New Book: ಶೆಲ್ಫಿಗೇರುವ ಮುನ್ನ; ಜಿಬಿ ಹರೀಶರ ‘ಕಲಾಯೋಗಿ ಆನಂದ ಕುಮಾರಸ್ವಾಮಿ’ ಓದಿಗೆ ಲಭ್ಯ

Anand Coomaraswamy : ‘ಆನಂದ ಕುಮಾರಸ್ವಾಮಿಯವರ ಪ್ರಕಾರ, “ನಿಜವಾದ ರಾಷ್ಟ್ರೀಯವಾದಿ ಒಬ್ಬ ಆದರ್ಶವಾದಿ; ಮತ್ತವನಲ್ಲಿರುವ ಅಸಂತೋಷದ ಆಳವಾದ ಕಾರಣವೆಂದರೆ ಆತ್ಮದರ್ಶನಕ್ಕಾಗಿ ಅವನಲ್ಲಿ ಇರುವ ಹಂಬಲ. ಅವನು ರಾಷ್ಟ್ರೀಯತೆಯನ್ನು ಹಕ್ಕಿಗಿಂತ ಹೆಚ್ಚಾಗಿ ಕರ್ತವ್ಯ ಎಂದು ಅರ್ಥಮಾಡಿಕೊಂಡಿರುತ್ತಾನೆ.” ಜಿ. ಬಿ. ಹರೀಶ್

New Book: ಶೆಲ್ಫಿಗೇರುವ ಮುನ್ನ; ಜಿಬಿ ಹರೀಶರ ‘ಕಲಾಯೋಗಿ ಆನಂದ ಕುಮಾರಸ್ವಾಮಿ’ ಓದಿಗೆ ಲಭ್ಯ
ಡಾ. ಲೇಖಕ ಜಿ. ಬಿ. ಹರೀಶ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Feb 15, 2022 | 10:47 AM

New Book : ಮಾಹಿತಿಯ ಪ್ರವಾಹದ ನಡುವೆ ನಮ್ಮನ್ನು ನಾವು ದೃಢವಾಗಿ ನಿಲ್ಲಿಸಿಕೊಂಡು ನಮ್ಮ ಆಸಕ್ತಿಗಳ ಆಳ ತಲುಪಲು, ವಿಚಾರಗಳನ್ನು ಪರಾಮರ್ಶಿಸಿಕೊಳ್ಳಲು ವಿಷಯಾಧಾರಿತ ಅಧ್ಯಯನ ಬೇಕೇಬೇಕು. ಕಾಲಮಾನಕ್ಕೆ ತಕ್ಕಂತೆ ಜ್ಞಾನಸಂಪಾದನೆಗೆ ಈವತ್ತು ಸಾಕಷ್ಟು ಪರ್ಯಾಯ ಮತ್ತು ಕ್ಷಿಪ್ರ ಮಾರ್ಗಗಳಿದ್ದರೂ, ಸವಿಸ್ತಾರದ ಓದಿಗಾಗಿ ಪುಸ್ತಕ ಎಂಬ ಗಂಭೀರ ಮಾಧ್ಯಮವೇ ಅದಕ್ಕೆ ಒತ್ತಾಸೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಪುಸ್ತಕಗಳು ಹೊರಬರುತ್ತ ಜ್ಞಾನಾಕಾಂಕ್ಷಿಗಳಿಗೆ ದಾರಿ ತೋರುತ್ತಲೇ ಇರುತ್ತವೆ.  ಈಗಿಲ್ಲಿ ಪುಸ್ತಕದಂಗಡಿಗಳಿಗೆ ಹೊರಟುನಿಂತ ಬಂಡಲ್​ನಿಂದ ಒಂದು ಪ್ರತಿಯನ್ನು ‘ಶೆಲ್ಫಿಗೇರುವ ಮುನ್ನ’ ಅಂಕಣದಲ್ಲಿ ಇಳಿಸಿಕೊಂಡು, ಆಯ್ದ ಭಾಗವನ್ನು ನಿಮ್ಮ ಓದಿಗಾಗಿ ತೆರೆದಿಡಲಾಗಿದೆ. ಪ್ರಕಾಶಕರು ಮತ್ತು ಬರಹಗಾರರು ಹೊಸ ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ಮೊಬೈಲ್​ ನಂಬರ್ ಕಳುಹಿಸಿ. ಇ ಮೇಲ್ : tv9kannadadigital@gmail.com 

