯಣನ್ ತೀರಿಕೊಂಡ ಮೇಲೆ ಹಿರಿಯ ಪುತ್ರ ಕೇಶವನ್, ಮೆಟ್ಟಿದಾಗ ಮೇಲಕ್ಕೇರುವ ಎಂಟು ಕುರ್ಚಿಗಳಿಂದ ಕೂಡಿದ ಸೆಲೂನಾಗಿ ಅದನ್ನು ವಿಕಸನಗೊಳಿಸಿದ. ಮುಖಕ್ಕೆ ಕ್ರಿಮಿನಾಶಕವಾಗಿ ಬಳಸುತ್ತಿದ್ದ ಸ್ಫಟಿಕದ ಖಾರ ಕಲ್ಲನ್ನು ಆತ ‘ಓಲ್ಡ್ಸ್ಪೈಸ್ ಆಫ್ಟರ್ ಶೇವ್’ ಲೋಷನ್ ಆಗಿ ಪರಿವರ್ತಿಸಿದ. ಬ್ಯೂಟಿಷನ್ ಕೋರ್ಸು ಕಲಿತ ಕೇಶವನ ಹೆಂಡತಿ ಪ್ರೀಜ ಪಕ್ಕದ ಅಂಗಡಿಯನ್ನು ಬಾಡಿಗೆಗೆ ಪಡೆದು ಹೆಂಗಸರಿಗಾಗಿ ರಾಯಲ್ ಬ್ಯೂಟಿ ಪಾರ್ಲರನ್ನೂ ತೆರೆದಳು.
ಕೇಶವನ್ ಮಾತ್ರವಲ್ಲದೆ ನಾರಾಯಣನಿಗೆ ಇನ್ನಿಬ್ಬರು ಮಕ್ಕಳಿದ್ದರು. ಕೃಷ್ಣನ್ (ಹೆಂಡತಿಯ ತಂದೆಯ ಹೆಸರು), ಪದ್ಮನಾಭನ್ (ತಾಯಿಯ ಕಡೆಯ ಅಜ್ಜನ ಹೆಸರು). ಸೆಲೂನನ್ನು ನಿರಂತರ ನಡೆಸುವುದಕ್ಕೆ ಕೇಶವನಲ್ಲದೆ ಮಿಕ್ಕ ಇಬ್ಬರನ್ನೂ ಕ್ಷೌರಿಕರನ್ನಾಗಿಸಬೇಕೆಂದು ನಾರಾಯಣನ್ ಬಯಸಿರಲಿಲ್ಲ. ಅವರು ಮನೆಯ ಮುಂದುಗಡೆ ದೊಡ್ಡ ಬೋರ್ಡು ತಗಲುಹಾಕಬಹುದಾದ ಯಾವುದಾದರೂ ಕೆಲಸ (ವಕೀಲರು, ಡಾಕ್ಟರು ಅಲ್ಲವಾದರೆ ಚಾಟರ‍್ಡ್ ಎಕೌಂಟೆಂಟ್) ಮಾಡಲಿ ಎಂದು ನಾರಾಯಣನ್ ಅತಿಯಾಗಿ ಆಸೆಪಟ್ಟ.
ಆದರೆ ಎರಡನೆಯ ಮಗನಾದ ಕೃಷ್ಣನ್ ಓರ್ವ ಸಹಜ ಕ್ಷೌರಿಕನಾಗಿದ್ದ. ಅಂಗಡಿಯಲ್ಲೆ ತಪ್ಪಿತಡವಿನಿಂತು ತಂದೆಯನ್ನೂ ಅಣ್ಣನನ್ನೂ ನೋಡಿ ನೋಡಿ ಕಲಿತು ಒಂದು ದಿನ ಇದ್ದಕ್ಕಿದ್ದಂತೆಯೆ ಕ್ಷೌರಿಕನಾದ. ಕಾಲೇಜು ವಿದ್ಯಾರ್ಥಿಗಳಲ್ಲಿ ಹಲವರು ಕೃಷ್ಣನೇ ಕೂದಲು ತೆಗೆಯಬೇಕೆಂದು ಹಠಹಿಡಿದರು. ಬಾರ್ಬರ್ ಕೆಲಸದ ಔನ್ನತ್ಯವನ್ನಾತ ಬಹುಬೇಗ ಕಂಡುಕೊಂಡ. ಷಾರ್ಜಾದ ಒಂದು ಫೈವ್ ಸ್ಟಾರ್ ಹೋಟೆಲಿನ ಬಾರ್ಬರ್ ಶಾಪ್ಪಿನಲ್ಲಿ ಕೃಷ್ಣನಿಗೆ ಕೆಲಸ ಸಿಕ್ಕಿತು. ಎರಡು ವರ್ಷಗಳ ಬಳಿಕ ಕೆಲವು ಪಾಲುದಾರರನ್ನು ಸೇರಿಸಿಕೊಂಡು ಕುವೈಟಿನಲ್ಲಿ ಸ್ವಂತ ಸೆಲೂನ್ ತೆರೆದ.
ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ: ಚಂದ್ರಕಾಂತ ಪೋಕಳೆ ಅನುವಾದಿಸಿದ ಹಮೀದ ದಳವಾಯಿ ಕಥೆ ‘ಬಾಬುಖಾನನ ಗ್ರಾಮೋಫೋನ್’
ಕೇಶವನ ಕೊನೆಯ ಮಗ ಪದ್ಮನಾಭನ್ – ಪಪ್ಪು – ಗೆ ಕ್ಷೌರಿಕ ವೃತ್ತಿಯಲ್ಲಿ ಆಸಕ್ತಿಯಿರಲಿಲ್ಲ. ಶಾರ್ಜಾಕ್ಕೆ ಹೋಗುವುದಕ್ಕೆ ಮುನ್ನ ಕೃಷ್ಣನ್ ಅವನೊಂದಿಗೆ ‘ಕೆಲಸ ಕಲಿತರೆ ಗಲ್ಫ್ಗೆ ಕರೆದೊಯ್ಯುವೆ’ನೆಂದು ಹೇಳಿದ್ದ. ಅಂದು ಪಪ್ಪುವಿಗೆ ವಯಸ್ಸು ಹದಿನಾಲ್ಕು. ಪಪ್ಪು ಅಂಗಡಿಗೆ ಹೋಗತೊಡಗಿದ.
ಮೊತ್ತಮೊದಲಿಗೆ ಪಪ್ಪು ಮಾಡಿದ ಕೆಲಸವೆಂದರೆ – ಶೇವ್ ಮಾಡಿದ ಮೇಲೆ ತೆಗೆದ ನೊರೆಯನ್ನು ಶೇಖರಿಸುವುದಕ್ಕೆ ಬೇಕಾಗುವ ಚಿಕ್ಕ ಚೌಕಾಕಾರದ ಕಾಗದಗಳನ್ನು ಕತ್ತರಿಸುವುದು. ಆ ಬಳಿಕ ಕೂದಲು ತೆಗೆಸುವುದಕ್ಕೆಂದು ಬರುವವರನ್ನು ಹೊದೆಸುವುದು, ಮುಖಕ್ಕೆ ನೀರು ಚಿಮುಕಿಸುವುದು, ಕೂದಲು ಕತ್ತರಿಸಿ ಆದ ಮೇಲೆ ಬ್ರಶ್ಶಿನಿಂದ ಒರೆಸುವುದು ಮುಂತಾದ ಚಿಕ್ಕಪುಟ್ಟ ಕೆಲಸಗಳನ್ನು ಆತ ಮಾಡಿದ. ಮೂರು ವರ್ಷಗಳಷ್ಟು ಕಾಲ ಕೂದಲು ಕತ್ತರಿಸುವುದು, ಶೇವ್ ಮಾಡುವುದು ನೋಡಿ ನೋಡಿ ಕಣ್ಣಿಗೆ ಒಗ್ಗಿದ ಮೇಲಷ್ಟೆ ಪಪ್ಪುವಿಗೆ ಅವನ ತಂದೆ ನಾರಾಯಣನ್ ಕೂದಲು ಕತ್ತರಿಸಲು ಕಲಿಸತೊಡಗಿದ್ದು. ಗಡ್ಡದಲ್ಲಿ ಕೈಯಿಡಲು ಇನ್ನಷ್ಟು ವರ್ಷಗಳೇ ಬೇಕಾದುವು. ಅರ್ಧ ತುಂಡರಿಸಿದ ೩೬೫ನೆಯ ಬ್ರಾಂಡ್ ಬ್ಲೇಡಿನ – ಏಯ್ಡ್ಸ್‌ನ ಕಾಲವದು, ಗಡ್ಡ ಕೆರೆದರೆ ತುಂಡು ಬ್ಲೇಡನ್ನು ಬಿಸಾಡಬೇಕು – ತೀಕ್ಷ÷್ಣ ಹರಿತವೂ ಮುಖದ ಚರ್ಮವೂ ತಮ್ಮೊಳಗೆ ನಡೆಸುವ ಆಘಾತಕಾರಿ ಸಂಘರ್ಷಕ್ಕೆ ಮೊದಲು ಒಳ್ಳೆಯ ಕೈಚಳಕವಿದ್ದರೆ ಸೈ.