*

ಕೃತಿ: ಕಲಾಯೋಗಿ ಆನಂದ ಕುಮಾರಸ್ವಾಮಿ  ಲೇಖಕರು : ಜಿ. ಬಿ. ಹರೀಶ ಪುಟ: 234 ಬೆಲೆ: ರೂ. 250 ಮುಖಪುಟ ವಿನ್ಯಾಸ : ರಘು ಅಪಾರ

*

ಭಾರತದಲ್ಲಿ ಆನಂದ ಕುಮಾರಸ್ವಾಮಿ

ಆನಂದ ಕುಮಾರಸ್ವಾಮಿ ಭಾರತಕ್ಕೆ ಮತ್ತೆ ಮತ್ತೆ ಭೇಟಿ ನೀಡುತ್ತಿದ್ದರು, ಇಲ್ಲಿನ ಜನರನ್ನು, ಕಲೆಯನ್ನು ನೇರವಾಗಿ ನೋಡಿ ಅರಿಯುತ್ತಿದ್ದರು. ಅವರು ಇಲ್ಲಿ ಅನೇಕ ಸ್ವಾತಂತ್ರ್ಯ ಹೋರಾಟಗಾರರ, ಬುದ್ಧಿಜೀವಿಗಳ ಸಂಪರ್ಕಕ್ಕೆ ಬಂದರು. ಅದರಲ್ಲಿ ಕೆಲವರೆಂದರೆ ಅವನೀಂದ್ರನಾಥ ಟ್ಯಾಗೋರ್; ನಂದಲಾಲ್ ಬೋಸ್ ಕೂಡ ಠಾಕೂರರ ಕುಟುಂಬದ ಮೂಲಕ ಇವರಿಗೆ ಪರಿಚಿತರಾದರು. ವಾರಣಾಸಿಯ ಕೃಷ್ಣದಾಸ ಮತ್ತು ಮುಕುಂದಿಲಾಲ್ ಎಂಬುವರಿಗೆ ಗುಡ್ಡಗಾಡಿನ ಚಿತ್ರಕಲೆ ಬಗ್ಗೆ ಒಳ್ಳೆ ಅರಿವಿತ್ತು. ಅವರೂ ಕೂಡ ಆನಂದ ಕುಮಾರಸ್ವಾಮಿ ಸಂಪರ್ಕ ವಲಯಕ್ಕೆ ಬಂದರು. ಈ ಸಂಪರ್ಕ ಅವರಿಗೆ ಭಾರತದ ರಾಷ್ಟ್ರೀಯಯತೆಯನ್ನು, ಅದರ ಕುರಿತ ಹೋರಾಟವನ್ನು ನೇರ ಅನುಭವಕ್ಕೆ ತಂದಿತು. ಸಾಂಸ್ಕೃತಿಕ ಅಂಶದ ದೊಡ್ಡ ಭಾಗವೇ ರಾಷ್ಟ್ರೀಯ ಹೋರಾಟದಲ್ಲಿರುವುದರ ಸೂಕ್ಷ್ಮ ಅವರ ಗಮನಕ್ಕೆ ಬಂತು. ಅದು ಅವರಿಗೆ ಹಿಡಿಸುವ ಅಂಶವೂ ಆಗಿತ್ತು. ಭಾರತದ ಉದ್ದಕ್ಕೂ ಪುನರುಜ್ಜೀವನದ ಗಾಳಿ ಬೀಸುತ್ತಿರುವುದಂತೂ ಸ್ಪಷ್ಟವಾಗಿತ್ತು. ಅದರ ಗತಿ ಇನ್ನೂ ನಿಶ್ಚಿತವಾಗಿರಲಿಲ್ಲ. ಅದೆಲ್ಲವೂ ಕುಮಾರಸ್ವಾಮಿಯವರ ಸಂವೇದನೆಗೆ ತಾಕಿತು.

ರವೀಂದ್ರನಾಥ ಟ್ಯಾಗೋರ್, ಸೋದರಿ ನಿವೇದಿತಾ, ಡಾ. ಭಗವಾನ್ ದಾಸ್, ಗೋಪಾಲಕೃಷ್ಣ ಗೋಖಲೆ, ಲೋಕಮಾನ್ಯ ಬಾಲಗಂಗಾಧರ ಟಿಳಕ್, ಅರವಿಂದ ಘೋಷರು (ಇವರೇ ಮುಂದೆ ಮಹರ್ಷಿ ಅರವಿಂದರೆನಿಸಿಕೊಂಡರು), ಬಿಪಿನ್‌ಚಂದ್ರ ಪಾಲ್, ಸುರೇಂದ್ರ ವಂದ್ಯೋಪಾಧ್ಯಾಯ, ಅರ್ಧೇಂದುಕುಮಾರ ಗಂಗೂಲಿ, ಸರ್ ಜಾನ್ ವುಡ್ರೋಫ್, ಅಜಿತಕುಮಾರ ಚಟ್ಟೋಪಾಧ್ಯಾಯ ಮುಂತಾದವರು ಆನಂದ ಕುಮಾರಸ್ವಾಮಿಗೆ ಪರಿಚಿತರಾದರು.

ವಸಾಹತುಶಾಹಿ, ಸಾಮ್ರಾಜ್ಯಶಾಹಿ ಬ್ರಿಟಿಷ್ ಆಡಳಿತ ಭಾರತದ ಅರ್ಥವ್ಯವಸ್ಥೆಯನ್ನು ದುರ್ಬಲಗೊಳಿಸಿ, ಇಲ್ಲಿನ ಸಾಂಪ್ರಾದಾಯಿಕ ಕೈಗಾರಿಕೆಗಳನ್ನು ನಾಶಪಡಿಸಿರುವುದನ್ನು ಕುಮಾರಸ್ವಾಮಿ ಕಂಡರು. ಯಾಂತ್ರೀಕರಣ ಮತ್ತು ಕೈಗಾರಿಕೀಕರಣದಿಂದ ಅದು ನೆಲಕಚ್ಚುತ್ತಿರುವುದು ಸ್ಪಷ್ಟವಿತ್ತು.

ಭಾರತದ ಬೇರೆ ಬೇರೆ ಪ್ರಾಂತಗಳ, ಸಂಸ್ಥಾನಗಳ ಕುಂಭಕಾರರು, ನೇಕಾರರು, ಬಡಗಿಗಳು, ಕಮ್ಮಾರರು, ಚಾಪೆ, ಬುಟ್ಟಿ ನೇಯುವವರು, ಭಾರತೀಯ ಕಲಾ ಸಂಪ್ರದಾಯವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದರು, ಅವರ ಪರಿಸ್ಥಿತಿ ಅವರ ಕಲೆಯ ಸ್ಥಿತಿ ಚೆನ್ನಾಗಿರಲಿಲ್ಲ. ಕಲೆ ವಾಸ್ತು ಅದಕ್ಕೆ ಅಂಟಿಕೊಂಡ ಬದುಕು ಎರಡೂ ನಾಶವಾಗತೊಡಗಿತ್ತು. ಸ್ವಾ ತಂತ್ರ್ಯ ಹೋರಾಟದಲ್ಲಿ ರಾಷ್ಟ್ರೀಯತೆಯ ಹಾಡು ಹೇಳುತ್ತಿದ್ದ ಎಲ್ಲರಿಗೂ ಈ ಸಾಂಸ್ಕೃತಿಕ ಒಳನೋಟ ಇತ್ತೆಂದು ಹೇಳಲು ಬರುವುದಿಲ್ಲ.

ಇದನ್ನೂ ಓದಿ : Journalist : ಶೆಲ್ಫಿಗೇರುವ ಮುನ್ನ; ‘ಪತ್ರಿಕೋದ್ಯಮ ಪ್ರವೇಶ’ ಸಿಬಂತಿ ಪದ್ಮನಾಭರ ಕೃತಿ ನಾಳೆಯಿಂದ ಓದಿಗೆ