ಕೆಲಸ ಕಲಿಯತೊಡಗಿದ್ದಲ್ಲಿಂದ ಪಪ್ಪು ರಜಾ ದಿವಸಗಳನ್ನು ತ್ಯಾಗಮಾಡಬೇಕಾಯಿತು; ಸಂಜೆ ಹೊತ್ತನ್ನು ಕೂಡ. ಸ್ಕೂಲು – ಮತ್ತೆ ಕಾಲೇಜು – ಬಿಟ್ಟು ಬಂದರೆ ಆತ ಶಾಪ್ಪಿಗೆ ಹೋಗುತ್ತಿದ್ದ. ಮಂಗಳವಾರ ಹೊರತುಪಡಿಸಿ – ಆ ದಿನವೆ ಕೇರಳದಲ್ಲಿ ಬಾರ್ಬರ್ ಶಾಪ್ಪುಗಳಿಗೆ ರಜೆ. ಮಂಗಳವಾರ ಸಂಜೆ ನಾರಾಯಣನ್ ಪಪ್ಪುವನ್ನು ಎರ್ಣಾಕುಳಂಗೆ ಕರೆದೊಯ್ದ. ಜೋಸ್ ಜಂಕ್ಷನ್ ಹತ್ತಿರದ ಒಂದು ಹೋಟೆಲಿನಿಂದ ಅವನ ಇಷ್ಟದ ಚೆನ್ನ ಬಟೂರ ತೆಗೆಸಿಕೊಟ್ಟ. ಕೆಲವೊಮ್ಮೆ ಅವರು ಸಿನಿಮಾ ನೋಡಿದ್ದೂ ಉಂಟು. ಷಣ್ಮುಖಂ ರಸ್ತೆಯಲ್ಲಿ ‘ಕಾಯಲ್’ ನೋಡಿ ಬರುತ್ತಿದ್ದಾಗ ಪಪ್ಪು ಕೋನ್ ಐಸ್‌ಕ್ರೀಂ ತಿಂದಿದ್ದ. ನಾರಾಯಣನ್ ಒಂದು ಹರ್ಕ್ಯುಲಿಸ್ ರಮ್ ಕೊಂಡುಕೊಂಡನೆಂದರೆ ಅವರು ತಿರುವಾಂಕುಳಕ್ಕೆ ಹಿಂದಿರುಗಿದರೆಂದು ಲೆಕ್ಕ. ಸ್ವಲ್ಪ ಕಾಲದ ಬಳಿಕ, ಬೀವರೇಜಸ್ ಕಾರ್ಪೋರೇಶನ್ ಮದ್ಯ ವ್ಯಾಪಾರದ ಆಧಿಪತ್ಯ ಪಡೆದಾಗ, ಉದ್ದನೆಯ ಕ್ಯೂನಲ್ಲಿ ನಿಲ್ಲುವ ಮುಜುಗರ ನಿಮಿತ್ತವಾಗಿ ನಾರಾಯಣನ್ ರಮ್ ಕೊಳ್ಳುವುದನ್ನು ನಿಲ್ಲಿಸಿದ. ಆ ಹೊತ್ತಿಗಾಗಲೆ ಪ್ಲೇವಿನ್ ಲೋಟ್ಟೊ ಪ್ರಾರಂಭವಾಗಿತ್ತು. ಪ್ರತಿ ಮಂಗಳವಾರ ನಾರಾಯಣನ್ ಒಂದು ಟಿಕೇಟು ಖರೀದಿಸುತ್ತಿದ್ದ. ಪ್ರತಿಸಲವೂ ಒಂದೇ ಸಂಖ್ಯೆಯನ್ನು ಆತ ಆಯುತ್ತಿದ್ದ: 3,8,25, 34, 35, 36. ಒಮ್ಮೆಯೂ ಆತನಿಗೆ ಬಹುಮಾನ ಲಭಿಸಿರಲಿಲ್ಲ. ಆದರೆ ಈ ಸಂಖ್ಯೆಗಳನ್ನು ಲೋಟೋ ಟಿಕೇಟಿನಲ್ಲಿ ಕಪ್ಪಾಗಿಸುವಾಗ ಪ್ರಕಟಗೊಳ್ಳುತ್ತಿದ್ದ ಮನುಷ್ಯಮುಖದ ದೂರದ ನೆರಳು, ಸಾವಿರಗಟ್ಟಲೆ ಮುಖಗಳ ಮೂಲಕ ದಾಟಿಹೋದ ನಾರಾಯಣನಿಗೆ ಸಂತೃಪ್ತಿ ನೀಡಿತು.
(ಭಾಗ 1 : ಕ್ಲಿಕ್ ಮಾಡಿ)
ಈ ಕಥೆಯ ಎಲ್ಲಾ ಭಾಗಗಳನ್ನು, ಇತರೆ ಅನುವಾದಿತ ಕಥೆಗಳನ್ನು ಓದಲು ಕ್ಲಿಕ್ ಮಾಡಿ
ಪ್ರತಿಕ್ರಿಯೆಗಾಗಿ : tv9kannadadigital@gmail.com
Published On - 11:16 am, Fri, 3 June 22