ಕುಮಾರಸ್ವಾಮಿಗೆ ಇವೆಲ್ಲ ಹೀಗೆ ಕಾಣಿಸಲು ಕೂಡ ಕಾರಣವಿತ್ತು. ಅವರು ವಿಲಿಯಂ ಮೊರಿಸ್‌ನಿಂದ ಪ್ರಭಾವಿತರಾಗಿದ್ದರು. ಈ ಮೋರಿಸ್ ಗಿಲ್ಡ್​ಗಳ ಪ್ರಬಲ ಪ್ರತಿಪಾದಕ. ಕುಮಾರಸ್ವಾಮಿ ಮೋರಿಸ್‌ನಿಂದ ಎಷ್ಟು ಪ್ರಭಾವಿಸಲ್ಪಟ್ಟಿದ್ದರೆಂದರೆ ವಿಲಿಯಂ ಮೋರಿಸ್ ಆರಂಭಿಸಿದ್ದ ಓಲ್ಡ್ ಬೊರ್ನೆ ಪ್ರೆಸ್ ಅನ್ನು ಖರೀದಿಸಿದರು. ಅವರು ಕುಮಾರಸ್ವಾಮಿಯ ಎಷ್ಟೋ ಮಹತ್ವಪೂರ್ಣವಾದ, ಕಲಾಕೃತಿಯೇ ಆಗಿರುವ ಗ್ರಂಥಗಳು ಮತ್ತು ಕಲೆ ಕುರಿತ ಕಿರುಹೊತ್ತಗೆಗಳು ಇಲ್ಲೇ ಪ್ರಕಟವಾದವು. ಸ್ವಾತಂತ್ರ್ಯಕ್ಕಾಗಿ ಮನವಿಯ ದಾರಿ ಮತ್ತು ಬಂದೂಕಿನ ದಾರಿಯಲ್ಲಿ ಹೋರಾಟ ನಡೆಯುತ್ತಿರುವ ನಾಡಿನ ಕಲೆಯನ್ನು ಮತ್ತೆ ಜೀವಂತಗೊಳಿಸಬೇಕು, 5,000 ವರ್ಷಗಳ ಹಿನ್ನೆಲೆ ಇರುವ ಭಾರತೀಯ ಕಲೆಯ ಹೃದಯ ಅರಿಯಬೇಕು ಎಂದು ಕೆಲವರಿಗೆ ಮಾತ್ರ ಅನಿಸತೊಡಗಿತ್ತು. ಅಂಥ ಕೆಲವರಲ್ಲಿ ಕುಮಾರಸ್ವಾಮಿ ಕೂಡ ಸೇರುತ್ತಾರೆ. ತನ್ನ ಯುಗದ ಪ್ರಬಲ ಪ್ರತಿಷ್ಠಿತ ಚಿಂತನೆ, ಪ್ರತಿಷ್ಠಿತ ಶಕ್ತಿ ಇವುಗಳ ವಿರುದ್ಧವಾಗಿ, ಇಲ್ಲವೆ ಇದಕ್ಕೆ ಪರ್ಯಾಯವಾಗಿ ಇಚ್ಛಾಶಕ್ತಿ, ಜ್ಞಾನಶಕ್ತಿ, ಕ್ರಿಯಾಶಕ್ತಿ, ಬೆಳೆಸಿಕೊಳ್ಳಲು ದೊಡ್ಡ ಧೀಶಕ್ತಿ ಬೇಕು. ಕವಿ ಅಡಿಗರು ಹೇಳುವ ‘ಸಂಕಲ್ಪ ಬಲದ ಜಾಗರಣೆ’ ಬೇಕು. ಅದು ಕುಮಾರಸ್ವಾಮಿಯವರಿಗೆ ಸಿದ್ಧಿಸಿತ್ತು.

ಆಗ ಇನ್ನೂ ತಿಲಕ್ ಯುಗ. ಭಾರತದ ರಾಜಕೀಯ ರಂಗದಲ್ಲಿ ಗಾಂಧೀಜಿ ಕಾಣಿಸಿಕೊಂಡಿರಲಿಲ್ಲ. ಅದೇ ಸಮಯದಲ್ಲಿ ಠಾಕೂರರ ಕುಟುಂಬ ಸಾಂಸ್ಕೃತಿಕ ಪುನರುಜ್ಜೀವನದ ಪ್ರಖರ ಪ್ರಯತ್ನದಲ್ಲಿ ತೊಡಗಿಕೊಂಡಿತ್ತು. ದಕ್ಷಿಣದಲ್ಲಿ ಇಂದಿನ ಕರ್ನಾಟಕದಲ್ಲಿ ಬಿ.ಎಲ್ ರೈಸ್, ಆರ್. ನರಸಿಂಹಾಚಾರ್, ಶಾಂತಕವಿ, ಡಿ.ವಿ.ಜಿ. ಮೊದಲಾದವರು ಆಗಲೇ ಕಾಣಿಸಿಕೊಂಡಿದ್ದರು. ಕುವೆಂಪು, ಬೇಂದ್ರೆ ಇವರ ಪ್ರವೇಶ ಇನ್ನು ಆಗಿರಲಿಲ್ಲ, ಅಥವಾ ಅವರ ಬಾಲ್ಯಕಾಂಡ ಸಾಗಿತ್ತು. ಠಾಕೂರರ ಕುಟುಂಬದ ಕಲಾವಂತಿಕೆ, ಸ್ವದೇಶಿ ಪ್ರೇಮ, ನಿರಂತರ ಕಾರ್ಯೋತ್ಸಾಹ, ರಸಿಕತೆಗೆ ಕೊಟ್ಟ ಮಹತ್ವ, ಹೊಸದಕ್ಕೆ ಮತ್ತು ವಿಶ್ವಕ್ಕೆ ತೆರೆದುಕೊಂಡ ಬಗೆ ಆನಂದ ಕುಮಾರಸ್ವಾಮಿಯವರಿಗೆ ಸ್ಪೂರ್ತಿಯಾಗಿರಲೂಬಹುದು. ಇಂಥ ಹಿನ್ನೆಲೆಯಲ್ಲಿ ಅವರ ‘Essays in National Idealism’ (1909) ಕೃತಿ ಕೊಲಂಬೊದಿಂದ ಪ್ರಕಟವಾಯಿತು.

ಈ ಪುಸ್ತಕವು ಪ್ರಬಂಧಗಳ ಸಂಕಲನ, ಇವರ ವಿಷಯ ವೈವಿಧ್ಯತೆ ಮತ್ತು ಇಂಗ್ಲಿಷ್ ಭಾಷೆಯ ಕೆಚ್ಚು ಮೆಚ್ಚುವಂಥದ್ದು. ‘ಸಂಘರ್ಷದ ಆಳವಾದ ಅರ್ಥ’, ‘ಭಾರತೀಯ ರಾಷ್ಟ್ರೀಯತೆ’, ‘ಮಾತಾ ಭಾರತ’, ‘ಭಾರತೀಯ ಕಲೆಯ ಉದ್ದೇಶಗಳು ಮತ್ತು ವಿಧಾನಗಳು’, ‘ಭಾರತದಲ್ಲಿ ಕಲೆ ಮತ್ತು ಯೋಗ’, ‘ಭಾರತೀಯ ಕಲೆಯ ಮೇಲೆ ಆಧುನಿಕ ಯುರೋಪಿನ ಪ್ರಭಾವ’, ‘ಪೂರ್ವದ ಮತ್ತು ಪಶ್ಚಿಮದ ಕಲೆ’, ‘ಭಾರತೀಯ ಕಲೆಯ ಮೇಲೆ ಗ್ರೀಕ್ ಪ್ರಭಾವ’, ‘ಭಾರತದಲ್ಲಿ ಶಿಕ್ಷಣ’, ‘ಶಿಕ್ಷಣದಲ್ಲಿ ಸ್ಮೃತಿ(ನೆನಪು)’, ‘ಭಾರತದಲ್ಲಿ ಕ್ರಿಶ್ಚಿಯನ್ ಮಿಷನ್’, ‘ಸ್ವದೇಶಿ’, ‘ಭಾರತೀಯ ಸಂಗೀತ’, ‘ಭಾರತದಲ್ಲಿ ಸಂಗೀತ ಮತ್ತು ಶಿಕ್ಷಣ’, ‘ಗ್ರಾಮಪೋನುಗಳು ಮತ್ತು ಯಾಕೆ ಬೇಡ?’ – ಈ ಹದಿನೈದು ಪ್ರಬಂಧಗಳು ಈ ಸಂಕಲನದಲ್ಲಿವೆ. ಇದರೊಡನೆ ನಟರಾಜ ಪ್ರಜ್ಞಪಾರಮಿತ ಅವಲೋಕಿತೇಶ್ವರ, ಸಾರನಾಥದ ಅಶೋಕನ ಸ್ತಂಭ, ಧ್ಯಾನಿಬುದ್ಧ, ಕವಿ ಸದಾ ಹಾಡುಗಾರನನ್ನು ಆಲಿಸುತ್ತಿರುವುದು, ಎಂಬ ಆರು ಚಿತ್ರ (ಪ್ಲೇಟ್)ಗಳು ಸಹ ಇವೆ.

ಇದನ್ನೂ ಓದಿ : Breast Cancer : ಶೆಲ್ಫಿಗೇರುವ ಮುನ್ನ ; ನನ್ನ ಎದೆ, ಬೆನ್ನಿನ ಮೇಲೆ 80 ಸ್ಟೆಪ್ಲರ್ ಪಿನ್​ ಹೊಡೆದು ಚಿತ್ತಾರ ಮಾಡಿದ ಆ ದಿನ

Shelfigeruva Munna excerpt of Kalayogi Ananda Coomaraswamy by GB Harisha

ಹರೀಶರ ಕೃತಿಗಳು

ಭಾರತದಲ್ಲಿ ನಡೆದಿರುವ ರಾಷ್ಟ್ರೀಯ ಆಂದೋಲನ ಆದರ್ಶದ ಚಳವಳಿಯಾಗಿ ಮಾತ್ರ ಮಹತ್ವ ಪಡೆಯುತ್ತದೆ, ಈ ಹೋರಾಟ ರಾಜಕೀಯವಾದದ್ದಕ್ಕಿಂತಲೂ ಮಿಗಿಲಿನದು (For this struggle is much more than a political conflict). ಪರತಂತ್ರದ ಆದರ್ಶಗಳಿಂದ ಆಧ್ಯಾತ್ಮಿಕವಾಗಿ ಮತ್ತು ಮಾನಸಿಕವಾಗಿ ಸ್ವಾತಂತ್ರ್ಯ ಪಡೆಯಲೆಂದು ಮಾಡುತ್ತಿರುವ ಸಂಘರ್ಷವಿದು. “ಹೆಸರಿಗೆ ಸ್ವಾತಂತ್ರ್ಯ ಪಡೆದುಕೊಂಡು, ಒಳಗೆ ಆತ್ಮದಲ್ಲಿ ಯುರೋಪಿಗೆ ಗುಲಾಮನಾಗಿರುವ” ಭಾರತದ ಸ್ವಾತಂತ್ರ್ಯ, ಸ್ವಾತಂತ್ರ್ಯದ ಮೌಲ್ಯವನ್ನು ಕಡಿಮೆ ಮಾಡುವುದೇ ಆಗಿದೆ. ಇಂಥ “ಸಂಘರ್ಷದಲ್ಲಿ ರಾಜಕೀಯ ಮತ್ತು ಆರ್ಥಿಕ ವಿಜಯ ಕೇವಲ ಅರ್ಧ ಜಯ”. ಈ ಕೃತಿಯಲ್ಲಿ ಆನಂದ ಕುಮಾರಸ್ವಾಮಿ ಕಲೆಗೆ ಕಲಾವಿದರಿಗೆ ರಾಜಕಾರಣಿ, ರಾಜಕೀಯಕ್ಕಿಂತ ಮಿಗಿಲಾದ ಸ್ಥಾನ ನೀಡಿ ಚರ್ಚಿಸುತ್ತಿದ್ದುದರ ಸ್ಪಷ್ಟ ಸೂಚನೆಯಿದೆ. ಅವರೇ ಹೇಳುವಂತೆ “ಭಾರತೀಯ ರಾಷ್ಟ್ರೀಯತೆಗೆ ಮುಡಿಪಾಗಿರುವ ಈ ಪುಸ್ತಕದಲ್ಲಿ ರಾಜಕೀಯಕ್ಕೆ ಇಷ್ಟು ಕಮ್ಮಿ ಜಾಗ ಕೊಟ್ಟು, ಕಲೆಗೆ ಇಷ್ಟೊಂದು ಹೆಚ್ಚು ಅವಕಾಶ ನೀಡಿರುವುದು ಕೆಲವರಿಗೆ ವಿಚಿತ್ರ ಅನಿಸಬಹುದು. ಅದು ಹಾಗೇಕೆಂದರೆ ರಾಷ್ಟ್ರಗಳು ನಿರ್ಮಾಣ ಆಗುವುದು ಕಲಾವಿದರು ಮತ್ತು ಕವಿಗಳಿಂದ ಹೊರತು ವ್ಯಾಪಾರಿಗಳು ಮತ್ತು ರಾಜಕಾರಣಿಗಳಿಂದ ಅಲ್ಲ” (it is because nations are made by artists and by poets, not by traders and politicians). ಸಂಘರ್ಷ ನಡೆದಿರುವುದೇ ಬದುಕಿನ ಹಂಬಲಕ್ಕಾಗಿ, ಉತ್ತಮ ಜೀವನ ಬರಲಿ ಎಂದು.

“ಕಲೆಯೊಳಗೇ ಬದುಕಿನ ಅತಿ ಆಳದ ತತ್ವಗಳಿವೆ, ಅತ್ಯುತ್ತಮ ಕಲೆಗೆ ಸಿಗುವ ಅತಿನೈಜ ಮಾರ್ಗದರ್ಶನವೆಂದರೆ ಜೀವನ ಕಲೆ” ಭಾರತದ ರಾಷ್ಟ್ರೀಯತೆ ಧಾರ್ಮಿಕ ಸ್ವರೂಪದ್ದು ಎಂಬುದನ್ನು ಕೂಡ ಆನಂದ ಕುಮಾರಸ್ವಾಮಿಯವರ ಮುನ್ನುಡಿಯ ಈ ಮಾತುಗಳು ಸೂಚಿಸಿವೆ. ಒಬ್ಬ ರಾಷ್ಟ್ರೀಯವಾದಿ ಹೇಗಿರುತ್ತಾನೆ ಎಂಬ ಚಿತ್ರಣ ಆನಂದ ಕುಮಾರಸ್ವಾಮಿ ನೀಡಿದ್ದಾರೆ. ಅವರ ಪ್ರಕಾರ “ನಿಜವಾದ ರಾಷ್ಟ್ರೀಯವಾದಿ ಒಬ್ಬ ಆದರ್ಶವಾದಿ; ಮತ್ತವನಲ್ಲಿರುವ ಅಸಂತೋಷದ ಆಳವಾದ ಕಾರಣವೆಂದರೆ ಆತ್ಮದರ್ಶನಕ್ಕಾಗಿ ಅವನಲ್ಲಿ ಇರುವ ಹಂಬಲ. ಅವನು ರಾಷ್ಟ್ರೀಯತೆಯನ್ನು ಹಕ್ಕಿಗಿಂತ ಹೆಚ್ಚಾಗಿ ಕರ್ತವ್ಯ ಎಂದು ಅರ್ಥಮಾಡಿಕೊಂಡಿರುತ್ತಾನೆ.” ಜಪಾನಿಗೂ ಭಾರತಕ್ಕೂ ಇರುವ ಸಾಂಸ್ಕೃತಿಕ ವಿಷಯ ಕುರಿತ ವೈರುಧ್ಯವನ್ನು ಆನಂದ ಕುಮಾರಸ್ವಾಮಿ ಪ್ರಸ್ತಾಪಿಸಿದ್ದಾರೆ. ಅವರ ಪ್ರಕಾರ, “ಜಪಾನ್ ತನ್ನ ಭೂತಕಾಲದ ಶಕ್ತಿಯ ಮೇಲೆಯೇ ಬಹುತೇಕ ಜೀವಿಸುತ್ತಿದೆ. ನಾವು ಊಹಿಸುವುದಕ್ಕಿಂತಲೂ ಹೆಚ್ಚಾಗಿ ಅದರ ಶಕ್ತಿ ಅದರ ಕಲೆಯಲ್ಲಿದೆ”.

ಪುಸ್ತಕದ ಖರೀದಿಗೆ ಸಂಪರ್ಕಿಸಿ : 9980643704

*

ಡಾ. ಜಿ.ಬಿ.ಹರೀಶ: ಹುಟ್ಟಿದ್ದು 1975ರಲ್ಲಿ, ಹಾಸನದಲ್ಲಿ. ಎಂ.ಎ, ಎಂಬಿಎ ಹಾಗೂ ಪಿಎಚ್.ಡಿ. ಪದವೀಧರರು; ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಕನ್ನಡ ಅಧ್ಯಾಪಕರಾಗಿ, ಕರ್ನಾಟಕ ಜ್ಞಾನ ಆಯೋಗದ ಕಣಜ ಯೋಜನೆಯ ಸಂಶೋಧನಾಧಿಕಾರಿಯಾಗಿ, ತುಮಕೂರು ವಿವಿಯ ಡಿ.ವಿ.ಗುಂಡಪ್ಪ ಸ್ನಾತಕೋತ್ತರ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ, ‘ಪ್ರಜಾವಾಣಿ’ಯ ಮುಖ್ಯ ಉಪಸಂಪಾದಕರಾಗಿ, “ವಿಜಯವಾಣಿ’ಯ ಸಂಪಾದಕೀಯ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಮೂರು ವರ್ಷಗಳ ಕಾಲ ವಿಯೆಟ್ನಾಂನ ಸ್ವಾಮಿ ವಿವೇಕಾನಂದ ಸಾಂಸ್ಕೃತಿ ಕೇಂದ್ರದ ನಿರ್ದೇಶಕರಾಗಿ, ಭಾರತೀಯ ರಾಜದೂತವಾಸದಲ್ಲಿ ಸೇವೆ ಸಲ್ಲಿಸಿದ್ದಾರೆ.

ವೀರ ಸಾವರ್ಕರ್ ಅವರ ಹಿಂದುತ್ವ (ಅನುವಾದ) ಬೆಳಕಿನಾಟ, ಎನ್ನಂತರಂಗದ ಆತುಮ, ಸೂಜಿಮೊನೆ, ಆಕಾಶಕ್ಕೆ ಆಶ್ಚರ್ಯ (ವಿಮರ್ಶೆ), ಶ್ರೀಮಾತೆ, ಮಹಮ್ಮದ್ ಆಲಿ ಜಿನ್ನಾ, ಸ್ವಾಮಿ ವಿವೇಕಾನಂದ, ಟಿ.ವಿ.ಕಪಾಲಿ ಶಾಸ್ತ್ರೀ (ಜೀವನ ಚರಿತ್ರೆ), ದೇವಚಂದ್ರನ ಭಾಷೆ ಸಂಸ್ಕೃತಿ, ವಿಶ್ವ ಸಂಸ್ಕೃತಿಯ ಹರಿಕಾರ ಕುಮಾರಸ್ವಾಮಿ (ಸಂಶೋಧನೆ), ತಂತ್ರಶಾಸ್ತ್ರ, ಎಸ್‌.ಕೆ. ರಾಮಚಂದ್ರ ರಾವ್, ಬೌದ್ಧ ಧರ್ಮದ ಸಂಕ್ಷಿಪ್ತ ಇತಿಹಾಸ (ಸಂಸ್ಕೃತಿ ಬರಹಗಳು), ಡಾ. ಶಂಕರ ಮೊಕಾಶಿ ಪುಣೇಕರ್ ಸಮಸ್ತ ಸಾಹಿತ್ಯ ಭಾಗ 1, 2, 3, 4; ಪ್ರೊ. ಎಂ.ವಿ. ಸೀತಾರಾಮಯ್ಯ ಸಮಗ್ರ ಸಾಹಿತ್ಯ-1 ಕಾವ್ಯ ಸಂಪುಟ; ತಂತ್ರ ದರ್ಶನ, ಪಂಡಿತ್ ದೀನದಯಾಳ್ ಉಪಾಧ್ಯಾಯ ಸಮಗ್ರ ಬರೆಹಗಳು ಭಾಷಣಗಳು | ರಿಂದ 8 ಸಂಪುಟಗಳು, ರಾಜೀವ್ ಮಲ್ಲೋತ್ರ ವಿಚಾರಧಾರೆ (ಸಂಪಾದನೆ), ವಿಷ್ಣುವಿನ ಏಳು ರಹಸ್ಯಗಳು, ಭಗವಾನ್ ಬುದ್ದನ ಧಮ್ಮಪದ, ಕಲಾತತ್ತ್ವಕೋಶದ ಲೇಖನಗಳು (ಅನುವಾದ) ಸೇರಿವೆ. ದಿ ಮಿಥಿಕ್ ಸೊಸೈಟಿಯಿಂದ ‘ಶತಮಾನದ ಕಿರಿಯ ಸಂಶೋಧಕ’ ಗೌರವಕ್ಕೆ ಪಾತ್ರರಾಗಿದ್ದಾರೆ. ಆನಂದ ಕುಮಾರಸ್ವಾಮಿ ಗ್ರಂಥಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ’ (2014) ದೊರಕಿದೆ. ರಾಷ್ಟ್ರಾಧ್ಯಕ್ಷರು ಕೊಡಮಾಡುವ ಬಾದರಾಯಣ ವ್ಯಾಸಸಮ್ಮಾನ್ 2018ರ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

*

ಇದನ್ನೂ ಓದಿ : Breast Cancer : ಶೆಲ್ಫಿಗೇರುವ ಮುನ್ನ ; ನನ್ನ ಎದೆ, ಬೆನ್ನಿನ ಮೇಲೆ 80 ಸ್ಟೆಪ್ಲರ್ ಪಿನ್​ ಹೊಡೆದು ಚಿತ್ತಾರ ಮಾಡಿದ ಆ ದಿನ

Published On - 10:41 am, Tue, 15 February 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